ರಾಜ್ಯದಲ್ಲಿ 5 ವರ್ಷಗಳಲ್ಲಿ 66.38 ಲಕ್ಷ ನರೇಗಾ ಕಾರ್ಮಿಕರು ಡಿಲೀಟ್

Update: 2026-07-29 08:30 IST

 ಬೆಂಗಳೂರು, ಜು.28: ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ನೀಡಿದ್ದ ಜಾಬ್ ಕಾರ್ಡ್‌ಗಳ ಪೈಕಿ 5 ವರ್ಷಗಳಲ್ಲಿ 16.80 ಲಕ್ಷ ಜಾಬ್ ಕಾರ್ಡ್ ಗಳು, 66.38 ಲಕ್ಷ ನರೇಗಾ ಕಾರ್ಮಿಕರನ್ನೂ ಡಿಲೀಟ್ ಮಾಡಿದೆ.

ದೇಶದಲ್ಲಿ ಒಟ್ಟಾರೆ 5.20 ಕೋಟಿಯಷ್ಟು ಜಾಬ್ ಕಾರ್ಡ್‌ಗಳು ಮತ್ತು ಪಟ್ಟಿಯಿಂದ 13.21 ಕೋಟಿ ಸಂಖ್ಯೆಯ ನರೇಗಾ ಕಾರ್ಮಿಕರನ್ನು ಡಿಲೀಟ್ ಮಾಡಲಾಗಿದೆ.

ನರೇಗಾ ಅಡಿಯಲ್ಲಿ 2021ರಿಂದ 2026ರವರೆಗೆ ಜಾಬ್ ಕಾರ್ಡ್ ಮತ್ತು ನರೇಗಾ ಕಾರ್ಮಿಕರನ್ನು ರದ್ದುಗೊಳಿಸಿರುವ ಸಂಬಂಧ ಲೋಕಸಭೆಯಲ್ಲಿ ಸದಸ್ಯ ಕೆ.ಸಿ.ವೇಣುಗೋಪಾಲ್ ಮತ್ತು ಆಂತೋಣಿ ಅವರು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಗ್ರಾಮೀಣಾಭಿವೃದ್ದಿ ಖಾತೆಯ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 2026ರ ಜುಲೈ 28ರಂದು ಅಂಕಿ ಸಂಖ್ಯೆಗಳನ್ನು ಒದಗಿಸಿದ್ದಾರೆ.

2025ರ ಜೂನ್‌ನಿಂದ 2026ರ ಜೂನ್‌ವರೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ಕುಟುಂಬಗಳ ವಿವರಗಳು ಹಾಗೂ ಒಟ್ಟು ಸಂಖ್ಯೆ ಕೋರಿದ್ದರು. ಅದೇ ರೀತಿ ನಿರ್ದಿಷ್ಟವಾಗಿ ಛತ್ತೀಸ್‌ಗಢ ಸೇರಿದಂತೆ ರಾಜ್ಯವಾರು ಮತ್ತು ಕೇಂದ್ರಾಡಳಿತ ಪ್ರದೇಶವಾರು ವಿವರಗಳನ್ನು ಬಯಸಿದ್ದರು.

2021ರಿಂದ ಎಂಜಿ ನರೇಗಾ ಅಡಿಯಲ್ಲಿ ರದ್ದುಗೊಂಡ ಜಾಬ್ ಕಾರ್ಡ್, ಹಾಗೂ ಕಾರ್ಮಿಕರ ಸಂಖ್ಯೆ, ರದ್ದುಗೊಳಿಸಲು ನಿರ್ದಿಷ್ಟ ಕಾರಣಗಳು, ನಿರ್ದಿಷ್ಟ ತಾಂತ್ರಿಕ ಅಥವಾ ಆಡಳಿತಾತ್ಮಕ ಪ್ರಮುಖ ಕಾರಣಗಳೇನು ಎಂದು ಪ್ರಶ್ನೆಯಲ್ಲಿ ಕೇಳಿದ್ದರು.

ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಾಗಾರ್ ಮತ್ತು ಆಜೀವಿಕಾ ಮಿಷನ್ ಗ್ರಾಮೀಣ (VB-G RAM G) ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಗರಿಷ್ಠ 60 ದಿನಗಳವರೆಗೆ ವೇತನಾಧಾರಿತ ಉದ್ಯೋಗ ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಕುಟುಂಬಗಳ ವಾರ್ಷಿಕ ವೇತನ ಆದಾಯದಲ್ಲಿ ಉಂಟಾಗಿರುವ ಇಳಿಕೆಯ ಕುರಿತು ವಿವರ ಬಯಸಿದ್ದರು. ಅಲ್ಲದೇ ಈ ಬಗ್ಗೆ ಸರಕಾರವು ಯಾವುದೇ ಮೌಲ್ಯಮಾಪನ ನಡೆಸಿದೆಯೇ? ನಡೆಸಿದ್ದರೆ, ಅದರ ವಿವರಗಳು, ವಿಶೇಷವಾಗಿ ಛತ್ತೀಸ್‌ಗಢದ ಆದಿವಾಸಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಗತ್ಯವಾದ ಆದಾಯದ ವಿವರಗಳನ್ನೂ ಕೋರಿದ್ದರು.

ಡಿಜಿಟಲ್ ಅನುಸರಣೆ ಅಥವಾ ದೃಢೀಕರಣ ಸಮಸ್ಯೆಗಳ ಕಾರಣದಿಂದ ನೈಜ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ಸರಕಾರ ಕೈಗೊಂಡಿರುವ ಸರಿಪಡಿಸುವ ಕ್ರಮಗಳ ವಿವರಗಳು, ಕಳೆದ ಐದು ವರ್ಷಗಳಲ್ಲಿ ಎಂಜಿ ನರೇಗಾ ಬೆಂಬಲಿತ ಕೃಷಿ ಹಾಗೂ ಸಂಬಂಧಿತ ಕಾಮಗಾರಿಗಳಲ್ಲಿ ಅನುಮತಿಸಲಾದ ಕಾಮಗಾರಿಗಳ ಪಟ್ಟಿಯಿಂದ ಸ್ಥಗಿತಗೊಳಿಸಲಾದ ಅಥವಾ ತೆಗೆದುಹಾಕಲಾದ ಕಾಮಗಾರಿಗಳ ವಿವರಗಳು ಹಾಗೂ ಅವುಗಳಿಗೆ ಕಾರಣಗಳೇನು ಎಂಬ ವಿವರ ಕೋರಿದ್ದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಂಬಂಧಿತ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಜಾರಿಗೊಳಿಸುತ್ತಿವೆ. ಉದ್ಯೋಗ ಕಾರ್ಡ್‌ಗಳನ್ನು ನೀಡುವುದು, ಅವುಗಳ ಪರಿಶೀಲನೆ, ನವೀಕರಣ ಮತ್ತು ಅಳಿಸುವ ಜವಾಬ್ದಾರಿಯೂ ಸಹ ರಾಜ್ಯಗಳದ್ದೇ ಆಗಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಿಸಿದ್ದಾರೆ. ದೇಶಾದ್ಯಂತ ನ್ಯಾಯಸಮ್ಮತ, ಪಾರದರ್ಶಕ ಮತ್ತು ಏಕರೂಪದ ಪ್ರಕ್ರಿಯೆಯನ್ನು ಖಚಿತಪಡಿಸುವ ಉದ್ದೇಶದಿಂದ ಕೇಂದ್ರ ಸಚಿವಾಲಯವು 2025ರ ಜನವರಿ 25ರಂದು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ವನ್ನು ಹೊರಡಿಸಿದೆ. ಯಾವುದೇ ಉದ್ಯೋಗ ಕಾರ್ಡ್ ಅಥವಾ ಕಾರ್ಮಿಕರ ದಾಖಲೆಯನ್ನು ಅಳಿಸುವ ಮೊದಲು ಅನುಸರಿಸಬೇಕಾದ ನಿಯಮಾನುಸಾರ ಪ್ರಕ್ರಿಯೆ ಹಾಗೂ ಸುರಕ್ಷತಾ ಕ್ರಮಗಳನ್ನು ಅದರಲ್ಲಿ ನಿಗದಿಪಡಿಸಿದೆ. ನಿಗದಿತ ವಿಧಾನಾನುಸಾರ ಸಂಬಂಧಿತ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ಸಮರ್ಪಕ ಪರಿಶೀಲನೆ ನಡೆಸಿದ ನಂತರವೇ ಯಾವುದೇ ಉದ್ಯೋಗ ಕಾರ್ಡ್‌ಅನ್ನು ರದ್ದುಗೊಳಿಸಬಹುದು ಎಂದು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಡಿಲೀಟ್ ಆಗಿದ್ದೆಷ್ಟು?

ಕಳೆದ 5 ವರ್ಷಗಳಲ್ಲಿ 16.80 ಲಕ್ಷ ಜಾಬ್ ಕಾರ್ಡ್ ಗಳು, 1,32,76,318 ನರೇಗಾ ಕಾರ್ಮಿಕರನ್ನೂ ಡಿಲೀಟ್ ಮಾಡಿದೆ. 2021ರಲ್ಲಿ 33,770, 2022ರಲ್ಲಿ 1,25,942, 2023ರಲ್ಲಿ 1,96,372, 2024ರಲ್ಲಿ 26,538, 2025ರಲ್ಲಿ 1,20,962, 2026ರಲ್ಲಿ 11,77,174 ಸೇರಿದಂತೆ ಒಟ್ಟಾರೆ 16,80,758 ಜಾಬ್ ಕಾರ್ಡ್‌ಗಳು ಡಿಲೀಟ್ ಆಗಿರುವುದು ಉತ್ತರದಿಂದ ತಿಳಿದು ಬಂದಿದೆ. ಈ ಅಂಕಿ ಸಂಖ್ಯೆ ಪ್ರಕಾರ 2026ರ ಜುಲೈ 22ರ ಅಂತ್ಯಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್ ಗಳು ಡಿಲೀಟ್ ಆಗಿರುವುದು ಕಂಡು ಬಂದಿದೆ.

ಅದೇ ರೀತಿ 2021ರಿಂದ 2026ರವರೆಗೆ 66.38 ಲಕ್ಷ ಸಂಖ್ಯೆಯ ಕಾರ್ಮಿಕರನ್ನೂ ಸಹ ಜಾಬ್ ಕಾರ್ಡ್‌ಗಳಿಂದ ಡಿಲೀಟ್ ಆಗಿದೆ. 2021ರಲ್ಲಿ 1,99,713, 2022ರಲ್ಲಿ 4,96,583, 2023ರಲ್ಲಿ 9,10,710, 2024ರಲ್ಲಿ 2,26,677, 2025ರಲ್ಲಿ 8,13,882, 2026ರಲ್ಲಿ 39.99 ಲಕ್ಷ ಸೇರಿದಂತೆ ಒಟ್ಟಾರೆ 66.38 ಲಕ್ಷ ಸಂಖ್ಯೆಯ ನರೇಗಾ ಕಾರ್ಮಿಕರನ್ನು ಡಿಲೀಟ್ ಮಾಡಿರುವುದು ಗೊತ್ತಾಗಿದೆ.

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ಜಿಲ್ಲೆ ಮಧ್ಯ ಪ್ರದೇಶದಲ್ಲಿ 27.10 ಲಕ್ಷ ಜಾಬ್ ಕಾರ್ಡ್‌ಗಳು ಡಿಲೀಟ್ ಆಗಿದೆ. 1.06 ಕೋಟಿಯಷ್ಟು ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ. ಗುಜರಾತ್‌ನಲ್ಲಿ 8.10 ಲಕ್ಷ ಜಾಬ್ ಕಾರ್ಡ್‌ಗಳು ಮತ್ತು 25.65 ಲಕ್ಷ ಕಾರ್ಮಿಕರು, ಮಹಾರಾಷ್ಟ್ರದಲ್ಲಿ 3.81 ಲಕ್ಷ ಜಾಬ್ ಕಾರ್ಡ್‌ಗಳು, 20.57 ಲಕ್ಷ ನರೇಗಾ ಕಾರ್ಮಿಕರು, ಆಂಧ್ರ ಪ್ರದೇಶದಲ್ಲಿ 44.74 ಲಕ್ಷ ಜಾಬ್ ಕಾರ್ಡ್‌ಗಳು 1,16,71,178 ನರೇಗಾ ಕಾರ್ಮಿಕರು, ಅಸ್ಸಾಂನಲ್ಲಿ 12.95 ಲಕ್ಷ ಜಾಬ್ ಕಾರ್ಡ್‌ಗಳು, 41.06 ಲಕ್ಷ ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ.

ಹಾಗೆಯೇ ಛತ್ತೀಸ್‌ಗಡ್‌ನಲ್ಲಿ 14.84 ಲಕ್ಷ ಜಾಬ್ ಕಾರ್ಡ್‌ಗಳು ಮತ್ತು 60.66 ಲಕ್ಷ, ಮಣಿಪುರಂನಲ್ಲಿ 36,915 ಜಾಬ್ ಕಾರ್ಡ್‌ಗಳು, 4.81 ಲಕ್ಷ ನರೇಗಾ ಕಾರ್ಮಿಕರು, ಒಡಿಶಾದಲ್ಲಿ 47.93 ಲಕ್ಷ ಜಾಬ್ ಕಾರ್ಡ್‌ಗಳು, 1.47 ಕೋಟಿ ನರೇಗಾ ಕಾರ್ಮಿಕರು, ರಾಜಸ್ಥಾನದಲ್ಲಿ 1.64 ಕೋಟಿ ಜಾಬ್ ಕಾರ್ಡ್‌ಗಳು , 78.30 ಲಕ್ಷ ನರೇಗಾ ಕಾರ್ಮಿಕರು, ತಮಿಳುನಾಡಿನಲ್ಲಿ 22.86 ಲಕ್ಷ ಕಾರ್ಡ್‌ಗಳು, 57.04 ಲಕ್ಷ ನರೇಗಾ ಕಾರ್ಮಿಕರು, ಉತ್ತರ ಪ್ರದೇಶದಲ್ಲಿ 10.86 ಲಕ್ಷ ಜಾಬ್ ಕಾರ್ಡ್‌ಗಳು, 1.80 ಕೋಟಿ ನರೇಗಾ ಕಾರ್ಮಿಕರು, ಪಶ್ಚಿಮ ಬಂಗಾಳದಲ್ಲಿ 26.18 ಲಕ್ಷ ಜಾಬ್ ಕಾರ್ಡ್‌ಗಳು, 1.00 ಕೋಟಿ ನರೇಗಾ ಕಾರ್ಮಿಕರು, ಬಿಹಾರದಲ್ಲಿ 1,14,20,890 ಸಂಖ್ಯೆಯ ಜಾಬ್ ಕಾರ್ಡ್‌ಗಳು, 1.73 ಕೋಟಿ ನರೇಗಾ ಕಾರ್ಮಿಕರನ್ನು ಡಿಲೀಟ್ ಮಾಡಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News