ಕಾಗಿನೆಲೆ ಗುರುಪೀಠ ಸೇರಿದಂತೆ 22 ಸಂಘಸಂಸ್ಥೆಗಳಿಗೆ 94 ಕೋಟಿ ರೂ. ಮೌಲ್ಯದ 11.83 ಎಕರೆ ಜಮೀನು ಮಂಜೂರಾತಿಗೆ ಸಂಪುಟ ಅಸ್ತು
ಬೆಂಗಳೂರು : ಮಾರುಕಟ್ಟೆಯಲ್ಲಿ ಅಂದಾಜು 94 ಕೋಟಿ ರೂ.ಬೆಲೆಬಾಳುವ 11.83 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಸೇರಿದಂತೆ ಒಟ್ಟು 22 ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ನಿಯಮ ಉಲ್ಲಂಘಿಸಿ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ 18 ಕಿಮೀ ವ್ಯಾಪ್ತಿಯೊಳಗೆ ಬರುವ ರಾವುತನಹಳ್ಳಿ ಗ್ರಾಮದಲ್ಲಿರುವ ಜಮೀನುಗಳಿಗೆ ಸರಕಾರಿ ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000 ರೂ. ಬೆಲೆ ಇದೆ. ಇದರ ಪ್ರಕಾರವೇ 92.93 ಕೋಟಿ ರೂ.ನಷ್ಟು ಈ ಜಮೀನು ಬೆಲೆ ಬಾಳಲಿದೆ. ಈ ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಸಹ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ಮಂಜೂರಾತಿಗೆ ಅನುಮತಿ ನೀಡಿದೆ.
ಈ ಮೊದಲು ಇವೇ ಸಂಘ ಸಂಸ್ಥೆ, ಮಠಗಳಿಗೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲೇ ಜಮೀನುಗಳನ್ನು ಮಂಜೂರು ಮಾಡಿತ್ತು. ಈ ಮಂಜೂರಾತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆಯಲ್ಲದೇ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಹೀಗಾಗಿ ನ್ಯಾಯಾಲಯದಿಂದ ಛೀಮಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಇವೇ ಸಂಘ ಸಂಸ್ಥೆ, ಮಠಗಳಿಗೆ ಗೋಮಾಳವನ್ನು ಮಂಜೂರು ಮಾಡಲು ಅನುಮತಿ ನೀಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು "the-file.in"ಗೆ ಲಭ್ಯವಾಗಿವೆ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯಲ್ಲಿ ರಾವುತ್ತನಹಳ್ಳಿಯಲ್ಲಿ ಕೃಷಿ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ ಒಂದು ಕೋಟಿ ರೂ. ಇದೆ. ಅಭಿವೃದ್ಧಿ ಹೊಂದದ ಕೃಷಿಯೇತರ ಜಮೀನು, ಎಕರೆಗೆ 1,80,00,000 ರೂ.ಇದೆ. ಅಭಿವೃದ್ಧಿ ಹೊಂದದ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000ರೂ.ಇದೆ. ಮಾರುಕಟ್ಟೆ ಮೌಲ್ಯವು ಕನಿಷ್ಠ 6ರಿಂದ 8 ಕೋಟಿ ರೂ.ಯಷ್ಟು ಇದೆ. ಎಕರೆಗೆ 8 ಕೋಟಿ ರೂ.ಲೆಕ್ಕಾಚಾರದ ಪ್ರಕಾರ 11.83 ಎಕರೆಗೆ 94 ಕೋಟಿ ರೂ.ಬೆಲೆಬಾಳಲಿದೆ.
ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 57 ಮತ್ತು 58ರಲ್ಲಿ ಸರಕಾರಿ ಗೋಮಾಳ ಜಮೀನಿದೆ. ಸರ್ವೇ ನಂಬರ್ 57ರಲ್ಲಿ ಆಕಾರ್ ಬಂದ್ ಪ್ರಕಾರ 34 ಎಕರೆ 9 ಗುಂಟೆ, ಸರ್ವೇ ನಂಬರ್ 58ರಲ್ಲಿ ಆಕಾರ್ ಬಂದ್‌ನಂತೆ 18 ಎಕರೆ 5 ಗುಂಟೆ ವಿಸ್ತೀರ್ಣವಿದೆ. ಈ ಜಮೀನಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಕ್ಕೆ 1 ಎಕರೆ ವಿಸ್ತೀರ್ಣ ಸೇರಿದಂತೆ ಒಟ್ಟಾರೆ 22 ಸಂಘ ಸಂಸ್ಥೆಗಳಿಗೆ 40 ಎಕರೆ 16 ಗುಂಟೆ ಜಮೀನನ್ನು ಮಂಜೂರು ಮಾಡಲು ಪ್ರಸ್ತಾವಿಸಿತ್ತು. ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಂಜೂರು ಮಾಡಿದೆ.
22 ಖಾಸಗಿ ಸಂಘ ಸಂಸ್ಥೆಗಳು ಒಟ್ಟಾರೆ 40.16 ಎಕರೆ ಮಂಜೂರಾತಿಗೆ ಮನವಿ ಸಲ್ಲಿಸಿದ್ದವು. ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಾತ್ರ ಮಂಜೂರು ಮಾಡಿದೆ.
ಸಂಘ ಸಂಸ್ಥೆ-ಮಠಗಳ ವಿವರ: ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠಕ್ಕೆ 1ಎಕರೆ, ಹೊಸದುರ್ಗದ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ 1ಎಕರೆ, ಚಿತ್ರದುರ್ಗದ ಎಂ.ಕೆ.ಹಟ್ಟಿಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠಕ್ಕೆ 1ಎಕರೆ, ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್ ಗೆ 1 ಎಕರೆ,
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ಗೆ 1ಎಕರೆ , ಹೊಸದುರ್ಗ ಮಧುರೆಯಲ್ಲಿನ ಶ್ರೀ ಉಪವೀರ ಜಗದ್ಗುರು ವಿದ್ಯಾಸಂಸ್ಥೆಗೆ 1ಎಕರೆ, ಚಿತ್ರದುರ್ಗದ ಗೊಲ್ಲಗಿರಿಯಲ್ಲಿರುವ ಅಖಿಲ ಭಾರತ ಶ್ರೀ ಕೃಷ್ಣಯಾದವ ಮಹಾಸಂಸ್ಥಾನಕ್ಕೆ 0-31 ಗುಂಟೆ, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘಕ್ಕೆ 1 ಎಕರೆ, ತೀರ್ಥಹಳ್ಳಿಯ ಹುಂಚದಕಟ್ಟೆಯಲ್ಲಿರುವ ನಾರಾಯಣ ಗುರು ಮಹಾಸಂಸ್ಥಾನಕ್ಕೆ 0-31.08 ಎಕರೆ ಮಂಜೂರು ಮಾಡಿದೆ.
ಅದೇ ರೀತಿ ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಜಗದ್ಗುರು ಮಾಚಿದೇವ ಮಠಕ್ಕೆ 0-32 ಎಕರೆ, ಹಾವೇರಿ ಜಿಲ್ಲೆಯ ನರಸೀಪುರ ತಾಲೂಕಿನ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 0-32 ಎಕರೆ, ವಿಜಯಪುರದ ಮುದ್ದೇಬಿಹಾಳದ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಟ್ರಸ್ಟ್‌ಗೆ -31 ಎಕರೆ ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠಕ್ಕೆ 0-31 ಎಕರೆ, ಕಲವುರಗಿಯ ಚಿತ್ತಾಪುರ ತಾಲೂಕಿನ ಕೊಂಚೂರ ಗ್ರಾಮದಲ್ಲಿರುವ ಸವಿತಾ ಪೀಠ ಚಾರಿಟೇಬಲ್ ಟ್ರಸ್ಟ್‌ಗೆ 0-30 ಎಕರೆ, ಹರಿಹರ ತಾಲೂಕಿನ ಹೇಮಾ-ವೇಮಾ ಸದ್ಬಾವನ ಗುರುಪೀಠಕ್ಕೆ 0-23.12 ಎಕರೆ, ಬೆಂಗಳೂರಿನ ನಿಕೇತನ ಎಜುಕೇಷನ್ ಟ್ರಸ್ಟ್‌ಗೆ 1 ಎಕರೆ, ತುಮಕೂರಿನ ಎಸ್‌ವಿಎಸ್ ಊರುಗೋಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್‌ಗೆ 0-35.08 ಎಕರೆ, ಬೆಂಗಳೂರಿನ ವಿಜಯನಗರದಲ್ಲಿರುವ ಹಿಂದುಳಿದ ದಲಿತ ಮಠಾಧೀಶ್ವರ ಒಕ್ಕೂಟಕ್ಕೆ 0-35 ಎಕರೆ ಮಂಜೂರು ಮಾಡಿದೆ.
ಹಾಗೆಯೇ ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಲ್ಕರ್ ಮಹಿಳಾ ಸಂಘದ ಉದ್ದೇಶಿತ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 1 ಎಕರೆ, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಲವಾದಿ ಗುರುಪೀಠಕ್ಕೆ 0-32 ಎಕರೆ, ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಗೆ 0-30 ಎಕರೆ, ಬೆಂಗಳೂರಿನ ತಾವರೆಕೆರೆಯಲ್ಲಿರುವ ಶ್ರೀ ಹಠಯೋಗಿ ಕಾಳಪ್ಪ ಸ್ವಾಮೀಜಿ ಮಠದ ಸೇವಾ ಟ್ರಸ್ಟ್‌ಗೆ 0-32 ಎಕರೆಯನ್ನು ಮಂಜೂರು ಮಾಡಿದೆ.
ನಗರ ವ್ಯಾಪ್ತಿಯಲ್ಲಿದೆ 11.83 ಎಕರೆ
ಪ್ರಸ್ತಾವಿತ ಸರ್ವೇ ನಂಬರ್ 57 ಮತ್ತು 58ರಲ್ಲಿನ ಜಮೀನುಗಳಿಗೆ ರಸ್ತೆ ಸಂಪರ್ಕವಿದೆ. ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97ರ ಅಡಿಯಲ್ಲಿ ರಾಸುಗಳ ಮೇವಿಗಾಗಿ ಗೋಮಾಳವನ್ನು ಮೀಸಲಿರಿಸಲು ಬೇರೆ ಸರಕಾರಿ ಜಮೀನು ಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದರು. ಅಲ್ಲದೇ ಈ ಸರ್ವೇ ನಂಬರ್ 57 ಮತ್ತು 58ರ ಜಮೀನುಗಳು ಅರ್ಕಾವತಿ ನದಿಗೆ ಹೊಂದಿಕೊಂಡಿವೆ. ಅಲ್ಲದೇ ಈ ಜಮೀನು ನಗರ ವ್ಯಾಪ್ತಿಯಲ್ಲಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2) ಪ್ರಕಾರ ನಗರ ಪೌರ ಸರಹದ್ದಿನೊಳಗೆ ಇರುವ ಸರಕಾರಿ ಭೂಮಿಯನ್ನು ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ.
ಅಲ್ಲದೇ ಗೋಮಾಳ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವೇ ಇಲ್ಲ. ಸರ್ವೋಚ್ಛ ನ್ಯಾಯಾಲಯವು ಜಗಪಾಲ್ ಸಿಂಗ್/ಪಂಜಾಬ್ ರಾಜ್ಯ ಸರಕಾರ, ಜೋಗಿಂದರ್ ಮತ್ತು ಹರ್ಯಾಣ ರಾಜ್ಯ ಸರಕಾರದ ವಿಶೇಷ ಮೇಲ್ಮನವಿ ಪ್ರಕರಣದಲ್ಲಿ ಗೋಮಾಳ, ಜಲಮೂಲ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸಂರಕ್ಷಿಸಿಡಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಸಹ ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನವನ್ನೂ ನೀಡಿದೆ. ಹೀಗಾಗಿ 22 ಸಂಘ ಸಂಸ್ಥೆಗಳಿಗೆ ಈ ಜಮೀನು ಮಂಜೂರಾತಿಗೆ ಅವಕಾಶವಿಲ್ಲ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.