Ayodhya Ram Mandir ದೇಣಿಗೆ ಕಳ್ಳತನದ ಆರೋಪ: ಸಮಾಜವಾದಿ ಪಕ್ಷದ ಪರವಾಗಿ ಮುಂಚೂಣಿಯಲ್ಲಿ ನಿಂತ ಅಯೋಧ್ಯೆಯ ಮಾಜಿ ಶಾಸಕ ಪವನ್ ಪಾಂಡೆ ಯಾರು?
ಪವನ್ ಪಾಂಡೆ | Photo Credit : PTI
ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ವಿವಾದವು ರಾಜಕೀಯ ರಂಗದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ, ಅಯೋಧ್ಯೆಯಲ್ಲಿ ಬಿಜೆಪಿ ವಿರುದ್ಧ ಮುಂಚೂಣಿಯಲ್ಲಿ ನಿಂತು ದಾಳಿ ನಡೆಸುತ್ತಿರುವ ಸಮಾಜವಾದಿ ಪಕ್ಷದ ಪ್ರಮುಖ ಮುಖವಾಗಿ ಮಾಜಿ ಶಾಸಕ ಪವನ್ ಪಾಂಡೆ (ತೇಜ್ ನಾರಾಯಣ್ ಪಾಂಡೆ) ಹೊರಹೊಮ್ಮಿದ್ದಾರೆ.
ರಾಮ ಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜೂನ್ 7 ರಂದು ಆರೋಪಿಸಿದ್ದರು. ಇದಾದ ನಂತರ, 46 ವರ್ಷದ ಪಾಂಡೆ ಅವರು ಸ್ಥಳೀಯವಾಗಿ ಪಕ್ಷದ ಅಭಿಯಾನದ ನೇತೃತ್ವ ವಹಿಸಿದ್ದು, ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ದೇಣಿಗೆ ಕಳ್ಳತನ ಮತ್ತು ಹಣಕಾಸಿನ ಅಕ್ರಮಗಳ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
The Indian Express ಜೊತೆ ಮಾತನಾಡಿದ ಪಾಂಡೆ, ದೇಣಿಗೆ ಕಳ್ಳತನದ ಈ ವಿಷಯವು ಅಯೋಧ್ಯೆಯ ಪ್ರತಿಯೊಂದು ಮನೆಗೂ ತಲುಪಿದೆ. ಜನರು ಇದರಿಂದ ಬೇಸತ್ತಿದ್ದಾರೆ. ನಾನು ಕೇವಲ ಈ ಅಕ್ರಮಗಳನ್ನು ಮಾಧ್ಯಮಗಳ ಮುಂದೆ ತರುತ್ತಿದ್ದೇನೆ ಮತ್ತು ಈ ವಿಷಯದ ಬಗ್ಗೆ ಧೈರ್ಯವಾಗಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ತಮ್ಮ ಈ ಧ್ವನಿ ಧಾರ್ಮಿಕ ರಾಜಕೀಯದಿಂದ ಪ್ರೇರಿತವಾದುದಲ್ಲ, ಬದಲಿಗೆ ಭಕ್ತರು ನೀಡಿದ ದೇಣಿಗೆಯ ಕುರಿತಾದ ಕಳಕಳಿಯಾಗಿದೆ. ಯಾವುದೇ ತಪ್ಪು ನಡೆದಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ ಪಾಂಡೆ.
ಪಾಂಡೆ ಅವರು ರಾಮ ಜನ್ಮಭೂಮಿ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಡೆಸಿದ ಭೂಮಿ ಖರೀದಿಯಲ್ಲೂ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದರು.
►ಲಕ್ನೋ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ
ಲಕ್ನೋ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕರಾಗಿದ್ದ ಪವನ್ ಪಾಂಡೆ, 2004-05ರಲ್ಲಿ ಸಮಾಜವಾದಿ ಪಾರ್ಟಿಯ ವಿದ್ಯಾರ್ಥಿ ವಿಭಾಗವಾದ 'ಛಾತ್ರ್ ಸಭಾ' ಬೆಂಬಲದೊಂದಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಅವರು ತಮ್ಮ ಸೋದರಮಾವ ಜೈ ಶಂಕರ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ಮುಖ್ಯವಾಹಿನಿ ರಾಜಕಾರಣಕ್ಕೆ ಪ್ರವೇಶಿಸಿದರು. ಜೈ ಶಂಕರ್ ಪಾಂಡೆ ಅವರು ಫೈಝಾಬಾದ್ ನಲ್ಲಿ ಸಮಾಜವಾದಿ ಪಾರ್ಟಿಯ ಸಂಸ್ಥಾಪಕ ನಾಯಕರಾಗಿದ್ದರು ಮತ್ತು ಅಯೋಧ್ಯೆಯ ಮಾಜಿ ಜನತಾ ದಳ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಲಲ್ಲು ಸಿಂಗ್ ಅವರ ಸುದೀರ್ಘ ಗೆಲುವಿನ ಓಟ ಆರಂಭವಾಗುವ ಮುನ್ನ, ಅಂದರೆ 1989ರಲ್ಲಿ ಜೈ ಶಂಕರ್ ಅವರು ಈ ಕ್ಷೇತ್ರದ ಪ್ರತಿನಿಧಿಯಾಗಿದ್ದರು.
ಅಯೋಧ್ಯೆಯ ಮಾಜಿ ಶಾಸಕ
2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಾಂಡೆ, ಅಲ್ಲಿ ಸತತ ಐದು ಬಾರಿ ಗೆದ್ದಿದ್ದ ಲಲ್ಲು ಸಿಂಗ್ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಪ್ರಮುಖವಾಗಿ ಗಮನ ಸೆಳೆದರು. ಈ ಗೆಲುವು ಅವರಿಗೆ ಸಮಾಜವಾದಿ ಪಾರ್ಟಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರಿಂದ ಪ್ರಶಂಸೆಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲದೆ, ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮನರಂಜನಾ ತೆರಿಗೆ ರಾಜ್ಯ ಸಚಿವರಾಗುವ ಅವಕಾಶವೂ ಸಿಕ್ಕಿತು. ಪಾಂಡೆ ಅವರು 2017 ಮತ್ತು 2022ರಲ್ಲೂ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ, ಬಿಜೆಪಿಯ ವೇದ್ ಪ್ರಕಾಶ್ ಗುಪ್ತಾ ಎದುರು ಎರಡೂ ಬಾರಿಯೂ ಸೋಲು ಅನುಭವಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಕಳಪೆ ಪ್ರದರ್ಶನ ನೀಡಿದ ನಂತರ, ಪಾಂಡೆ ಸೇರಿದಂತೆ ಮೂವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, 2015ರಲ್ಲಿ ಅವರು ಮತ್ತೆ ಅರಣ್ಯ ರಾಜ್ಯ ಸಚಿವರಾಗಿ ಸಂಪುಟಕ್ಕೆ ಮರಳಿದರು. ಇದು ಅವರು ಅಖಿಲೇಶ್ ಯಾದವ್ ಅವರ ವಿಶ್ವಾಸವನ್ನು ಮರಳಿ ಗಳಿಸಿರುವುದರ ಸಂಕೇತವಾಗಿತ್ತು.
2017ರ ವಿಧಾನಸಭಾ ಚುನಾವಣೆಗೆ ಮುನ್ನ ಯಾದವ್ ಕುಟುಂಬದೊಳಗೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದ ಸಂದರ್ಭದಲ್ಲಿ, ಆಗಿನ ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಮುಲಾಯಂ ಮತ್ತು ಶಿವಪಾಲ್ ಇಬ್ಬರಿಗೂ ಆಪ್ತರಾಗಿದ್ದ ಸಮಾಜವಾದಿ ಪಾರ್ಟಿ ವಿಧಾನಪರಿಷತ್ ಸದಸ್ಯ ಆಶು ಮಲಿಕ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಪಾಂಡೆ ಅವರ ಮೇಲಿತ್ತು. ಅಲ್ಲದೆ, ಪಾಂಡೆ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಶಿವಪಾಲ್ ಅವರು ಆಗಿನ ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಪತ್ರ ಬರೆದಿದ್ದರು.
ಆದರೆ, ಪಾಂಡೆ ಈ ಆರೋಪಗಳನ್ನು ನಿರಾಕರಿಸಿದ್ದು, ಇದು ತಮ್ಮ ವಿರುದ್ಧ ನಡೆದ ಪಿತೂರಿ ಎಂದು ಹೇಳಿದ್ದರು. ಬಳಿಕ ಪಕ್ಷದ ಸಂಘಟನೆಯ ಸಂಪೂರ್ಣ ನಿಯಂತ್ರಣವನ್ನು ಅಖಿಲೇಶ್ ತಮ್ಮ ಕೈಗೆ ತೆಗೆದುಕೊಂಡಾಗ, ಅವರು ಪಾಂಡೆ ಮೇಲಿದ್ದ ಉಚ್ಚಾಟನೆಯನ್ನು ರದ್ದುಗೊಳಿಸಿದರು. ಮುಲಾಯಂ ಸಿಂಗ್ ಯಾದವ್ ಅವರು ಪಾಂಡೆ ಉಮೇದುವಾರಿಕೆಯನ್ನು ವಿರೋಧಿಸಿದ್ದರೂ, ಅಖಿಲೇಶ್ ಅವರಿಗೆ ಮತ್ತೆ ಅಯೋಧ್ಯೆಯಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದರು.
ಚುನಾವಣೆಗಳಲ್ಲಿ ಹಿನ್ನಡೆಯಾಗಿದ್ದರೂ ಸಹ, ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿಯ ಅತ್ಯಂತ ಪ್ರಭಾವಿ ಮುಖಗಳಲ್ಲಿ ಪವನ್ ಪಾಂಡೆ ಒಬ್ಬರಾಗಿದ್ದಾರೆ. ಇದೀಗ ಈ ಧಾರ್ಮಿಕ ನಗರಿಯಲ್ಲಿ ಪಕ್ಷದ ರಾಜಕೀಯ ಹೋರಾಟದ ಮುಂಚೂಣಿ ಜವಾಬ್ದಾರಿಯನ್ನು ಮತ್ತೊಮ್ಮೆ ಅವರಿಗೆ ವಹಿಸಲಾಗಿದೆ.
►ದೇಣಿಗೆ ಕಳ್ಳತನ ಆರೋಪದ ಬಗ್ಗೆ ಪಾಂಡೆ ಹೇಳಿದ್ದೇನು?
ರಾಮ ಮಂದಿರದ ದೇಣಿಗೆ ಕಳ್ಳತನದ ಹಗರಣವು ಬೆಳಕಿಗೆ ಬರಲು ಹಣದ ಹಂಚಿಕೆಯಲ್ಲಿ ಭಾಗಿಯಾದವರ ನಡುವಿನ ದೊಡ್ಡ ಜಗಳವೇ ಕಾರಣ ಎಂದು ಪಾಂಡೆ ಆರೋಪಿಸಿದ್ದಾರೆ.
ಕಸದ ರಾಶಿಯಿಂದ ಪತ್ತೆಯಾದ 80 ಲಕ್ಷ ರೂಪಾಯಿ ಮತ್ತು ಹಲವು ಕಡೆಗಳಲ್ಲಿ ಸಿಕ್ಕಿರುವ ನಗದು ಹಣವೇ ಈ ಅಕ್ರಮಕ್ಕೆ ಸಾಕಷ್ಟು ಪುರಾವೆಗಳಾಗಿವೆ ಎಂದ ಅವರು, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
'ಯುಪಿ ತಕ್' ವಾಹಿನಿಯ ವಿಶೇಷ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಂಡೆ, ರಾಮ ಜನ್ಮಭೂಮಿ ಮಂದಿರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಮೊದಲು ತಿಳಿದುಕೊಂಡವರಲ್ಲಿ ತಾವೂ ಒಬ್ಬರು ಎಂದು ಹೇಳಿಕೊಂಡಿದ್ದಾರೆ.
►ಅಖಿಲೇಶ್ ಯಾದವ್ ಅಕ್ರಮವನ್ನು ಬಯಲಿಗೆಳೆದದ್ದು ಹೇಗೆ?
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಈ ಕುರಿತು ಖಚಿತಪಡಿಸಿಕೊಳ್ಳಲು ಅವರು ತಮಗೆ ಕರೆ ಮಾಡಿದ್ದರು ಎಂದು ಪಾಂಡೆ ಹೇಳಿದ್ದಾರೆ.
"ಕಾಣಿಕೆಗಳು, ಆಭರಣಗಳು ಮತ್ತು ದೊಡ್ಡ ಮಟ್ಟದ ಅಕ್ರಮಗಳು ನಡೆದಿರುವುದು ನಿಜವೇ ಎಂದು ಅವರು ಕೇಳಿದರು. ಅದಕ್ಕೆ ನಾನು, ಇದೆಲ್ಲವೂ ನೂರಕ್ಕೆ ನೂರರಷ್ಟು ನಿಜ ಎಂದು ಅವರಿಗೆ ತಿಳಿಸಿದೆ.
ಪಾಂಡೆ ಅವರ ಪ್ರಕಾರ, ಇದಾದ ನಂತರ ಯಾದವ್ ಅವರು ಜೂನ್ 7ರಂದು ಈ ದೇಣಿಗೆ ಕಳ್ಳತನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು, ಇದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತು.
"ಇದು ಅತ್ಯಂತ ದುರದೃಷ್ಟಕರ. ಮರ್ಯಾದಾ ಪುರುಷೋತ್ತಮ ಶ್ರೀರಾಮನಿಂದಾಗಿ ಅಯೋಧ್ಯೆ ಇಡೀ ಜಗತ್ತಿಗೆ ಪರಿಚಿತವಾಗಿದೆ. ಸರಯೂ ನದಿ, ಹನುಮಾನ್‌ಗಢಿ, ಬಜರಂಗಬಲಿ ಹಾಗೂ ಅಸಂಖ್ಯಾತ ಪೂಜನೀಯ ಸಂತರು ಮತ್ತು ಮಹಂತರನ್ನು ಒಳಗೊಂಡ ಭವ್ಯ ಇತಿಹಾಸವನ್ನು ಇದು ಹೊಂದಿದೆ" ಎಂದು ಪಾಂಡೆ ಹೇಳಿರುವುದಾಗಿ India Today ವರದಿ ಉಲ್ಲೇಖಿಸಿದೆ.
►ಅಖಿಲೇಶ್ ಯಾದವ್ ಅವರನ್ನು ಶ್ರೀರಾಮನೇ ಆರಿಸಿಕೊಂಡಿದ್ದಾನೆ
2012ರಿಂದ 2017ರವರೆಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಯೋಧ್ಯೆಯನ್ನು ಪ್ರತಿನಿಧಿಸಿದ್ದ ಪಾಂಡೆ, ಈ ಹಗರಣ ಬಯಲಿಗೆ ಬಂದಿರುವುದರ ಹಿಂದೆ ದೈವಿಕ ಶಕ್ತಿಯ ಕೈವಾಡವಿದೆ ಎಂದಿದ್ದಾರೆ.
"ತಮ್ಮ ಮಂದಿರದಲ್ಲೇ ಕಳ್ಳತನ ನಡೆಯುತ್ತಿದೆ, ಹಣ ಮಾಯವಾಗುತ್ತಿದೆ, ಕಾಣಿಕೆಗಳು ಕದಿಯಲ್ಪಡುತ್ತಿವೆ ಮತ್ತು ಜನರ ನಂಬಿಕೆಗೆ ದ್ರೋಹ ಬಗೆಯಲಾಗುತ್ತಿದೆ ಎಂದು ಸ್ವತಃ ಶ್ರೀರಾಮನಿಗೇ ಅನಿಸಿದಾಗ ಈ ಮಾಹಿತಿ ನಮಗೆ ತಲುಪಿತು. ಸಮಾಜವಾದಿ ಪಕ್ಷದ ಮುಖ್ಯಸ್ಥರು ಶಿವನ ಭಕ್ತರಾಗಿದ್ದು, ಭವ್ಯವಾದ ಕೇದಾರೇಶ್ವರ ಮಹಾದೇವ ಮಂದಿರವನ್ನು ನಿರ್ಮಿಸುತ್ತಿರುವುದರಿಂದಲೇ ಈ ಹಗರಣವನ್ನು ಬಯಲಿಗೆಳೆಯಲು ಶ್ರೀರಾಮನು ಅಖಿಲೇಶ್ ಯಾದವ್ ಅವರನ್ನು ಆರಿಸಿಕೊಂಡಿದ್ದಾನೆ. ನೀವು ಈ ಬಗ್ಗೆ ಅಖಿಲೇಶ್ ಜಿ ಅವರನ್ನೇ ಕೇಳಬೇಕು. ಆದರೆ ತಮ್ಮ ಪವಿತ್ರ ಮಂದಿರದಲ್ಲಿ ಕಳ್ಳತನ ನಡೆಯುತ್ತಿದೆ ಎಂಬುದನ್ನು ಅಖಿಲೇಶ್ ಜಿ ಅವರಿಗೆ ಅರಿವಾಗುವಂತೆ ಮಾಡಿದ್ದು ಸ್ವತಃ ಶ್ರೀರಾಮನೇ" ಎಂದು ಪಾಂಡೆ ಹೇಳಿದ್ದಾರೆ.
►ಕಳ್ಳತನ ಬೆಳಕಿಗೆ ಬಂದದ್ದು ಹೇಗೆ?
ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳು ಹಣ ಹಂಚಿಕೊಳ್ಳುವಾಗ ತಮ್ಮ ನಡುವೆಯೇ ಜಗಳವಾಡಲು ಆರಂಭಿಸಿದ ಮೇಲಷ್ಟೇ ಈ ವಿಷಯ ಸಾರ್ವಜನಿಕವಾಗಿ ಹೊರಬಂದಿತು. ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿ ಹೊತ್ತಿದ್ದವರು, ಯಾರು ಹೆಚ್ಚು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ವಿಷಯವಾಗಿ ಪರಸ್ಪರ ಕಿತ್ತಾಡಿಕೊಳ್ಳಲು ಶುರು ಮಾಡಿದರು. ಒಬ್ಬರು ಮತ್ತೊಬ್ಬರ ಮೇಲೆ ಆಭರಣ ಅಥವಾ ನಗದು ಕದ್ದಿದ್ದಾರೆ ಎಂದು ಆರೋಪಿಸತೊಡಗಿದರು.
ಟ್ರಸ್ಟ್‌ನ ಪದಾಧಿಕಾರಿಗಳು ವರ್ಷಗಳಿಂದ ಈ ಅಕ್ರಮಗಳನ್ನು ಮುಚ್ಚಿಟ್ಟಿದ್ದರು. ಅವರೊಳಗಿನ ಆಂತರಿಕ ಜಗಳವೇ ಕೊನೆಗೆ ಈ ವಿಷಯವನ್ನು ಬೀದಿಗೆ ತಂದಿತು. ಈ ಕಳ್ಳತನಗಳು ಈ ವರ್ಷದ ಮೇ ಅಥವಾ ಜೂನ್‌ನಲ್ಲಿ ಆರಂಭವಾಗಿಲ್ಲ, ಬದಲಿಗೆ ಕಳೆದ ಕೆಲವು ವರ್ಷಗಳಿಂದಲೇ ನಡೆಯುತ್ತಿವೆ. ಅಲ್ಲದೆ, ಈ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರು ರಕ್ಷಿಸುತ್ತಿದ್ದಾರೆ ಎಂದು ಪಾಂಡೆ ಆರೋಪಿಸಿದ್ದಾರೆ.
►ಚಂಪತ್ ರಾಯ್ ರಾಜೀನಾಮೆ ಕುರಿತು
ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಪ್ರಶ್ನಿಸಿದ ಪಾಂಡೆ, ಯಾವುದೇ ತಪ್ಪು ಮಾಡದ ನಿರಪರಾಧಿಯೊಬ್ಬರು ಪದತ್ಯಾಗ ಮಾಡಲು ಯಾವುದೇ ಕಾರಣವಿರುವುದಿಲ್ಲ ಎಂದಿದ್ದಾರೆ. ನೀವು ಕಳ್ಳತನ ಮಾಡಿದಾಗ, ಅಪ್ರಾಮಾಣಿಕವಾಗಿ ನಡೆದುಕೊಂಡಾಗ ಮತ್ತು ಕಳ್ಳತನ ಮಾಡುವವರನ್ನು ರಕ್ಷಿಸಿದಾಗ ಇದೇ ಆಗುತ್ತದೆ ಎಂದು ಅವರು ಆರೋಪಿಸಿದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ನೀಡುವ ದೇಣಿಗೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ಎತ್ತಿ ತೋರಿಸಿದ ಬೆನ್ನಲ್ಲೇ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ಶುಕ್ರವಾರ ತಮ್ಮ ರಾಜೀನಾಮೆ ನೀಡಿದ್ದರು.
ಕಾಣಿಕೆ ಹುಂಡಿ ಒಳಗಡೆ ವಾಸ್ತವವಾಗಿ ಪತ್ತೆಯಾದ ನಗದು ಹಣಕ್ಕಿಂತ, ರಿಜಿಸ್ಟರ್‌ಗಳಲ್ಲಿ ದಾಖಲಾದ ಮೊತ್ತವು ತುಂಬಾ ಕಡಿಮೆಯಾಗಿದೆ ಎಂದು ಈ ಹಿಂದೆ ಹಕ್ಕು ಮಂಡಿಸಿದ್ದ ಮಹಿಪಾಲ್ ಸಿಂಗ್ ಹೇಳಿಕೆಯನ್ನು ಪ್ರಸ್ತಾಪಿಸಿದ ಪಾಂಡೆ, ಸಿಂಗ್ ಅವರು ಈ ಬಗ್ಗೆ ರಾಯ್ ಮತ್ತು ಮಿಶ್ರಾ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.
"ಒಂದು ವೇಳೆ ಮಹಿಪಾಲ್ ಸಿಂಗ್ ಸುಳ್ಳು ಹೇಳುತ್ತಿದ್ದರೆ, 140 ಕೋಟಿ ಭಾರತೀಯರು ಪೂಜಿಸುವ ಶ್ರೀರಾಮನ ಮಂದಿರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಚಂಪತ್ ರಾಯ್ ಅವರು ಅವರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಅವರು ಅದನ್ನು ಏಕೆ ಮಾಡಲಿಲ್ಲ?" ಎಂದು ಪಾಂಡೆ ಪ್ರಶ್ನಿಸಿದ್ದಾರೆ.
ಟ್ರಸ್ಟ್‌ನ ಕೆಲವು ಸದಸ್ಯರ ನಡವಳಿಕೆಯನ್ನು ವಿವರಿಸಲು ಪ್ರಸಿದ್ಧ ಹಿಂದಿ ಗಾದೆಯಾದ "ರಾಮ್ ರಾಮ್ ಜಪ್ನಾ, ಪರಾಯ ಮಾಲ್ ಅಪ್ನಾ" (ದೇವರ ಹೆಸರು ಜಪಿಸುತ್ತಾ ಅಧರ್ಮದ ಹಾದಿಯಲ್ಲಿ ಪರರ ಹಣ ಲೂಟಿ ಮಾಡುವುದು) ಎಂಬುದನ್ನು ಬಳಸಿದ ಪಾಂಡೆ, "ಅವರ ನಿಜವಾದ ಚಾರಿತ್ರ್ಯ ಈಗ ಬಯಲಾಗಿದೆ. ಇಂಥ 'ಲೂಟಿಕೋರರ' ನಡುವೆ ಇರಲು ಸ್ವತಃ ಶ್ರೀರಾಮನೇ ನಾಚಿಕೆಪಡುತ್ತಾನೆ" ಎಂದಿದ್ದಾರೆ.
►S I T ತನಿಖೆ ಕುರಿತು
ತಮಗೆ S I T ತನಿಖೆಯ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದ ಪಾಂಡೆ, ಟ್ರಸ್ಟ್‌ನವರೇ ಈ ತನಿಖೆಗೆ ಕೋರಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಅವರ ಕೈಗೇ ಅಂತಿಮವಾಗಿ ತನಿಖಾ ವರದಿ ಸೇರಲಿದೆ ಎಂದು ಆರೋಪಿಸಿದರು.
ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳು ಕೇಳಿಬಂದ ನಂತರ, ಟ್ರಸ್ಟ್ ನೀಡಿದ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಚನೆಯಾಗಿ, ಪ್ರಧಾನಮಂತ್ರಿಯವರಿಂದ ಘೋಷಿಸಲ್ಪಟ್ಟ ಈ ಟ್ರಸ್ಟ್, 140 ಕೋಟಿ ಭಾರತೀಯರ ನಂಬಿಕೆಗೆ ಮಾತ್ರವಲ್ಲದೆ ದೇಶದ ಅತ್ಯುನ್ನತ ನ್ಯಾಯಾಲಯ ತನ್ನ ಮೇಲಿಟ್ಟಿದ್ದ ವಿಶ್ವಾಸಕ್ಕೂ ದ್ರೋಹ ಬಗೆದಿದೆ. ಹೀಗಾಗಿ, ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು. ಪ್ರಸ್ತುತ ಇರುವ ಟ್ರಸ್ಟ್ ಅನ್ನು ವಿಸರ್ಜಿಸಬೇಕು ಮತ್ತು ಈ ಅಕ್ರಮದಲ್ಲಿ ಯಾರ ಕೈವಾಡವಿದೆ, ಕಳ್ಳತನ ಹೇಗೆ ನಡೆಯಿತು ಮತ್ತು ಅದಕ್ಕೆ ಯಾರು ರಕ್ಷಣೆ ನೀಡಿದರು ಎಂಬುದನ್ನು ಪತ್ತೆಹಚ್ಚಲು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕು ಎಂದು ಪಾಂಡೆ ಒತ್ತಾಯಿಸಿದ್ದಾರೆ.