ಸಿನಿಮಾಗಳ ಮೇಲೆ ಸದ್ದಿಲ್ಲದ ನಿಯಂತ್ರಣ: ಪ್ರೊಪಗಂಡಾ ಚಿತ್ರಗಳ ಹಿಂದೆ ಇರುವುದು ಯಾರ ಪ್ರಭಾವ?
ಪ್ರತೀಕ್ ಗೋಯಲ್ - newslaundry.com
Photo Credit : newslaundry.com
ಸಂಜಯ್ ದತ್ ಅವರ ಸೋಶಿಯಲ್ ಮೀಡಿಯಾ ನೋಡಿದರೆ ಅದೊಂದು ಕೇಸರಿ ಸ್ಕ್ರಾಪ್‌ಬುಕ್‌ನಂತೆ ಕಾಣುತ್ತದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಜೊತೆಗಿನ ಫೋಟೋ, ಮೋದಿ ಅವರಿಗೆ ಹುಟ್ಟುಹಬ್ಬದ ಶುಭಕೋರಿಕೆ... ಅವರ ಹೊಸ ಸಿನಿಮಾ ಆರೆಸ್ಸೆಸ್ ನ ನೂರನೇ ವರ್ಷದ ಸಂಭ್ರಮವನ್ನು ಬಿಂಬಿಸುತ್ತದೆ. ಸಿನಿಮಾದಲ್ಲಿ ಅವರ ಪಾತ್ರ, “ಸ್ವಯಂಸೇವಕನ ಹೃದಯದಲ್ಲಿ ಶಂಕೆ ಇರುವುದಿಲ್ಲ, ಶಂಕರ ಇರುತ್ತಾನೆ” ಎಂದು ಆರೆಸ್ಸೆಸ್ ಮೇಲಿನ ತನ್ನ ನಂಬಿಕೆಯನ್ನು ಸಾರುತ್ತದೆ. ಹೀಗೆ ರೀಲ್ ಮತ್ತು ರಿಯಲ್ ಲೈಫ್ ಎರಡರಲ್ಲೂ ಸಂಜಯ್ ದತ್ ಕೇಸರಿ ಬಣ್ಣಕ್ಕೆ ಚೆನ್ನಾಗಿ ಒಗ್ಗಿಕೊಳ್ಳುತ್ತಿದ್ದಾರೆ.
ಸಂಜಯ್ ದತ್ ಅವರ ತಂದೆ ಐದು ಬಾರಿ ಕಾಂಗ್ರೆಸ್ ಸಂಸದರಾಗಿದ್ದವರು ಮತ್ತು ಕೋಮು ಸೌಹಾರ್ದತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅವರ ಸಹೋದರಿಯೂ ಕಾಂಗ್ರೆಸ್ ಸಂಸದೆಯಾಗಿದ್ದರು. ಸ್ವತಃ ಸಂಜಯ್ ದತ್ ಕೂಡ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ತಮ್ಮ ತಾಯಿ ಮುಸ್ಲಿಂ ಎಂಬ ಕಾರಣಕ್ಕೆ ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದರು ಎಂದು ಅವರು ಒಮ್ಮೆ ಸಾರ್ವಜನಿಕ ರ‍್ಯಾಲಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ದಾವೂದ್ ಇಬ್ರಾಹಿಂ ಜಾಲದ ಮೂಲಕ ತಮ್ಮ ಕೈ ಸೇರಿದ AK-56 ರೈಫಲ್, ಹ್ಯಾಂಡ್ ಗ್ರೆನೇಡ್‌ಗಳು ಮತ್ತು 9 ಎಂಎಂ ಪಿಸ್ತೂಲ್ ಹೊಂದಿದ್ದಕ್ಕಾಗಿ ಅವರು ಶಿಕ್ಷೆಗೂ ಗುರಿಯಾಗಿದ್ದರು.
ಅಂದಹಾಗೆ ಸಂಜಯ್ ದತ್ ಅವರೇ ಕೇಸರಿ ಮಯವಾಗಬಹುದು ಎಂದಾದರೆ, ಯಾರು ಬೇಕಾದರೂ ಬದಲಾಗಬಹುದು. ಪ್ರಸ್ತುತ ಬಾಲಿವುಡ್‌ನಲ್ಲಿ ಏನಾಗುತ್ತಿದೆ ಎಂಬುದಕ್ಕೆ ಅವರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಹೀಗಾಗಿರುವುದು ಅವರೊಬ್ಬರೇ ಅಲ್ಲ. ಅವರ ಹತ್ತಿರದವರೂ ಯಾರೂ ಬಾಕಿ ಉಳಿದಿಲ್ಲ.
ಕಳೆದ ವರ್ಷ ಮೋದಿಯವರ 75ನೇ ಜನ್ಮದಿನದಂದು, ಐದು ವರ್ಷಗಳ ಹಿಂದಿನ ಅವರ 70ನೇ ಜನ್ಮದಿನದಂತೆಯೇ, ಬಾಲಿವುಡ್‌ನ ಮೂವರು ಖಾನ್‌ಗಳು ಮತ್ತು ಹಲವು ಪ್ರಮುಖ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಗುಣಗಾನ ಮಾಡಿದರು. ಶಾರುಖ್, ಸಲ್ಮಾನ್ ಮತ್ತು ಅಮೀರ್, ಹಾಂ ಅದೇ ಅಮೀರ್ ಖಾನ್, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರಶ್ನಿಸಿದ್ದಕ್ಕಾಗಿ ಒಮ್ಮೆ "ಪಾಕಿಸ್ತಾನಕ್ಕೆ ಹೋಗಿ" ಎಂದು ಯಾರಿಗೆ ಹೇಳಲಾಗಿತ್ತೋ ಅವರೂ ಸಹ ಈ ಪಟ್ಟಿಯಲ್ಲಿದ್ದಾರೆ. ಇವರ ಶುಭಾಶಯಗಳನ್ನು ದೂರದರ್ಶನ, MyGov India ಮತ್ತು ಆಲ್ ಇಂಡಿಯಾ ರೇಡಿಯೋಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. 26/11ರ ದಾಳಿಯ ಮೂರು ವರ್ಷಗಳ ನಂತರ ಐಐಎಫ್‌ಎ (IIFA) ಪ್ರಶಸ್ತಿ ಸಮಾರಂಭವನ್ನು ಒಮ್ಮೆ ಪಾಕಿಸ್ತಾನದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದ್ದ ಅರ್ಜುನ್ ರಾಂಪಾಲ್, ಈಗ ‘ಧುರಂಧರ್’ ಸಿನಿಮಾದಲ್ಲಿ ನಟಿಸಿದ್ದು "ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಂಡಂತೆ" ಅನಿಸಿತು ಎಂದು ಹೇಳುತ್ತಿದ್ದಾರೆ.
ಬಾಲಿವುಡ್‌ಗೆ ಏನೋ ಆಗಿದೆ. ಭಾರತಕ್ಕೆ ‘ಗರ್ಮ್ ಹವಾ’, ‘ಅರ್ಧ್ ಸತ್ಯ’ ಮತ್ತು ‘ರಂಗ್ ದೇ ಬಸಂತಿ’ಯಂತಹ ಸಿನಿಮಾಗಳನ್ನು ನೀಡಿದ ಚಿತ್ರರಂಗವು ಈಗ ಯೋಜಿತವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದೆ. ಜೊತೆಗೆ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’, ‘ದಿ ಸಾಬರಮತಿ ರಿಪೋರ್ಟ್’ನಂತಹ ಸಿನಿಮಾಗಳ ಸರಣಿಯನ್ನೇ ಸೃಷ್ಟಿಸುತ್ತಿದೆ. ಇವುಗಳ ರಾಜಕೀಯ ಸಿದ್ಧಾಂತಕ್ಕೂ ಬಿಜೆಪಿಯ ಚುನಾವಣಾ ಪ್ರಚಾರದ ಸಾಮಗ್ರಿ ಪ್ರಚಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ.
ಹತ್ತಿರದಿಂದ ಗಮನಿಸಿದರೆ, ವಿಶ್ವದ ಅತ್ಯಂತ ಪ್ರಭಾವಶಾಲಿ ಸಾಂಸ್ಕೃತಿಕ ರಂಗಗಳಲ್ಲಿ ಒಂದಾದ ಬಾಲಿವುಡ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ನಡೆದ ನಿರಂತರ ಪ್ರಯತ್ನದ ಫಲವೇ ಇದು ಎಂಬುದು ಒಂದು ವಿಶ್ಲೇಷಣೆಯಿಂದ ತಿಳಿಯುತ್ತದೆ. ಈ ಸಭೆಗಳು 2018 ರಲ್ಲಿ ಪ್ರಾರಂಭವಾದವು. ನಂತರ ಸಿನಿಮಾಗಳು ಬರತೊಡಗಿದವು. ಪ್ರತಿ ಹಂತದಲ್ಲೂ ಕೆಲವು ನಿರ್ದಿಷ್ಟ ಹೆಸರುಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ.
ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಕರಿರುವ ಚಲನಚಿತ್ರರಂಗವು ಕಳೆದ ಕೆಲವು ವರ್ಷಗಳಲ್ಲಿ ರಾಜಕೀಯವಾಗಿ ಹೇಗೆ ಸಂಪೂರ್ಣವಾಗಿ ಶರಣಾಯಿತು ಎಂಬುದನ್ನು ಪತ್ತೆಹಚ್ಚುವ 'ನ್ಯೂಸ್‌ಲಾಂಡ್ರಿ'ಯ ಮೂರು ಭಾಗಗಳ ಸರಣಿಯ ಮೊದಲ ಕಂತು ಇದು. ಎರಡನೇ ಭಾಗವು ಈ ಬದಲಾವಣೆಯನ್ನು ಮುನ್ನಡೆಸುತ್ತಿರುವ ಶಕ್ತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಕೊನೆಯ ಭಾಗವು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಜಾಲವನ್ನು ಪರಿಶೀಲಿಸುತ್ತದೆ.
►ಸಭೆಗಳಿಂದ ಶುರು
ಇದೆಲ್ಲವೂ ಆರಂಭವಾಗುವುದು ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಅವಕಾಶದಿಂದ.
18 ಡಿಸೆಂಬರ್ 2018 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ರಾಜ್ ಭವನದ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ಸಭೆ ನಡೆಸಿದ್ದರು. ಅವರ ಪಕ್ಕದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇದ್ದರು. ಅವರ ಎದುರು ಹಿಂದಿ ಚಿತ್ರರಂಗದ ಪ್ರಮುಖ ತಾರೆಯರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್, ಪ್ರಸೂನ್ ಜೋಶಿ, ಭೂಷಣ್ ಕುಮಾರ್, ಸಾಜಿದ್ ನಾಡಿಯಾಡ್ವಾಲಾ, ರೋನಿ ಸ್ಕ್ರೂವಾಲಾ, ನಿತೇಶ್ ತಿವಾರಿ ಮುಂತಾದವರು ಕುಳಿತಿದ್ದರು.
ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಮೋದಿಯವರ "ಕಣ್ಣು ಮತ್ತು ಕಿವಿ" ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಪ್ರಧಾನಿ ಕಚೇರಿಯ (PMO) ಜಂಟಿ ಕಾರ್ಯದರ್ಶಿ ಹಿರೇನ್ ಜೋಶಿ ಕೂಡ ಅಲ್ಲಿ ಉಪಸ್ಥಿತರಿದ್ದರು. ಟಿವಿ, ಡಿಜಿಟಲ್ ವೇದಿಕೆಗಳು ಮತ್ತು ಸುದ್ದಿ ಸಂಸ್ಥೆಗಳಲ್ಲಿ ಸರ್ಕಾರದ ಪರವಾದ ಸಂದೇಶಗಳನ್ನು ರೂಪಿಸುವಲ್ಲಿ ಇವರ ಪಾತ್ರ ದೊಡ್ಡದಾಗಿತ್ತು ಎಂದು ನಂಬಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಾಲಿವುಡ್‌ನ ಈ ಪ್ರಮುಖ ಸಭೆಯಲ್ಲಿ ಅವರ ಉಪಸ್ಥಿತಿಯು ಗಮನ ಸೆಳೆದಿದ್ದರೂ, ಅದಕ್ಕೆ ನಿಖರ ಕಾರಣ ಮಾತ್ರ ಬಹಿರಂಗವಾಗಿರಲಿಲ್ಲ.
ಸಾರ್ವಜನಿಕರಿಗೆ ಹೆಚ್ಚಾಗಿ ತಿಳಿಯದ ಇಬ್ಬರು ವ್ಯಕ್ತಿಗಳ ಉಪಸ್ಥಿತಿ ಅಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತ್ತು. ಅವರಲ್ಲಿ ಒಬ್ಬರು ಹಿತೇಶ್ ಜೈನ್ ಎಂಬ ವಕೀಲರು, ಮತ್ತೊಬ್ಬರು ಮಹಾವೀರ್ ಜೈನ್ ಎಂಬ ನಿರ್ಮಾಪಕರು. ಆ ಸಭೆಯಲ್ಲಿರಲು ಇವರಿಬ್ಬರಿಗೂ ಯಾವುದೇ ಪ್ರಮುಖ ಕಾರಣಗಳಿರಲಿಲ್ಲ.
ಇದಕ್ಕೂ ಕೆಲವು ತಿಂಗಳುಗಳ ಹಿಂದೆ ದಿಲ್ಲಿಯಲ್ಲಿ ನಡೆದಿದ್ದ ಸಣ್ಣ ಮಟ್ಟದ ಸಭೆಯೊಂದರಲ್ಲೂ ಮಹಾವೀರ್ ಜೈನ್ ಭಾಗವಹಿಸಿದ್ದರು. ಅಮೀರ್ ಖಾನ್, ರಾಜ್‌ಕುಮಾರ್ ಹಿರಾನಿ, ರಿತೇಶ್ ಸಿಧ್ವಾನಿ ಮುಂತಾದವರು ಇದ್ದ ಆ ಸಭೆಯಲ್ಲಿದ್ದ ಮತ್ತೊಬ್ಬ ಅತಿಥಿ ಮೌಲಿಕ್ ಭಗತ್. ಇವರು ಗುಜರಾತ್‌ನ ಬಿಜೆಪಿ ನಾಯಕರೊಬ್ಬರ ಮಗ ಹಾಗೂ ದೀರ್ಘಕಾಲದಿಂದ ಮೋದಿಯವರ ಆಪ್ತರಾಗಿದ್ದಾರೆ.
ನಂತರ 10 ಜನವರಿ 2019 ರಂದು, ಖಾಸಗಿ ವಿಮಾನವೊಂದು ಬಾಲಿವುಡ್‌ನ ಯುವ ತಾರೆಯರ ದಂಡನ್ನು ದಿಲ್ಲಿಗೆ ಕರೆದೊಯ್ಯಿತು. ಅದರಲ್ಲಿ ರಣಬೀರ್ ಕಪೂರ್, ರಣವೀರ್ ಸಿಂಗ್, ಆಲಿಯಾ ಭಟ್, ವಿಕ್ಕಿ ಕೌಶಲ್, ವರುಣ್ ಧವನ್, ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ರಾಜ್‌ಕುಮಾರ್ ರಾವ್, ಸಿದ್ಧಾರ್ಥ್ ಮಲ್ಹೋತ್ರಾ, ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ರೋಹಿತ್ ಶೆಟ್ಟಿ ಇದ್ದರು. ಮಹಾವೀರ್ ಜೈನ್ ಮತ್ತು ಹಿತೇಶ್ ಜೈನ್ ಕೂಡ ಇವರ ಜೊತೆಯಲ್ಲಿದ್ದರು. ಚಲನಚಿತ್ರ ರಂಗವು ದೇಶದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬಿಡುಗಡೆಯಾಗುವ ಕೇವಲ ಒಂದು ದಿನದ ಮುಂಚೆ ಈ ಸಭೆ ನಡೆದಿತ್ತು.
ಆ ಸಭೆಯ ನಂತರ ತೆಗೆದುಕೊಂಡ ಗ್ರೂಪ್ ಸೆಲ್ಫಿ, ಆ ವರ್ಷದ "ಅತ್ಯುತ್ತಮ ಸೆಲ್ಫಿ" ಎಂದು ಪ್ರಸಿದ್ಧಿಯಾಯಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರೋಹಿತ್ ಶೆಟ್ಟಿ ತಮ್ಮ ಪೋಸ್ಟ್‌ಗೆ "ಪ್ರಧಾನ ಮಂತ್ರಿಯವರ ಪಡೆ" ಎಂದು ಶೀರ್ಷಿಕೆ ನೀಡಿದ್ದರು. ರಣವೀರ್ ಸಿಂಗ್ "ಜಾದೂ ಕಿ ಜಪ್ಪಿ" ಎಂದು ಬರೆದುಕೊಂಡಿದ್ದರು. ವಿಕ್ಕಿ ಕೌಶಲ್ ಆ ಸಭೆಯ ಫೋಟೋಗಳ ಜೊತೆಗೆ ‘ಉರಿ’ ಸಿನಿಮಾವನ್ನು ಪ್ರಚಾರ ಮಾಡುವ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಅದೇ ದಿನ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆ ವಿಡಿಯೊವನ್ನು ಟ್ವೀಟ್ ಮಾಡಿ, "ಚಿತ್ರನಟರು ಈ ಹಿಂದೆ ಎಂದಾದರೂ ಹೀಗೆ ‘ಜೈ ಹಿಂದ್’ ಎಂದು ಘೋಷಣೆ ಕೂಗಿದ್ದನ್ನು ನಾವು ಕೇಳಿದ್ದೇವೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ಬದಲಾಗಿರುವುದು ಇದೇ!" ಎಂದು ಬರೆದುಕೊಂಡಿದ್ದರು.
ಸಭೆ ನಡೆದ ಒಂಬತ್ತು ದಿನಗಳ ನಂತರ, ಜನವರಿ 19 ರಂದು ಮೋದಿ ಅವರು ಮುಂಬೈನಲ್ಲಿ ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು. ಅವರು ತಮ್ಮ ಭಾಷಣವನ್ನು ‘ಉರಿ’ ಸಿನಿಮಾದ ಪ್ರಸಿದ್ದ ಡೈಲಾಗ್ "ಹೌ ಈಸ್ ದ ಜೋಶ್?" ಎನ್ನುವ ಮೂಲಕ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಕಥೆಗಳನ್ನು ಸೃಷ್ಟಿಸುವಂತೆ ಅವರು ಚಿತ್ರರಂಗಕ್ಕೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲೂ ಜೈನ್ ಜೋಡಿ ಉಪಸ್ಥಿತರಾಗಿದ್ದರು.
2019 ಮಾರ್ಚ್ ತಿಂಗಳು, ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದ್ದಾಗ ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಲವು ಹಿಂದಿ ನಟರನ್ನು ಟ್ಯಾಗ್ ಮಾಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.
ಕೆಲವು ತಿಂಗಳುಗಳ ನಂತರ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದಾಗ, ಅಕ್ಷಯ್ ಕುಮಾರ್ ಅವರು ಮೋದಿಯವರ ಸಂದರ್ಶನ ಮಾಡಿದರು. ಅದೇನೂ ರಾಜಕೀಯ ಸಂದರ್ಶನ ಆಗಿರಲಿಲ್ಲ. ಇದೇ ಅವಧಿಯಲ್ಲಿ ಗೀತರಚನೆಕಾರ ಮತ್ತು ಬರಹಗಾರ ಮನೋಜ್ ಮುಂತಾಶಿರ್ ಶುಕ್ಲಾ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸುವ ಹಾಡೊಂದನ್ನು ಬಿಡುಗಡೆ ಮಾಡಿ, ಟ್ವಿಟರ್‌ನಲ್ಲಿ ಮಹಾವೀರ್ ಜೈನ್ ಸೇರಿದಂತೆ ಇತರರನ್ನು ಟ್ಯಾಗ್ ಮಾಡಿದರು.
ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು.
2019 ಅಕ್ಟೋಬರ್ ನಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ, ಮೋದಿ ಅವರು Change Within ಉಪಕ್ರಮಕ್ಕಾಗಿ ಚಿತ್ರರಂಗದ ಪ್ರಮುಖರನ್ನು ತಮ್ಮ ದೆಹಲಿಯ ನಿವಾಸಕ್ಕೆ ಆಹ್ವಾನಿಸಿದ್ದರು. ಗಾಂಧೀಜಿಯವರ ಬೋಧನೆಗಳನ್ನು ಒಳಗೊಂಡ ಕಿರುಚಿತ್ರವೊಂದನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದರು. ಅದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಆಲಿಯಾ ಭಟ್, ಕಂಗನಾ ರಣಾವತ್ ಸೇರಿದಂತೆ ಹಲವರು ನಟಿಸಿದ್ದರು. ಈ ಕಿರುಚಿತ್ರದ ಕೊನೆಯಲ್ಲಿ ಮಹಾವೀರ್ ಜೈನ್ ಮತ್ತು ಮೌಲಿಕ್ ಭಗತ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಗಿತ್ತು. ವಕೀಲ ಹಿತೇಶ್ ಜೈನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಮಹಾವೀರ್ ಜೈನ್ ಅವರೇ ಖುದ್ದಾಗಿ ಸ್ವಾಗತಿಸಿದ್ದರು.
ಜನವರಿಯಲ್ಲಿ ನಡೆದ ಸಭೆಯಂತೆಯೇ, ಈ ಬಾರಿಯೂ ನಟರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡರು. ಕೆಲವರು ಈ ಉಪಕ್ರಮವನ್ನು ಶ್ಲಾಘಿಸಿದರು. ಪ್ರಧಾನಿ ಕಚೇರಿ ಇದನ್ನು ವ್ಯಾಪಕವಾಗಿ ಪ್ರಚಾರ ಮಾಡಿತು. ಬಿಜೆಪಿ ಮತ್ತು ಮಾಧ್ಯಮಗಳು ಸಹ ಇದಕ್ಕೆ ಸಾಥ್ ನೀಡಿದವು. ಗಾಂಧೀಜಿಯವರ ತತ್ವಗಳು, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯದ ನಂತರದ ಪಯಣದ ಬಗ್ಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವಂತೆ ಪ್ರಧಾನಿ ಅವರು ಚಿತ್ರನಿರ್ಮಾಪಕರಿಗೆ ಕರೆ ನೀಡಿದರು.
ಆದರೆ, ಇದರ ನಂತರ ನಡೆದ ಬೆಳವಣಿಗೆಗಳು ಆ ಕರೆಗೆ ತದ್ವಿರುದ್ಧವಾಗಿದ್ದವು ಮತ್ತು ಅತ್ಯಂತ ವೇಗವಾಗಿ ಮುಂದುವರಿದವು.
2019 ಡಿಸೆಂಬರ್ ತಿಂಗಳಲ್ಲಿ ಬನ್ಸಾಲಿ ಪ್ರೊಡಕ್ಷನ್ಸ್, ಬಾಲಕೋಟ್ ವೈಮಾನಿಕ ದಾಳಿಯ ಆಧಾರಿತ ಸಿನಿಮಾವನ್ನು ಘೋಷಿಸಿತು. ಪ್ರಧಾನಿ ಕಚೇರಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಮಾಡಿದ ಟ್ವೀಟ್‌ನಲ್ಲಿ, ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಮಹಾವೀರ್ ಜೈನ್ ಮತ್ತು ಪ್ರಗ್ಯಾ ಕಪೂರ್ ಅವರು ಜೊತೆಯಾಗಿ ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಲಾಯಿತು. ಈ ಸಿನಿಮಾ ಭಾರತದ ವೀರ ಯೋಧರ ಮತ್ತು ಅವರ ಶೌರ್ಯಕ್ಕೆ ಸಲ್ಲಿಸುವ ಗೌರವ ಎಂದು ಅದರಲ್ಲಿ ಹೇಳಲಾಗಿತ್ತು.
2020 ಫೆಬ್ರವರಿಯಲ್ಲಿ ಏಕ್ತಾ ಕಪೂರ್ ಮತ್ತು ಕರಣ್ ಜೋಹರ್ ‘ಸಿಯಾಚಿನ್ ವಾರಿಯರ್ಸ್’ ಸಿನಿಮಾವನ್ನು ಘೋಷಿಸಿದರು. ಮಹಾವೀರ್ ಜೈನ್, ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಭಾರತೀಯ ಸೈನಿಕರ ಶೌರ್ಯವನ್ನು ಕೊಂಡಾಡುವ ನೈಜ ಘಟನೆಯಾಧಾರಿತ ಚಿತ್ರ ಇದಾಗಿದೆ ಎಂದು ಏಕ್ತಾ ಕಪೂರ್ ಬಣ್ಣಿಸಿದ್ದರು.
2020ರ ಗಾಂಧಿ ಜಯಂತಿಯ ವೇಳೆಗೆ, ಕರಣ್ ಜೋಹರ್ ಅವರು ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದರು. ಅದರಲ್ಲಿ ರಾಜ್‌ಕುಮಾರ್ ಹಿರಾನಿ, ಏಕ್ತಾ ಕಪೂರ್, ಸಾಜಿದ್ ನಾಡಿಯಾಡ್ವಾಲಾ, ರೋಹಿತ್ ಶೆಟ್ಟಿ, ದಿನೇಶ್ ವಿಜನ್ ಮತ್ತು ಆನಂದ್ ಎಲ್ ರಾಯ್ ಅವರನ್ನು ಟ್ಯಾಗ್ ಮಾಡಲಾಗಿತ್ತು. ‘ಚೇಂಜ್ ವಿದಿನ್’ ಉಪಕ್ರಮದ ಅಡಿಯಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ಕಥೆಗಳನ್ನು ಸಿದ್ಧಪಡಿಸುತ್ತಿರುವುದು ತಮಗೆ ಸಂದ ಗೌರವ ಎಂದು ಅವರು ಬರೆದಿದ್ದರು. ಇದು ಭಾರತದ ಶೌರ್ಯ, ಮೌಲ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಚಿತ್ರರಂಗ ಮಾಡುತ್ತಿರುವ ಪ್ರಯತ್ನ ಎಂದು ಅವರು ವಿವರಿಸಿದ್ದರು.
2020 ಡಿಸೆಂಬರ್ ನಲ್ಲಿ ಕರಣ್ ಜೋಹರ್ ಅವರು ಮತ್ತೊಮ್ಮೆ ಪ್ರಧಾನಿಯವರನ್ನು ಟ್ಯಾಗ್ ಮಾಡಿ, ಭಾರತದ ಸ್ವಾತಂತ್ರ್ಯ ಚಳವಳಿಯ ಕುರಿತು ಏಳು ಭಾಗಗಳ ಸರಣಿಯನ್ನು ತಯಾರಿಸಲು ರಾಜ್‌ಕುಮಾರ್ ಸಂತೋಷಿ, ದಿನೇಶ್ ವಿಜನ್ ಮತ್ತು ಮಹಾವೀರ್ ಜೈನ್ ಒಂದಾಗುತ್ತಿದ್ದಾರೆ ಎಂದು ಪ್ರಕಟಿಸಿದರು. ದಿನೇಶ್ ವಿಜನ್ ಒಡೆತನದ ಮ್ಯಾಡಾಕ್ ಫಿಲ್ಮ್ಸ್ ಕೂಡ ಮೋದಿಯವರನ್ನು ಟ್ಯಾಗ್ ಮಾಡಿ ಈ ವಿಷಯವನ್ನು ಖಚಿತಪಡಿಸಿತು.
ಈ ಪ್ರತಿಯೊಂದು ಪ್ರಮುಖ ಘೋಷಣೆಗಳಲ್ಲೂ ಒಂದು ಹೆಸರು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿತ್ತು: ಅದು ಮಹಾವೀರ್ ಜೈನ್. ಆರಂಭದಲ್ಲಿ ರಾಮ್ ಸೇತು, ಊಂಚಾಯಿ ಮತ್ತು ಖಾನ್‌ದಾನಿ ಶಫಾಖಾನಾ ಸಿನಿಮಾಗಳೊಂದಿಗೆ ಗುರುತಿಸಿಕೊಂಡಿದ್ದ ಈ ನಿರ್ಮಾಪಕ ಯಾರು? ಇಂತಹ ದೊಡ್ಡ ದೊಡ್ಡ ಸಭೆಗಳಲ್ಲಿ ಅವರು ಏನು ಮಾಡುತ್ತಿದ್ದರು? ಎಂಬುದು ಈ ಸರಣಿಯ 2ನೇ ಭಾಗದಲ್ಲಿದೆ.
ಸಿನಿಮಾಗಳು ಏನು ಹೇಳುತ್ತವೆ?
ಬಿಡುಗಡೆಯಾದ ಹಲವು ಚಲನಚಿತ್ರಗಳ ಶೀರ್ಷಿಕೆಗಳಲ್ಲಿ ಒಂದು ನಿರ್ದಿಷ್ಟ ಮಾದರಿ ಇತ್ತು. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’, ‘ದಿ ಸಾಬರಮತಿ ರಿಪೋರ್ಟ್’, ‘ಆರ್ಟಿಕಲ್ 370’, ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’, ’72 ಹೂರೇನ್’, ‘ಧುರಂಧರ್’, ‘ವ್ಯಾಕ್ಸಿನ್ ವಾರ್’, ‘ತೇಜಸ್’—ಇವುಗಳಲ್ಲಿ ಪ್ರತಿಯೊಂದು ಚಿತ್ರವೂ ಸರ್ಕಾರದ ಸಂದೇಶಗಳಿಗೆ ತಕ್ಕಂತೆ ಹೊಂದಿಕೊಂಡ ಕಥಾಹಂದರವನ್ನು ಹೊಂದಿದ್ದವು. ಆದರೆ ಈ ಸಿದ್ಧಾಂತದ ಪ್ರಭಾವವು ಕೇವಲ ರಾಜಕೀಯ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿರದೆ, ಇನ್ನುಳಿದ ಕ್ಷೇತ್ರಗಳಿಗೂ ವ್ಯಾಪಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಇಂತಹ ಹಲವು ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಗಾಂಧಿ ಗೋಡ್ಸೆ – ಏಕ್ ಯುದ್ಧ್’ ಸಿನಿಮಾವು, ಗಾಂಧೀಜಿಯವರು ಹತ್ಯೆಯಿಂದ ಬದುಕುಳಿದು ಜೈಲಿನಲ್ಲಿ ನಾಥೂರಾಮ್ ಗೋಡ್ಸೆ ಜೊತೆ ಚರ್ಚೆ ನಡೆಸುವ ಕಾಲ್ಪನಿಕ ಕಥೆಯನ್ನು ಹೊಂದಿದೆ. ಚಿತ್ರದ ಒಂದು ಸಂಭಾಷಣೆ ಹೀಗಿದೆ: “ನಮ್ಮ ಹಿಂದೂ ಸಹೋದರರನ್ನು ಕೊಂದ ಪಾಕಿಸ್ತಾನಿಗಳ ಮುಂದೆ ಗಾಂಧಿ ನಮ್ಮನ್ನು ಮಂಡಿಯೂರುವಂತೆ ಮಾಡಿದರು.” ಗೋಡ್ಸೆ ಪಾತ್ರಧಾರಿ ಅಖಂಡ ಭಾರತದ ನಕ್ಷೆಯನ್ನು ತೋರಿಸುತ್ತಾ, “ಇದು ನಮ್ಮ ಹಿಂದೂ ರಾಷ್ಟ್ರ, ಒಂದು ದಿನ ಇಲ್ಲಿ ಭಗವಾ ಧ್ವಜ ಹಾರಾಡಲಿದೆ” ಎಂದು ಘೋಷಿಸುತ್ತಾನೆ.
‘ದಿ ಕೇರಳ ಸ್ಟೋರಿ’ ಸಿನಿಮಾವು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮತಾಂತರ ಮಾಡಲು ಸಂಚು ರೂಪಿಸುತ್ತಾರೆ ಎಂಬ “ಲವ್ ಜಿಹಾದ್” ಕಥಾಹಂದರವನ್ನು ಮುನ್ನೆಲೆಗೆ ತಂದಿತು. ಇದರ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ನಂತರ ಥೈಲ್ಯಾಂಡ್‌ನಲ್ಲಿ ನಡೆದ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಿ, "ಆರೆಸ್ಸೆಸ್ ನ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದಿದ್ದರೆ ನಮಗೆ ಈ ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದ್ದರು.
ಆರೆಸ್ಸೆಸ್ ನ ಚಲನಚಿತ್ರ ವಿಭಾಗವಾದ ‘ಭಾರತೀಯ ಚಿತ್ರ ಸಾಧನಾ’ ಈ ಚಿತ್ರದ ಪರಿಕಲ್ಪನೆ ಮತ್ತು ನಿರ್ಮಾಣಕ್ಕೆ ಬೆಂಬಲ ನೀಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ‘ಸಾಮ್ರಾಟ್ ಪೃಥ್ವಿರಾಜ್’, ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಗಳಿಗೂ ಇದು ಬೆಂಬಲ ನೀಡಿದೆ ಎನ್ನಲಾಗಿದೆ.
‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವು 2002 ರ ಗೋದ್ರಾ ರೈಲು ದುರಂತವನ್ನು ಮುಂಚಿತವಾಗಿಯೇ ಯೋಜಿಸಿದ ಸಂಚು ಎಂಬಂತೆ ಬಿಂಬಿಸಿದೆ. ಆಗ ಮೋದಿಯವರ ನೇತೃತ್ವದಲ್ಲಿದ್ದ ಗುಜರಾತ್ ಸರ್ಕಾರ ನೇಮಿಸಿದ್ದ ನಾನಾವತಿ-ಮೆಹ್ತಾ ಆಯೋಗವು ಇದೇ ಸಿದ್ಧಾಂತವನ್ನು ಮಂಡಿಸಿತ್ತು. ಅಷ್ಟೇ ಅಲ್ಲದೆ, ನಂತರ ನಡೆದ ಗಲಭೆಗಳ ವಿಷಯದಲ್ಲಿ ಮೋದಿ ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿತ್ತು. ರೈಲ್ವೆ ಸಚಿವಾಲಯ ನೇಮಿಸಿದ್ದ ಯು.ಸಿ. ಬ್ಯಾನರ್ಜಿ ಆಯೋಗವು ಈ ಬೆಂಕಿ ಅಪಘಾತದಿಂದ ಸಂಭವಿಸಿದ್ದು ಎಂದು ಪತ್ತೆಹಚ್ಚಿತ್ತಾದರೂ, ಗುಜರಾತ್ ಹೈಕೋರ್ಟ್ ಆ ವರದಿಯನ್ನು ವಜಾಗೊಳಿಸಿತ್ತು. ಗಲಭೆಯ ಸಂದರ್ಭದಲ್ಲಿ ಗುಜರಾತ್‌ನಿಂದ ವರದಿ ಮಾಡಿದ ಪತ್ರಕರ್ತರನ್ನು ಈ ಸಿನಿಮಾ ನಕಾರಾತ್ಮಕವಾಗಿ ತೋರಿಸಿದೆ. ಪ್ರಧಾನಿ ಮೋದಿ ಅವರು “ಸತ್ಯ ಹೊರಬರುತ್ತಿದೆ” ಎಂದು ಈ ಚಿತ್ರವನ್ನು ಬಹಿರಂಗವಾಗಿ ಶ್ಲಾಘಿಸಿದ್ದರು. ಸಂಸತ್ತಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಬಿಜೆಪಿ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇದರ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿದ್ದವು. ಈ ಸಿನಿಮಾ 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮುಂಚೆ ಬಿಡುಗಡೆಯಾಗಿತ್ತು. ನಂತರ ಏಕ್ತಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರಿಗೆ ಧನ್ಯವಾದ ತಿಳಿಸುತ್ತಾ, ಅವರ ಮಾತುಗಳು ತಾವು “ಸರಿಯಾದ ಹಾದಿಯಲ್ಲಿದ್ದೇವೆ” ಎಂಬುದನ್ನು ಸಾಬೀತುಪಡಿಸಿವೆ ಎಂದು ಬರೆದುಕೊಂಡಿದ್ದರು.
ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿ ಮುಖ್ಯಸ್ಥ ನಾದವ್ ಲಾಪಿಡ್, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು “ಪ್ರಚಾರದ ಸರಕು” ಮತ್ತು “ಅಸಭ್ಯ” ಎಂದು ಕರೆದಿದ್ದರು. ಆದರೆ ಮೋದಿ ಅವರು ಇದನ್ನು ಹತ್ತಿಕ್ಕಲಾದ ಸತ್ಯವನ್ನು ಹೊರಹಾಕುವ ಪ್ರಮುಖ ಸಿನಿಮಾ ಎಂದು ಬಣ್ಣಿಸಿದ್ದರು ಹಾಗೂ ಇದನ್ನು ವೀಕ್ಷಿಸುವಂತೆ ಬಿಜೆಪಿ ಸಂಸದರಿಗೆ ಕರೆ ನೀಡಿದ್ದರು. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಇದಕ್ಕೆ ತೆರಿಗೆ ವಿನಾಯಿತಿ ನೀಡಿದ್ದವು.
ಅಯಾನ್ ಮುಖರ್ಜಿ ನಿರ್ದೇಶನದ ಮತ್ತು ಧರ್ಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಿಸಿದ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್ – ಶಿವ’ ಸಿನಿಮಾವು, ಹಿಂದೂ ಪುರಾಣವನ್ನು ಮುಖ್ಯವಾಹಿನಿಯ ಬ್ಲಾಕ್‌ಬಸ್ಟರ್ ಸಿನಿಮಾದ ಕೇಂದ್ರ ಬಿಂದುವಾಗಿಸಿತು. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದವು. ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಎಗೇನ್’ ಚಿತ್ರವು ರಾಮಾಯಣದ ಕಥೆಯ ಚೌಕಟ್ಟನ್ನು ಹೊಂದಿದೆ. ಇದರಲ್ಲಿ “ಕಲ್ಲು ತೂರಾಟ ಮಾಡುವುದು ಹಳೆಯ ಪದ್ಧತಿ, ಇದು ನವ ಭಾರತದ ಹೊಸ ಕಾಶ್ಮೀರ” ಎಂಬ ಸಂಭಾಷಣೆ ಇದೆ. ಈ “ನವ ಭಾರತ” ಎಂಬ ಪದಗುಚ್ಛವು ಪ್ರಧಾನಿಯವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದೆ. ಇವೆರಡೂ ಸಿನಿಮಾಗಳು ಸೌಮ್ಯ ಶೈಲಿಯಲ್ಲಿದ್ದರೂ, ಸಿದ್ಧಾಂತದ ಚೌಕಟ್ಟು ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ತೋರಿಸುತ್ತವೆ.
‘ಆರ್ಟಿಕಲ್ 370’, ‘ಸಾಮ್ರಾಟ್ ಪೃಥ್ವಿರಾಜ್’ ಮತ್ತು ‘ಧುರಂಧರ್’ ಸೇರಿದಂತೆ ಇಂತಹ ಹಲವು ಸಿನಿಮಾಗಳಿಗೆ ಬಿಜೆಪಿ ಆಡಳಿತದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ತೆರಿಗೆ ಮುಕ್ತ ಸ್ಥಾನಮಾನ ನೀಡಿವೆ. ಪ್ರಧಾನಮಂತ್ರಿಯವರು ಕೂಡ ಇವುಗಳನ್ನು ಬಹಿರಂಗವಾಗಿ ಶ್ಲಾಘಿಸಿದ್ದಾರೆ ಅಥವಾ ಉತ್ತೇಜಿಸಿದ್ದಾರೆ.
ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ?
ಹನಿ ಟ್ರೆಹಾನ್ ನಿರ್ದೇಶನದ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿದ ‘ಪಂಜಾಬ್ 95’ ಸಿನಿಮಾವು ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನವನ್ನು ಆಧರಿಸಿದೆ. ಖಾಲ್ರಾ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದು, ಪಂಜಾಬ್ ದಂಗೆಯ ದಿನಗಳಲ್ಲಿ ಪಂಜಾಬ್ ಪೊಲೀಸರು ನಡೆಸಿದ್ದಾರೆನ್ನಲಾದ ಸುಮಾರು 25,000 ಕಾನೂನುಬಾಹಿರ ಹತ್ಯೆಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದರು. 1995 ರಲ್ಲಿ ಅಮೃತಸರದ ಅವರ ಮನೆಯಿಂದ ಪೊಲೀಸರು ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಂದಿದ್ದರು. ದಿಲ್ಜಿತ್ ದೋಸಾಂಜ್ ನಟಿಸಿದ್ದ ಈ ಚಿತ್ರವು ಜನವರಿ 2023 ರಲ್ಲಿ ಬಿಡುಗಡೆಯಾಗಬೇಕಿತ್ತು. ನಂತರ ಇದರ ಹೆಸರನ್ನು ‘ಸತ್ಲುಜ್’ ಎಂದು ಬದಲಾಯಿಸಿ, ಅಂತಿಮವಾಗಿ 2026 ಜುಲೈ 3 ರಂದು ‘ZEE5’ ಒಟಿಟಿ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಆದರೆ ಬಿಡುಗಡೆಯಾದ ಎರಡೇ ದಿನಗಳಲ್ಲಿ ಭಾರತೀಯ ವೀಕ್ಷಕರಿಗೆ ಸಿಗದಂತೆ ಈ ಚಿತ್ರವನ್ನು ವೇದಿಕೆಯಿಂದ ತೆಗೆದುಹಾಕಲಾಯಿತು.
ಇದಕ್ಕೂ ಮುನ್ನ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC), 120 ನಿಮಿಷಗಳ ಈ ಚಿತ್ರದಲ್ಲಿ 127 ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಿತ್ತು. ಅಲ್ಲದೆ ‘ಘಲ್ಲುಘಾರಾ’ (ಪಂಜಾಬಿ ಭಾಷೆಯಲ್ಲಿ ಸಾಮೂಹಿಕ ಹತ್ಯೆ ಎಂದರ್ಥ) ಎಂಬ ಶೀರ್ಷಿಕೆಯನ್ನು ಬದಲಾಯಿಸಿತ್ತು. ಈ ಸಿನಿಮಾ ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂದು ಮಂಡಳಿ ವಾದಿಸಿತ್ತು. ಚಿತ್ರತಂಡದ ಆಪ್ತ ಮೂಲವೊಂದು ನ್ಯೂಸ್‌ಲಾಂಡ್ರಿ ಜತೆ ಮಾತನಾಡಿ, "‘ದಿ ಕಾಶ್ಮೀರ್ ಫೈಲ್ಸ್’ನಿಂದ ಕಾಶ್ಮೀರದಲ್ಲಾಗಲಿ ಅಥವಾ ‘ದಿ ಸಾಬರಮತಿ ರಿಪೋರ್ಟ್’ನಿಂದ ಗುಜರಾತ್‌ನಲ್ಲಾಗಲಿ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಲಿಲ್ಲ. ಆದರೆ ಪಂಜಾಬ್‌ನಲ್ಲಿ ಸಮಸ್ಯೆ ಆಗುತ್ತದೆ ಎಂದು ಸಿಬಿಎಫ್‌ಸಿ ಹೇಳಿತು. ನ್ಯಾಯಾಧೀಶರು ಈ ಕಾರಣವನ್ನು ಲಿಖಿತವಾಗಿ ನೀಡುವಂತೆ ಕೇಳಿದಾಗ, ಮಂಡಳಿಯು ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂಬ ಹೊಸ ವಾದವನ್ನು ಮುಂದಿಟ್ಟಿತು. ಈ ಆತಂಕವನ್ನು ನಿವಾರಿಸಲು ಚಿತ್ರವನ್ನು ಅಕಾಲ್ ತಖ್ತ್ ಮತ್ತು ಎಸ್‌ಜಿಪಿಸಿಗೆ (SGPC) ತೋರಿಸಲಾಯಿತು. ಈ ಎರಡೂ ಸಂಸ್ಥೆಗಳು ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದವು" ಎಂದು ತಿಳಿಸಿದೆ.
ಸಿಬಿಎಫ್‌ಸಿ ಈ ಚಿತ್ರವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತೋರಿಸಿರುವ ವಿಷಯ ತಿಳಿದ ಮುಂಬೈ ಹೈಕೋರ್ಟ್ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೇಲೆ ಹೇಳಿರುವ ಮೂಲದ ಪ್ರಕಾರ "ನ್ಯಾಯಾಧೀಶರು ಉಳಿದೆಲ್ಲ ವಿಷಯಗಳನ್ನು ಪಕ್ಕಕ್ಕಿಟ್ಟುಮೊದಲು ಯಾವ ಆಧಾರದ ಮೇಲೆ ಚಿತ್ರವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತೋರಿಸಲಾಯಿತು ಎಂದು ಪ್ರಶ್ನಿಸಿದರು. ಸಿಬಿಎಫ್‌ಸಿ ಒಂದು ಸ್ವಾಯತ್ತ ಸಂಸ್ಥೆ. ಯಾವ ಚಲನಚಿತ್ರಗಳು ಪಾಸ್ ಆಗಬೇಕು ಎಂಬುದನ್ನು ಸಚಿವಾಲಯವೇ ನಿರ್ಧರಿಸುವುದಾದರೆ ಸಿಬಿಎಫ್‌ಸಿ ಇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನ್ಯಾಯಾಧೀಶರು ಹೇಳಿದರು."
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಜಸ್ವಂತ್ ಸಿಂಗ್ ಖಾಲ್ರಾ ಅವರ ಕುರಿತೇ ಇರುವ ಈ ಚಿತ್ರದಿಂದ ಅವರ ಹೆಸರುಗಳನ್ನೇ ತೆಗೆದುಹಾಕಲು ಸಿಬಿಎಫ್‌ಸಿ ಸೂಚಿಸಿತ್ತು. ಅಷ್ಟೇ ಅಲ್ಲದೆ, 1984 ರ ಸಿಖ್ ವಿರೋಧಿ ಗಲಭೆ ನಡೆದ ‘ತ್ರಿಲೋಕಪುರಿ’ ಹೆಸರಿನ ಬದಲಿಗೆ ‘ಖಾನ್‌ಪುರಿ’ ಎಂದು ಬಳಸಲು, ಪಂಜಾಬ್ ಪೊಲೀಸ್, ಗುರ್ಬಾನಿ, ರಾಷ್ಟ್ರಧ್ವಜದ ಉಲ್ಲೇಖಗಳು ಹಾಗೂ ಪಂಜಾಬ್, ದೆಹಲಿ, ಅಮೃತಸರ, ಕೆನಡಾ, 1984 ಮತ್ತು “ಸರ್ಕಾರ” ಎಂಬ ಪದಗಳನ್ನು ತೆಗೆದುಹಾಕಲು ಮಂಡಳಿ ಒತ್ತಾಯಿಸಿತ್ತು ಎಂದು ಆ ಮೂಲಗಳು ಹೇಳಿವೆ. ಕಾನೂನಿನ ಪ್ರಕಾರ ಪರಿಶೀಲನಾ ಸಮಿತಿಯು ಕೇವಲ ಎರಡು ಬಾರಿ ಮಾತ್ರ ಚಿತ್ರವನ್ನು ಪರಿಶೀಲಿಸಲು ಅವಕಾಶವಿದ್ದರೂ, ಈ ಚಿತ್ರವನ್ನು ಏಳು ಬಾರಿ ಪರಿಶೀಲಿಸಲಾಗಿತ್ತು.
ಚಿತ್ರನಿರ್ಮಾಪಕರು ಈ ಚಿತ್ರವನ್ನು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಳುಹಿಸಿದಾಗ, ಅದನ್ನು ಹಿಂಪಡೆಯುವಂತೆ ನಿರ್ಮಾಪಕರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ. 2025 ಫೆಬ್ರವರಿ ಅಂತರರಾಷ್ಟ್ರೀಯ ಬಿಡುಗಡೆಗಾಗಿ ಅಂತರರಾಷ್ಟ್ರೀಯ ಸ್ಟುಡಿಯೋವೊಂದು ಮುಂದೆ ಬಂದಾಗಲೂ, ನಿರ್ಮಾಪಕರು ಅದನ್ನು ರದ್ದುಗೊಳಿಸುವಂತೆ ಮಾಡಲಾಯಿತು. ನಟ ದಿಲ್ಜಿತ್ ದೋಸಾಂಜ್ ತಮ್ಮ ಹೆಸರನ್ನು ಚಿತ್ರದಿಂದ ತೆಗೆದುಹಾಕಲು ಸಿದ್ಧರಾದ ಮೇಲೂ ಮತ್ತು ಚಿತ್ರದ ಕ್ರೆಡಿಟ್ಸ್‌ನಲ್ಲಿ ತಮ್ಮ ಹೆಸರು ಇಲ್ಲದಿದ್ದರೂ ಪರವಾಗಿಲ್ಲ ಎಂದು ನಿರ್ದೇಶಕ ಟ್ರೆಹಾನ್ ಒಪ್ಪಿಕೊಂಡ ಮೇಲೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಅಂತಿಮವಾಗಿ ಇದು ZEE5 ನಲ್ಲಿ ಬಿಡುಗಡೆಯಾಗಿ, ನಂತರ ಅದರಿಂದ ತೆಗೆದುಹಾಕಬೇಕಾಗಿ ಬಂತು.
ಬ್ರಿಟಿಷ್-ಇಂಡಿಯನ್ ಚಲನಚಿತ್ರ ನಿರ್ಮಾಪಕಿ ಸಂಧ್ಯಾ ಸೂರಿ ನಿರ್ದೇಶನದ ‘ಸಂತೋಷ್’ ಸಿನಿಮಾವು ಜಾತಿ ಪದ್ಧತಿ, ಮಹಿಳಾ ದ್ವೇಷ, ಇಸ್ಲಾಮೋಫೋಬಿಯಾ ಮತ್ತು ಪೊಲೀಸರ ಕ್ರೌರ್ಯದ ವಿಷಯಗಳನ್ನು ಒಳಗೊಂಡಿದೆ. ಇದು 2025 ರ ಆಸ್ಕರ್ ಪ್ರಶಸ್ತಿಗೆ ಬ್ರಿಟನ್‌ನ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು ಮತ್ತು ಬಾಫ್ಟಾ (BAFTA) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆದರೆ ಸಿಬಿಎಫ್‌ಸಿ ಇದಕ್ಕೆ ಭಾರತದಲ್ಲಿ ಬಿಡುಗಡೆಯಾಗಲು ಅನುಮತಿ ನಿರಾಕರಿಸಿತು.
ದಿಬಾಕರ್ ಬ್ಯಾನರ್ಜಿ ನಿರ್ದೇಶನದ ‘ತೀಸ್’ ಸಿನಿಮಾವು ಕಾಶ್ಮೀರಿ ಮುಸ್ಲಿಂ ಕುಟುಂಬವೊಂದರ ಮೂರು ತಲೆಮಾರುಗಳ (1989, 2019 ಮತ್ತು 2042 ರ ಅವಧಿ) ಕಥೆಯನ್ನು ಹೊಂದಿತ್ತು. ನೆಟ್‌ಫ್ಲಿಕ್ಸ್ ನಿರ್ಮಾಣದ ಈ ಚಿತ್ರವು 2022 ರಲ್ಲೇ ಪೂರ್ಣಗೊಂಡಿದ್ದರೂ ಇಲ್ಲಿವರೆಗೆ ಬಿಡುಗಡೆಯಾಗಲಿಲ್ಲ. ಈ ಚಿತ್ರವನ್ನು ಕೈಬಿಟ್ಟ ವಿಷಯದ ಬಗ್ಗೆ ತಿಳಿದಿರುವ ಮೂಲವೊಂದು, "ಆ ಸಮಯದಲ್ಲಿ ಇದನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ನೆಟ್‌ಫ್ಲಿಕ್ಸ್ ಹೇಳಿತು. ಸಿನಿಮಾ ಅದ್ಭುತವಾಗಿದೆ, ಆದರೆ ಬಿಡುಗಡೆಯ ಸಮಯ ಸರಿಯಾಗಿಲ್ಲ ಎಂದು ಅವರು ತಿಳಿಸಿದರು" ಎಂದಿದೆ.
ಹೆಸರು ಹೇಳಲಿಚ್ಛಿಸದ ಚಿತ್ರನಿರ್ಮಾಪಕರೊಬ್ಬರು ʼನ್ಯೂಸ್‌ಲಾಂಡ್ರಿʼ ಜತೆ ಮಾತನಾಡಿ, "‘ಹೋಮ್‌ಬೌಂಡ್’ನಂತಹ ಚಿತ್ರಕ್ಕೂ ಕತ್ತರಿ ಪ್ರಯೋಗ ಮಾಡಲಾಗಿತ್ತು. ನಾನು ಕಾನ್ ಚಲನಚಿತ್ರೋತ್ಸವದಲ್ಲಿ ನೋಡಿದ ಆವೃತ್ತಿಗೂ ಮತ್ತು ಭಾರತದಲ್ಲಿ ಬಿಡುಗಡೆಯಾದ ಆವೃತ್ತಿಗೂ ಈ ಕತ್ತರಿ ಪ್ರಯೋಗದಿಂದಾಗಿ ಸಾಕಷ್ಟು ವ್ಯತ್ಯಾಸವಿತ್ತು. ಅದೇ ರೀತಿ, ಜಾತಿ ವಿರೋಧಿ ತಮಿಳು ಚಿತ್ರ ‘ಪರಿಯೇರುಮ್ ಪೆರುಮಾಳ್’ನ ರಿಮೇಕ್ ಆದ ‘ಧಡಕ್ 2’ ಚಿತ್ರದಲ್ಲಿ 16 ದೃಶ್ಯಗಳನ್ನು ಕತ್ತರಿಸಲಾಯಿತು. ‘ಪರಿಯೇರುಮ್ ಪೆರುಮಾಳ್’ ತೀಕ್ಷ್ಣವಾದ ಜಾತಿ ವಿರೋಧಿ ಚಿತ್ರವಾಗಿದ್ದರೆ, ‘ಧಡಕ್ 2’ ಚಿತ್ರವನ್ನು ಸೌಮ್ಯಗೊಳಿಸಿ ಜಾತಿ ವಿಷಯಗಳಿಗಿಂತ ಹೆಚ್ಚಾಗಿ ಪ್ರೇಮಕಥೆಯತ್ತ ಗಮನ ಹರಿಸುವಂತೆ ಮಾಡಲಾಯಿತು" ಎಂದು ಹೇಳಿದರು.
ಮತ್ತೊಬ್ಬ ಚಿತ್ರನಿರ್ಮಾಪಕರು, "ಪ್ರಸ್ತುತ ವಾತಾವರಣದಲ್ಲಿ ‘ರಂಗ್ ದೇ ಬಸಂತಿ’, ‘ಹೈದರ್’, ‘ಉಡ್ತಾ ಪಂಜಾಬ್’ ನಂತಹ ಸಿನಿಮಾಗಳನ್ನು ಮಾಡುವುದು ಕಷ್ಟಸಾಧ್ಯ. ಮಗನ ಚಿತಾಭಸ್ಮಕ್ಕಾಗಿ ತಂದೆಯೊಬ್ಬ ವ್ಯವಸ್ಥೆಯ ವಿರುದ್ಧ ಹೋರಾಡುವ ‘ಸಾರಂಶ್’ ನಂತಹ ಸಿನಿಮಾಗಳು ಕೂಡ ಇಂದು ಸಾಧ್ಯವಾಗದಿರಬಹುದು. ಚಿತ್ರರಂಗದಲ್ಲಿ ಈಗ ಸ್ವಯಂ ಸೆನ್ಸಾರ್‌ಶಿಪ್ ಸಂಸ್ಕೃತಿ ಬೆಳೆದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
►ವಿಧೇಯತೆಯ ಕಾರ್ಯವಿಧಾನ
ಹಲವು ಒಟಿಟಿ ವೇದಿಕೆಗಳಲ್ಲಿ ಹಿರಿಯ ಹುದ್ದೆಗಳಲ್ಲಿದ್ದ ಪ್ರಸಿದ್ಧ ನಿರ್ಮಾಪಕರೊಬ್ಬರು ತಮಗೆ ಬಂದ ಒಂದು ಫೋನ್ ಕರೆಯ ಬಗ್ಗೆ ವಿವರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಸಚಿವರೊಬ್ಬರ ಕಚೇರಿಯಲ್ಲಿ ಕೆಲಸ ಮಾಡುವ ಬಿಜೆಪಿ ನಾಯಕ ಎಂದು ಪರಿಚಯಿಸಿಕೊಂಡಿದ್ದನಂತೆ. "ಅವನು, 'ನಾವು ನಿಮ್ಮೊಂದಿಗೆ ಸಾಬರಮತಿ ಎಕ್ಸ್‌ಪ್ರೆಸ್ ಕುರಿತು ಒಂದು ಸಿನಿಮಾ ಮಾಡಲು ಬಯಸುತ್ತೇವೆ' ಎಂದು ಹೇಳಿದ. ನಾನು ಒಟಿಟಿ ಹುದ್ದೆಯಿಂದ ಹೊರಬಂದಿದ್ದೇನೆ ಎಂದು ಹೇಳಿದಾಗ, 'ನೀವೇ ಸ್ವತಂತ್ರವಾಗಿ ಇದನ್ನು ಏಕೆ ನಿರ್ಮಿಸಬಾರದು? ನಮ್ಮ ಬಳಿ ಪ್ರಕರಣದ ಸಂಪೂರ್ಣ ಫೈಲ್ ಸಿದ್ಧವಾಗಿದೆ' ಎಂದನು." ನಿರ್ಮಾಪಕರು ಪ್ರಾಯೋಗಿಕ ತೊಂದರೆಗಳನ್ನು ಮುಂದಿಟ್ಟಾಗ, "ಗೌತಮ್ ಭಾಯ್" ಕಡೆಯಿಂದ ಹಣಕಾಸಿನ ನೆರವು ಕೊಡಿಸುವುದಾಗಿ ಆತ ಭರವಸೆ ನೀಡಿದ್ದನಂತೆ. ಆದರೂ ನಿರ್ಮಾಪಕರು ಒಪ್ಪದಿದ್ದಾಗ, ಕರೆ ಮಾಡಿದ ವ್ಯಕ್ತಿ ನಿರ್ಮಾಪಕರ ಕುಟುಂಬದ ವಿವರಗಳನ್ನು ಪ್ರಸ್ತಾಪಿಸಿದನು. "ಅವನು ಮುಂದುವರಿದು, 'ಈ ಸಿನಿಮಾ 10 ಕೋಟಿ ರೂಪಾಯಿಯಲ್ಲಿ ತಯಾರಾಗುತ್ತದೆ ಮತ್ತು ನೀವು 100 ಕೋಟಿ ರೂಪಾಯಿ ಗಳಿಸುತ್ತೀರಿ, ನಿಮ್ಮ ಜೀವನ ಸೆಟ್ ಆಗುತ್ತದೆ. ಒಮ್ಮೆ ದಿ ಕಾಶ್ಮೀರ್ ಫೈಲ್ಸ್ ನೋಡಿ' ಎಂದನು." ಆಗ ನಿರ್ಮಾಪಕರು ಇಂತಹ ಪ್ರಚಾರದ ಸಿನಿಮಾಗಳನ್ನು ವಿರೋಧಿಸುವ ಪ್ರಸಿದ್ಧ ನಿರ್ದೇಶಕರೊಬ್ಬರ ಹೆಸರನ್ನು ಹೇಳಿ ವಿಷಯವನ್ನು ಬೇರೆಡೆಗೆ ತಿರುಗಿಸಿದರು. "ನಾನು ಆ ಹೆಸರನ್ನು ಹೇಳಿದ ತಕ್ಷಣ ಆ ವ್ಯಕ್ತಿ ಹಿಂದೆ ಸರಿದನು" ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಆರೆಸ್ಸೆಸ್ ಪದಾಧಿಕಾರಿಯೊಬ್ಬರು ಕಥೆಗಳನ್ನು ಹೇಳುವ ಮೂಲಕ ಸಂಸ್ಥೆಯ ಮೇಲಿರುವ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಬಯಸುತ್ತಿರುವುದಾಗಿ ತಮಗೆ ತಿಳಿಸಿದ್ದರು ಎಂದು ಚಿತ್ರಕಥೆಗಾರರೊಬ್ಬರು ಹೇಳಿದ್ದಾರೆ.
ಬಾಲಿವುಡ್ ಪ್ರಮುಖರನ್ನು ಭೇಟಿಯಾಗುತ್ತಿರುವ ಆರೆಸ್ಸೆಸ್ ಪದಾಧಿಕಾರಿಯೊಬ್ಬರು, "ಸಿನಿಮಾಗಳು ಮತ್ತು ಸೆಲೆಬ್ರಿಟಿಗಳು ಸಮಾಜದ ಮೇಲೆ ಬಲವಾದ ಪ್ರಭಾವ ಬೀರುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಸಂಘಕ್ಕೆ ಅದರಲ್ಲಿ ಆಸಕ್ತಿಯಿಲ್ಲ. ನಮ್ಮ ಗಮನವೇನಿದ್ದರೂ ಒಳ್ಳೆಯ ಜನರನ್ನು ಒಟ್ಟುಗೂಡಿಸುವುದರ ಮೇಲಿದೆ" ಎಂದಿದ್ದಾರೆ.
"ರಾಷ್ಟ್ರೀಯ ಹಿತಾಸಕ್ತಿ ಕಾಯುವ ಚಟುವಟಿಕೆಗಳಿಗಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುವುದು ಆರೆಸ್ಸೆಸ್ ನ ಕೆಲಸವಾಗಿದೆ. ಅದೇ ಉದ್ದೇಶದಿಂದ ನಾವು ಚಲನಚಿತ್ರ ರಂಗದ ಜನರೊಂದಿಗೂ ಸಂಪರ್ಕದಲ್ಲಿದ್ದೇವೆ.ಜನರು ಈಗ ಆರೆಸ್ಸೆಸ್ ನ ಕೆಲಸವನ್ನು ಗುರುತಿಸಲು ಪ್ರಾರಂಭಿಸಿರುವುದರಿಂದ ನಮ್ಮನ್ನು ಹೆಚ್ಚು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ, ಸಂಘದ ಕಾರಣದಿಂದಲೇ ಸಿನಿಮಾಗಳು ಯಶಸ್ವಿಯಾಗುತ್ತವೆ ಎಂದು ಭಾವಿಸುವುದು ತಪ್ಪು. ಕೆಲವು ಜನರು ಹಾಗೆ ಯೋಚಿಸಬಹುದು, ಆದರೆ ಉದಾಹರಣೆಗೆ ‘ಬೆಂಗಾಲ್ ಫೈಲ್ಸ್’ ಸಿನಿಮಾ ಚೆನ್ನಾಗಿ ಓಡಲಿಲ್ಲ. ಸಮಾಜವು ಸ್ವೀಕರಿಸಿದರೆ ಮಾತ್ರ ಸಿನಿಮಾ ಯಶಸ್ವಿಯಾಗುತ್ತದೆ" ಎಂದು ಅವರು ಹೇಳಿದ್ದಾರೆ
ಚಲನಚಿತ್ರ ಬರಹಗಾರರೊಬ್ಬರು ಒಟಿಟಿ ವೇದಿಕೆಗಳು ಈಗ ಕಥೆಗಾರರಿಗೆ ಲಿಖಿತ ಸೂಚನೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ: "ಸರ್ಕಾರ, ಆಡಳಿತ ಪಕ್ಷ ಅಥವಾ ರಾಜಕೀಯ ವಿಶ್ಲೇಷಣೆ ಎಂದು ಅನಿಸಬಹುದಾದ ಯಾವುದೇ ಉಲ್ಲೇಖಗಳನ್ನು ಕಥೆಯಿಂದ ತೆಗೆದುಹಾಕಿ ಎಂದು ಅವು ಹೇಳುತ್ತವೆ. ಸಣ್ಣ ಉಲ್ಲೇಖವಿದ್ದರೂ ಅದನ್ನು ಗುರುತಿಸಿ ಆಕ್ಷೇಪಿಸಲಾಗುತ್ತದೆ. ಈಗ ಕಥೆಗಳನ್ನು ಒಪ್ಪಿಸುವುದು ತುಂಬಾ ಕಷ್ಟವಾಗಿದೆ."
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕರೊಬ್ಬರು ಮಾತನಾಡಿ, "ಪ್ರಸ್ತುತ ಹಣಕಾಸಿನ ಮಾದರಿಯನ್ನು ಗಮನಿಸಿದರೆ, ಶೇಕಡಾ 70 ರಿಂದ 80 ರಷ್ಟು ಒಟಿಟಿ ವಿಷಯಗಳು ಕೇವಲ ಕೆಲವು ಪ್ರೊಡಕ್ಷನ್ ಹೌಸ್‌ಗಳ ನಿಯಂತ್ರಣದಲ್ಲಿವೆ. ನಿರ್ದಿಷ್ಟ ಕಥೆಗಳನ್ನು ಮಾತ್ರ ಪ್ರೋತ್ಸಾಹಿಸುವಂತೆ ಈ ವೇದಿಕೆಗಳಿಗೆ ಸೂಚಿಸಿದರೆ, ಅವು ಅದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಅಂತಿಮವಾಗಿ ಅವು ವ್ಯಾಪಾರ ಸಂಸ್ಥೆಗಳು. ಅವು ಸರ್ಕಾರದ ಹಾದಿಗೆ ಬರದಿದ್ದರೆ ತೆರಿಗೆ ಸಮಸ್ಯೆಗಳು, ಇಡಿ ತನಿಖೆ ಅಥವಾ ಇತರ ರೀತಿಯ ಒತ್ತಡಗಳನ್ನು ಎದುರಿಸಬೇಕಾಗುತ್ತದೆ" ಎಂದಿದ್ದಾರೆ.
ಮತ್ತೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕರು, "ಇಲ್ಲಿ ಸರಳವಾದ ನಿಯಮವಿದ್ದಂತೆ ಕಾಣುತ್ತದೆ. ಮಾತನ್ನು ಕೇಳಿದರೆ ಬಹುಮಾನ ಸಿಗುತ್ತದೆ. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ" ಎಂದಿದ್ದಾರೆ.
ಜನ್ಮದಿನದ ಈ ಯೋಜಿತ ಪ್ರಚಾರಗಳು ಈ ವ್ಯವಸ್ಥೆಯ ಕಾರ್ಯವೈಖರಿಯನ್ನು ಸ್ಪಷ್ಟಪಡಿಸುತ್ತವೆ. 17 ಸೆಪ್ಟೆಂಬರ್ 2025 ರಂದು ಅಂದರೆ ಮೋದಿಯವರ 75ನೇ ಜನ್ಮದಿನದಂದು ಅಜಯ್ ದೇವಗನ್, ಆಲಿಯಾ ಭಟ್, ಅಮೀರ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್, ವಿಕ್ಕಿ ಕೌಶಲ್ ಮುಂತಾದವರ ಮೊದಲೇ ಸಿದ್ಧಪಡಿಸಿದ ವಿಡಿಯೊ ಸಂದೇಶಗಳು ಅವರ ವೈಯಕ್ತಿಕ ಖಾತೆಗಳಲ್ಲಿ ಮಾತ್ರವಲ್ಲದೆ ದೂರದರ್ಶನ, MyGov India, ಆಲ್ ಇಂಡಿಯಾ ರೇಡಿಯೋ ಮತ್ತು ಎಎನ್‌ಐಗಳಲ್ಲೂ ಹರಿದಾಡಿದವು. ಕೆಲವು ಸಂದೇಶಗಳು ಸರ್ಕಾರದ ನಿರ್ದಿಷ್ಟ ನೀತಿಗಳನ್ನು ಶ್ಲಾಘಿಸಿದರೆ, ಮತ್ತೊಂದು ಸಂದೇಶವು "ದಿ ಸಾಬರಮತಿ ರಿಪೋರ್ಟ್ ಪ್ರದರ್ಶನದ ನಂತರ ಪ್ರಧಾನಿ ಮೋದಿಯವರ ಕಣ್ಣುಗಳು ತೇವವಾಗಿದ್ದವು" ಎಂದು ಉಲ್ಲೇಖಿಸಿತ್ತು. ಟಿ-ಸೀರಿಸ್ ಸಂಸ್ಥೆಯು ಆರು ಶುಭಾಶಯ ಗೀತೆಗಳನ್ನು ಬಿಡುಗಡೆ ಮಾಡಿತ್ತು. ಶಂಕರ್ ಮಹದೇವನ್, ಎಂ.ಎಂ. ಕೀರವಾಣಿ, ರಿಕ್ಕಿ ಕೇಜ್ ಮತ್ತು ಅಜಯ್-ಅತುಲ್ ಈ ಹಾಡುಗಳಿಗೆ ಸಂಗೀತ ನೀಡಿದ್ದರು. ಸೋನು ನಿಗಮ್ ಮತ್ತು ಶಂಕರ್ ಮಹದೇವನ್ ಅವರು ಈಗಾಗಲೇ ಅನು ಮಲಿಕ್ ಸಂಯೋಜನೆಯಲ್ಲಿ ಮೋದಿಯವರ ಪ್ರಚಾರದ ಗೀತೆಯಾದ ‘ಯೇ ಮೇರಾ ಹಿಂದುಸ್ತಾನ್’ ಅನ್ನು ರೆಕಾರ್ಡ್ ಮಾಡಿದ್ದರು.
ಚಿತ್ರರಂಗದ ಮೂಲವೊಂದು, "ಇಂತಹ ಸಂದೇಶಗಳನ್ನು ಪೋಸ್ಟ್ ಮಾಡಲು ನಟರಿಗೆ ಹೇಳಲಾಗುತ್ತದೆ. ಪ್ರಧಾನಿಯವರೊಂದಿಗಿನ ಉನ್ನತ ಮಟ್ಟದ ಸಭೆಯಾಗಿರಲಿ ಅಥವಾ ಅವರ ಜನ್ಮದಿನವಾಗಿರಲಿ, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಲು ಅವರಿಗೆ ಕೇಳಲಾಗುತ್ತದೆ. ಇದನ್ನು ಸೌಜನ್ಯದಿಂದಲೇ ಹೇಳಲಾಗುತ್ತದೆಯಾದರೂ, ಅವರು ಅದನ್ನು ಮಾಡುವವರೆಗೂ ನಿರಂತರವಾಗಿ ಫಾಲೋ-ಅಪ್ ಮಾಡಲಾಗುತ್ತದೆ" ಎಂದು ತಿಳಿಸಿದೆ.
"ತಮಗೆ ಬೇರೆ ಆಯ್ಕೆಯಿಲ್ಲ ಎಂದು ಅನೇಕ ಸಿನಿಮಾ ನಟ/ನಟಿಯರು ಭಾವಿಸುತ್ತಾರೆ. ಇಡಿ ಅಥವಾ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಸಿಲುಕಿ ತೊಂದರೆ ಅನುಭವಿಸುವುದಕ್ಕಿಂತ, ಹೇಳಿದಂತೆ ಕೇಳುವುದು ಉತ್ತಮ ಎಂದು ಅವರು ಯೋಚಿಸುತ್ತಾರೆ. ಯಾರೂ ಅವರನ್ನು ವಿರೋಧಿಸಲು ಧೈರ್ಯ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಅನೇಕರು ಪ್ರಧಾನಿಯವರ ಜನ್ಮದಿನದಂದು ಬಹಿರಂಗವಾಗಿ ಶುಭ ಕೋರುತ್ತಾರೆ ಅಥವಾ ಅವರ ಪ್ರಶಂಸೆಯ ಹಾಡುಗಳನ್ನು ರಚಿಸುತ್ತಾರೆ. ಈ ಟ್ರೆಂಡ್ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಮುಖ ನಿರ್ಮಾಪಕ ಮತ್ತು ನಿರ್ದೇಶಕರೊಬ್ಬರು ಹೇಳಿದ್ದಾರೆ.
ಆದರೆ, ಇದೆಲ್ಲವನ್ನೂ ನಿಖರವಾಗಿ ಯಾರು ಸಂಯೋಜಿಸುತ್ತಿದ್ದಾರೆ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಈ ಉನ್ನತ ಮಟ್ಟದ ಸಭೆಗಳು, ಕೈಬಿಡಲಾದ ಸಿನಿಮಾಗಳು, ಜನ್ಮದಿನದ ಅಭಿಯಾನಗಳು ಮತ್ತು ಸರ್ಕಾರದ ಸಿದ್ಧಾಂತಕ್ಕೆ ಪೂರಕವಾದ ಚಲನಚಿತ್ರಗಳ ಹಿಂದಿರುವ ಜಾಲದ ಕೇಂದ್ರಬಿಂದು ಯಾರು? ಸಾರ್ವಜನಿಕರಿಗೆ ತಿಳಿಯದ ಆ ಇಬ್ಬರು ವ್ಯಕ್ತಿಗಳು ಈ ಕಥೆಯ ಪ್ರತಿಯೊಂದು ಪ್ರಮುಖ ಹಂತದಲ್ಲೂ ಹೇಗೆ ಕಾಣಿಸಿಕೊಂಡರು?- ಇದಕ್ಕೆ ಉತ್ತರ ಈ ಸರಣಿಯ ಮುಂದಿನ ಭಾಗದಲ್ಲಿ...