IIM ಪದವೀಧರೆಗೆ ದಿಲ್ಲಿಯಲ್ಲಿ ಉದ್ಯೋಗದ ಆಫರ್; ಸ್ಥಳಾಂತರಗೊಂಡ ನಂತರ ಸಿಗದ ಉದ್ಯೋಗ!
ಕೆಲಸ ದೊರೆತಿದೆ ಎಂದು ನಂಬಿ ದಿಲ್ಲಿಗೆ ಒಂಟಿಯಾಗಿ ಬಂದಾಗ ಸ್ಥಳಾಂತರ, ವಸತಿ ಮತ್ತು ಸಂಬಂಧಿತ ವೆಚ್ಚಗಳಿಗಾಗಿ ಸುಮಾರು 75,000 ರೂ. ಖರ್ಚು ಮಾಡಿರುವುದಾಗಿ ಪದವೀಧರೆ ಬರೆದುಕೊಂಡಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಬೋಧ್ ಗಯಾದ ಎಂಬಿಎ ಪದವೀಧರೆಯೊಬ್ಬರು 75,000 ರೂ. ಖರ್ಚು ಮಾಡಿ ದೆಹಲಿಗೆ ಸ್ಥಳಾಂತರಗೊಂಡ ಬಳಿಕ, ಉದ್ಯೋಗ ಆಫರ್ ನೀಡಿದ ಕಂಪನಿಯ ಕಚೇರಿಯೇ ನೀಡಿದ್ದ ವಿಳಾಸದಲ್ಲಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ತಮ್ಮ ಹತಾಶಕರ ಅನುಭವವನ್ನು ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.
ಎಂಬಿಎ ಪದವೀಧರೆಯಾದ ಸ್ವಾತಿ ಕೆ. ಅವರು ಪಿಐಬಿ ವಿಮಾ ಬ್ರೋಕರ್ಸ್‌ನಿಂದ ಆಫರ್ ಲೆಟರ್ ಹಾಗೂ ದೃಢೀಕೃತ ಸೇರ್ಪಡೆ ದಿನಾಂಕ ಪಡೆದ ಬಳಿಕ ದೆಹಲಿಗೆ ತೆರಳಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೆಲಸ ದೊರೆತಿದೆ ಎಂದು ನಂಬಿ ನಗರಕ್ಕೆ ಒಂಟಿಯಾಗಿ ಬಂದಾಗ ಸ್ಥಳಾಂತರ, ವಸತಿ ಮತ್ತು ಇತರ ಸಂಬಂಧಿತ ವೆಚ್ಚಗಳಿಗೆ ಸುಮಾರು 75,000 ರೂ. ಖರ್ಚಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
2026ರ ಮೇ 4ರಂದು ಕಂಪನಿ ನೀಡಿದ್ದ ಕಚೇರಿ ವಿಳಾಸಕ್ಕೆ ತೆರಳಿದಾಗ ನಿಜಸ್ಥಿತಿ ಗೊತ್ತಾಯಿತು. ಆ ವಿಳಾಸದಲ್ಲಿ ಯಾವುದೇ ಕಚೇರಿ ಇರಲಿಲ್ಲ. ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಲು ಪದೇಪದೇ ಪ್ರಯತ್ನಿಸುತ್ತಾ ಸುಮಾರು ಎರಡು ಗಂಟೆಗಳ ಕಾಲ ಹೊರಗೆ ಕಾಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ನಂತರ ಕಂಪನಿ ಇನ್ನೂ ಕಚೇರಿಯನ್ನು ಲೀಸ್‌ಗೆ ಪಡೆಯದೇ ಇರುವುದಾಗಿ ತಿಳಿಸಿತು. ಅವರ ಉದ್ಯೋಗ ಗುರುತಿನ ಚೀಟಿ ಸಿದ್ಧಪಡಿಸಿದ್ದ ಕಂಪನಿ, ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಮುಂದಿನ ಕೆಲವು ವಾರಗಳಲ್ಲಿ ಕೆಲಸ ಆರಂಭವಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಆದರೆ, ಕಂಪನಿ ಸೇರ್ಪಡೆ ಪ್ರಕ್ರಿಯೆಯನ್ನು ಹಲವು ಬಾರಿ ಮುಂದೂಡಿದೆ. ಕೊನೆಗೆ “ಜುಲೈವರೆಗೆ ಯಾವುದೇ ಆನ್‌ಬೋರ್ಡಿಂಗ್ ಪ್ರಕ್ರಿಯೆ ಇರುವುದಿಲ್ಲ” ಎಂದು ತಿಳಿಸಲಾಗಿದೆ.
ಆ ವೇಳೆಗೆ ಅವರು ಉಳಿಸಿಕೊಂಡಿದ್ದ ಬಹುತೇಕ ಹಣ ದೆಹಲಿಯ ಸ್ಥಳಾಂತರ ಮತ್ತು ಜೀವನ ವೆಚ್ಚಗಳಿಗೆ ಖರ್ಚಾಗಿತ್ತು. ವೆಚ್ಚವನ್ನು ಭರಿಸಲು ಕಂಪನಿಯನ್ನು ಕೇಳಿದಾಗ ಆರಂಭದಲ್ಲಿ ಭರವಸೆ ನೀಡಿದರೂ, ಬಳಿಕ ಕಂಪನಿಯ ಸಿಇಒ ಉತ್ತರಿಸುವುದನ್ನೇ ನಿಲ್ಲಿಸಿದ್ದಾರೆ. ಕರೆಗಳಿಗೆ ಪ್ರತಿಕ್ರಿಯಿಸದೇ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸದಂತೆ ಅವರನ್ನು ಬ್ಲಾಕ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಂತರ ಈ ಕುರಿತು ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಆ ಪೋಸ್ಟ್ ತೆಗೆದುಹಾಕಲಾಗಿದೆ. ಆದರೆ ಅದರ ಸ್ಕ್ರೀನ್‌ಶಾಟ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃತ್ತಿಜೀವನದ ಆರಂಭದಲ್ಲೇ ಹೊಸ ನಗರಕ್ಕೆ ಸ್ಥಳಾಂತರಗೊಂಡ ಕಾರಣ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಅನುಭವವನ್ನು ಅವರು ಭಾವನಾತ್ಮಕವಾಗಿ ಹತಾಶಗೊಳಿಸಿದ ಘಟನೆ ಎಂದು ವಿವರಿಸಿದ್ದಾರೆ.
ಈ ಪೋಸ್ಟ್ ಎಕ್ಸ್‌ನಲ್ಲಿ ವೈರಲ್ ಆದ ಬಳಿಕ, ಆನ್‌ಲೈನ್ ಆನ್‌ಬೋರ್ಡಿಂಗ್, ಸ್ಟಾರ್ಟ್‌ಅಪ್ ನೇಮಕಾತಿಗಳ ಹೊಣೆಗಾರಿಕೆ ಮತ್ತು ಉದ್ಯೋಗಕ್ಕಾಗಿ ಸ್ಥಳಾಂತರಗೊಳ್ಳುವ ಯುವ ವೃತ್ತಿಪರರು ಎದುರಿಸುವ ಅಪಾಯಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೂಕ್ತ ಸಂವಹನದ ಕೊರತೆ ಹಾಗೂ ನೇಮಕಾತಿ ಮಾಡಿ ಬಳಿಕ ಕೆಲಸ ನೀಡದೆ ಹಿಂಜರಿದ ಕಂಪನಿಗಳ ಅನುಭವಗಳನ್ನು ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ.