ಅಡುಗೆ ಎಣ್ಣೆ ದರ ಏರಿಕೆಯಿಂದ ಕುಟುಂಬಗಳಿಗೂ ತಟ್ಟಿದ ಆಹಾರ ಹಣದುಬ್ಬರದ ಬಿಸಿ!
ಕುಟುಂಬಗಳು ಯಾವ ರೀತಿ ಖರ್ಚು ಸರಿದೂಗಿಸುತ್ತವೆ ?
ಸಾಂದರ್ಭಿಕ ಚಿತ್ರ | Photo Credit : magnific.com
ಹೈದರಾಬಾದ್‌ನಲ್ಲಿ ಮೇ 10ರಂದು ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರು ತಮ್ಮ ಆಹಾರದಲ್ಲಿ ಅಡುಗೆ ಎಣ್ಣೆ ಬಳಕೆಯನ್ನು ಶೇ 10ರಷ್ಟು ಕಡಿತ ಮಾಡುವಂತೆ ಕರೆ ನೀಡಿದ್ದರು. ಪ್ರತಿಯೊಂದು ಕುಟುಂಬವೂ ತನ್ನ ಎಣ್ಣೆ ಬಳಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೆ, ಅದು ದೇಶದ ಮಟ್ಟದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಕಡಿಮೆ ಎಣ್ಣೆ ಬಳಸುವುದು ಕೂಡ ದೇಶಭಕ್ತಿಯ ಒಂದು ರೂಪ ಎಂದು ಹೇಳಿದ್ದರು.
ಅಮೆರಿಕ-ಇರಾನ್ ನಡುವಿನ ಸಂಘರ್ಷ, ಹಾರ್ಮುಝ್ ಜಲಸಂಧಿ ಬಂದ್ ಆಗಬಹುದಾದ ಭೀತಿ ಹಾಗೂ ಜಾಗತಿಕವಾಗಿ ಇಂಧನ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ಈ ಮಿತವ್ಯಯದ ಕರೆ ನೀಡಿದ್ದರು .
ಈ ಕರೆಯ ಹಿಂದಿನ ಹಿನ್ನೆಲೆ ಮುಖ್ಯವಾದುದು. ಭಾರತವು ತನ್ನ ಒಟ್ಟು ಅಡುಗೆ ಎಣ್ಣೆಯ ಅಗತ್ಯದ ಸುಮಾರು ಶೇ 60ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. 2024-25ರ ತೈಲ ವರ್ಷದಲ್ಲಿ ದೇಶದ ಆಮದು ವೆಚ್ಚ ಬರೋಬ್ಬರಿ ರೂ 1.6 ಲಕ್ಷ ಕೋಟಿ ದಾಟಿತ್ತು. ಇದೀಗ ಜಾಗತಿಕ ಪೂರೈಕೆ ಸರಪಳಿಯಲ್ಲಿ ಏರುಪೇರಾಗುತ್ತಿರುವುದು ಮತ್ತು ರೂಪಾಯಿ ಮೌಲ್ಯದ ಮೇಲಿನ ಒತ್ತಡದ ನಡುವೆ, ದೇಶೀಯ ಬಳಕೆಯನ್ನು ತಗ್ಗಿಸುವುದೇ ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಮುಂದಿರುವ ಪ್ರಮುಖ ದಾರಿಯಾಗಿದೆ.
ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಉಂಟಾದ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಬಿಸಿ, ಇದೀಗ ನಿಧಾನವಾಗಿ ಭಾರತೀಯರ ಅಡುಗೆಮನೆಗೆ ತಟ್ಟತೊಡಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗಾಗಲೇ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ, ಇತ್ತ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದ್ದು ಮಧ್ಯಮ ವರ್ಗಕ್ಕೆ ಹೊಡೆತ ನೀಡಿದೆ.
ಇತ್ತೀಚಿನ ಹಣದುಬ್ಬರ ದತ್ತಾಂಶಗಳ ಪ್ರಕಾರ, ಶುದ್ಧೀಕರಿಸಿದ ಅಡುಗೆ ಎಣ್ಣೆಯ ಹಣದುಬ್ಬರ ದರವು ಕಳೆದ ನಾಲ್ಕು ತಿಂಗಳುಗಳಲ್ಲಿ ದುಪ್ಪಟ್ಟಾಗಿದ್ದರೆ, ಸಾಸಿವೆ ಎಣ್ಣೆಯ ಹಣದುಬ್ಬರವೂ ತೀವ್ರವಾಗಿ ಏರಿಕೆಯಾಗಿದೆ. ವಿವಿಧ ಬ್ರ್ಯಾಂಡ್‌ಗಳ ಮತ್ತು ಪ್ಯಾಕೆಟ್‌ಗಳ ಅಡುಗೆ ಎಣ್ಣೆಯ ಚಿಲ್ಲರೆ ಬೆಲೆ ಪ್ರಸ್ತುತ ಪ್ರತಿ ಲೀಟರ್‌ಗೆ ರೂ110 -ರೂ 207 ರ ಆಸುಪಾಸಿನಲ್ಲಿದೆ.
ಕೋಟಿಗಟ್ಟಲೆ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಕೇವಲ ಒಂದು ಆರ್ಥಿಕ ಅಂಕಿ-ಅಂಶವಷ್ಟೇ ಅಲ್ಲ, ದೈನಂದಿನ ಬದುಕಿನ ಸಂಕಷ್ಟ. "ಇದು ನೇರವಾಗಿ ಅಡುಗೆಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ" ಎನ್ನುತ್ತಾರೆ ದೆಹಲಿ-ಎನ್‌ಸಿಆರ್ ಮೂಲದ ಶಿಕ್ಷಣ ವೃತ್ತಿಪರ ಹಾಗೂ ಆಕ್ಯುಪೇಷನಲ್ ಥೆರಪಿಸ್ಟ್ ಆಗಿರುವ ನಿನಿ ಶರ್ಮಾ.
"ಮನೆ ಮತ್ತು ಕಚೇರಿ ಎರಡನ್ನೂ ನಿಭಾಯಿಸುವ ಉದ್ಯೋಗಿ ಮಹಿಳೆಯಾಗಿ, ಅಡುಗೆ ಎಣ್ಣೆ ಬೆಲೆ ಏರಿಕೆಯಾಗುತ್ತಿರುವುದು ನನ್ನ ಮಾಸಿಕ ಬಿಲ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅಡುಗೆ ಎಣ್ಣೆಯನ್ನು ಪ್ರತಿದಿನ ಬಳಸಲೇಬೇಕಾದ್ದರಿಂದ, ಇದರ ಬೆಲೆ ಹೆಚ್ಚಾದಾಗ ಇಡೀ ತಿಂಗಳ ಬಜೆಟ್ ಏರುಪೇರಾಗುತ್ತದೆ. ಈ ಒತ್ತಡ ಕೇವಲ ಒಂದು ಬಾಟಲಿ ಅಡುಗೆ ಎಣ್ಣೆಯ ಬೆಲೆ ಏರಿಕೆಗೆ ಮಾತ್ರ ಸೀಮಿತವಾಗಿಲ್ಲ. ನಾವು ದಿನನಿತ್ಯ ಬಳಸುವ ಪ್ಯಾಕೆಟ್ ತಿಂಡಿಗಳು, ಬೇಕರಿ ಉತ್ಪನ್ನಗಳು, ರೆಡಿ ಟು ಈಟ್ ಆಹಾರಗಳು ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಅಡುಗೆ ಎಣ್ಣೆಯನ್ನು ಬಳಸಲಾಗುತ್ತದೆ. ಹಾಗಾಗಿ, ಇದರ ಬೆಲೆ ಏರಿಕೆಯ ಬಿಸಿ ನಿಧಾನವಾಗಿ ಇಡೀ ಕಿರಾಣಿ ಬುಟ್ಟಿಗೆ ವ್ಯಾಪಿಸುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬೆಲೆ ಏರಿಕೆಯ ಸರಪಳಿ ಪರಿಣಾಮ ಈಗ ಎಫ್‌ಎಂಸಿಜಿ (FMCG) ಮಾರುಕಟ್ಟೆಯ ಮೇಲೂ ಗೋಚರಿಸುತ್ತಿದೆ. ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬಿಸ್ಕೆಟ್‌ಗಳು, ನಮ್ಕೀನ್ (ಮಿಕ್ಸ್ಚರ್), ಫ್ರೋಜನ್ ಫುಡ್ಸ್, ಇನ್‌ಸ್ಟಂಟ್ ಮೀಲ್ಸ್ ಮತ್ತು ಬೇಕರಿ ಉತ್ಪನ್ನಗಳ ಬೆಲೆಗಳೂ ಸಹ ದುಬಾರಿಯಾಗುತ್ತಿವೆ.
ಅಡುಗೆ ಎಣ್ಣೆ ಬೆಲೆ ಏರಿಕೆ ಪರಿಣಾಮ:
ಪ್ರಸ್ತುತ ಜಾಗತಿಕ ರಾಜಕೀಯ ಬಿಕ್ಕಟ್ಟು ಕೇವಲ ಕಚ್ಚಾ ತೈಲ ಮಾರುಕಟ್ಟೆಯನ್ನು ಮಾತ್ರವಲ್ಲದೆ ಇನ್ನೂ ಹಲವು ಕ್ಷೇತ್ರಗಳನ್ನು ಏರುಪೇರು ಮಾಡಿದೆ ಅಂತಾರೆ ಮೋದಿ ನ್ಯಾಚುರಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಕ್ಷಯ್ ಮೋದಿ. "ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟು ತೀವ್ರ ಸರಪಳಿ ಪರಿಣಾಮವನ್ನು ಬೀರಿದ್ದು, ಕಚ್ಚಾ ತೈಲ ಮಾರುಕಟ್ಟೆಯ ಆಚೆಗೂ ಇಡೀ ವಿಶ್ವಕ್ಕೆ ದೊಡ್ಡ ಆಘಾತ ನೀಡಿದೆ. ಜಾಗತಿಕ ಉದ್ವಿಗ್ನತೆಯ ಪರಿಣಾಮಗಳಿಂದಾಗಿ ಅಡುಗೆ ಎಣ್ಣೆಯು ತೀವ್ರ ತೊಂದರೆಗೆ ಒಳಗಾದ ಪ್ರಮುಖ ಸರಕಾಗಿ ಮುಂದುವರಿದಿದೆ.
ಕಚ್ಚಾ ತೈಲದ ಬೆಲೆ ಏರಿಕೆಯು ಕೇವಲ ಅಡುಗೆ ಎಣ್ಣೆಯನ್ನು ಖರೀದಿಸುವ ವೆಚ್ಚವನ್ನು ಮಾತ್ರವಲ್ಲದೆ, ಅದರ ಸಾಗಣಿಕೆ, ಪ್ಯಾಕೇಜಿಂಗ್ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳನ್ನೂ ಸಹ ಹೆಚ್ಚಿಸುತ್ತಿದೆ. ಕಚ್ಚಾ ತೈಲ ಬೆಲೆಗಳ ಏರಿಕೆಯು ಕೇವಲ ತೈಲ ಸಂಗ್ರಹಣೆಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಿಗೆ ಲ್ಯಾಮಿನೇಷನ್, ಪ್ಲಾಸ್ಟಿಕ್ ಮತ್ತು ಕಾಗದ ಆಧಾರಿತ ಪ್ಯಾಕೇಜಿಂಗ್ ಸಾಮಗ್ರಿಗಳ ಮೇಲೂ ಪ್ರಭಾವ ಬೀರುತ್ತದೆ. ಇವೆಲ್ಲವೂ ಎಫ್‌ಎಂಸಿಜಿ ಕಂಪನಿಗಳ ಒಟ್ಟು ವೆಚ್ಚದ ಪ್ರಮುಖ ಭಾಗವಾಗಿವೆ ಎಂದು ಮೋದಿ ಹೇಳಿದ್ದಾರೆ.
ಭಾರತವು ತನ್ನ ಒಟ್ಟು ಅಡುಗೆ ಎಣ್ಣೆಯ ಅಗತ್ಯದ ಸುಮಾರು ಶೇ 60ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ, ಪ್ರಸ್ತುತ ಪರಿಸ್ಥಿತಿಯು ದೇಶಕ್ಕೆ ಹೆಚ್ಚು ಕಳವಳಕಾರಿಯಾಗಿದೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ಈ ಭಾರಿ ಆಮದು ಅವಲಂಬನೆಯೇ ಜಾಗತಿಕ ಪೂರೈಕೆ ವ್ಯತ್ಯಯ, ಸಾಗಣಿಕೆ ವೆಚ್ಚದ ಏರಿಕೆ ಮತ್ತು ಕರೆನ್ಸಿ ಮೌಲ್ಯದ ಏರಿಳಿತಗಳಿಗೆ ಭಾರತದ ದೇಶೀಯ ಬೆಲೆಗಳು ತುತ್ತಾಗುವಂತೆ ಮಾಡಿದೆ.
ಹಿಂದೆ ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕವಾಗಿ ಸೂರ್ಯಕಾಂತಿ ಎಣ್ಣೆಯ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಿತ್ತು. ಈಗ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಗಗನಕ್ಕೇರುತ್ತಿರುವ ಸಾಗಣಿಕೆ ವೆಚ್ಚಗಳು ಜಾಗತಿಕ ಸಸ್ಯಜನ್ಯ ತೈಲ ಮಾರುಕಟ್ಟೆಯ ಮೇಲೆ ಮತ್ತೊಮ್ಮೆ ತೀವ್ರ ಒತ್ತಡವನ್ನು ಸೃಷ್ಟಿಸುತ್ತಿವೆ.
►ಕುಟುಂಬಗಳಿಗೆ ಆರ್ಥಿಕ ಸಂಕಷ್ಟ
ತಮ್ಮ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದಿದ್ದರೂ ಸಹ ಸಾಮಾನ್ಯ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ ಎಂದು ದಿಲ್ಲಿ-ಎನ್‌ಸಿಆರ್‌ನ ಉದ್ಯೋಗಿಯಾದ ಕುಶ್ ಶರ್ಮಾ ಹೇಳಿದ್ದಾರೆ.
"ಒಂದು ವಸ್ತುವಿನ ಬೆಲೆ ಹೆಚ್ಚಾಗುತ್ತದೆ, ಮತ್ತೊಂದೆಡೆ ಪ್ಯಾಕೆಟ್‌ನ ಗಾತ್ರ ಚಿಕ್ಕದಾಗುತ್ತದೆ. ಹೀಗಾಗಿ ಜೀವನಶೈಲಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡಿಕೊಳ್ಳದಿದ್ದರೂ ತಿಂಗಳ ದಿನಸಿ ಬಿಲ್ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ. ವೇತನ ಪಡೆಯುವ ಮಧ್ಯಮ ವರ್ಗದ ಕುಟುಂಬಗಳ ದೊಡ್ಡ ಸವಾಲೆಂದರೆ, ಅವರ ಆದಾಯವು ಅಷ್ಟೇ ಇರುತ್ತದೆ. ಆದರೆ ಆಹಾರ ಮತ್ತು ಇಂಧನ ಆಧಾರಿತ ಖರ್ಚುಗಳು ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತವೆ ಎಂದು ಶರ್ಮಾ ಹೇಳಿದ್ದಾರೆ.
ಇದರಿಂದಾಗಿ ಅನೇಕ ಕುಟುಂಬಗಳು ಈಗ ತಮ್ಮ ಖರ್ಚು ವೆಚ್ಚಗಳನ್ನು ಸದ್ದಿಲ್ಲದೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ.
ಕೆಲವರು ಆಹಾರ ಪೋಲಾಗುವುದನ್ನು ಕಡಿಮೆ ಮಾಡುತ್ತಿದ್ದರೆ, ಇನ್ನು ಕೆಲವರು ಹೋಟೆಲ್ ಅಥವಾ ಹೊರಗಿನ ಆಹಾರದ ಆರ್ಡರ್‌ಗಳನ್ನು ಕಡಿತಗೊಳಿಸುತ್ತಿದ್ದಾರೆ. ಬ್ರಾಂಡ್‌ಗಳ ಬೆಲೆಗಳನ್ನು ಸೂಕ್ಷ್ಮವಾಗಿ ಹೋಲಿಕೆ ಮಾಡುವುದು ಅಥವಾ ಅನಿವಾರ್ಯವಲ್ಲದ ಐಷಾರಾಮಿ ವಸ್ತುಗಳ ಖರೀದಿಯನ್ನು ಸದ್ಯಕ್ಕೆ ಮುಂದೂಡುವುದು ಹೆಚ್ಚಾಗುತ್ತಿದೆ.
ಅರ್ಥಶಾಸ್ತ್ರಜ್ಞರ ಪ್ರಕಾರ, ಆಹಾರದ ಮೇಲಿನ ಹಣದುಬ್ಬರವು ಜನರಿಗೆ ಹೆಚ್ಚು ತೊಂದರೆ ನೀಡುತ್ತದೆ, ಏಕೆಂದರೆ ದಿನಸಿ ವಸ್ತುಗಳು ಯಾವುದೇ ಕಾರಣಕ್ಕೂ ಕೈಬಿಡಲಾಗದ ಅತ್ಯಗತ್ಯ ವೆಚ್ಚಗಳಾಗಿವೆ.
ಇಂಧನ ಮತ್ತು ಖಾದ್ಯ ತೈಲದ (ಅಡುಗೆ ಎಣ್ಣೆ) ಆಮದಿನ ಮೇಲೆ ಭಾರತವು ಅತಿಯಾಗಿ ಅವಲಂಬಿತವಾಗಿರುವುದು ಈಗ ನೇರವಾಗಿ ಮನೆಬಳಕೆಯ ಹಣದುಬ್ಬರದಲ್ಲಿ ಕಂಡುಬರುತ್ತಿದೆ ಅಂತಾರೆ ಬ್ಲೂ ಪ್ಲಾನೆಟ್ ಬಯೋಫ್ಯುಯೆಲ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ವಿಶಾಲ್ ಖಾಲ್ಡೆ.
ಕಚ್ಚಾ ತೈಲ ಬೆಲೆಗಳ ಏರಿಳಿತವು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಮಾತ್ರವಲ್ಲದೆ, ಸಾರಿಗೆ ವೆಚ್ಚ, ಪ್ಯಾಕಿಂಗ್ ವೆಚ್ಚ, ಕೋಲ್ಡ್ ಚೈನ್ ಸಂಸ್ಕರಣೆ ಮತ್ತು ವಿತರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮೇಲೂ ನೇರ ಪರಿಣಾಮ ಬೀರುತ್ತದೆ. ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತಕ್ಕೆ ಬಲವಾದ ಇಂಧನ ಭದ್ರತೆಯ ಅಗತ್ಯವಿದೆ. ಸಂಕುಚಿತ ಜೈವಿಕ ಅನಿಲ ಹಾಗೂ ಜೈವಿಕ ಇಂಧನಗಳಂತಹ ಪರ್ಯಾಯ ಮಾರ್ಗಗಳಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಎಂದು ಖಾಲ್ಡೆ ಹೇಳಿದ್ದಾರೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಆರ್ಥಿಕ ಒತ್ತಡವು ನೇರವಾಗಿ ಅಡುಗೆಮನೆಗೆ ಬಂದು ತಲುಪಿದೆ.
►ಕುಟುಂಬಗಳು ಯಾವ ರೀತಿ ಖರ್ಚು ಸರಿದೂಗಿಸುತ್ತವೆ ?
ಭಾರತೀಯ ಕುಟುಂಬಗಳು ಪ್ರತಿ ತಿಂಗಳು ತಮ್ಮ ಆದಾಯವನ್ನು 30 ಕ್ಕೂ ಹೆಚ್ಚು ವಿಧದ ಬಳಕೆಯ ವಸ್ತುಗಳ ಮೇಲೆ ಹೇಗೆ ಖರ್ಚು ಮಾಡುತ್ತವೆ ಎಂಬುದನ್ನು 'ರಾಷ್ಟ್ರೀಯ ಮಾದರಿ ಸಮೀಕ್ಷೆ' (National Sample Survey) ಪತ್ತೆ ಮಾಡುತ್ತದೆ. ಅಡುಗೆ ಎಣ್ಣೆ ವಿಷಯಕ್ಕೆ ಬಂದರೆ, ಈ ಪ್ರವೃತ್ತಿಯು ಒಂದು ಸ್ಪಷ್ಟ ದಿಕ್ಕಿನಲ್ಲಿ ಸಾಗುತ್ತಿದೆ.
ಗ್ರಾಮೀಣ ಭಾರತದಲ್ಲಿ, 2004-05 ರಲ್ಲಿ ಒಂದು ಸಾಮಾನ್ಯ ಕುಟುಂಬದ ಒಟ್ಟು ಮಾಸಿಕ ಖರ್ಚಿನಲ್ಲಿ ಖಾದ್ಯ ತೈಲದ ಪಾಲು ಶೇಕಡಾ 4.44 ರಷ್ಟಿತ್ತು. ಆದರೆ 2023-24 ರ ವೇಳೆಗೆ, ಈ ಪ್ರಮಾಣವು ಶೇಕಡಾ 2.77 ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ನಗರ ಭಾರತದಲ್ಲಿ ಈ ಪಾಲು ಶೇಕಡಾ 3.29 ರಿಂದ ಶೇಕಡಾ 1.82 ಕ್ಕೆ ಇಳಿದಿದೆ.
ಬಳಕೆಯನ್ನು ಕಡಿಮೆ ಮಾಡುವಂತೆ ಸರ್ಕಾರದಿಂದ ಯಾವುದೇ ರೀತಿಯ ಮನವಿಗಳು ಬರದಿದ್ದರೂ ಸಹ, ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಭಾಗದ ಬಜೆಟ್ ಪಾಲಿನಲ್ಲಿ ಸುಮಾರು ಶೇಕಡಾ 38 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ 45 ರಷ್ಟು ಕುಸಿತ ಕಂಡುಬಂದಿದೆ.
ನಿಖರವಾದ ಮೊತ್ತದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಪ್ರಸ್ತುತ ಒಬ್ಬ ಗ್ರಾಮೀಣ ಭಾರತೀಯನು ತಿಂಗಳಿಗೆ ಸರಾಸರಿ ರೂ 114.65 ರಷ್ಟನ್ನು ಖಾದ್ಯ ತೈಲಕ್ಕಾಗಿ ಖರ್ಚು ಮಾಡುತ್ತಿದ್ದಾನೆ. ಅದೇ ರೀತಿ ನಗರದಲ್ಲಿ ವಾಸಿಸುವ ಭಾರತೀಯ ಸರಾಸರಿ ರೂ127.28 ರಷ್ಟನ್ನು ಖರ್ಚು ಮಾಡುತ್ತಿದ್ದಾನೆ.
►ಹೊರೆ ಹೆಚ್ಚಾಗಿದ್ದು ಎಲ್ಲಿ?
ದೇಶದ ಒಟ್ಟಾರೆ ಸರಾಸರಿಯು, ರಾಜ್ಯಗಳ ನಡುವಿನ ಭಾರಿ ವ್ಯತ್ಯಾಸಗಳನ್ನು ಮರೆಮಾಚುತ್ತದೆ.
ʼಸೌತ್ ಫಸ್ಟ್ʼ ವರದಿ ಪ್ರಕಾರ ಗುಜರಾತ್ ಈ ಪಟ್ಟಿಯಲ್ಲಿ ಇತರ ರಾಜ್ಯಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಅಲ್ಲಿನ ಗ್ರಾಮೀಣ ಕುಟುಂಬಗಳು ಖಾದ್ಯ ತೈಲಕ್ಕಾಗಿ ತಿಂಗಳಿಗೆ ಸರಾಸರಿ ರೂ 168.14 ಖರ್ಚು ಮಾಡುತ್ತವೆ. ಇದು ದೇಶದ ಒಟ್ಟಾರೆ ಗ್ರಾಮೀಣ ಸರಾಸರಿಗಿಂತ ಸುಮಾರು ಶೇಕಡಾ 47 ರಷ್ಟು ಹೆಚ್ಚಾಗಿದೆ. ಅಂದರೆ, ಅವರು ತಮ್ಮ ಒಟ್ಟು ಗೃಹ ಬಜೆಟ್‌ನ ಶೇಕಡಾ 4.01 ರಷ್ಟನ್ನು ಇದಕ್ಕೆ ಬಳಸುತ್ತಿದ್ದಾರೆ.
ಛತ್ತೀಸ್‌ಗಢದ ಗ್ರಾಮೀಣ ಕುಟುಂಬಗಳು ತಮ್ಮ ಒಟ್ಟು ಖರ್ಚಿನ ಶೇಕಡಾ 3.77 ರಷ್ಟನ್ನು ಎಣ್ಣೆಗಾಗಿ ಬಳಸುವ ಮೂಲಕ ಎರಡನೇ ಸ್ಥಾನದಲ್ಲಿವೆ. ಇನ್ನು ಬಿಹಾರದ ನಗರ ಪ್ರದೇಶದ ಕುಟುಂಬಗಳು ತಮ್ಮ ಬಜೆಟ್‌ನ ಶೇಕಡಾ 2.97 ರಷ್ಟನ್ನು ಅಡುಗೆ ಎಣ್ಣೆಗೆ ಮೀಸಲಿಡುತ್ತವೆ.
ಹರ್ಯಾಣವು ಖಾದ್ಯ ತೈಲದ ಮೇಲೆ ಅತ್ಯಂತ ಕಡಿಮೆ ಗ್ರಾಮೀಣ ವೆಚ್ಚವನ್ನು ದಾಖಲಿಸಿದೆ. ಅಲ್ಲಿ ತಿಂಗಳಿಗೆ ಸರಾಸರಿ ರೂ 60.78 ಮಾತ್ರ ಖರ್ಚಾಗುತ್ತದೆ, ಇದು ಅವರ ಒಟ್ಟು ಗೃಹ ವೆಚ್ಚದ ಕೇವಲ ಶೇಕಡಾ 1.12 ರಷ್ಟಾಗಿದೆ. ಕೇರಳದ ಗ್ರಾಮೀಣ ಕುಟುಂಬಗಳು ಶೇಕಡಾ 1.79 ರಷ್ಟನ್ನು ಮತ್ತು ತಮಿಳುನಾಡಿನ ಗ್ರಾಮೀಣ ಕುಟುಂಬಗಳು ಶೇಕಡಾ 1.43 ರಷ್ಟನ್ನು ಇದಕ್ಕೆ ಮೀಸಲಿಡುತ್ತವೆ.
ಈ ಅಂಕಿ-ಅಂಶಗಳು ಒಂದು ನಿರ್ದಿಷ್ಟ ಮಾದರಿಯನ್ನು ತೋರಿಸುತ್ತವೆ. ಒಟ್ಟಾರೆ ಕಡಿಮೆ ಬಳಕೆಯ ಮಟ್ಟವನ್ನು ಹೊಂದಿರುವ ಬಿಹಾರ, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು, ಶ್ರೀಮಂತ ರಾಜ್ಯಗಳಿಗೆ ಹೋಲಿಸಿದರೆ ತಮ್ಮ ಬಜೆಟ್‌ನ ಹೆಚ್ಚಿನ ಪಾಲನ್ನು ಖಾದ್ಯ ತೈಲಕ್ಕಾಗಿ ವ್ಯಯಿಸುತ್ತವೆ. ಉದಾಹರಣೆಗೆ, ತಿಂಗಳಿಗೆ ತಲಾ ಸರಾಸರಿ ರೂ 2,927 ಖರ್ಚು ಮಾಡುವ ಸಾಮರ್ಥ್ಯವಿರುವ ಗ್ರಾಮೀಣ ಛತ್ತೀಸ್‌ಗಢದ ಕುಟುಂಬವೊಂದು, ಪ್ರತಿ ಲೀಟರ್ ಎಣ್ಣೆ ಕೊಳ್ಳಲು ಪಡುವ ಶ್ರಮ ಮತ್ತು ಬಜೆಟ್ ಹೊಂದಾಣಿಕೆಯು, ಸರಾಸರಿ ರೂ 5,449 ವೆಚ್ಚ ಮಾಡುವ ಸಾಮರ್ಥ್ಯವಿರುವ ಗ್ರಾಮೀಣ ಹರಿಯಾಣದ ಕುಟುಂಬಕ್ಕಿಂತ ತೀರಾ ಹೆಚ್ಚಾಗಿರುತ್ತದೆ.
ದಕ್ಷಿಣ ಭಾರತದಲ್ಲಿ ಯಾವ ರೀತಿ ಅಡುಗೆ ಎಣ್ಣೆಯ ಬಳಕೆ ಇದೆ?:
ದಕ್ಷಿಣದ ಐದೂ ರಾಜ್ಯಗಳಲ್ಲಿ, ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಖಾದ್ಯ ತೈಲದ ಮೇಲಿನ ಖರ್ಚಿನ ಪಾಲು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.
ತಮಿಳುನಾಡು ಈ ವಲಯದಲ್ಲೇ ಅತ್ಯಂತ ಕಡಿಮೆ ಎಣ್ಣೆಯ ವೆಚ್ಚವನ್ನು ದಾಖಲಿಸಿದೆ. ಅಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿಗೆ 84.07 ರೂಪಾಯಿ ಮತ್ತು ನಗರ ಪ್ರದೇಶಗಳಲ್ಲಿ 101.98 ರೂಪಾಯಿ ಖರ್ಚಾಗುತ್ತದೆ. ತಮ್ಮ ಒಟ್ಟು ಗೃಹ ಬಜೆಟ್‌ನ ಪಾಲಿನ ಲೆಕ್ಕಾಚಾರದಲ್ಲಿ, ಗ್ರಾಮೀಣ ತಮಿಳುನಾಡಿನ ಕುಟುಂಬಗಳು ಕೇವಲ ಶೇಕಡಾ 1.43 ರಷ್ಟನ್ನು ಮಾತ್ರ ಇದಕ್ಕೆ ಮೀಸಲಿಡುತ್ತವೆ, ಇದು ರಾಷ್ಟ್ರೀಯ ಗ್ರಾಮೀಣ ಸರಾಸರಿಯಾದ ಶೇಕಡಾ 2.70 ಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ.
ಕೇರಳದ ಗ್ರಾಮೀಣ ಕುಟುಂಬಗಳು ಖಾದ್ಯ ತೈಲಕ್ಕಾಗಿ ತಿಂಗಳಿಗೆ ಸರಾಸರಿ 119.66 ರೂಪಾಯಿ ರಷ್ಟನ್ನು ಖರ್ಚು ಮಾಡಿದರೂ, ತಮ್ಮ ಒಟ್ಟು ಬಜೆಟ್‌ನ ಕೇವಲ ಶೇಕಡಾ 1.79 ರಷ್ಟನ್ನು ಮಾತ್ರ ಇದಕ್ಕೆ ಬಳಸುತ್ತವೆ. ಇನ್ನು ಕೇರಳದ ನಗರಗಳಲ್ಲಿ ಈ ಪಾಲು ಮತ್ತಷ್ಟು ಕುಸಿದು ಶೇಕಡಾ 1.41 ಕ್ಕೆ ತಲುಪಿದೆ. ಇದು ದೇಶದ ಪ್ರಮುಖ ರಾಜ್ಯಗಳ ನಗರ ಪ್ರದೇಶಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ ಒಂದಾಗಿದೆ. ಕೇರಳದ ಗ್ರಾಮೀಣ ಭಾಗದಲ್ಲಿ 6,673 ರೂಪಾಯಿ ಮತ್ತು ನಗರಗಳಲ್ಲಿ 7,834 ರೂಪಾಯಿಯಷ್ಟು ಹೆಚ್ಚಿನ ಮಾಸಿಕ ತಲಾ ವೆಚ್ಚ ಇರುವುದರಿಂದ, ಅಲ್ಲಿನ ಒಟ್ಟು ಖರ್ಚಿನಲ್ಲಿ ಅಡುಗೆ ಎಣ್ಣೆಯ ಮೇಲಿನ ವೆಚ್ಚದ ಪಾಲು ತಾನಾಗಿಯೇ ಕಡಿಮೆಯಾಗಿ ಕಾಣುತ್ತದೆ.
ಕರ್ನಾಟಕವು ರಾಷ್ಟ್ರೀಯ ಸರಾಸರಿಗೆ ಹತ್ತಿರದಲ್ಲಿದೆ. ಇಲ್ಲಿನ ಗ್ರಾಮೀಣ ಕುಟುಂಬಗಳು ಖಾದ್ಯ ತೈಲಕ್ಕಾಗಿ ತಿಂಗಳಿಗೆ 113.42 ರೂಪಾಯಿ ರಷ್ಟನ್ನು ಖರ್ಚು ಮಾಡುತ್ತವೆ, ಇದು ಅವರ ಒಟ್ಟು ಗ್ರಾಮೀಣ ವೆಚ್ಚದ ಶೇಕಡಾ 2.24 ರಷ್ಟಾಗುತ್ತದೆ. ಕರ್ನಾಟಕದ ನಗರ ಪ್ರದೇಶದ ಕುಟುಂಬಗಳು 121.77 ರೂಪಾಯಿ ರಷ್ಟನ್ನು ಅಂದರೆ ತಮ್ಮ ಒಟ್ಟು ಬಜೆಟ್‌ನ ಶೇಕಡಾ 1.49 ರಷ್ಟನ್ನು ವ್ಯಯಿಸುತ್ತವೆ. ಇದು ಸಹ ರಾಷ್ಟ್ರೀಯ ನಗರ ಸರಾಸರಿಯಾದ ಶೇಕಡಾ 1.80 ಕ್ಕಿಂತ ಕಡಿಮೆಯಾಗಿದೆ.
ತೆಲಂಗಾಣದ ಗ್ರಾಮೀಣ ಭಾಗದಲ್ಲಿ ನಿಖರವಾದ ಮೊತ್ತದ ಲೆಕ್ಕದಲ್ಲಿ 127.60 ರೂಪಾಯಿ ಖರ್ಚಾಗುತ್ತಿದ್ದು, ಇದು ರಾಷ್ಟ್ರೀಯ ಗ್ರಾಮೀಣ ಸರಾಸರಿಗಿಂತ ಹೆಚ್ಚಾಗಿದೆ. ಆದರೆ ಒಟ್ಟು ಗ್ರಾಮೀಣ ವೆಚ್ಚದ ಪಾಲನ್ನು ನೋಡಿದಾಗ ಇದು ಶೇಕಡಾ 2.25 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಪಾಲಿಗಿಂತ ಕಡಿಮೆಯಾಗಿದೆ. ತೆಲಂಗಾಣದ ನಗರ ಪ್ರದೇಶದ ಕುಟುಂಬಗಳು ಅಡುಗೆ ಎಣ್ಣೆಗಾಗಿ 119.44 ರೂಪಾಯಿ ಅಥವಾ ತಮ್ಮ ಬಜೆಟ್‌ನ ಶೇಕಡಾ 1.31 ರಷ್ಟನ್ನು ಖರ್ಚು ಮಾಡುತ್ತವೆ ಎಂದು ಸೌತ್ ಫಸ್ಟ್ ವರದಿ ಉಲ್ಲೇಖಿಸಿದೆ.
►ನೀತಿ ಆಯೋಗದ ವರದಿಯಲ್ಲೇನಿದೆ?
ರಾಷ್ಟ್ರೀಯ ಮಾದರಿ ಸಮೀಕ್ಷೆಯು (NSS) ಸಮಸ್ಯೆಯನ್ನು ಗ್ರಾಹಕರ ಅಡುಗೆಮನೆಯ ದೃಷ್ಟಿಕೋನದಿಂದ ನೋಡಿದರೆ, ನೀತಿ ಆಯೋಗದ 2024 ರ 'ಖಾದ್ಯ ತೈಲ ಸ್ವಾವಲಂಬನೆ' ವರದಿಯು ಇದನ್ನು ಪೂರೈಕೆ ಸರಪಳಿಯ (Supply chain) ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ.
ಭಾರತದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ವಾರ್ಷಿಕ ಅಡುಗೆ ಎಣ್ಣೆಯ ಬಳಕೆ 1960-61 ರಲ್ಲಿ 3.2 ಕೆ.ಜಿ ಇತ್ತು. ಇದು 1980-81 ರ ವೇಳೆಗೆ 3.8 ಕೆ.ಜಿಗೆ, 2000-01 ರಲ್ಲಿ 8.2 ಕೆ.ಜಿಗೆ ಮತ್ತು 2020-21 ರ ವೇಳೆಗೆ ಭಾರಿ ಪ್ರಮಾಣದಲ್ಲಿ ಅಂದರೆ 19.7 ಕೆ.ಜಿಗೆ ಏರಿತು. ಈ ತೀವ್ರ ಏರಿಕೆಗೆ ಮೂರು ಮುಖ್ಯ ಕಾರಣಗಳನ್ನು ವರದಿ ಗುರುತಿಸಿದೆ. ಅವುಗಳೆಂದರೆ ಜನಸಂಖ್ಯೆಯ ಬೆಳವಣಿಗೆ, ವೇಗದ ನಗರೀಕರಣ ಮತ್ತು ಜನರ ತಲಾ ಆದಾಯದಲ್ಲಿನ ಹೆಚ್ಚಳ.
ಜನಸಂಖ್ಯೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಜನರ ಆದಾಯ ಹೆಚ್ಚಾದಂತೆ ಅವರು ಹೆಚ್ಚು ಎಣ್ಣೆಯಂಶವಿರುವ ಸಂಸ್ಕರಿಸಿದ ಮತ್ತು ಕರಿದ ಆಹಾರ ಪದಾರ್ಥಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ವ್ಯಕ್ತಿಯ ಎಣ್ಣೆಯ ಬಳಕೆಯೂ ಹೆಚ್ಚಾಗುತ್ತಿದೆ.
ಇದರಲ್ಲಿ ನಗರೀಕರಣದ ಪಾತ್ರ ತುಂಬಾ ಮುಖ್ಯವಾದುದು. ನೀತಿ ಆಯೋಗದ ವರದಿಯ ಪ್ರಕಾರ, ಗ್ರಾಮೀಣ ಭಾಗದ ಕುಟುಂಬಗಳು ಸಾಸಿವೆ ಎಣ್ಣೆಯನ್ನು ಹೆಚ್ಚು ಇಷ್ಟಪಡುತ್ತವೆ ಮತ್ತು ಹಳ್ಳಿಗಳಲ್ಲಿ ಬಳಕೆಯಾಗುವ ಒಟ್ಟು ಎಣ್ಣೆಯಲ್ಲಿ ಇದರ ಪಾಲು ಸುಮಾರು ಶೇಕಡಾ 45 ರಷ್ಟಿದೆ. ಆದರೆ ನಗರ ಪ್ರದೇಶದ ಜನರು ರಿಫೈನ್ಡ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಗಳ ಕಡೆಗೆ ಬದಲಾಗುತ್ತಿದ್ದಾರೆ. ನಗರಗಳಲ್ಲಿ ಇವುಗಳ ಪಾಲು ಶೇಕಡಾ 47 ರಷ್ಟಿದೆ. ವಿಶೇಷವೆಂದರೆ, ಈ ರಿಫೈನ್ಡ್ ಎಣ್ಣೆಗಳಿಗಾಗಿಯೇ ಭಾರತವು ಬೇರೆ ದೇಶಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಹೀಗಾಗಿ, ನಗರೀಕರಣ ಎನ್ನುವುದು ಕೇವಲ ಗ್ರಾಹಕರ ಸಂಖ್ಯೆಯನ್ನು ಮಾತ್ರ ಹೆಚ್ಚಿಸುತ್ತಿಲ್ಲ. ಬದಲಾಗಿ ಭಾರತವು ಆಮದಿಗಾಗಿ ಯಾವ ಎಣ್ಣೆಗಳ ಮೇಲೆ ಅತಿ ಹೆಚ್ಚು ಅವಲಂಬಿತವಾಗಿದೆಯೋ, ಅಂತಹ ಎಣ್ಣೆಗಳನ್ನೇ ಜನರು ಹೆಚ್ಚು ಬಳಸುವಂತೆ ಮಾಡುತ್ತಿದೆ.