Photo Credit : X

ಲಾಕ್‌ ಡೌನ್‌ ಸಂದರ್ಭದಲ್ಲಿ ಡ್ರೋನ್‌ ನಿರ್ಮಿಸಲು ಆರಂಭಿಸಿದ ಬಾಲಕ ಹದಿಹರೆಯದಲ್ಲೇ ಮೊದಲ ಹೂಡಿಕೆ ಪಡೆದರು. ನಂತರ ಹಿಂತಿರುಗಿ ನೋಡದ ಅವರು, 21ನೇ ವಯಸ್ಸಿನಲ್ಲಿ ಡ್ರೋನ್‌ ಡೆಲಿವರಿಯನ್ನು ದೈನಂದಿನ ಲಾಜಿಸ್ಟಿಕ್ಸ್‌ ನ ಭಾಗವಾಗಿಸಲು ಪ್ರಯತ್ನಿಸುವ ಕಂಪೆನಿಯ ಮಾಲೀಕರಾಗಿದ್ದಾರೆ.

2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದಾಗ 15 ವರ್ಷದ ನಮನ್‌ ಪುಷ್ಪ ಮನೆಯಲ್ಲೇ ಕುಳಿತುಕೊಳ್ಳಬೇಕಾಗಿ ಬಂದಿತ್ತು. ಹೀಗಾಗಿ ಬಾಲ್ಯದಿಂದಲೇ ಆಸಕ್ತಿ ಇದ್ದ ವಿಚಾರದತ್ತ ಗಮನಹರಿಸಿದರು. ಅದೇ ರೋಬೋಟ್‌ ಗಳನ್ನು ತಯಾರಿಸುವುದು. ಲಾಕ್‌ಡೌನ್‌ ಸಂದರ್ಭದ ಬೇಸರದಿಂದ ಆರಂಭವಾದ ಡ್ರೋನ್‌ ತಯಾರಿಕೆಯ ಹಿಂದೆ ಯಾವುದೇ ಯೋಜನೆ ಇರಲಿಲ್ಲ. ಮಲೇಷ್ಯಾದಲ್ಲಿ ಬೆಳೆದ ನಮನ್‌, ಲಾಕ್‌ಡೌನ್‌ ಸಂದರ್ಭದಲ್ಲಿ ಆರಂಭಿಸಿದ ಯೋಜನೆಗೆ ‘ಓಪನ್‌ ಡ್ರೋನ್‌’ ಎಂದು ಹೆಸರಿಟ್ಟು ಹ್ಯಾಕಥಾನ್‌ ಗೆ ಕೊಂಡೊಯ್ದಿದ್ದರು. ಅಲ್ಲಿ ಅವರಿಗೆ 500 ಡಾಲರ್‌ ಬಹುಮಾನ ದೊರೆಯಿತು. ಆ ಹಣವನ್ನು ಮತ್ತೆ ತಮ್ಮ ಯೋಜನೆಗೆ ಸುರಿದರು ಮತ್ತು ಮೊದಲ ಪ್ರೊಟೋಟೈಪ್‌ ತಯಾರಿಸಿದರು. ಅದನ್ನೀಗ ಅವರು ಏರ್‌ಬೌಂಡ್‌ ಕಚೇರಿಯ ಗೋಡೆಯಲ್ಲಿ ನೇತುಹಾಕಿದ್ದಾರೆ.

ಆರು ವರ್ಷಗಳ ನಂತರ, 21ನೇ ವಯಸ್ಸಿನಲ್ಲಿ ಇದೀಗ ನಮನ್‌ ಬೆಂಗಳೂರು ಮೂಲದ ಏರೋಸ್ಪೇಸ್‌ ಸ್ಟಾರ್ಟ್‌ಅಪ್‌ ಏರ್‌ಬೌಂಡ್‌ ನ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ಎರಡನೇ ಹಂತದ ನಿಧಿ ಸಂಗ್ರಹದಲ್ಲಿ ಗ್ರೀನ್‌ಓಕ್ಸ್‌ ನೇತೃತ್ವದಲ್ಲಿ 37 ದಶಲಕ್ಷ ಡಾಲರ್‌(352.1 ಕೋಟಿ ರೂಪಾಯಿ) ಹೊಸ ಹೂಡಿಕೆಯನ್ನು ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹಿಂದಿನ ಹೂಡಿಕೆಗಳನ್ನು ಪರಿಗಣಿಸಿದಲ್ಲಿ ಕಂಪೆನಿಯು ಸುಮಾರು 50 ದಶಲಕ್ಷ ಡಾಲರ್‌ ಹೂಡಿಕೆ ಸಂಗ್ರಹಿಸಿದೆ. ಮೊದಲ ಡ್ರೋನ್‌ ಮತ್ತು ಇತ್ತೀಚಿನ ಹಣಕಾಸು ಸಂಗ್ರಹ ಸುತ್ತಿನ ನಡುವಿನ ಪಯಣವು ಯುವ ಇಂಜಿನಿಯರ್‌ ಒಬ್ಬರು ತಮ್ಮ ಇಂಜಿನಿಯರಿಂಗ್‌ ಸಮಸ್ಯೆಯನ್ನು ಉದ್ಯಮವಾಗಿ ಪರಿವರ್ತಿಸಲು ಸಾಧ್ಯವಾದ ಕತೆಯಾಗಿದೆ.

ಮುಂಬೈನಲ್ಲಿ ಜನಿಸಿದ ನಮನ್‌ ಪುಷ್ಪ ತಮ್ಮ ಬಾಲ್ಯದ ಕೆಲ ಸಮಯವನ್ನು ಹೈದರಾಬಾದ್‌ ಮತ್ತು ಮಲೇಷ್ಯಾದಲ್ಲಿ ಕಳೆದು ನಂತರ ಭಾರತಕ್ಕೆ ಮರಳಿದರು. ಅವರು ಮುಂಬೈನ ದೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ನಿರ್ಮಾಣದಲ್ಲಿ ಅವರ ಆಸಕ್ತಿ ಚಿಕ್ಕಂದಿನಿಂದಲೇ ಇತ್ತು. ಮಲೇಷ್ಯಾದಲ್ಲಿದ್ದಾಗ ಅವರು 5ನೇ ಮತ್ತು 6ನೇ ತರಗತಿಯಲ್ಲಿದ್ದಾಗಲೇ ರೋಬೋಟ್‌ ಗಳನ್ನು ತಯಾರಿಸಲು ಪ್ರಾರಂಭಿಸಿದರು. ರೋಬೋಟಿಕ್ಸ್‌ ಸ್ಪರ್ಧೆ ಮತ್ತು ಇಂಜಿನಿಯರಿಂಗ್‌ ಯೋಜನೆಗಳಲ್ಲಿ ಭಾಗವಹಿಸಿದ್ದರು. ಹಿರಿಯ ಶಾಲೆಗೆ ತಲುಪುವ ಹೊತ್ತಿಗೆ ನಮನ್‌ ಸಾಂಪ್ರದಾಯಿಕ ತರಗತಿ ಕೊಠಡಿಗಳ ಮೂಲಕ ಕಲಿಯುವ ಬದಲು ನಿರ್ಮಾಣದ ಮೂಲಕ ಕಲಿಯುವುದರತ್ತ ಹೆಚ್ಚು ಆಕರ್ಷಿತರಾದರು.

ಅವರ ಲಿಂಕ್ಡ್‌ಇನ್‌ ಪ್ರೊಫೈಲ್‌ ಪ್ರಕಾರ ಅವರು 12ನೇ ತರಗತಿ ಪೂರ್ಣಗೊಳಿಸಿದ ನಂತರ ಕಾರ್ನೆಗೀ ಮೆಲನ್‌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಆದರೆ ತರಗತಿಗಳಿಗೆ ಹಾಜರಾಗದೆ ಇರಲು ನಿರ್ಧರಿಸಿದರು. ಬದಲಿಗೆ ತಮ್ಮದೇ ಆದ ಯೋಜನೆಗಳನ್ನು ಮುಂದುವರಿಸಲು ಮತ್ತು ಅಂತಿಮವಾಗಿ ಏರ್‌ಬೌಂಡ್‌ ಸ್ಥಾಪಿಸಲು ನಿರ್ಧರಿಸಿದರು.

16ರ ವಯಸ್ಸಿನಲ್ಲಿ ನಮನ್‌ ತಮ್ಮ ಯೋಜನೆಗೆ ಮೊದಲ ಚೆಕ್‌ ಸ್ವೀಕರಿಸಿದ್ದರು. ಗ್ರೇಡ್‌ ಕ್ಯಾಪಿಟಲ್‌ ಅವರಿಗೆ ಮೊದಲ ನಿಧಿಯನ್ನು ನೀಡಿತ್ತು. ಆದರೆ ನಮನ್‌ ಅಪ್ರಾಪ್ತರಾಗಿದ್ದ ಕಾರಣ ಅವರ ತಂದೆಯ ಜೊತೆಗೆ ಮಾತನಾಡಿ ಹೂಡಿಕೆ ಮಾಡಲಾಗಿತ್ತು.

ವಿವಿಯಲ್ಲಿ ಕಲಿಯುವ ಬದಲಾಗಿ ಅವರು ಡ್ರೋನ್‌ಗಳನ್ನು ತಯಾರಿಸುವಾಗ ಎದುರಿಸಿದ ಸಮಸ್ಯೆಗಳನ್ನು ಸರಿಪಡಿಸುತ್ತಾ ಹೊಸ ವಿಷಯಗಳನ್ನು ಕಲಿತರು. ಸಾಂಪ್ರದಾಯಿಕ ವಿಮಾನಗಳು ತಮ್ಮದೇ ತೂಕವನ್ನು ಹೊರಲು ಹೆಚ್ಚು ಖರ್ಚು ಮಾಡುತ್ತವೆ ಎನ್ನುವುದನ್ನು ಅವರು ಅರಿತುಕೊಂಡರು. ಹೀಗಾಗಿ ಪೇಲೋಡ್‌ ದ್ವಿತೀಯ ತೂಕವಾಗಿರುತ್ತದೆ. ಇದರಿಂದಾಗಿ ಡ್ರೋನ್‌ ಡೆಲಿವರಿ ರಸ್ತೆ ಸಾರಿಗೆಯೊಂದಿಗೆ ವೆಚ್ಚದಲ್ಲಿ ಸ್ಪರ್ಧಿಸುವುದು ಸಾಧ್ಯವಿಲ್ಲ. ಏರ್‌ಬೌಂಡ್‌ ನ ವಿಧಾನವು ಆ ಸಮೀಕರಣವನ್ನು ಹಿಮ್ಮೆಟ್ಟಿಸುವುದಾಗಿದೆ.

ಏರ್‌ಬೌಂಡ್‌ ನ ಪ್ರಸ್ತುತ TRT ಡ್ರೋನ್‌ 1.5 ಕೆಜಿ ತೂಕವನ್ನು ಹೊಂದಿದ್ದು, 1 ಕೆಜಿಯಷ್ಟು ಸರಕನ್ನು ಸಾಗಿಸಬಹುದು. ಇದು ಸಮತಲ ಹಾರಾಟಕ್ಕೆ ಪರಿವರ್ತನೆಗೊಳ್ಳುವ ಮೊದಲು ಲಂಬವಾಗಿ ಹಾರುತ್ತದೆ. ಕಂಪೆನಿ ಇದೀಗ 5 ಕೆಜಿ ಪೇಲೋಡ್‌ ಸಾಗಿಸುವ ಸಾಮರ್ಥ್ಯವಿರುವ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ. “ಡ್ರೋನ್‌ ಡೆಲಿವರಿಯನ್ನು ಟ್ರಕ್‌ ಡೆಲಿವರಿಗೆ ಸಮಾನ ಬೆಲೆಯಲ್ಲಿ ನೀಡಲಾಗುವಂತೆ ಡ್ರೋನ್‌ ಅಭಿವೃದ್ಧಿಪಡಿಸಲು ಬಯಸಿದ್ದೇವೆ” ಎಂದು ಲಿಂಕ್ಡ್‌ಇನ್‌ ನಲ್ಲಿ ಹಂಚಿಕೊಂಡ ಪೋಸ್ಟ್‌ ನಲ್ಲಿ ಅವರು ಹೇಳಿದ್ದಾರೆ.

ಇದೀಗ ಈ ಕಲ್ಪನೆ ಪ್ರೊಟೋಟೈಪ್‌ ಗೆ ಸೀಮಿತವಾಗಿಲ್ಲ. ಏರ್‌ಬೌಂಡ್‌ ಡ್ರೋನ್‌ಗಳು ಈಗಾಗಲೇ ಬೆಂಗಳೂರು ಮತ್ತು ಗುಂಟೂರಿನಲ್ಲಿ 13,000ಕ್ಕೂ ಹೆಚ್ಚು ಹಾರಾಟಗಳನ್ನು ನಡೆಸಿವೆ. ನಾರಾಯಣ ಹೆಲ್ತ್‌ ಸೇವೆಗಾಗಿ 1,000ಕ್ಕೂ ಮೀರಿ ಹಾರಾಟಗಳನ್ನು ನಡೆಸಿವೆ. ಕಂಪೆನಿ ಇದೀಗ ರಕ್ತದ ಸ್ಯಾಂಪಲ್‌ ಗಳನ್ನು ಕ್ಲಿನಿಕ್‌ಗಳಿಂದ ಆಸ್ಪತ್ರೆಗಳಿಗೆ ಬೇಗನೆ ರವಾನಿಸುತ್ತದೆ. ಹೀಗಾಗಿ ರಸ್ತೆಯ ಮೂಲಕ ಸಾರಿಗೆಯಲ್ಲಿ ಕೊಂಡೊಯ್ಯುವ ಅಗತ್ಯವನ್ನು ಬದಲಿಸಿದೆ.

ನಾರಾಯಣ ಹೆಲ್ತ್‌ ಸೇವೆಯ ಬೆಂಗಳೂರಿನ ಬನಶಂಕರಿಯ ಆಸ್ಪತ್ರೆಯನ್ನು ಡಯಗ್ನಸ್ಟಿಕ್‌ ಲ್ಯಾಬೊರೇಟರಿ ಇಲ್ಲದ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಅದು ವೈದ್ಯಕೀಯ ಸ್ಯಾಂಪಲ್‌ ಗಳನ್ನು ಇತರ ಕಡೆಗಳಿಂದ ರವಾನಿಸಲು ಏರ್‌ಬೌಂಡ್‌ ನ ಡ್ರೋನ್‌ ಗಳನ್ನೇ ಅವಲಂಬಿಸಿದೆ. ಈ ಸೇವೆಗಾಗಿ ಏರ್‌ಬೌಂಡ್‌ ಡ್ರೋನ್‌ ಕ್ಲಿನಿಕ್‌ ನಿಂದ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ದಿನಕ್ಕೆ 20 ಹಾರಾಟಗಳನ್ನು ನಡೆಸುತ್ತದೆ.

ಆದರೆ ನಮನ್‌ ಅವರು ಇನ್ನೂ ದೊಡ್ಡ ಯೋಜನೆಯನ್ನು ಹೊಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಏರ್‌ಬೌಂಡ್‌ ಅಮರಾವತಿ, ವಿಜಯವಾಡ ಮತ್ತು ಗುಂಟೂರುಗಳನ್ನು ಡ್ರೋನ್‌ ಮೂಲಕ ಸಂಪರ್ಕಿಸಲು ಯೋಜಿಸಿದೆ. ಅಂದರೆ ದಿನಕ್ಕೆ 10,000 ಹಾರಾಟಗಳ ದೀರ್ಘಾವಧಿ ಗುರಿಯನ್ನು ಹೊಂದಿದೆ. ಡ್ರೋನ್‌ಗಳ ಹಾರಾಟವನ್ನು ನೆಲದಿಂದ ವೀಕ್ಷಿಸಲು ಅಗತ್ಯವಿರುವ ವೀಕ್ಷಕರ ಜಾಲವನ್ನು ರೂಪಿಸಲು ರಾಜ್ಯ ಸರ್ಕಾರ ನೆರವಾಗುತ್ತಿದೆ.

ಇದೀಗ ನಮನ್‌ ಅವರಿಗೆ ನಿರ್ಮಾಣವೇ ದೊಡ್ಡ ಹೊರೆಯಾಗಿದೆ. “ಮುಂದೊಂದು ದಿನ ದಿನಕ್ಕೆ 100 ಡ್ರೋನ್‌ಗಳನ್ನು ತಯಾರಿಸುವುದೂ ಕಡಿಮೆ ಎನಿಸಲಿದೆ” ಎಂದು ನಮನ್‌ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor