ಮಕ್ಕಳಲ್ಲಿ ಒತ್ತಡ; ಪೋಷಕರು ಗಮನಿಸಬೇಕಾದ ಅಂಶಗಳು ಯಾವುವು?
ಸಾಂದರ್ಭಿಕ ಚಿತ್ರ | Photo Credit : magnific
ಮಕ್ಕಳು ತಮ್ಮ ಆತಂಕದ ಆಲೋಚನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಪೋಷಕರು ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ತಕ್ಷಣವೇ ಗುರುತಿಸಬೇಕಾಗುತ್ತದೆ.
ಮಕ್ಕಳು ನಿಷ್ಕಳಂಕ ಮನಸ್ಸಿನವರು, ನೆಮ್ಮದಿ ಮತ್ತು ಸಂತೋಷದಿಂದ ಕಾಲ ಕಳೆಯುವವರು ಎಂದು ಪರಿಗಣಿಸಲಾಗುತ್ತದೆ. ಆತಂಕವು (Anxiety) ವಯಸ್ಕರು ಅಥವಾ ಹದಿಹರೆಯದವರ ಸಮಸ್ಯೆಯಂತೆ ಕಾಣಿಸಬಹುದು. ಆದರೆ ಮಕ್ಕಳು ಸಹ ಆತಂಕ ಮತ್ತು ಅತಿಯಾದ ಒತ್ತಡವನ್ನು ಎದುರಿಸಬಹುದು. ಅವರು ಏನನ್ನು ಎದುರಿಸುತ್ತಿದ್ದಾರೆ ಎಂಬುದನ್ನು ವಿವರಿಸಲು ಪದಗಳಿಲ್ಲದಿದ್ದರೂ, ಚಿಹ್ನೆಗಳನ್ನು ಗುರುತಿಸುವುದು ಆರೈಕೆದಾರರು, ಪೋಷಕರು, ಒಡಹುಟ್ಟಿದವರು, ಶಿಕ್ಷಕರು ಮತ್ತು ಸುತ್ತಮುತ್ತಲಿನ ಇತರರ ಆದ್ಯತೆಯಾಗಬೇಕಾಗುತ್ತದೆ.
ಗೇಟ್ ವೇ ಆಫ್ ಹೀಲಿಂಗ್ ನ ಸಂಸ್ಥಾಪಕರು ಮತ್ತು ನಿರ್ದೇಶಕರೂ ಆಗಿರುವ ಮನೋಚಿಕಿತ್ಸಕಿ ಡಾ. ಚಾಂದನಿ ತುಘ್ನೈಟ್ ಅವರು, ಮಗು ಆತಂಕಕ್ಕೊಳಗಾಗಿರುವುದನ್ನು ಸೂಚಿಸುವ ಸಂಭವನೀಯ ಚಿಹ್ನೆಗಳ ಬಗ್ಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಪೋಷಕರು ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿರುತ್ತಾರೆ. “ಹೆಚ್ಚಿನ ಪೋಷಕರು ತಮ್ಮ ಮಗು ಏನಾದರೂ ತಪ್ಪಾದಾಗ ತಮ್ಮ ಬಳಿಗೆ ಬಂದು ಹೇಳಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಆತಂಕ ಹೇಗಿರುತ್ತದೆ ಎಂಬುದನ್ನು ಹೇಳಲು ತಿಳಿದಿರುವುದಿಲ್ಲ. ಆದ್ದರಿಂದ ಅವರು ಅದನ್ನು ಇತರ ರೀತಿಯಲ್ಲಿ ತೋರಿಸುತ್ತಾರೆ. ಈ ಚಿಹ್ನೆಗಳು ಯಾವಾಗಲೂ ಚಿಂತೆಯಂತೆ ಕಾಣಿಸದ ಕಾರಣ, ಅವುಗಳನ್ನು ಹೆಚ್ಚಾಗಿ ಕೆಟ್ಟ ನಡವಳಿಕೆ, ಗಡಿಬಿಡಿ ಅಥವಾ ಮಗು ಬೆಳೆದಂತೆ ಸರಿಹೋಗುವ ಹಂತ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ” ಎನ್ನುತ್ತಾರೆ ಚಾಂದನಿ.
ತಜ್ಞರ ಪ್ರಕಾರ, ಮಗುವಿನಲ್ಲಿ ಆತಂಕ ಕಾಣಿಸಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ.
►ದೈಹಿಕವಾಗಿ ಕಾಣಿಸಿಕೊಳ್ಳುವುದು
ಶಾಲೆಗೆ ಹೋಗುವ ಮೊದಲು ಹೊಟ್ಟೆ ನೋವಿನ ಬಗ್ಗೆ ದೂರು ನೀಡುತ್ತಿದ್ದರೆ ಅಥವಾ ರವಿವಾರ ರಾತ್ರಿ ಆಗಾಗ್ಗೆ ತಲೆನೋವು ಬರುತ್ತಿದ್ದರೆ, ಮಗು ನೆಪಗಳನ್ನು ಹೇಳುತ್ತಿಲ್ಲದಿರಬಹುದು. ಅನೇಕ ಮಕ್ಕಳು ಆತಂಕವನ್ನು ಮೊದಲು ದೇಹದಲ್ಲಿ ಅನುಭವಿಸುತ್ತಾರೆ. ಆ ಅಸ್ವಸ್ಥತೆಯನ್ನು ಒಂದು ಭಾವನೆಗೆ ಸಂಪರ್ಕಿಸಲು ಅವರಿಗೆ ಸಾಧ್ಯವಾಗದ ಕಾರಣ, ಅದರ ಒಂದು ಭಾಗವನ್ನು ಮಾತ್ರ ವಿವರಿಸುತ್ತಾರೆ.
►ನಡವಳಿಕೆಯಲ್ಲಿ ಸದ್ದಿಲ್ಲದೆ ಬದಲಾವಣೆ
ಕೆಲವು ಆತಂಕಕ್ಕೊಳಗಾದ ಮಕ್ಕಳು ಪೋಷಕರಿಗೆ ಅಂಟಿಕೊಂಡಿರುತ್ತಾರೆ ಮತ್ತು ಒಂಟಿಯಾಗಿ ಮಲಗಲು ನಿರಾಕರಿಸುತ್ತಾರೆ. ಆದರೆ, ಇನ್ನು ಕೆಲವರು ಹಿಂದೆಂದೂ ಸಮಸ್ಯೆಯೆಂದು ಭಾವಿಸದ ಸಣ್ಣ ವಿಷಯಗಳಿಗೂ ಕೋಪಗೊಳ್ಳಲು ಪ್ರಾರಂಭಿಸುತ್ತಾರೆ. ಇದ್ದಕ್ಕಿದ್ದಂತೆ ಕಿರಿಕಿರಿಗೊಳ್ಳಬಹುದು. ನಿದ್ರಿಸಲು ತೊಂದರೆಯಾಗಬಹುದು. ಅಥವಾ ಒಮ್ಮೆ ಪ್ರೀತಿಸುತ್ತಿದ್ದ ಚಟುವಟಿಕೆಗಳನ್ನು ಬಿಟ್ಟುಬಿಡಲು ಬಯಸಬಹುದು. ಮಗು ಇಂತಹ ಸ್ವಭಾವ ತೋರಿಸಿದರೆ, ಏನನ್ನೋ ತಿಳಿಸಲು ಪ್ರಯತ್ನಿಸುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು.
►ಮಕ್ಕಳ ಮೇಲೂ ಹೆಚ್ಚುತ್ತಿರುವ ಒತ್ತಡ
ಇಂದಿನ ಮಕ್ಕಳು ತುಂಬಿದ ವೇಳಾಪಟ್ಟಿಯೊಂದಿಗೆ ಬೆಳೆಯುತ್ತಿದ್ದಾರೆ. ಕಿಂಡರ್ಗಾರ್ಟನ್ ನ ಹಂತದಿಂದಲೇ ಶೈಕ್ಷಣಿಕ ನಿರೀಕ್ಷೆಗಳು ಹೆಚ್ಚುತ್ತಿವೆ. ಅಲ್ಲದೆ, ತಾವು ಗ್ರಹಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಒಡ್ಡುವ ಪರದೆಗಳ ನಡುವೆ ಬೆಳೆಯುತ್ತಿದ್ದಾರೆ. ಅನೇಕರಿಗೆ ಮನೆಯಲ್ಲಿಯೇ ಒತ್ತಡ ಆರಂಭವಾಗುತ್ತದೆ. ತಮ್ಮ ಸುತ್ತಲಿನ ವಯಸ್ಕರು ಸಮಸ್ಯೆಗಳನ್ನು ಮಕ್ಕಳಿಂದ ಮರೆಮಾಚುತ್ತಿದ್ದೇವೆ ಎಂದು ಭಾವಿಸಿದರೂ, ಆ ಸಮಸ್ಯೆಗಳ ಮೂಲ ತಿಳಿಯದೆಯೇ ಮಕ್ಕಳು ಒತ್ತಡ ಅನುಭವಿಸುತ್ತಾರೆ.
ಪೋಷಕರು ಮಕ್ಕಳನ್ನು ಸಹಾನುಭೂತಿಯಿಂದ ಗಮನಿಸಿಕೊಳ್ಳಬೇಕು ಎಂದು ಮನೋಚಿಕಿತ್ಸಕರು ಸಲಹೆ ನೀಡಿದ್ದಾರೆ.
“ಮಗುವಿಗೆ ಏಕೆ ಬೇಸರವಾಗಿದೆ ಎಂದು ಕೇಳುವ ಬದಲು, ಅದು ಏಕೆ ಒತ್ತಡ ಅನುಭವಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಉದಾಹರಣೆಗೆ, ಭಯ ಅಥವಾ ಆತಂಕ ಹಾಗೂ ಅವರಿಗೆ ಸೂಕ್ತವಾದುದನ್ನು ಆಯ್ಕೆ ಮಾಡಲು ಅವಕಾಶ ನೀಡದಿರುವುದು ಒತ್ತಡಕ್ಕೆ ಕಾರಣವಾಗಬಹುದು. ದೈನಂದಿನ ದಿನಚರಿಯನ್ನು ಸ್ಥಿರವಾಗಿರಿಸಿಕೊಳ್ಳುವುದು, ಫೋನ್ಗಳು ಅಥವಾ ಇತರ ಗೊಂದಲಗಳಿಲ್ಲದೆ ಕೆಲವು ನಿಮಿಷಗಳನ್ನು ಶಾಂತವಾಗಿ ಒಟ್ಟಿಗೆ ಕಳೆಯುವುದು ಸಹಾಯ ಮಾಡಬಹುದು. ಪದೇಪದೆ ಪ್ರಶ್ನೆಗಳನ್ನು ಕೇಳುವಾಗಲೂ ಪೋಷಕರು ತಾಳ್ಮೆಯಿಂದ ಇರಬೇಕಾಗುತ್ತದೆ. ಮಗುವಿನೊಂದಿಗೆ ಸಮಾಧಾನದಿಂದ ಮಾತನಾಡುವುದು ಅವರಿಗೆ ಸುರಕ್ಷಿತ ಭಾವನೆ ನೀಡುತ್ತದೆ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೂಚನೆ: ಈ ಲೇಖನವನ್ನು ಮಾಧ್ಯಮದ ಮೂಲದಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ಇದು ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಸಮಸ್ಯೆಗಳಿದ್ದರೆ ವಿಶ್ವಾಸಾರ್ಹ ತಜ್ಞ ವೈದ್ಯರನ್ನು ಸಂಪರ್ಕಿಸಿ.