ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸುತ್ತಿರುವುದು ಏಕೆ?
ಸುವೇಂದು ಅಧಿಕಾರಿ | Photo Credit : PTI
ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಸೋಮವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ರಾಜ್ಯದ ಇತರ ಹಿಂದುಳಿದ ವರ್ಗಗಳ ಪಟ್ಟಿಯನ್ನು ರದ್ದುಗೊಳಿಸುವುದಾಗಿ ಮತ್ತು ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿ ಮೀಸಲಾತಿಯನ್ನು ಶೇ. 17ರಿಂದ ಶೇ. 7ಕ್ಕೆ ಇಳಿಸುವುದಾಗಿ ತಿಳಿಸಿದೆ. ಮೇ 2024ರ ಕಲ್ಕತ್ತಾ ಹೈಕೋರ್ಟ್ ತೀರ್ಪಿಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವೆ ಅಗ್ನಿಮಿತ್ರ ಪಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕ್ರಮವು ರಾಜ್ಯದ ಒಬಿಸಿ ಪಟ್ಟಿಯನ್ನು 2010ರಲ್ಲಿ ಇದ್ದ ಸ್ಥಿತಿಗೆ ಮರಳಿ ಕೊಂಡೊಯ್ಯಲಿದ್ದು, ಬರೋಬ್ಬರಿ 76 ಜಾತಿ ಗುಂಪುಗಳ ಒಬಿಸಿ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಈ ಬೆಳವಣಿಗೆಯಿಂದ ತೀವ್ರವಾಗಿ ತೊಂದರೆಗೊಳಗಾಗುವವರಲ್ಲಿ ಬಹುಪಾಲು ಮುಸ್ಲಿಮರೇ ಆಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿದ್ದ 15 ವರ್ಷಗಳ ಅವಧಿಯಲ್ಲಿ ವಿತರಿಸಲಾದ ಸುಮಾರು 48 ಲಕ್ಷ ಒಬಿಸಿ ಪ್ರಮಾಣಪತ್ರಗಳನ್ನು ಮರುಪರಿಶೀಲಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಈ ಎರಡೂ ನಿರ್ಧಾರಗಳು ಇತ್ತೀಚಿನ ವರ್ಷಗಳಲ್ಲಿ ಬಂಗಾಳದಲ್ಲಿದ್ದ ಒಬಿಸಿ ಮೀಸಲಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿವೆ. ಇದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ದೀರ್ಘಕಾಲದಿಂದ ಮಾಡುತ್ತಾ ಬಂದಿರುವ ಟೀಕೆಗಳಿಗೆ ಅನುಗುಣವಾಗಿದೆ. ಮಮತಾ ಬ್ಯಾನರ್ಜಿ ಅವರ ಒಬಿಸಿ ಮೀಸಲಾತಿ ನೀತಿಯು ಮುಸ್ಲಿಮರ ಓಲೈಕೆಯನ್ನು ಉದ್ದೇಶಿಸಿತ್ತೇ ಹೊರತು, ನಿಜವಾದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ.
ಆದರೆ, ಈ ಹಠಾತ್ ಮತ್ತು ವ್ಯಾಪಕ ಬದಲಾವಣೆಗಳು ತಳಮಟ್ಟದಲ್ಲಿದ್ದ ತಮ್ಮ ಹಿಂದುಳಿದ ಸಮುದಾಯವು ಇತ್ತೀಚಿನ ದಿನಗಳಲ್ಲಿ ಕಂಡುಕೊಳ್ಳುತ್ತಿದ್ದ ಅಲ್ಪಸ್ವಲ್ಪ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಂಪೂರ್ಣವಾಗಿ ನಾಶಮಾಡಬಹುದು ಎಂದು ಬಂಗಾಳದ ಮುಸ್ಲಿಂ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
►ಇತಿಹಾಸ
ಹಿಂದಿ ಭಾಷಿಕ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳದ ಒಬಿಸಿ ರಾಜಕಾರಣದ ಹಾದಿ ತೀರಾ ಭಿನ್ನವಾಗಿದೆ. ಆ ಭಾಗಗಳಲ್ಲಿ ಒಬಿಸಿ ಸಮುದಾಯಗಳು 1990ರ ನಂತರವೇ ಸರ್ಕಾರಿ ಉದ್ಯೋಗಗಳಲ್ಲಿ ಶೇ. 27ರಷ್ಟು ಮೀಸಲಾತಿ ಪಡೆಯಲು ಅರ್ಹತೆ ಪಡೆದಿದ್ದವು. ಆದರೆ, ಪಶ್ಚಿಮ ಬಂಗಾಳದಲ್ಲಿ 2010ರವರೆಗೂ ಒಬಿಸಿ ಮೀಸಲಾತಿಯನ್ನು ಕೇವಲ ಶೇ. 7ಕ್ಕೆ ಸೀಮಿತಗೊಳಿಸಲಾಗಿತ್ತು.
1977ರಿಂದ 2011ರವರೆಗೆ ಬಂಗಾಳವನ್ನು ಆಳಿದ ಎಡರಂಗ ಸರ್ಕಾರವು ಕೇವಲ 66 ಜಾತಿಗಳಿಗೆ ಮಾತ್ರ ಒಬಿಸಿ ಸ್ಥಾನಮಾನ ನೀಡಿತ್ತು. ಇದೇ ಅವಧಿಯಲ್ಲಿ ಇತರ ರಾಜ್ಯಗಳಲ್ಲಿ ಒಬಿಸಿ ಪಟ್ಟಿಗೆ ಸೇರಿದ ಜಾತಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿತ್ತು. ಅಂದಿನ ಸರ್ಕಾರ ಹಿಂದುಳಿದ ವರ್ಗ ಎಂದು ಗುರುತಿಸಿದ್ದ ಜಾತಿಗಳ ಪೈಕಿ ಮುಸ್ಲಿಂ ಸಮುದಾಯಗಳ ಸಂಖ್ಯೆ ಕೇವಲ 12 ಆಗಿತ್ತು.
ಜಾತಿ ಆಧಾರಿತ ರಾಜಕಾರಣದ ಬಗ್ಗೆ ಎಡಪಕ್ಷಗಳಿಗಿದ್ದ ಐತಿಹಾಸಿಕ ವಿರೋಧ ಮತ್ತು ವರ್ಗ ಆಧಾರಿತ ಸಂಘಟನೆಗೆ ಅವರಿದ್ದ ಬದ್ಧತೆಯೇ ಇದಕ್ಕೆ ಕಾರಣ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.
ಆದರೆ, ಬಂಗಾಳದ ಕೊನೆಯ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ತಡವಾಗಿಯಾದರೂ ಈ ಪರಿಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದರು. ಆಗಿನ ರಾಜ್ಯದ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದರಷ್ಟಿದ್ದ ಮುಸ್ಲಿಮರಲ್ಲಿ, ಅದರಲ್ಲೂ ವಿಶೇಷವಾಗಿ ಆಡಳಿತ ವಿರೋಧಿ ಅಲೆ ಹೆಚ್ಚುತ್ತಿರುವುದನ್ನು ಕಂಡು ಭಟ್ಟಾಚಾರ್ಯ ಅವರು ಒಬಿಸಿ ಮೀಸಲಾತಿ ನೀತಿಯನ್ನು ಪರಿಷ್ಕರಿಸಿದರು.
ಕೆಲವೇ ತಿಂಗಳುಗಳ ಅವಧಿಯಲ್ಲಿ, ಅವರ ಸರ್ಕಾರವು ಬಂಗಾಳದ ಒಬಿಸಿ ಪಟ್ಟಿಗೆ ಹತ್ತಾರು ಹೊಸ ಜಾತಿಗಳನ್ನು ಸೇರಿಸಿ ಒಬಿಸಿ ಕೋಟಾವನ್ನು ಶೇ. 17ಕ್ಕೆ ಹೆಚ್ಚಿಸಿತು. ಇದರಲ್ಲಿ ಶೇ. 10ರಷ್ಟನ್ನು "ಅತ್ಯಂತ ಹಿಂದುಳಿದ" (Most Backward) ಜಾತಿ ಗುಂಪುಗಳಿಗಾಗಿ ಮೀಸಲಿಡಲಾಯಿತು. ಆಡಳಿತಾತ್ಮಕ ಭಾಷೆಯಲ್ಲಿ 'OBC-A' ಎಂದು ಕರೆಯಲಾದ ಈ ವರ್ಗದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇನ್ನುಳಿದ ಶೇ. 7ರಷ್ಟು ಮೀಸಲಾತಿಯನ್ನು 'OBC-B' ಎಂದು ಕರೆಯಲಾಯಿತು.
ಆದರೆ, ಕೊನೆ ಕ್ಷಣದಲ್ಲಿ ಕೈಗೊಂಡ ಈ ಕ್ರಮವು 2011ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಎಡರಂಗವನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಬಹುತೇಕ ವಿಷಯಗಳಲ್ಲಿ ಎಡಪಕ್ಷಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ಮಮತಾ ಬ್ಯಾನರ್ಜಿ ಅವರ ಸರ್ಕಾರವು ಅದೇ ಒಬಿಸಿ ಮೀಸಲಾತಿ ನೀತಿಯನ್ನು ಮುಂದುವರಿಸಿತು. ಮಮತಾ ಸರ್ಕಾರವು ಹೆಚ್ಚಿನ ಮುಸ್ಲಿಂ ಜಾತಿಗಳನ್ನು ಹಿಂದುಳಿದ ವರ್ಗಗಳಾಗಿ ಗುರುತಿಸಿತು. ತಾವು ರಾಜ್ಯದ ಶೇ. 90ಕ್ಕಿಂತ ಹೆಚ್ಚು ಮುಸ್ಲಿಮರಿಗೆ ಒಬಿಸಿ ಸ್ಥಾನಮಾನ ನೀಡಿದ್ದೇವೆ ಎಂದು ತೃಣಮೂಲ ಕಾಂಗ್ರೆಸ್ ಆಗಾಗ ಹೆಮ್ಮೆಯಿಂದ ಹೇಳಿಕೊಂಡಿದೆ.
►ಇನ್ಮುಂದೆ ಬರಲಿದೆ ಮತ್ತಷ್ಟು 'ವಿಶೇಷ ತೀವ್ರ ಪರಿಷ್ಕರಣೆ'
ಬಂಗಾಳದ ಒಬಿಸಿ ರಾಜಕಾರಣದಲ್ಲಿ ಸ್ಪಷ್ಟವಾಗಿ ಕಂಡುಬರುವ ಈ ಮುಸ್ಲಿಂ ಒಲವನ್ನೇ ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ.
ಯಾರು ನಿಜವಾಗಿಯೂ ಒಬಿಸಿಗಳೋ ಅವರಿಗೆ ಯಾವುದೇ ಪ್ರಯೋಜನ ಸಿಗಲಿಲ್ಲ ಎಂದು ರಾಜ್ಯ ಬಿಜೆಪಿಯ ಮುಖ್ಯ ವಕ್ತಾರ ದೇವ್ಜಿತ್ ಸರ್ಕಾರ್ ಆರೋಪಿಸಿದ್ದಾರೆ. ಬಂಗಾಳದ ಆಡಳಿತದ ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷ ತೀವ್ರ ಪರಿಷ್ಕರಣೆ (SIR) ಅಗತ್ಯವಿದೆ. ಪ್ರತಿಯೊಂದನ್ನೂ ಆಳವಾಗಿ ತನಿಖೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಬಂಗಾಳದ ನೂತನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದನ್ನೇ ಸರ್ಕಾರ್ ಇಲ್ಲಿ ಪುನರುಚ್ಚರಿಸಿದ್ದಾರೆ. "ನಾವು ಹೊಸದಾಗಿ ತನಿಖೆ ನಡೆಸಲಿದ್ದೇವೆ" ಎಂದು ಸಚಿವರು ಭರವಸೆ ನೀಡಿದ್ದರು.
ಹಿಂದುಳಿದ ಜಾತಿ ಗುಂಪುಗಳನ್ನು ಗುರುತಿಸಲು ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಹೊಸ ಸಮೀಕ್ಷೆಗಳನ್ನು ಸಚಿವರು ಇಲ್ಲಿ ಉಲ್ಲೇಖಿಸುತ್ತಿದ್ದಾರೆ ಎನ್ನಲಾಗಿದೆ. 2024ರ ಮೇನಲ್ಲಿ ಕಲ್ಕತ್ತಾ ಹೈಕೋರ್ಟ್ 2010ರ ನಂತರ ರಾಜ್ಯದ ಒಬಿಸಿ ಪಟ್ಟಿಗೆ ಮಾಡಲಾದ ಬದಲಾವಣೆಗಳನ್ನು ಮೊದಲ ಬಾರಿಗೆ ರದ್ದುಗೊಳಿಸಿದಾಗ, ಇದೇ ಆಯೋಗವು ಎಲ್ಲರ ಗಮನ ಸೆಳೆದಿತ್ತು.
"ಆಯೋಗವು ಕೇವಲ ಕೈಗೊಂಬೆಯಾಗಿ ಅಥವಾ ಅಪ್ಪಣೆ ಪಾಲಿಸುವ ಸಾಕುಪ್ರಾಣಿಯಂತೆ ಮಾರ್ಪಟ್ಟಿದೆ. ಕೇವಲ ಧರ್ಮ ಆಧಾರಿತ ಶಿಫಾರಸುಗಳನ್ನು ಮಾಡುವುದೇ ಆಯೋಗದ ಪ್ರಾಥಮಿಕ ಮತ್ತು ಏಕೈಕ ಉದ್ದೇಶವಾಗಿದ್ದಂತೆ ತೋರುತ್ತಿದೆ" ಎಂದು ನ್ಯಾಯಾಲಯವು ಆಗ ಟೀಕಿಸಿತ್ತು.
ಒಬಿಸಿ ಪಟ್ಟಿಗೆ ಹೊಸ ಸೇರ್ಪಡೆಗಳನ್ನು ಹೈಕೋರ್ಟ್ ರದ್ದುಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಆಗಿನ ತೃಣಮೂಲ ಸರ್ಕಾರವು ತನ್ನ ಮೀಸಲಾತಿ ನೀತಿಯನ್ನು ಪರಿಷ್ಕರಿಸಿತು. ಅದು ಮುಸ್ಲಿಮರ ಮೇಲಿನ ಅತಿಯಾದ ಒಲವನ್ನು ಕಡಿಮೆ ಮಾಡಿತು. ತೀರ್ಪಿಗೆ ಮುನ್ನ 118 ಮುಸ್ಲಿಂ ಜಾತಿಗಳನ್ನು ಒಬಿಸಿ ಎಂದು ಗುರುತಿಸಲಾಗಿದ್ದರೂ, ಕೋರ್ಟ್ ತೀರ್ಪಿನ ನಂತರ ಪರಿಷ್ಕೃತ ಒಬಿಸಿ ಪಟ್ಟಿಯಲ್ಲಿ ಕೇವಲ 80 ಜಾತಿಗಳು ಮಾತ್ರ ಸ್ಥಾನ ಪಡೆದವು.
"ಆ ಬದಲಾವಣೆಗಳನ್ನು ಮಾಡಿದ್ದಕ್ಕಾಗಿ ಮುಸ್ಲಿಂ ಸಮುದಾಯವು ನಮ್ಮನ್ನು ತುಂಬಾ ಶಪಿಸಿತ್ತು" ಎಂದು ಆ ಸಮಯದಲ್ಲಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿದ್ದ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದಾಗಿ scroll.in ವರದಿ ಉಲ್ಲೇಖಿಸಿದೆ.
► ಹಿಂದುತ್ವ ಶೈಲಿಯ ಸಾಮಾಜಿಕ ನ್ಯಾಯ
ಬಂಗಾಳಿ ಮುಸ್ಲಿಂ ಶಿಕ್ಷಣ ತಜ್ಞರ ಪ್ರಕಾರ, ಕೇವಲ ಬದಲಾವಣೆಗಳಷ್ಟೇ ಇಲ್ಲಿ ಮುಖ್ಯವಲ್ಲ, ಬದಲಿಗೆ ಅವುಗಳನ್ನು ಜಾರಿಗೆ ತಂದ ರೀತಿಯೇ ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.
"ಎಡಪಕ್ಷಗಳಾಗಲಿ ಅಥವಾ ತೃಣಮೂಲ ಕಾಂಗ್ರೆಸ್ ಆಗಲಿ, ಕೆಳಜಾತಿಯ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಯಾವುದೇ ಗಂಭೀರ ಅಧ್ಯಯನ ನಡೆಸುವ ಪ್ರಯತ್ನ ಮಾಡಲಿಲ್ಲ" ಎಂದು ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದ ರಾಜಕೀಯ ತಜ್ಞ ಅಬ್ದುಲ್ ಮತಿನ್ ವಾದಿಸುತ್ತಾರೆ. "ತಮಗೆ ರಾಜಕೀಯವಾಗಿ ಯಾವಾಗ ಅನುಕೂಲವಾಗುತ್ತದೆಯೋ, ಆಗೆಲ್ಲಾ ಕೆಲವು ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಅವರು ಅವಸರ ಮಾಡಿದರು ಅಷ್ಟೆ" ಎಂದು ಮತಿನ್ ಹೇಳಿದ್ದಾರೆ.
ಈಗ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ, ಒಬಿಸಿ ಮೀಸಲಾತಿಯ ಮೂಲಕ ಬಂಗಾಳಿ ಮುಸ್ಲಿಮರಿಗೆ ಇದುವರೆಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಅವರು ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಈ ಶಿಕ್ಷಣ ತಜ್ಞರಲ್ಲಿದೆ.
"ಹಿಂದುಳಿದ ವರ್ಗಗಳು ನಮ್ಮಿಂದ ಇದನ್ನೇ ನಿರೀಕ್ಷಿಸುತ್ತಿದ್ದವು. ಬೇರೆ ಜನರು ಎಲ್ಲ ಸೌಲಭ್ಯಗಳನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ನಮಗೆ ಹೇಳುತ್ತಿದ್ದಾರೆ. ಬಂಗಾಳದಲ್ಲಿ ಇದುವರೆಗೆ ಸಾಮಾಜಿಕ ನ್ಯಾಯ ಎಂಬುದು ಇರಲೇ ಇಲ್ಲ. ಆದರೆ, ನಾವು ಈಗ ಸಂವಿಧಾನವನ್ನು ಸರಿಯಾಗಿ ಜಾರಿಗೊಳಿಸುತ್ತೇವೆ" ಎಂದು ಬಿಜೆಪಿಯ ವಕ್ತಾರ ಸರ್ಕಾರ್ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಆಸಿಫ್ ಹೊಸೈನ್ ಅವರ ಪ್ರಕಾರ, ಈಗಾಗಲೇ ಒಬಿಸಿ ಕೋಟಾದ ಪ್ರಯೋಜನ ಪಡೆದವರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. 2024ರ ಹೈಕೋರ್ಟ್ ತೀರ್ಪಿನಲ್ಲಿ, ಈಗಾಗಲೇ ಸೌಲಭ್ಯ ಪಡೆದಿರುವ ಫಲಾನುಭವಿಗಳ ಉದ್ಯೋಗವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಮತ್ತು ಅವರು ಪಡೆದ ಪ್ರಯೋಜನಗಳನ್ನು ಹಿಂಪಡೆಯಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ದಿನಾಜ್ಪುರ ಜಿಲ್ಲೆಯವರಾದ ಹಾಗೂ ಬಂಗಾಳಿ ಮುಸ್ಲಿಮರ ಕುರಿತು ನಿರಂತರವಾಗಿ ಬರೆಯುವ ಹೊಸೈನ್ ಅವರು, ರಾಜ್ಯದಲ್ಲಿ ತಾವು ನಿರೀಕ್ಷಿಸುತ್ತಿರುವ ರಾಜಕೀಯ ಬದಲಾವಣೆಗಳ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿದ್ದಾರೆ.
ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ಎಂದಿಗೂ ಮುಸ್ಲಿಮರಲ್ಲಿನ ಹಿಂದುಳಿದಿರುವಿಕೆಯನ್ನು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡಲೇ ಇಲ್ಲ. ಇಲ್ಲಿನ ಹಿಂದುತ್ವ ಶಕ್ತಿಗಳು ಹಿಂದೂ ಒಬಿಸಿಗಳನ್ನು ಮುಸ್ಲಿಂ ಒಬಿಸಿಗಳ ವಿರುದ್ಧ ಸುಲಭವಾಗಿ ಎತ್ತಿಕಟ್ಟಬಹುದು. "ಜಾತಿ ಪದ್ಧತಿ ಇರುವುದು ಕೇವಲ ಹಿಂದೂಗಳಲ್ಲಿ ಮಾತ್ರ ಎಂದ ಮೇಲೆ, ಮುಸ್ಲಿಮರಿಗೆ ಏಕೆ ಮೀಸಲಾತಿ ನೀಡಬೇಕು?" ಎಂದು ಅವರು ಪ್ರಶ್ನಿಸಬಹುದು. ಈ ರೀತಿಯ ಅಸ್ಮಿತೆಯ ರಾಜಕಾರಣದಲ್ಲಿ ಅವರು ನಿಸ್ಸೀಮರು ಎಂದು ಹೊಸೈನ್ ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: scroll.in