ದಮನ, ನಿರ್ಲಕ್ಷ್ಯ, ಅವಮಾನ; ಗೊಂದಲದಲ್ಲೇ ಮುಗಿಯಿತು ಇರಾನ್ FIFA ವಿಶ್ವಕಪ್ ಪಯಣ!
Photo Credit : NDTV
ಅವಮಾನ ಮತ್ತು ಆಕ್ರೋಶದ ನಡುವೆ ಭಗ್ನವಾದ ಇರಾನ್‌ನ ವಿಶ್ವಕಪ್ ಗೆಲ್ಲುವ ಕನಸು
2026ರ ಫಿಫಾ ವಿಶ್ವಕಪ್‌ನಲ್ಲಿ ಇರಾನ್ ತಂಡವು ನಾಕೌಟ್ ಹಂತಕ್ಕೆ ಟಿಕೆಟ್ ಗಳಿಸದೇ ಇರಬಹುದು. ಆದರೆ ಮೂರು ಪಂದ್ಯಗಳಲ್ಲಿ ಇರಾನ್ ನೀಡಿದ ಪ್ರದರ್ಶನ ಮರೆಯಲಾಗದು. ಫೈನಲಿಸ್ಟ್‌ಗಳು ಮತ್ತು ಇತರ ಉನ್ನತ ತಂಡಗಳನ್ನು ನೆನಪಿನಲ್ಲಿರಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ, ಅಸಾಧಾರಣ ಸಂದರ್ಭಗಳಲ್ಲಿ ಸವಾಲುಗಳ ವಿರುದ್ಧ ಸೆಟೆದು ನಿಂತು ಆಡಿದ ಇರಾನ್‌ನ ಪ್ರತ್ಯೇಕ ಪ್ರಕರಣವು ಅಭಿಮಾನಿಗಳ ನೆನಪಿನಲ್ಲಿ ಸ್ಥಾನ ಗಳಿಸುವುದು ಖಚಿತ. ಇರಾನ್ ತಂಡವು ತಮ್ಮ ದೇಶ ಮತ್ತು ಫುಟ್‌ಬಾಲ್ ಆಡುವ ಅಂಗಣವಾದ ಅಮೆರಿಕದ ನಡುವಿನ ಹಗೆತನದ ನಡುವೆ ವಿಶ್ವಕಪ್ ಆಡಲು ಬಂದಿಳಿದಿತ್ತು.
ಈ ಬಾರಿ ವಿಶ್ವಕಪ್ ಆಡುವುದು ಇರಾನ್‌ಗೆ ಸಾಹಸಕ್ಕಿಂತ ಕಡಿಮೆ ಏನೂ ಇರಲಿಲ್ಲ. ವಿಶ್ವಕಪ್ ಆಡಲು ಆಗಮಿಸುವವರೆಗೂ ಭಾಗವಹಿಸುವುದು ಅನಿಶ್ಚಿತವಾಗಿಯೇ ಉಳಿದಿತ್ತು. ತಂಡದ ಮೇಲೆ ಅಪಾರ ರಾಜಕೀಯ ಮತ್ತು ಲಾಜಿಸ್ಟಿಕ್ ಒತ್ತಡಗಳಿದ್ದರೂ, ಗುಂಪು ಜಿ ಪಂದ್ಯಗಳ ಅಂತಿಮ ಕ್ಷಣಗಳವರೆಗೂ ಇರಾನ್ ಸ್ಪರ್ಧೆಯಲ್ಲಿತ್ತು. ಏಷ್ಯಾದ ತಂಡವಾಗಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಇರಾನ್ ತನ್ನ ಗುಂಪಿನಲ್ಲಿ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಆದರೆ ಒಂದೂ ಪಂದ್ಯವನ್ನೂ ಗೆಲ್ಲಲೂ ಇಲ್ಲ. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು 3 ಅಂಕಗಳನ್ನು ಮಾತ್ರ ಪಡೆದ ಕಾರಣ, 32ನೇ ಸುತ್ತಿಗೆ ಪ್ರವೇಶ ದೊರೆಯಲಿಲ್ಲ.
ಸ್ಪರ್ಧೆಗಾಗಿ ಅವರ ಪ್ರಯಾಣವು ಕೊನೆಯವರೆಗೂ ಅವ್ಯವಸ್ಥೆಯ ಆಗರವಾಗಿತ್ತು. ಲಾಸ್ ಏಂಜಿಲೀಸ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 2-2 ಡ್ರಾದೊಂದಿಗೆ ಇರಾನ್ ತನ್ನ ಅಭಿಯಾನ ಆರಂಭಿಸಿತ್ತು. ಆಟಕ್ಕೆ ಮೊದಲು ಇರಾನ್ ತಂಡ ಮೆಕ್ಸಿಕೊದಲ್ಲಿ ಇಳಿದುಕೊಂಡಿತ್ತು. ಆಟದ ಕೊನೆಯ ಶಿಳ್ಳೆ ಪೂರ್ಣಗೊಂಡ ತಕ್ಷಣ, ಅವರನ್ನು ಮೈದಾನದಿಂದಲೇ ಮರಳಿ ಮೆಕ್ಸಿಕೊಗೆ ಕಳುಹಿಸಲಾಗಿತ್ತು. ಮೆಕ್ಸಿಕೊದ ಟಿಜುವಾನಾದಲ್ಲಿರುವ ಶಿಬಿರದಲ್ಲಿ ಅವರನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅಮೆರಿಕದಲ್ಲಿ ಪಂದ್ಯಗಳನ್ನು ಆಡುತ್ತಿದ್ದರೂ, ಮೆಕ್ಸಿಕೊದಲ್ಲಿ ಉಳಿಯುವ ವ್ಯವಸ್ಥೆ ಮಾಡಿರುವ ಬಗ್ಗೆ ತಂಡದ ಆಡಳಿತ ಮಂಡಳಿ ಮತ್ತು ನಾಯಕ ಮೆಹದಿ ತರೆಮಿ ಟೀಕಿಸಿದ್ದರು. ಆಟದ ನಂತರ ದೈಹಿಕ ಚೇತರಿಕೆಗಾಗಿ ಸ್ಥಳದಲ್ಲೇ ಉಳಿಯಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು.
ಮಾತ್ರವಲ್ಲದೆ, ವೀಸಾ ಸಮಸ್ಯೆಗಳ ಕಾರಣ ಪ್ರಮುಖ ತಂಡದ ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಯ ಪ್ರಯಾಣವನ್ನು ತೀವ್ರವಾಗಿ ನಿರ್ಬಂಧಿಸಲಾಗಿತ್ತು. ಅಮೆರಿಕದ ನೆಲದಲ್ಲಿ ತನ್ನ ಪ್ರಮಾಣಿತ ಫೆಡರೇಷನ್ ಬೆಂಬಲ ವ್ಯವಸ್ಥೆಯಿಲ್ಲದೆ ತಂಡವು ಪರಿಣಾಮಕಾರಿಯಾಗಿ ಪ್ರತ್ಯೇಕವಾಗಿ ಉಳಿದಿತ್ತು.
ಆರಂಭದಲ್ಲಿ ಇರಾನ್ ತಂಡವು ಅರಿಜೋನಾದ ಟುಸಾನ್ ನಲ್ಲಿ ತಂಗಬೇಕಾಗಿತ್ತು. ಆದರೆ ರಾಜಕೀಯ ಅನಿಶ್ಚಿತತೆ ಮತ್ತು ವಲಸೆ ಸಂಬಂಧಿತ ಕಾಳಜಿಗಳ ಕಾರಣ ಅವರು ಮೆಕ್ಸಿಕೊಗೆ ಸ್ಥಳಾಂತರಗೊಂಡರು. ಹೀಗಾಗಿ, ಆಟಕ್ಕೆ ಮೊದಲು ಐದು ಗಂಟೆಗಳ ಪ್ರಯಾಣದ ಅಡಚಣೆಯನ್ನು ಎದುರಿಸಬೇಕಾಯಿತು. ಅವರ ಮೂರೂ ಗುಂಪು ಪಂದ್ಯಗಳು ಅಮೆರಿಕದಲ್ಲಿದ್ದ ಕಾರಣ, ಪ್ರತಿ ಪಂದ್ಯಕ್ಕೂ ಮೆಕ್ಸಿಕೊದಿಂದ ಪ್ರಯಾಣ ಮಾಡಬೇಕಾಗಿತ್ತು.
ತಂಡದ ಪತ್ರಿಕಾಗೋಷ್ಠಿಗಳಲ್ಲಿಯೂ ತಮ್ಮ ತಂಡ ಎದುರಿಸಿದ ರಾಜಕೀಯ ಸವಾಲುಗಳ ಬಗ್ಗೆ ಮಾತನಾಡದಂತೆ ನಾಯಕ ಮತ್ತು ತಂಡದ ಸದಸ್ಯರಿಗೆ ಫಿಫಾ ಅಧಿಕಾರಿಗಳು ತಾಕೀತು ಮಾಡಿದ್ದರು.
ತಮ್ಮ ಅಂತಿಮ ಗುಂಪು ಪಂದ್ಯದಲ್ಲಿ ಈಜಿಪ್ಟ ಅನ್ನು ಸೋಲಿಸಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇರಾನ್ ಇತ್ತು. ಆದರೆ, ಇರಾನ್ ಐದನೇ ನಿಮಿಷದಲ್ಲೇ ಈಜಿಪ್ಟ್ ಗೆ ಗೋಲು ಬಿಟ್ಟುಕೊಟ್ಟಿತು. ನಂತರ ಸಮಬಲ ಸಾಧಿಸಿದರೂ ಗೆಲುವು ಸಾಧಿಸಲಾಗಲಿಲ್ಲ. ಹೀಗಾಗಿ, 32ನೇ ಹಂತಕ್ಕೆ ಹೋಗುವ ಅವಕಾಶ ಕಳೆದುಕೊಂಡಿತು. ಇರಾನ್ ನ ಶೋಜೆ ಖಾಲಿಲ್ಜಾದೆ ಗೋಲು ಹೊಡೆದಾಗ ಕೆಲ ಕ್ಷಣಗಳ ಕಾಲ ಇರಾನ್ ನಾಕೌಟ್ ಹಂತಕ್ಕೆ ತಲುಪಿದ ಖುಷಿಯಲ್ಲಿತ್ತು. ಆದರೆ, VAR ಪರಿಶೀಲನೆಯಲ್ಲಿ ಖಾಲಿಲ್ಜಾದೆ ಆಫ್‌ಸೈಡ್‌ನಲ್ಲಿದ್ದದ್ದು ಬಹಿರಂಗವಾದ ಕಾರಣ ಗೋಲು ಅಮಾನ್ಯಗೊಂಡಿತು.
ಆಟದ ನಂತರ, ಇರಾನ್ ನಾಕೌಟ್ ಹಂತಕ್ಕೆ ಸಾಗಲು ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾಯಿತು. ಅಲ್ಜೀರಿಯಾ ಮತ್ತು ಆಸ್ಟ್ರಿಯಾ ನಡುವಿನ ಪಂದ್ಯದ ಮೇಲೆ ಇರಾನ್‌ನ ಭವಿಷ್ಯ ನಿಂತಿತ್ತು. ಅಲ್ಜೀರಿಯಾ ತಂಡವು ಆಸ್ಟ್ರಿಯಾವನ್ನು 3-2ರಿಂದ ಹಿಂದಿಕ್ಕಿದಾಗ, ಇರಾನ್ 32ನೇ ಹಂತಕ್ಕೆ ಸಾಗುವ ಸಾಧ್ಯತೆ ಜೀವಂತವಾಗಿತ್ತು. ಸ್ಕೋರ್ ಅದೇ ರೀತಿ ಉಳಿದಿದ್ದರೆ ಇರಾನ್ 32ನೇ ಹಂತಕ್ಕೆ ಪ್ರವೇಶಿಸುತ್ತಿತ್ತು. ಆದರೆ, ನಂತರ ಆಸ್ಟ್ರಿಯಾ 3-3ರಿಂದ ಸಮಬಲ ಸಾಧಿಸುವ ಮೂಲಕ ಇರಾನ್ ಅನ್ನು ಅರ್ಹತಾ ಸ್ಥಾನದಿಂದ ಮತ್ತೊಮ್ಮೆ ಹೊರಹಾಕಿತು. ಹೀಗೆ, 2026ರ ವಿಶ್ವಕಪ್ ಇರಾನ್ ಪಾಲಿಗೆ ರೋಲರ್ ಕೋಸ್ಟರ್ ಪ್ರಯಾಣದ ಅನುಭವವನ್ನು ನೀಡಿತು.