×
Ad

ಪರಿಸರ ಸಂರಕ್ಷಣೆಯಲ್ಲಿ ಹಿನ್ನಡೆ: ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ ಕೊನೆಯಿಂದ ಎರಡನೇ ಸ್ಥಾನ, ಸೂಚ್ಯಂಕಗಳು ಏನು ಹೇಳುತ್ತವೆ? thewire. in ವರದಿ

thewire. in ವರದಿ

Update: 2026-07-11 22:00 IST

Photo Credit : scroll.in

ಪರಿಸರ ಆರೋಗ್ಯ, ಪರಿಸರ ವ್ಯವಸ್ಥೆಯ ಚೇತರಿಕೆ ಮತ್ತು ಹವಾಮಾನ ವೈಪರೀತ್ಯ ನಿಯಂತ್ರಣದಂತಹ ಸೂಚಕಗಳ ಆಧಾರದ ಮೇಲೆ ದೇಶಗಳಿಗೆ ಶ್ರೇಯಾಂಕ ನೀಡುವ ಈ ವರ್ಷದ ಜಾಗತಿಕ 'ಪರಿಸರ ಸಾಧನೆ ಸೂಚ್ಯಂಕ' (EPI)ದಲ್ಲಿ ಭಾರತವು ಕೊನೆಯಿಂದ ಎರಡನೇ ಸ್ಥಾನವನ್ನು (176ನೇ ಸ್ಥಾನ) ಪಡೆದಿದೆ.

ಈ ಸೂಚ್ಯಂಕದಲ್ಲಿ ಭಾರತವು 100ಕ್ಕೆ 22.46 ಅಂಕಗಳನ್ನು ಪಡೆದುಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ, ಅತ್ಯುತ್ತಮ ಪ್ರದರ್ಶನ ನೀಡಿರುವ ಎಸ್ಟೋನಿಯಾ ದೇಶವು 74.79 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದ ಎಂಟು ದೇಶಗಳ ಪೈಕಿ ಭಾರತವೇ ಅತ್ಯಂತ ಕೊನೆಯ (ಎಂಟನೇ) ಸ್ಥಾನದಲ್ಲಿದೆ.

2024ರಲ್ಲಿ ಪ್ರಕಟವಾಗಿದ್ದ ಹಿಂದಿನ ಸೂಚ್ಯಂಕದಲ್ಲೂ ಭಾರತವು 180 ದೇಶಗಳ ಪೈಕಿ 176ನೇ ಸ್ಥಾನದಲ್ಲೇ ಇತ್ತು. ಅದಕ್ಕೂ ಮುನ್ನ, 2022ರ ಸೂಚ್ಯಂಕದಲ್ಲಿ ಭಾರತಕ್ಕೆ ಅತ್ಯಂತ ಕೊನೆಯ ಅಂದರೆ 180ನೇ ಸ್ಥಾನ ಸಿಕ್ಕಿತ್ತು. ಈ ಶ್ರೇಯಾಂಕದ ವಿರುದ್ಧ ಆಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ ಸರ್ಕಾರ, ಈ ಸೂಚ್ಯಂಕವು ಕೇವಲ "ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು" ಆಧರಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿತ್ತು.

ಪರಿಸರ ಸಂರಕ್ಷಣೆಯಲ್ಲಿ ಜಾಗತಿಕ ಶ್ರೇಯಾಂಕ

ಅಮೆರಿಕದ ಯೇಲ್ ಮತ್ತು ಕೊಲಂಬಿಯಾ ಸೇರಿದಂತೆ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಈ ಜಾಗತಿಕ ಪರಿಸರ ಸಾಧನೆ ಸೂಚ್ಯಂಕವನ್ನು (EPI) ಸಿದ್ಧಪಡಿಸುತ್ತಾರೆ. ಉಪಗ್ರಹ ಚಿತ್ರಗಳು ಸೇರಿದಂತೆ ಹಲವು ಮೂಲಗಳಿಂದ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸಿ, ವಿವಿಧ ನೀತಿಗಳ ಅಡಿಯಲ್ಲಿ ಈ ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ. ಇದರಲ್ಲಿ 'ಪರಿಸರ ಆರೋಗ್ಯ' ಪ್ರಮುಖವಾಗಿದ್ದು, ವಾಯು ಗುಣಮಟ್ಟ ಮತ್ತು ಗಾಳಿಯಲ್ಲಿನ ಸೂಕ್ಷ್ಮ ಧೂಳಿನ ಕಣಗಳ ಮಟ್ಟವನ್ನು ಇದು ಒಳಗೊಂಡಿರುತ್ತದೆ.

ಮತ್ತೊಂದು ಪ್ರಮುಖ ಅಂಶವೆಂದರೆ 'ಪರಿಸರ ವ್ಯವಸ್ಥೆಯ ಚೇತರಿಕೆ'. ದೇಶಗಳು ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಉತ್ತಮವಾಗಿ ನಿರ್ವಹಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ಅರಣ್ಯ ನಾಶ, ಕೀಟನಾಶಕಗಳ ಮಾಲಿನ್ಯದ ಅಪಾಯ ಮತ್ತು ಕರಾವಳಿ ತೀರದ ಸಂರಕ್ಷಣೆಯಂತಹ ಅಂಶಗಳು ಇದರಲ್ಲಿ ಸೇರಿವೆ. ಮೂರನೆಯದಾಗಿ, ಕಾರ್ಬನ್ ಡೈಆಕ್ಸೈಡ್ ಮತ್ತು ಮಿಥೇನ್ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಆಧರಿಸಿ 'ಹವಾಮಾನ ವೈಪರೀತ್ಯ ನಿಯಂತ್ರಣ'ವನ್ನು ಅಳೆಯಲಾಗುತ್ತದೆ. ಇವೆಲ್ಲವುಗಳ ಆಧಾರದ ಮೇಲೆ ಪ್ರತಿ ದೇಶಕ್ಕೂ 0ರಿಂದ 100ರವರೆಗೆ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ ದೇಶದ ಪರಿಸರ ಸ್ಥಿತಿ ಉತ್ತಮವಾಗಿದೆ ಎಂದು ಅರ್ಥ.

2026ರ ವರದಿಗಾಗಿ, EPI ತಂಡವು 12 ವಿವಿಧ ವಿಷಯಗಳ ಅಡಿಯಲ್ಲಿ 47 ಪರಿಸರ ಸೂಚಕಗಳನ್ನು ಬಳಸಿ 177 ದೇಶಗಳಿಗೆ ಶ್ರೇಯಾಂಕ ನೀಡಿದೆ. ಇದರಲ್ಲಿ ಒಟ್ಟು ಅಂಕಗಳ ಮೂರು ಪ್ರಮುಖ ನೀತಿಗಳ ಪೈಕಿ ಪರಿಸರ ಆರೋಗ್ಯಕ್ಕೆ ಶೇ. 25, ಪರಿಸರ ವ್ಯವಸ್ಥೆಯ ಚೇತರಿಕೆಗೆ ಶೇ. 45 ಮತ್ತು ಹವಾಮಾನ ವೈಪರೀತ್ಯಕ್ಕೆ ಶೇ. 30ರಷ್ಟು ಆದ್ಯತೆ ನೀಡಲಾಗಿದೆ. ಇಂಗಾಲವನ್ನು ಹೀರಿಕೊಳ್ಳುವಲ್ಲಿ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಹುಲ್ಲುಗಾವಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ನೀತಿ ನಿರೂಪಣೆ ಮತ್ತು ಸಂರಕ್ಷಣೆಯ ವಿಷಯದಲ್ಲಿ ಈ ತಾಣಗಳ ಕಡೆಗೆ ತೀರಾ ಕಡಿಮೆ ಗಮನ ಹರಿಸಲಾಗಿದೆ. ಈ ಕಾರಣಕ್ಕಾಗಿ, ಈ ವರ್ಷದ ಸೂಚ್ಯಂಕದಲ್ಲಿ ಮೊದಲ ಬಾರಿಗೆ 'ಹುಲ್ಲುಗಾವಲುಗಳ ನಾಶ'ವನ್ನೂ ಒಂದು ಪ್ರಮುಖ ಸೂಚಕವಾಗಿ ಪರಿಗಣಿಸಲಾಗಿದೆ.

ವಿವಿಧ ವರ್ಷಗಳಲ್ಲಿ ಬಳಸಲಾಗುವ ಸಂಶೋಧನಾ ವಿಧಾನಗಳು ಬದಲಾಗುತ್ತಿರುತ್ತವೆ. ಈ ಕಾರಣಕ್ಕಾಗಿ ಬೇರೆ ಬೇರೆ ವರ್ಷಗಳ ಪರಿಸರ ಸಾಧನೆ ಸೂಚ್ಯಂಕದ (EPI) ವರದಿಗಳನ್ನು ಪರಸ್ಪರ ಹೋಲಿಸುವುದು ಕಷ್ಟವಾಗುತ್ತದೆ. ಉದಾಹರಣೆಗೆ, 2022ರ ಸೂಚ್ಯಂಕದಲ್ಲಿ 40 ಪರಿಸರ ಸೂಚಕಗಳನ್ನು ವಿಶ್ಲೇಷಿಸಲಾಗಿತ್ತು. ಆದರೆ 2024ರ ವರದಿಯಲ್ಲಿ 58 ಸೂಚಕಗಳನ್ನು ಪರಿಶೀಲಿಸಲಾಗಿತ್ತು.

2026ರ ಸೂಚ್ಯಂಕದ ಪ್ರಕಾರ, ಎಸ್ಟೋನಿಯಾ ದೇಶವು 74.79 ಅಂಕಗಳೊಂದಿಗೆ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಒಂದು ದಶಕದಲ್ಲಿ ಎಸ್ಟೋನಿಯಾ ಪಳೆಯುಳಿಕೆ ಇಂಧನ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ನವೀಕರಿಸಬಹುದಾದ ವಿದ್ಯುತ್ ಬಳಕೆಯನ್ನು ಹೆಚ್ಚಿಸಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆಯಲ್ಲೂ ಎಸ್ಟೋನಿಯಾ ಜಾಗತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹಿಂದಿನ ಸೂಚ್ಯಂಕದಲ್ಲೂ ಈ ದೇಶವೇ ಮೊದಲ ಸ್ಥಾನದಲ್ಲಿತ್ತು.

ಕಳೆದ ಬಾರಿಯಂತೆ ಈ ವರ್ಷವೂ ಯುರೋಪ್ ರಾಷ್ಟ್ರಗಳೇ ಮೊದಲ ಐದು ಸ್ಥಾನಗಳನ್ನು ಬಾಚಿಕೊಂಡಿವೆ. 2026ರ ವರದಿಯಲ್ಲಿ ಲಕ್ಸೆಂಬರ್ಗ್ ಎರಡನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಯುನೈಟೆಡ್ ಕಿಂಗ್‌ಡಮ್, ಫಿನ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಇವೆ.

ಇನ್ನು ಲಾವೋಸ್ ದೇಶವು 21.78 ಅಂಕಗಳೊಂದಿಗೆ 177ನೇ ಸ್ಥಾನ ಪಡೆದು, ಈ ಪಟ್ಟಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ದೇಶ ಎನಿಸಿಕೊಂಡಿದೆ.

ಕೊನೆಯಿಂದ ಎರಡನೇ ಸ್ಥಾನದಲ್ಲಿ ಭಾರತ

ಲಾವೋಸ್‌ಗಿಂತ ಕೇವಲ ಒಂದು ಸ್ಥಾನದಷ್ಟೇ ಮುಂದಿರುವ ಭಾರತವು, 22.46 ಅಂಕಗಳೊಂದಿಗೆ 176ನೇ ಶ್ರೇಯಾಂಕ ಪಡೆದಿದೆ. ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ, ಭಾರತವು ಪರಿಸರ ಆರೋಗ್ಯದಲ್ಲಿ 174ನೇ ಸ್ಥಾನ, ಪರಿಸರ ವ್ಯವಸ್ಥೆಯ ಚೇತರಿಕೆಯಲ್ಲಿ 171ನೇ ಸ್ಥಾನ ಮತ್ತು ಹವಾಮಾನ ವೈಪರೀತ್ಯ ನಿಯಂತ್ರಣ ನೀತಿಗಳಲ್ಲಿ 130ನೇ ಸ್ಥಾನದಲ್ಲಿದೆ.

ಭಾರತದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣವು ತುಲನಾತ್ಮಕವಾಗಿ ಕಡಿಮೆಯಿದ್ದರೂ, ಅದು ವೇಗವಾಗಿ ಬೆಳೆಯುತ್ತಿದೆ. ದೇಶದ ಕೋಟ್ಯಂತರ ಜನರಿಗೆ ಆಧುನಿಕ ಇಂಧನ ಸೌಲಭ್ಯಗಳು ಸಿಗುತ್ತಿವೆ. ಇದರ ಜೊತೆಗೇ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯೂ ತೀವ್ರವಾಗಿ ಹೆಚ್ಚುತ್ತಿದ್ದು, ದೇಶವು ಅಭಿವೃದ್ಧಿ ಮತ್ತು ಮಾಲಿನ್ಯದ ನಡುವೆ ಕಠಿಣ ಸವಾಲನ್ನು ಎದುರಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಪ್ರಮುಖ ಸೂಚಕಗಳು (ಅತಿ ಸೂಕ್ಷ್ಮ ಧೂಳಿನ ಕಣಗಳು, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ಗಳ ಪ್ರಭಾವದಿಂದ ಹೆಚ್ಚುತ್ತಿರುವ ಸಾವು ಮತ್ತು ಕಾಯಿಲೆಗಳ ಪ್ರಮಾಣ) ನಕಾರಾತ್ಮಕ ಮೌಲ್ಯವನ್ನು ತೋರಿಸಿವೆ. ಅಂದರೆ ಈ ವಿಷಯಗಳಲ್ಲಿ ಭಾರತದ ಸ್ಥಿತಿ ತೀರಾ ಕಳಪೆಯಾಗಿದೆ. ಇದೇ ಅವಧಿಯಲ್ಲಿ ಭಾರತದ ಕರಾವಳಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯೂ ಅತ್ಯಂತ ಕಳಪೆಯಾಗಿದ್ದು, ಮೈನಸ್ 51.77 ರಷ್ಟು ನಕಾರಾತ್ಮಕವಾಗಿದೆ. ಭಾರತದ ಈ ಕಳಪೆ ಪ್ರದರ್ಶನಕ್ಕೆ ವಾಯು ಮಾಲಿನ್ಯದ ಗಂಭೀರ ಸಮಸ್ಯೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಮೇಲಿನ ನಿರಂತರ ಅವಲಂಬನೆ ಮತ್ತು ಜೈವಿಕ ವೈವಿಧ್ಯತೆಯ ಸಂರಕ್ಷಣೆಯ ಕೊರತೆಯೇ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಭಾರತದ ಪ್ರಾದೇಶಿಕ ಕಡಲ ಪರಿಸರ ಸೂಚ್ಯಂಕದಲ್ಲಿ (Regional Marine Trophic Index) ಕಂಡುಬಂದಿರುವ ನಕಾರಾತ್ಮಕ ಬದಲಾವಣೆಯು (-10.27) ಒಂದು ಪ್ರಮುಖ ಮುನ್ಸೂಚನೆಯಾಗಿದೆ. ಭಾರತವು ಸಮುದ್ರದ ಆಹಾರ ಸರಪಳಿಯ ಮೇಲ್ಮಟ್ಟದಲ್ಲಿರುವ ಮೀನುಗಳನ್ನು ಮಿತಿಮೀರಿ ಹಿಡಿದು ಖಾಲಿ ಮಾಡಿದೆ. ಈ ಕಾರಣಕ್ಕಾಗಿ ಈಗ ಆಹಾರ ಸರಪಳಿಯ ಕೆಳಮಟ್ಟದಲ್ಲಿರುವ ಸಣ್ಣ ಮೀನುಗಳನ್ನು ಹೆಚ್ಚಾಗಿ ಹಿಡಿಯಲು ಮುಂದಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಯೇಲ್ ಪರಿಸರ ಕಾನೂನು ಮತ್ತು ನೀತಿ ಕೇಂದ್ರದ EPI ಸಂಶೋಧನಾ ನಿರ್ದೇಶಕ ಜಕಾರಿ ವೆಂಡ್ಲಿಂಗ್ ವಿವರಿಸಿದ್ದಾರೆ.

"ವಿಜ್ಞಾನಿಗಳು ಮತ್ತು ಅರ್ಥಶಾಸ್ತ್ರಜ್ಞರ ಪ್ರಕಾರ ಇದಕ್ಕೆ ಬೇರೆ ಕಾರಣಗಳೂ ಇರಬಹುದು. ಕಡಲ ತೀರದ ಮೀನುಗಾರರು ದೊಡ್ಡ ಮೀನುಗಳು ಸಿಗುತ್ತಿಲ್ಲ ಎಂಬ ಕಾರಣಕ್ಕಷ್ಟೇ ಅಲ್ಲದೆ, ಸಣ್ಣ ಮೀನುಗಳನ್ನು ಹಿಡಿಯುವುದು ಹೆಚ್ಚು ಲಾಭದಾಯಕ ಎಂಬ ಕಾರಣಕ್ಕೂ ತಮ್ಮ ಮೀನುಗಾರಿಕೆಯ ಶೈಲಿಯನ್ನು ಬದಲಾಯಿಸಿರುವ ಸಾಧ್ಯತೆ ಇರುತ್ತದೆ" ಎಂದು ವೆಂಡ್ಲಿಂಗ್ ಅವರು The Wire ಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

ಭಾರತದ ಸ್ಥಿತಿ ಸುಧಾರಿಸುತ್ತಿದೆಯೇ?

ಕಡಿಮೆ ಅಂಕಗಳು ಮತ್ತು ಕೊನೆಯಿಂದ ಎರಡನೇ ಸ್ಥಾನವನ್ನು (176) ಪಡೆದಿದ್ದರೂ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಪ್ರಗತಿಯು ಧನಾತ್ಮಕವಾಗಿ (+7.47) ಉಳಿದಿದೆ. ಇದು ರೊಮೇನಿಯಾ (-0.91) ಮತ್ತು ಡೊಮಿನಿಕನ್ ರಿಪಬ್ಲಿಕ್ (-3.04) ನಂತಹ ಕೆಲವು ಇತರ ದೇಶಗಳಿಗಿಂತ ಉತ್ತಮವಾಗಿದೆ. "ಪ್ರಸ್ತುತ EPI ವಿಧಾನವನ್ನು ಹಳೆಯ ದತ್ತಾಂಶಗಳಿಗೆ ಅನ್ವಯಿಸಿ ನೋಡಿದಾಗ, ಕಾಲಾನಂತರದಲ್ಲಿ ಭಾರತದ ಸಾಧನೆ ಸುಧಾರಿಸಿರುವುದು ಕಂಡುಬರುತ್ತದೆ," ಎಂದು ವೆಂಡ್ಲಿಂಗ್ ಹೇಳಿದ್ದಾರೆ. ಮಾಲಿನ್ಯದ ಪ್ರಮಾಣ ಇನ್ನು ಸಹ ಹೆಚ್ಚಾಗಿಯೇ ಇದ್ದರೂ, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್‌ನಂತಹ ವಾಯು ಮಾಲಿನ್ಯಕಾರಕಗಳ ಹೆಚ್ಚಳದ ವೇಗವು ಈಗ ಕಡಿಮೆಯಾಗಿದೆ ಎಂದು ಅವರು ಹೇಳಿರುವುದಾಗಿ The Wire ಉಲ್ಲೇಖಿಸಿದೆ.

"ಕಾರ್ಬನ್ ಡೈಆಕ್ಸೈಡ್ ಮತ್ತು ಕೆಲವು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಇನ್ನೂ ಹೆಚ್ಚಾಗಿಯೇ ಇದೆ ಮತ್ತು ಅದು ಬೆಳೆಯುತ್ತಲೇ ಇದೆ. ಆದರೆ, ಈ ಹಿಂದೆ ಇದ್ದಷ್ಟು ವೇಗವಾಗಿ ಇವು ಹೆಚ್ಚಾಗುತ್ತಿಲ್ಲ" ಎಂದಿದ್ದಾರೆ ಅವರು.

EPI ಸೂಚ್ಯಂಕವನ್ನು ಈ ಹಿಂದೆ ತಿರಸ್ಕರಿಸಿತ್ತು ಭಾರತ ಸರ್ಕಾರ

2022ರ EPI ಸೂಚ್ಯಂಕದಲ್ಲಿ ಭಾರತಕ್ಕೆ ಅತ್ಯಂತ ಕೊನೆಯ ಸ್ಥಾನ (180) ನೀಡಿದಾಗ, ಕೇಂದ್ರ ಪರಿಸರ ಸಚಿವಾಲಯವು ಎರಡು ದಿನಗಳ ನಂತರ ಪತ್ರಿಕಾ ಪ್ರಕಟಣೆ ಹೊರಡಿಸಿ ಈ ವರದಿಯ ವಿಶ್ಲೇಷಣೆ ಮತ್ತು ತೀರ್ಮಾನಗಳನ್ನು "ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿತ್ತು. ಸಂಶೋಧನಾ ವಿಧಾನದಲ್ಲಿ ಮಾಡಲಾದ ಬದಲಾವಣೆಗಳನ್ನು ಪ್ರಶ್ನಿಸಿದ್ದ ಸರ್ಕಾರ, ಈ ಸೂಚ್ಯಂಕವು ಕೇವಲ "ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು" ಆಧರಿಸಿದೆ ಎಂದು ಆರೋಪಿಸಿತ್ತು.

ಕಡಿಮೆ ಹೊರಸೂಸುವಿಕೆಗೆ ಸಂಬಂಧಿಸಿದ ಭಾರತದ ಹಳೆಯ ದತ್ತಾಂಶಗಳನ್ನು ಈ ಸೂಚ್ಯಂಕ ಪರಿಗಣಿಸಿಲ್ಲ ಮತ್ತು ಕೆಲವು ಪರಿಸರ ಸೂಚಕಗಳ ಪ್ರಾಮುಖ್ಯತೆಯನ್ನು ಬದಲಾಯಿಸಲಾಗಿದೆ ಎಂದು ಸರ್ಕಾರವು ವರದಿಯ ವಿಧಾನದ ಬಗ್ಗೆ ಹಲವು ಆಕ್ಷೇಪಗಳನ್ನು ಎತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ EPIನ ಮುಖ್ಯ ವಿಜ್ಞಾನಿ, "EPI ಸೂಚ್ಯಂಕವು ಯಾವಾಗಲೂ ದೇಶಗಳ ಪ್ರಸ್ತುತ ಪರಿಸರ ಸ್ಥಿತಿಯನ್ನು ಆಧರಿಸಿ ಶ್ರೇಯಾಂಕ ನೀಡುತ್ತದೆಯೇ ಹೊರತು, ಹಳೆಯ ಇತಿಹಾಸ ಅಥವಾ ನೀತಿಗಳ ಉದ್ದೇಶದ ಮೇಲಲ್ಲ" ಎಂದು ಸ್ಪಷ್ಟಪಡಿಸಿದ್ದರು. ಮುಂಬರುವ ವರ್ಷಗಳಲ್ಲಿ ತನ್ನ ವಿಶ್ಲೇಷಣೆಯನ್ನು ಇನ್ನಷ್ಟು ಸುಧಾರಿಸಲು ಭಾರತ ಸರ್ಕಾರದ ಪರಿಸರ ಸಚಿವಾಲಯದೊಂದಿಗೆ ಒಟ್ಟಾಗಿ ಕೆಲಸ ಮಾಡಲು EPI ಸಿದ್ಧವಿದೆ ಎಂದಿದ್ದರು.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News