ಸತ್ತ ಮರಿಯನ್ನು ಹೊತ್ತು ಸಾಗಿದ ಡಾಲ್ಫಿನ್; ವೈರಲ್ ಆದ ಮೂಕ ಪ್ರಾಣಿಯ ಕರುಳಿನ ರೋದನೆ

Update: 2026-08-06 15:40 IST

Screengrab : X

ವೀಡಿಯೋದಲ್ಲಿ ಫ್ರಾಗಲ್ ಎನ್ನುವ ಡಾಲ್ಫಿನ್ ತಾಯಿ ತನ್ನ ಸತ್ತ ಕರುವನ್ನು ಆರು ದಿನಗಳ ಕಾಲ ಹಿಂದೂ ಮಹಾಸಾಗರದ ಮೂಲಕ ಹೊತ್ತುಕೊಂಡು ಸಾಗುತ್ತಿತ್ತು.

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದು ಜನರ ಹೃದಯ ಹಿಂಡುತ್ತಿದೆ. ಈ ವೀಡಿಯೋದಲ್ಲಿ ಫ್ರಾಗಲ್ ಎನ್ನುವ ಡಾಲ್ಫಿನ್ ತಾಯಿ ತನ್ನ ಸತ್ತ ಮರಿಯನ್ನು ಆರು ದಿನಗಳ ಕಾಲ ಹಿಂದೂ ಮಹಾಸಾಗರದ ಮೂಲಕ ಹೊತ್ತುಕೊಂಡು ಸಾಗುತ್ತಿತ್ತು. ಆಸ್ಟ್ರೇಲಿಯಾದ ಸಂರಕ್ಷಣಾ ಸಂಸ್ಥೆಯಾದ ಜಿಯೋಗ್ರಾಫ್ ಮೆರೈನ್ ರೀಸರ್ಚ್ ಸೆರೆಹಿಡಿದ ಡ್ರೋನ್ ದೃಶ್ಯಾವಳಿಯಲ್ಲಿ ತಾಯಿ ಡಾಲ್ಫಿನ್ ಕೇವಲ ಎರಡು ವಾರಗಳ ವಯಸ್ಸಿನ ನವಜಾತ ಮರಿಯೊಂದಿಗೆ ಸಾಗುತ್ತಿರುವುದನ್ನು ಕಾಣಬಹುದು.

ಫ್ರಾಗಲ್ ಡಾಲ್ಫಿನ್ ಇದಕ್ಕೂ ಮೊದಲು ನಾಲ್ಕು ಇತರ ಮರಿಗಳನ್ನು ಕಳೆದುಕೊಂಡಿತ್ತು. ತಾಯಿ ತನ್ನ ದುಃಖವನ್ನು ವ್ಯಕ್ತಪಡಿಸಲು ಕರುವಿನ ದೇಹವನ್ನು ತನ್ನ ಬೆನ್ನಿನ ಮೇಲೆ ಹೊತ್ತು ಸಾಗುತ್ತಿದ್ದಾಗ, ಅದರೊಂದಿಗೆ ಇರುವ ಇತರ 14 ಡಾಲ್ಫಿನ್‌ಗಳೂ ಜೊತೆಯಾಗಿ ಸಾಗುತ್ತಿರುವುದನ್ನು ಕಾಣಬಹುದು.

ಫ್ರಾಗಲ್ ಡಾಲ್ಫಿನ್‌ನ ಮರಿ ಸಾಯುವ ಮೊದಲು ಅದರ ಉಸಿರಾಟದ ವೇಗ ಹೆಚ್ಚಾಗಿರುವುದನ್ನು ಸಂಶೋಧಕರು ಗಮನಿಸಿದ್ದರು. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಜನಿಸುವ ಮರಿಗಳು ಬದುಕುಳಿಯಲು ಬಹಳ ಶ್ರಮಪಡುತ್ತವೆ. ಹೆಚ್ಚಾಗಿ ಶೀತಗಾಳಿಯಿಂದ ಉಸಿರಾಟದ ತೊಂದರೆಗಳಿಗೆ ಒಳಗಾಗುತ್ತವೆ.

ಡಾಲ್ಫಿನ್‌ಗಳು ಮತ್ತು ತಿಮಿಂಗಿಲಗಳಲ್ಲಿ ಇದೇ ರೀತಿಯ ದುಃಖ ವ್ಯಕ್ತಪಡಿಸುವ ನಡವಳಿಕೆಯನ್ನು ಸಂಶೋಧಕರು ದಾಖಲಿಸಿದ್ದಾರೆ. ಹೀಗೆ ಸತ್ತ ಸಂತತಿಯನ್ನು ಬಹುದೂರದವರೆಗೆ ಹೊತ್ತೊಯ್ಯುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಎಲ್ಲಾ ಸಾವುಗಳೂ ಅನಿವಾರ್ಯ. ಆದರೆ ಪ್ರಾಣಿಗಳು ಸಾವಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಆನೆಗಳು, ಮಂಗಗಳು ಮತ್ತು ಸೆಟಾಸಿಯನ್‌ಗಳು (ಡಾಲ್ಫಿನ್ ಮತ್ತು ತಿಮಿಂಗಿಲಗಳ ಜಾತಿ) ಸೇರಿದಂತೆ ಹಲವು ಪ್ರಾಣಿಗಳು ತಮ್ಮ ಗುಂಪಿನ ಸದಸ್ಯನನ್ನು ಕಳೆದುಕೊಂಡಾಗ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಅನೇಕ ಸೆಟಾಸಿಯನ್‌ಗಳು ತಮ್ಮ ಗುಂಪಿನ ಸದಸ್ಯರಿಗಾಗಿ ಶೋಕಿಸುವ ರೀತಿಯಲ್ಲಿ ವರ್ತಿಸಿರುವುದೂ ದಾಖಲಾಗಿದೆ.

ಡಾಲ್ಫಿನ್‌ಗಳಲ್ಲಿ ಹೀಗೆ ಮರಿಯನ್ನು ಹೊತ್ತು ಶೋಕಿಸುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ತಹ್ಲೆಕ್ವಾ (Tahlequah) ಎನ್ನುವ ಆರ್ಕಾ ತಾಯಿ ತನ್ನ ಸತ್ತ ಹಸುಗೂಸನ್ನು 1,000 ಮೈಲುಗಳಷ್ಟು ದೂರ 17 ದಿನಗಳ ಕಾಲ ಬೆನ್ನಿನ ಮೇಲೆ ಹೊತ್ತು ಸಾಗಿತ್ತು. 2018ರಲ್ಲಿ ಝೂವಾಲಜಿಯಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಕನಿಷ್ಠ 20 ಪ್ರಭೇದಗಳ ಸೆಟಾಸಿಯನ್‌ಗಳು ಮರಣದ ನಂತರದ ಶೋಕದ ರೀತಿಯ ಪ್ರತಿಕ್ರಿಯೆ ತೋರಿಸುವುದನ್ನು ಗುರುತಿಸಲಾಗಿದೆ. ಈ 20 ಪ್ರಭೇದಗಳಲ್ಲಿ ಬಹುತೇಕ ಡಾಲ್ಫಿನ್‌ ಗಳೇ ಇದ್ದವು ಮತ್ತು ಕೆಲವು ತಿಮಿಂಗಿಲಗಳಿದ್ದವು.

'ಸೋಷಿಯಲ್ ಬ್ರೇನ್ ಹೈಪೋಥೆಸಿಸ್' ಅನುಸರಿಸಿ ಗಮನಿಸಿದರೆ, ಸಂಕೀರ್ಣ ಸಾಮಾಜಿಕ ಅನುಭೂತಿಗಳನ್ನು ಹೊಂದಿರುವ ಪ್ರಾಣಿಗಳಾದ ಡಾಲ್ಫಿನ್‌ ಗಳು ಸಾಮಾನ್ಯವಾಗಿ ದೊಡ್ಡ ಮೆದುಳನ್ನು ಹೊಂದಿರುತ್ತವೆ. ದೊಡ್ಡ ಮೆದುಳು ಹೆಚ್ಚು ಸಂಕೀರ್ಣವಾದ ಭಾವನೆಗಳಿಗೆ ಮತ್ತು ಬಹುಶಃ ಸಾವಿನ ಪರಿಕಲ್ಪನೆಯ ತಿಳಿವಳಿಕೆಗೆ ಸಂಬಂಧಿಸಿದೆ.

ಮೃತದೇಹವನ್ನು ದೀರ್ಘಕಾಲ ಹೊತ್ತುಕೊಂಡು ಸಾಗುವುದಕ್ಕೆ ಸಾಕಷ್ಟು ಶಕ್ತಿಯ ವ್ಯಯವಾಗುತ್ತದೆ. ಹೊತ್ತುಕೊಂಡು ಸಾಗುವ ಪ್ರಾಣಿಯ ದೇಹದ ಆಕಾರಕ್ಕೂ ಪೆಟ್ಟು ಬೀಳುತ್ತದೆ. ಬೇಟೆಯಾಡಲು ಸಾಧ್ಯವಾಗುವುದಿಲ್ಲ. ಹಾಗಿದ್ದರೂ ಡಾಲ್ಫಿನ್ ತಾಯಂದಿರು ಪ್ರೀತಿಪಾತ್ರರನ್ನು ಹೊತ್ತು ಸಾಗುವುದೇಕೆ? ಮರಿ ಪ್ರಜ್ಞಾಹೀನವಾಗಿದೆ ಎಂದು ಅನಿಸಿರಬಹುದೇ? ಅಥವಾ ಮೇಲ್ಮೈಯಲ್ಲಿ ಉಸಿರಾಡಲು ಸಹಾಯ ಮಾಡಿದರೆ ಜೀವ ಉಳಿಯಬಹುದು ಎನ್ನುವ ಅನಿಸಿಕೆಯೇ? ಇಂತಹ ನಡವಳಿಕೆಗಳು ಜೀವವಿಕಾಸದ ವಿವರಣೆಯನ್ನು ಮೀರಿರಬಹುದು. ತಾಯಿ ಮತ್ತು ಮಗುವಿನ ನಡುವಿನ ಬಲವಾದ ಬಂಧದ ಪ್ರತಿಬಿಂಬವೂ ಆಗಿರಬಹುದು.

ಹಾಗೆಂದೇ ಇಂತಹ ನಡವಳಿಕೆ ಸೆಟಾಸಿಯನ್‌ಗಳಲ್ಲಿ ಸಾಮಾನ್ಯವಲ್ಲ. ಅನೇಕ ಬಾರಿ ಸಮುದಾಯದ ಸದಸ್ಯ ಸತ್ತಾಗ ದೇಹವನ್ನು ತೊರೆದು ಉಳಿದ ಪ್ರಾಣಿಗಳು ಮುಂದೆ ಸಾಗುತ್ತವೆ. ಆದರೆ ಕೆಲವು ಪ್ರತ್ಯೇಕ ಪ್ರಕರಣಗಳಲ್ಲಿ ದುಃಖವನ್ನು ವ್ಯಕ್ತಪಡಿಸುವುದು ಗಮನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News