ಸಾಂದರ್ಭಿಕ ಚಿತ್ರ | Photo Credit : magnific

ವೈದ್ಯೆ ಡಾ. ಶ್ರೇಯಾ ಗಾರ್ಗ್ ಅವರು ಮೂರು ತಿಂಗಳ ಕಾಲ ಪ್ರತಿದಿನ ಒಂದು ಚಮಚ ಕರಿ ಎಳ್ಳನ್ನು ಸೇವಿಸಿದ ಮಹಿಳೆಯ ಪ್ರಕರಣವನ್ನು ಹಂಚಿಕೊಂಡಿದ್ದಾರೆ.

ಕರಿ ಎಳ್ಳು ತಿಂದಿದ್ದೀರಾ? ನಿಮ್ಮ ದೈನಂದಿನ ಆಹಾರದಲ್ಲಿ ಅದಕ್ಕೆ ಸ್ಥಾನ ನೀಡಲು ಯೋಚಿಸಿದ್ದೀರಾ? ಇತ್ತೀಚೆಗೆ ಲೈಫ್ಸ್ಟೈಲ್ (ಕೂದಲು, ಪಿಸಿಒಎಸ್ ಮತ್ತು ಕರುಳಿನ ಆರೋಗ್ಯ) ತಜ್ಞೆ ಡಾ. ಶ್ರೇಯಾ ಗಾರ್ಗ್ ಅವರು ಮೂರು ತಿಂಗಳ ಕಾಲ ಪ್ರತಿದಿನ ಒಂದು ಚಮಚ ಕರಿ ಎಳ್ಳನ್ನು ಸೇವಿಸಿದ ಮಹಿಳೆಯ ಪ್ರಕರಣವನ್ನು ಹಂಚಿಕೊಂಡಿದ್ದಾರೆ!

ಅವರು ಹೇಳಿರುವ ಪ್ರಕಾರ, “ಇದು ಒಂದು ಸಣ್ಣ ಅಭ್ಯಾಸವಾಗಿ ಪ್ರಾರಂಭವಾಯಿತು. ಯಾವುದೇ ಅಲಂಕಾರಿಕ ಪೂರಕಗಳನ್ನು ಸೇರಿಸಲಿಲ್ಲ. ವೈರಲ್ ಡಿಟಾಕ್ಸ್ ಪಾನೀಯವಾಗಿ ಬದಲಿಸಲಿಲ್ಲ. ದೈನಂದಿನ ಆಹಾರದಲ್ಲಿ ಕೇವಲ ಒಂದು ಚಮಚ ಕರಿ ಎಳ್ಳನ್ನು ಸೇರಿಸಲಾಯಿತು. ಆ ಮಹಿಳೆಗೆ ಕೂದಲು ಉದುರುವಿಕೆ, ಕಡಿಮೆ ಶಕ್ತಿ, ಮಂದ ಚರ್ಮ ಮತ್ತು ಅನಿಯಮಿತ ಋತುಚಕ್ರದ ಸಮಸ್ಯೆ ಇತ್ತು. ರಕ್ತ ಪರೀಕ್ಷೆಯ ವರದಿಗಳಲ್ಲಿ ರಕ್ತಹೀನತೆಯ ಹಂತಕ್ಕೆ ಸಮೀಪಿಸಿರುವುದು ಕಂಡುಬಂದಿತ್ತು. ಕ್ಯಾಲ್ಸಿಯಂ ಮಟ್ಟವೂ ಕಡಿಮೆ ಇತ್ತು. ದೊಡ್ಡ ಆರೋಗ್ಯ ಸಮಸ್ಯೆಯೇನೂ ಇರಲಿಲ್ಲ. ಆದರೆ, ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಇಷ್ಟು ಸಾಕಾಗಿತ್ತು” ಎಂದು ಡಾ. ಶ್ರೇಯಾ ಗಾರ್ಗ್ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

Full View

ಶ್ರೇಯಾ ಗಾರ್ಗ್ ಅವರ ಪೋಸ್ಟ್ ಪ್ರಕಾರ, ಮೂರು ತಿಂಗಳ ಕಾಲ ನಿತ್ಯವೂ ಒಂದು ಚಮಚ ಕರಿ ಎಳ್ಳನ್ನು ಸೇವಿಸಿದ ನಂತರ ಮಹಿಳೆಯಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬಂದಿವೆ.

• ಕೂದಲು ಉದುರುವಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ.

• ಶಕ್ತಿಯ ಮಟ್ಟ ಸುಧಾರಿಸಿದೆ.

• ಚರ್ಮ ಆರೋಗ್ಯಕರವಾಗಿದೆ.

• ಋತುಚಕ್ರ ಹೆಚ್ಚು ನಿಯಮಿತವಾಗಿದೆ.

ಅವರಲ್ಲಿ ಏನು ಬದಲಾವಣೆ ಕಂಡುಬಂದಿದೆ?

ವಿಜ್ಞಾನದಲ್ಲಿಯೂ ಇದಕ್ಕೆ ವಿವರಣೆಯಿದೆ. ಕರಿ ಎಳ್ಳು ಕಬ್ಬಿಣದ ಅಂಶದಿಂದ ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಬೆಂಬಲಿಸುತ್ತದೆ. ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಮೂಳೆ ಹಾಗೂ ನರಗಳ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾರ್ಮೋನ್ ಸಮತೋಲನಕ್ಕೆ ಪೂರಕವಾದ ಆರೋಗ್ಯಕರ ಕೊಬ್ಬುಗಳೂ ಇದರಲ್ಲಿವೆ. ಲಿಗ್ನಾನ್ ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ.

“ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸಿದಾಗ ಕರಿ ಎಳ್ಳು ಕಬ್ಬಿಣದ ಸಂಗ್ರಹ, ಲಿಪಿಡ್ ಪ್ರೊಫೈಲ್ ಮತ್ತು ಆಕ್ಸಿಡೇಟಿವ್ ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದು ಯಾವುದೇ ಪವಾಡ ಚಿಕಿತ್ಸೆಯಲ್ಲ. ಆಹಾರ, ಜೀರ್ಣಕ್ರಿಯೆ ಮತ್ತು ನಿಯಮಿತ ಸೇವನೆ ಸರಿಯಾಗಿದ್ದಾಗ ಮಾತ್ರ ಇದು ಪರಿಣಾಮಕಾರಿಯಾಗುತ್ತದೆ. ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗಬಹುದು ಅಥವಾ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ಡಾ. ಗಾರ್ಗ್ ಹೇಳಿದ್ದಾರೆ.

ಡಾ. ಗಾರ್ಗ್ ಪ್ರಕಾರ, ಸೇವಿಸುವ ಸರಿಯಾದ ವಿಧಾನ:

• ಪ್ರತಿದಿನ ಒಂದು ಚಮಚ.

• ಲಘುವಾಗಿ ಹುರಿದ ಅಥವಾ ನೆನೆಸಿದ ರೂಪದಲ್ಲಿ ಸೇವಿಸಬೇಕು.

• ಬೆಚ್ಚಗಿನ ನೀರಿನೊಂದಿಗೆ ಅಥವಾ ಆಹಾರದಲ್ಲಿ ಬೆರೆಸಿ ಸೇವಿಸುವುದು ಉತ್ತಮ.

ಸಣ್ಣ ಅಭ್ಯಾಸಗಳು ವಿಜ್ಞಾನದ ಬೆಂಬಲದೊಂದಿಗೆ ಸ್ಥಿರವಾದ ಬದಲಾವಣೆ ತಂದು ಉತ್ತಮ ಆರೋಗ್ಯ ಫಲಿತಾಂಶ ನೀಡಬಲ್ಲವು ಎಂದು ಡಾ. ಗಾರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಥಾಣೆಯ ಕಿಮ್ಸ್ ಆಸ್ಪತ್ರೆಗಳ ಆಂತರಿಕ ವೈದ್ಯಕೀಯ ಸಲಹೆಗಾರ ಡಾ. ಅನಿಕೇತ್ ಮ್ಯೂಲ್, ಕರಿ ಎಳ್ಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಡಾ. ಗಾರ್ಗ್ ಅವರ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಲ್ಲ ಎಂದು ಹೇಳಿದ್ದಾರೆ.

ಡಾ. ಅನಿಕೇತ್ ಅವರ ಪ್ರಕಾರ, “ಕರಿ ಎಳ್ಳು ಕಬ್ಬಿಣ, ಮೆಗ್ನೀಸಿಯಂ, ಆರೋಗ್ಯಕರ ಕೊಬ್ಬುಗಳು ಮತ್ತು ಲಿಗ್ನಾನ್ಗಳಂತಹ ಸಸ್ಯ ಸಂಯುಕ್ತಗಳನ್ನು ಒದಗಿಸುತ್ತದೆ. ಯಾರಿಗಾದರೂ ಕಬ್ಬಿಣ ಅಥವಾ ಕ್ಯಾಲ್ಸಿಯಂ ಮಟ್ಟ ಕಡಿಮೆ ಇದ್ದರೆ, ಈ ಪೋಷಕಾಂಶಗಳ ಸಣ್ಣ ಪ್ರಮಾಣದ ಸ್ಥಿರ ಮೂಲವನ್ನು ಆಹಾರದಲ್ಲಿ ಸೇರಿಸುವುದರಿಂದ ಒಟ್ಟಾರೆ ಆರೋಗ್ಯ ನಿಧಾನವಾಗಿ ಸುಧಾರಿಸಬಹುದು. ಉತ್ತಮ ಕಬ್ಬಿಣದ ಮಟ್ಟವು ಆಯಾಸವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಕೊಬ್ಬುಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಬೆಂಬಲಿಸಬಹುದು.”

ಪ್ರತಿಯೊಬ್ಬರೂ ಪ್ರತಿದಿನ ಸೇವಿಸುವುದು ಆರೋಗ್ಯಕರವೇ?

ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ ಒಂದು ಚಮಚ ಕರಿ ಎಳ್ಳು ಸೇವಿಸುವುದು ಸಮಂಜಸ. “ಇದು ಕ್ಯಾಲರಿ ಹೆಚ್ಚಿರುವ ಆಹಾರ. ಆದ್ದರಿಂದ ಸೇವಿಸುವ ಪ್ರಮಾಣದ ನಿಯಂತ್ರಣ ಮುಖ್ಯ. ಹೆಚ್ಚು ಸೇವಿಸುವುದರಿಂದ ಜೀರ್ಣಕ್ರಿಯೆಯ ಅಸ್ವಸ್ಥತೆ ಅಥವಾ ಅನಗತ್ಯ ತೂಕ ಹೆಚ್ಚಳವಾಗಬಹುದು. ಎಳ್ಳಿನ ಅಲರ್ಜಿ ಇರುವವರು ಇದನ್ನು ಸಂಪೂರ್ಣವಾಗಿ ತ್ಯಜಿಸಬೇಕು” ಎಂದು ಡಾ. ಅನಿಕೇತ್ ಹೇಳಿದ್ದಾರೆ.

ಸೂಚನೆ: ಈ ಲೇಖನವನ್ನು ಮಾಧ್ಯಮ ಮೂಲಗಳಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ಇದು ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವಿಶ್ವಾಸಾರ್ಹ ತಜ್ಞ ವೈದ್ಯರನ್ನು ಸಂಪರ್ಕಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor