E20 ಇಂಧನಕ್ಕೆ ನಾನು ಹೊಣೆಯಲ್ಲ: ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಾದವೇನು?

Update: 2026-07-28 20:10 IST

 ನಿತಿನ್ ಗಡ್ಕರಿ | Photo Credit: PTI 

ಕೇಂದ್ರ ಸರ್ಕಾರದ E20 ಎಥನಾಲ್ ಮಿಶ್ರಿತ ಪೆಟ್ರೋಲ್ ನೀತಿ ಹಾಗೂ ಅದರಲ್ಲಿನ ಭ್ರಷ್ಟಾಚಾರದ ಆರೋಪಗಳಿಗೆ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಮೆಟಾ (ಫೇಸ್‌ಬುಕ್/ಇನ್‌ಸ್ಟಾಗ್ರಾಮ್), ಎಕ್ಸ್ ಮತ್ತು ಗೂಗಲ್‌ನಲ್ಲಿ ಹರಿದಾಡುತ್ತಿರುವ ನಿಂದನೀಯ ಪೋಸ್ಟ್‌ಗಳು ಹಾಗೂ AI ಆಧಾರಿತ 'ಡೀಪ್‌ಫೇಕ್' ವಿಡಿಯೊಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

"ದೇಶದಲ್ಲಿ ಶೇಕಡಾ 20 ರಷ್ಟು ಎಥನಾಲ್ ಮತ್ತು 80 ರಷ್ಟು ಪೆಟ್ರೋಲ್ ಮಿಶ್ರಿತ E20 ಪೆಟ್ರೋಲ್ ಅನ್ನು ಪರಿಚಯಿಸಿದ್ದಕ್ಕಾಗಿ ಗಡ್ಕರಿ ಅವರು ಕಳೆದ ಕೆಲವು ತಿಂಗಳುಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ತಗ್ಗಿಸುವುದು ಮತ್ತು ದೇಶೀಯವಾಗಿ ಉತ್ಪಾದಿಸುವ ಜೈವಿಕ ಇಂಧನಗಳ ಬಳಕೆಗೆ ಉತ್ತೇಜನ ನೀಡುವುದು ಭಾರತ ಸರ್ಕಾರದ ತಂತ್ರದ ಮುಖ್ಯ ಭಾಗವಾಗಿದ್ದು, E20 ಯೋಜನೆಯು ಇದರ ಪ್ರಮುಖ ಅಂಗವಾಗಿದೆ."

E20 ಇಂಧನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸದ ಹಳೆಯ ವಾಹನಗಳಲ್ಲಿ ಹೊಂದಾಣಿಕೆಯ ಸಮಸ್ಯೆಗಳು, ಇಂಧನ ವ್ಯವಸ್ಥೆಯಲ್ಲಿ ತುಕ್ಕು ಹಿಡಿಯುವುದು ಮತ್ತು ಮೈಲೇಜ್ ಕಡಿಮೆಯಾಗುವ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕವನ್ನು ಈ ಇಂಧನ ಹುಟ್ಟುಹಾಕಿದೆ.

ಪ್ರಸ್ತುತ ವಾಹನ ತಯಾರಕರು E20 ಇಂಧನಕ್ಕೆ ಬೆಂಬಲಿಸುವ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ 2023ಕ್ಕಿಂತ ಮೊದಲು ಮಾರಾಟವಾದ ವಾಹನಗಳ ಹೊಂದಾಣಿಕೆಯ ಬಗ್ಗೆ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಇತ್ತೀಚೆಗೆ ಛತ್ತೀಸ್‌ಗಢದ ರಾಯ್‌ಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿಗೆ ಮಹತ್ವದ ಆದೇಶವೊಂದನ್ನು ನೀಡಿತ್ತು. E20 ಇಂಧನ ಬಳಕೆಯಿಂದ ಎಂಜಿನ್ ಕೆಟ್ಟುಹೋಯಿತು ಎನ್ನಲಾದ ವ್ಯಕ್ತಿಗೆ E20 ಇಂಧನ ಬೆಂಬಲಿಸುವ ಹೊಸ ಗ್ರ್ಯಾಂಡ್ ವಿಟಾರಾ (Grand Vitara) ಕಾರನ್ನು ನೀಡುವಂತೆ ನಿರ್ದೇಶಿಸಿತ್ತು.

ಕಡಿಮೆ ಎಥನಾಲ್ ಇರುವ ಸಾಮಾನ್ಯ ಪೆಟ್ರೋಲ್ ಅನ್ನು ಆಯ್ಕೆ ಮಾಡಲು ವಾಹನ ಮಾಲೀಕರಿಗೆ ಅವಕಾಶ ನೀಡದೆ, E20 ಇಂಧನವನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ವಾಹನ ಪ್ರಿಯರು ಹಾಗೂ ತಜ್ಞರು ಗಡ್ಕರಿ ವಿರುದ್ಧ ತೀವ್ರವಾಗಿ ಧ್ವನಿ ಎತ್ತುತ್ತಿದ್ದಾರೆ.

ವಕೀಲ ಸಂದೀಪ್ ಲಡ್ಡಾ ಅವರ ಮೂಲಕ ಸಲ್ಲಿಸಲಾದ ದಾವೆಯಲ್ಲಿ ಗಡ್ಕರಿ ಅವರು ಪ್ರಮುಖ ವಿವರಣೆ ನೀಡಿದ್ದಾರೆ. E20 ನೀತಿಯು ಸಂಪೂರ್ಣವಾಗಿ ಪೆಟ್ರೋಲಿಯಂ ಸಚಿವಾಲಯಕ್ಕೆ ಸೇರಿದ್ದು, ಇದನ್ನು ರೂಪಿಸುವಲ್ಲಿ ಅಥವಾ ಜಾರಿಗೆ ತರುವಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿರುವ ವೈರಲ್ ವಿಡಿಯೊಗಳು, ಮೀಮ್‌ ಗಳು ಮತ್ತು ನಕಲಿ ಹೇಳಿಕೆಗಳು ರಾಜಕೀಯ ವಿಮರ್ಶೆಯ ಗಡಿಯನ್ನು ದಾಟಿ, ತಮ್ಮನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ತೇಜೋವಧೆಯಾಗಿದೆ ಎಂಬುದು ಅವರ ವಾದವಾಗಿದೆ.

ಗಡ್ಕರಿ ಯಾರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಯಾಕೆ?

ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್), ಎಕ್ಸ್, ಗೂಗಲ್/ಯೂಟ್ಯೂಬ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ದೂರಸಂಪರ್ಕ ಇಲಾಖೆ ಹಾಗೂ “ಅಶೋಕ್ ಕುಮಾರ್/ಜಾನ್ ಡೋ” ಎಂದು ಹೆಸರಿಸಲಾಗಿರುವ ಹಲವು ಅಪರಿಚಿತ ಬಳಕೆದಾರರ ವಿರುದ್ಧ ನಿತಿನ್ ಗಡ್ಕರಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಿದ್ದಾರೆ.

'ಜಾನ್ ಡೋ' (John Doe) ಆದೇಶಗಳು ಎಂಬುದು ಗುರುತು ಸಿಗದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ನೀಡಲಾಗುವ ಸಮಗ್ರ ತಡೆಯಾಜ್ಞೆಗಳಾಗಿವೆ. ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯಾಗುವ ಪ್ರಕರಣಗಳಲ್ಲಿ, ಪ್ರತಿಯೊಬ್ಬ ಉಲ್ಲಂಘನೆದಾರರನ್ನು ಹುಡುಕುವುದು ಪ್ರಾಯೋಗಿಕವಾಗಿ ಅಸಾಧ್ಯವಾದಾಗ ಸಾಮಾನ್ಯವಾಗಿ ಇಂತಹ ಆದೇಶಗಳನ್ನು ಹೊರಡಿಸಲಾಗುತ್ತದೆ.

ತಮ್ಮನ್ನು ವೈಯಕ್ತಿಕವಾಗಿ E20 ಯೋಜನೆಗೆ ಲಿಂಕ್ ಮಾಡಿ, ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಎಐ ಮೂಲಕ ಸೃಷ್ಟಿಸಲಾಗಿರುವ 'ಮಾನಹಾನಿಕರ' ಹಾಗೂ 'ಡೀಪ್‌ಫೇಕ್' ವಿಡಿಯೊಗಳು ಮತ್ತು ಚಿತ್ರಗಳನ್ನು ತಕ್ಷಣವೇ ತೆರವುಗೊಳಿಸಲು ಅವರು ಕಾಯಂ ತಡೆಯಾಜ್ಞೆಗೆ ಮನವಿ ಮಾಡಿದ್ದಾರೆ.

E20 ಯೋಜನೆಗೂ ನನಗೂ ಸಂಬಂಧವಿಲ್ಲ, ನಾನು ಜವಾಬ್ದಾರನಲ್ಲ

E20 ಯೋಜನೆಯನ್ನು ತರಲು ಅಥವಾ ಜಾರಿಗೆ ತರಲು ತಾವು ಜವಾಬ್ದಾರರಲ್ಲ ಎಂಬುದು ಗಡ್ಕರಿ ಅವರ ಪ್ರಮುಖ ವಾದವಾಗಿದೆ.

ಅವರ ಅರ್ಜಿಯ ಪ್ರಕಾರ, ಭಾರತದ ಕಚ್ಚಾ ತೈಲದ ಆಮದು ಅವಲಂಬನೆಯನ್ನು ತಗ್ಗಿಸಲು, ಇಂಧನ ಭದ್ರತೆಯನ್ನು ಹೆಚ್ಚಿಸಲು ಮತ್ತು ನವೀಕರಿಸಬಹುದಾದ ಹಾಗೂ ದೇಶೀಯ ಇಂಧನಗಳ ಬಳಕೆಗೆ ಉತ್ತೇಜನ ನೀಡಲು ಭಾರತ ಸರ್ಕಾರವು 2003ರಲ್ಲೇ ಎಥನಾಲ್ ಮಿಶ್ರಣ ಯೋಜನೆಯನ್ನು (EBP) ಜಾರಿಗೆ ತಂದಿತ್ತು.

ಪೆಟ್ರೋಲ್‌ ನಲ್ಲಿ ಎಥನಾಲ್ ಮಿಶ್ರಣ ಮಾಡುವ ಈ ನೀತಿಯನ್ನು ಹಂತ ಹಂತವಾಗಿ ವಿಸ್ತರಿಸಲಾಯಿತು. ಅಂತಿಮವಾಗಿ 2025–26ರ ವೇಳೆಗೆ ಇದನ್ನು ಶೇಕಡಾ 20 ರಷ್ಟು (E20) ಮಿಶ್ರಣ ಮಾಡುವ ಮಟ್ಟಕ್ಕೆ ತರಲಾಯಿತು. ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗಿದ್ದು, ಇದು ಸಾರ್ವಜನಿಕ ದಾಖಲೆಗಳಲ್ಲಿ ಲಭ್ಯವಿರುವ ವಿಷಯವಾಗಿದೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಸಚಿವರಾಗಿ ಅಥವಾ ಯಾವುದೇ ಇತರ ಹುದ್ದೆಯಲ್ಲಾಗಲಿ, ತಮಗೂ ಎಥನಾಲ್ ಮಿಶ್ರಣ ಯೋಜನೆಗೂ ಅಥವಾ E20 ನೀತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಗಡ್ಕರಿ ಅವರ ಪ್ರಮುಖ ವಾದ.

ಎಥನಾಲ್ ಮಿಶ್ರಣ ಯೋಜನೆಯನ್ನು (EBP/E20) ರೂಪಿಸಿ, ಜಾರಿಗೆ ತಂದು ನಿರ್ವಹಿಸುತ್ತಿರುವುದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೇ ಹೊರತು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವಲ್ಲ ಎಂಬುದು ಅವರ ಸ್ಪಷ್ಟನೆ.

ಆಡಳಿತಾತ್ಮಕವಾಗಿ ಮತ್ತು ಕಾರ್ಯನಿರ್ವಹಣೆಯ ದೃಷ್ಟಿಯಿಂದ ರಸ್ತೆ ಸಾರಿಗೆ ಸಚಿವಾಲಯವು ಪೆಟ್ರೋಲಿಯಂ ಸಚಿವಾಲಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ತಾವು ಎಂದಿಗೂ ಪೆಟ್ರೋಲಿಯಂ ಸಚಿವಾಲಯದ ಉಸ್ತುವಾರಿ ಸಚಿವರಾಗಿಯೂ ಇರಲಿಲ್ಲ. ಅಲ್ಲದೆ, ಎಥನಾಲ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಾಂಗ, ಶಾಸನಬದ್ಧ, ಆಡಳಿತಾತ್ಮಕ, ನಿಯಂತ್ರಣ, ಹಣಕಾಸು ಅಥವಾ ನೀತಿ ನಿರೂಪಣೆಯ ಅಧಿಕಾರವನ್ನು ಚಲಾಯಿಸಿಲ್ಲ ಎಂದು ಗಡ್ಕರಿ ದಾವೆಯಲ್ಲಿ ತಿಳಿಸಿದ್ದಾರೆ.

ಆದರೆ ಈ ಯೋಜನೆಗೆ ತಮ್ಮನ್ನೇ ಜವಾಬ್ದಾರರನ್ನಾಗಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಮತ್ತು ಡೀಪ್‌ಫೇಕ್ ಪೋಸ್ಟ್‌ ಗಳನ್ನು ಹರಿಯಬಿಡಲಾಗುತ್ತಿದೆ ಎಂದು ಅವರು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕುಟುಂಬದವರಿಗೆ E20 ನಿಂದ ಲಾಭ ಎಂಬುದು ಸುಳ್ಳು ಆರೋಪ

ಕೇಂದ್ರ ಸಚಿವರ ವಿರುದ್ಧ ಕೇಳಿಬರುತ್ತಿರುವ ಪ್ರಮುಖ ಆರೋಪವೆಂದರೆ, ಅವರ ಮಗ E20 ಯೋಜನೆಯಿಂದ ಅನುಚಿತ ಲಾಭ ಪಡೆದಿದ್ದಾರೆ ಎಂಬುದು.

ಸಚಿವರ ಮಗ ನಿಖಿಲ್ ಗಡ್ಕರಿ 'ಸಿಯಾನ್ ಅಗ್ರೋ ಇಂಡಸ್ಟ್ರೀಸ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' (CIAN Agro Industries & Infrastructure Limited) ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಕಂಪನಿಯು ಎಥನಾಲ್ ಮತ್ತು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವುದರಿಂದ ಅವರಿಗೆ ನೇರ ಲಾಭವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ಆರೋಪಗಳನ್ನು ಗಡ್ಕರಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

E20 ಪೆಟ್ರೋಲ್ ಪರಿಚಯಿಸಿದ್ದಕ್ಕೆ, ಅದನ್ನು ಕಡ್ಡಾಯಗೊಳಿಸಿದ್ದಕ್ಕೆ ಮತ್ತು ಎಥನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿರುವ ಹಲವು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ರೀಲ್ಸ್‌ಗಳು ಹಾಗೂ ವಿಡಿಯೊಗಳನ್ನು ಆಧಾರವಾಗಿಟ್ಟುಕೊಂಡು ಈ ದಾವೆ ಹೂಡಲಾಗಿದೆ.

ತಮ್ಮ ಕುಟುಂಬವು "E20 ಯೋಜನೆಯಿಂದ ಅನುಚಿತ ಹಣಕಾಸಿನ ಲಾಭ ಪಡೆದಿದೆ" ಎಂದು ಬಿಂಬಿಸುವ ಮೂಲಕ ಭ್ರಷ್ಟಾಚಾರ, ಹಿತಾಸಕ್ತಿ ಸಂಘರ್ಷ ಮತ್ತು ಅಧಿಕಾರದ ದುರುಪಯೋಗ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದಾಖಲೆ ರಹಿತ ಎಂದು ಅವರು ವಾದಿಸಿದ್ದಾರೆ. ಈ ಯೋಜನೆಯು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG) ಆಡಳಿತದಲ್ಲಿ ನಡೆಯುತ್ತಿದೆ ಎಂಬುದನ್ನು ಸರಕಾರಿ ಅಧಿಕೃತ ದಾಖಲೆಗಳೇ ಸ್ಪಷ್ಟಪಡಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಮಿತಿ ದಾಟಿದ ಪೋಸ್ಟ್‌ಗಳು

ಸರ್ಕಾರದ ನೀತಿಗಳು ಅಥವಾ ತಮ್ಮ ಸಾರ್ವಜನಿಕ ಜೀವನದ ಕುರಿತು ಬರುವ "ನ್ಯಾಯಸಮ್ಮತ ಹಾಗೂ ಪ್ರಾಮಾಣಿಕ ವಿಮರ್ಶೆಗಳನ್ನು" ತಡೆಯುವುದು ತಮ್ಮ ಉದ್ದೇಶವಲ್ಲ ಎಂದು ಗಡ್ಕರಿ ತಮ್ಮ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೆಚ್ಚಿನ ಪೋಸ್ಟ್‌ಗಳು ಅಶ್ಲೀಲ ಹಾಗೂ ನಿಂದನೀಯ ಭಾಷೆ, ನಕಲಿ ಹೇಳಿಕೆಗಳು ಮತ್ತು ತಿರುಚಿದ ದೃಶ್ಯಗಳಿಂದ ಕೂಡಿವೆ ಎಂದು ಅವರು ಹೇಳಿದ್ದಾರೆ.

ನೀತಿಯ ಮೇಲಿನ ವಿಮರ್ಶೆ ಏನೇ ಇರಲಿ, ಇಂತಹ ಪೋಸ್ಟ್‌ಗಳು ರಾಜಕೀಯ ಟೀಕೆ ಅಥವಾ ವಿಡಂಬನೆಯ ಮಿತಿಯನ್ನು ದಾಟಿವೆ ಎಂಬುದು ಅವರ ವಾದವಾಗಿದೆ.

ಗಡ್ಕರಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಪೋಸ್ಟ್‌ಗಳು ಯಾವುವು?

ತಮ್ಮ ಅನುಮತಿಯಿಲ್ಲದೆ ಹೆಸರು, ಮುಖ, ಧ್ವನಿ ಮತ್ತು ಹಾವಭಾವಗಳನ್ನು ಬಳಸಿ ಸೃಷ್ಟಿಸಲಾಗಿರುವ 'ಫೇಸ್-ಸ್ವಾಪ್' (ಮುಖ ಬದಲಿಸಿದ) ವಿಡಿಯೊಗಳು, ಎಐ-ನಿರ್ಮಿತ (AI) ಚಿತ್ರಗಳು ಹಾಗೂ ವ್ಯಂಗ್ಯಚಿತ್ರಗಳಿರುವ 26 ಲಿಂಕ್‌ಗಳ ವಿವರಗಳನ್ನು ದಾವೆಯಲ್ಲಿ ನೀಡಲಾಗಿದೆ.

ಇವು ತಮ್ಮ ವ್ಯಕ್ತಿತ್ವ ಹಾಗೂ ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸಿದ್ದು, ತಮ್ಮ ಡಿಜಿಟಲ್ ಗುರುತನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರತಿವಾದಿಗಳಿಂದ 11 ಕೋಟಿ ರೂ. ಪರಿಹಾರವನ್ನು ನೀಡುವಂತೆ ಗಡ್ಕರಿ ಬೇಡಿಕೆ ಇಟ್ಟಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ನಡೆಸಲಿದ್ದಾರೆ.

ಸೌಜನ್ಯ: barandbench.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News