ಮಾರ್ಚ್-ಜುಲೈ ನಡುವೆ ಸೋಷಿಯಲ್ ಮೀಡಿಯಾಗಳಿಗೆ ನಿಮಿಷಕ್ಕೊಂದು ಬ್ಲಾಕಿಂಗ್ ಆದೇಶ ಕಳುಹಿಸಿದ ಕೇಂದ್ರ ಸರ್ಕಾರ; ವರದಿ
Photo Credit : indianexpress.com
ಸರಾಸರಿ ಪ್ರತಿ 68 ಸೆಕೆಂಡಿಗೆ ಒಂದು ಬ್ಲಾಕಿಂಗ್ ಆದೇಶ. ದಿನಕ್ಕೆ ಸುಮಾರು 1,275. ಕೇವಲ ಐದು ತಿಂಗಳಲ್ಲಿ ಒಟ್ಟು 1.95 ಲಕ್ಷಕ್ಕೂ ಹೆಚ್ಚು.
'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪಡೆದುಕೊಂಡಿರುವ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮಾರ್ಚ್ ಮತ್ತು ಜುಲೈ ನಡುವೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗೆ ಆನ್‌ಲೈನ್ ವಿಷಯಗಳನ್ನು ತಡೆಯುವಂತೆ ಸರ್ಕಾರ ಕಳುಹಿಸಿದ ನಿರ್ದೇಶನಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ವಿಶೇಷವೆಂದರೆ, ಈ ಅವಧಿಯಲ್ಲಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯೂ ಸೇರಿತ್ತು. ಜೂನ್ ಆರಂಭದಲ್ಲಿ ಪ್ರಾರಂಭವಾದ ಈ ಪ್ರತಿಭಟನೆಯು ಜುಲೈ 25 ರಂದು ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಮುಕ್ತಾಯಗೊಂಡಿತ್ತು.
ಈ ಹೆಚ್ಚಳದ ಪ್ರಮಾಣವನ್ನು ಗಮನಿಸುವುದಾದರೆ, ಕಳೆದ ವರ್ಷ ಪಡೆದ ಆರ್‌ಟಿಐ ದಾಖಲೆಗಳ ಪ್ರಕಾರ, 2024 ಅಕ್ಟೋಬರ್ ನಿಂದ 2025 ಅಕ್ಟೋಬರ್ ನಡುವೆ ಸಹಯೋಗ್ ಪೋರ್ಟಲ್ ಮೂಲಕ 19 ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಒಟ್ಟು 2,312 ಬ್ಲಾಕಿಂಗ್ ಆದೇಶಗಳನ್ನು ಕಳುಹಿಸಲಾಗಿತ್ತು. ಅಂದರೆ ದಿನಕ್ಕೆ ಸರಾಸರಿ ಆರರಷ್ಟು ಆದೇಶಗಳು ಬಂದಿದ್ದವು.
ತಿಂಗಳವಾರು ವಿವರ ಲಭ್ಯವಿಲ್ಲದಿದ್ದರೂ, ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಸಮಯದಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಷಯಗಳನ್ನು ತಡೆಯಲು ಹೆಚ್ಚಿನ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮೂರು ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ಗೆ ಅತಿ ಹೆಚ್ಚಿನ ಸಂಖ್ಯೆಯ ನಿರ್ದೇಶನಗಳು ಬಂದಿವೆ. ಐದು ತಿಂಗಳ ಅವಧಿಯಲ್ಲಿ ಬಂದ ಒಟ್ಟು ಆದೇಶಗಳಲ್ಲಿ ಅರ್ಧದಷ್ಟು, ಅಂದರೆ ಸುಮಾರು 1 ಲಕ್ಷ ಬ್ಲಾಕಿಂಗ್ ಆದೇಶಗಳು ಇನ್‌ಸ್ಟಾಗ್ರಾಮ್‌ಗೆ ತಲುಪಿವೆ.
ಜಾಗತಿಕವಾಗಿ ಬಳಕೆದಾರರ ಬೆಳವಣಿಗೆಯಲ್ಲಿ ಕುಸಿತ ಕಂಡಿರುವ ಫೇಸ್‌ಬುಕ್ ಸುಮಾರು 80,000 ಆದೇಶಗಳನ್ನು ಪಡೆದಿದ್ದರೆ, ಯೂಟ್ಯೂಬ್‌ಗೆ ಸುಮಾರು 15,000 ಆದೇಶಗಳು ಬಂದಿವೆ.
ಒಟ್ಟಾರೆಯಾಗಿ ಮೆಟಾ ಸಂಸ್ಥೆಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳು ಈ ಮೂರು ಕಂಪನಿಗಳಿಗೆ ನೀಡಲಾದ ಒಟ್ಟು ಆದೇಶಗಳಲ್ಲಿ ಶೇಕಡಾ 90 ರಷ್ಟು ನಿರ್ದೇಶನಗಳನ್ನು ಪಡೆದುಕೊಂಡಿವೆ.
ಈ ಅಂಕಿ-ಅಂಶಗಳು ಬ್ಲಾಕಿಂಗ್ ಆದೇಶಗಳ ಸಂಖ್ಯೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಆದೇಶವೂ ನೂರಾರು ಪ್ರತ್ಯೇಕ ಕಂಟೆಂಟ್‌ಗಳು ಅಥವಾ ಖಾತೆಗಳನ್ನು ಒಳಗೊಂಡಿರಬಹುದು. ಇವುಗಳಲ್ಲಿ ಹೆಚ್ಚಿನ ಆದೇಶಗಳನ್ನು ಗೃಹ ಸಚಿವಾಲಯದ 'ಸಹಯೋಗ್' ಪೋರ್ಟಲ್ ಮೂಲಕ ವಿವಿಧ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಹೊರಡಿಸಿವೆ. ಆನ್‌ಲೈನ್ ವಿಷಯಗಳನ್ನು ತಡೆಯುವ ನೋಟಿಸ್ ಕಳುಹಿಸಲೆಂದೇ ಈ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ.
ಗೃಹ ಸಚಿವಾಲಯದ 2024-25ರ ವಾರ್ಷಿಕ ವರದಿಯ ಪ್ರಕಾರ, 2025 ಮಾರ್ಚ್ ವರೆಗಿನ ಇಡೀ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ, ಸಹಯೋಗ್ ಪೋರ್ಟಲ್ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ 1.11 ಲಕ್ಷಕ್ಕೂ ಹೆಚ್ಚು "ಸಂದೇಹಾಸ್ಪದ ಆನ್‌ಲೈನ್ ವಿಷಯಗಳನ್ನು" ತಡೆಯಲಾಗಿತ್ತು.
ಬ್ಲಾಕಿಂಗ್ ಆದೇಶಗಳ ಪ್ರಮಾಣವು ಕಥೆಯ ಒಂದು ಭಾಗ ಮಾತ್ರವಾದರೆ, ಮೆಟಾ ಸಂಸ್ಥೆಯ ಸ್ಪಂದನೆ ಇನ್ನೊಂದು ಪ್ರಮುಖ ಭಾಗವಾಗಿದೆ.
ಸರ್ಕಾರ ವಿಧಿಸಿರುವ ಮೂರು ಗಂಟೆಗಳ ಒಳಗಿನ ನಿಯಮಕ್ಕೆ ಬದ್ಧವಾಗಿರಲು, ಮೆಟಾ ತನ್ನ ಎಪಿಐ (API) ವ್ಯವಸ್ಥೆಯನ್ನು 'ಸಹಯೋಗ್' ಪೋರ್ಟಲ್‌ನೊಂದಿಗೆ ಜೋಡಿಸಿದೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಇದರಿಂದಾಗಿ ಪೋರ್ಟಲ್‌ನಲ್ಲಿ ಸರ್ಕಾರಿ ಸಂಸ್ಥೆಗಳು ಅಪ್‌ಲೋಡ್ ಮಾಡುವ ವಿಷಯಗಳು ಕಂಪನಿಯ ಪ್ರತ್ಯೇಕ ಮಾನವ ಪರಿಶೀಲನೆ ಇಲ್ಲದೆ ಮೆಟಾ ಪ್ಲಾಟ್‌ಫಾರ್ಮ್‌ಗಳಿಂದ ಸ್ವಯಂಚಾಲಿತವಾಗಿ ತೆರವಾಗುತ್ತವೆ.
ಈ ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ, ಸರ್ಕಾರ ಕಳುಹಿಸುವ ಆದೇಶಗಳನ್ನು ಪಾಲಿಸುವ ಮುನ್ನ ಅವುಗಳನ್ನು ಪರಿಶೀಲಿಸುವ ಅಥವಾ ಪ್ರಶ್ನಿಸುವ ಅವಕಾಶ ಮೆಟಾಗೆ ಇಲ್ಲದಂತಾಗಿದೆ.
ಸಾಮಾಜಿಕ ಮಾಧ್ಯಮದ ಬಳಕೆದಾರರು ಹಂಚಿಕೊಂಡ ಮಾಹಿತಿಯಂತೆ, ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ಈ ಸೆನ್ಸಾರ್‌ಶಿಪ್ ಕಾರ್ಯಾಚರಣೆಯು ಮುಖ್ಯವಾಗಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ಪೋಸ್ಟ್‌ಗಳು, ಸರ್ಕಾರದ ಎಥನಾಲ್ ಇಂಧನ ಮಿಶ್ರಣ ನೀತಿಯ ಟೀಕೆ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ವಿಷಯಗಳು ಹಾಗೂ ಡಿಪ್‌ಫೇಕ್‌ಗಳನ್ನು ಗುರಿಯಾಗಿಸಿಕೊಂಡಂತೆ ಕಂಡುಬಂದಿದೆ.
ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ತಮ್ಮ ಕೆಲವು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾನೂನುಬದ್ಧ ಆದೇಶದ ಬಗ್ಗೆ ಅಧಿಕೃತ ಮಾಹಿತ ಸಿಕ್ಕಾಗ ಮಾತ್ರ ಕಂಪನಿಗಳು ಕಂಟೆಂಟ್ ತೆರವುಗೊಳಿಸಬೇಕು ಎಂಬ ನಿಯಮವಿದೆ. ಆದರೆ ಮೆಟಾ ಅಳವಡಿಸಿಕೊಂಡಿರುವ ಈ ಸ್ವಯಂಚಾಲಿತ ವ್ಯವಸ್ಥೆಯು ಅಪಾಯಕಾರಿ ಎಂದು ಡಿಜಿಟಲ್ ಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
"ಸ್ವಯಂಚಾಲಿತವಾಗಿ ತೆರವುಗೊಳಿಸುವ ಎಪಿಐ ವ್ಯವಸ್ಥೆಗೆ ಯಾವುದೇ ಜ್ಞಾನವಿರುವುದಿಲ್ಲ. ಮೆಟಾದಲ್ಲಿ ಯಾರೂ ಈ ಆದೇಶವನ್ನು ಓದುವುದಿಲ್ಲ. ಈ ಆದೇಶವು ನಿಗದಿತ ದರ್ಜೆಯ ಅಧಿಕಾರಿಯಿಂದ ಬಂದಿದೆಯೇ ಅಥವಾ ತಿದ್ದುಪಡಿ ಮಾಡಿದ ನಿಯಮದಂತೆ ಕಾರಣಗಳನ್ನು ನಿರ್ದಿಷ್ಟಪಡಿಸಿದೆಯೇ ಎಂದೂ ಯಾರೂ ಪರಿಶೀಲಿಸುವುದಿಲ್ಲ. ಈ ಯಂತ್ರ ಆಧಾರಿತ ಕಾರ್ಯಗತಗೊಳಿಸುವಿಕೆಯು ಷರತ್ತುಬದ್ಧ ಕಾನೂನು ಜವಾಬ್ದಾರಿಯನ್ನು ಸಂಪೂರ್ಣ ಅಧೀನತೆಯಾಗಿ ಬದಲಾಯಿಸುತ್ತದೆ" ಎಂದು ದೆಹಲಿ ಮೂಲದ ಇಂಟರ್ನೆಟ್ ಫ್ರೀಡಂ ಫೌಂಡೇಶನ್‌ನ ಸಂಸ್ಥಾಪಕ ನಿರ್ದೇಶಕ ಹಾಗೂ ವಕೀಲ ಅಪಾರ್ ಗುಪ್ತಾ ಹೇಳಿದ್ದಾರೆ.
ಮೂರೂ ಸೋಷಿಯಲ್ ಮೀಡಿಯಾ ಕಂಪನಿಗಳು ಭಾಗಿಯಾಗಿರುವ ಗೃಹ ಸಚಿವಾಲಯದ 'ಸಹಯೋಗ್' ಪೋರ್ಟಲ್ ಮೂಲಕ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ 2000ರ ಸೆಕ್ಷನ್ 79(3)(ಬಿ) ಅಡಿಯಲ್ಲಿ ಇಂತಹ ಹಲವು ಆದೇಶಗಳನ್ನು ಹೊರಡಿಸಲಾಗಿದೆ. ಬಳಕೆದಾರರ ಪೋಸ್ಟ್‌ಗಳಿಂದ ತಮಗೆ ಸಿಗುವ ಕಾನೂನಾತ್ಮಕ ರಕ್ಷಣೆಯನ್ನು ಕಾಯ್ದುಕೊಳ್ಳಲು, ವಿವಿಧ ಸರ್ಕಾರಿ ಮತ್ತು ಕಾನೂನು ಜಾರಿ ಸಂಸ್ಥೆಗಳು ಕಾನೂನುಬಾಹಿರ ಎಂದು ಗುರುತಿಸುವ ಪೋಸ್ಟ್‌ಗಳನ್ನು ಪ್ಲಾಟ್‌ಫಾರ್ಮ್‌ಗಳು ತೆರವುಗೊಳಿಸಬೇಕಾಗುತ್ತದೆ.
ಆದರೆ, ಈ ಬ್ಲಾಕಿಂಗ್ ಆದೇಶಗಳು ಐಟಿ ಕಾಯ್ದೆಯ ಸೆಕ್ಷನ್ 69(ಎ) ಅಡಿಯಲ್ಲಿ ಸರ್ಕಾರ ಹೊರಡಿಸುವ ಆದೇಶಗಳಿಗಿಂತ ವಿಭಿನ್ನವಾಗಿವೆ. ಸೆಕ್ಷನ್ 69(ಎ) ಅನ್ನು ಹೆಚ್ಚಾಗಿ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಮಾತ್ರ ಬಳಸಲಾಗುತ್ತದೆ.
ಭಾರತದಲ್ಲಿ 60 ಕೋಟಿಗೂ ಹೆಚ್ಚು ಸೋಷಿಯಲ್ ಮೀಡಿಯಾ ಬಳಕೆದಾರರಿದ್ದಾರೆ. ಅಗ್ರ ತಂತ್ರಜ್ಞಾನ ಕಂಪನಿಗಳಿಗೆ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ, ಪ್ರತಿದಿನ ಅಂದಾಜು 1 ಕೋಟಿಯಿಂದ 10 ಕೋಟಿಯಷ್ಟು ಪೋಸ್ಟ್‌ಗಳನ್ನು ಹಾಕಲಾಗುತ್ತದೆ.
ಅಂದಹಾಗೆ ಸೋಷಿಯಲ್ ಮೀಡಿಯಾದಲ್ಲಿ ಬರುವ ಪೋಸ್ಟ್‌ಗಳ ಸಂಖ್ಯೆಯು ಸರ್ಕಾರ ನೀಡುವ ಬ್ಲಾಕಿಂಗ್ ನೋಟಿಸ್‌ಗಳಿಗೆ ಸದಾ ನೇರ ಪ್ರಮಾಣದಲ್ಲಿರಬೇಕಿಲ್ಲ.
ಉದಾಹರಣೆಗೆ, ಮೆಟಾದ ಇತ್ತೀಚಿನ ಪಾರದರ್ಶಕತೆ ವರದಿಯ ಪ್ರಕಾರ, ಜುಲೈ-ಡಿಸೆಂಬರ್ ನಡುವೆ, ಭಾರತಕ್ಕಿಂತ ಮೂರನೇ ಒಂದರಷ್ಟು ಕಡಿಮೆ ಬಳಕೆದಾರರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಕಂಪನಿಯು 2.3 ಕೋಟಿಗೂ ಹೆಚ್ಚು ವಿಷಯಗಳನ್ನು ತೆರವುಗೊಳಿಸಿದೆ. ಅದೇ ಅವಧಿಯಲ್ಲಿ ಭಾರತದಲ್ಲಿ 41,000 ಕ್ಕೂ ಹೆಚ್ಚು ವಿಷಯಗಳನ್ನು ತೆಗೆದುಹಾಕಲಾಗಿದೆ.
2025 ಜನವರಿ-ಜೂನ್ ತಿಂಗಳುಗಳ ನಡುವೆ ಬ್ಲಾಕ್ ಮಾಡಲಾದ 28,000 ವಿಷಯಗಳಿಗೆ ಹೋಲಿಸಿದರೆ ಈ ಸಂಖ್ಯೆ ದುಪ್ಪಟ್ಟಾಗಿದೆ.
ಸರ್ಕಾರಗಳು ಮತ್ತು ನ್ಯಾಯಾಲಯಗಳ ಕಾನೂನುಬದ್ಧ ಕೋರಿಕೆಯಂತೆ ವಿಷಯಗಳನ್ನು ಬ್ಲಾಕ್ ಮಾಡಿದಾಗ, ಹೆಚ್ಚಿನ ಪ್ರಕರಣಗಳಲ್ಲಿ ಯಾವ ಸರ್ಕಾರಿ ಸಂಸ್ಥೆ ಈ ಕೋರಿಕೆ ಕಳುಹಿಸಿದೆ ಎಂಬುದನ್ನು ಬಳಕೆದಾರರಿಗೆ ತಿಳಿಸುವುದಾಗಿ ಮೆಟಾ ಹೇಳುತ್ತದೆ. ಆದರೆ "ಕಾನೂನು ಬಾಧ್ಯತೆಗಳು ಮತ್ತು ನಿಯಂತ್ರಕ ಕಾರಣಗಳಿಂದ" ಭಾರತ ಮತ್ತು ಕೆಲವು ಇತರ ಮಾರುಕಟ್ಟೆಗಳಲ್ಲಿ ಈ ಮಾಹಿತಿಯನ್ನು ನೀಡುವುದಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮೆಟಾ ಮತ್ತು ಗೂಗಲ್ ಸಂಸ್ಥೆಗಳಿಗೆ ಕಳುಹಿಸಿದ ಪ್ರಶ್ನೆಗಳಿಗೆ ಈ ವರದಿ ಪ್ರಕಟವಾಗುವವರೆಗೂ ಯಾವುದೇ ಉತ್ತರ ಬಂದಿಲ್ಲ. ಗೃಹ ಸಚಿವಾಲಯ ಮತ್ತು ಐಟಿ ಸಚಿವಾಲಯಗಳೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ..
ಸರ್ಕಾರದ ಬ್ಲಾಕಿಂಗ್ ಆದೇಶಗಳನ್ನು ಪಾಲಿಸಲು ಕಂಪನಿಗಳು ಹೆಚ್ಚು ಆಸಕ್ತಿ ತೋರುತ್ತಿರುವುದಕ್ಕೆ ಕಾನೂನಿನ ಕಟ್ಟುನಿಟ್ಟಿನ ನಿಯಮವೂ ಪ್ರಮುಖ ಕಾರಣ ಎಂದು ಉದ್ಯಮದ ತಜ್ಞರು ಹೇಳುತ್ತಾರೆ.
ಫೆಬ್ರವರಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021' ಕ್ಕೆ ತಿದ್ದುಪಡಿಗಳನ್ನು ತಂದಿದೆ. ಇದರ ಪ್ರಕಾರ, ಹಿಂದೆ ನೀಡಲಾಗುತ್ತಿದ್ದ 24 ರಿಂದ 36 ಗಂಟೆಗಳ ಕಾಲಾವಕಾಶದ ಬದಲಿಗೆ, ಕೇವಲ 2 ರಿಂದ 3 ಗಂಟೆಗಳ ಒಳಗೆ ಕಂಟೆಂಟ್ ತೆರವುಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೃಪೆ: indianexpress.com