ನೋಟು ಅಮಾನ್ಯೀಕರಣಗೊಂಡು ಒಂದು ದಶಕ: ಕಪ್ಪುಹಣ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆಯೇ?
► ಆಯುಷ್ ತಿವಾರಿ – scroll. in ವರದಿ
Photo Credit : scroll.in
ಒಂದು ದಶಕದ ಹಿಂದೆ ಇದೇ ವಾರದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಶೇ. 86ರಷ್ಟು ನಗದನ್ನು ರದ್ದುಗೊಳಿಸಿದ್ದರು. 2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದಿಢೀರ್ ಆಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವುದಾಗಿ ಘೋಷಿಸಿದ್ದರು.
ಈ ನಿರ್ಧಾರದಿಂದ "ತಾತ್ಕಾಲಿಕ ತೊಂದರೆ" ಎದುರಾಗಲಿದೆಯಾದರೂ, ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟು ಮತ್ತು ಭಯೋತ್ಪಾದನೆಯಂತಹ ಪಿಡುಗುಗಳನ್ನು ತಡೆಗಟ್ಟಲು ಈ ಕಠಿಣ ಕ್ರಮ ನೆರವಾಗಲಿದೆ ಎಂದು ಮೋದಿ ಹೇಳಿದ್ದರು. "ದೇಶದ ಶುದ್ಧೀಕರಣಕ್ಕಾಗಿ ಮಹಾನ್ ತ್ಯಾಗ" ಮಾಡುವಂತೆ ಅವರು ಭಾರತೀಯರಿಗೆ ಕರೆ ನೀಡಿದ್ದರು.
ಒಂದು ದಶಕದ ನಂತರ, ನೋಟು ಅಮಾನ್ಯೀಕರಣವು ತನ್ನ ಗುರಿಗಳನ್ನು ತಲುಪಿದೆಯೇ? 2016ರ ನವೆಂಬರ್ ನಲ್ಲಿ ಮೋದಿ ಮಾಡಿದ ಭಾಷಣವನ್ನು ಸರ್ಕಾರದ ಅಧಿಕೃತ ದತ್ತಾಂಶಗಳು ಮತ್ತು ಜಾಗತಿಕ ಸೂಚ್ಯಂಕಗಳೊಂದಿಗೆ scroll.in ಹೋಲಿಸಿ ನೋಡಿದಾಗ, ಇದು ಯಶಸ್ವಿಯಾದಂತೆ ಕಂಡುಬರುತ್ತಿಲ್ಲ.
ಕಪ್ಪುಹಣ (ಅಥವಾ ತೆರಿಗೆ ಪಾವತಿಸದ ನಗದು) ಆರ್ಥಿಕತೆಯಿಂದ ಸಂಪೂರ್ಣವಾಗಿ ಮರೆಯಾಗಿಲ್ಲ. ನಕಲಿ ನೋಟುಗಳ ಹರಿವು ಕಡಿಮೆಯಾಗಿರಬಹುದಾದರೂ, ಭ್ರಷ್ಟಾಚಾರದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೊತೆಗೆ, ಕಾನೂನು ಜಾರಿ ಸಂಸ್ಥೆಗಳು ಭಯೋತ್ಪಾದನೆಗೆ ಹರಿಯುವ ಹಣಕಾಸಿನ ನಿಯಂತ್ರಣಕ್ಕೆ ಇಂದಿಗೂ ಹೆಣಗಾಡುತ್ತಿವೆ.
►ಹಕ್ಕು 1: ನಗದು ಮತ್ತು ಹೆಚ್ಚಿನ ಮುಖಬೆಲೆಯ ನೋಟುಗಳು
2016ರಲ್ಲಿ ಪ್ರಧಾನಿಯವರು ತಮ್ಮ ನೋಟು ಅಮಾನ್ಯೀಕರಣದ ಭಾಷಣದಲ್ಲಿ, ಭಾರತದ "ನಗದು ನಿರ್ವಹಣೆ" ಎಷ್ಟಿತ್ತೆಂದರೆ ಹೆಚ್ಚಿನ ಮುಖಬೆಲೆಯ ನೋಟುಗಳೇ ದೇಶದ ಒಟ್ಟು ನಗದಿನ ಶೇ. 80ರಿಂದ 90ರಷ್ಟಿದ್ದವು ಎಂದು ಉಲ್ಲೇಖಿಸಿದ್ದರು. ಚಲಾವಣೆಯಲ್ಲಿರುವ ನಗದಿನ ಪ್ರಮಾಣವು ಭ್ರಷ್ಟಾಚಾರದ ಮಟ್ಟಕ್ಕೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ಮೋದಿ ಹೇಳಿದ್ದರು.
2026ರಲ್ಲೂ ಈ ಪರಿಸ್ಥಿತಿ ಮುಂದುವರಿದಿದೆ. ಸರ್ಕಾರ 2,000 ರೂ. ನೋಟುಗಳನ್ನು ಹಂತ ಹಂತವಾಗಿ ಹಿಂಪಡೆದ ನಂತರ, 500 ರೂ. ನೋಟು ಅತ್ಯಂತ ಹೆಚ್ಚಿನ ಮುಖಬೆಲೆಯ ನೋಟಾಗಿ ಉಳಿಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2025-26ರಲ್ಲಿ ದೇಶದ ನಗದು ಮೌಲ್ಯದಲ್ಲಿ 500 ರೂ. ನೋಟುಗಳ ಪಾಲು ಶೇ. 85.5ರಷ್ಟಿದೆ.
ಔಪಚಾರಿಕ ಆರ್ಥಿಕತೆಯಲ್ಲಿ ನಗದಿನ ಹರಿವು ಇಂದಿಗೂ ಅದೇ ಪ್ರಮಾಣದಲ್ಲಿದೆ. ಜಾಗತಿಕ ನಿಯಮಗಳಂತೆ ಭಾರತದ ಖಾಸಗಿ, ಸರ್ಕಾರಿ ಮತ್ತು ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು 10 ಲಕ್ಷ ರೂ.ಗಿಂತ ಹೆಚ್ಚಿನ ನಗದು ಠೇವಣಿ ಮತ್ತು ಹಿಂಪಡೆಯುವಿಕೆಯ ಕುರಿತು 'ನಗದು ವಹಿವಾಟು ವರದಿ' (Cash Transaction Reports-CTR)ಗಳನ್ನು ಸಿದ್ಧಪಡಿಸುತ್ತವೆ. ಭಾರತೀಯ ಹಣಕಾಸು ಗುಪ್ತಚರ ವಿಭಾಗದ (FIU) ದತ್ತಾಂಶಗಳ ಪ್ರಕಾರ, ನೋಟು ಅಮಾನ್ಯೀಕರಣದ ನಂತರ ಈ ವರದಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ, 2023ರಿಂದ ಇದು ನೋಟು ಅಮಾನ್ಯೀಕರಣಕ್ಕೂ ಮುಂಚಿನ ಮಟ್ಟವನ್ನು ಮೀರಿ ಬೆಳೆದಿದೆ.
►ಹಕ್ಕು 2: ನಕಲಿ ನೋಟುಗಳು ಮತ್ತು ಭಯೋತ್ಪಾದನೆ
ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಹೆಚ್ಚಾಗಿ ಬಳಸಲಾಗುತ್ತಿದ್ದ ನಕಲಿ ನೋಟುಗಳನ್ನು ತಡೆಯಲು ನೋಟು ಅಮಾನ್ಯೀಕರಣ ಅಗತ್ಯ ಕ್ರಮ ಎಂದು 2016ರ ಭಾಷಣದಲ್ಲಿ ಮೋದಿ ಹೇಳಿದ್ದರು. "ಗಡಿಯಾಚೆಗಿನ ಶತ್ರುಗಳು ನಕಲಿ ನೋಟುಗಳನ್ನು ಬಳಸಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದು ವರ್ಷಗಳಿಂದ ನಡೆಯುತ್ತಿದೆ" ಎಂದಿದ್ದರು ಅವರು.
ಅಂಕಿಅಂಶಗಳ ಪ್ರಕಾರ, ಭಾರತೀಯ ಬ್ಯಾಂಕ್ ಗಳಲ್ಲಿ ನಕಲಿ ನೋಟುಗಳು ಪತ್ತೆಯಾಗುವುದು ನೋಟು ಅಮಾನ್ಯೀಕರಣದ ನಂತರ ಕಡಿಮೆಯಾಗಿದೆ. ಆದರೆ, ಕಾನೂನು ಜಾರಿ ಸಂಸ್ಥೆಗಳಿಂದ ನಕಲಿ ನೋಟುಗಳ ವಶಪಡಿಸಿಕೊಳ್ಳುವಿಕೆ ಹೆಚ್ಚಾಗಿದೆ.
ಆರ್ಬಿಐ ದತ್ತಾಂಶದ ಪ್ರಕಾರ, 2014-15ರಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಪೈಕಿ ಶೇ. 0.00071ರಷ್ಟು ನಕಲಿ ನೋಟುಗಳು ಪತ್ತೆಯಾಗಿದ್ದವು. 2025-26ರ ವೇಳೆಗೆ ಈ ಪ್ರಮಾಣ ಶೇ. 0.00013ಕ್ಕೆ ಕುಸಿದಿದೆ.
ಅದೇ ರೀತಿ, ಹಣಕಾಸು ಗುಪ್ತಚರ ವಿಭಾಗಕ್ಕೆ ಸಲ್ಲಿಸಲಾಗುವ 'ನಕಲಿ ನಗದು ವರದಿ' (CCR)ಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಗಿದೆ. ಎಫ್ಐಯು ದತ್ತಾಂಶದ ಪ್ರಕಾರ, 2014-15ರಲ್ಲಿ ಭಾರತದ ಹಣಕಾಸು ಸಂಸ್ಥೆಗಳು 3.5 ಲಕ್ಷ ವರದಿಗಳನ್ನು ಸಲ್ಲಿಸಿದ್ದವು. 2015-16ರಲ್ಲಿ ಇದು 4.1 ಲಕ್ಷಕ್ಕೆ ಏರಿತ್ತು. 2024-25ರಲ್ಲಿ ಈ ಸಂಖ್ಯೆ 2.1 ಲಕ್ಷಕ್ಕೆ ಇಳಿಕೆಯಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಮಾಹಿತಿಯ ಪ್ರಕಾರ, 2020ರಿಂದೀಚೆಗೆ ಪೊಲೀಸರು ವಶಪಡಿಸಿಕೊಂಡ ನಕಲಿ ನೋಟುಗಳ ಪ್ರಮಾಣದಲ್ಲಿ ಹೆಚ್ಚುಕಡಿಮೆ ಏರಿಕೆ ಕಂಡುಬಂದಿದೆ. ಇದು ತನಿಖಾ ಸಂಸ್ಥೆಗಳ ಕಾರ್ಯಕ್ಷಮತೆ ಹೆಚ್ಚಿರುವುದನ್ನೂ ಸೂಚಿಸಬಹುದು.
ಇದರಲ್ಲಿ 2022ರ ವರ್ಷ ವಿಶೇಷವಾಗಿದ್ದು, ಆ ವರ್ಷ ಒಂದರಲ್ಲೇ 382 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕಳೆದ ಒಂದು ದಶಕದಲ್ಲಿ ನಕಲಿ ನೋಟುಗಳಿಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿದ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಎನ್ಸಿಆರ್ಬಿ ತಿಳಿಸಿದೆ.
ಆದರೆ, ಭಯೋತ್ಪಾದನೆಗೆ ಹರಿಯುವ ಹಣವನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರದ ಕಾರ್ಯಾಚರಣೆ ದುರ್ಬಲವಾಗಿದೆ. 2024ರಲ್ಲಿ, ಅಕ್ರಮ ಹಣ ವರ್ಗಾವಣೆ ತಡೆಯಲು ರಚಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾದ 'ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್' (FATF), ಭಾರತದ ಅಕ್ರಮ ಹಣ ವರ್ಗಾವಣೆ ತಡೆ ವ್ಯವಸ್ಥೆಯ ಮೌಲ್ಯಮಾಪನ ವರದಿಯನ್ನು ಪ್ರಕಟಿಸಿತು.
ಭಯೋತ್ಪಾದನೆಗೆ ಸಾಗುವ ಹಣವನ್ನು ತಡೆಯುವ ಭಾರತದ ಸಾಮರ್ಥ್ಯವನ್ನು ಇದು "ಸಾಧಾರಣ" ಎಂದು ಶ್ರೇಣೀಕರಿಸಿದೆ. ಭಾರತದ ತನಿಖೆಗಳು ಅಪಾಯದ ಮಟ್ಟಕ್ಕೆ ತಕ್ಕಂತೆ ನಡೆಯುತ್ತಿದ್ದರೂ, "ವಿಚಾರಣೆಯಲ್ಲಿ ತೀವ್ರ ವಿಳಂಬವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಆರೋಪಿಗಳು ವಿಚಾರಣೆಗೆ ಕಾಯುತ್ತಿದ್ದಾರೆ" ಎಂದು ವರದಿ ಉಲ್ಲೇಖಿಸಿದೆ.
ಭಾರತದ ಸಂಸ್ಥೆಗಳು ಎಫ್ಎಟಿಎಫ್ಗೆ ನೀಡಿದ ದತ್ತಾಂಶಗಳ ಪ್ರಕಾರ, 2018 ಮತ್ತು 2023ರ ನಡುವೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ 1,530 ವ್ಯಕ್ತಿಗಳ ವಿರುದ್ಧ ವಿಚಾರಣೆ ನಡೆಸಲಾಗಿತ್ತು. ಆದರೆ, ಅವರಲ್ಲಿ ಕೇವಲ 89 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಅಂದರೆ, ಶಿಕ್ಷೆಯ ಪ್ರಮಾಣ ಶೇ. 6ರಷ್ಟು ಮಾತ್ರ. ಇದು ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಪ್ರಕರಣಗಳನ್ನು ಒಳಗೊಂಡಿದೆ.
ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ನೋಡಿದರೆ, ಈ ಅವಧಿಯಲ್ಲಿ ಭಯೋತ್ಪಾದನೆಗೆ ಹಣ ಒದಗಿಸಿದ ಅಪರಾಧಿಗಳಿಗೆ ಯಶಸ್ವಿಯಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಎಫ್ಎಟಿಎಫ್ ತನ್ನ ವರದಿಯಲ್ಲಿ ಹೇಳಿದೆ.
►ಹಕ್ಕು 3: ಹವಾಲಾ ಮತ್ತು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ
ನಗದು ಹಣದ ಹೆಚ್ಚಿನ ಚಲಾವಣೆಯು ಹವಾಲಾ ದಂಧೆಯನ್ನು ಬಲಪಡಿಸುತ್ತದೆ ಮತ್ತು ಇದು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ಮೋದಿ ತಮ್ಮ ನೋಟು ಅಮಾನ್ಯೀಕರಣದ ಭಾಷಣದಲ್ಲಿ ಉಲ್ಲೇಖಿಸಿದ್ದರು.
ಹವಾಲಾ ಎಂಬುದು ಸಾಂಪ್ರದಾಯಿಕ ಬ್ಯಾಂಕ್ಗಳನ್ನು ಬಳಸದೆ ಅಥವಾ ಭೌತಿಕವಾಗಿ ನಗದನ್ನು ವರ್ಗಾಯಿಸದೆ ವಿದೇಶಗಳಿಗೆ ಹಣ ರವಾನಿಸುವ ಮಧ್ಯವರ್ತಿಗಳ ಜಾಲವಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಜನಪ್ರಿಯ ಮಾರ್ಗವಾಗಿದ್ದು, 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ನಿಷೇಧಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆಯುವ ಭಾರತದ ಸಾಮರ್ಥ್ಯದ ಜಾಗತಿಕ ಶ್ರೇಯಾಂಕದಲ್ಲಿ ನೋಟು ಅಮಾನ್ಯೀಕರಣದ ನಂತರ ಯಾವುದೇ ಸುಧಾರಣೆಯಾಗಿಲ್ಲ. 'ಬಾಸೆಲ್ ಇನ್ಸ್ಟಿಟ್ಯೂಟ್ ಆನ್ ಗವರ್ನೆನ್ಸ್' ನೀಡುವ 'ಬಾಸೆಲ್ ಎಎಂಎಲ್ ಸೂಚ್ಯಂಕ'ದಲ್ಲಿ ಭಾರತವು 2014ರಲ್ಲಿ 162 ದೇಶಗಳ ಪೈಕಿ 88ನೇ ಸ್ಥಾನದಲ್ಲಿತ್ತು. ಈ ಸೂಚ್ಯಂಕದಲ್ಲಿ ಶ್ರೇಯಾಂಕ ಕಡಿಮೆಯಾದಂತೆ, ಆ ದೇಶವು ಅಕ್ರಮ ಹಣ ವರ್ಗಾವಣೆ ತಡೆಯುವಲ್ಲಿ ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. 2025ರಲ್ಲಿ ಭಾರತವು 177 ದೇಶಗಳ ಪೈಕಿ 60ನೇ ಸ್ಥಾನಕ್ಕೆ ಕುಸಿದಿದೆ.
'ಗ್ಲೋಬಲ್ ಇನಿಶಿಯೇಟಿವ್ ಎಗೇನ್ಸ್ಟ್ ಟ್ರಾನ್ಸ್ನ್ಯಾಷನಲ್ ಆರ್ಗನೈಸ್ಡ್ ಕ್ರೈಮ್' ಸಂಸ್ಥೆಯು 2021ರಲ್ಲಿ ಪ್ರಾರಂಭಿಸಿದ 'ಗ್ಲೋಬಲ್ ಆರ್ಗನೈಸ್ಡ್ ಕ್ರೈಮ್ ಇಂಡೆಕ್ಸ್', ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾರತದ ಅಪರಾಧ ಮಟ್ಟದ ಅಂಕವನ್ನು 2021ರಲ್ಲಿ 5.5 ಎಂದು ನಮೂದಿಸಿತ್ತು. ಇದು 2023ರಲ್ಲಿ 6ಕ್ಕೆ ಏರಿಕೆಯಾಗಿ, 2025ರಲ್ಲೂ 6ರಷ್ಟೇ ಉಳಿದಿದೆ.
"ಭಾರತವು ಶಸ್ತ್ರಾಸ್ತ್ರ ಕಳ್ಳಸಾಗಣೆಯ ಮೂಲ ಮತ್ತು ತಲುಪುವ ತಾಣ ಎರಡೂ ಆಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಬಂದೂಕುಗಳನ್ನು ಸಾಗಿಸಲು ಡ್ರೋನ್ ಬಳಸುತ್ತಿರುವುದು ದೊಡ್ಡ ಕಳವಳದ ವಿಷಯವಾಗಿದ್ದು, ಇವುಗಳಲ್ಲಿ ಕೆಲವು ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನದಿಂದ ಬಂದಿವೆ ಎಂದು ವರದಿಯಾಗಿದೆ" ಎಂದು ಸೂಚ್ಯಂಕ ತಿಳಿಸಿದೆ.
►ಹಕ್ಕು 4: ಭ್ರಷ್ಟಾಚಾರ
2016ರ ಭಾಷಣದಲ್ಲಿ ಪ್ರಧಾನಿಯವರು, "ಎರಡು ವರ್ಷಗಳ ಹಿಂದೆ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ ನೂರರ ಸಮೀಪದಲ್ಲಿತ್ತು" ಮತ್ತು ತಮ್ಮ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಶ್ರೇಯಾಂಕ 76ಕ್ಕೆ ಸುಧಾರಿಸಿದೆ ಎಂದು ಹೇಳಿದ್ದರು.
ಮೋದಿ ಅವರು 'ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್' ಸಂಸ್ಥೆ ಪ್ರಕಟಿಸುವ 'ಭ್ರಷ್ಟಾಚಾರ ಸೂಚ್ಯಂಕ'ವನ್ನು (Corruption Perceptions Index) ಉಲ್ಲೇಖಿಸಿದ್ದರು. ಈ ಸೂಚ್ಯಂಕದಲ್ಲಿ ದೇಶದ ಶ್ರೇಯಾಂಕ ಹೆಚ್ಚಿದ್ದಷ್ಟೂ ಅಲ್ಲಿನ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅರ್ಥ.
2013ರಲ್ಲಿ ಭಾರತ ಈ ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿತ್ತು. ನೋಟು ಅಮಾನ್ಯೀಕರಣಗೊಂಡು ಸುಮಾರು ಒಂದು ದಶಕದ ನಂತರ, 2025ರಲ್ಲಿ ಭಾರತ 91ನೇ ಸ್ಥಾನದಲ್ಲಿದೆ.
ಇದರ ಜೊತೆಗೆ, ನೋಟು ಅಮಾನ್ಯೀಕರಣವು ಬೆನಾಮಿ ಆಸ್ತಿಯ ವಿರುದ್ಧದ ಹೋರಾಟವಾಗಿದೆ ಮತ್ತು ತಮ್ಮ ಸರ್ಕಾರವು 2016ರ ಆಗಸ್ಟ್ನಲ್ಲಿ ಬೆನಾಮಿ ವಹಿವಾಟು ನಿಷೇಧ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂದು ಮೋದಿ ಹೇಳಿದ್ದರು.
ಬೆನಾಮಿ ವಹಿವಾಟು ಎಂದರೆ, ವ್ಯಕ್ತಿಯೊಬ್ಬ ತನ್ನ ಗುರುತು ಅಥವಾ ರಹಸ್ಯ ಸಂಪತ್ತನ್ನು ಮರೆಮಾಚುವ ಉದ್ದೇಶದಿಂದ ಬೇರೆಯವರ ಹೆಸರಿನಲ್ಲಿ ಆಸ್ತಿ ಖರೀದಿಸುವ ಹಣಕಾಸು ವ್ಯವಹಾರವಾಗಿದೆ.
ಹೀಗಿದ್ದರೂ, 2017ರಿಂದೀಚೆಗೆ ಈ ಕಾಯ್ದೆಯಡಿ ಕೇವಲ ಏಳು ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಎನ್ಸಿಆರ್ಬಿ ದತ್ತಾಂಶ ತೋರಿಸುತ್ತದೆ. ದತ್ತಾಂಶ ಲಭ್ಯವಿರುವ ಕೊನೆಯ ವರ್ಷವಾದ 2024ರಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. 2019ರವರೆಗೆ ತೆರಿಗೆ ಅಧಿಕಾರಿಗಳು ಬೆನಾಮಿ ತಡೆ ಕಾಯ್ದೆಯಡಿ 9,600 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಬೆನಾಮಿ ಆಸ್ತಿಗಳಿಗೆ ಸಂಬಂಧಿಸಿದಂತೆ 2,100ಕ್ಕೂ ಹೆಚ್ಚು ಶೋಕಾಸ್ ನೋಟಿಸ್ಗಳನ್ನು ನೀಡಿದ್ದರೂ ಈ ಪರಿಸ್ಥಿತಿ ಇದೆ.
►ಹಕ್ಕು 5: ಕಪ್ಪುಹಣ ಮತ್ತು ಚುನಾವಣೆಗಳು
ನಗದು ಹಣದ ಹೆಚ್ಚಿನ ಚಲಾವಣೆ ಹಾಗೂ ಅದಕ್ಕೆ ಹವಾಲಾ ದಂಧೆ ಮತ್ತು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದೊಂದಿಗಿರುವ ನಂಟಿನ ಕುರಿತ ತಮ್ಮ ಹೇಳಿಕೆಗೆ ಪೂರಕವಾಗಿ, ಚುನಾವಣೆಗಳ ಸಮಯದಲ್ಲಿ ಕಪ್ಪುಹಣದ ಬಳಕೆಯ ಕುರಿತು ಮೋದಿ ಪ್ರಸ್ತಾಪಿಸಿದ್ದರು.
ಚುನಾವಣಾ ಆಯೋಗ ಸಂಗ್ರಹಿಸಿದ ದತ್ತಾಂಶವನ್ನು ಗಮನಿಸಿದರೆ, 2014 ಮತ್ತು 2024ರ ಲೋಕಸಭಾ ಚುನಾವಣೆಗಳ ನಡುವೆ ವಶಪಡಿಸಿಕೊಂಡ ನಗದು ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಉದಾಹರಣೆಗೆ, 2014ರಲ್ಲಿ ಆಯೋಗವು 304 ಕೋಟಿ ರೂ. ವಶಪಡಿಸಿಕೊಂಡಿದ್ದರೆ, 2019ರಲ್ಲಿ ಈ ಮೊತ್ತ 804 ಕೋಟಿ ರೂ.ಗೆ ಮತ್ತು 2024ರಲ್ಲಿ 1,067 ಕೋಟಿ ರೂ.ಗೆ ಏರಿಕೆಯಾಯಿತು.
ಅದೇ ರೀತಿ, ನೋಟು ಅಮಾನ್ಯೀಕರಣಕ್ಕೂ ಆರು ತಿಂಗಳ ಮುನ್ನ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗವು 147 ಕೋಟಿ ರೂ. ಮೌಲ್ಯದ ನಗದನ್ನು ವಶಪಡಿಸಿಕೊಂಡಿತ್ತು. ಇವು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆಗಳಾಗಿದ್ದವು.
2021ರಲ್ಲಿ ಇದೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತೆ ಚುನಾವಣೆ ನಡೆದಾಗ, ವಶಪಡಿಸಿಕೊಂಡ ನಗದು ಪ್ರಮಾಣ 348 ಕೋಟಿ ರೂ.ಗೆ ಏರಿತು. "ಆಯೋಗದ ಉತ್ತಮ ಸಿದ್ಧತೆ ಮತ್ತು ಬಹುಮುಖಿ ಕಾರ್ಯತಂತ್ರದ ಕಾರಣದಿಂದಾಗಿ ವಶಪಡಿಸಿಕೊಂಡ ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ" ಎಂದು 2021ರಲ್ಲಿ ಆಯೋಗ ತಿಳಿಸಿತ್ತು.
2026ರ ಚುನಾವಣೆಗಳ ವೇಳೆಗೆ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಶಪಡಿಸಿಕೊಂಡ ನಗದು ಪ್ರಮಾಣ 155 ಕೋಟಿ ರೂ.ಗೆ ಕುಸಿದಿದೆ.
ಸೌಜನ್ಯ: scroll.in