ಜಾತಿ, ಪಿತೂರಿ, ಹಳೆಯ ವಿಡಿಯೊ ಕ್ಲಿಪ್‌ಗಳು: ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರ ವಿವಾದಾತ್ಮಕ ಭೂ ವ್ಯವಹಾರಗಳನ್ನು ರಕ್ಷಿಸಲು Xನಲ್ಲಿ ನಡೆದ 'ಟೂಲ್‌ಕಿಟ್' ಕಾರ್ಯಾಚರಣೆ ಹೇಗಿತ್ತು?
Photo Credit : newslaundry.com
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ಜಿಲ್ಲೆ ಉಜ್ಜಯಿನಿಯಲ್ಲಿ ಅವರ ಕುಟುಂಬ ನಡೆಸಿರುವ ಭೂ ವ್ಯವಹಾರಗಳ ಕುರಿತು 'The Indian Express ' ಮಂಗಳವಾರ ತನಿಖಾ ವರದಿಯೊಂದನ್ನು ಪ್ರಕಟಿಸಿದೆ. ಡಿಸೆಂಬರ್ 13, 2023ರಂದು ಮೋಹನ್ ಯಾದವ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಹಿಡಿದು ಡಿಸೆಂಬರ್ 2025ರವರೆಗಿನ ಭೂ ದಾಖಲೆಗಳನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಕರ್ತ ಜಯ್ ಮಜುಂದಾರ್ ಅವರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ತನಿಖೆಯ ಪ್ರಕಾರ, ಮುಖ್ಯಮಂತ್ರಿಯವರ ಆಪ್ತ ವಲಯ, ಅಂದರೆ ಅವರ ಪತ್ನಿ ಸೀಮಾ, ಸೊಸೆ ಶಾಲಿನಿ, ಸಹೋದರರು ಹಾಗೂ ಸೋದರಸಂಬಂಧಿಗಳು ಸೇರಿದಂತೆ, ಕನಿಷ್ಠ 137 ನಿವೇಶನಗಳನ್ನು ಖರೀದಿಸಿದ್ದಾರೆ. ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ಒಟ್ಟು 168 ಎಕರೆ ಭೂಮಿಯನ್ನು ಇವರು ಸ್ವಾಧೀನಪಡಿಸಿಕೊಂಡಿದ್ದಾರೆ.
ಹೊಸದಾಗಿ ಖರೀದಿಸಲಾದ ಈ ಬಹುತೇಕ ಭೂಮಿಗಳು ಉಜ್ಜಯಿನಿ ಮತ್ತು ಅದರ ಸುತ್ತಮುತ್ತ ಸರ್ಕಾರ ಘೋಷಿಸಿರುವ ಹೊಸ ರಸ್ತೆ ಯೋಜನೆಗಳ ಪಕ್ಕದಲ್ಲೇ ಇವೆ ಅಥವಾ ಕೃಷಿ ಭೂಮಿಯನ್ನು ವಸತಿ ಮತ್ತು ವಾಣಿಜ್ಯ ಬಳಕೆಯ ಭೂಮಿಯನ್ನಾಗಿ ಬದಲಾಯಿಸಲು ಗುರುತಿಸಲಾದ ಪ್ರದೇಶಗಳಲ್ಲಿವೆ. ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲಾ ನಿರ್ಧಾರಗಳನ್ನು ಯಾದವ್ ಅವರ ನೇತೃತ್ವದ ರಾಜ್ಯ ಸರ್ಕಾರವೇ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಈ ಹೊಸ ಖರೀದಿಗಳೊಂದಿಗೆ ಈಗಾಗಲೇ 179 ಎಕರೆ ಹೊಂದಿದ್ದ ಅವರ ಕುಟುಂಬದ ಒಟ್ಟು ಜಮೀನು ಮತ್ತಷ್ಟು ವಿಸ್ತರಣೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, "ಮುಖ್ಯಮಂತ್ರಿಯವರ ಕುಟುಂಬದ ವ್ಯಾಪಾರ ಅಥವಾ ಭೂ ವ್ಯವಹಾರಗಳನ್ನು ಮುಖ್ಯಮಂತ್ರಿ ಮತ್ತು ಅವರ ಕಚೇರಿಗೆ ಲಿಂಕ್ ಮಾಡುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
ಈ ವರದಿ ಪ್ರಕಟವಾದ ಬೆನ್ನಲ್ಲೇ, ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಯಾದವ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವ್ಯವಸ್ಥಿತವಾದ ತಿರುಗೇಟು ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಬ್ಲೂ-ಟಿಕ್ ಹೊಂದಿರುವ ನೂರಾರು ಖಾತೆಗಳು ಮುಖ್ಯಮಂತ್ರಿಯವರ ರಕ್ಷಣೆಗಾಗಿ ಧಾವಿಸಿವೆ. ಎಕ್ಸ್‌ನಲ್ಲಿ ನಡೆದ ಈ 'ಟೂಲ್‌ಕಿಟ್' ಕಾರ್ಯಾಚರಣೆ ಬಗ್ಗೆ ನ್ಯೂಸ್‌ಲಾಂಡ್ರಿ ಪ್ರಕಟಿಸಿರುವ ವರದಿ ಹೀಗಿದೆ.
ವಿಷಯಾಂತರಕ್ಕೆ ಜಾತಿಯ ಬಳಕೆ
ಉದಾಹರಣೆಗೆ, ಎಕ್ಸ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಬಳಕೆದಾರರೊಬ್ಬರು, "ಮೋಹನ್ ಯಾದವ್ ಅವರೇನು ಬಡವರಲ್ಲ. ಅವರು ಮೊದಲಿನಿಂದಲೂ ಅಪಾರ ಆಸ್ತಿಪಾಸ್ತಿ ಹೊಂದಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿಯವರು ಯಾದವ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು 'ಜಾತಿ ಕಾರ್ಡ್' ಬಳಸಿದ್ದಾರೆಯೇ ಹೊರತು, ವರದಿಯಲ್ಲಿ ಎತ್ತಲಾದ ಅಸಲಿ ವಿಷಯಕ್ಕೆ ಯಾವುದೇ ಉತ್ತರ ನೀಡಿಲ್ಲ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವರು 'ದಿ ಲಲ್ಲನ್‌ಟಾಪ್' ಸಂಸ್ಥಾಪಕ ಹಾಗೂ ಪ್ರಸ್ತುತ ಎಕ್ಸ್‌ಪ್ರೆಸ್‌ನ ಹಿಂದಿ ಡಿಜಿಟಲ್ ಎಡಿಟರ್ ಆಗಿರುವ ಸೌರಭ್ ದ್ವಿವೇದಿ ಅವರು ಈ ಹಿಂದೆ ಮೋಹನ್ ಯಾದವ್ ಅವರ ಉದ್ಯಮಗಳ ಕುರಿತು ನಡೆಸಿದ್ದ ಸಂದರ್ಶನದ ವಿಡಿಯೊ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.
ಇದೇ ವಿಡಿಯೊ ಕ್ಲಿಪ್ ಅನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಸುಮಾರು 57,000 ಫಾಲೋವರ್ಸ್ ಹೊಂದಿರುವ ಮತ್ತೊಬ್ಬ ಬಳಕೆದಾರರು, "ಅಂದು ಸೌರಭ್ ಅವರೇ ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದರು. ಆದರೆ ಇಂದು ಅವರೇ ಮತ್ತೊಂದು ಚಾನೆಲ್‌ನಲ್ಲಿ ಬಂದು ನಿರ್ದಿಷ್ಟ ಜಾಗದ ಬಗ್ಗೆ ಪ್ರಶ್ನೆ ಎತ್ತುತ್ತಾ ಬೇರೆಯದೇ ಮಾತನಾಡುತ್ತಿದ್ದಾರೆ. ಅವರು ಯಾರ ಪರವಾಗಿ, ಯಾವ ಕಾರಣಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂಬುದು ಅವರಿಗೇ ಗೊತ್ತು. ಆದರೆ ಡಾ. ಯಾದವ್ ಅವರು ಶ್ರೀಮಂತ ಕುಟುಂಬಕ್ಕೆ ಸೇರಿದವರು ಮತ್ತು ಅವರು ಮುಖ್ಯಮಂತ್ರಿಯಾದಾಗಿನಿಂದ ಇತರರ ಕಣ್ಣಿಗೆ ಮುಳ್ಳಾಗಿದ್ದಾರೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುತ್ತದೆ" ಎಂದು ಬರೆದಿದ್ದಾರೆ.
ಆದರೆ, ಇಲ್ಲಿ ಬಳಸಲಾದ ವಿಡಿಯೊ ಕ್ಲಿಪ್ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಪ್ರಕಟವಾಗುವುದಕ್ಕಿಂತ ಎರಡು ವರ್ಷಗಳಿಗೂ ಹಳೆಯದಾದ ಯೂಟ್ಯೂಬ್ ಸಂದರ್ಶನದ್ದಾಗಿದೆ. ಇನ್ನು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ತನಿಖಾ ವರದಿಯನ್ನು ಬರೆದದ್ದು ಪತ್ರಕರ್ತ ಜಯ್ ಮಜುಂದಾರ್. ಸೌರಭ್ ದ್ವಿವೇದಿ ಅವರ ಪಾತ್ರ ಕೇವಲ ಆ ವರದಿಯನ್ನು ಆಧರಿಸಿ ಹಿಂದಿಯಲ್ಲಿ ವಿಡಿಯೊ ವಿವರಣೆ ನೀಡುವುದಕ್ಕೆ ಮಾತ್ರ ಸೀಮಿತವಾಗಿತ್ತು.
ಇದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ಕೆಲವು ಬಳಕೆದಾರರು ವರದಿಗಾರ ಜಯ್ ಮಜುಂದಾರ್ ಅವರ ವಿರುದ್ಧ ಜಾತಿ ನಿಂದನೆಯ ವಾದಗಳನ್ನು ಹರಡುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ, ಒಬ್ಬ ಬಳಕೆದಾರರು, "ಈ ವರದಿ ಮಾಡಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಕರ್ತನ ಜಾತಿ ಯಾವುದು ಎಂದು ಮೊದಲು ಪತ್ತೆಹಚ್ಚಬೇಕು. ಆತನ ಜಾತಿಯ ಜನರಿಗೆ ಬಹುಜನ ಸಮುದಾಯದ ಮೇಲೆ ಮೊದಲಿನಿಂದಲೂ ದ್ವೇಷವಿದೆ" ಎಂದು ಬರೆದುಕೊಂಡಿದ್ದಾರೆ.
'ಧರ್ಮದ ಮೇಲಿನ ದಾಳಿ' ಎಂಬ ರಕ್ಷಣಾತ್ಮಕ ವಾದ
ಪ್ರಮುಖ ಬಲಪಂಥೀಯ ಸಾಮಾಜಿಕ ಜಾಲತಾಣ ವಿಶ್ಲೇಷಕ ಮಿಸ್ಟರ್ ಸಿನ್ಹಾ (@MrSinha_) ಅವರು ಎಕ್ಸ್‌ನಲ್ಲಿ, ಈ ಆಸ್ತಿಗಳು "ರಹಸ್ಯವಾಗಿಯೇನೂ ಉಳಿದಿಲ್ಲ ಮತ್ತು ಹೊಸದೂ ಅಲ್ಲ", ಇವುಗಳನ್ನು ರಾಜ್ಯ ಸರ್ಕಾರದ 'ಸಂಪದ' ಆಸ್ತಿ ಆ್ಯಪ್‌ನಲ್ಲಿ ಬಹಿರಂಗವಾಗಿಯೇ ಘೋಷಿಸಲಾಗಿದೆ ಎಂದು ಬರೆದಿದ್ದಾರೆ. "ಮೋಹನ್ ಯಾದವ್ ಮತ್ತು ಅವರ ಕುಟುಂಬ ದಶಕಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದೆ... ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ವರದಿ ಬಂದ ಸಮಯ... ವ್ಯವಸ್ಥಿತ ಜಾಲವೊಂದು ಪ್ರತಿಯೊಂದು ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳನ್ನು ವಿವಾದ ಮತ್ತು ಭ್ರಷ್ಟಾಚಾರದೊಂದಿಗೆ ಜೋಡಿಸುವ ಕಥೆಯನ್ನು ಸೃಷ್ಟಿಸಲು ಸ್ಪಷ್ಟವಾಗಿ ಪ್ರಯತ್ನಿಸುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
ಬ್ಲೂ-ಟಿಕ್ ಹೊಂದಿರುವ ಇಂತಹ ಖಾತೆಗಳು ರಿಯಲ್ ಎಸ್ಟೇಟ್ ವಿಷಯದಿಂದ ತಕ್ಷಣವೇ ಧಾರ್ಮಿಕ ಭಾವನೆಗಳ ಕಡೆಗೆ ಹೇಗೆ ತಿರುವು ಪಡೆದುಕೊಳ್ಳುತ್ತವೆ ಎಂಬುದನ್ನು ಒಮ್ಮೆ ಗಮನಿಸಿ. ಉಜ್ಜಯಿನಿಯ ಪ್ರಸಿದ್ಧ ಮಹಾಕಾಲ್ ದೇವಸ್ಥಾನದ ಹೆಸರನ್ನು ಇಲ್ಲಿಗೆ ಎಳೆದುತರುವ ಮೂಲಕ, ಸಿಎಂ ಕುಟುಂಬವು ಸರ್ಕಾರಿ ಯೋಜನೆಗಳಿಂದ ಲಾಭ ಪಡೆಯುತ್ತಿದೆ ಎಂಬ ವರದಿಯನ್ನು ಸಿನ್ಹಾ ಅವರು 'ಹಿಂದೂ ವಿರೋಧಿ' ಪಿತೂರಿಯಾಗಿ ಪರಿವರ್ತಿಸಿದರು.
ಇದೇ ರೀತಿಯ ವಾದಗಳನ್ನು ಮತ್ತೊಂದು ಪ್ರಮುಖ ಖಾತೆಯಾದ 'ಸ್ಟ್ರಿಂಗ್ ರಿವೀಲ್ಸ್' (@StringReveals) ಕೂಡ ಮಾಡಿದೆ. "ಮತ್ತೊಂದು ದಿನ, ಕಾಂಗ್ರೆಸ್‌ನಿಂದ ಸೃಷ್ಟಿಸಲ್ಪಟ್ಟ ಮತ್ತೊಂದು ಸುಳ್ಳು ಕಥೆ... ಈ ಚರ್ಚೆಯಲ್ಲಿ ಮಹಾಕಾಲ್ ಹೆಸರನ್ನು ಎಳೆದುತರುವ ಮೂಲಕ ಮತ್ತು ಅಯೋಧ್ಯೆಯೊಂದಿಗೆ ಹೋಲಿಕೆ ಮಾಡುವ ಮೂಲಕ, ಪ್ರಮುಖ ಹಿಂದೂ ಯಾತ್ರಾ ಸ್ಥಳಗಳನ್ನು ವಿವಾದ ಹಾಗೂ ಭ್ರಷ್ಟಾಚಾರಕ್ಕೆ ಲಿಂಕ್ ಮಾಡಲು ಸ್ಪಷ್ಟ ಪ್ರಯತ್ನ ನಡೆಯುತ್ತಿದೆ."
ಇದರ ಬೆನ್ನಲ್ಲೇ 'ಸ್ಟ್ರಿಂಗ್ ರಿವೀಲ್ಸ್' ಖಾತೆಯು, ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ನಡೆಸಲಾಗುವ ಇಂತಹ ದಾಳಿಗಳಲ್ಲಿ ಹೆಚ್ಚಾಗಿ ಬಳಸುವ ಮತ್ತೊಂದು ಅಸ್ತ್ರವನ್ನು ಪ್ರಯೋಗಿಸಿತು. ಅದೇ ‘ವಾಟ್‌ಅಬೌಟಿಸಮ್’ (Whataboutism) — ಅಂದರೆ ತನ್ನ ಮೇಲಿನ ತಪ್ಪನ್ನು ಮುಚ್ಚಿಕೊಳ್ಳಲು ಇತರರ ತಪ್ಪುಗಳನ್ನು ಎತ್ತಿ ತೋರಿಸುವುದು. "ಈಗ ಅಸಲಿ ವಿಚಾರಗಳನ್ನು ಮಾತನಾಡೋಣ. ಕಮಲ್ ನಾಥ್ — ಸುಮಾರು 800 ಕೋಟಿ ರೂ. ಆಸ್ತಿ, 100ಕ್ಕೂ ಹೆಚ್ಚು ಎಕರೆ ಭೂಮಿ. ಆದರೂ ಯಾರೂ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ" ಎಂದು ಬರೆದುಕೊಂಡಿದೆ. ಆದರೆ, ಅಧಿಕಾರದಲ್ಲಿರುವ ಮುಖ್ಯಮಂತ್ರಿಯ ಕುಟುಂಬದವರು ಸರ್ಕಾರ ಹೊಸದಾಗಿ ಘೋಷಿಸಿದ ರಸ್ತೆ ಯೋಜನೆಗಳ ಪಕ್ಕದಲ್ಲೇ ಜಮೀನು ಖರೀದಿಸುತ್ತಿದ್ದಾರೆ ಎಂಬ ಅಸಲಿ ಸತ್ಯವನ್ನು ಇದು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಇದೇ ಸಮಯದಲ್ಲಿ, ರಿಷಿ ಬಾಗ್ರಿ ಎಂಬ ಮತ್ತೊಬ್ಬ ಬಳಕೆದಾರರು ತಮ್ಮ ಒಂದೇ ಒಂದು ಟ್ವೀಟ್‌ನಲ್ಲಿ ಇವೆಲ್ಲಾ ವಾದಗಳನ್ನು ಒಟ್ಟಿಗೆ ಜೋಡಿಸಿ ದಾಳಿ ನಡೆಸಿದ್ದಾರೆ.
'ಟೂಲ್‌ಕಿಟ್' ಕೋರಸ್
ಕಡಿಮೆ ಅವಧಿಯಲ್ಲಿ ನೂರಾರು ಖಾತೆಗಳು ಒಂದೇ ರೀತಿಯ ಪದಗಳನ್ನು ಬಳಸಲು ಪ್ರಾರಂಭಿಸಿದಾಗ, ಆ ವ್ಯವಸ್ಥಿತ ಸಂಘಟನೆ ಅಷ್ಟು ಸುಲಭವಾಗಿ ಅಡಗಿಕೊಳ್ಳಲು ಸಾಧ್ಯವಿಲ್ಲ. ಮೇಘ್ ಅಪ್‌ಡೇಟ್ಸ್ (@MeghUpdates), ದೇಶಿ ಮೊಜಿತೊ (@desimojito) ಮತ್ತು ಭಿಕು ಮ್ಹಾತ್ರೆ (@BhikuMhatre) ರಂತಹ ಅಧಿಕ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಪ್ರಮುಖ ಖಾತೆಗಳು ಆಡಳಿತ ಪಕ್ಷದ ನೆಚ್ಚಿನ ಪದವಾದ "ಟೂಲ್‌ಕಿಟ್" ಅನ್ನು ಅಸ್ತ್ರವಾಗಿ ಹೊರತೆಗೆದವು.
ದೇಶಿ ಮೊಜಿತೊ ಖಾತೆಯು ಹೀಗೆ ಬರೆದುಕೊಂಡಿದೆ: "ಸುಳ್ಳು ಸುದ್ದಿಗಳೊಂದಿಗೆ ಟೂಲ್‌ಕಿಟ್ ಸಕ್ರಿಯಗೊಂಡಿದೆ... ಇಂದು ಬೆಳಗ್ಗಿನಿಂದ ಅನೇಕ ಎಡಪಂಥೀಯ ಖಾತೆಗಳು ಒಂದೇ ರೀತಿಯ ಚಿತ್ರವನ್ನು ಪೋಸ್ಟ್ ಮಾಡುತ್ತಿರುವುದನ್ನು ನೋಡಿದೆ. ಕಾರಣ ಇಷ್ಟೇ: ಉಜ್ಜಯಿನಿಯು ಹಿಂದೆಂದೂ ಕಾಣದ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ ಮತ್ತು ಐತಿಹಾಸಿಕ 'ಸಿಂಹಸ್ಥ 2028' (ಕುಂಭಮೇಳ)ಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಈ ವ್ಯವಸ್ಥಿತ ಜಾಲವು ಗಾಬರಿಗೊಂಡಿದೆ."
ಭಿಕು ಮ್ಹಾತ್ರೆ ಕೂಡ ಇದೇ ಧಾಟಿಯಲ್ಲಿ ಧ್ವನಿಗೂಡಿಸಿದ್ದಾರೆ: "ಸುಳ್ಳು ಸುದ್ದಿಗಳ ಟೂಲ್‌ಕಿಟ್ ಮತ್ತೆ ಸಕ್ರಿಯಗೊಂಡಿದೆ 🚨... ಮಧ್ಯಪ್ರದೇಶದಲ್ಲಿ ಸಂಪುಟ ಮರುರಚನೆ ಪ್ರಕ್ರಿಯೆ ನಡೆಯುತ್ತಿದೆ. ನೆಲದ ಮೇಲಿನ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗದ ಅವರು, ಈಗ ಮಾಧ್ಯಮಗಳ ಮೂಲಕ ವಿಚಾರಣೆ ನಡೆಸುತ್ತಿದ್ದಾರೆ."
ತಮ್ಮ ರಕ್ಷಣಾತ್ಮಕ ಗೋಡೆಯನ್ನು ಮತ್ತಷ್ಟು ಭದ್ರಪಡಿಸಲು, ಈ ಬ್ಲೂ-ಟಿಕ್ ಖಾತೆಗಳು ಮಾರ್ಚ್ 2024ರ ಹಳೆಯ ವಿಡಿಯೊ ಕ್ಲಿಪ್ ಅನ್ನು, ಅಂದರೆ ಸೌರಭ್ ದ್ವಿವೇದಿ ಅವರು ಮೋಹನ್ ಯಾದವ್ ಅವರನ್ನು ಸಂದರ್ಶಿಸಿದ ದೃಶ್ಯಗಳನ್ನು, ಶೇರ್ ಮಾಡಲು ಪ್ರಾರಂಭಿಸಿದವು. 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯು ಸಂಪೂರ್ಣವಾಗಿ ವ್ಯರ್ಥ ಮತ್ತು ನಕಲಿ ಎಂಬುದಕ್ಕೆ ಈ ಹಳೆಯ ಸಂದರ್ಶನವೇ ಪರಮ 'ಸಾಕ್ಷಿ' ಎನ್ನುವಂತೆ ಈ ಟ್ರೋಲ್ ಪಡೆಗಳು ಬಳಸಿಕೊಂಡವು.
ದೊಡ್ಡ ದೊಡ್ಡ ಖಾತೆಗಳು ತಮ್ಮದೇ ಆದ ವಾದಗಳನ್ನು ಮಂಡಿಸಿದರೆ, ತಳಮಟ್ಟದ ಖಾತೆಗಳಲ್ಲಂತೂ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಗಿತ್ತು.
#FactsOverPropaganda ಹ್ಯಾಶ್‌ಟ್ಯಾಗ್‌ನ ಹೈಜಾಕ್
ತನಿಖಾ ವರದಿಯು ಎತ್ತಿದ್ದ ಪ್ರಮುಖ ಪ್ರಶ್ನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಭೂ ವ್ಯವಹಾರಗಳನ್ನು ಸಮರ್ಥಿಸಿಕೊಳ್ಳಲು ನಾನಾ ರೀತಿಯ ಕಟ್ಟುಕಥೆಗಳನ್ನು ಹೆಣೆಯಲಾಯಿತು. ಆದರೆ ವಿಷಯ ಅಲ್ಲಿಗೇ ನಿಲ್ಲಲಿಲ್ಲ. ಕೆಲವು ಜನರು ಈ ತರ್ಕಹೀನ ವಾದಗಳಿಗೆ ಸೂಕ್ತ ಪುರಾವೆಗಳನ್ನು ನೀಡಲು ಪ್ರಯತ್ನಿಸಿದಾಗ, ಅಂದರೆ #FactsOverPropaganda (ಪ್ರಚಾರಕ್ಕಿಂತ ಸತ್ಯವೇ ಮೇಲು) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದಾಗ, ಮುಖ್ಯಮಂತ್ರಿಯ ಬೆಂಬಲಿಗರು ಮತ್ತೊಮ್ಮೆ ಮಧ್ಯಪ್ರವೇಶಿಸಿದರು. ಇಲ್ಲಿ, ಸಿಎಂ ಅವರ ಭೂ ವ್ಯವಹಾರಗಳ ಸಮರ್ಥನೆಯು ಅವರ ಅಧಿಕೃತ ಜವಾಬ್ದಾರಿಗಳು ಮತ್ತು ಅವರು ರಾಜ್ಯಕ್ಕಾಗಿ ಮಾಡಿದ ಕೆಲಸಗಳ ಕಡೆಗೆ ತಿರುವು ಪಡೆದುಕೊಂಡಿತು.
ಉದಾಹರಣೆಗೆ, ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, “ಡಾ. ಮೋಹನ್ ಯಾದವ್ ಸರ್ಕಾರದ ಒಂದು ದೊಡ್ಡ ನಡೆ. 16,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಧ್ಯಪ್ರದೇಶದಲ್ಲಿ ಹೊಸ ಯುಗ ಆರಂಭವಾಗುತ್ತಿದೆ. ಇದು 'ವಿಕಸಿತ ಭಾರತ' 2047ರ ರೋಡ್‌ಮ್ಯಾಪ್ ಅನ್ನು ಸಾಕಾರಗೊಳಿಸಲಿದೆ.”
ಆ ಬಳಕೆದಾರರು ಸಿಎಂ ಮೋಹನ್ ಯಾದವ್ ಅವರ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ, #FactsOverPropaganda ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದರು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಆ ಪೋಸ್ಟ್‌ನೊಂದಿಗೆ ಅವರು ಹಂಚಿಕೊಂಡಿದ್ದ ಗ್ರಾಫಿಕ್ ಚಿತ್ರವು ಮಧ್ಯಪ್ರದೇಶ ಸರ್ಕಾರವು ಪಶುಪಾಲಕರಿಗಾಗಿ ತೆಗೆದುಕೊಂಡ ನಿರ್ಧಾರಗಳ ಮೇಲೆ ಕೇಂದ್ರೀಕರಿಸಿತ್ತು!
ಅದೇ ರೀತಿ, ಮತ್ತೊಬ್ಬ ಮಹಿಳಾ ಬಳಕೆದಾರರು, “ಪರಿಸರ ಸಂರಕ್ಷಣೆಗಾಗಿ ಡಾ. ಮೋಹನ್ ಯಾದವ್ ಸರ್ಕಾರದ ಬ್ಲೂ-ಗ್ರೀನ್ ಡೆವಲಪ್‌ಮೆಂಟ್ ಪಾಲಿಸಿ. ನರ್ಮದಾ ನದಿ ತೀರ ಮತ್ತು ಅರಣ್ಯ ಪ್ರದೇಶಗಳ ಬಳಿ ನಿರ್ಮಾಣ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಇರಲಿದೆ” ಎಂದು ಬರೆದಿದ್ದಾರೆ. ಇವರೂ ಸಹ ಸಿಎಂ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ #FactsOverPropaganda ಹ್ಯಾಶ್‌ಟ್ಯಾಗ್ ಬಳಸಿದ್ದರು. ಆದರೆ, ಅವರ ಟ್ವೀಟ್ ಪರಿಸರಕ್ಕೆ ಸಂಬಂಧಿಸಿದ್ದರೆ, ಅವರು ಹಂಚಿಕೊಂಡ ಗ್ರಾಫಿಕ್ ಚಿತ್ರವು ಮಧ್ಯಪ್ರದೇಶ ಸರ್ಕಾರದ ಪ್ರಯತ್ನಗಳಿಂದಾಗಿ ರಾಜ್ಯದಲ್ಲಿ ನವಜಾತ ಶಿಶುಗಳು ಮತ್ತು ತಾಯಂದಿರ ಆರೋಗ್ಯ ಸೂಚಕಗಳು ಹೇಗೆ ಸುಧಾರಿಸುತ್ತಿವೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು!
ಹಾಗೆಯೇ, ಇನ್ನೊಬ್ಬ ಬಳಕೆದಾರರು, “ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ನೇತೃತ್ವದಲ್ಲಿ ಯುಐಎಂಆರ್ ಯೋಜನೆಯು ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯುತ್ತಿದೆ. 6 ಜಿಲ್ಲೆಗಳು, 38 ತಹಸಿಲ್‌ಗಳು ಮತ್ತು 2,781 ಹಳ್ಳಿಗಳಿಗೆ ಆಧುನಿಕ ಸೌಲಭ್ಯಗಳನ್ನು ತಂದುಕೊಡುವ ಮೂಲಕ 1.25 ಕೋಟಿ ಜನರ ಜೀವನವನ್ನು ಬದಲಾಯಿಸುವ ಗುರಿ ಶ್ಲಾಘನೀಯ” ಎಂದು ಬರೆದಿದ್ದಾರೆ. ಇವರ ಟ್ವೀಟ್ ಕೂಡ ಹ್ಯಾಶ್‌ಟ್ಯಾಗ್‌ಗಳನ್ನು ಒಳಗೊಂಡಿತ್ತು ಮತ್ತು ಸಿಎಂ ಅವರನ್ನು ಟ್ಯಾಗ್ ಮಾಡಿತ್ತು. ಆದರೆ ಜೊತೆಯಲ್ಲಿದ್ದ ಗ್ರಾಫಿಕ್ ಚಿತ್ರ ಮಾತ್ರ ಸಂಪೂರ್ಣವಾಗಿ ತಪ್ಪಾಗಿತ್ತು. ಅವರು ಹಂಚಿಕೊಂಡ ಗ್ರಾಫಿಕ್ ಪ್ರಕಾರ, ಮಧ್ಯಪ್ರದೇಶ ಬಜೆಟ್‌ನಲ್ಲಿ 4,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದ್ದು, ಮೇ 2026ರ ವೇಳೆಗೆ 83 ಲಕ್ಷ ಮನೆಗಳಿಗೆ ನಲ್ಲಿ ನೀರು ತಲುಪಿದೆ ಎಂದು ತಿಳಿಸಲಾಗಿತ್ತು.
ಇದೇ ರೀತಿ, #FactsOverPropaganda ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಇಂತಹ ನೂರಾರು ಪೋಸ್ಟ್‌ಗಳನ್ನು ಕಾಣಬಹುದು. ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಅವರ ಸರ್ಕಾರವು ಮಧ್ಯಪ್ರದೇಶದ ಅಭಿವೃದ್ಧಿಗಾಗಿ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ ಎಂದು ಬಿಂಬಿಸುವುದೇ ಈ ಪೋಸ್ಟ್‌ಗಳ ಏಕೈಕ ಮತ್ತು ಸ್ಪಷ್ಟ ಉದ್ದೇಶವಾಗಿತ್ತು.
ತಮ್ಮ ವಾದಗಳನ್ನು ಬಲಪಡಿಸಲು, ಕೆಲವರು ಪ್ರಸ್ತಾವಿತ 'ಉಜ್ಜಯಿನಿ-ಇಂದೋರ್ ಮೆಟ್ರೋಪಾಲಿಟನ್ ರೀಜನ್' ಯೋಜನೆಯನ್ನು ಉಲ್ಲೇಖಿಸಿದ್ದಾರೆ. ಇದು ಇಂದೋರ್, ಉಜ್ಜಯಿನಿ, ದೇವಾಸ್, ಧಾರ್, ಶಾಜಾಪುರ ಮತ್ತು ರತ್ಲಾಮ್ ಜಿಲ್ಲೆಗಳ ಒಟ್ಟು 38 ತಹಸಿಲ್‌ಗಳು ಹಾಗೂ 2,781 ಹಳ್ಳಿಗಳನ್ನು ಒಳಗೊಂಡ ಸುಮಾರು 16,000 ಚದರ ಕಿಲೋಮೀಟರ್ ವಿಸ್ತೀರ್ಣದ ಬೃಹತ್ ಮೆಟ್ರೋಪಾಲಿಟನ್ ಪ್ರದೇಶಕ್ಕಾಗಿ ಮಧ್ಯಪ್ರದೇಶ ಸರ್ಕಾರ ಸಿದ್ಧಪಡಿಸಿರುವ ಒಂದು ಪ್ರಸ್ತಾವನೆಯಾಗಿದೆ.
ವಿಪರ್ಯಾಸವೆಂದರೆ, ಯಾದವ್ ಮತ್ತು ಅವರ ಕುಟುಂಬದ ಭೂ ವ್ಯವಹಾರಗಳು ಪ್ರಮುಖವಾಗಿ ಹೊಸ ಯೋಜನೆಗಳನ್ನು ಘೋಷಿಸಲಾದ, ಘೋಷಣೆಯಾಗಲಿರುವ ಅಥವಾ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲೇ ಕೇಂದ್ರೀಕೃತವಾಗಿವೆ ಎಂಬುದನ್ನು ಎಕ್ಸ್‌ಪ್ರೆಸ್ ವರದಿಯು ಸ್ಪಷ್ಟವಾಗಿ ಹೇಳಿದೆ. ಇದು ಭೂಮಿ ಖರೀದಿಸಿ ಲಾಭ ಗಳಿಸಲು ಈ ಆಂತರಿಕ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆಯೇ? ಎಂಬ ನೇರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದರೆ, ಈ ವ್ಯವಹಾರಗಳು ಯುಐಎಂಆರ್ ಯೋಜನೆಯ ನಿರ್ದಿಷ್ಟ ವ್ಯಾಪ್ತಿಯೊಳಗೆ ಬರುತ್ತವೆಯೇ ಇಲ್ಲವೇ ಎಂಬುದನ್ನು ನಮ್ಮ ಸಂಸ್ಥೆಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ನ್ಯೂಸ್‌ಲಾಂಡ್ರಿ ವರದಿ ಹೇಳಿದೆ.
ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿರುವ ಇನ್‌ಫ್ಲುಯೆನ್ಸರ್‌ಗಳು, ವಿಶೇಷವಾಗಿ ಹಿಂದುತ್ವ ಪರ ಒಲವು ಹೊಂದಿರುವವರೆಲ್ಲರೂ ಮಧ್ಯಪ್ರದೇಶ ಮುಖ್ಯಮಂತ್ರಿಯವರ ಪರವಾಗಿ ನಡೆದ ಈ ವ್ಯವಸ್ಥಿತ ಸಾಮಾಜಿಕ ಜಾಲತಾಣದ ರಕ್ಷಣಾತ್ಮಕ ವಾದವನ್ನು ಒಪ್ಪಿಕೊಳ್ಳುತ್ತಿಲ್ಲ.
ಉದಾಹರಣೆಗೆ, ಅಜೀತ್ ಭಾರತಿ ಅವರು ಈ ಕುರಿತು ಹೀಗೆ ಹೇಳಿದ್ದಾರೆ:
ಒಟ್ಟಾರೆಯಾಗಿ ಹೇಳುವುದಾದರೆ, ಎಕ್ಸ್‌ಪ್ರೆಸ್ ವರದಿಯ ವಿರುದ್ಧ ವ್ಯಕ್ತವಾದ ಈ ತೀವ್ರ ತಿರುಗೇಟು ಅದಕ್ಕೆ ನೀಡಿದ ಸೂಕ್ತ ಪ್ರತ್ಯುತ್ತರ ಆಗಿರಲಿಲ್ಲ. ಬದಲಿಗೆ, ಅದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಅಸಲಿ ವಿಷಯವನ್ನು ಹಳ್ಳಹಿಡಿಯಲು ನಡೆಸಿದ ಒಂದು ವ್ಯವಸ್ಥಿತ ಜಂಟಿ ಪ್ರಯತ್ನವಾಗಿತ್ತು.