Jharkhand | ಉದ್ಯೋಗ ಕಳೆದುಕೊಳ್ಳುವ ಆತಂಕ: ‘ಬಯಸಿದರೆ ನನ್ನನ್ನು ಬಿಟ್ಟು ಹೋಗಬಹುದು’ ಎಂದು ಪತ್ನಿಗೆ ಹೇಳಿದ ಅಭ್ಯರ್ಥಿ!
►ಪರೀಕ್ಷೆ ರದ್ದತಿಯಿಂದ ಈಗಾಗಲೇ ಕೆಲಸ ಪಡೆದ 1,975 ಅಭ್ಯರ್ಥಿಗಳಿಗೆ ಭೀತಿ ►ಸೋಮು ಆನಂದ್, ಹರಿಬಂಶ್ ಶರ್ಮಾ – ndtv. com ವರದಿ
Photo Credit : NDTV
ರಾಂಚಿ: ಜಾರ್ಖಂಡ್ ಸರಕಾರ JSSC-CGL–2024 ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಸೋಮವಾರ ಘೋಷಿಸಿದೆ. ಈ ಪರೀಕ್ಷೆಯಲ್ಲಿನ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ, ಖಾಸಗಿ ಸಂಸ್ಥೆ TDPL ನಡೆಸಿದ ಇತರ ರಾಜ್ಯ ಸರಕಾರಿ ನೇಮಕಾತಿ ಪರೀಕ್ಷೆಗಳನ್ನೂ ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ.
ಈ ನಿರ್ಧಾರದಿಂದ JSSC-CGL ಪರೀಕ್ಷೆಯಲ್ಲಿ ಆಯ್ಕೆಯಾಗಿ ಈಗಾಗಲೇ ಸರಕಾರಿ ಉದ್ಯೋಗಕ್ಕೆ ಸೇರಿರುವ ಸುಮಾರು 2,000 ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಉದ್ಯೋಗ ಉಳಿಸಿಕೊಳ್ಳುವಂತೆ ಒತ್ತಾಯಿಸಿ ಅವರು ಪ್ರತಿಭಟನೆ ಆರಂಭಿಸಿದ್ದಾರೆ.
ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ JSSC-CGL ಮತ್ತು TDPL ನಡೆಸಿದ ಇತರ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಸರಕಾರ ಸೋಮವಾರ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಇದರಿಂದ ಒಂದು ಕಡೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮೂಡಿದರೆ, ಮತ್ತೊಂದೆಡೆ JSSC-CGL–2024ರಲ್ಲಿ ಆಯ್ಕೆಯಾಗಿದ್ದ 1,975 ಅಭ್ಯರ್ಥಿಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ರಾಂಚಿಯ ಜಾರ್ಖಂಡ್ ಸಚಿವಾಲಯದ ಹೊರಗೆ ಮಂಗಳವಾರ ಭಾರಿ ಮಳೆಯ ನಡುವೆಯೂ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
‘ಮುಖ್ಯಮಂತ್ರಿಯೇ ನೇಮಕಾತಿ ಪತ್ರ ನೀಡಿದ್ದರು; ಈಗ ಅವರೇ ನನ್ನ ಉದ್ಯೋಗ ಕಸಿದುಕೊಂಡಿದ್ದಾರೆ’ ಎಂದು ರಘುವೇಂದ್ರ ಹೇಳಿದರು. ಛತ್ರ ನಿವಾಸಿಯಾದ ಅವರು CGL ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು.
ಇದಕ್ಕೂ ಮೊದಲು ಅವರು ಗಯಾದಲ್ಲಿ ಶಿಕ್ಷಕರಾಗಿ ಸಮಾಜ ವಿಜ್ಞಾನ ಬೋಧಿಸುತ್ತಿದ್ದರು. CGL ನೇಮಕಾತಿ ಫಲಿತಾಂಶ ಪ್ರಕಟವಾದಾಗ ಹೊಸ ಉದ್ಯೋಗಕ್ಕೆ ಸೇರುವ ಬಗ್ಗೆ ಅವರಿಗೆ ಆತಂಕವಿತ್ತು. ಆದರೆ 2026ರ ಜನವರಿ 5ರಂದು ನೇಮಕಾತಿ ರದ್ದುಗೊಳಿಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ, ಜನವರಿ 8ರಂದು ಗಯಾದ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಸಚಿವಾಲಯದ ಉದ್ಯೋಗಕ್ಕೆ ಸೇರಿದ್ದರು.
‘ಈಗ ನಾನು ಮತ್ತೆ ಸರಕಾರಿ ನೇಮಕಾತಿ ಪರೀಕ್ಷೆ ಬರೆಯುವ ವಯಸ್ಸಿನ ಮಿತಿಯನ್ನೂ ದಾಟಿದ್ದೇನೆ. ಸರಕಾರ ಮೊದಲೇ ನೇಮಕಾತಿ ರದ್ದುಗೊಳಿಸಿದ್ದರೆ ನಾನು ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಇಲ್ಲಿಗೆ ಬರುತ್ತಿರಲಿಲ್ಲ. ಈಗ ನನಗೆ ಏನೂ ಉಳಿದಿಲ್ಲ—ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
►ಕಚೇರಿಗೆ ಪ್ರವೇಶ ನಿರಾಕರಣೆ
ಕೊಡೆರ್ಮಾ ನಿವಾಸಿ ಸಂದೀಪ್ ಯಾದವ್ ಅವರು ವಿಜಿಲೆನ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರಾಜೆಕ್ಟ್ ಭವನದಲ್ಲಿರುವ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಮಂಗಳವಾರ ಅವರಿಗೆ ಅದೇ ಕಚೇರಿಗೆ ಪ್ರವೇಶ ನಿರಾಕರಿಸಲಾಯಿತು.
‘ಭದ್ರತಾ ಸಿಬ್ಬಂದಿ ನನ್ನ ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಹೋಗಲು ಅವಕಾಶವಿಲ್ಲ ಎಂದು ಹೇಳಿದರು. ಕಳೆದ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಕೆಲಸಕ್ಕೆ ಸೇರಿದ್ದೆ. ಯಾರ ಶಿಫಾರಸು ಅಥವಾ ಪ್ರಭಾವದಿಂದಲೂ ನನಗೆ ಕೆಲಸ ಸಿಕ್ಕಿರಲಿಲ್ಲ. ಆದರೆ ಇಂದು ನನ್ನನ್ನೇ ಕಚೇರಿಯೊಳಗೆ ಬಿಡುತ್ತಿಲ್ಲ. ಜನರ ಒತ್ತಡಕ್ಕೆ ಮಣಿದು ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಸಂದೀಪ್ ಹೇಳಿದರು.
ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿರುವ ಸಂದೀಪ್, ಉದ್ಯೋಗ ಕಳೆದುಕೊಂಡರೆ ಅದರ ಪರಿಣಾಮ ತಮ್ಮ ದಾಂಪತ್ಯದ ಮೇಲೂ ಬೀರುವ ಆತಂಕ ವ್ಯಕ್ತಪಡಿಸಿದರು.
‘ಮನೆಗೆ ಹೋದಾಗ ಪತ್ನಿಗೆ, “ನನಗೆ ಕೆಲಸವಿತ್ತು ಎಂಬ ಕಾರಣಕ್ಕೆ ನೀನು ನನ್ನನ್ನು ಮದುವೆಯಾಗಿದ್ದೆ. ಈಗ ನನಗೆ ಕೆಲಸವೇ ಇಲ್ಲ. ಬಯಸಿದರೆ ಈ ಸಂಬಂಧವನ್ನು ಕೊನೆಗೊಳಿಸಬಹುದು” ಎಂದು ಹೇಳಿದೆ’ ಎಂದು ಅವರು ತಿಳಿಸಿದರು.
►‘ನಾವು ಯಾರನ್ನು ನಂಬಬೇಕು?’
ದಿಯೋಘರ್ ನ ಲಾಲನ್ ಪಾಂಡೆ ಅವರನ್ನು ಸಹಾಯಕ ಸೆಕ್ಷನ್ ಅಧಿಕಾರಿ (ASO) ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಅವರನ್ನು ಜಮ್ಶೆಡ್ಪುರದಲ್ಲಿ ನಿಯೋಜಿಸಲಾಗಿತ್ತು. ತಂದೆ–ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಅವರೊಬ್ಬರೇ ಮುಖ್ಯ ಜೀವನಾಧಾರ.
‘ಹೊಸ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ವಯಸ್ಸು ಈಗ ನನಗೆ ಮೀರಿದೆ. ನನಗೆ ಚಿಕ್ಕ ಮಕ್ಕಳಿದ್ದಾರೆ. ಅವರ ಶಿಕ್ಷಣದ ಗತಿ ಏನು? ಇದು ನಮ್ಮ ವಿರುದ್ಧ ನಡೆದಿರುವ ಘೋರ ಅನ್ಯಾಯ. ಸರಕಾರ ನಮ್ಮ ಮೇಲೆ ಗುಂಡು ಹಾರಿಸಿದ್ದರೆ ಬಹುಶಃ ಅದೇ ಉತ್ತಮವಾಗಿರುತ್ತಿತ್ತು’ ಎಂದು ಅವರು ನೋವು ತೋಡಿಕೊಂಡರು.
ಗುಂಜನ್ ಸಿಂಗ್ ಕೂಡ ಇದೇ ರೀತಿಯ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಉದ್ಯೋಗ ಕಸಿದುಕೊಂಡಿರುವುದರಿಂದ ನಮ್ಮ ಜೀವನವೇ ಹಾಳಾಗಿದೆ. ನಾನು ಈ ಹಿಂದೆ ಅಸನ್ಸೋಲ್ ರೈಲ್ವೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕುಟುಂಬದವರೊಂದಿಗೆ ಇರಬೇಕು ಎಂಬ ಕಾರಣಕ್ಕೆ ಆ ಕೆಲಸ ಬಿಟ್ಟು ಜಾರ್ಖಂಡ್ನ ಈ ಉದ್ಯೋಗಕ್ಕೆ ಸೇರಿದ್ದೆ. ಈಗ ಈ ಉದ್ಯೋಗವೂ ಕಳೆದುಹೋದರೆ ನಮ್ಮ ಪರಿಸ್ಥಿತಿ ಏನಾಗಬೇಕು?’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ರೀತಿಯ ತನಿಖೆಗೆ ತಾವು ಸಿದ್ಧರಿದ್ದು, ನಾರ್ಕೊ ಪರೀಕ್ಷೆಗೂ ಒಳಗಾಗಲು ಸಿದ್ಧ ಎಂದು ಗುಂಜನ್ ಹೇಳಿದರು.
‘ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಾವು ನಮ್ಮ ಕೆಲಸಕ್ಕೆ ಸೇರಿದ್ದೆವು. ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದಾಗ ನನಗೆ ನಂಬಲಾಗಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ನೇಮಕಾತಿ ರದ್ದಾಗುವುದಾದರೆ ನಾವು ಯಾರನ್ನು ನಂಬಬೇಕು?’ ಎಂದು ಅವರು ಪ್ರಶ್ನಿಸಿದರು.
►ಆರಂಭದಿಂದಲೇ ವಿವಾದ
JSSC-CGL–2024ರ ನೇಮಕಾತಿ ಪ್ರಕ್ರಿಯೆ ಆರಂಭದಿಂದಲೇ ವಿವಾದದಲ್ಲಿತ್ತು. 2024ರ ಜನವರಿಯಲ್ಲಿ ಮೊದಲ ಬಾರಿಗೆ ಪರೀಕ್ಷೆ ನಡೆಸಿದಾಗ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಲಾಗಿತ್ತು.
ನಂತರ ಆಯೋಗವು ಸೆಪ್ಟೆಂಬರ್ ನಲ್ಲಿ ಮರು ಪರೀಕ್ಷೆ ನಡೆಸಿತು. ಆದರೆ ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.
CID ತನಿಖೆಯ ಪ್ರಕಾರ, ಪರೀಕ್ಷೆಗೂ ಮುನ್ನ ಕೆಲವು ಅಭ್ಯರ್ಥಿಗಳನ್ನು ಹಜಾರಿಬಾಗ್, ಬೊಕಾರೊ, ಅಸನ್ಸೋಲ್ ಮತ್ತು ನೇಪಾಳ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷೆಯಲ್ಲಿ ಕೇಳಲಾಗುವ 150 ಪ್ರಶ್ನೆಗಳ ಪೈಕಿ 120 ಪ್ರಶ್ನೆಗಳ ಉತ್ತರಗಳನ್ನು ಮೊದಲೇ ಅವರಿಗೆ ಕಂಠಪಾಠ ಮಾಡಿಸಲಾಗಿತ್ತು ಎಂಬ ಆರೋಪವಿದೆ. ಈ ಆರೋಪದ ಕುರಿತು ಜಾರ್ಖಂಡ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದ್ದು, FIR ಕೂಡ ದಾಖಲಿಸಲಾಗಿದೆ.
2025ರ ಡಿಸೆಂಬರ್ ನಲ್ಲಿ ಅನುಮಾನಾಸ್ಪದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ನೇಮಕಾತಿ ಪತ್ರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. 2026ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೂಡ ನೇಮಕಾತಿ ರದ್ದುಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಿತ್ತು.
ಈ ಎರಡೂ ನ್ಯಾಯಾಲಯಗಳ ತೀರ್ಪುಗಳನ್ನು ಈಗ ಆಯ್ಕೆಯಾದ 1,975 ಅಭ್ಯರ್ಥಿಗಳು ಉಲ್ಲೇಖಿಸುತ್ತಿದ್ದಾರೆ.
►‘ಅವರ ವಿರುದ್ಧ ನಮಗೆ ದ್ವೇಷವಿಲ್ಲ’
ಪರೀಕ್ಷೆ ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳ ನಿಲುವಿನ ಕುರಿತು ಪ್ರಿನ್ಸ್ ಎಂಬ ಅಭ್ಯರ್ಥಿ, ‘ನಮಗೆ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಅವರು ನಮ್ಮ ಕಿರಿಯ ಅಥವಾ ಹಿರಿಯ ಸಹೋದರರಿದ್ದಂತೆ. ಇದು ಅದೃಷ್ಟ, ಪರಿಶ್ರಮ ಮತ್ತು ಅವಕಾಶದ ವಿಚಾರ. ಅವರಿಗೂ ಯಾವುದೋ ಒಂದು ದಿನ ಆಯ್ಕೆಯಾಗುವ ಅವಕಾಶ ಸಿಗಬಹುದಿತ್ತು’ ಎಂದರು.
ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸಮಸ್ಯೆಗೆ ಪರಿಹಾರ ದೊರೆಯುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಹೇಳಿದ್ದಾರೆ.
JSSC-CGL ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪ, ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪರೀಕ್ಷೆ ರದ್ದತಿ ಒಂದು ಕಡೆ ಇದ್ದರೆ, ನ್ಯಾಯಾಲಯದ ಆದೇಶದ ಬಳಿಕ ಈಗಾಗಲೇ ಉದ್ಯೋಗಕ್ಕೆ ಸೇರಿರುವ 1,975 ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆ ಮತ್ತೊಂದೆಡೆಯಾಗಿದೆ. ಈ ಎರಡೂ ಬಣಗಳ ಬೇಡಿಕೆಗಳನ್ನು ಜಾರ್ಖಂಡ್ ಸರಕಾರ ಹೇಗೆ ಪರಿಹರಿಸಲಿದೆ ಎಂಬ ಕುತೂಹಲ ಮೂಡಿದೆ.
ಸೌಜನ್ಯ: ndtv.com