2013ರ ಲೈಂಗಿಕ ದೌರ್ಜನ್ಯ ಪ್ರಕರಣ: ‘ತೆಹೆಲ್ಕಾ’ ಮ್ಯಾಗಝಿನ್‌ ನ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ; ಏನಿದು ಕೇಸ್?

Update: 2026-08-06 16:10 IST

ತರುಣ್ ತೇಜ್‌ಪಾಲ್ | Photo Credit ; indiatoday.in

'ತೆಹೆಲ್ಕಾ' ನಿಯತಕಾಲಿಕೆಯ ಸಂಸ್ಥಾಪಕ, ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಹೋಟೆಲ್‌ ಒಂದರ ಲಿಫ್ಟ್‌ನಲ್ಲಿ ನಡೆಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಬಂಧನವಾಗಿ 13 ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಗುರುವಾರ ಅವರನ್ನು ಅತ್ಯಾಚಾರದ ಆರೋಪದಲ್ಲಿ ದೋಷಿ ಎಂದು ಹೇಳಿದ್ದು, 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಶರಣಾಗತಿಯಾಗಲು ಹೈಕೋರ್ಟ್ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಲಯವು ಅವರನ್ನು ದೋಷಿ ಎಂದು ನಿರ್ಣಯಿಸಿದ ನಂತರ, ತೇಜ್‌ಪಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆಬಾದ್ ಪೊಂಡಾ ಅವರು, ತೇಜ್‌ಪಾಲ್ ಅವರಿಗೆ ಈಗ 62 ವರ್ಷ ವಯಸ್ಸಾಗಿದ್ದು, ಅವರು ಹಿರಿಯ ನಾಗರಿಕರಾಗಿದ್ದಾರೆ ಮತ್ತು ಈ ಪ್ರಕರಣಕ್ಕೆ 13 ವರ್ಷಗಳಾಗಿವೆ ಎಂಬ ಆಧಾರದ ಮೇಲೆ ಅವರಿಗೆ ಕಡಿಮೆ ಶಿಕ್ಷೆ ವಿಧಿಸುವಂತೆ ಕೋರಿದರು.

ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಾಂಸಂದೇಕರ್ ಅವರಿದ್ದ ವಿಭಾಗೀಯ ಪೀಠವನ್ನು ಉದ್ದೇಶಿಸಿ ಮಾತನಾಡಿದ ತೇಜ್‌ಪಾಲ್, ತಾವು "ರಾಜಕೀಯ ಸಂತ್ರಸ್ತ", ತಮಗೆ 62 ವರ್ಷ ವಯಸ್ಸಾಗಿದ್ದು, ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿ ಕಡಿಮೆ ಶಿಕ್ಷೆಗೆ ಮನವಿ ಮಾಡಿದರು. ಅಲ್ಲದೆ, ತಮ್ಮ ಪರವಾಗಿ ಸಾಕ್ಷ್ಯಾಧಾರಗಳು ಹೆಚ್ಚಾಗಿದ್ದು, ತಮ್ಮನ್ನು ಹತ್ತು ಬಾರಿಯಾದರೂ ಖುಲಾಸೆಗೊಳಿಸಬಹುದು ಎಂದು ಹೇಳಿದರು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(f) (ಪೋಷಕ ಅಥವಾ ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯು ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದು), 354(a) (ಲೈಂಗಿಕ ಕಿರುಕುಳ) ಮತ್ತು 354(b) (ಮಹಿಳೆಯ ಉಡುಪು ಕಳಚುವ ಉದ್ದೇಶದಿಂದ ಬಲಪ್ರಯೋಗಿಸುವುದು) ಅಡಿಯಲ್ಲಿ ತೇಜ್‌ಪಾಲ್ ಅವರನ್ನು ದೋಷಿ ಎಂದು ನಿರ್ಧರಿಸಲಾಗಿದೆ.

ತೇಜ್‌ಪಾಲ್ ವಿರುದ್ಧದ ಪ್ರಕರಣವೇನು?

ಈ ಅತ್ಯಾಚಾರ ಪ್ರಕರಣವು 2013ರದ್ದು. ಗೋವಾದಲ್ಲಿ ತೆಹಲ್ಕಾ ಮ್ಯಾಗಝಿನ್‌ ನ 'ಥಿಂಕ್‌ಫೆಸ್ಟ್' ಕಾರ್ಯಕ್ರಮ ನಡೆಯುತ್ತಿದ್ದಾಗ, ಅಂದಿನ ತೆಹಲ್ಕಾ ಸಂಪಾದಕ ತೇಜ್‌ಪಾಲ್ ತಮ್ಮ ಕಿರಿಯ ಸಹೋದ್ಯೋಗಿ ಮಹಿಳೆಯ ಮೇಲೆ ಹೋಟೆಲ್ ಲಿಫ್ಟ್‌ನೊಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಆರೋಪಿಸಿದ್ದರು. ತೇಜ್‌ಪಾಲ್ ವಿರುದ್ಧ ಅತ್ಯಾಚಾರ ಮತ್ತು ಇತರ ಲೈಂಗಿಕ ಅಪರಾಧಗಳ ಆರೋಪ ಹೊರಿಸಲಾಗಿತ್ತು. ಆದರೆ 2021ರಲ್ಲಿ ಗೋವಾದ ಸೆಷನ್ಸ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು.

ರಾಜ್ಯ ಸರ್ಕಾರವು ಈ ತೀರ್ಪನ್ನು ಬಾಂಬೆ ಹೈಕೋರ್ಟ್‌ ನಲ್ಲಿ ಪ್ರಶ್ನಿಸಿತು. ಮೇಲ್ಮನವಿ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, "ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಹೇಗೆ ನಡೆದುಕೊಳ್ಳಬೇಕು ಎಂಬ ಪೂರ್ವಗ್ರಹ ಪೀಡಿತ ಕಲ್ಪನೆಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ದೂರುದಾರರ ನಡವಳಿಕೆಯನ್ನು ತಪ್ಪಾಗಿ ಮೌಲ್ಯಮಾಪನ ಮಾಡಿದೆ ಮತ್ತು ಆಕೆಯ ಹೇಳಿಕೆಗಳಲ್ಲಿದ್ದ ಸಣ್ಣಪುಟ್ಟ ವ್ಯತ್ಯಾಸಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡಿದೆ" ಎಂದು ವಾದಿಸಿದರು.

ಘಟನೆಯ ನಂತರ ತೇಜ್‌ಪಾಲ್ ದೂರುದಾರರಿಗೆ ಕಳುಹಿಸಿದ್ದ ಇಮೇಲ್‌ ಗಳನ್ನೂ ಪ್ರಾಸಿಕ್ಯೂಷನ್ ಆಧರಿಸಿತ್ತು. ಆ ಇಮೇಲ್‌ಗಳಲ್ಲಿ ಅವರು ತಮ್ಮ "ನಿರ್ಧಾರದ ಪ್ರಮಾದಕ್ಕೆ" ಕ್ಷಮೆಯಾಚಿಸಿದ್ದರು ಮತ್ತು ಖೇದ ವ್ಯಕ್ತಪಡಿಸಿದ್ದರು. ಇದು ದೌರ್ಜನ್ಯ ನಡೆದಿದೆ ಎಂಬುದಕ್ಕೆ ಸಾಕ್ಷಿ ಎಂದು ವಾದಿಸಲಾಯಿತು. ಆದರೆ ತೇಜ್‌ಪಾಲ್ ಪರ ವಕೀಲರು ಇದನ್ನು ನಿರಾಕರಿಸಿದರು. ಈ ಇಮೇಲ್‌ ಗಳು ಕೇವಲ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಭಾಷಣೆಗೆ ಸಂಬಂಧಿಸಿದ್ದವೇ ಹೊರತು ಯಾವುದೇ ಶಾರೀರಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಒಪ್ಪಿಕೊಂಡಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ತೇಜ್‌ಪಾಲ್ ಪರ ವಕೀಲರು ದೂರುದಾರರ ಆರೋಪಗಳನ್ನು ಪ್ರಶ್ನಿಸಿದರು. ವಾಟ್ಸಾಪ್ ಸಂದೇಶಗಳು, ಇಮೇಲ್‌ ಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಜ್ಞರ ಸಾಕ್ಷ್ಯಗಳನ್ನು ಉಲ್ಲೇಖಿಸಿ, ಪ್ರಾಸಿಕ್ಯೂಷನ್ ಮಂಡಿಸಿದ ಘಟನಾವಳಿಗಳು ಪರಸ್ಪರ ವಿರುದ್ಧವಾಗಿವೆ ಎಂದು ವಾದಿಸಿದರು.

ಬಾಂಬೆ ಹೈಕೋರ್ಟ್ ತೇಜ್‌ಪಾಲ್ ಅವರ ಖುಲಾಸೆ ಆದೇಶವನ್ನು ರದ್ದುಗೊಳಿಸಿದ್ದು, ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ವಸ್ತ್ರಾಪಹರಣದ ಉದ್ದೇಶದಿಂದ ಅಪರಾಧಿಕ ಬಲಪ್ರಯೋಗ ಎಸಗಿದ ಆರೋಪದಡಿ ಅವರನ್ನು ದೋಷಿ ಎಂದು ಹೇಳಿದೆ.

*ಸುಪ್ರೀಂ ಕೋರ್ಟ್‌ನಲ್ಲಿ ಶಿಕ್ಷೆಯನ್ನು ಪ್ರಶ್ನಿಸಲಿದ್ದಾರೆ ತೇಜ್‌ಪಾಲ್

ತಾನು "ರಾಜಕೀಯ ಸಂತ್ರಸ್ತ" ಹಾಗೂ ಇಬ್ಬರು ಹೆಣ್ಣುಮಕ್ಕಳ ತಂದೆ ಎಂದು ಹೇಳಿಕೊಂಡ ತೇಜ್‌ಪಾಲ್ ಕರುಣೆಗಾಗಿ ಮನವಿ ಮಾಡಿದರು. ಆದರೆ ಗೋವಾ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, "No means No" ಎಂಬ ಬಲವಾದ ಸಂದೇಶವನ್ನು ರವಾನಿಸಲು ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.

ತೀರ್ಪಿನ ನಂತರ ಹೈಕೋರ್ಟ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ತೇಜ್‌ಪಾಲ್, "ನಾವು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ. ಈ ಆದೇಶ ತಪ್ಪಾಗಿದೆ ಎಂದು ನಮಗೆ ಅನಿಸುತ್ತದೆ. ನಾವು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ" ಎಂದರು.

*ತೇಜ್‌ಪಾಲ್ ವಿರುದ್ಧದ ಆರೋಪಗಳು

2013ರ ನವೆಂಬರ್‌ 7 ಮತ್ತು 8ರಂದು ಹೋಟೆಲ್‌ ಒಂದರ ಲಿಫ್ಟ್‌ ನೊಳಗೆ ತೇಜ್‌ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ಪತ್ರಕರ್ತೆಯೊಬ್ಬರು ದೂರು ದಾಖಲಿಸಿದ್ದರು. ತೇಜ್‌ಪಾಲ್ ಅವರನ್ನು 2013ರ ನವೆಂಬರ್‌ 30ರಂದು ಬಂಧಿಸಲಾಯಿತು. ತೆಹಲ್ಕಾ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ತೇಜ್‌ಪಾಲ್, ಈ ಆರೋಪಗಳ ನಂತರ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

2017ರ ಸೆಪ್ಟೆಂಬರ್‌ನಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕಾನೂನುಬಾಹಿರ ಬಂಧನ ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ದೋಷಾರೋಪಣೆ ಹೊರಿಸಲಾಗಿತ್ತು.

2021ರ ಮೇನಲ್ಲಿ, ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿ, ಗೋವಾದ ಸೆಷನ್ಸ್ ಕೋರ್ಟ್ ತೇಜ್‌ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು. ವೈದ್ಯಕೀಯ ಸಾಕ್ಷ್ಯಗಳ ಕೊರತೆಯನ್ನು ವಿಚಾರಣಾ ನ್ಯಾಯಾಲಯ ಗಮನಕ್ಕೆ ತಂದಿತ್ತು. ದೂರುದಾರೆ ಹಾಗೂ ತೇಜ್‌ಪಾಲ್ ನಡುವೆ ವಿನಿಮಯವಾದ ಸಂದೇಶಗಳನ್ನು ಆಧರಿಸಿ, ಆರೋಪಿತ ದೌರ್ಜನ್ಯದಿಂದ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎಂಬ ಪ್ರಾಸಿಕ್ಯೂಷನ್ ವಾದವನ್ನು ಇವು ಬೆಂಬಲಿಸುವುದಿಲ್ಲ ಎಂದು ಹೇಳಿತ್ತು.

*ಹೈಕೋರ್ಟ್ ತೀರ್ಪು ಸ್ವಾಗತಿಸಿದ ತನಿಖಾಧಿಕಾರಿ, ಗೋವಾ ಎಜಿ

"ಆರೋಪಿಗೆ ಶಿಕ್ಷೆಯಾಗಿದೆ" ಎಂದು ತನಿಖೆಯ ನೇತೃತ್ವ ವಹಿಸಿದ್ದ ಗೋವಾ ಪೊಲೀಸ್ ತನಿಖಾಧಿಕಾರಿ ಸುನೀತಾ ಸಾವಂತ್ ತೀರ್ಪಿನ ನಂತರ ಸುದ್ದಿಗಾರರಿಗೆ ತಿಳಿಸಿದರು.

"ಇದು ಒಬ್ಬ ಹೆಣ್ಣುಮಗಳು ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಪ್ರಕರಣದಲ್ಲಿ ಸಿಕ್ಕಿರುವ ಶಿಕ್ಷೆಯಾಗಿದೆ... ಆದ್ದರಿಂದ ಈ ತೀರ್ಪು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅತ್ಯಂತ ಮುಖ್ಯವಾಗಿದೆ."

ಸಾವಂತ್ ಅವರ ಪ್ರಕಾರ, ವಿಚಾರಣಾ ನ್ಯಾಯಾಲಯವು ಪುರಾವೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವಲ್ಲಿ ವಿಫಲವಾಗಿತ್ತು ಮತ್ತು ಹೈಕೋರ್ಟ್ ಆ ಖುಲಾಸೆ ಆದೇಶವನ್ನು ರದ್ದು ಮಾಡಿದ್ದು ಸರಿಯಾಗಿದೆ.

ಗೋವಾ ಅಡ್ವೊಕೇಟ್ ಜನರಲ್ ದೇವಿದಾಸ್ ಪಂಗಮ್ ಕೂಡ ಬಾಂಬೆ ಹೈಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದು, ಇದನ್ನು "ನ್ಯಾಯ ಮತ್ತು ಸಾಕ್ಷ್ಯಾಧಾರಿತ ತೀರ್ಪು" ಎಂದು ಕರೆದಿದ್ದಾರೆ. ವಿಚಾರಣಾ ನ್ಯಾಯಾಲಯದ ತಪ್ಪಾದ ಖುಲಾಸೆ ಆದೇಶದ ನಂತರ ಈ ತೀರ್ಪು ಸಂತ್ರಸ್ತೆಗೆ ನೆಮ್ಮದಿ ತಂದಿದೆ ಎಂದು ಅವರು ಹೇಳಿದರು.

ಪಂಗಮ್ ಅವರ ಪ್ರಕಾರ, ದಾಖಲೆಯಲ್ಲಿ ಸಾಕ್ಷ್ಯಗಳಿದ್ದರೂ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸುವ ಮೂಲಕ ವಿಚಾರಣಾ ನ್ಯಾಯಾಲಯವು "ಸಂಪೂರ್ಣವಾಗಿ ತಪ್ಪೆಸಗಿತ್ತು".

"ದಾಖಲೆಯಲ್ಲಿ ಸಾಕಷ್ಟು ಪುರಾವೆಗಳಿದ್ದವು ಮತ್ತು ಸತ್ಯಾಸತ್ಯತೆಗಳು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗಿದ್ದವು. ಹಾಗಿದ್ದರೂ, ಸಂತ್ರಸ್ತೆಯ ನಡತೆಯ ಮೇಲಿನ ಊಹಾಪೋಹಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು. ವಾಸ್ತವವಾಗಿ, ಇಡೀ ತೀರ್ಪು ಸಂತ್ರಸ್ತೆಯ ಚಾರಿತ್ರ್ಯ ವಧೆಗೆ ಸಮನಾಗಿತ್ತು. ಆಕೆಯನ್ನೇ ಆರೋಪಿಯಂತೆ ನಡೆಸಿಕೊಳ್ಳಲಾಗಿತ್ತು," ಎಂದು ಪಂಗಮ್ ಹೇಳಿರುವುದಾಗಿ ANI ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News