×
Ad

Landslides in the Western Ghats | ದುರಂತಗಳನ್ನು ತಡೆಯಲು ಮುನ್ನೆಚ್ಚರಿಕೆ ವ್ಯವಸ್ಥೆ ಅಳವಡಿಕೆಗೆ ಹೆಚ್ಚಿದ ಅನಿವಾರ್ಯತೆ

Update: 2026-07-11 21:10 IST

Photo Credit : PTI 

ಭಾರತದ ಪಶ್ಚಿಮ ಘಟ್ಟಗಳು ಸೇರಿದಂತೆ ಹಲವು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಭೂಕುಸಿತಗಳು, ಇಂತಹ ದುರಂತಗಳ ಕುರಿತು ಮುಂಚಿತ ಮಾಹಿತಿ ನೀಡುವ ಮುನ್ನೆಚ್ಚರಿಕೆ ವ್ಯವಸ್ಥೆಯ (Early Warning System) ಅಗತ್ಯದ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿವೆ.

ಭೂಕುಸಿತಗಳು ಸಂಭವಿಸುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು. ವಿಶೇಷವಾಗಿ 2024ರಲ್ಲಿ 300ಕ್ಕೂ ಹೆಚ್ಚು ಜನರ ಜೀವ ಬಲಿಪಡೆದ ವಯನಾಡ್‌ ನಂತಹ ಹೆಚ್ಚು ಅಪಾಯದ ಪ್ರದೇಶಗಳಲ್ಲಿ ಇದು ಸಾಧ್ಯ. ಅಪಾಯದ ವಲಯಗಳಿಂದ ಜನರನ್ನು ಸಕಾಲದಲ್ಲಿ ಸ್ಥಳಾಂತರಿಸಲು ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬಹುದಾಗಿದೆ. ಇಂತಹ ವ್ಯವಸ್ಥೆಗಳು ಈಗಾಗಲೇ ಅನೇಕ ದೇಶಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಸ್ವಿಟ್ಜರ್‌ಲ್ಯಾಂಡ್‌ ನ ಎರಡು ಯಶಸ್ವಿ ಉದಾಹರಣೆಗಳಿವೆ. ಅಲ್ಲಿ 2023 ಮತ್ತು 2025ರಲ್ಲಿ ದುರಂತ ಸಂಭವಿಸುವ ಕೆಲವು ದಿನಗಳ ಮೊದಲೇ ನೂರಾರು ಜನರನ್ನು ಅಪಾಯಕಾರಿ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಭೂಕುಸಿತದ ಮುನ್ನೆಚ್ಚರಿಕೆ ವ್ಯವಸ್ಥೆಗಳಿಗೆ ಭಾರತದಲ್ಲೂ ಉದಾಹರಣೆಗಳಿವೆ. 2024ರ ವಯನಾಡ್ ಭೂಕುಸಿತಕ್ಕೂ ಕೇವಲ ಎರಡು ವಾರಗಳ ಮುನ್ನ, ಕೇರಳದ ದಕ್ಷಿಣ ಭಾಗದ ಮೂನ್ನಾರ್ ಬೆಟ್ಟಗಳಲ್ಲಿ ಸರಣಿ ಭೂಕುಸಿತಗಳು ಸಂಭವಿಸಿದ್ದವು. ಆದರೆ ಅಲ್ಲಿ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ. ಅಮೃತ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಇಡುಕ್ಕಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸುತ್ತಿತ್ತು. ಈ ತಂಡ ನೀಡಿದ ಸಲಹೆಯ ಮೇರೆಗೆ ಇಡುಕ್ಕಿ ಜಿಲ್ಲಾಡಳಿತವು ಜನರನ್ನು ಮೊದಲೇ ಸ್ಥಳಾಂತರಿಸಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ಮನೀಷಾ ವಿನೋದಿನಿ ರಮೇಶ್ ಅವರ ನೇತೃತ್ವದ ಈ ಸಂಶೋಧನಾ ತಂಡವು, ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಹಲವು ತಂಡಗಳಲ್ಲಿ ಒಂದಾಗಿದೆ.

ಮಾದರಿಗಳು ಭಿನ್ನ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಪ್ರಕಾರ, ಭಾರತದ ಒಟ್ಟು ಭೂಪ್ರದೇಶದ ಶೇಕಡಾ 13ರಷ್ಟು ಭಾಗ (ಸುಮಾರು 4.2 ಲಕ್ಷ ಚದರ ಕಿಲೋಮೀಟರ್) ಭೂಕುಸಿತದ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೊಂದಿದೆ. ಹಿಮಾಲಯ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳ ಉದ್ದಕ್ಕೂ ಈ ಅಪಾಯ ಅತ್ಯಂತ ಹೆಚ್ಚಾಗಿದೆ.

ಇತ್ತೀಚೆಗೆ, ಐಐಟಿ ಮಂಡಿಯ ಪ್ರೊಫೆಸರ್ ಡೆರಿಕ್ಸ್ ಪ್ರೈಸ್ ಶುಕ್ಲಾ ಮತ್ತು ಅವರ ತಂಡವು ಭೂಕುಸಿತದ ಮುನ್ನೆಚ್ಚರಿಕೆ ನೀಡುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಿದೆ. ಹಿಮಾಲಯ ಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಆಧಾರದ ಮೇಲೆ ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಕಳೆದ ವರ್ಷವೊಂದರಲ್ಲೇ, ಈ ವಲಯದಲ್ಲಿ ಸಂಭವಿಸಿದ ಸುಮಾರು 80 ನೈಜ ಭೂಕುಸಿತಗಳ ಹಿನ್ನೆಲೆಯಲ್ಲಿ ಈ ಮಾದರಿಯ ನಿಖರತೆಯನ್ನು ಪರಿಶೀಲಿಸಲಾಗಿದೆ.

ಭೂಕುಸಿತದ ಮುನ್ನೆಚ್ಚರಿಕೆಗಾಗಿ ಶುಕ್ಲಾ ಅವರು ಬಳಸುತ್ತಿರುವ ವಿಧಾನವು ಅಮೃತ ವಿಶ್ವವಿದ್ಯಾಲಯದ ಸಂಶೋಧಕರು ಬಳಸಿದ ವಿಧಾನಕ್ಕಿಂತ ಭಿನ್ನವಾಗಿದೆ. "ಹೆಚ್ಚು ಅಪಾಯದ ಸ್ಥಳಗಳಲ್ಲಿ ಟಿಲ್ಟ್‌ಮೀಟರ್‌ಗಳು, ಪ್ರೆಶರ್ ಗೇಜ್‌ಗಳು ಮತ್ತು ಅಕ್ಸೆಲೆರೊಮೀಟರ್‌ಗಳಂತಹ (ಕಂಪನ ಹಾಗೂ ಭೂಮಿ ಚಲನೆಯ ಬದಲಾವಣೆಯನ್ನು ಅಳೆಯುವ ಸಾಧನಗಳು) ಸೆನ್ಸರ್‌ ಗಳ ಜಾಲವನ್ನು ಅಳವಡಿಸಿದ್ದಾರೆ. ಈ ಸೆನ್ಸರ್‌ ಗಳು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮಟ್ಟವನ್ನು ದಾಖಲಿಸಿದಾಗ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ತಕ್ಷಣವೇ ಜಿಲ್ಲಾಡಳಿತವು ಕ್ರಮ ಕೈಗೊಳ್ಳಬಹುದು," ಎಂದು ‘The Indian Express’ ಜತೆ ಮಾತನಾಡಿದ ಶುಕ್ಲಾ ಹೇಳಿದ್ದಾರೆ.

ವೈಜ್ಞಾನಿಕವಾಗಿ ಇದು ಅತ್ಯಂತ ಬಲಿಷ್ಠವಾದ ವಿಧಾನವಾಗಿದ್ದು, ಜನರನ್ನು ಸ್ಥಳಾಂತರಿಸಲು ಸಾಕಷ್ಟು ಸಮಯಾವಕಾಶವನ್ನು ನೀಡುತ್ತದೆ. ಇತರ ದೇಶಗಳಲ್ಲೂ ಮುನ್ನೆಚ್ಚರಿಕೆ ವ್ಯವಸ್ಥೆಗಳು ಇದೇ ರೀತಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇದರ ಒಂದೇ ಒಂದು ಮಿತಿಯೆಂದರೆ, ಉಪಕರಣಗಳನ್ನು ಅಳವಡಿಸಿದ ನಿರ್ದಿಷ್ಟ ಗುಡ್ಡದ ಬಗ್ಗೆ ಮಾತ್ರ ಮಾಹಿತಿ ಸಿಗುತ್ತದೆ; ಪಕ್ಕದ ಗುಡ್ಡದ ಬಗ್ಗೆ ಏನೂ ತಿಳಿಯುವುದಿಲ್ಲ. ಏಕೆಂದರೆ ಭೂಕುಸಿತಗಳು ಸ್ಥಳೀಯವಾಗಿ ಸಂಭವಿಸುವ ಘಟನೆಗಳಾಗಿವೆ" ಎಂದು ಶುಕ್ಲಾ ಹೇಳಿದ್ದಾರೆ.

ಶುಕ್ಲಾ ಅವರು ಹಿಮಾಲಯ ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆಗಳನ್ನು ಪತ್ತೆಹಚ್ಚಲು 'ಸಂಭವನೀಯ ಮುನ್ಸೂಚನಾ ವಿಧಾನ'ವನ್ನು (Probabilistic Forecasting Method) ಬಳಸುತ್ತಿದ್ದಾರೆ. ಇವರ ತಂಡವು ಉಪಗ್ರಹ ಆಧಾರಿತ ದತ್ತಾಂಶದ ನೆರವಿನಿಂದ ಈ ಹಿಂದೆ ನಡೆದ ದುರಂತಗಳ ಆಧಾರದ ಮೇಲೆ ಅಪಾಯದ ಸ್ಥಳಗಳನ್ನು ಗುರುತಿಸಿದೆ.

ಭೂಕುಸಿತಕ್ಕೆ ಮಳೆಯೇ ಪ್ರಮುಖ ಕಾರಣವಾಗಿರುವುದರಿಂದ, ಈ ತಂಡವು ಸ್ಥಳೀಯ ಮಳೆಯ ಮುನ್ಸೂಚನೆಯನ್ನು ಬಳಸಿಕೊಂಡು ಆಯಾ ಜಾಗಗಳಲ್ಲಿ ಭೂಕುಸಿತದ ಸಾಧ್ಯತೆಯನ್ನು ಲೆಕ್ಕಾಚಾರ ಮಾಡುತ್ತದೆ. ಮಣ್ಣಿನ ಸ್ಥಿತಿ, ಬಂಡೆಗಳ ಸ್ಥಿರತೆ, ಇಳಿಜಾರಿನ ತೀವ್ರತೆ ಮತ್ತು ಜನಸಂಖ್ಯೆಯ ಸಾಂದ್ರತೆಯಂತಹ ಹಲವು ಪ್ರಮುಖ ಅಂಶಗಳನ್ನು ಈ ಮಾದರಿಗೆ ಅಳವಡಿಸಲಾಗುತ್ತದೆ. ಯಾವುದೇ ದಿನದಂದು ಪ್ರತಿಯೊಂದು ಸ್ಥಳಕ್ಕೂ ಮಳೆಗೆ ಸಂಬಂಧಿಸಿದ ಸುಮಾರು 7ರಿಂದ 10 ಹಂತಗಳ ಮಾಪನಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದು ಭೂಕುಸಿತದ ಗರಿಷ್ಠ ಅಪಾಯವಿರುವ ಸ್ಥಳಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ.

"ಅತ್ಯಂತ ನಿಖರವಾದ ಸ್ಥಳೀಯ ಮಳೆಯ ಮುನ್ಸೂಚನೆಯು ಆಯಾ ದಿನ ಅಥವಾ ಒಂದು ದಿನ ಮುಂಚಿತವಾಗಿ ಮಾತ್ರ ಲಭ್ಯವಿರುತ್ತದೆ. ಹೀಗಾಗಿ, ನಮ್ಮ ವಿಧಾನದಲ್ಲಿ ಸ್ಥಳಾಂತರಕ್ಕೆ ಹೆಚ್ಚಿನ ಸಮಯ ಸಿಗುವುದಿಲ್ಲ. ಸದ್ಯ ಭಾರತೀಯ ಹವಾಮಾನ ಇಲಾಖೆಯು ಹೆಚ್ಚು ಸುಧಾರಿತ ಮಳೆ ಮುನ್ಸೂಚನಾ ವ್ಯವಸ್ಥೆಯ ಮೇಲೆ ಕೆಲಸ ಮಾಡುತ್ತಿದ್ದು, ಅದು ಲಭ್ಯವಾದರೆ ಭೂಕುಸಿತದ ಮುನ್ಸೂಚನೆಯನ್ನು ಇನ್ನೂ ಮುಂಚಿತವಾಗಿಯೇ ನೀಡಬಹುದು. ಆದರೆ ನಮ್ಮ ವಿಧಾನದ ದೊಡ್ಡ ಅನುಕೂಲವೆಂದರೆ, ಇದು ದುರ್ಗಮ ಪ್ರದೇಶಗಳು ಸೇರಿದಂತೆ ಇಡೀ ವಲಯದ ಬಹುಪಾಲು ಅಪಾಯಕಾರಿ ಸ್ಥಳಗಳ ಮಾಹಿತಿಯನ್ನು ಒದಗಿಸುತ್ತದೆ" ಎಂದು ಶುಕ್ಲಾ ಹೇಳಿದ್ದಾರೆ.

ಸಂಪನ್ಮೂಲಗಳು ಮತ್ತು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಿದರೆ ಕೇವಲ ಎರಡು ವರ್ಷಗಳಲ್ಲಿ ಅತ್ಯಂತ ಸಮಗ್ರ ಹಾಗೂ ಪರಿಣಾಮಕಾರಿ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಸಿದ್ಧಪಡಿಸಬಹುದು. ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳಲ್ಲಿ, ಪದೇ ಪದೇ ದುರಂತ ಸಂಭವಿಸುವ ಮತ್ತು ಜೀವ, ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿ ಉಂಟುಮಾಡಬಲ್ಲ ಗರಿಷ್ಠ ಅಪಾಯದ ವಲಯಗಳನ್ನು ನಾವು ಮೊದಲು ಗುರುತಿಸಬೇಕಿದೆ. ಈ ಕೆಲಸ ಇನ್ನೂ ನಡೆದಿಲ್ಲ. ಒಮ್ಮೆ ಇದು ಪೂರ್ಣಗೊಂಡರೆ, ಆಯ್ದ ಸ್ಥಳಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲು ಮುಂದಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಲಯ ಪ್ರದೇಶದ ವಾಯುವ್ಯ ಭಾಗವು ಅತಿ ಹೆಚ್ಚು ಅಪಾಯದ ಸ್ಥಳಗಳನ್ನು ಹೊಂದಿದೆ. ಉತ್ತರಾಖಂಡದ ತೆಹ್ರಿ ಗರ್ವಾಲ್, ಉತ್ತರಕಾಶಿ ಮತ್ತು ಹಿಮಾಚಲ ಪ್ರದೇಶದ ಮಂಡಿ ಹಾಗೂ ಶಿಮ್ಲಾ ಸುತ್ತಮುತ್ತಲಿನ ಪ್ರದೇಶಗಳು ತೀವ್ರ ಅಪಾಯದ ವಲಯದಲ್ಲಿದ್ದು, ಇಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ. ಮಿಜೋರಾಂನ ಐಜಾಲ್ ಸುತ್ತಮುತ್ತಲಿನ ಹಲವು ಭಾಗಗಳು ಮತ್ತು ಮಣಿಪುರದ ಕೆಲವು ಸ್ಥಳಗಳು ಸಹ ಹೆಚ್ಚು ಅಪಾಯದ ಅಡಿಯಲ್ಲಿವೆ. ಸಾಮಾನ್ಯವಾಗಿ ಅಪಾಯದ ಕೇಂದ್ರವೆಂದು ಪರಿಗಣಿಸಲಾಗುವ ಸಿಕ್ಕಿಂ, ಇವುಗಳಿಗೆ ಹೋಲಿಸಿದರೆ ತುಸು ಕಡಿಮೆ ಅಪಾಯವನ್ನು ಹೊಂದಿದೆ. ಇದಕ್ಕೆ ಒಂದು ಕಾರಣವೆಂದರೆ, ಸಿಕ್ಕಿಂನಲ್ಲಿ ರಸ್ತೆ ಜಾಲ ಅಷ್ಟೊಂದು ವಿಸ್ತಾರವಾಗಿಲ್ಲ. ಇದರಿಂದಾಗಿ ಬೆಟ್ಟಗಳನ್ನು ಕಡಿಯುವುದು ಮತ್ತು ಪ್ರಕೃತಿಗೆ ತೊಂದರೆ ಕೊಡುವುದು ಕಡಿಮೆಯಾಗಿದ್ದು, ಭೂಮಿಯ ಸ್ಥಿರತೆ ಹೆಚ್ಚಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News