×
Ad

ಬಿಷ್ಣೋಯ್ ಗ್ಯಾಂಗ್ ಮಟ್ಟ ಹಾಕಲು ಅಂಡರ್‌ಕವರ್ ಏಜೆಂಟ್‌ ಗಳು ಮತ್ತು ಇನ್ಫಾರ್ಮರ್‌ ಗಳು FBIಗೆ ಸಹಾಯ ಮಾಡಿದ್ದು ಹೇಗೆ?

Update: 2026-07-10 20:23 IST

ಲಾರೆನ್ಸ್ ಬಿಷ್ಣೋಯ್ | Photo Credit ; PTI

ಭಾರತ, ಕೆನಡಾ, ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಸಕ್ರಿಯವಾಗಿರುವ ಪಂಜಾಬ್ ಮೂಲದ ಮೂರು ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಗ್ಯಾಂಗ್‌ಗಳ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ (DoJ) ಜುಲೈ 8ರಂದು ದೋಷಾರೋಪ ಪಟ್ಟಿ ಸಲ್ಲಿಸಿದೆ. ಸದ್ಯ ಗುಜರಾತ್‌ ನ ಅಹಮದಾಬಾದ್‌ ನ ಹೈ-ಸೆಕ್ಯುರಿಟಿ ಜೈಲಿನಲ್ಲಿರುವ ಪಂಜಾಬ್ ಮೂಲದ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯ್ (33) ಮತ್ತು ಆತನ ಸಹಚರ ಸತಿಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್, ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ 2023ರ ಜೂನ್‌ ನಲ್ಲಿ ನಡೆದ ಖಾಲಿಸ್ತಾನ ಪರ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಆದೇಶ ನೀಡಿದ್ದರು ಎಂಬುದು ಈ ದೋಷಾರೋಪ ಪಟ್ಟಿಯಲ್ಲಿರುವ ಅತ್ಯಂತ ಪ್ರಮುಖ ಆರೋಪವಾಗಿದೆ. ನಿಜ್ಜಾರ್‌ ನನ್ನು ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿತ್ತು.

ಈ ತನಿಖೆಯು ಹಲವರ ಬಂಧನ, ಭಾರಿ ಪ್ರಮಾಣದ ಮಾದಕವಸ್ತುಗಳ ವಶಪಡಿಸಿಕೊಳ್ಳುವಿಕೆ ಹಾಗೂ ಸುಲಿಗೆ, ರೌಡಿಸಂ, ಸುಪಾರಿ ಕೊಲೆಗಳು ಮತ್ತು ಡ್ರಗ್ಸ್ ದಂಧೆಗೆ ಸಂಬಂಧಿಸಿದ ದೋಷಾರೋಪಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಈವರೆಗೆ ಒಟ್ಟು 37 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಭಾರತ ಮೂಲದ ಈ ಮೂರು ಅಂತರರಾಷ್ಟ್ರೀಯ ಅಪರಾಧ ಗುಂಪುಗಳಿಗೆ ಸೇರಿದ 24 ಆರೋಪಿಗಳನ್ನು ಅಮೆರಿಕ, ಕೆನಡಾ ಮತ್ತು ಸ್ಪೇನ್‌ನಲ್ಲಿ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ 10 ಜನರಿಗಾಗಿ ಕಾನೂನು ಜಾರಿ ಸಂಸ್ಥೆಗಳು ಹುಡುಕಾಟ ನಡೆಸುತ್ತಿದ್ದು, ಇವರಲ್ಲಿ ಏಳು ಮಂದಿ ಅಮೆರಿಕದಲ್ಲಿ, ಇಬ್ಬರು ಭಾರತದಲ್ಲಿ ಮತ್ತು ಒಬ್ಬ ಯುರೋಪ್‌ ನಲ್ಲಿ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ನ್ಯಾಯಾಂಗ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಆ ಮೂರು ಗುಂಪುಗಳು ಯಾವುವು?

ಅಮೆರಿಕ ದಾಖಲಿಸಿರುವ ಈ ಪ್ರಕರಣದಲ್ಲಿ ಪ್ರಮುಖವಾಗಿರುವುದು 'ಲಾರೆನ್ಸ್ ಬಿಷ್ಣೋಯ್ ಆರ್ಗನೈಸ್ಡ್ ಕ್ರೈಮ್ ಗ್ರೂಪ್' (OCG). ಇದು ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಕೆನಡಾ, ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ವ್ಯಾಪಕವಾಗಿ ಸಕ್ರಿಯವಾಗಿರುವ ಅಂತರರಾಷ್ಟ್ರೀಯ ಅಪರಾಧ ಸಂಸ್ಥೆಯಾಗಿದೆ ಎಂದು ಪ್ರಾಸಿಕ್ಯೂಟರ್‌ ಗಳು ಹೇಳಿದ್ದಾರೆ. ದೋಷಾರೋಪ ಪಟ್ಟಿಯ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಈ ಗುಂಪನ್ನು ಸ್ಥಾಪಿಸಿ ಮುನ್ನಡೆಸಿದ್ದಲ್ಲದೆ, ಆತ ಜೈಲಿನಲ್ಲಿದ್ದಾಗಲೂ ಈ ಗ್ಯಾಂಗ್ ತನ್ನ ಚಟುವಟಿಕೆಗಳನ್ನು ಮುಂದುವರಿಸಿತ್ತು. ಗೋಲ್ಡಿ ಬ್ರಾರ್ ಉತ್ತರ ಅಮೆರಿಕದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರೆ, ರೋಹಿತ್ ಗೋಡಾರ ಯುರೋಪ್‌ ನಲ್ಲಿನ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದ ಎನ್ನಲಾಗಿದೆ.

ಎರಡನೇ ಸಂಸ್ಥೆ 'ಜಗ್ಗು ಭಗವಾನ್‌ಪುರಿಯಾ' ಗುಂಪು. ಸದ್ಯ ಅಸ್ಸಾಂನ ಸಿಲ್ಚಾರ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಜಗತಾರ್ ಸಿಂಗ್ ಅಲಿಯಾಸ್ ಜಗ್ಗು ಭಗವಾನ್‌ಪುರಿಯಾ ಇದರ ನೇತೃತ್ವ ವಹಿಸಿದ್ದಾನೆ. ಅಮೆರಿಕದ ಅಧಿಕಾರಿಗಳು ಇದನ್ನು ಭಾರತ, ಕೆನಡಾ, ಅಮೆರಿಕ ಮತ್ತು ಇತರ ದೇಶಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿರುವ ಪ್ರತ್ಯೇಕ ಅಂತರರಾಷ್ಟ್ರೀಯ ಅಪರಾಧ ಸಿಂಡಿಕೇಟ್ ಎಂದು ಕರೆದಿದ್ದಾರೆ. ಪ್ರಾಸಿಕ್ಯೂಟರ್‌ ಗಳ ಪ್ರಕಾರ, ಈ ಜಾಲವು ವಿಶ್ವಾದ್ಯಂತ 1,000ಕ್ಕೂ ಹೆಚ್ಚು ಸದಸ್ಯರು ಮತ್ತು ಸಹಚರರನ್ನು ಹೊಂದಿದೆ. ಈ ಗುಂಪು ಆರಂಭದಲ್ಲಿ ಬಿಷ್ಣೋಯ್ ಸಂಘಟನೆಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿತ್ತಾದರೂ, ನಂತರ ತನ್ನದೇ ಆದ ಅಂತರರಾಷ್ಟ್ರೀಯ ಅಪರಾಧ ಜಾಲವನ್ನು ವಿಸ್ತರಿಸಿಕೊಂಡಿತು.

ಮೂರನೇ ಪ್ರಮುಖ ಜಾಲವು ಕೆನಡಾ ಮೂಲದ ಆರೋಪಿ ರವೀಂದ್ರ ಸಿಂಗ್ ಧಂಡಾಗೆ ಸಂಬಂಧಿಸಿದ್ದಾಗಿದೆ. ಈತ ಗಡಿಯಾಚೆಗಿನ ಭಾರಿ ಪ್ರಮಾಣದ ಮಾದಕವಸ್ತು ದಂಧೆಯನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ವಿವಿಧ ದೇಶಗಳ ನಡುವೆ, ವಿಶೇಷವಾಗಿ ಅಮೆರಿಕ ಮತ್ತು ಕೆನಡಾ ನಡುವೆ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸಾಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಬಿಷ್ಣೋಯ್ ಗ್ಯಾಂಗ್‌ ನ ಪಾತ್ರವೇನು?

ಉದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಭಾರತೀಯ ಮೂಲದವರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಬಿಷ್ಣೋಯ್ ನೆಟ್‌ವರ್ಕ್ ಉದ್ದೇಶಪೂರ್ವಕ ಕೊಲೆಗಳು, ಗುಂಡಿನ ದಾಳಿಗಳು, ಅಪಹರಣಗಳು, ಹಲ್ಲೆಗಳು ಮತ್ತು ಸಾರ್ವಜನಿಕ ಬೆದರಿಕೆಗಳನ್ನು ಒಡ್ಡಿದೆ ಎಂದು ನ್ಯಾಯಾಂಗ ಇಲಾಖೆ ಆರೋಪಿಸಿದೆ. ಸುಲಿಗೆಯನ್ನು ಸುಲಭಗೊಳಿಸುವುದು ಮತ್ತು ಗ್ಯಾಂಗ್‌ ನ ಹೆಸರನ್ನು ದೊಡ್ಡದಾಗಿ ಮಾಡುವುದು ಇದರ ಉದ್ದೇಶವಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ, ಈ ಗುಂಪು ಉತ್ತರ ಅಮೆರಿಕದಾದ್ಯಂತ ಕೊಕೇನ್ ಮತ್ತು ಮೆಥಾಂಫೆಟಮೈನ್‌ ನಂತಹ ಮಾದಕವಸ್ತುಗಳನ್ನು ಸಾಗಿಸುವಲ್ಲಿ ಹಾಗೂ ಪ್ರತಿಸ್ಪರ್ಧಿ ದಂಧೆಕೋರರ ಡ್ರಗ್ಸ್ ದಾಸ್ತಾನುಗಳನ್ನು ಕದಿಯುವಲ್ಲಿ ಭಾಗಿಯಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

FBI ಬಿಷ್ಣೋಯ್ ಗ್ಯಾಂಗ್ ಜಾಲವನ್ನು ಪತ್ತೆಹಚ್ಚಿದ್ದು ಹೇಗೆ?

ದೋಷಾರೋಪ ಪಟ್ಟಿಯ ಪ್ರಕಾರ, ಅಮೆರಿಕ, ಕೆನಡಾ ಮತ್ತು ಇತರ ಕಡೆಗಳಲ್ಲಿ ಗ್ಯಾಂಗ್ ಸದಸ್ಯರು ನಡೆಸಿದ ಹಿಂಸಾತ್ಮಕ ಕೃತ್ಯಗಳನ್ನು ನಿರ್ದೇಶಿಸುತ್ತಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭಾರತ ಮೂಲದ ಹಿರಿಯ ಕಮಾಂಡರ್ ಸುಖರಾಜ್ ಸಿಂಗ್ ಕಾಂಗ್ ಪ್ರಮುಖ ಸಾಕ್ಷ್ಯಗಳನ್ನು ಒದಗಿಸಿದ್ದಾನೆ.

ಪ್ರಾಸಿಕ್ಯೂಟರ್‌ ಗಳ ಪ್ರಕಾರ, 2025ರ ಜನವರಿ 25ರಂದು ಸುಖರಾಜ್ ಸಿಂಗ್ ಕಾಂಗ್ 16,000 ಡಾಲರ್ ಕಮಿಷನ್‌ ಗಾಗಿ, ಗುಪ್ತಚರ ಇಲಾಖೆಯ ಇನ್ಫಾರ್ಮರ್ ಒಬ್ಬರಿಗೆ ಬರಬೇಕಾಗಿದ್ದ 1,00,000ರಿಂದ 2,00,000 ಡಾಲರ್ ಬಾಕಿ ಹಣವನ್ನು ಬೆದರಿಕೆ ಹಾಕಿ ವಸೂಲಿ ಮಾಡಿಕೊಡಲು ಒಪ್ಪಿಕೊಂಡಿದ್ದ. ನಂತರ ತನಿಖಾಧಿಕಾರಿಗಳು ಸಾಲಗಾರನ ಮನೆಯಲ್ಲಿ ಗುಂಡಿನ ದಾಳಿ ನಡೆದಂತೆ ಬಿಂಬಿಸುವ ನಕಲಿ ವೀಡಿಯೊವನ್ನು ಸಿದ್ಧಪಡಿಸಿದ್ದರು. ಈ ಸಂಚಿನಲ್ಲಿದ್ದ ಗ್ಯಾಂಗ್ ಸದಸ್ಯರು ಆ ವೀಡಿಯೊ ನಿಜವೆಂದು ನಂಬಿ, ಹಣ ನೀಡಬೇಕಾದ ವ್ಯಕ್ತಿಯನ್ನು ಹೆದರಿಸಲು ಅದನ್ನು ಬಳಸಿಕೊಂಡಿದ್ದರು.

ವಾಸ್ತವದಲ್ಲಿ, ಹಣ ನೀಡಬೇಕಾಗಿದ್ದ ಆ ವ್ಯಕ್ತಿ ಬೇರೆ ಯಾರೂ ಆಗಿರದೆ ಅಂಡರ್‌ಕವರ್ ಪೊಲೀಸ್ ಅಧಿಕಾರಿಯಾಗಿದ್ದರು (UC-1). ನಂತರದ ವಾರಗಳಲ್ಲಿ ಕಾಂಗ್, ರಾಜನ್ ಭಟ್ಟಿ, ಗೋಲ್ಡಿ ಬ್ರಾರ್, ರೋಹಿತ್ ಗೋಡಾರ, ಭುಲ್ವಾನ್ ಮತ್ತು ಸುಮಿತ್ ಸೇರಿದಂತೆ ಹಲವು ಆರೋಪಿಗಳು ನೇರವಾಗಿ ಆ ಅಧಿಕಾರಿಯೊಂದಿಗೆ (UC-1) ಮಾತನಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಈ ಸಂಭಾಷಣೆಗಳ ಮೂಲಕ ತನಿಖಾಧಿಕಾರಿಗಳಿಗೆ ಗ್ಯಾಂಗ್‌ ನ ಸುಲಿಗೆ ಬೇಡಿಕೆಗಳು, ಕುಟುಂಬ ಸದಸ್ಯರಿಗೆ ಹಾಕಿದ ಬೆದರಿಕೆಗಳು, ಹಣದ ಚೌಕಾಸಿ ಮತ್ತು ಹಣ ವಸೂಲಿ ಮಾಡುವ ವಿಧಾನಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಯಿತು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಕೊನೆಗೆ, ಕ್ಯಾಲಿಫೋರ್ನಿಯಾದಲ್ಲಿ ಬಿಷ್ಣೋಯ್ ನೆಟ್‌ವರ್ಕ್‌ ನ ಸಹಚರರು ಸುಲಿಗೆ ಹಣವನ್ನು ಪಡೆಯಲು ಬಂದಾಗ ಪೊಲೀಸರು ಅವರನ್ನು ಬಲೆಗೆ ಬೀಳಿಸುವಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಯಿತು.

ವಾಟ್ಸ್‌ಆ್ಯಪ್ ಅನ್ನು ಹೇಗೆ ಬಳಸಲಾಗಿತ್ತು?

ಸುಲಿಗೆ ಜಾಲದಲ್ಲಿ ವಾಟ್ಸ್‌ಆ್ಯಪ್ ಅನ್ನು ಪ್ರಮುಖ ಸಂಪರ್ಕ ಮಾಧ್ಯಮವಾಗಿ ಬಳಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಪದೇ ಪದೇ ಉಲ್ಲೇಖಿಸಲಾಗಿದೆ. 2025ರ ಫೆಬ್ರವರಿ 5ರಂದು ರಾಜನ್ ಭಟ್ಟಿ ವಾಟ್ಸ್‌ಆ್ಯಪ್ ಮೂಲಕ ಅಂಡರ್‌ಕವರ್ ಅಧಿಕಾರಿಯನ್ನು (UC-1) ಸಂಪರ್ಕಿಸಿ 2,00,000 ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಭಟ್ಟಿ ಬೆದರಿಕೆ ಹಾಕಲು, ಮಾಹಿತಿ ಪಡೆಯಲು ಮತ್ತು ಹಣದ ವ್ಯವಸ್ಥೆ ಮಾಡಲು ವಾಟ್ಸ್‌ಆ್ಯಪ್ ಅನ್ನೇ ಬಳಸುತ್ತಿದ್ದ ಎನ್ನಲಾಗಿದೆ. ನಂತರ, 2025ರ ಮೇ 26 ಮತ್ತು 29ರಂದು ಭಟ್ಟಿ ಮತ್ತೆ ವಾಟ್ಸ್‌ಆ್ಯಪ್ ಬಳಸಿ ಹಣಕ್ಕಾಗಿ ಬೇಡಿಕೆ ಇಟ್ಟು, ಅಧಿಕಾರಿ ಮತ್ತು ಆತನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಹಾಗೂ ಕ್ಯಾಲಿಫೋರ್ನಿಯಾದ ರಿವರ್‌ಸೈಡ್‌ ನಲ್ಲಿ ಹಣ ತಲುಪಿಸಬೇಕಾದ ವಿವರಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ. ಜಗತ್ತಿನಾದ್ಯಂತ ಇರುವ ಜನರನ್ನು ಹೆದರಿಸಿ ಸುಲಿಗೆ ಮಾಡಲು ಬಿಷ್ಣೋಯ್ ಗ್ಯಾಂಗ್ ಸದಸ್ಯರು ವಾಟ್ಸ್‌ಆ್ಯಪ್‌ ನಂತಹ ಎನ್‌ಕ್ರಿಪ್ಟ್ ಮಾಡಲಾದ ಆ್ಯಪ್‌ ಗಳನ್ನು ನಿಯಮಿತವಾಗಿ ಬಳಸುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಂತ್ರಸ್ತರಿಗೆ ಅಥವಾ ಅವರ ಸಂಬಂಧಿಕರಿಗೆ ಹಿಂಸೆ ನೀಡುವುದಾಗಿ ಬೆದರಿಸಲಾಗುತ್ತಿತ್ತು. ಹಣ ವಸೂಲಿ ಮಾಡಲು ಗ್ಯಾಂಗ್ ಈ ಹಿಂದೆ ಮಾಡಿದ್ದ ಕೊಲೆ ಮತ್ತು ಹಿಂಸಾಚಾರಗಳನ್ನು ನೆನಪಿಸಿ ಹೆದರಿಸಲಾಗುತ್ತಿತ್ತು ಎಂದು ಪ್ರಾಸಿಕ್ಯೂಟರ್‌ ಗಳು ತಿಳಿಸಿದ್ದಾರೆ.

ಸಿಗ್ನಲ್ ಆ್ಯಪ್ ಅನ್ನು ಹೇಗೆ ಬಳಸಲಾಗಿತ್ತು?

ಈ ಅಪರಾಧ ಜಾಲದಲ್ಲಿ ಸಿಗ್ನಲ್ ಆ್ಯಪ್ ಮತ್ತೊಂದು ಪ್ರಮುಖ ಸಂಪರ್ಕ ಮಾಧ್ಯಮವಾಗಿತ್ತು ಎಂದು ದೋಷಾರೋಪ ಪಟ್ಟಿ ಗುರುತಿಸಿದೆ. ಸುಲಿಗೆ ಹಣದ ವಸೂಲಿಯನ್ನು ಸುಲಭಗೊಳಿಸಲು 2025ರ ಫೆಬ್ರವರಿ 12ರಂದು ಕಾಂಗ್, ಇನ್ಫಾರ್ಮರ್-1 (CI-1) ಅವರನ್ನು ಸಿಗ್ನಲ್ ಕಾಲ್ ಮೂಲಕ ಗೋಲ್ಡಿ ಬ್ರಾರ್‌ ಗೆ ಪರಿಚಯಿಸಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ನಂತರ ಹಲವು ಆರೋಪಿಗಳು ಹಣದ ಚೌಕಾಸಿ ಮಾಡಲು ಮತ್ತು ಬೆದರಿಕೆ ಹಾಕಲು ಸಿಗ್ನಲ್ ಆ್ಯಪ್ ಬಳಸಿದ್ದಾರೆ.

ದೋಷಾರೋಪ ಪಟ್ಟಿಯ ಪ್ರಕಾರ, 2025ರ ಮಾರ್ಚ್ 5ರಂದು ಗೋಲ್ಡಿ ಬ್ರಾರ್ ಮತ್ತು ಸುಮಿತ್ ಸಿಗ್ನಲ್ ಮೂಲಕ ಅಂಡರ್‌ಕವರ್ ಅಧಿಕಾರಿಯೊಂದಿಗೆ (UC-1) ಮಾತನಾಡಿ, ಭಾಗಶಃ ಹಣ ಪಾವತಿಸುವಂತೆ ಒಪ್ಪಂದ ಮಾಡಿಕೊಂಡಿದ್ದರು. ಮರುದಿನ ರೋಹಿತ್ ಗೋಡಾರ ಸಿಗ್ನಲ್ ಬಳಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಮಾರ್ಚ್ 7ರಂದು ಭುಲ್ವಾನ್ ಮತ್ತು ಬ್ರಾರ್ ಸಿಗ್ನಲ್ ಮೂಲಕ ಪ್ರತ್ಯೇಕವಾಗಿ ಅಧಿಕಾರಿಯೊಂದಿಗೆ ಮಾತನಾಡಿ, ಹಣವನ್ನು ಹೇಗೆ ಪಾವತಿಸಬೇಕು ಎಂದು ಸೂಚನೆ ನೀಡಿದ್ದಲ್ಲದೆ, ಹಣ ನೀಡದಿದ್ದರೆ ಎದುರಿಸಬೇಕಾಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಏಪ್ರಿಲ್ 11ರಂದು ಗೋಡಾರ ಮತ್ತು ಭುಲ್ವಾನ್ ಮತ್ತೊಮ್ಮೆ ಸಿಗ್ನಲ್ ಮೂಲಕ ಅಧಿಕಾರಿಯನ್ನು ಸಂಪರ್ಕಿಸಿದ್ದರು. ತಮಗೆ "ಅವಮಾನ" ಮಾಡಿದ್ದಕ್ಕಾಗಿ ಗ್ಯಾಂಗ್ ಆತನನ್ನು ಕೊಲ್ಲಲಿದೆ ಎಂದು ಗೋಡಾರ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ನಿಜ್ಜಾರ್ ಹತ್ಯೆಯ ಲಿಂಕ್?

2023ರ ಜೂನ್‌ ನಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಆದೇಶ ನೀಡಿದ್ದರು ಎಂದು ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಬಿಷ್ಣೋಯ್ ನಿಜ್ಜಾರ್ ಬಗ್ಗೆ ಮಾಹಿತಿಯನ್ನು ಒದಗಿಸಿದ್ದ ಮತ್ತು ಆತನ ಸಹಚರರು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಈ ಹತ್ಯೆಯನ್ನು ನಡೆಸಿದ್ದರು ಎಂದು ಪ್ರಾಸಿಕ್ಯೂಟರ್‌ ಗಳು ವಾದಿಸಿದ್ದಾರೆ. ಈ ಆರೋಪವು ಬಿಷ್ಣೋಯ್ ನೆಟ್‌ವರ್ಕ್ ಅನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಕೆನಡಾ ನಡುವಿನ ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ವಿವಾದದ ಕೇಂದ್ರಬಿಂದುವನ್ನಾಗಿ ಮಾಡಿದೆ. ಈ ಕೊಲೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಹದಗೆಡಿಸಿತ್ತು. ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರವು ಇದರಲ್ಲಿ "ಭಾರತ ಸರ್ಕಾರದ ಏಜೆಂಟ್‌ ಗಳ" ಕೈವಾಡವಿದೆ ಎಂದು ಆರೋಪಿಸಿತ್ತು ಮತ್ತು ತನಿಖೆಯಲ್ಲಿ ಭಾರತೀಯ ರಾಜತಾಂತ್ರಿಕರನ್ನು ಶಂಕಿತರು ಎಂದು ಕರೆದಿತ್ತು.

ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಅಥವಾ ಕೇಂದ್ರ ಗೃಹ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ, ಅಮೆರಿಕದ ಸಹಾಯಕ ಅಟಾರ್ನಿ ಬಿಲ್ ಎಸ್ಸೈಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಭಾರತೀಯ ಅಧಿಕಾರಿಗಳು ನಮಗೆ ತುಂಬಾ ಸಹಕಾರ ನೀಡಿದ್ದಾರೆ. ಭಾರತವು ಇಂದಿನ ಕಾರ್ಯಾಚರಣೆಯ ಬಗ್ಗೆ ಸಂತೋಷವಾಗಿದೆ" ಎಂದು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದ ಸಂಘಟಿತ ಅಪರಾಧಗಳ ಬಗ್ಗೆ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಕೂಡ ಪರ್ಯಾಯ ತನಿಖೆ ನಡೆಸುತ್ತಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಭಗವಾನ್‌ಪುರಿಯಾ ಗುಂಪು ಯಾವ ಪಾತ್ರ ವಹಿಸಿದೆ ಎಂದು ಆರೋಪಿಸಲಾಗಿದೆ?

ಭಗವಾನ್‌ಪುರಿಯಾ ಸಿಂಡಿಕೇಟ್ ತನ್ನ ಪ್ರಭಾವ ಮತ್ತು ಭ್ರಷ್ಟಾಚಾರದ ಸಹಾಯದಿಂದ ಸುಲಿಗೆ ದಂಧೆ ನಡೆಸುವುದರಲ್ಲಿ ಪರಿಣತಿ ಹೊಂದಿದೆ ಎಂದು ಆರೋಪಿಸಲಾಗಿದೆ. ಈ ಗ್ಯಾಂಗ್‌ ನ ಸದಸ್ಯರು ಭ್ರಷ್ಟ ಸಾರ್ವಜನಿಕ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದರು. ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಮತ್ತು ಸುಲಿಗೆಗೆ ಒಳಗಾದವರ ಮೇಲೆ ಒತ್ತಡ ಹೇರಲು ಆ ಸಂಪರ್ಕಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ ಗಳು ಆರೋಪಿಸಿದ್ದಾರೆ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಗುರಿಂದರ್‌ಜೀತ್ ಸಿಂಗ್ ಎಂಬ ಅಧಿಕಾರಿ ಈ ಜಾಲದ ಸದಸ್ಯರೊಂದಿಗೆ ಕೆಲಸ ಮಾಡಿದ್ದಲ್ಲದೆ, ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬುದು ಇಲ್ಲಿನ ಅತ್ಯಂತ ಆಘಾತಕಾರಿ ಆರೋಪವಾಗಿದೆ. ಗುರಿಯಾಗಿಸಿಕೊಂಡ ಜನರಿಂದ ಹಣ ವಸೂಲಿ ಮಾಡಲು ಈ ಗ್ಯಾಂಗ್ ಕ್ರಿಮಿನಲ್ ಬೆದರಿಕೆಗಳು ಮತ್ತು ಕಾನೂನಾತ್ಮಕ ಕಿರುಕುಳ ಎರಡನ್ನೂ ಬಳಸುತ್ತಿತ್ತು ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಮುಂದೇನು?

ಆರೋಪಿಗಳೆಲ್ಲರನ್ನೂ ಹಸ್ತಾಂತರ ಮಾಡುವಂತೆ ಕೋರಲಾಗುವುದು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕರ್ತವ್ಯದಲ್ಲಿರುವ ಪಂಜಾಬ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 37 ಆರೋಪಿಗಳ ವಿರುದ್ಧ ಬುಧವಾರ (ಜುಲೈ 8, 2026) ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿದೆ. 'ಆಪರೇಷನ್ ಹಾರ್ಡ್ ಬಾಲ್' ಹೆಸರಿನ ಈ ತನಿಖೆಯನ್ನು ಅಮೆರಿಕ, ಕೆನಡಾ ಮತ್ತು ಯುರೋಪ್‌ ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿವೆ. ಇದು ವರ್ಷಗಳ ಕಾಲ ನಡೆಸಿದ ಸುದೀರ್ಘ ತನಿಖೆಯ ಫಲಿತಾಂಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಈ ವ್ಯಕ್ತಿಗಳು ಇಲ್ಲಿಗೆ ಮಾತ್ರವಲ್ಲದೆ ಭಾರತಕ್ಕೂ ದೊಡ್ಡ ಸಮಸ್ಯೆಯಾಗಿದ್ದರು. ಇವರಲ್ಲಿ ಕೆಲವರು ಈಗಾಗಲೇ ಭಾರತದಲ್ಲಿ ಜೈಲಿನಲ್ಲಿದ್ದಾರೆ. ಆದರೆ ಅವರ ಚಟುವಟಿಕೆಗಳನ್ನು ನಿಯಂತ್ರಿಸಲು ಅದು ಸಾಕಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹಸ್ತಾಂತರದ ನಂತರ ಅವರು ಇಲ್ಲಿಗೆ ಬಂದಾಗ, ಅವರು ದೀರ್ಘಕಾಲದವರೆಗೆ ಕಸ್ಟಡಿಯಲ್ಲಿ ಇರಲಿದ್ದಾರೆ. ಆ ಬಳಿಕ ಅವರು ಯಾರಿಂದಲೂ ಸುಲಿಗೆ ಮಾಡಲು ಸಾಧ್ಯವಾಗದಂತೆ ನಾನು ಭರವಸೆ ನೀಡುತ್ತೇನೆ" ಎಂದು ಬಿಲ್ ಎಸ್ಸೈಲಿ ಹೇಳಿದ್ದಾರೆ.

ಸೌಜನ್ಯ: thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News