ಸಗಟು ಮಾರುಕಟ್ಟೆಯಲ್ಲಿ ಕೇವಲ 11 ರೂ. ಬೆಲೆಬಾಳುವ ಐವಿ ಇನ್ಫ್ಯೂಷನ್ ಸೆಟ್ (IV infusion set) 325 ರೂ. ಗರಿಷ್ಠ MRP (ಗರಿಷ್ಠ ಚಿಲ್ಲರೆ ಮಾರಾಟ ಬೆಲೆ) ಹೊಂದಿದೆ. ಹಾಗೆಯೇ, 7 ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಡಿಸ್ಪೋಸೇಬಲ್ ಸಿರಿಂಜ್ (disposable syringe) ಸುಮಾರು 60 ರೂ. ಬೆಲೆ ಹೊಂದಿದೆ. ಇದು ಚಿಕಿತ್ಸೆಯ ಸಮಯದಲ್ಲಿ ಹೆಚ್ಚಾಗಿ ಬಳಸುವ ವೈದ್ಯಕೀಯ ಸಾಮಾಗ್ರಿಗಳಾಗಿದ್ದು, ಆಸ್ಪತ್ರೆ ಬಿಲ್ ಗಳಲ್ಲಿ ಈ ಅಂಶಗಳು ಹೆಚ್ಚಾಗಿ ಜನರ ಕಣ್ಣಿಗೆ ಸುಲಭವಾಗಿ ಗೋಚರಿಸುವುದಿಲ್ಲ.

ಪೇಸ್ ಮೇಕರ್ ಗಳು, ಹೃದಯದ ಕವಾಟಗಳು ಮತ್ತು ಕಣ್ಣಿನ ಲೆನ್ಸ್ ಗಳಂಥ ದುಬಾರಿ ಸಾಧನಗಳ ವಿಷಯದಲ್ಲಿ ಈ ವ್ಯತ್ಯಾಸವು ಮತ್ತಷ್ಟು ಹೆಚ್ಚಿರುತ್ತದೆ. ಅಂತಹ ಸಾಧನಗಳ ಅಂತಿಮ MRP ಬೆಲೆಯು ಆಮದು ಮಾಡಿಕೊಂಡ ಮೂಲ ಬೆಲೆಗಿಂತ 10ರಿಂದ 30 ಪಟ್ಟು ಹೆಚ್ಚಿನದಾಗಿರಬಹುದು. ಇಂತಹ ಬೃಹತ್ ಅಂತರವು ಅಂತಿಮವಾಗಿ ರೋಗಿಯ ಆಸ್ಪತ್ರೆ ಬಿಲ್ ಜಾಸ್ತಿಯಾಗುವಂತೆ ಮಾಡುತ್ತದೆ ಮತ್ತು ಚಿಕಿತ್ಸೆಗಾಗಿ ರೋಗಿಯ ಸ್ವಂತ ಜೇಬಿನಿಂದ ಖರ್ಚಾಗುವ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಕಳೆದ 15 ವರ್ಷಗಳಿಂದ ಈ ವಿಷಯವು ಹಲವು ಬಾರಿ ಮುನ್ನೆಲೆಗೆ ಬಂದಿದ್ದರೂ, ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತ (FDA) ಮಂಡಿಸಿರುವ ಹೊಸ ಪ್ರಸ್ತಾವನೆಯು ವರ್ಷಗಳಿಂದ ಬಗೆಹರಿಯದ ಒಂದು ಪ್ರಮುಖ ಪ್ರಶ್ನೆಯನ್ನು ಮತ್ತೆ ಹುಟ್ಟುಹಾಕಿದೆ. ಅದೇನೆಂದರೆ, ವೈದ್ಯಕೀಯ ಸಾಧನಗಳ ಬೆಲೆಯನ್ನು ಅಂತಿಮವಾಗಿ ನಿರ್ಧರಿಸುವವರು ಯಾರು? ತಯಾರಕರಾ, ಆಸ್ಪತ್ರೆಗಳಾ ಅಥವಾ ನಿಯಂತ್ರಕರಾ?

ಖಾಸಗಿ ಆಸ್ಪತ್ರೆಗಳು ಕೆಲವು ವೈದ್ಯಕೀಯ ಸಾಮಾಗ್ರಿಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ, ರೋಗಿಗಳಿಂದ ಮುದ್ರಿತವಾದ ಹೆಚ್ಚಿನ MRP ವಸೂಲಿ ಮಾಡುತ್ತಿವೆ ಎಂಬುದನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ (NPPA) ಹಿಂದಿನ ಹಲವು ವಿಶ್ಲೇಷಣೆಗಳು ತೋರಿಸಿವೆ ಎಂದು ಮೂಲಗಳು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಸಾಮಾನ್ಯವಾಗಿ ಬಳಸುವ ವೈದ್ಯಕೀಯ ಸಾಮಾಗ್ರಿಗಳ ಮೇಲೆ ಶೇ. 2,841ರವರೆಗೆ ಅಧಿಕ ಬೆಲೆ ವಿಧಿಸಲಾಗುತ್ತಿರುವುದನ್ನು ಎತ್ತಿತೋರಿಸಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತದ ಆಯುಕ್ತ ತುಕಾರಾಮ್ ಮುಂಡೆ, ಮಂಗಳವಾರ ‘ಎಕ್ಸ್’ನಲ್ಲಿ, "ನಿಯಂತ್ರಣ ವ್ಯವಸ್ಥೆಯಲ್ಲಿ ದೊಡ್ಡ ಕೊರತೆಯಿದೆ: ನಿಗದಿತ ಔಷಧಿಗಳ ಬೆಲೆಗಳನ್ನು ‘ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013ರ’ ಅಡಿಯಲ್ಲಿ ಮಿತಿಗೊಳಿಸಲಾಗಿದೆ. ಆದರೆ, ಹೆಚ್ಚಿನ ವೈದ್ಯಕೀಯ ಸಾಧನಗಳು ಮತ್ತು ಸಾಮಾಗ್ರಿಗಳು ಇದರಡಿ ಬರುವುದಿಲ್ಲ. ಇದರಿಂದಾಗಿ ಅವುಗಳ ಬೆಲೆ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಪೂರ್ಣವಾಗಿ ಅನಿಯಂತ್ರಿತವಾಗಿ ಉಳಿದಿದೆ" ಎಂದು ಬರೆದುಕೊಂಡಿದ್ದಾರೆ. "ವ್ಯಾಪಾರ ಖರೀದಿ ಬೆಲೆ ಮತ್ತು ಘೋಷಿತ MRP ನಡುವಿನ ಸ್ವೀಕಾರಾರ್ಹ ವ್ಯತ್ಯಾಸವನ್ನು" ಸರಿಪಡಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುಮಾರು ಒಂದು ದಶಕದ ಹಿಂದೆ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಹೃದಯದ ಸ್ಟೆಂಟ್ಗಳು ಮತ್ತು ಮೂಳೆ ಚಿಕಿತ್ಸೆಯ ಮೊಣಕಾಲು ಕಸಿ ಸಾಧನಗಳ (orthopaedic knee implants) ಬೆಲೆಗೆ ಮಿತಿ ಹಾಕಿತ್ತು. ಹಾಗೆಯೇ, 2020ರಲ್ಲಿ ಕೊರೊನಾ ಸಮಯದಲ್ಲಿ, ಪಲ್ಸ್ ಆಕ್ಸಿಮೀಟರ್ಗಳು, ರಕ್ತದ ಒತ್ತಡ ಮಾಪಕಗಳು ಮತ್ತು ಗ್ಲುಕೋಮೀಟರ್ ಗಳು ಸೇರಿದಂತೆ ಕೆಲವು ಪ್ರಮುಖ ವಸ್ತುಗಳ ವ್ಯಾಪಾರ ಲಾಭಾಂಶದ ಮೇಲೆ ಸರ್ಕಾರವು ಮಿತಿ ಹೇರಿತ್ತು.

ವ್ಯಾಪಾರ ಲಾಭಾಂಶದ ಮಿತಿಗೊಳಿಸುವಿಕೆಯ ವಿಚಾರದಲ್ಲಿ ದೇಶೀಯ ಮತ್ತು ಬಹುರಾಷ್ಟ್ರೀಯ (MNCs) ಕೈಗಾರಿಕೆಗಳು ಹಿಂದಿನಿಂದಲೂ ಭಿನ್ನಾಭಿಪ್ರಾಯ ಹೊಂದಿವೆ. ದೇಶೀಯ ಕೈಗಾರಿಕೆಗಳನ್ನು ಪ್ರತಿನಿಧಿಸುವ ‘AiMeD’ ಸಂಸ್ಥೆಯು, ‘ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013ರ’ ಅಡಿಯಲ್ಲಿರುವ ಪ್ರಸ್ತುತ ನಿಯಂತ್ರಣ ವ್ಯವಸ್ಥೆಯು ವೈದ್ಯಕೀಯ ಸಾಧನಗಳ ಬೆಲೆ ನಿಗದಿಪಡಿಸಲು ಸಾಕಾಗುವುದಿಲ್ಲ ಎಂದು ಎಚ್ಚರಿಸಿದೆ. ಸಿರಿಂಜ್ ಗಳು ಮತ್ತು ಐವಿ ಸೆಟ್ ಗಳಂತಹ ವ್ಯಾಪಕವಾಗಿ ಬಳಸುವ ಸಾಮಾಗ್ರಿಗಳ ವ್ಯಾಪಾರ ಲಾಭಾಂಶವನ್ನು ಶೇ. 75ಕ್ಕೆ ಮತ್ತು ಪೇಸ್ಮೇಕರ್ಗಳು ಹಾಗೂ ಹೃದಯದ ಕವಾಟಗಳಂತಹ ದುಬಾರಿ ಸಾಧನಗಳ ಲಾಭಾಂಶವನ್ನು ಶೇ. 50ಕ್ಕೆ ಮಿತಿಗೊಳಿಸುವಂತೆ ಅದು ಪ್ರಸ್ತಾವಿಸಿದೆ.

"ಪ್ರಸ್ತುತ ಜಾರಿಯಲ್ಲಿರುವ ಆಸ್ಪತ್ರೆಗಳ ವಿಪರೀತ ಬೆಲೆ ಏರಿಕೆಯ ವ್ಯವಸ್ಥೆಯಿಂದಾಗಿ ಸಾಧನಗಳ ತಯಾರಕರು ಮತ್ತು ಆಮದುದಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ನೈತಿಕವಾಗಿ ಕಾರ್ಯನಿರ್ವಹಿಸುವ ಪೂರೈಕೆದಾರರು ತಮ್ಮ ಉತ್ಪನ್ನಗಳ ಬೆಲೆಯನ್ನು ಕಾರ್ಖಾನೆ ಬೆಲೆ ಅಥವಾ ಆಮದು ವೆಚ್ಚದ ಆಧಾರದ ಮೇಲೆ ಸ್ಪಷ್ಟವಾಗಿ ನಿಗದಿಪಡಿಸುತ್ತಾರೆ. ಆದರೆ, ಆಸ್ಪತ್ರೆಗಳು MRP ಬೆಲೆಯನ್ನು 10ರಿಂದ 30 ಪಟ್ಟು ಹೆಚ್ಚಿಸಿದಾಗ, ಈ ಮಾರುಕಟ್ಟೆಯ ಮೋಸದಾಟಕ್ಕೆ ಒಪ್ಪುವವರಿಗೆ ಮಾತ್ರ ಹೆಚ್ಚಿನ ಲಾಭ ಸಿಗುತ್ತದೆ. ವಿಪರೀತ ಲಾಭಾಂಶ ಪಡೆಯಲು ನಿರಾಕರಿಸುವ ಜವಾಬ್ದಾರಿಯುತ ಕಂಪೆನಿಗಳು ಸ್ಪರ್ಧೆಯಿಂದ ಹೊರಗುಳಿಯಬೇಕಾಗುತ್ತದೆ ಅಥವಾ ಬದುಕುಳಿಯಲು ಈ ಅನ್ಯಾಯದ ಬೇಡಿಕೆಗಳಿಗೆ ತಲೆಬಾಗಬೇಕಾಗುತ್ತದೆ" ಎಂದು ‘AiMeD’ ಸಂಘಟನೆಯ ಸಂಯೋಜಕರಾದ ರಾಜೀವ್ ನಾಥ್ ತಿಳಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಬಹುರಾಷ್ಟ್ರೀಯ ಕಂಪೆನಿಗಳನ್ನು ಪ್ರತಿನಿಧಿಸುವ ‘ಮೆಡಿಕಲ್ ಟೆಕ್ನಾಲಜಿ ಅಸೋಸಿಯೇಷನ್ ಆಫ್ ಇಂಡಿಯಾ’ (MtAi), ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತದ ಆಯುಕ್ತರ "ಲಾಭಾಂಶ ತಾರ್ಕಿಕತೆ, ಸಂಸ್ಥೆಗಳ ನಡುವಿನ ಪರಾಮರ್ಶೆ ಮತ್ತು ವ್ಯಾಪಾರ ಖರೀದಿ ವೆಚ್ಚ ಹಾಗೂ ಘೋಷಿತ MRP ನಡುವಿನ ಸ್ವೀಕಾರಾರ್ಹ ವ್ಯತ್ಯಾಸವನ್ನು ನಿಯಂತ್ರಿಸುವ ಸ್ಪಷ್ಟ ಮಾರ್ಗಸೂಚಿಗಳು" ಎಂಬ ಮೂರು ಬೇಡಿಕೆಗಳನ್ನು ತಾವೂ ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದೆ.

ಸೌಜನ್ಯ: timesofindia.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor