ಬಾಕ್ಸ್ಆಫೀಸ್ ನಲ್ಲಿ ಯಶ್ ಅಬ್ಬರ; ಕಲೆಕ್ಷನ್ ಕುಸಿತದ ನಡುವೆ 5ನೇ ದಿನ 200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’
ನಟ ಯಶ್ | Photo Credit : bookmyshow.com
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನದ ಕಲೆಕ್ಷನ್ ಕುಸಿತದ ನಡುವೆಯೂ ಭಾರತದಲ್ಲಿ 5ನೇ ದಿನಕ್ಕೆ ಒಟ್ಟು 200 ಕೋಟಿ ರೂಪಾಯಿಗೂ ಅಧಿಕ ನಿವ್ವಳ ಗಳಿಕೆ ದಾಟಿದೆ.
ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಮೊದಲ ರವಿವಾರದಂದು ಭಾರತದಲ್ಲಿ 200 ಕೋಟಿ ರೂ.ಗಳ ಗಡಿ ದಾಟಿದೆ. ಬಿಡುಗಡೆಯಾದ ಎರಡನೇ ದಿನದಿಂದಲೇ ಗಳಿಕೆಯಲ್ಲಿ ಕುಸಿತ ಕಂಡಿದ್ದ ಸಿನಿಮಾವು ರವಿವಾರದಂದು 23 ಕೋಟಿ ರೂ.ಗಳನ್ನು ಗಳಿಸಿದೆ. ಭಾರತದಲ್ಲಿ ನಿವ್ವಳ 214 ಕೋಟಿ ರೂ. ಮತ್ತು ಒಟ್ಟು 255.95 ಕೋಟಿ ರೂ. ಗಳಿಸಿದೆ.
5ನೇ ದಿನದಂದು ‘ಟಾಕ್ಸಿಕ್’ 16,241 ಪ್ರದರ್ಶನಗಳಲ್ಲಿ 23 ಕೋಟಿ ರೂ. ನಿವ್ವಳ ಗಳಿಕೆ ಸಾಧಿಸಿದೆ. ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ ಸಿನಿಮಾ ಒಟ್ಟು 255.95 ಕೋಟಿ ರೂ. ಮತ್ತು ನಿವ್ವಳ 214.10 ಕೋಟಿ ರೂ. ಗಳಿಕೆ ದಾಖಲಿಸಿದೆ. ವಿದೇಶಗಳಲ್ಲಿ ಚಿತ್ರವು ರವಿವಾರದಂದು 5 ಕೋಟಿ ರೂ. ಗಳಿಸಿದೆ. ಹೀಗಾಗಿ ವಿಶ್ವಾದ್ಯಂತ ಒಟ್ಟು ಗಳಿಕೆ 293.20 ಕೋಟಿ ರೂ.ಗೆ ತಲುಪಿದೆ.
‘ಟಾಕ್ಸಿಕ್’ ತನ್ನ ಮೊದಲ ದಿನದಂದು 101.10 ಕೋಟಿ ರೂ. ಗಳಿಸಿತ್ತು. ಬಿಡುಗಡೆಯಾದ 2ನೇ, 3ನೇ ಮತ್ತು 4ನೇ ದಿನದಂದು ಕ್ರಮವಾಗಿ 37.65 ಕೋಟಿ ರೂ., 27.20 ಕೋಟಿ ರೂ. ಮತ್ತು 25.15 ಕೋಟಿ ರೂ. ಗಳಿಕೆ ದಾಖಲಿಸಿದೆ.
ದಾಖಲೆ ಗಳಿಕೆ ದಾಖಲಿಸಿದ್ದ ‘KGF’
2018ರಲ್ಲಿ ‘ಕೆಜಿಎಫ್’ ಬಿಡುಗಡೆಯಾದಾಗ ಯಶ್ ಕನ್ನಡ ಚಿತ್ರರಂಗದ ಹೊರಗೆ ಹೆಚ್ಚು ಜನಪ್ರಿಯರಾಗಿರಲಿಲ್ಲ. ‘ಕೆಜಿಎಫ್ 2’ ಬರುವ ಹೊತ್ತಿಗೆ ಸಿನಿಮಾದ ಮೂಲಕ ಅವರು ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದರು. ಆ ಸಿನಿಮಾದ ಥಿಯೇಟ್ರಿಕಲ್ ಮತ್ತು OTT ಪ್ರದರ್ಶನವು ಅವರನ್ನು ಜನರು ಆರಾಧಿಸುವಂತೆ ಮಾಡಿತ್ತು.
‘KGF’ ತನ್ನ ಮೊದಲ ದಿನದಂದು ಕನ್ನಡ ಮತ್ತು ಎಲ್ಲಾ ಭಾಷೆಗಳಲ್ಲಿ 21.80 ಕೋಟಿ ರೂ. ಗಳಿಸಿತ್ತು. 80 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದ ‘KGF’ ಭಾರತದಲ್ಲಿ ಒಂಭತ್ತು ವಾರಗಳ ನಂತರ ಒಟ್ಟು ನಿವ್ವಳ 228 ಕೋಟಿ ರೂ. ಗಳಿಕೆ ದಾಖಲಿಸಿತ್ತು ಎಂದು ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ.
‘KGF ಚಾಪ್ಟರ್ 2’ ವಿಶ್ವಾದ್ಯಂತ ಬಿಡುಗಡೆಯಾಗಿ 2022ರಲ್ಲಿ 1,215.00 ಕೋಟಿ ರೂ. ಗಳಿಕೆ ಮಾಡಿತ್ತು. ಭಾರತದಲ್ಲಿ ಒಟ್ಟು 1,000.85 ಕೋಟಿ ರೂ. ಮತ್ತು ವಿದೇಶದಲ್ಲಿ 214.15 ಕೋಟಿ ರೂ. ಗಳಿಸಿತ್ತು. ‘ಕೆಜಿಎಫ್ 2’ ಬಜೆಟ್ 100 ಕೋಟಿ ರೂ. ಆಗಿತ್ತು.
‘ಟಾಕ್ಸಿಕ್’ ಸಿನಿಮಾಗೆ ಉತ್ತಮ ರೇಟಿಂಗ್ ದೊರೆತಿರದೆ ಇರುವುದು ಗಳಿಕೆ ಕಡಿಮೆಯಾಗಲು ಕಾರಣವಾಗಿರಬಹುದು. ಆನ್‌ಲೈನ್‌ನಲ್ಲಿ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆಗಳಾಗಿದ್ದವು. ಕನ್ನಡದ ಹಿರಿಯ ನಟರು ಯಶ್ ಅವರ ಪ್ರಯತ್ನವನ್ನು ಪ್ರಶಂಸಿಸಿ ಮಾತನಾಡಿದ್ದರು.
ಪರ-ವಿರೋಧ ಚರ್ಚೆಗೆ ಕಾರಣವಾದ ಸಿನಿಮಾ
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ನಲ್ಲಿ ನಟ ಯಶ್ ಪ್ರಮುಖ ಪಾತ್ರದಲ್ಲಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಿದೆ. CBFC ಸಿನಿಮಾಗೆ ಯಾವುದೇ ಕಡಿತವಿಲ್ಲದೆ ‘A’ ಪ್ರಮಾಣಪತ್ರ ನೀಡಿದೆ.
ಸಿನಿಮಾವನ್ನು KVN ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಮತ್ತು ವೆಂಕಟ್ ಕೆ. ನಾರಾಯಣ್ ಅವರು ನಿರ್ಮಿಸಿದ್ದಾರೆ.