ಆ್ಯಪ್ ಸ್ಟೋರ್ ಶುಲ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಆ್ಯಪಲ್ ಕಂಪೆನಿ
Photo Credit : apple.com
ಅಪ್ಲಿಕೇಶನ್ನಲ್ಲಿನ ಪಾವತಿಗಳ ನಿಯಂತ್ರಣ ಮತ್ತು iOS ಒಳಗೆ ಅಪ್ಲಿಕೇಶನ್ ಹೇಗೆ ವಿತರಿಸಲಾಗುತ್ತಿದೆ ಎಂಬುದರ ಮೇಲಿನ ನಿರ್ಬಂಧಗಳ ಕುರಿತು ಆ್ಯಪಲ್ ವಿರುದ್ಧ ಎಪಿಕ್ ಗೇಮ್ಸ್ ಮೊಕದ್ದಮೆ ಹೂಡಿತ್ತು.
ಐಫೋನ್ ತಯಾರಕ ಆ್ಯಪಲ್ ಕಂಪೆನಿ ತನ್ನ ಆ್ಯಪ್ ಸ್ಟೋರ್ ಪಾವತಿ ನೀತಿಗಳ ಕುರಿತಂತೆ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅಮೆರಿಕದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಎಪಿಕ್ ಗೇಮ್ಸ್ ಜೊತೆಗಿನ ದೀರ್ಘಕಾಲದ ಕಾನೂನು ಹೋರಾಟವನ್ನು ಸುಪ್ರೀಂಕೋರ್ಟ್ಗೆ ಕೊಂಡೊಯ್ದಿದೆ.
2020ರಲ್ಲಿ ಆರಂಭವಾದ ವ್ಯಾಜ್ಯದಲ್ಲಿ ಜನಪ್ರಿಯ ವೀಡಿಯೊಗೇಮ್ ‘ಫೋರ್ಟ್ನೈಟ್’ನ ತಯಾರಕರಾದ ಎಪಿಕ್ ಗೇಮ್ಸ್, ಆ್ಯಪಲ್ ವಿರುದ್ಧ ಮೊಕದ್ದಮೆ ಹೂಡಿತ್ತು. ಅಪ್ಲಿಕೇಶನ್ನಲ್ಲಿನ ಪಾವತಿಗಳ ನಿಯಂತ್ರಣ ಮತ್ತು iOS ಒಳಗೆ ಅಪ್ಲಿಕೇಶನ್ ಅನ್ನು ಹೇಗೆ ವಿತರಿಸಲಾಗುತ್ತಿದೆ ಎಂಬುದರ ಮೇಲಿನ ನಿರ್ಬಂಧಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು.
2021ರಲ್ಲಿ ನ್ಯಾಯಾಲಯವು ‘ಆ್ಯಪಲ್ ಸ್ಪರ್ಧಾತ್ಮಕತೆ ವಿರೋಧಿ ನಡೆ ತೋರಿಸುತ್ತಿದೆ’ ಎನ್ನುವ ಎಪಿಕ್ ಗೇಮ್ಸ್ನ ಮೊಕದ್ದಮೆಯನ್ನು ತಿರಸ್ಕರಿಸಿದರೂ, ಆ್ಯಪ್ ಸ್ಟೋರ್ ನ ಹೊರಗೆ ಪರ್ಯಾಯ ಪಾವತಿ ವ್ಯವಸ್ಥೆಗಳಿಗೆ ಬಳಕೆದಾರರನ್ನು ನಿರ್ದೇಶಿಸುವ ಲಿಂಕ್ಗಳನ್ನು ಸೇರಿಸಲು ಅಪ್ಲಿಕೇಶನ್ ಡೆವಲಪರ್ಗಳಿಗೆ ಅವಕಾಶ ನೀಡುವಂತೆ ಆ್ಯಪಲ್ ಕಂಪೆನಿಗೆ ಆದೇಶಿಸಿತು.
ಆ್ಯಪಲ್ ನಂತರ ಈ ಬದಲಾವಣೆಯನ್ನು ಜಾರಿಗೆ ತಂದಿತು. ಆದರೆ ಬಳಕೆದಾರರು ಅಪ್ಲಿಕೇಶನ್ ಒಳಗಿನ (in-app) ಲಿಂಕ್ ಕ್ಲಿಕ್ ಮಾಡಿದ ಏಳು ದಿನಗಳ ಒಳಗೆ ವಹಿವಾಟು ಪೂರ್ಣಗೊಳಿಸಿದರೆ, ಬಾಹ್ಯ ಪಾವತಿ ವಿಧಾನಗಳ ಮೂಲಕ ಮಾಡಿದ ಖರೀದಿಗಳ ಮೇಲೂ ಶೇ 27ರಷ್ಟು ಕಮಿಷನ್ ವಿಧಿಸುವಂತೆ ಹೊಸ ಷರತ್ತುಗಳನ್ನು ಪರಿಚಯಿಸಿತು.
ಈ ಷರತ್ತಿಗೆ ಸಂಬಂಧಿಸಿ, “ಶುಲ್ಕ ರಚನೆಯ ಮೂಲಕ ಮೂಲ ತಡೆಯಾಜ್ಞೆಯ ಆಶಯವನ್ನು ಆ್ಯಪಲ್ ಉಲ್ಲಂಘಿಸಿದ್ದು, ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಲಾಗಿದೆ” ಎಂದು ಎಪಿಕ್ ಗೇಮ್ಸ್ ವಾದಿಸಿತು. 2025ರಲ್ಲಿ ನ್ಯಾಯಾಲಯ ಈ ವಾದವನ್ನು ಎತ್ತಿಹಿಡಿದಿರುವುದಲ್ಲದೆ, ಆ್ಯಪಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿತು.
ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಆ್ಯಪಲ್ ಕಂಪೆನಿ ತನ್ನ ಇತ್ತೀಚಿನ ಮೇಲ್ಮನವಿಯಲ್ಲಿ, ತಡೆಯಾಜ್ಞೆಯು ಲಕ್ಷಾಂತರ ಡೆವಲಪರ್ ಗಳಿಗೆ ಸಾರ್ವತ್ರಿಕವಾಗಿ ಅನ್ವಯಿಸಬಾರದು ಎಂದು ವಾದಿಸಿದೆ. ಏಕೆಂದರೆ ಪ್ರಕರಣದಲ್ಲಿ ಎಪಿಕ್ ಗೇಮ್ಸ್ ಏಕೈಕ ವಾದಿಯಾಗಿತ್ತು ಮತ್ತು ಮೊಕದ್ದಮೆಯನ್ನು ಕ್ಲಾಸ್ ಆ್ಯಕ್ಷನ್ ಆಗಿ ಸಲ್ಲಿಸಲಾಗಿಲ್ಲ ಎಂದು ಆ್ಯಪಲ್ ಹೇಳಿದೆ.
ಪ್ರಶ್ನಾರ್ಹ ನಡವಳಿಕೆಯನ್ನು ತಡೆಯಾಜ್ಞೆ ಸ್ಪಷ್ಟವಾಗಿ ನಿಷೇಧಿಸದೆ ಇರುವಾಗ, ಆದೇಶದ ‘ಸ್ಪಿರಿಟ್’ ಅನ್ನು ಉಲ್ಲಂಘಿಸಿರುವುದಕ್ಕಾಗಿ ಕಂಪೆನಿಯನ್ನು ಶಿಕ್ಷಿಸಲಾಗದು ಎಂದು ಆ್ಯಪಲ್ ವಾದಿಸಿದೆ. ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿದೆ ಎಂದು ಕಂಪೆನಿ ಹೇಳಿದೆ.
ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ಅರ್ಥಪೂರ್ಣ ಸ್ಪರ್ಧೆಯನ್ನು ವಿಳಂಬಗೊಳಿಸಲು ಆ್ಯಪಲ್ ಪ್ರಯತ್ನಿಸುತ್ತಿದೆ. ಗ್ರಾಹಕರು ಮತ್ತು ಡೆವಲಪರ್ಗಳಿಗೆ ಪ್ರಯೋಜನ ನೀಡಬಹುದಾದ ವಿಸ್ತೃತ ಪಾವತಿ ಸ್ಪರ್ಧೆಗೆ ಆ್ಯಪ್ ಸ್ಟೋರ್ ವ್ಯವಸ್ಥೆಯನ್ನು ತೆರೆಯುವುದನ್ನು ತಪ್ಪಿಸುವ ಅಂತಿಮ ಪ್ರಯತ್ನವನ್ನು ಕಂಪೆನಿ ಮಾಡುತ್ತಿದೆ ಎಂದು ಎಪಿಕ್ ಗೇಮ್ಸ್ ಆರೋಪಿಸಿದೆ.
ಈಗಾಗಲೇ ಮೇಲ್ಮನವಿ ನ್ಯಾಯಾಲಯಗಳಲ್ಲಿ ಹಲವು ಸುತ್ತಿನ ಕಾನೂನು ಹೋರಾಟ ನಡೆದಿದೆ. ಡಿಸೆಂಬರ್ನಲ್ಲಿ 9ನೇ ಯುಎಸ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್, ಆ್ಯಪಲ್ ಕಂಪೆನಿ ವಿರುದ್ಧದ ನ್ಯಾಯಾಂಗ ಉಲ್ಲಂಘನೆಯ ತೀರ್ಪನ್ನು ಎತ್ತಿಹಿಡಿದಿದೆ. ಆದರೆ ತೃತೀಯ ಪಕ್ಷದ ಪಾವತಿ ವ್ಯವಸ್ಥೆಗಳ ಮೂಲಕ ಮಾಡಿದ ಖರೀದಿಗಳ ಮೇಲೆ ಯಾವ ಮಟ್ಟದ ಕಮಿಷನ್ ವಿಧಿಸಲು ಅನುಮತಿಸಬೇಕು ಎಂಬ ಕುರಿತು ವಿಚಾರಣಾ ನ್ಯಾಯಾಲಯದ ಮುಂದೆ ವಾದ ಮುಂದುವರಿಸಲು ಕಂಪೆನಿಗೆ ಅವಕಾಶ ನೀಡಿತ್ತು.
ಈ ತಿಂಗಳ ಆರಂಭದಲ್ಲಿ ಮೇಲ್ಮನವಿ ಪ್ರಕ್ರಿಯೆ ಮುಂದುವರಿಯುತ್ತಿರುವಾಗ, ಕೆಳ ನ್ಯಾಯಾಲಯದ ವಿಚಾರಣೆ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆ್ಯಪಲ್ ಕಂಪೆನಿ ಮಾಡಿದ ವಿನಂತಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.