×
Ad

ವಿಶ್ವಕಪ್‌ ನಿಂದ ನಾರ್ವೆ ಹೊರಗೆ | ರೆಫ್ರಿ ನಿರ್ಧಾರವನ್ನು ಟೀಕಿಸಿದ ಎರ್ಲಿಂಗ್ ಹಾಲಾಂಡ್ ತಂದೆ; FIFA ನೀಡಿದ ವಿವರಣೆಯೇನು?

Update: 2026-07-12 18:33 IST

Photo Credit : AP 

ಕ್ವಾರ್ಟರ್‌ಫೈನಲ್‌ ನಲ್ಲಿ ನಾರ್ವೆಯ ವಿವಾದಾತ್ಮಕ ನಿರ್ಗಮನವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಶನಿವಾರ ಮಿಯಾಮಿಯಲ್ಲಿ ನಡೆದ ಫಿಫಾ ವಿಶ್ವಕಪ್ ಕ್ವಾರ್ಟರ್‌ಫೈನಲ್‌ ನಲ್ಲಿ ಇಂಗ್ಲೆಂಡ್ ತಂಡವು ಹೆಚ್ಚುವರಿ ಸಮಯದಲ್ಲಿ ನಾರ್ವೆಯನ್ನು 2-1 ಗೋಲುಗಳಿಂದ ಸೋಲಿಸಿದ ನಂತರ ನಾರ್ವೆಯ ಸ್ಟ್ರೈಕರ್ ಎರ್ಲಿಂಗ್ ಹಾಲಾಂಡ್ ಅವರ ತಂದೆ ಆಲ್ಫ್ ಇಂಗೆ ಹಾಲಾಂಡ್ ಅವರು ರೆಫರಿಯಿಂಗ್ ಅನ್ನು ಟೀಕಿಸಿದ್ದಾರೆ.

ಆಂಡ್ರಿಯಾಸ್ ಶ್ಜೆಲ್ದೆರಪ್‌ ನಾರ್ವೆಗೆ ಮೊದಲಾರ್ಧದಲ್ಲಿ ಮುನ್ನಡೆ ನೀಡಿದ ನಂತರ ಇಂಗ್ಲೆಂಡ್ ತಂಡ ಮುನ್ನಡೆ ಸಾಧಿಸಿತು. ಜೂಡ್ ಬೆಲ್ಲಿಂಗ್ಹ್ಯಾಮ್ ಹೆಚ್ಚುವರಿ ಸಮಯದ ವಿಜಯದ ಗೋಲು ಸೇರಿದಂತೆ ಎರಡು ಗೋಲುಗಳನ್ನು ಗಳಿಸಿದರು. ಈ ಫಲಿತಾಂಶವು ಕ್ವಾರ್ಟರ್‌ಫೈನಲ್ ಹಂತದಲ್ಲಿ ನಾರ್ವೆಯ ಐತಿಹಾಸಿಕ ವಿಶ್ವಕಪ್ ಓಟವನ್ನು ಕೊನೆಗೊಳಿಸಿತು.

ಪಂದ್ಯದ ಅಂತ್ಯದ ಬಳಿಕ ಇಟಲಿಯ ಪ್ರಸಿದ್ಧ ಫುಟ್‌ಬಾಲ್ ಪತ್ರಕರ್ತ ಫ್ಯಾಬ್ರಿಜಿಯೊ ರೊಮಾನೊ ಬೆಲ್ಲಿಂಗ್ಹ್ಯಾಮ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸಿಸಿದರು. ಅವರ ಪ್ರಶಂಸೆಗೆ ಪ್ರತಿಕ್ರಿಯಿಸಿದ ಆಲ್ಫ್-ಇಂಗೆ ಹಾಲಾಂಡ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದರು. “ಬೆಲ್ಲಿಂಗ್ಹ್ಯಾಮ್ ಮತ್ತು ರೆಫ್ರಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ” ಎನ್ನುವ ರೊಮಾನೊ ಅವರ ಪ್ರಶಂಸೆಯ ಪೋಸ್ಟ್ ತ್ವರಿತವಾಗಿ ಆನ್‌ಲೈನ್‌ ನಲ್ಲಿ ಗಮನ ಸೆಳೆಯಿತು. ಏಕೆಂದರೆ ಕ್ವಾರ್ಟರ್‌ಫೈನಲ್‌ನಲ್ಲಿ ನಾರ್ವೆಯ ವಿವಾದಾತ್ಮಕ ನಿರ್ಗಮನವು ಪ್ರಮುಖ ಚರ್ಚೆಗೆ ಕಾರಣವಾಗಿದೆ.

ಸ್ಪರ್ಧೆಯ ಸಮಯದಲ್ಲಿ ಎರಡು ನಿರ್ಧಾರಗಳು ನಾರ್ವೆಯ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾದವು. ಇಂಗ್ಲೆಂಡ್ ಸಮಬಲದ ಗೋಲು ಮೊದಲಾರ್ಧದಲ್ಲಿ ಬಂದಿತ್ತು. ನಂತರ ಇಂಗ್ಲೆಂಡ್‌ನ ಗೋಲ್ ಕಿಕ್‌ ಇಂಗ್ಲೆಂಡ್‌ನ ಗೋಲು ಪೋಸ್ಟ್ ಒಳಗೆ ಬೀಳುವ ಮೊದಲು ಓವರ್‌ಹೆಡ್ ಕ್ಯಾಮೆರಾ ಕೇಬಲ್ ಅನ್ನು ಸ್ಪರ್ಶಿಸಿರುವಂತೆ ಕಾಣಿಸಿತು. ಈ ಸ್ಪರ್ಶಕ್ಕೆ ಆಟ ನಿಲ್ಲಿಸಬೇಕಿತ್ತು ಎಂದು ನಾರ್ವೆ ಪ್ರತಿಭಟಿಸಿತು. ಆದರೆ ಫಿಫಾ ಕೇಬಲ್‌ಗೂ ಚೆಂಡಿಗೂ ಸಂಪರ್ಕವಾಗಿಲ್ಲ ಎಂದು ಹೇಳಿದೆ.

ಕೇಬಲ್‌ಗೆ ಚೆಂಡು ಬಡಿದ ಸಂದರ್ಭದಲ್ಲಿ ಸೆನ್ಸರ್ ಯಾವುದೇ ಬಡಿತವನ್ನು ತೋರಿಸಿಲ್ಲ. ಹೀಗಾಗಿ ಓವರ್‌ಹೆಡ್ ವೈರ್ ಸ್ಪರ್ಶದಿಂದ ಚೆಂಡಿನ ಚಲನೆಯಲ್ಲಿ ಬದಲಾವಣೆಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಫಿಫಾ ಹೇಳಿದೆ.

55ನೇ ನಿಮಿಷದಲ್ಲಿ ಟೋರ್ಬ್ಜಾರ್ನ್ ಹೆಗ್ಗೆಮ್‌ ಅವರು ಕಾರ್ನರ್‌ನಿಂದ ಗೋಲು ಗಳಿಸಿದಾಗ ನಾರ್ವೆ ಮುನ್ನಡೆ ಸಾಧಿಸಿರುವುದಾಗಿ ಭಾವಿಸಿತ್ತು. ಆದರೆ VAR ಪರಿಶೀಲನೆ ನಂತರ ಗೋಲನ್ನು ರದ್ದುಗೊಳಿಸಲಾಯಿತು. ಕಾರ್ನರ್ ತೆಗೆದುಕೊಳ್ಳುವ ಮೊದಲು ಎರ್ಲಿಂಗ್ ಹಾಲಾಂಡ್ ಅವರು ಎಲಿಯಟ್ ಆಂಡರ್ಸನ್‌ಗೆ ಫೌಲ್ ಮಾಡಿದ್ದಾರೆ ಎಂದು ಅಧಿಕಾರಿಗಳು ತೀರ್ಪು ನೀಡಿದರು.

ಹೆಚ್ಚುವರಿ ಸಮಯಕ್ಕೆ ಮೂರು ನಿಮಿಷ ಬಾಕಿ ಇರುವಾಗ ಬೆಲ್ಲಿಂಗ್ಹ್ಯಾಮ್ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಮಾರ್ಗನ್ ರೋಜರ್ಸ್ ಅವರ ಲಾಂಗ್-ರೇಂಜ್ ಪ್ರಯತ್ನವು ಗೋಲ್‌ಕೀಪರ್ ಓರ್ಜನ್ ನೈಲ್ಯಾಂಡ್ ಅವರ ಹಿಡಿತದಿಂದ ಜಾರಿದಾಗ ಇಂಗ್ಲೆಂಡ್ ಮಿಡ್‌ಫೀಲ್ಡರ್ ವೇಗವಾಗಿ ಪ್ರತಿಕ್ರಿಯಿಸಿ ಸಮೀಪದಿಂದ ಗೋಲು ಗಳಿಸಿದರು.

ಹೆಚ್ಚುವರಿ ಸಮಯದ ಮಧ್ಯದಲ್ಲಿ ಎರ್ಲಿಂಗ್ ಹಾಲಾಂಡ್ ಅವರನ್ನು ಬದಲಿಸಲಾಯಿತು. ಹೀಗಾಗಿ ಸತತ 14 ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಗಳಿಸುವ ಅವರ ಸರಣಿ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ನಾಲ್ಕನೇ ವಿಶ್ವಕಪ್ ಸೆಮಿಫೈನಲ್ ಆಡಲು ಸಿದ್ಧವಾಗಿದೆ. ಕಳೆದ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ ಎರಡನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಫೈನಲ್‌ಗೆ ಹೋಗಲು ಅರ್ಜೆಂಟೀನಾವನ್ನು ಸೋಲಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News