ಹೊಸ Apple iPhone ಖರೀದಿಸಲು ಬಯಸುವವರು ನಕಲಿ ಆಫರ್ ವೆಬ್ ಸೈಟ್ ಗಳ ಬಗ್ಗೆ ಜಾಗರೂಕರಾಗಿರಿ: ಯಾವೆಲ್ಲ ರೀತಿಯಲ್ಲಿ ವಂಚನೆ ನಡೆಯುತ್ತದೆ?
firstpost. com ವರದಿ
Photo Credit: firstpost
Apple ಕಂಪೆನಿಯ ಹೊಸ ಐಫೋನ್ ಗಳ ಬಗ್ಗೆ ಸೃಷ್ಟಿಯಾಗಿರುವ ಉತ್ಸಾಹವನ್ನು ಆನ್ ಲೈನ್ ವಂಚಕರು ಈಗಾಗಲೇ ದುರುಪಯೋಗಪಡಿಸಿಕೊಳ್ಳಲು ಶುರು ಮಾಡಿದ್ದಾರೆ. ಬಿಡುಗಡೆ ಮತ್ತು ಮುಂಗಡ ಬುಕಿಂಗ್ ಅವಧಿಯಲ್ಲಿ ನಕಲಿ ಶಾಪಿಂಗ್ ವೆಬ್ ಸೈಟ್ ಗಳು ತಲೆಎತ್ತುತ್ತಿದ್ದು, ಭರ್ಜರಿ ರಿಯಾಯಿತಿಗಳು ಹಾಗೂ ಬೇಗನೆ ಕೈ ಸೇರುವ ಆಮಿಷ ಒಡ್ಡಿ ಗ್ರಾಹಕರನ್ನು ಬಲೆಗೆ ಕೆಡವುತ್ತಿವೆ.
Apple ತನ್ನ ಹೊಸ ಸರಣಿಯನ್ನು ಸೆಪ್ಟೆಂಬರ್ 9ರಂದು ಅನಾವರಣಗೊಳಿಸಿದ್ದು, ಇದರಲ್ಲಿ ಐಫೋನ್ 18 ಪ್ರೊ (iPhone 18 Pro), ಐಫೋನ್ 18 ಪ್ರೊ ಮ್ಯಾಕ್ಸ್ (iPhone 18 Pro Max) ಮತ್ತು ಕಂಪೆನಿಯ ಮೊಟ್ಟಮೊದಲ ಫೋಲ್ಡಬಲ್ ಹ್ಯಾಂಡ್ಸೆಟ್ 'ಐಫೋನ್ ಡ್ಯುಯೊ' (iPhone Duo) ಸೇರಿವೆ. Pro ಮಾದರಿಗಳ ಮುಂಗಡ ಬುಕಿಂಗ್ ಈಗ ಆರಂಭವಾಗಿದ್ದರೆ, ಫೋಲ್ಡಬಲ್ ಫೋನ್ ಮುಂದಿನ ದಿನಗಳಲ್ಲಿ ಮಾರಾಟಕ್ಕೆ ಬರಲಿದೆ.
ಹೊಸ ಫೋನ್ ಗಳ ಬಿಡುಗಡೆಯ ಹೊತ್ತಲ್ಲಿ 'Apple' ಮತ್ತು 'iPhone' ಪದಗಳನ್ನು ಒಳಗೊಂಡಿರುವ ಡೊಮೇನ್ ಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ. 'ದಿ ಗಾರ್ಡಿಯನ್' ವರದಿಯ ಪ್ರಕಾರ, ಕಳೆದ ನಾಲ್ಕು ಐಫೋನ್ ಬಿಡುಗಡೆಗಳ ಸಂದರ್ಭದಲ್ಲಿ, ಸಾಮಾನ್ಯ ದಿನಗಳಲ್ಲಿ ಶೂನ್ಯ ಅಥವಾ ಒಂದಿರುತ್ತಿದ್ದ ಈ ಹೊಸ ಮಾದರಿಗಳ ಹೆಸರಿನ ಡೊಮೇನ್ ಗಳು ಪ್ರತಿ 24 ಗಂಟೆಗಳ ಒಳಗೆ 200ಕ್ಕೂ ಹೆಚ್ಚು ನೋಂದಣಿಯಾಗಿವೆ.
ಈ ಭರ್ಜರಿ ಏರಿಕೆಯು ವಂಚಕರಿಗೆ ಸುಲಭವಾದ ಅವಕಾಶವನ್ನು ಮಾಡಿಕೊಡುತ್ತದೆ. ಗ್ರಾಹಕರು ಹೊಸ ಫೋನ್ ಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ, ಹಾಗೂ ಅಧಿಕೃತ ವೈಶಿಷ್ಟ್ಯಗಳು ಮತ್ತು ಬೆಲೆಗಳೇ ನಕಲಿ ವೆಬ್ ಸೈಟ್ ಗಳು ಅಸಲಿಯಂತೆ ಕಾಣುವಂತೆ ಮಾಡಲು ಬೇಕಾದಷ್ಟು ಮಾಹಿತಿಯನ್ನು ಒದಗಿಸುತ್ತವೆ.
►ವಂಚನೆ ಹೇಗೆ ನಡೆಯುತ್ತದೆ?
ನಕಲಿ ವೆಬ್ ಸೈಟ್ ಗಳು ಥೇಟ್ ಅಸಲಿಯಂತೆಯೇ ಕಾಣಿಸುತ್ತವೆ. 'ಮನಿ ಕಂಟ್ರೋಲ್' ವರದಿಯ ಪ್ರಕಾರ, ವಂಚಕರು ಅಸಲಿ ಮಳಿಗೆಗಳಂತೆಯೇ ಕಾಣುವ ಸೈಟ್ ಗಳನ್ನು ಸೃಷ್ಟಿಸುತ್ತಿದ್ದು, ಉತ್ಪನ್ನಗಳ ಫೋಟೋಗಳು, ತಾಂತ್ರಿಕ ವಿವರಗಳು, ವಿಮರ್ಶೆಗಳು ಮತ್ತು ವೃತ್ತಿಪರ ರೀತಿಯಲ್ಲಿ ಕಾಣುವ ಬಿಲ್ ಪಾವತಿ ಪುಟಗಳನ್ನು ಬಳಸುತ್ತಿದ್ದಾರೆ.
ಕೃತಕ ಬುದ್ಧಿಮತ್ತೆ ಈ ಕೆಲಸವನ್ನು ಮತ್ತಷ್ಟು ಸುಲಭಗೊಳಿಸುತ್ತಿದೆ. ಅಪರಾಧಿಗಳು ಅಸಲಿ ಮಳಿಗೆಗಳ ನಕಲು ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ. ಹಾಗೆಯೇ, ಅಧಿಕೃತ ತಾಂತ್ರಿಕ ವಿವರಗಳು ಬಿಡುಗಡೆಯಾಗುವುದರಿಂದ ವಂಚಕರಿಗೆ ತಮ್ಮ ವೆಬ್ ಸೈಟ್ ಗಳು ಹೆಚ್ಚು ನಂಬಲರ್ಹವಾಗಿ ಕಾಣುವಂತೆ ಮಾಡಲು ಸುಲಭವಾಗುತ್ತದೆ ಎಂದು WhoisXML API ಸಂಸ್ಥೆಯ ಭದ್ರತಾ ಸಂಶೋಧಕ ಅಲೆಕ್ಸಾಂಡ್ರೆ ಫ್ರಾಂಕೋಯಿಸ್ ತಿಳಿಸಿದ್ದಾರೆ.
ಫೋರ್ಬ್ಸ್ ಜತೆಗೆ ಮಾತನಾಡಿದ ಫ್ರಾಂಕೋಯಿಸ್, “ಅಧಿಕೃತ ಹೆಸರು, ತಾಂತ್ರಿಕ ವಿವರಗಳು ಮತ್ತು ಬೆಲೆಗಳು ಸಾರ್ವಜನಿಕವಾಗಿ ಲಭ್ಯವಿದ್ದಾಗ, ತಾವು ನೋಡುತ್ತಿರುವುದು ಅಸಲಿ iPhone ಎಂದೇ ಜನರನ್ನು ನಂಬಿಸುವುದು ತುಂಬಾ ಸುಲಭವಾಗುತ್ತದೆ” ಎಂದು ಹೇಳಿದ್ದಾರೆ.
ಈ ವೆಬ್ ಸೈಟ್ ಗಳು ಸಾಮಾನ್ಯವಾಗಿ ಎರಡು ಪ್ರಮುಖ ತಂತ್ರಗಳನ್ನು ಅವಲಂಬಿಸಿರುತ್ತವೆ–ಕಡಿಮೆ ಬೆಲೆ ಮತ್ತು ತುರ್ತು ಪರಿಸ್ಥಿತಿಯ ಭಾವನೆ. ನಕಲಿ ಮಾರಾಟಗಾರರು ಹೊಸ iPhone ಅನ್ನು ಅಧಿಕೃತ ಬೆಲೆಗಿಂತ ನೂರಾರು ಪೌಂಡ್ ಗಳಷ್ಟು ಕಡಿಮೆ ಬೆಲೆಗೆ ನೀಡುವುದಾಗಿ ಅಥವಾ ಬೇಗನೆ ಕೈ ಸೇರುವಂತೆ ಮಾಡುವುದಾಗಿ ಜಾಹೀರಾತು ನೀಡುತ್ತಾರೆ.
ಕೌಂಟ್ ಡೌನ್ ಗಡಿಯಾರಗಳು, ಸೀಮಿತ ಸ್ಟಾಕ್ ಸಂದೇಶಗಳು ಮತ್ತು ಕಡಿಮೆ ಗಡುವುಗಳು ಗ್ರಾಹಕರ ಮೇಲೆ ಒತ್ತಡ ಹೇರುತ್ತವೆ. ಇದರಿಂದಾಗಿ ಮಾರಾಟಗಾರರು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸುವ ಮುನ್ನವೇ ಗ್ರಾಹಕರು ಹಣ ಪಾವತಿಸುವಂತೆ ಮಾಡುತ್ತವೆ.
iPhone 18 ಅಧಿಕೃತವಾಗಿ 1,199 ಪೌಂಡ್ಗಳಿಂದ ಮತ್ತು Pro Max 1,299 ಪೌಂಡ್ ಗಳಿಂದ ಆರಂಭವಾಗುತ್ತದೆ ಎಂದು 'ದಿ ಗಾರ್ಡಿಯನ್' ಉಲ್ಲೇಖಿಸಿದೆ. ಇದು ವಂಚಕ ಮಾರಾಟಗಾರರಿಗೆ ಅಸಾಮಾನ್ಯವಾಗಿ ದೊಡ್ಡ ರಿಯಾಯಿತಿಗಳನ್ನು ನೀಡಿ ಆಕರ್ಷಕವಾಗಿ ಕಾಣುವಂತೆ ಮಾಡಲು ಸಾಕಷ್ಟು ಅವಕಾಶ ಕಲ್ಪಿಸುತ್ತದೆ.
►ಫೋನ್ ಗಳು ಬಿಡುಗಡೆಯಾಗುವ ಮುನ್ನವೇ ಕಾಣಿಸಿಕೊಳ್ಳುವ ನಕಲಿ ಸೈಟ್ ಗಳು
Appleನ ಸೆಪ್ಟೆಂಬರ್ 9ರ ಕಾರ್ಯಕ್ರಮಕ್ಕೂ ಕನಿಷ್ಠ ಎರಡು ವಾರಗಳ ಮುಂಚೆಯೇ iPhone 18 Pro ಮತ್ತು Pro Max ಅನ್ನು ಗುರಿಯಾಗಿಸಿಕೊಂಡು ಫಿಶಿಂಗ್ ಪುಟಗಳು ಕಾಣಿಸಿಕೊಂಡಿದ್ದವು ಎಂದು 'ಫೋರ್ಬ್ಸ್' ವರದಿ ಮಾಡಿದೆ. ಫೋನ್ ಗಳು ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ಒಂದು ಸೈಟ್ನಲ್ಲಿ "ಈಗಲೇ ಖರೀದಿಸಿ" ಬಟನ್ ಕೂಡ ಇತ್ತು.
ಇದು ಗ್ರಾಹಕರಿಗೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ. ಹಾಗಾಗಿ, Apple ಯಾವ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ ಮತ್ತು ಅವು ಯಾವಾಗ ಲಭ್ಯವಾಗಲಿವೆ ಎಂಬುದನ್ನು ಗ್ರಾಹಕರು ಕಡ್ಡಾಯವಾಗಿ ಪರಿಶೀಲಿಸಬೇಕು.
ವರದಿಗಳ ಪ್ರಕಾರ, iPhone Duo ಫೋನ್ ಅಕ್ಟೋಬರ್ 16ರವರೆಗೆ ಮುಂಗಡ ಬುಕಿಂಗ್ ಗೆ ಲಭ್ಯವಿರುವುದಿಲ್ಲ. ಇದರ ಸಾಗಣೆಯು ಅಕ್ಟೋಬರ್ 23ರಿಂದ ಆರಂಭವಾಗಲಿದೆ. ಹಾಗೆಯೇ ಸಾಮಾನ್ಯ iPhone 18 ಫೋನ್ ಕೂಡ 2027ರ ವಸಂತ ಕಾಲದ ಮೊದಲು ಬರುವ ನಿರೀಕ್ಷೆಯಿಲ್ಲ.
ಫೋರ್ಬ್ಸ್ ಜತೆಗೆ ಮಾತನಾಡಿದ ಫ್ರಾಂಕೋಯಿಸ್, “ಸಾಮಾನ್ಯ iPhone 18 ಫೋನ್ 2027ರ ವಸಂತ ಕಾಲದ ಮೊದಲು ಬರುವ ನಿರೀಕ್ಷೆಯಿಲ್ಲ. ಹೀಗಾಗಿ, ಪ್ರಸ್ತುತ ಅದನ್ನು ಮಾರಾಟ ಮಾಡುತ್ತಿರುವ ಅಥವಾ ಮುಂಗಡ ಹಣ ಪಡೆಯುತ್ತಿರುವ ಯಾವುದೇ ಪುಟವು ಅಸ್ತಿತ್ವದಲ್ಲೇ ಇಲ್ಲದ ಉತ್ಪನ್ನವನ್ನು ಮಾರಾಟ ಮಾಡುತ್ತಿದೆ ಎಂದರ್ಥ” ಎಂದು ಎಚ್ಚರಿಸಿದ್ದಾರೆ. iPhone Duo ಫೋನ್ ಅಧಿಕೃತವಾಗಿ ಲಭ್ಯವಾಗುವ ಮುಂಚೆಯೇ ತಮ್ಮ ಬಳಿ ಸ್ಟಾಕ್ ಇದೆ ಎಂದು ಹೇಳಿಕೊಳ್ಳುವ ಯಾವುದೇ ವೆಬ್ ಸೈಟ್ ಅನ್ನು ನಂಬಬಾರದು ಎಂದಿದ್ದಾರೆ ಅವರು.
►ಪಾವತಿ ವಿಧಾನಗಳ ಬಗ್ಗೆ ಎಚ್ಚರಿಕೆ ಇರಲಿ
ವಂಚಕ ವೆಬ್ ಸೈಟ್ ಗಳು ಗ್ರಾಹಕರು ನೇರ ಬ್ಯಾಂಕ್ ವರ್ಗಾವಣೆ ಅಥವಾ ಕ್ರಿಪ್ಟೋಕರೆನ್ಸಿ ಮೂಲಕವೇ ಹಣ ಪಾವತಿಸುವಂತೆ ಒತ್ತಾಯಿಸಬಹುದು. ಇಂತಹ ವಿಧಾನಗಳು ಕಾರ್ಡ್ ಪಾವತಿಗಳಷ್ಟು ಭದ್ರತೆಯನ್ನು ನೀಡುವುದಿಲ್ಲ ಮತ್ತು ವಂಚನೆ ನಡೆದ ನಂತರ ಹಣವನ್ನು ಮರಳಿ ಪಡೆಯುವುದನ್ನು ಕಷ್ಟಕರವಾಗಿಸುತ್ತವೆ.
ಯಾವುದಾದರೂ ವೆಬ್ಸೈಟ್ ಕೇವಲ ಬ್ಯಾಂಕ್ ವರ್ಗಾವಣೆಯನ್ನು ಮಾತ್ರ ಸ್ವೀಕರಿಸಿದರೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ. ಹಾಗೆಯೇ ಕ್ರಿಪ್ಟೋಕರೆನ್ಸಿ ಪಾವತಿಗಳನ್ನೂ ಸಹ ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು ಎಂದು 'ಚಾನೆಲ್ ನ್ಯೂಸ್' ತಿಳಿಸಿದೆ.
ಅಧಿಕೃತ ಮಳಿಗೆಗಳು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಂತಹ ಸ್ಥಾಪಿತ ಪಾವತಿ ಆಯ್ಕೆಗಳನ್ನು ಮತ್ತು ಸ್ಪಷ್ಟ ಗ್ರಾಹಕ ಸಹಾಯವಾಣಿ ಮಾರ್ಗಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು.
ಗ್ರಾಹಕರು ಜಾಹೀರಾತುಗಳು, ಇಮೇಲ್ಗಳು ಅಥವಾ ಎಸ್ಎಂಎಸ್ ಸಂದೇಶಗಳಲ್ಲಿರುವ ಪರಿಚಯವಿಲ್ಲದ ಲಿಂಕ್ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು. ಪ್ರಚಾರದ ಲಿಂಕ್ಗಳನ್ನು ಅನುಸರಿಸುವ ಬದಲು, ನೇರವಾಗಿ Apple ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ತಮಗೆ ಈಗಾಗಲೇ ತಿಳಿದಿರುವ ವಿಳಾಸದ ಮೂಲಕ ಅಧಿಕೃತ ಮಾರಾಟಗಾರರನ್ನು ಸಂಪರ್ಕಿಸಿ ಎಂದು ಫ್ರಾಂಕೋಯಿಸ್ ಸಲಹೆ ನೀಡಿರುವುದಾಗಿ 'ಫೋರ್ಬ್ಸ್' ಉಲ್ಲೇಖಿಸಿದೆ.
Apple ಕಂಪೆನಿಯು ಪ್ರತಿ ದೇಶದಲ್ಲಿ ತನ್ನ ಅಧಿಕೃತ ಮರುಮಾರಾಟಗಾರರ ಪಟ್ಟಿಯನ್ನು ಪ್ರಕಟಿಸುತ್ತದೆ ಎಂದು ಫ್ರಾಂಕೋಯಿಸ್ ತಿಳಿಸಿದ್ದಾರೆ.
►ಗ್ರಾಹಕರು ಏನು ಮಾಡಬೇಕು?
ವಿಶೇಷವಾಗಿ ಅತ್ಯಂತ ಆಕರ್ಷಕವಾದ ಆಫರ್ ಕಣ್ಣಿಗೆ ಬಿದ್ದಾಗ, ಸ್ವಲ್ಪ ನಿಧಾನಿಸಿ ಯೋಚಿಸುವುದು ಒಳಿತು. ವೆಬ್ ಸೈಟ್ ವಿಳಾಸವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಉತ್ಪನ್ನ, ಅದರ ಬೆಲೆ ಹಾಗೂ ಲಭ್ಯತೆಯನ್ನು ಆ್ಯಪಲ್ ನ ಅಧಿಕೃತ ಮಾಹಿತಿಯೊಂದಿಗೆ ಹೋಲಿಸಿ ನೋಡಿ. ವೆಬ್ ಸೈಟ್ ನೋಡಲು ಅತ್ಯಂತ ಸುಂದರವಾಗಿದ್ದಾಕ್ಷಣ ಅದು ಅಸಲಿ ಎಂದರ್ಥವಲ್ಲ. ಏಕೆಂದರೆ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾದ ಅಂಶಗಳು ನಕಲಿ ಮಳಿಗೆಗಳನ್ನು ಮತ್ತಷ್ಟು ವೃತ್ತಿಪರವಾಗಿಸುತ್ತವೆ.
ಕಂಪೆನಿಯ ಹೆಸರಿನಲ್ಲಿ ಬರುವ ನಕಲಿ ಕರೆಗಳು ಮತ್ತು ಸಂದೇಶಗಳಂತಹ ವಂಚನೆಗಳ ಬಗ್ಗೆಯೂ Apple ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ. ಆದ್ದರಿಂದ ವೈಯಕ್ತಿಕ ಅಥವಾ ಖಾತೆಯ ವಿವರಗಳನ್ನು ನೀಡುವಂತೆ ಬರುವ ಅನಿರೀಕ್ಷಿತ ಕೋರಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
'ದಿ ಗಾರ್ಡಿಯನ್' ವರದಿಯ ಪ್ರಕಾರ, ಫಿಶಿಂಗ್ ಅಥವಾ ಮಾಲ್ ವೇರ್ ಸೈಟ್ ಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಲು 'ಸಫಾರಿ' ಬ್ರೌಸರ್ ಕೂಡ ಒಂದು ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದೆ.
ಒಂದು ವೇಳೆ ಅನುಮಾನಾಸ್ಪದ ವೆಬ್ ಸೈಟ್ ನೊಂದಿಗೆ ಹಣಕಾಸಿನ ವಿವರಗಳನ್ನು ಹಂಚಿಕೊಂಡಿದ್ದರೆ, ಕೂಡಲೇ ಬ್ಯಾಂಕ್ ಅನ್ನು ಸಂಪರ್ಕಿಸಿ, ವಂಚನೆಯ ಬಗ್ಗೆ ವರದಿ ಮಾಡಿ ಮತ್ತು ಸಂಬಂಧಿತ ಪಾಸ್ವರ್ಡ್ಗಳನ್ನು ಬದಲಾಯಿಸಿ.
ಹೊಸ ಐಫೋನ್ ಗಳು ಗ್ರಾಹಕರಲ್ಲಿ ಮತ್ತೊಮ್ಮೆ ಭಾರೀ ಕುತೂಹಲ ಮೂಡಿಸುತ್ತಿರುವಂತೆ, ವಂಚಕರೂ ಅಷ್ಟೇ ವೇಗವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎನಿಸುವಷ್ಟು ಅದ್ಭುತವಾಗಿ ಕಾಣುವ ಆಫರ್ ಗಳೇ ಇಲ್ಲಿ ಅತಿ ದೊಡ್ಡ ಎಚ್ಚರಿಕೆಯ ಗಂಟೆಯಾಗಿರಬಹುದು.
ಸೌಜನ್ಯ: firstpost.com