ರಾಮಮಂದಿರ ಟ್ರಸ್ಟ್ ತನ್ನ ಮೊದಲ CEO ಆಗಿ ಸೇನಾ ಅಧಿಕಾರಿಯನ್ನೇ ಆಯ್ಕೆ ಮಾಡಿದ್ದೇಕೆ? ಅದರ 3 ಹೊಸ ಸದಸ್ಯರು ಯಾರು?
ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ | Photo Credit : theprint.in
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ರಾಮಮಂದಿರದ CEO ಆಗಿ ನೇಮಕ ಮಾಡಿರುವುದು ಮತ್ತು ಮೂವರು ಹೊಸ ಪ್ರಮುಖ ಸದಸ್ಯರನ್ನು ಟ್ರಸ್ಟ್‌ಗೆ ಸೇರ್ಪಡೆಗೊಳಿಸಿರುವುದು ಸೇರಿದಂತೆ ಹಲವು ಪ್ರಮುಖ ಆಡಳಿತಾತ್ಮಕ ಹಾಗೂ ಸಾಂಸ್ಥಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ.
ನಿರ್ಮಲಾ ಯಾದವ್, ಮದನ್ ಮೋಹನ್ ಪಾಂಡೆ ಮತ್ತು ಮಹೇಶ್ ಭಾಗಚಂದ್ಕಾ ಅವರಿಗೆ ಟ್ರಸ್ಟಿಗಳಾಗಿ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ. ಇದಕ್ಕೂ ಮೊದಲು ಟ್ರಸ್ಟ್‌ನ ಖಜಾಂಚಿಯಾಗಿದ್ದ ಸ್ವಾಮಿ ಗೋವಿಂದ್ ದೇವ್ ಗಿರಿ ಅವರನ್ನು ಕಾಯಂ ಪ್ರಧಾನ ಕಾರ್ಯದರ್ಶಿಯಾಗಿ ಟ್ರಸ್ಟ್ ನೇಮಕ ಮಾಡಿದೆ.
ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಟ್ರಸ್ಟ್ ಸ್ಥಾಪನೆಯಾದಾಗಿನಿಂದಲೂ ಅದರೊಂದಿಗೆ ತೊಡಗಿಸಿಕೊಂಡಿದ್ದು, ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ, ಅವರು ಈಗ ಟ್ರಸ್ಟ್‌ನ ಆಡಳಿತಾತ್ಮಕ ಮತ್ತು ಸಾಂಸ್ಥಿಕ ವ್ಯವಹಾರಗಳ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸಿಇಒ ಆಯ್ಕೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಇದರಲ್ಲಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸುರೇಶ್ ಹಾವರೆ ಮತ್ತು ವಿಷ್ಣು ಕಾಂತ್ ಚತುರ್ವೇದಿ ಇದ್ದರು.
ಈ ಹುದ್ದೆಗೆ 5,500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಬಳಿಕ ಅರ್ಜಿದಾರರಿಗೆ ಒಟ್ಟು 600 ಅಂಕಗಳ ಪ್ರಶ್ನೆಗಳನ್ನೊಳಗೊಂಡ ಗೂಗಲ್ ಫಾರ್ಮ್ ಅನ್ನು ಕಳುಹಿಸಲಾಗಿತ್ತು. 3,500ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಫಾರ್ಮ್ ಅನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಅವರನ್ನು ಮೌಲ್ಯಮಾಪನ ಮಾಡಲಾಯಿತು.
ಟ್ರಸ್ಟ್‌ನ ಮೂಲಗಳ ಪ್ರಕಾರ, ಈ ಅಭ್ಯರ್ಥಿಗಳಲ್ಲಿ 108 ಜನರು 600ಕ್ಕೆ 470ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರು. ನಂತರ ಅವರ ಆನ್‌ಲೈನ್ ಸಂದರ್ಶನ ನಡೆಸಲಾಯಿತು. ಇದಾದ ನಂತರ ಮುಂದಿನ ಹಂತಕ್ಕೆ 17 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಾಡಲಾಯಿತು.
ಸಿಇಒ ಹುದ್ದೆಯ ಅಂತಿಮ ಹಂತದ ಸ್ಪರ್ಧೆಯಲ್ಲಿದ್ದ ಮೂವರು ಅಭ್ಯರ್ಥಿಗಳೆಂದರೆ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ, ಮೇಜರ್ ಜನರಲ್ ಸಂಜಯ್ ಪ್ರತಾಪ್ ಸಿಂಗ್ ಮತ್ತು ಶ್ರುತಿ ಭಾರದ್ವಾಜ್. ಅಂತಿಮವಾಗಿ ಟ್ರಸ್ಟ್ ಜಿತೇಂದ್ರ ಮಿಶ್ರಾ ಅವರ ನೇಮಕಕ್ಕೆ ಸರ್ವಸಮ್ಮತಿ ಸೂಚಿಸಿತು.
ಅಂತಿಮ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ಕೊನೆಯ ಹಂತದ ಸಂದರ್ಶನಕ್ಕಾಗಿ ಅಯೋಧ್ಯೆಗೆ ಕರೆಯಿಸಲಾಗಿತ್ತು. ನಾಯಕತ್ವದ ಸಾಮರ್ಥ್ಯ, ಧಾರ್ಮಿಕ ವಿಷಯಗಳ ತಿಳಿವಳಿಕೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ದೇವಾಲಯ ಆಡಳಿತದ ಕುರಿತಾದ ಜ್ಞಾನ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಅವರ ಮೌಲ್ಯಮಾಪನ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಅಧಿಕಾರಿಯೊಬ್ಬರು 'ದಿ ಪ್ರಿಂಟ್' ಜೊತೆ ಮಾತನಾಡಿ, "ಹಲವು ಮಾಜಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಅಯೋಧ್ಯೆಯಲ್ಲಿ ಯಾವುದೇ ಪೂರ್ವ ಸಂಬಂಧ ಅಥವಾ ಪೋಸ್ಟಿಂಗ್ ಹೊಂದಿರದ ಸೇನೆ ಮತ್ತು ವಾಯುಪಡೆ ಸೇರಿದಂತೆ ಸಶಸ್ತ್ರ ಪಡೆಗಳ ಅಭ್ಯರ್ಥಿಗಳನ್ನು ಪರಿಗಣಿಸಲು ನಾವು ನಿರ್ಧರಿಸಿದೆವು. ತಟಸ್ಥ ನಿಲುವು ಹೊಂದಿರುವ ವ್ಯಕ್ತಿ ಈ ಹುದ್ದೆಗೆ ಬರಲಿ ಎಂಬುದು ಇದರ ಉದ್ದೇಶವಾಗಿತ್ತು. ಆಯ್ಕೆಯ ವೇಳೆ ರಾಷ್ಟ್ರೀಯವಾದಿ ಅಂಶವನ್ನೂ ಮನಸ್ಸಿನಲ್ಲಿಟ್ಟುಕೊಳ್ಳಲಾಗಿತ್ತು" ಎಂದು ತಿಳಿಸಿದ್ದಾರೆ.
ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯಲ್ಲಿನ ಸುಮಾರು ನಾಲ್ಕು ದಶಕಗಳ ಅನುಭವ ಮತ್ತು ಸೇನಾ ಶಿಸ್ತನ್ನು ರಾಮಮಂದಿರದ ಆಡಳಿತಕ್ಕೆ ತರಲಿದ್ದಾರೆ ಎಂದು ಈ ಅಧಿಕಾರಿ ಹೇಳಿದ್ದಾರೆ ಎಂದು 'The Print' ವರದಿ ಉಲ್ಲೇಖಿಸಿದೆ.
ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ: ಆಪರೇಷನ್ ಸಿಂಧೂರ್ ನಿಂದ ರಾಮಮಂದಿರದವರೆಗೆ
ತಮ್ಮ ನೇಮಕದ ಕುರಿತು ANI ಜೊತೆ ಮಾತನಾಡಿದ ಮಿಶ್ರಾ, "ಇಷ್ಟೊಂದು ಅಭ್ಯರ್ಥಿಗಳಲ್ಲಿ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ. ವಾಯುಪಡೆಯಲ್ಲಿ 43 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ನಂತರ, ಶ್ರೀ ರಾಮಮಂದಿರ ಮತ್ತು ಶ್ರೀರಾಮನ ಭಕ್ತರಿಗೆ ಸೇವೆ ಸಲ್ಲಿಸಲು ಭಗವಾನ್ ಶ್ರೀರಾಮನು ನನಗೆ ಅವಕಾಶ ನೀಡಿ ಆಶೀರ್ವದಿಸಿದ್ದಾನೆ" ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಭೋಪತ್‌ಪುರ ಮೂಲದ ಮಿಶ್ರಾ ಅವರು, 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. ಎಪ್ರಿಲ್‌ನಲ್ಲಿ ನಿವೃತ್ತರಾದ ಅವರು, ಸುಮಾರು 40 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 3,000ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. 18ಕ್ಕೂ ಹೆಚ್ಚು ಮಾದರಿಯ ಯುದ್ಧ ಮತ್ತು ಸರಕು ಸಾಗಣೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಹಾರಾಟ ನಡೆಸಿರುವ ಅವರು, ಯುದ್ಧ ವಿಮಾನ ಪೈಲಟ್ ಆಗಿ, ಯುದ್ಧ ವಿಮಾನ ಕಮಾಂಡರ್ ಹಾಗೂ ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಹಲವು ತರಬೇತಿ ಮತ್ತು ಆಡಳಿತಾತ್ಮಕ ಹುದ್ದೆಗಳನ್ನೂ ನಿರ್ವಹಿಸಿದ್ದಾರೆ.
1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಆಗ ಸ್ಕ್ವಾಡ್ರನ್ ಲೀಡರ್ ಆಗಿದ್ದ ಮಿಶ್ರಾ ಅವರು ಮಿರಾಜ್ 2000 ಯುದ್ಧ ವಿಮಾನಗಳಲ್ಲಿ ಲೇಸರ್ ಮಾರ್ಗದರ್ಶಿತ ಬಾಂಬ್ ಗಳನ್ನು ಸಜ್ಜುಗೊಳಿಸಿದ ತಂಡದ ಭಾಗವಾಗಿದ್ದರು. 'ಆಪರೇಷನ್ ಸಫೇದ್ ಸಾಗರ್' ಸಮಯದಲ್ಲಿ ಟೈಗರ್ ಹಿಲ್ ಮತ್ತು ಮುಂಥೋ ಧಾಲೋ ಮೇಲಿನ ದಾಳಿಗೆ ಈ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು.
ಕಳೆದ ಜನವರಿಯಲ್ಲಿ ಏರ್ ಮಾರ್ಷಲ್ ಮಿಶ್ರಾ ಅವರು ವಾಯುಪಡೆಯ ಅತ್ಯಂತ ಪ್ರಮುಖ ಕಾರ್ಯಾಚರಣಾ ಕಮಾಂಡ್ ಗಳಲ್ಲಿ ಒಂದಾದ 'ವೆಸ್ಟರ್ನ್ ಏರ್ ಕಮಾಂಡ್'ನ 'ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್' ಆಗಿ ಅಧಿಕಾರ ವಹಿಸಿಕೊಂಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಮೇ 2025ರಲ್ಲಿ 'ಆಪರೇಷನ್ ಸಿಂಧೂರ್' ಆರಂಭಿಸಿದಾಗಲೂ ಅವರು ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಏರ್ ಮಾರ್ಷಲ್ ಮಿಶ್ರಾ, ಭಾರತೀಯ ಪಡೆಗಳು ಪಾಕಿಸ್ತಾನದ ಒಳಗಿನ ನೆಲೆಗಳನ್ನು ಹೇಗೆ ಗುರುತಿಸಿ ದಾಳಿ ನಡೆಸಿದವು ಎಂಬುದನ್ನು ವಿವರಿಸಿದ್ದರು. ಈ ಕಾರ್ಯಾಚರಣೆಯಲ್ಲಿನ ಅವರ ಪಾತ್ರಕ್ಕಾಗಿ ಅವರಿಗೆ 'ಸರ್ವೋತ್ತಮ ಯುದ್ಧ ಸೇವಾ ಪದಕ' ನೀಡಿ ಗೌರವಿಸಲಾಗಿತ್ತು. ಅತ್ಯುತ್ತಮ ಕಾರ್ಯಾಚರಣೆಯ ಯೋಜನೆ, ಸಮನ್ವಯ ಮತ್ತು ಕಾರ್ಯಗತಗೊಳಿಸುವಿಕೆಗೆ ನೀಡಲಾಗುವ ಅತ್ಯಂತ ಅಪರೂಪದ ಗೌರವ ಇದಾಗಿದೆ.
ರಾಮಮಂದಿರದ ನಿರ್ವಹಣೆಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗ, ತಾವು ಟ್ರಸ್ಟ್ ನ ಮಾರ್ಗದರ್ಶನದಲ್ಲಿ ಮತ್ತು ತಮ್ಮ ತಂಡದೊಂದಿಗೆ ಸೇರಿ ಕೆಲಸ ಮಾಡುವುದಾಗಿ ಮಿಶ್ರಾ ಹೇಳಿದ್ದಾರೆ. ಅದರ ಜೊತೆಗೆ ಹಿಂದಿನ ಅನುಭವಗಳಿಂದ ಪಾಠಗಳನ್ನು ಕಲಿಯಲು ಪ್ರಯತ್ನಿಸುವುದಾಗಿ ಹೇಳಿದರು.
ಏರ್ ಮಾರ್ಷಲ್ ಅವರೊಂದಿಗೆ ಸೇವೆ ಸಲ್ಲಿಸಿದವರು, ಅವರ ಬುದ್ಧಿಮತ್ತೆ ಮತ್ತು ಸಂಕೀರ್ಣ ಪರಿಸ್ಥಿತಿಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಉಲ್ಲೇಖಿಸಿ, ಅವರು ದೇವಾಲಯದ ನಿರ್ವಹಣೆಗೆ ಅತ್ಯಂತ ಸೂಕ್ತ ವ್ಯಕ್ತಿ ಎನ್ನುತ್ತಾರೆ.
ಆಯ್ಕೆ ಸಮಿತಿಯ ಸದಸ್ಯರಾದ ಸುರೇಶ್ ಹಾವರೆ ಅವರು ಸಹ ವಾಯುಪಡೆಯಲ್ಲಿ ಮಿಶ್ರಾ ಅವರ ಅನುಭವ ಮತ್ತು ಆಪರೇಷನ್ ಸಿಂಧೂರ್ ನಲ್ಲಿ ಅವರ ಪಾತ್ರವನ್ನು ಅವರ ನೇಮಕಾತಿಗೆ ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿದ್ದಾರೆ. "ಆಪರೇಷನ್ ಸಿಂಧೂರ್ ಸಮಯದಲ್ಲಿ ಜಿತೇಂದ್ರ ಮಿಶ್ರಾ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಅಗತ್ಯವಿರುವ ಶಿಸ್ತು ಮತ್ತು ನಿರ್ವಹಣೆಯನ್ನು ಅವರು ತರಲಿದ್ದಾರೆ. ಅತ್ಯಂತ ಮುಖ್ಯವಾಗಿ, ಅವರು ರಾಮಭಕ್ತರ ವಿಶ್ವಾಸವನ್ನು ಮರುಸ್ಥಾಪಿಸಲಿದ್ದಾರೆ. ಬೃಹತ್ ಕಾರ್ಯಾಚರಣೆಗಳನ್ನು ನಿರ್ವಹಿಸಿದ ಅನುಭವ ಹೊಂದಿರುವ ಅವರು ಈ ಹುದ್ದೆಗೆ ಅತ್ಯಂತ ಸೂಕ್ತವಾಗಿದ್ದಾರೆ" ಎಂದು ಹಾವರೆ 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.
ಟ್ರಸ್ಟ್‌ನ ಇತರ ಸದಸ್ಯರು
ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮಹಿಳಾ ಸದಸ್ಯೆಯಾಗಿದ್ದಾರೆ ನಿರ್ಮಲಾ ಯಾದವ್. ಶಿಕೋಹಾಬಾದ್ ಮೂಲದ ನಿರ್ಮಲಾ ಯಾದವ್ ಅವರು, ಈ ಹಿಂದೆ ರಾಮಮಂದಿರಕ್ಕಾಗಿ ವಿಶ್ವ ಹಿಂದೂ ಪರಿಷತ್ ನಡೆಸಿದ 'ನಿಧಿ ಸಮರ್ಪಣ' ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ವಿಶ್ವವಿದ್ಯಾಲಯ ಮಟ್ಟದಲ್ಲಿ ಸುಮಾರು 15 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ.
ಟ್ರಸ್ಟ್ ನ ಮತ್ತೊಬ್ಬ ಹೊಸ ಸದಸ್ಯ ಮಹೇಶ್ ಭಾಗಚಂದ್ಕಾ ಅವರು ವಿಎಚ್‌ಪಿಯ ದಿವಂಗತ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಸಂಬಂಧಿಯಾಗಿದ್ದು, ಪ್ರಸ್ತುತ 'ಅಶೋಕ್ ಸಿಂಘಾಲ್ ಫೌಂಡೇಶನ್' ಅನ್ನು ನಡೆಸುತ್ತಿದ್ದಾರೆ. ಅವರಿಗೆ ದೇವಾಲಯದ ಹೊಸ ಖಜಾಂಚಿಯ ಜವಾಬ್ದಾರಿಯನ್ನು ನೀಡಲಾಗಿದೆ. ಭಾಗಚಂದ್ಕಾ ಅವರು ದೀರ್ಘಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ಅವರು 2020ರ ರಾಮಮಂದಿರ ಭೂಮಿ ಪೂಜೆಯ ಸಂದರ್ಭದಲ್ಲಿ ಮುಖ್ಯ 'ಯಜಮಾನ'ರಾಗಿದ್ದರು (ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸುವ ವ್ಯಕ್ತಿ) ಮತ್ತು ತಮ್ಮ ಕುಟುಂಬದೊಂದಿಗೆ 2024ರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲೂ ಭಾಗವಹಿಸಿದ್ದರು.
ಮೂರನೇ ಹೊಸ ಸದಸ್ಯರಾದ ಮದನ್ ಮೋಹನ್ ಪಾಂಡೆ ಅವರು ಅಯೋಧ್ಯೆಯ ಹಿರಿಯ ವಕೀಲರಾಗಿದ್ದು, ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಕಾನೂನು ಹೋರಾಟದಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು.
ಪಾಂಡೆ ಅವರು ಸುದೀರ್ಘ ಕಾನೂನು ಪ್ರಕ್ರಿಯೆಯಲ್ಲಿ 'ರಾಮ್ ಲಲ್ಲಾ' ಪರವಾಗಿ ವಾದ ಮಂಡಿಸಿದ್ದರು. ಅವರ ಕಾನೂನು ಸೇವೆಯನ್ನು ಗುರುತಿಸಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರನ್ನು ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಗಿತ್ತು.
ದೇಣಿಗೆ ವಿವಾದದ ನಂತರದ ಬದಲಾವಣೆಗಳು
ರಾಮಮಂದಿರದಲ್ಲಿ ದೇಣಿಗೆಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದದ ಬೆನ್ನಲ್ಲೇ ಈ ಹೊಸ ನೇಮಕಾತಿಗಳು ನಡೆದಿವೆ.
ವಿವಾದದ ಕಾರಣದಿಂದ ಚಂಪತ್ ರಾಯ್ ಅವರನ್ನು ತೆಗೆದುಹಾಕಿದ ನಂತರ, ಕೃಷ್ಣ ಮೋಹನ್ ರಾಯ್ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈಗ ಟ್ರಸ್ಟ್ ತನ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರನ್ನು ಕಾಯಂ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ ಈ ಹಂಗಾಮಿ ವ್ಯವಸ್ಥೆಯನ್ನು ಬದಲಾಯಿಸಿದೆ.
ಅದೇ ಸಮಯದಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ಟ್ರಸ್ಟ್‌ನ ವಿಶ್ವಾಸಾರ್ಹತೆಯ ಕುರಿತು ಹಲವು ಪ್ರಶ್ನೆಗಳು ವ್ಯಕ್ತವಾದ ನಂತರ, ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ದೇವಾಲಯದ ಮೊದಲ ಸಿಇಒ ಆಗಿ ನೇಮಿಸಿರುವುದು ಅದರ ಆಡಳಿತಾತ್ಮಕ ರಚನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಇನ್ನೊಂದೆಡೆ, ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಟ್ರಸ್ಟ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ, ದೇವಾಲಯ ನಿರ್ವಹಣೆಯ ಪ್ರಮುಖ ಭಾಗವನ್ನು ನೋಡಿಕೊಳ್ಳುತ್ತಿದ್ದ ಟ್ರಸ್ಟಿ ಅನಿಲ್ ಮಿಶ್ರಾ ಅವರ ವಿರುದ್ಧದ ತನಿಖೆ ಮುಂದುವರಿಯಲಿದೆ.