ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಆಪ್ತ, 'ಅಂಕಲ್ ಸೈ' ಎಂದೇ ಖ್ಯಾತರಾಗಿದ್ದ ಸೈ ಚೀ ಯಾರು?
►ಅಭಿಷೇಕ್ ಡೇ – indiatoday. in ವರದಿ
Photo Credit : indiatoday.in
ಬ್ರಿಕ್ಸ್ (BRICS) ಶೃಂಗಸಭೆಗಾಗಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಭಾರತಕ್ಕೆ ಬಂದಿಳಿದಾಗ, ಅವರೊಂದಿಗೆ ಎತ್ತರದ, ಬೆಳ್ಳಿ ಕೂದಲಿನ ಅಧಿಕಾರಿಯೊಬ್ಬರಿದ್ದರು. ಅವರೇ Cai Qi (ಉಚ್ಚಾರಣೆ: ಸೈ ಚೀ). ಚೀನಾದ ಎರಡನೇ ಅತ್ಯಂತ ಶಕ್ತಿಶಾಲಿ ನಾಯಕ ಹಾಗೂ ಷಿ ಅವರ ಬಲಗೈ ಬಂಟ ಎಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಇವರು, ಕಮ್ಯುನಿಸ್ಟ್ ಪಕ್ಷದ ಶ್ರೇಣಿಗಳಲ್ಲಿ ಅಸಾಧಾರಣ ಹಾಗೂ ವೇಗದ ಏರಿಕೆಯನ್ನು ಕಂಡಿದ್ದಾರೆ. ಗಡಿ ಘರ್ಷಣೆಗಳ ನಂತರ ಭಾರತದೊಂದಿಗೆ ಸಂಬಂಧವನ್ನು ಮರುಸ್ಥಾಪಿಸಲು ಚೀನಾ ಬಯಸುತ್ತಿರುವ ಈ ಸಂದರ್ಭದಲ್ಲಿ, ಷಿ ಅವರ ಜೊತೆ ಸೈ ಚೀ ಉಪಸ್ಥಿತರಿರುವುದು ಈ ಭೇಟಿಗೆ ಚೀನಾ ನೀಡುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಷಿ ಅವರ ಜೊತೆಗಿನ ನಿಯೋಗದಲ್ಲಿ ಕಮ್ಯುನಿಸ್ಟ್ ಪಕ್ಷದ ಪೊಲಿಟ್ಬ್ಯುರೊದ ಸ್ಥಾಯಿ ಸಮಿತಿಯ ಸದಸ್ಯರಾದ ಸೈ ಚೀ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಇದ್ದಾರೆ ಎಂದು ಚೀನಾ ತಿಳಿಸಿದೆ. ಕಳೆದ ಸುಮಾರು ಏಳು ವರ್ಷಗಳಲ್ಲಿ ಷಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅದೇ ವೇಳೆ, ತೆರೆಮರೆಯಲ್ಲಿ ಕೆಲಸ ಮಾಡಲು ಹೆಸರುವಾಸಿಯಾದ ಪ್ರಭಾವಿ ವ್ಯಕ್ತಿ ಸೈ ಚೀ ಅವರ ಉಪಸ್ಥಿತಿಯು ಸಾಕಷ್ಟು ಕುತೂಹಲ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸೈ ಚೀ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗಾಗಿ ಟಿಯಾಂಜಿನ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಅವರು ಸಭೆ ನಡೆಸಿದ್ದರು. 2025ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಷಿ-ಟ್ರಂಪ್ ಭೇಟಿಯಲ್ಲೂ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದಾಗ, ಅಮೆರಿಕ ಅಧ್ಯಕ್ಷರ ಕೈಕುಲುಕಿದ ಮೊದಲ ವ್ಯಕ್ತಿ ಸೈ ಚೀ. ಇವು ಚಿಕ್ಕ ಸನ್ನೆಗಳಾಗಿರಬಹುದು, ಆದರೆ ಷಿ ಅವರ ದೃಷ್ಟಿಯಲ್ಲಿ ಸೈ ಚೀ ಅವರ ಸ್ಥಾನ ಏನು ಎಂಬುದನ್ನು ಈ ದೃಶ್ಯಗಳು ಬಹಿರಂಗಪಡಿಸುತ್ತವೆ.
ಚೀನಾದ ಪ್ರಭಾವಿ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಸೈ ಚೀ ಮೇಲಿನ ಹಠಾತ್ ಗಮನವು ಚೀನಾದ ಪ್ರಭಾವಿ ರಾಜಕಾರಣಿಗಳ ಬಗ್ಗೆ ಮತ್ತು ಬೀಜಿಂಗ್ ತನ್ನ ಮುಂದಿನ ಹಾದಿಯನ್ನು ಹೇಗೆ ರೂಪಿಸಿಕೊಳ್ಳಲು ಯೋಜಿಸುತ್ತಿದೆ ಎಂಬುದರ ಬಗ್ಗೆ ಮುನ್ನೋಟ ನೀಡುತ್ತದೆ.
►ಚೀನಾದ ಸೈ ಚೀ ಯಾರು?
ಸೈ ಚೀ ಅವರು ತಮ್ಮ ಕ್ಷಿಪ್ರ ಹಾಗೂ ಅನಿರೀಕ್ಷಿತ ಬಡ್ತಿಯ ಮೂಲಕ ಮೊದಲ ಬಾರಿಗೆ ಮಾಧ್ಯಮಗಳ ಗಮನ ಸೆಳೆದರು. 2017ರಲ್ಲಿ ಸೈ ಅವರನ್ನು ನೇರವಾಗಿ ಪೊಲಿಟ್ ಬ್ಯುರೊಗೆ (ಪಕ್ಷದ ಎರಡನೇ ಅತ್ಯಂತ ಉನ್ನತ ನಿರ್ಧಾರಕ ಮಂಡಳಿ) ಸೇರಿಸಿಕೊಳ್ಳಲಾಯಿತು. ರಾಜಧಾನಿಯ ಅತ್ಯಂತ ಹಿರಿಯ ಅಧಿಕಾರಿಯಾದ ಬೀಜಿಂಗ್ ನ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಈ ಉನ್ನತ ಹುದ್ದೆ ಅವರಿಗೆ ಲಭಿಸಿತು.
ಈ ಬಡ್ತಿಯು ಅವರು ಬೀಜಿಂಗ್ನ ಮೇಯರ್ ಆಗಿ ಕೇವಲ ಕೆಲವೇ ತಿಂಗಳುಗಳು ಸೇವೆ ಸಲ್ಲಿಸಿದ ನಂತರ ಸಿಕ್ಕಿತು. ಇಂತಹ ಬದಲಾವಣೆಯು ಸಾಮಾನ್ಯವಾಗಿ ಕನಿಷ್ಠ ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮೂಲತಃ, ಅವರು ಕೇಂದ್ರ ಸಮಿತಿಯ ಕೆಳ ಹಂತಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಅವಶ್ಯಕತೆ ಬರಲಿಲ್ಲ.
2022ರಲ್ಲಿ, ಅವರು ಪಕ್ಷದ ಏಳು ಜನರ ಪೊಲಿಟ್ ಬ್ಯುರೊ ಸ್ಥಾಯಿ ಸಮಿತಿಯ ಭಾಗವಾದರು. ಇದು ಚೀನಾದ ರಾಜಕೀಯ ಅಧಿಕಾರದ ಉತ್ತುಂಗವಾಗಿದೆ.
ಈ ವರ್ಷದ ಆರಂಭದಲ್ಲಿ, 70 ವರ್ಷ ವಯಸ್ಸಿನ ಸೈ ಅವರನ್ನು ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ ಶಾಲೆಯ ಮುಖ್ಯಸ್ಥರಾಗಿ ನೇಮಿಸಲಾಯಿತು. ಇದು ಹೊಸ ಅಧಿಕಾರಿಗಳಿಗೆ ತರಬೇತಿ ನೀಡುವ ಮತ್ತು ಪಕ್ಷದ ಸಿದ್ಧಾಂತವನ್ನು ರೂಪಿಸುವ ಪ್ರತಿಷ್ಠಿತ ಅಕಾಡೆಮಿಯಾಗಿದೆ. ಇದರ ಜೊತೆಗೆ, ಅವರು ಪಕ್ಷದ ಸಾಮಾನ್ಯ ಕಚೇರಿಯ ಮುಖ್ಯಸ್ಥರಾಗಿಯೂ ನೇತೃತ್ವ ವಹಿಸಿದ್ದು, ಇದು ಅವರನ್ನು ಷಿ ಅವರ ಪ್ರಮುಖ ಮುಖ್ಯಸ್ಥರನ್ನಾಗಿ ಮಾಡಿದೆ.
ಈ ಹುದ್ದೆಗಳು ಒಬ್ಬ ಅಧಿಕಾರಿಯಡಿಯಲ್ಲಿ ಅಧಿಕಾರವು ಅಪರೂಪವಾಗಿ ಕೇಂದ್ರೀಕೃತವಾಗಿರುವುದನ್ನು ಸೂಚಿಸುತ್ತವೆ. ಇದು ಷಿ ಅವರ ಅತ್ಯಂತ ಆಪ್ತ ಹಾಗೂ ನಂಬಿಕಸ್ಥ ಬಂಟರಲ್ಲಿ ಒಬ್ಬರಾಗಿ ಸೈ ಅವರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.
►ಸೈ ಚೀ ಅವರು ಷಿ ಅವರ ನಂಬಿಕಸ್ಥ ಜನರಲ್ ಆಗಿದ್ದು ಹೇಗೆ?
ಇದನ್ನು ಅರ್ಥಮಾಡಿಕೊಳ್ಳಲು ನಾವು ಅವರ ಆರಂಭಿಕ ದಿನಗಳ ಬಗ್ಗೆ ಹೇಳಬೇಕಾಗುತ್ತದೆ. ಇವರಿಬ್ಬರೂ ಒಂದೇ ರೀತಿಯ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ.
ಸೈ ಹಾಗೂ ಷಿ ಇಬ್ಬರೂ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಕಾರ್ಮಿಕ-ರೈತ-ಸೈನಿಕ ವಿದ್ಯಾರ್ಥಿಗಳಾಗಿ ತಮ್ಮ ಜೀವನ ಆರಂಭಿಸಿದರು. ನಂತರ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಒಟ್ಟಿಗೆ ಕೆಲಸ ಮಾಡಿದರು. ಇಬ್ಬರೂ ಕರಾವಳಿ ಪ್ರಾಂತ್ಯಗಳಾದ ಫುಜಿಯನ್ ಮತ್ತು ಝೆಜಿಯಾಂಗ್ ನಲ್ಲಿ ಸೇವೆ ಸಲ್ಲಿಸಿದರು. ಅಲ್ಲಿಯೇ ಅವರ ಗೆಳೆತನ ಬೆಳೆಯಿತು.
ಸೈ ಅವರ ಈ ವೇಗದ ಬಡ್ತಿ ಹುಬ್ಬೇರಿಸುವಂತೆ ಮಾಡಿದೆ. ವಿಶೇಷವಾಗಿ, ಅವರು ಹಿಂದೆ ಮುಕ್ತ ಅಭಿಪ್ರಾಯಗಳಿಗೆ ಮತ್ತು ಪಾರದರ್ಶಕ ಆಡಳಿತದ ಬೆಂಬಲಕ್ಕೆ ಹೆಸರುವಾಸಿಯಾಗಿದ್ದರು. ದಿ ಗಾರ್ಡಿಯನ್ ವರದಿಯ ಪ್ರಕಾರ, ಚೀನಾದಲ್ಲಿ ಫೇಸ್ಬುಕ್ ನಿರ್ಬಂಧಿಸಿರುವುದರ ಬಗ್ಗೆ ಅವರು ಹಿಂದೆ ಒಮ್ಮೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ಲಂಡನ್ನ ಕಿಂಗ್ಸ್ ಕಾಲೇಜಿನ ಲೌ ಚೀನಾ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಕೆರ್ರಿ ಬ್ರೌನ್ ದಿ ಗಾರ್ಡಿಯನ್ ಪತ್ರಿಕೆ ಜತೆ ಮಾತನಾಡಿ, "ಸೈ ಬಹಳ ಲೆಕ್ಕಾಚಾರದವರು, ಸ್ಪಷ್ಟವಾಗಿ ಕಾರ್ಯತಂತ್ರ ರೂಪಿಸುವವರು ಮತ್ತು ಉನ್ನತ ಮಟ್ಟದ ಆಪರೇಟರ್" ಎಂದು ಹೇಳಿದ್ದಾರೆ.
►'ಅಂಕಲ್ ಸೈ'ನಿಂದ ಸೈ ಚೀ ವರೆಗೆ
ತನ್ನ ವೃತ್ತಿಜೀವನದ ಆರಂಭದಲ್ಲಿ ಸೈ ಅವರು ಚೀನಾದ ಟ್ವಿಟರ್ ಎಂದೇ ಕರೆಯಲಾಗುವ ವೀಬೊದಲ್ಲಿ (Weibo) ಜನಪ್ರಿಯ ವ್ಯಕ್ತಿಯಾಗಿದ್ದರು. ಅಲ್ಲಿ ಅವರು 'ಅಂಕಲ್ ಸೈ' ಎಂಬ ಗುಪ್ತ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ಅವರು ನಾಗರಿಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದ್ದರು. ಆದರೆ, 2014ರಲ್ಲಿ ಪ್ರಮುಖ ಕೇಂದ್ರ ಪಕ್ಷದ ಹುದ್ದೆಗೆ ನೇಮಕಗೊಂಡ ನಂತರ ಆ ಎಲ್ಲವೂ ಬದಲಾಯಿತು. ಅವರು ತಮ್ಮ ವೀಬೊ ಖಾತೆಯನ್ನೂ ಡಿಲೀಟ್ ಮಾಡಿದರು.
ಅವರು ತಮ್ಮ 'ಅಂಕಲ್ ಸೈ' ವ್ಯಕ್ತಿತ್ವವನ್ನು ತೊರೆದು ಆಡಳಿತದಲ್ಲಿ ಹೆಚ್ಚು ಕಠಿಣವಾದ ವಿಧಾನವನ್ನು ಅಳವಡಿಸಿಕೊಂಡರು. ಬೀಜಿಂಗ್ನಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಕುರಿತು ಅಧಿಕಾರಿಗಳಿಗೆ ಅವರು ನೀಡಿದ ಪ್ರಚೋದನಕಾರಿ ಭಾಷಣವು ನಗರದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು ಮತ್ತು ಅವರು ರಾಜೀನಾಮೆ ನೀಡಬೇಕೆಂಬ ಒತ್ತಡವೂ ಕೇಳಿಬಂದಿತ್ತು.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, "ತಳಮಟ್ಟದಲ್ಲಿ ಇದು ನಿಜವಾದ ಕತ್ತಿ, ಗನ್ ಬಳಸುವುದು, ಕತ್ತಿಯ ಅಲಗಿಗೆ ರಕ್ತ ಹತ್ತುವಂತೆ ಮಾಡುವುದು ಮತ್ತು ನೇರ ಮುಖಾಮುಖಿಯಾಗುವ ಧೈರ್ಯವನ್ನು ಹೊಂದುವುದಾಗಿದೆ" ಎಂದು ಸೈ ಅಧಿಕಾರಿಗಳಿಗೆ ತಿಳಿಸಿದ್ದರು.
ಪೊಲಿಟ್ ಬ್ಯುರೊ ಪಾತ್ರದಲ್ಲಿ ಸೈ ಅವರು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೀತಿಗಳ ಅನುಷ್ಠಾನದ ನೇತೃತ್ವ ವಹಿಸಿದ್ದಾರೆ. ಅವರು ಸೈಬರ್ ಭದ್ರತಾ ನೀತಿಯ ಮೇಲ್ವಿಚಾರಣೆಯನ್ನು ಸಹ ನೋಡಿಕೊಳ್ಳುತ್ತಾರೆ ಮತ್ತು ದೇಶ ಹಾಗೂ ವಿದೇಶಗಳಲ್ಲಿನ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುವ ರಹಸ್ಯ ಸಂಸ್ಥೆಯಾದ ರಾಷ್ಟ್ರೀಯ ಭದ್ರತಾ ಆಯೋಗದ ಉಪ ಮುಖ್ಯಸ್ಥರಾಗಿದ್ದಾರೆ.
ಚೀನಾದ ವರದಿಯೊಂದರ ಪ್ರಕಾರ, ಮಾವೋ ಆಡಳಿತದಲ್ಲಿದ್ದ "ಮಹಾನ್ ಕಾರ್ಯದರ್ಶಿ" ವಾಂಗ್ ಡಾಂಗ್ಜಿಂಗ್ ಕೂಡ ಸೈ ಈಗ ಹೊಂದಿರುವಷ್ಟು ಅಧಿಕಾರವನ್ನು ಹೊಂದಿರಲಿಲ್ಲ.
ಜೋ ಬೈಡನ್ ಆಡಳಿತದ ಭಾಗವಾಗಿದ್ದ ಜೂಲಿಯನ್ ಗೆವಿರ್ಟ್ಜ್ ನ್ಯೂಯಾರ್ಕ್ ಟೈಮ್ಸ್ ಜತೆ ಮಾತನಾಡಿದ್ದು, "ಷಿ ಪರವಾಗಿ ಮಾತನಾಡುವ ಸಾಮರ್ಥ್ಯವು ಚೀನಾದಲ್ಲಿ ಅತ್ಯಂತ ದುರ್ಲಭವಾದ ಸಂಪತ್ತಾಗಿದೆ ಮತ್ತು ಸೈ ಚೀ ಅದನ್ನು ಹೊಂದಿದ್ದಾರೆ" ಎಂದಿದ್ದಾರೆ.
ಸದ್ಯಕ್ಕೆ ಎಲ್ಲರ ಕಣ್ಣುಗಳು ಸೈ ಮೇಲಿವೆ. ಮುಂದಿನ ವರ್ಷ ಷಿ ಅವರು ಮತ್ತೊಂದು ಐದು ವರ್ಷಗಳ ಅವಧಿಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದು ಅವರ ಆಡಳಿತವನ್ನು ಕನಿಷ್ಠ 20 ವರ್ಷಗಳವರೆಗೆ ಮತ್ತು ಬಹುಶಃ 2030ರ ದಶಕದವರೆಗೆ ವಿಸ್ತರಿಸಲಿದೆ. ಚೀನಾದ ಈ ಪ್ರಭಾವಿ ಅಧಿಕಾರಿಯು ಈಗ ಬಾಂಧವ್ಯ ಸುಧಾರಣೆಯ ಹಾದಿಯಲ್ಲಿ ಭಾರತಕ್ಕೆ ತಮ್ಮ ಮೊದಲ ಭೇಟಿ ನೀಡುತ್ತಿರುವುದರಿಂದ, ವಿವಾದಗಳನ್ನು ಬದಿಗಿಟ್ಟು ಭಾರತದೊಂದಿಗೆ ಸಂಬಂಧವನ್ನು ಗಾಢವಾಗಿಸಲು ಬೀಜಿಂಗ್ ಸಿದ್ಧವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
ಸೌಜನ್ಯ: indiatoday.in