Photo Credit: AI

14,000 ಚದರ ಮೀಟರ್ ಸೌಲಭ್ಯದಲ್ಲಿ ಮುಖ್ಯವಾಗಿ ಉಬೆಟೆಕ್ ನ ವಾಕರ್ ಎಸ್ ಮತ್ತು ಕ್ರೂಝರ್ ಸರಣಿಯ ಕೈಗಾರಿಕಾ ಹ್ಯುಮನಾಯ್ಡ್ ರೋಬೋಟ್ ಗಳನ್ನು ಉತ್ಪಾದಿಸಲಾಗುತ್ತದೆ.

ಚೀನಾದಲ್ಲಿ ರೋಬೋಟ್ ಗಳು ಈಗ ಇತರ ರೋಬೋಟ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ. ಇದು ವೈಜ್ಞಾನಿಕ ಕಾಲ್ಪನಿಕವಲ್ಲ. ಚೀನಾದಲ್ಲಿ ಉಬೆಟೆಕ್ ರೊಬೊಟಿಕ್ಸ್ ಹೆಚ್ಚು ದೊಡ್ಡ ಪ್ರಮಾಣದಲ್ಲಿ ರೋಬೋಟ್ ಗಳನ್ನು ಉತ್ಪಾದಿಸಲು ಹ್ಯುಮನಾಯ್ಡ್ ರೋಬೋಟ್ ಕಾರ್ಖಾನೆಯನ್ನು ತೆರೆದಿದೆ. ಗುವಾಂಗ್ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಲಿಯುಝೌನಲ್ಲಿರುವ ಈ ಕಾರ್ಖಾನೆಯು ಉತ್ಪಾದನಾ ಪ್ರಕ್ರಿಯೆಯನ್ನು (manufacturing process) ನಿರ್ವಹಿಸಲು ರೋಬೋಟ್ ಗಳನ್ನು ಬಳಸುತ್ತದೆ. ಮಾತ್ರವಲ್ಲದೆ, ಪ್ರತಿ 10 ನಿಮಿಷಗಳಿಗೊಮ್ಮೆ ಒಂದು ಕೈಗಾರಿಕಾ ಹ್ಯುಮನಾಯ್ಡ್ ರೋಬೋಟ್ ಅನ್ನು ಉತ್ಪಾದಿಸಬಹುದು.

ಕಂಪೆನಿಯ ಪ್ರಕಾರ, ಹೊಸ ಕಾರ್ಖಾನೆಯು ವಾರ್ಷಿಕ 10,000 ರೋಬೋಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 13.8 ಮೀಟರ್ ಎತ್ತರವಿರುವ 14,000 ಚದರ ಮೀಟರ್ ಸೌಲಭ್ಯದಲ್ಲಿ ಮುಖ್ಯವಾಗಿ ಉಬೆಟೆಕ್ ನ ವಾಕರ್ ಎಸ್ ಮತ್ತು ಕ್ರೂಝರ್ ಸರಣಿಯ ಕೈಗಾರಿಕಾ ಹ್ಯುಮನಾಯ್ಡ್ ರೋಬೋಟ್ ಗಳನ್ನು ಉತ್ಪಾದಿಸಲಾಗುತ್ತದೆ.

ಈ ಕಾರ್ಖಾನೆಯನ್ನು ಉಬೆಟೆಕ್ ಮತ್ತು ಸೀಮನ್ಸ್ ಡಿಜಿಟಲ್ ಇಂಡಸ್ಟ್ರೀಸ್ ಸಾಫ್ಟ್ವೇರ್ ಜೊತೆಗೂಡಿ ನಿರ್ಮಿಸಿವೆ. ‘ಸ್ಮಾರ್ಟ್ ಬ್ರೈನ್’ ಎಂದು ಕರೆಯಲಾಗುವ ಡಿಜಿಟಲ್ ವ್ಯವಸ್ಥೆಯಿಂದ ರೋಬೋಟ್ ಗಳು ಕೆಲಸ ಮಾಡುತ್ತವೆ. ಏನು ನಿರ್ಮಿಸಬೇಕು ಎಂಬುದನ್ನು ನಿರ್ಧರಿಸುವುದರಿಂದ ಮತ್ತು ಭಾಗಗಳನ್ನು ಚಲಿಸುವುದರಿಂದ ಹಿಡಿದು ಪೂರ್ಣಗೊಂಡ ರೋಬೋಟ್ ಗಳ ಗುಣಮಟ್ಟ ಪರಿಶೀಲಿಸುವವರೆಗೆ ವ್ಯವಸ್ಥೆಯೇ ನಿರ್ಧಾರ ಕೈಗೊಳ್ಳುತ್ತದೆ. ನಿರ್ಮಾಣಗೊಂಡ ಪ್ರತಿ ರೋಬೋಟ್ ಗೂ ತನ್ನದೇ ಆದ ಸರಣಿ ಸಂಖ್ಯೆ ಇರುತ್ತದೆ. ಹೀಗಾಗಿ, ಉಬೆಟೆಕ್ ಸಂಪೂರ್ಣ ಉತ್ಪಾದನಾ ಪ್ರಕ್ರಿಯೆಯ ಮೂಲಕ ಅದನ್ನು ಟ್ರ್ಯಾಕ್ ಮಾಡಬಹುದು.

ಹಾಗಾದರೆ ಈ ರೋಬೋಟ್ ಗಳು ಕಾರ್ಖಾನೆಯೊಳಗೆ ಯಾವ ಕೆಲಸ ಹೊಂದಿವೆ? ಉಬೆಟೆಕ್ ಹೇಳುವ ಪ್ರಕಾರ, Cruzr Y1 ಮತ್ತು Cruzr S2 ರೋಬೋಟ್ ಗಳನ್ನು ವಸ್ತುಗಳನ್ನು ಇಳಿಸುವುದು, ಅವುಗಳನ್ನು ಜೋಡಿಸುವುದು, ಅವುಗಳನ್ನು ಲೋಡ್ ಮಾಡುವುದು ಮತ್ತು ಉತ್ಪಾದನಾ ಮಹಡಿಯ ಸುತ್ತಲೂ ಚಲಿಸುವಂತಹ ಕಾರ್ಯಗಳಿಗೆ ಬಳಸಲಾಗುತ್ತದೆ. ಅಂದರೆ, ಒಂದು ರೀತಿಯಲ್ಲಿ ಕೆಲವು ರೋಬೋಟ್ ಗಳು ಹೆಚ್ಚಿನ ರೋಬೋಟ್ ಗಳನ್ನು ನಿರ್ಮಿಸಲು ಅಗತ್ಯವಿರುವ ಭಾಗಗಳನ್ನು ತಯಾರಿಸಲು ಸಹಾಯ ಮಾಡುತ್ತವೆ. ಸಂಪೂರ್ಣ ಪ್ರತ್ಯೇಕ ಜೋಡಣೆ ವ್ಯವಸ್ಥೆಗಳ ಅಗತ್ಯದ ಬದಲು ಒಂದೇ ಉತ್ಪಾದನಾ ಮಾರ್ಗದಲ್ಲಿ ವಿಭಿನ್ನ ರೋಬೋಟ್ ಗಳ ಮಾದರಿಗಳನ್ನು ನಿರ್ಮಿಸಲು ಸೌಲಭ್ಯವು ಅನುಮತಿಸುತ್ತದೆ. ಕನಿಷ್ಠ ಮಾನವ ಮೇಲ್ವಿಚಾರಣೆಯಲ್ಲಿ ಇಲ್ಲಿನ ಯಂತ್ರಗಳು ಕೆಲಸ ಮಾಡುತ್ತಿವೆ.

ಉಬೆಟೆಕ್ ಗೋದಾಮು ಕೇವಲ 65 ಚದರ ಮೀಟರ್ ಗಳಲ್ಲಿ 112 ಹ್ಯುಮನಾಯ್ಡ್ ರೋಬೋಟ್ ಗಳನ್ನು ಸಂಗ್ರಹಿಸಬಹುದು ಎಂದು ಹೇಳುತ್ತದೆ. ಚೀನಾ ತನ್ನ ರೋಬೋಟಿಕ್ಸ್ ಉದ್ಯಮವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸುತ್ತಿರುವ ಮತ್ತು ಸಂಶೋಧನಾ ಪ್ರಯೋಗಾಲಯಗಳಿಂದ ರೋಬೋಟ್ ಗಳನ್ನು ನೈಜ ಪ್ರಪಂಚದ ಉತ್ಪಾದನೆಗೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಕಾರ್ಖಾನೆಯನ್ನು ತೆರೆಯಲಾಗಿದೆ.

ಚೀನಾದ ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ, ದೇಶವು ಜುಲೈನಲ್ಲಿ 98,677 ಕೈಗಾರಿಕಾ ರೋಬೋಟ್ ಗಳನ್ನು ಉತ್ಪಾದಿಸಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ 30.2ರಷ್ಟು ಹೆಚ್ಚಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor