2026ರಲ್ಲಿ CISFನ 95 ಸಿಬ್ಬಂದಿ ಆತ್ಮಹತ್ಯೆ; CRPFನಲ್ಲಿ 26 ಯೋಧರು ಆತ್ಮಹತ್ಯೆಗೆ ಶರಣು; ಮಾನಸಿಕ ಸಮಸ್ಯೆಗಳೇ ಕಾರಣ?
ಮಯಾಂಕ್ ಕುಮಾರ್ - theprint. in ವರದಿ
Photo Credit : ThePrint
ಕಳೆದ 12 ತಿಂಗಳುಗಳಲ್ಲಿ ದೇಶದ ಅತಿ ದೊಡ್ಡ ಸಶಸ್ತ್ರ ಪಡೆ ಸಿಆರ್ಪಿಎಫ್ (CRPF) ಮಹತ್ವದ ಮೈಲಿಗಲ್ಲು ತಲುಪಿದೆ. ದೇಶದ ಸೂಕ್ಷ್ಮ ಹಾಗೂ ಭಯೋತ್ಪಾದನಾ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಈ ಪಡೆಯ ಯಾವುದೇ ಯೋಧರು ಕಾರ್ಯಾಚರಣೆಯಲ್ಲಿ ಮೃತಪಟ್ಟಿಲ್ಲ. ಹೀಗಿದ್ದರೂ, ಸಿಆರ್ಪಿಎಫ್ ಹಾಗೂ ಸಹವರ್ತಿ ಪಡೆಗಳಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಸಿಬ್ಬಂದಿಯ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗಿಲ್ಲ.
CAPF ಯೋಧರ ಆತ್ಮಹತ್ಯೆ ದಶಕಗಳಿಂದಲೂ ಕಳವಳಕಾರಿ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ. 2019ರಿಂದ ಪ್ರತಿ ವರ್ಷ 100ಕ್ಕೂ ಹೆಚ್ಚು CAPF ಯೋಧರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸರಾಸರಿ ಮೂರು ದಿನಕ್ಕೊಮ್ಮೆ ಒಬ್ಬ ಯೋಧ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಮಿಝೋರಾಂ ರಾಜಭವನದಲ್ಲಿ ನಿಯೋಜನೆಗೊಂಡಿದ್ದ ಸಿಆರ್ಪಿಎಫ್ ಯೋಧರೊಬ್ಬರು ತಮ್ಮ ಎಕೆ-47ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಇತ್ತೀಚಿನ ಘಟನೆಯಾಗಿದೆ.
ಯೋಧರ ಸುದೀರ್ಘ ಹಾಗೂ ಕಠಿಣ ಕರ್ತವ್ಯ, ಕುಟುಂಬದಿಂದ ಬಹುಕಾಲ ದೂರವಿರುವುದು ಮತ್ತು ಅಗತ್ಯ ವಿಶ್ರಾಂತಿ ಸಿಗದಿರುವುದೇ ಈ ಪರಿಸ್ಥಿತಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇತರ ಭದ್ರತಾ ಪಡೆಗಳಿಗೆ ಹೋಲಿಸಿದರೆ CAPF ಸಿಬ್ಬಂದಿ ಎದುರಿಸುವ ಸವಾಲುಗಳು ವಿಭಿನ್ನವಾಗಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
"ಸ್ಥಳೀಯ ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬಗಳ ಜೊತೆ ಅಥವಾ ಹತ್ತಿರದಲ್ಲಿ ಇರುತ್ತಾರೆ. ಆದರೆ CAPF ಯೋಧರು ರಜೆ ಪಡೆದು ಮನೆಗೆ ಹೋಗುವುದು ಸುಲಭವಲ್ಲ. ಕುಟುಂಬದ ಸಮಸ್ಯೆಗಳು ಅಥವಾ ಜಮೀನು ವಿವಾದಗಳು ಬಂದಾಗ ಸ್ವತಃ ಹಾಜರಾಗಲು ಸಾಧ್ಯವಾಗದಿರುವುದು ಅವರನ್ನು ತೀವ್ರ ಮಾನಸಿಕ ಕುಸಿತಕ್ಕೆ ತಳ್ಳುತ್ತದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಪ್ರಿಂಟ್ ವರದಿ ಉಲ್ಲೇಖಿಸಿದೆ.
ರಾಜ್ಯ ಪೊಲೀಸರು ನಿರ್ವಹಿಸಬೇಕಾದ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗೂ CAPF ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.
"ಈ ಪಡೆಗಳಿಗೆ ವಿಶ್ರಾಂತಿ ಪಡೆಯಲು ಸೂಕ್ತ ಸಮಯವೇ ಸಿಗುವುದಿಲ್ಲ. ಒಂದು ವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಂದೋಬಸ್ತ್ ನಲ್ಲಿದ್ದರೆ, ಮರುವಾರವೇ ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಇವರನ್ನು ನಿಯೋಜಿಸಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಪರಿಸ್ಥಿತಿ ಸುಧಾರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ನಿರಂತರವಾಗಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಮಾನಸಿಕ ಆರೋಗ್ಯ ನೆರವು ಹಾಗೂ ಕೆಲಸದ ವಾತಾವರಣದ ಸುಧಾರಣೆಗಳ ಪರಿಣಾಮಕಾರಿ ಜಾರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
►ಕಳವಳವನ್ನುಂಟು ಮಾಡಿದ ದತ್ತಾಂಶ
ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ, ಸಿಐಎಸ್ಎಫ್, ಅಸ್ಸಾಂ ರೈಫಲ್ಸ್ ಹಾಗೂ ಎನ್ಎಸ್ಜಿ ಸೇರಿದಂತೆ ಒಟ್ಟು ಏಳು ಸಶಸ್ತ್ರ ಪಡೆಗಳು CAPF ವ್ಯಾಪ್ತಿಗೆ ಬರುತ್ತವೆ.
The print ವಿಶ್ಲೇಷಣೆಯ ಪ್ರಕಾರ, ಈ ವರ್ಷ ಇದುವರೆಗೆ 95 CAPF ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಇದರಲ್ಲಿ ಸಿಐಎಸ್ಎಫ್ ನ ನವೀಕೃತ ದತ್ತಾಂಶ ಲಭ್ಯವಿಲ್ಲ ಹಾಗೂ ಎನ್ ಎಸ್ ಜಿ ಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ).
ಬಿಎಸ್ಎಫ್ನಲ್ಲಿ ಗರಿಷ್ಠ ಅಂದರೆ 38 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದರೆ, CRPFನಲ್ಲಿ 26, ಎಸ್ಎಸ್ಬಿಯಲ್ಲಿ 14, ಅಸ್ಸಾಂ ರೈಫಲ್ಸ್ ನಲ್ಲಿ 12 ಹಾಗೂ ಐಟಿಬಿಪಿಯಲ್ಲಿ 5 ಪ್ರಕರಣಗಳು ವರದಿಯಾಗಿವೆ. 2023ರಿಂದ ಸಿಆರ್ಪಿಎಫ್ ಒಂದರಲ್ಲೇ 185ಕ್ಕೂ ಹೆಚ್ಚು ಯೋಧರು ಪ್ರಾಣ ಕಳೆದುಕೊಂಡಿದ್ದು, 2025ರಲ್ಲಿ ಗರಿಷ್ಠ 59 ಆತ್ಮಹತ್ಯೆಗಳು ನಡೆದಿವೆ.
2023ರಲ್ಲಿ 'the print' ವರದಿ ಮಾಡಿದಂತೆ, ನಿರ್ದಿಷ್ಟ ಜನಸಂಖ್ಯೆಯ ಪ್ರತಿ 1 ಲಕ್ಷ ಜನರಲ್ಲಿ ನಡೆಯುವ ಆತ್ಮಹತ್ಯೆಗಳ ಸಂಖ್ಯೆಯನ್ನು ಲೆಕ್ಕಹಾಕಿದರೆ, CAPF ಯೋಧರಲ್ಲಿನ ಆತ್ಮಹತ್ಯೆ ಪ್ರಮಾಣ (ಪ್ರತಿ ಲಕ್ಷಕ್ಕೆ 13) ಅದೇ ವಯೋಮಾನದ ಇತರ ಸಾಮಾನ್ಯ ಪುರುಷರ ಸರಾಸರಿ ಪ್ರಮಾಣಕ್ಕಿಂತ (8.9) ತೀವ್ರವಾಗಿ ಹೆಚ್ಚಾಗಿದೆ.
CRPFನ ಕಾರ್ಯಾಚರಣೆಯ ಶೂನ್ಯ ಮರಣ ಸಾಧನೆಯನ್ನು ಶ್ಲಾಘಿಸಿರುವ ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್, "ಇದು ದೊಡ್ಡ ಸಾಧನೆಯಾಗಿದ್ದರೂ, ಪಡೆಯ ಒಳಗಿನ ಬಿಕ್ಕಟ್ಟನ್ನು ಮರೆಮಾಚಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಆತ್ಮಹತ್ಯೆಗಳು ಯೋಧರು ನಿರಂತರವಾಗಿ ಎದುರಿಸುತ್ತಿರುವ ತೀವ್ರ ಮಾನಸಿಕ ಒತ್ತಡವನ್ನು ತೋರಿಸುತ್ತವೆ. ಇದಕ್ಕೆ ದೊಡ್ಡ ಮಟ್ಟದ ಸುಧಾರಣೆಗಳು ಅಗತ್ಯ" ಎಂದು ಹೇಳಿದ್ದಾರೆ.
CAPF ಬಳಕೆಯ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೇಂದ್ರ ಪಡೆಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗುತ್ತಿವೆ. ಗೃಹ ಸಚಿವಾಲಯವೂ ಈ ಒತ್ತಡಕ್ಕೆ ಮಣಿಯುತ್ತಿರುವುದರಿಂದ ಪಡೆಗಳಿಗೆ ತರಬೇತಿ ಮತ್ತು ವಿಶ್ರಾಂತಿಗೆ ಸಮಯವೇ ಸಿಗದಂತಾಗಿದೆ ಎಂದು ವಿವರಿಸಿದರು.
ಮತ್ತೊಬ್ಬ ಅಧಿಕಾರಿಯ ಪ್ರಕಾರ, "ಹಲವು ಪಡೆಗಳು ಕನಿಷ್ಠ ಸೌಲಭ್ಯಗಳಿಲ್ಲದ ತಾತ್ಕಾಲಿಕ ಟೆಂಟ್ ಗಳಲ್ಲಿ ವಾಸಿಸುತ್ತಿವೆ. ಕಾರ್ಯಾಚರಣೆಯ ವೇಳೆ ರೋಗಬಾಧಿತರಾಗಿ ಮತ್ತು ಅನಾರೋಗ್ಯದಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚಿದೆ. 2019ರಿಂದ 2023ರ ನಡುವೆ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಿಂತ (207) ಅನಾರೋಗ್ಯ ಮತ್ತು ಹೃದಯಾಘಾತದಿಂದ ಮೃತಪಟ್ಟ ಯೋಧರ ಸಂಖ್ಯೆಯೇ (500ಕ್ಕೂ ಹೆಚ್ಚು) ದುಪ್ಪಟ್ಟಾಗಿದೆ."
►ಕಠಿಣ ಕೆಲಸದ ವಾತಾವರಣ, ಸುದೀರ್ಘ ನಿಯೋಜನೆ
ಈ ಗಂಭೀರ ಸಮಸ್ಯೆಯ ಕುರಿತು ಸರ್ಕಾರಕ್ಕೆ ಸಂಪೂರ್ಣ ಅರಿವಿದೆ.
CAPF ಯೋಧರ ಆತ್ಮಹತ್ಯೆಗೆ ಕಾರಣವಾಗುವ ವೈಯಕ್ತಿಕ ಹಾಗೂ ಸೇವಾ ಸಂಬಂಧಿತ ಅಂಶಗಳನ್ನು ಅಧ್ಯಯನ ಮಾಡಿ, ತಡೆಗಟ್ಟುವ ಕ್ರಮಗಳನ್ನು ಸೂಚಿಸಲು 2021ರಲ್ಲಿ ಗೃಹ ಸಚಿವಾಲಯ ಕಾರ್ಯಪಡೆಯೊಂದನ್ನು ರಚಿಸಿತ್ತು.
ಕಠಿಣ ಕೆಲಸದ ವಾತಾವರಣ, ಸೇವಾ ಷರತ್ತುಗಳು ಹಾಗೂ ವೈಯಕ್ತಿಕ ಸಮಸ್ಯೆಗಳು-ಈ ಮೂರು ಮುಖ್ಯ ಕಾರಣಗಳನ್ನು ಕಾರ್ಯಪಡೆ ಗುರುತಿಸಿದೆ. ಭೀಕರ ವಾತಾವರಣದಲ್ಲಿ ಸುದೀರ್ಘ ಕರ್ತವ್ಯ, ಕುಟುಂಬದಿಂದ ದೂರ ಉಳಿಯುವುದು, ರಜೆ ಸಿಗದಿರುವುದು ಮತ್ತು ಕೆಲಸದ ಬಗ್ಗೆ ತೃಪ್ತಿಯಿಲ್ಲದಿರುವುದು ಯೋಧರಲ್ಲಿ ತೀವ್ರ ಆಯಾಸ ಹಾಗೂ ಖಿನ್ನತೆಗೆ ಕಾರಣವಾಗುತ್ತಿವೆ. ಜೊತೆಗೆ, ಮನೆ-ಜಮೀನು ವಿವಾದಗಳು ಹಾಗೂ ಮಾನಸಿಕ ಒತ್ತಡಗಳು ಅವರ ಮೇಲೆ ದುಷ್ಪರಿಣಾಮ ಬೀರುತ್ತಿವೆ.
ಸೇವಾ ಷರತ್ತುಗಳಿಗೆ ಸಂಬಂಧಿಸಿದಂತೆ, ಐಟಿಬಿಪಿ, ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ ಹಾಗೂ ಅಸ್ಸಾಂ ರೈಫಲ್ಸ್ ಪಡೆಯ ಸಿಬ್ಬಂದಿಯಲ್ಲಿ ರಜೆ ಸಿಗದ ಸಮಸ್ಯೆ ಎದುರಾಗುತ್ತಿದೆ. ಸಿಆರ್ಪಿಎಫ್, ಸಿಐಎಸ್ಎಫ್ ಹಾಗೂ ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ವಿಶ್ರಾಂತಿ ಮತ್ತು ವಿನೋದಕ್ಕೆ ಸೂಕ್ತ ಸಮಯ ಸಿಗುತ್ತಿಲ್ಲ. ಇತರ ರಂಗಗಳಿಗೆ ಹೋಲಿಸಿದರೆ ಉದ್ಯೋಗ ತೃಪ್ತಿಯ ಕೊರತೆಯೂ ಯೋಧರ ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಐಟಿಬಿಪಿ ಮತ್ತು ಎಸ್ಎಸ್ಬಿಯಲ್ಲಿ ಕಂಪೆನಿ ಕಮಾಂಡರ್ಗಳ ಮೇಲಿಂದ ಮೇಲೆ ನಡೆಯುವ ವರ್ಗಾವಣೆಗಳು ಯೋಧರೊಂದಿಗಿನ ಸಂವಹನವನ್ನು ಕಡಿತಗೊಳಿಸುತ್ತಿವೆ.
ವೈಯಕ್ತಿಕ ಮಟ್ಟದಲ್ಲಿ, ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಮಾನಸಿಕ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಬಾಧಿಸುತ್ತಿವೆ. ಕುಟುಂಬದ ಸಮಸ್ಯೆಗಳು ಹಾಗೂ ಜಮೀನು ವಿವಾದಗಳು ಇವರಲ್ಲಿ ತೀವ್ರ ಮಾನಸಿಕ ಒತ್ತಡವನ್ನುಂಟುಮಾಡುತ್ತಿವೆ.
CAPF ಸಿಬ್ಬಂದಿಯ ಆತ್ಮಹತ್ಯೆ ವಿಷಯವು ಗೃಹ ವ್ಯವಹಾರಗಳ ಸಂಸದೀಯ ಸಮಿತಿಯ ಮುಂದೆಯೂ ಪ್ರಸ್ತಾಪವಾಗಿತ್ತು. ಕಠಿಣ ಕರ್ತವ್ಯದ ಸ್ವರೂಪವನ್ನು ಪರಿಗಣಿಸಿ, CAPF ಯೋಧರಿಗೆ ನಿಯಮಿತ ಅಂತರದಲ್ಲಿ ರಜೆ ನೀಡುವುದು "ಅತ್ಯಗತ್ಯ" ಎಂದು ಸಮಿತಿ 2023ರಲ್ಲಿ ಹೇಳಿತ್ತು.
"ವಿಪರೀತ ಹಾಗೂ ಕಠಿಣ ವಾತಾವರಣವಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ CAPF ಪಡೆಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತವೆ. ಯೋಧರು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸೂಕ್ತ ಸಮಯದಲ್ಲಿ ರಜೆ ನೀಡುವುದು ಅತ್ಯಗತ್ಯ" ಎಂದು ಸಂಸದೀಯ ಸಮಿತಿ ತಿಳಿಸಿತ್ತು.
CAPF ಯೋಧರ ರಜೆ ಹೆಚ್ಚಿಸುವ ಕುರಿತು ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿದ್ದು, ಪಡೆಯ ಮನೋಬಲವನ್ನು ಹೆಚ್ಚಿಸಲು ಈ ಪ್ರಸ್ತಾವನೆಯನ್ನು ಜಾಗರೂಕತೆಯಿಂದ ಅಂತಿಮಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ದಾಖಲೆಗಳ ಪ್ರಕಾರ, ಗೃಹ ಸಚಿವಾಲಯವು CAPF ಸಿಬ್ಬಂದಿಗಾಗಿ 100 ದಿನಗಳ ರಜೆ ನೀತಿಯನ್ನು ಹೊಂದಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಸರ್ಕಾರಿ ದತ್ತಾಂಶದ ಪ್ರಕಾರ, 2020ರಿಂದ 2024ರ ಅಕ್ಟೋಬರ್ ನಡುವೆ ಕೇವಲ 42,000 CAPF ಸಿಬ್ಬಂದಿಗೆ ಮಾತ್ರ ಈ 100 ದಿನಗಳ ರಜೆ ಪಡೆಯಲು ಸಾಧ್ಯವಾಗಿದೆ.
ಸೌಜನ್ಯ: theprint.in