39 ಸೆಕೆಂಡಿಗೆ ಒಂದು ವೋಟ್! ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪವಾಡ?
►ವಿತ್ತ ಸಚಿವೆ ನಿರ್ಮಲಾ ಪತಿ ಪರಕಾಲ ಪ್ರಭಾಕರ್ ಬಿಚ್ಚಿಟ್ಟ ಶಾಕಿಂಗ್ ಸತ್ಯವೇನು? ► ಮಮತಾರನ್ನು ಸೋಲಿಸಿದ್ದು ಜನಾದೇಶವೇ, ವ್ಯವಸ್ಥೆಯೇ ?
Photo Credit : PTI
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಪತನಗೊಂಡು, ಬಿಜೆಪಿಯ ಬಹುಕಾಲದ ಅಧಿಕಾರದ ಕನಸು ಈಡೇರಿದೆ. ಆದರೆ ಬಿಜೆಪಿಯ ಈ ಗೆಲುವಿನ ಹಿಂದೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಅವಮಾನಕರ ಸೋಲನ್ನು ಕಂಡಿರುವುದರ ಹಿಂದೆ, ಅವರು 7,000 ಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮ ಸ್ವಂತ ಕ್ಷೇತ್ರವನ್ನು ಕಳೆದುಕೊಂಡದ್ದರ ಹಿಂದೆ ನಿಜವಾಗಿಯೂ ನಡೆದಿರುವ ಪವಾಡವೇನು?
ಫಲಿತಾಂಶ ಬಂದಾಗ, ಬಿಜೆಪಿ ಮೂರನೇ ಎರಡರಷ್ಟು ಬಹುಮತವನ್ನು ಗೆದ್ದಿತ್ತು. 2021ರಲ್ಲಿ ಇದ್ದ ತನ್ನ 77 ಸ್ಥಾನಗಳನ್ನು 207ಕ್ಕೆ ಹೆಚ್ಚಿಸಿಕೊಂಡಿತು. ಅದೇ ವೇಳೆ ಟಿಎಂಸಿ 2021ರಲ್ಲಿ ಇದ್ದ 215 ಸ್ಥಾನಗಳಿಂದ ಈ ಬಾರಿ 80ಕ್ಕೆ ಕುಸಿಯಿತು. 2021ರಲ್ಲಿ ಬಿಜೆಪಿಯ ಮತ ಹಂಚಿಕೆ ಶೇ.38.39 ಇದ್ದದ್ದು ಈ ಚುನಾವಣೆಯಲ್ಲಿ ಶೇ.46.20ಕ್ಕೆ ಏರಿತು. ಇದು ಶೇ.7.81ರಷ್ಟು ಹೆಚ್ಚಳ.
ಟಿಎಂಸಿ ಮತ ಹಂಚಿಕೆ 2021ರಲ್ಲಿ ಶೇ.48.55 ಇದ್ದದ್ದು ಶೇ.41.12ಕ್ಕೆ ಇಳಿಯಿತು. ಇದು ಶೇ.7.43ರಷ್ಟು ಕುಸಿತ. ಆದರೂ, ಶೇಕಡಾವಾರು ಪರಿಭಾಷೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಶೇ.5ರಷ್ಟು ಮಾತ್ರ ಇದೆ. ಬಿಜೆಪಿಯ ಒಟ್ಟಾರೆ ಸ್ಟ್ರೈಕ್ ರೇಟ್ ಏರಿಕೆ ಕಂಡಿದ್ದು, 2021ರಲ್ಲಿ ಶೇ.26.28 ಇದ್ದದ್ದು ಈಗ ಶೇ.70.65ಕ್ಕೆ ಮುಟ್ಟಿದೆ.
ಟಿಎಂಸಿ ಸ್ಟ್ರೈಕ್ ರೇಟ್ 2021ರಲ್ಲಿ ಶೇ.74.14 ಇದ್ದದ್ದು ತೀರಾ ಕೆಳಮಟ್ಟಕ್ಕೆ, ಅಂದರೆ ಶೇ.27.59ಕ್ಕೆ ಕುಸಿದಿದೆ. ಇಂಥದೊಂದು ಫಲಿತಾಂಶವನ್ನು ಯಾರೂ ಊಹಿಸಿರಲಿಲ್ಲ. ಅದನ್ನು ಅಸಹಜ ಎಂದು ನೋಡಲಾಯಿತು.
ಇದರೊಂದಿಗೆ ರಾಜ್ಯದಲ್ಲಿ ಅಷ್ಟೇ ಅಸಹಜ ರೀತಿಯಲ್ಲಿ ಚುರುಕಿನ ಮತದಾನವೂ ನಡೆದಿದೆ. ಇದು ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಬಗ್ಗೆ ಕೆಲ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಿಶ್ಲೇಷಕರು ಅನುಮಾನಪಡುವ ಪ್ರಕಾರ, ಬಂಗಾಳದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದೆ ಆಡಳಿತ ವಿರೋಧಿ ಅಲೆ ಮಾತ್ರವಲ್ಲದೆ, ಬೇರೆ ಅಂಶಗಳೂ ಇವೆ.
ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಗಮನಿಸುವ ಪ್ರಕಾರ, ಪಶ್ಚಿಮ ಬಂಗಾಳದಲ್ಲಿನ ಮತದಾನದ ವೇಗ ಈ ಚುನಾವಣೆಯಲ್ಲಿ ಅಸಹಜವಾದದ್ದೇನೋ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಪರಕಾಲ ಪ್ರಭಾಕರ್ ಅವರು ಫ್ರಂಟ್ಲೈನ್ನಲ್ಲಿ ಬರೆದಿರುವ ವಿಶ್ಲೇಷಣೆಯಲ್ಲಿ ಇದನ್ನು ವಿವರವಾಗಿ ನೋಡಿದ್ದಾರೆ. ಅವರು ಚುನಾವಣಾ ಆಯೋಗ ವರದಿ ಮಾಡುವ ಸಮಯದ ಸ್ಲಾಟ್ಗಳನ್ನು ಗಮನಿಸಿದ್ದಾರೆ. ಅಲ್ಲಿ ಪ್ರತಿ ನಿಮಿಷಕ್ಕೆ ಚಲಾಯಿಸಲಾದ ಮತಗಳನ್ನು ನೋಡಿದರೆ, ಹಂತ 1 ಮತ್ತು ಹಂತ 2ರಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗಿನ ಮತದಾನದ ವೇಗ ಅವಾಸ್ತವಿಕ ಮತ್ತು ಅನುಮಾನಾಸ್ಪದವಾಗಿದೆ ಎನ್ನುತ್ತಾರೆ. ಅವರು ವಿವರಿಸಿರುವಂತೆ, ಮೊದಲ ಹಂತದಲ್ಲಿ ಬೆಳಗ್ಗೆ 7ರಿಂದ 9 ಗಂಟೆಯ ನಡುವೆ ಪ್ರತಿ 47.2 ಸೆಕೆಂಡುಗಳಿಗೆ ಒಂದು ಮತ ಚಲಾವಣೆಯಾಗಿದೆ.
ಬೆಳಿಗ್ಗೆ 9ರಿಂದ 11 ಗಂಟೆಯ ನಡುವೆ ಒಂದು ಮತ ಚಲಾವಣೆಯಾಗಲು 39.7 ಸೆಕೆಂಡುಗಳು ಹಿಡಿದಿವೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ನಡುವಿನ ಮತದಾನದ ದರ ನೋಡಿದರೆ, ಪ್ರತಿ 42.2 ಸೆಕೆಂಡುಗಳಿಗೆ ಒಂದು ಮತ ಚಲಾವಣೆಯಾಗಿದೆ. ಮಧ್ಯಾಹ್ನ 1ರಿಂದ 3 ಗಂಟೆಯ ನಡುವೆ ಪ್ರತಿ ಮತ ಚಲಾವಣೆಗೆ 53.50 ಸೆಕೆಂಡುಗಳು ಹಿಡಿದಿವೆ.
ಮಧ್ಯಾಹ್ನ 3ರಿಂದ ಮತದಾನದ ಅಂತ್ಯದವರೆಗೆ ಮತದಾನದ ವೇಗ ಹೆಚ್ಚು ಸಹಜ ಎನ್ನಿಸುವಂತಿದೆ. ಮಧ್ಯಾಹ್ನ 3ರಿಂದ ಸಂಜೆ 5ರ ನಡುವೆ ಮತದಾನದ ದರ ಪ್ರತಿ ಮತ ಚಲಾವಣೆಗೆ 80 ಸೆಕೆಂಡುಗಳು ಹಿಡಿದಿವೆ. ಮತ್ತು ಸಂಜೆ 5ರಿಂದ ಮುಕ್ತಾಯದ ಸಮಯದವರೆಗೆ ಒಂದು ಮತ ಚಲಾವಣೆಗೆ 139.5 ಸೆಕೆಂಡುಗಳು ಹಿಡಿದಿವೆ.
ಎರಡನೇ ಹಂತದಲ್ಲಿಯೂ ಬೆಳಿಗ್ಗೆ 7ರಿಂದ 9 ಗಂಟೆಯ ನಡುವೆ ಒಂದು ಮತ ಚಲಾವಣೆಗೆ 50 ಸೆಕೆಂಡುಗಳು ಹಿಡಿದಿವೆ. ಬೆಳಿಗ್ಗೆ 9ರಿಂದ 11 ಗಂಟೆಯ ನಡುವೆ 42.5 ಸೆಕೆಂಡುಗಳು ಹಿಡಿದಿವೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ 43.4 ಸೆಕೆಂಡುಗಳಿಗೆ ಒಂದು ಮತ ಚಲಾವಣೆಯಾಗಿದೆ.
ಮಧ್ಯಾಹ್ನ 1ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ಒಂದು ಮತ ಚಲಾವಣೆಗೆ 52.1 ಸೆಕೆಂಡುಗಳು ಹಿಡಿದಿವೆ. ಈ ಹಂತದಲ್ಲಿಯೂ ಮಧ್ಯಾಹ್ನ 3ರಿಂದ ಮುಕ್ತಾಯದ ಸಮಯದ ನಡುವೆ ಮಾತ್ರ ಮತದಾನದ ವೇಗ ಸಹಜವಾಗಿ ಕಾಣುತ್ತದೆ. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ 81.1 ಸೆಕೆಂಡುಗಳಿಗೆ ಒಂದು ಮತ ಚಲಾವಣೆಯಾಗಿದೆ. ಸಂಜೆ 5ರಿಂದ ಮತದಾನ ಮುಗಿಯುವವರೆಗೆ ಪ್ರತಿ ಮತಕ್ಕೆ 272.7 ಸೆಕೆಂಡುಗಳು ಹಿಡಿದಿವೆ.
ಪರಕಾಲ ಅವರು ಹೇಳುವಂತೆ, ಒಂದು ಮತಗಟ್ಟೆಯಲ್ಲಿ ಮತದಾನಕ್ಕೆ ಒಟ್ಟು 660 ನಿಮಿಷಗಳು ಇರುತ್ತವೆ. ಲಭ್ಯವಿರುವ ನಿಮಿಷಗಳ ಸಂಖ್ಯೆ 660. ಯಾವುದೇ ಡೌನ್ಟೈಮ್ ಇಲ್ಲದಿದ್ದರೆ ಮಾತ್ರ ಎಲ್ಲಾ 660 ನಿಮಿಷಗಳು ಸಿಗುತ್ತವೆ. ಆದರೆ ಚಹಾ ಸೇವನೆ, ನೀರು ಕುಡಿಯುವುದು, ಊಟದ ಸಮಯ, ಶೌಚಾಲಯ ವಿರಾಮಗಳು, ಸಿಬ್ಬಂದಿ ಆಯಾಸಗೊಳ್ಳುವುದು, ವೃದ್ಧರು ಅಥವಾ ಅಂಗವಿಕಲ ಮತದಾರರಿಗೆ ಅವಕಾಶ ಕಲ್ಪಿಸುವುದು, ರೋಲ್ ಸರ್ಚ್ ವಿಳಂಬ, ಪಕ್ಷದ ಏಜೆಂಟ್ ಮತ್ತು ಚುನಾವಣಾಧಿಕಾರಿಯ ಮಧ್ಯಸ್ಥಿಕೆ ಇವೆಲ್ಲ ಕಾರಣಗಳಿಂದ ಡೌನ್ಟೈಮ್, ಅಂದರೆ ನಿಧಾನಗತಿ, ಆಗಬಹುದು.
ಇವೆಲ್ಲವೂ ಕನಿಷ್ಠ ಸುಮಾರು 30 ನಿಮಿಷಗಳಿಂದ 120 ನಿಮಿಷಗಳವರೆಗೆ ಸಮಯ ವ್ಯಯವಾಗಲು ಕಾರಣವಾಗಬಹುದು. ಆದರೆ ಬಂಗಾಳದಲ್ಲಿನ ಮತದಾನದ ವೇಗ ಅನುಮಾನಗಳನ್ನು ಹುಟ್ಟಿಸುತ್ತದೆ. ಮೊದಲ ಹಂತದಲ್ಲಿ ವರದಿಯಾದ ಮತದಾನದ ಶೇಕಡಾವಾರು ಪ್ರಮಾಣ ಮುಟ್ಟಲು ಡೌನ್ಟೈಮ್ ಇಲ್ಲದೆ, ಒಬ್ಬ ಮತದಾರ ಸರಾಸರಿ 52.4 ಸೆಕೆಂಡುಗಳಲ್ಲಿ ಮತ ಚಲಾಯಿಸಬೇಕಾಗಿತ್ತು. ಮತ್ತು ಎರಡನೇ ಹಂತದಲ್ಲಿ ಯಾವುದೇ ಡೌನ್ಟೈಮ್ ಇಲ್ಲದೆ, ಮತ ಚಲಾಯಿಸಲು ಕೇವಲ 55.2 ಸೆಕೆಂಡುಗಳು ಹಿಡಿದಿದ್ದವು.
ಎರಡೂ ಹಂತಗಳಲ್ಲಿ ಒಟ್ಟಾಗಿ, ಪ್ರತಿ ಮತದಾರನಿಗೆ ಲಭ್ಯವಿದ್ದ ಸರಾಸರಿ ಸಮಯ 53.7 ಸೆಕೆಂಡುಗಳು. ಪರಕಾಲ ಅವರ ಲೆಕ್ಕಾಚಾರದ ಪ್ರಕಾರ, ಪ್ರತಿ ಮತದಾರನಿಗೆ 54 ಸೆಕೆಂಡುಗಳಿಗಿಂತ ಕಡಿಮೆ ಸಮಯ ಲಭ್ಯವಿದ್ದರೆ, ಒಂದು ಬೂತ್ ಸರಾಸರಿ 738 ಮತದಾರರನ್ನು ಮುಟ್ಟಲು ಸಾಧ್ಯವಿಲ್ಲ.
ಸರಾಸರಿ 60ಕ್ಕಿಂತ ಹೆಚ್ಚು ಸೆಕೆಂಡುಗಳನ್ನು ತೆಗೆದುಕೊಂಡರೆ, ಒಂದು ಬೂತ್ನಲ್ಲಿ ಕೇವಲ 660 ಮತದಾರರಷ್ಟೇ ಮತ ಹಾಕಲು ಸಾಧ್ಯ. ಸುಮಾರು 70 ಸೆಕೆಂಡುಗಳನ್ನು ತೆಗೆದುಕೊಂಡರೆ, ಒಂದು ಬೂತ್ನಲ್ಲಿ 566 ಮತದಾರರಿಗೆ ಅವಕಾಶವಾಗುವುದೂ ಕಷ್ಟ. ಹಾಗಾಗಿ, ಬಂಗಾಳದಲ್ಲಿ ಪ್ರತಿ ಮತಕ್ಕೆ 53.7 ಸೆಕೆಂಡುಗಳ ದರ ದಾಖಲಾಗಿದ್ದರೆ, ಅದು ನಿಜಕ್ಕೂ ವಿಶ್ವ ದಾಖಲೆ ಎಂದು ಪರಕಾಲ ಹೇಳುತ್ತಾರೆ.
ಏನಿಲ್ಲವೆಂದರೂ ಸುಮಾರು 80 ನಿಮಿಷಗಳ ನಿಧಾನಗತಿಯ ಸಾಧ್ಯತೆಯಿರುತ್ತದೆ ಮತ್ತು ಜೊತೆಗೆ 60ರಿಂದ 90 ನಿಮಿಷಗಳವರೆಗೆ ಯಂತ್ರ ನಿಷ್ಕ್ರಿಯತೆಯ ಸಾಧ್ಯತೆಯಿರುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಇದ್ಯಾವುದೂ ಇಲ್ಲವೆಂಬ ರೀತಿಯಲ್ಲಿ ಮತದಾನ ನಡೆದಿರುವಂತೆ ಕಾಣಿಸುತ್ತಿರುವುದು ದೊಡ್ಡ ಪವಾಡ ಎಂದು ಪರಕಾಲ ಹೇಳುತ್ತಾರೆ.
ಸಾಮಾನ್ಯವಾಗಿ ಒಂದು ಮತಗಟ್ಟೆಯಲ್ಲಿ ಏನೇನಾಗಬಹುದು ಎಂಬುದನ್ನು ಅವರು ವಿವರಿಸಿದ್ದಾರೆ. ಸರದಿಯಲ್ಲಿ ನಿಂತು ಮತಗಟ್ಟೆಗೆ ಪ್ರವೇಶಿಸಿದ ನಂತರ ಐಡಿ ಪರಿಶೀಲನೆ, ಸಹಿ ಅಥವಾ ಹೆಬ್ಬೆಟ್ಟು ಗುರುತು, ಅಳಿಸಲಾಗದ ಶಾಯಿ ಗುರುತು ಹಾಕುವುದರಿಂದ ಹಿಡಿದು, ಮತದಾರ ಚಿಹ್ನೆ ನೋಡಿ ಮತ ಒತ್ತುವುದು, VVPAT ಡ್ರಾಪ್ ಮತ್ತು ಕೊನೆಯದಾಗಿ ಮುಂದಿನ ಮತದಾರರಿಗೆ ಸಿದ್ಧವಾಗುವಂತೆ ಯಂತ್ರವನ್ನು ಮರುಹೊಂದಿಸುವವರೆಗೆ ಪ್ರಕ್ರಿಯೆ ನಡೆಯುತ್ತದೆ.
ಎಷ್ಟೇ ವೇಗವೆಂದರೂ ಇದೆಲ್ಲದಕ್ಕೂ ಕನಿಷ್ಠ 60 ಸೆಕೆಂಡುಗಳಾದರೂ ಬೇಕು. ಬಂಗಾಳದಲ್ಲಿ ಈ ಸಮಯವನ್ನು ಶೇ.40ರಷ್ಟು ತಗ್ಗಿಸಲಾಯಿತು ಎಂದುಕೊಂಡರೂ, ಮತ ಚಲಾವಣೆಯಾದ ವೇಗ ನೋಡಿದರೆ ನಂಬಲಿಕ್ಕಾಗುವುದಿಲ್ಲ. ಬೇರೆ ದೇಶಗಳಲ್ಲಿನ ಮತದಾನದ ವೇಗ ನೋಡಿದರೂ, ಬಂಗಾಳದಲ್ಲಿನ ಸಂದರ್ಭ ಬಹಳ ವಿಚಿತ್ರವಾಗಿ ಕಾಣುತ್ತದೆ. ಚುನಾವಣಾ ಪ್ರೋಟೋಕಾಲ್ಗಳು ಭಾರತದ ಹತ್ತಿರವಿರುವ ಭೂತಾನ್ನಲ್ಲಿ 2024ರ ಚುನಾವಣೆಯಲ್ಲಿ ಪ್ರತಿ ಮತ ಚಲಾವಣೆಗೆ ಸರಾಸರಿ 106.7 ಸೆಕೆಂಡುಗಳು ಹಿಡಿದಿದ್ದವು.
ದೊಡ್ಡ ಪ್ರಮಾಣದ ಇವಿಎಂ ಪ್ರಜಾಪ್ರಭುತ್ವವಾಗಿರುವ ಬ್ರೆಝಿಲ್ನಲ್ಲಿ 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಮತ ಚಲಾವಣೆಗೆ 123.1 ಸೆಕೆಂಡುಗಳು ಬೇಕಾದವು. ಕಾಗದದ ಮತಪತ್ರ ಬಳಸುವ ದಕ್ಷಿಣ ಆಫ್ರಿಕಾದಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಮತ ಚಲಾವಣೆಗೆ ಸರಾಸರಿ 76.7 ಸೆಕೆಂಡುಗಳು ಹಿಡಿದಿದ್ದವು. ಕಾಗದದ ಮತಪತ್ರ ಬಳಕೆಯಿರುವ ಯುಕೆಯಲ್ಲಿಯೂ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸರಾಸರಿ ಮತದಾನದ ಸಮಯ ಪ್ರತಿ ಮತಕ್ಕೆ 102.2 ಸೆಕೆಂಡುಗಳು ಎಂದು ಪರಕಾಲ ಉಲ್ಲೇಖಿಸಿದ್ದಾರೆ. ಆದರೆ ಇವೆಲ್ಲಕ್ಕೆ ತದ್ವಿರುದ್ಧವಾಗಿ ಬಂಗಾಳದಲ್ಲಿ, ಪ್ರತಿ ಮತದಾರರಿಗೆ ಸರಾಸರಿ 53.7 ಸೆಕೆಂಡುಗಳು ಮಾತ್ರ ಹಿಡಿದವು. ಕೆಲವು ಸಮಯದಲ್ಲಂತೂ ಪ್ರತಿ ಮತದಾರರಿಗೆ 39.7 ಸೆಕೆಂಡುಗಳಷ್ಟು ಕಡಿಮೆಯಾಗಿರುವುದು ಕೂಡ ಕಂಡಿದೆ.
ಈ ವರ್ಷದ ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕೃತ ಮುಕ್ತಾಯ ಸಮಯದ ನಂತರ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ನಂಬಲಾಗದ ಏರಿಕೆ ಕಂಡುಬಂದಿತ್ತು ಎಂಬುದನ್ನು ಪರಕಾಲ ಉಲ್ಲೇಖಿಸಿದ್ದಾರೆ. ಆದರೆ ಬಂಗಾಳದಲ್ಲಿ ಚುನಾವಣಾ ಆಯೋಗ ಅಧಿಕೃತ ಮತದಾನದ ಸಮಯದೊಳಗೇ ತಾನು ಬಯಸಿದ್ದ ಮತದಾನದ ಶೇಕಡಾವಾರು ಪ್ರಮಾಣವನ್ನು ಸಾಧಿಸಲು ನೋಡಿರುವಂತಿದೆ ಎಂದು ಪರಕಾಲ ವಿಶ್ಲೇಷಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಶೇ.80.66ರಷ್ಟು ಮತದಾನವಾಗಲು ಮರುದಿನ ಬೆಳಗಿನ ಜಾವ 2 ಗಂಟೆಯವರೆಗೆ ತೆಗೆದುಕೊಂಡಿತ್ತು. ಆದರೆ ಬಂಗಾಳದಲ್ಲಿ ಎರಡೂ ಹಂತಗಳಲ್ಲಿ ಸಂಜೆ 6 ಗಂಟೆಯೊಳಗೇ ಶೇ.92.47ರಷ್ಟು ಮತದಾನವಾಗಿತ್ತು ಎಂಬುದನ್ನು ಪರಕಾಲ ಗಮನಿಸುತ್ತಾರೆ. ಬಂಗಾಳದ ಅನೇಕ ಕ್ಷೇತ್ರಗಳಲ್ಲಿನ ಡೇಟಾ ಗಮನಿಸಿದರೆ, ಅಧಿಕೃತವಾಗಿ ಘೋಷಿಸಲಾದ ಮತದಾನದ ಅಂಕಿಅಂಶ ನಿರ್ದಿಷ್ಟ ಸಮಯದಲ್ಲಿ ಮತದಾನ ಮಾಡಬಹುದಾದ ಮತಗಳ ಸಂಖ್ಯೆಗೆಿಂತ ಹೆಚ್ಚಿದೆ ಎಂಬುದರ ಬಗ್ಗೆ ಪರಕಾಲ ಗಮನ ಸೆಳೆಯುತ್ತಾರೆ.
ಪ್ರತಿ ಮತಕ್ಕೆ 45 ಸೆಕೆಂಡುಗಳ ದರ ಶೂನ್ಯ ಡೌನ್ಟೈಮ್ನಲ್ಲಿಯೂ ಸಾಧ್ಯವಿಲ್ಲ. ಸಂಜೆ 5 ಗಂಟೆಯ ಮೊದಲು ಬಹುತೇಕ ಎಲ್ಲಾ ಸಮಯಗಳಲ್ಲಿ ಮತದಾನದ ಅತಿಯಾದ ಪ್ರಮಾಣ ಕಾಣಿಸಿದೆ. ಇದು ಮತದಾನದ ಅಂಕಿಅಂಶಗಳ ಬಗ್ಗೆ ಹೆಚ್ಚು ಅನುಮಾನ ಮೂಡಿಸುತ್ತದೆ. ಇದು ಬಂಗಾಳದ ಘೋಷಿತ ಫಲಿತಾಂಶವನ್ನು ಅತ್ಯಂತ ಪ್ರಶ್ನಾರ್ಹವಾಗಿಸುತ್ತದೆ ಎನ್ನುತ್ತಾರೆ ಪರಕಾಲ ಪ್ರಭಾಕರ್.
SIR ಮೂಲಕ ನಡೆದ ಮತದಾರರ ಅಳಿಸುವಿಕೆಯನ್ನೂ ಬಂಗಾಳ ಚುನಾವಣೆ ಫಲಿತಾಂಶದಲ್ಲಿ ಪರಿಗಣಿಸಬೇಕು ಎಂದು ಪರಕಾಲ ಹೇಳಿದ್ದಾರೆ. ಆದರೆ SIR ಅಳಿಸುವಿಕೆಗಳನ್ನು ಚುನಾವಣಾ ಫಲಿತಾಂಶಗಳ ದೃಷ್ಟಿಕೋನದಿಂದ ಮಾತ್ರ ನೋಡುವುದು ದೋಷವಾಗುತ್ತದೆ. SIR ದೀರ್ಘಾವಧಿಯ ಮತ್ತು ಆಳವಾದ ಪರಿಣಾಮಗಳನ್ನು ಹೊಂದಿದೆ. ಇದನ್ನು ಭಾರತದ ರಾಜಕೀಯ ಸಮಾಜದ ಸ್ವರೂಪವನ್ನು ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದ್ದು, ಯಾವುದೇ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪರಕಾಲ ಪ್ರಭಾಕರ್ ಹೇಳಿದ್ದಾರೆ.
SIR ಪ್ರಕ್ರಿಯೆಯ ಪರಿಣಾಮವಾಗಿ ಮತದಾನದ ಹಕ್ಕನ್ನು ಹೊಂದಿರುವವರು ಮತ್ತು ಮತದಾನದ ಹಕ್ಕನ್ನು ಹೊಂದಿರದವರು ಎಂದು ಎರಡು ವರ್ಗಗಳು ಸೃಷ್ಟಿಯಾಗುತ್ತವೆ. ಕೆಲ ವರ್ಷಗಳ ಹಿಂದೆ CAA-NRC ಉದ್ದೇಶಿಸಿದ್ದನ್ನೇ ಇದು ಸಾಧಿಸುತ್ತದೆ ಎಂದು ಬರೆದಿದ್ದಾರೆ.
CAA-NRCಗೆ ತೀವ್ರ ಪ್ರತಿರೋಧ ಎದುರಾದಂತೆ SIRಗೆ ಎದುರಾಗಿಲ್ಲ. ಇದು ತನ್ನ ಅಂತಿಮ ಪರಿಣಾಮದಲ್ಲಿ ರಕ್ತರಹಿತ ರಾಜಕೀಯ ನರಮೇಧವಾಗಿದ್ದರೂ, ಹೆಚ್ಚಿನ ಸಂಖ್ಯೆಯ ವಿದೇಶಿಯರನ್ನು ಪತ್ತೆಹಚ್ಚಿ ಅಳಿಸಲಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಇದರ ಅನುಷ್ಠಾನ ಸುಲಭಗೊಳಿಸಲಾಯಿತು ಎಂದಿದ್ದಾರೆ.
ಚುನಾವಣಾ ಫಲಿತಾಂಶದ ಆಧಾರದ ಮೇಲೆ ಮಾತ್ರ SIR ಅನ್ನು ನಿರ್ಣಯಿಸಬಾರದು. ಅಷ್ಟೇ ಅಲ್ಲದೆ, ಆಡಳಿತ ವಿರೋಧಿ ಅಲೆಗಿಂತಲೂ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯಲ್ಲಿ ರಾಜಿ ಮಾಡಿಕೊಂಡಿರುವುದು ಬಂಗಾಳದ ಚುನಾವಣಾ ಫಲಿತಾಂಶದಲ್ಲಿ ಹೆಚ್ಚು ಕಾಣುತ್ತದೆ ಎಂದಿದ್ದಾರೆ.
SIR ಅಡಿಯಲ್ಲಿ ದೊಡ್ಡ ಪ್ರಮಾಣದ ಮತಗಳ ಅಳಿಸುವಿಕೆ, ಅಸಹಜ ರೀತಿಯ ತ್ವರಿತ ಮತದಾನ, ಚುನಾವಣಾ ಆಯೋಗದ ಪಕ್ಷಪಾತದ ನಡವಳಿಕೆ, ಕೇಂದ್ರ ಅರೆಸೈನಿಕ ಪಡೆಗಳ ದೊಡ್ಡ ಮಟ್ಟದ ನಿಯೋಜನೆ, ಮಾದರಿ ನೀತಿ ಸಂಹಿತೆ ಅನುಷ್ಠಾನದಲ್ಲಿನ ಪಕ್ಷಪಾತ, ಬಂಗಾಳದ ಆಡಳಿತ ಯಂತ್ರದಲ್ಲಿನ ವ್ಯಾಪಕ ಬದಲಾವಣೆಗಳು ಇವೆಲ್ಲವೂ ಬಂಗಾಳದ ಫಲಿತಾಂಶ ಅರ್ಥ ಮಾಡಿಕೊಳ್ಳಲು ಮುಖ್ಯ ಎಂದು ಹೇಳಿದ್ದಾರೆ.
ಈ ಎಲ್ಲ ಅಂಶಗಳು ಜನಾದೇಶವನ್ನು ಅತ್ಯಂತ ಪ್ರಶ್ನಾರ್ಹವಾಗಿಸುತ್ತವೆ. ಸುಮಾರು 34 ಲಕ್ಷ ಮತದಾರರನ್ನು ಅತಂತ್ರವಾಗಿಯೇ ಇರಿಸಿ, ಮತದಾನದ ಹಕ್ಕನ್ನು ನಿರಾಕರಿಸಿರುವುದು ಮತದಾನಕ್ಕೆ ಮೊದಲೇ ಬಂಗಾಳ ಚುನಾವಣೆಯನ್ನು ಹಾಳುಮಾಡಿತು ಎಂದು ಪರಕಾಲ ಬರೆದಿದ್ದಾರೆ.