170ಕ್ಕೂ ಹೆಚ್ಚು ಜನರಿಗೆ ಗಾಯ, 5 FIR ಗಳು: CJP – ಸರಕಾರದ ನಡುವಿನ ಸಂಘರ್ಷದಲ್ಲಿ ಏನೇನಾಯ್ತು?

Update: 2026-07-21 15:45 IST

Photo Credit : PTI 

170ಕ್ಕೂ ಹೆಚ್ಚು ಜನರಿಗೆ ಗಾಯ, 5 FIR ಗಳು: CJP – ಸರಕಾರದ ನಡುವಿನ ಸಂಘರ್ಷದಲ್ಲಿ ಏನೇನಾಯ್ತು?

ದಿಲ್ಲಿಯಲ್ಲಿ ಸಂಸತ್ ಭವನತ್ತ ಮಾರ್ಚ್ ನಡೆಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ನಂತರವೂ, ಮಧ್ಯರಾತ್ರಿಯಲ್ಲೂ ಜಂತರ್ ಮಂತರ್ನಲ್ಲಿ ಅಪಾರ ಸಂಖ್ಯೆಯ ಜನರು ನೆರೆದು ಕೇಂದ್ರ ಸರಕಾರ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿದ್ದಂತೆ, ರಾಜಧಾನಿಯಲ್ಲಿ ಮಂಗಳವಾರವೂ ಬಿಗಿ ಭದ್ರತೆ ಮುಂದುವರಿದಿತ್ತು. 'ಸಂಸದ್ ಚಲೋ' ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿ 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

CJPಯ ನಿಲುವೇನು?

ಪೊಲೀಸರು ಮತ್ತೆ ಯುವಕರ ಮೇಲೆ ಹಲ್ಲೆ ನಡೆಸಬಹುದು ಎಂಬ ಕಾರಣದಿಂದ ಇನ್ನು ಮುಂದೆ ಮೆರವಣಿಗೆ ನಡೆಸುವುದಿಲ್ಲ ಎಂದು CJP ಸಂಸ್ಥಾಪಕ ಅಭೀಜಿತ್ ದೀಪ್ಕೆ ಘೋಷಿಸಿದ್ದಾರೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ, ಹೋರಾಟವನ್ನು ಮುಂದುವರಿಸುವುದಾಗಿ ಭರವಸೆ ನೀಡಿರುವ ಅವರು, "20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವುಗಳಿಗೆ ಕಾರಣರಾಗಿರುವ ಒಬ್ಬ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು, ಸರಕಾರವು ಇನ್ನೂ ಹೆಚ್ಚಿನ ಯುವ ವಿದ್ಯಾರ್ಥಿಗಳ ರಕ್ತ ಹರಿಸಲು ಸಿದ್ಧವಾಗಿತ್ತು... ನಾವು ನಿಮಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು 'ಎಕ್ಸ್' ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ನಮ್ಮ ಎಲ್ಲ ಬೆಂಬಲಿಗರಲ್ಲಿ, ವಿಶೇಷವಾಗಿ ಪುರುಷ ಪೊಲೀಸ್ ಅಧಿಕಾರಿಗಳಿಂದ ಕ್ರೂರವಾಗಿ ಹಲ್ಲೆಗೊಳಗಾದ ಯುವತಿಯರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ.

ನಾವು ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬೇಕಿತ್ತು. ದಿಲ್ಲಿ ಪೊಲೀಸರ ಅಮಾನವೀಯ ಕೃತ್ಯಗಳಿಂದ ನಿಮ್ಮನ್ನು ರಕ್ಷಿಸಲು ನಾನು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಿತ್ತು" ಎಂದು ದೀಪ್ಕೆ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ CJP, ಸರಕಾರವು ಸಂಪೂರ್ಣವಾಗಿ ತನಗೆ ತಾನೇ "ನಾಚಿಕೆಗೇಡು" ಮಾಡಿಕೊಂಡಿದೆ ಎಂದು ಹೇಳಿದೆ. "ಅವರಿಗೆ ಇಷ್ಟವಿದ್ದರೆ ರಾಜೀನಾಮೆ ಎಂದೋ ಆಗುತ್ತಿತ್ತು. ಆದರೆ ಬಿಜೆಪಿ ನಾಯಕರೆಲ್ಲರೂ ಅಹಂಕಾರದಲ್ಲಿದ್ದಾರೆ" ಎಂದು ಸಂಘಟನೆ ದೂರಿದೆ.

►ಪೊಲೀಸರಿಂದ ಸಿಕ್ಕಿರುವ ಇತ್ತೀಚಿನ ಮಾಹಿತಿ ಏನು?

ಈ ಹಿಂಸಾಚಾರವು ನಗರದ ಶಾಂತಿ ಭಂಗಗೊಳಿಸುವ ದೊಡ್ಡ ಸಂಚಿನ ಭಾಗವೇ ಎಂಬುದನ್ನು ತಿಳಿಯಲು ದಿಲ್ಲಿ ಪೊಲೀಸರು ಐದು FIR ಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಂಗೆ, ಸರಕಾರಿ ಮತ್ತು ಖಾಸಗಿ ಆಸ್ತಿಗೆ ಹಾನಿ ಹಾಗೂ ಕರ್ತವ್ಯನಿರತ ಸರಕಾರಿ ನೌಕರರ ಮೇಲೆ ಹಲ್ಲೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್, ಬಾರಾಖಂಬಾ ಮತ್ತು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗಳಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ FIR ಗಳನ್ನು ದಾಖಲಿಸಲಾಗಿದೆ.

ಹಿಂಸಾಚಾರ ಮತ್ತು ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಯಲ್ಲಿ ಭಾಗವಹಿಸಿದವರನ್ನು ಗುರುತಿಸಲು ತನಿಖಾ ತಂಡವು ಮುಖ ಗುರುತಿಸುವ ತಂತ್ರಜ್ಞಾನ (Facial Recognition) ಹೊಂದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. "ತನಿಖೆಯ ಭಾಗವಾಗಿ ನಾವು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು ಮತ್ತು ಮೊಬೈಲ್ ಫೋನ್ ರೆಕಾರ್ಡಿಂಗ್ಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಭಟನಾಕಾರರು 15ರಿಂದ 20 ಸರಕಾರಿ ವಾಹನಗಳು ಹಾಗೂ ಇತರ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ ಮೂಲಕ ಸಾರ್ವಜನಿಕ ಆಸ್ತಿಗೆ ಅಪಾರ ನಷ್ಟ ಉಂಟುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 70 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

►CJP ಜೊತೆಗಿನ ಮಾತುಕತೆ ಕುರಿತು ನಡ್ಡಾ ಹೇಳಿದ್ದೇನು?

ಈ ನಡುವೆ, CJP ಜೊತೆಗಿನ ಮಾತುಕತೆ "ಚೆನ್ನಾಗಿ ನಡೆಯಿತು" ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.

NDA ಸಂಸದೀಯ ಪಕ್ಷದ 'ಮಂಗಳ ಮಿಲನ' ಸಭೆಗೆ ಆಗಮಿಸಿದ ನಡ್ಡಾ, ಸೋಮವಾರದ ಸಭೆಯ ಕುರಿತು ಪ್ರತಿಕ್ರಿಯಿಸಿ, "ಎಲ್ಲವೂ ಚೆನ್ನಾಗಿಯೇ ಇತ್ತು, ಯಾವಾಗಲೂ ಚೆನ್ನಾಗಿಯೇ ಇರುತ್ತದೆ" ಎಂದು ಉತ್ತರಿಸಿದ್ದಾರೆ.

NEET UG 2026ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಾ ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ನಡೆಸುತ್ತಿದ್ದಾಗ, ಸೋಮವಾರ ಜೆ.ಪಿ. ನಡ್ಡಾ ಅವರು ತಮ್ಮ ನಿವಾಸದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮತ್ತು ಮುಖ್ಯ ವಕ್ತಾರ ಸೌರವ್ ದಾಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅದಕ್ಕೂ ಮುನ್ನ, ಮಾತುಕತೆ ನಡೆಸುವ ಪ್ರಸ್ತಾಪ ಸೋಮವಾರ ಬೆಳಿಗ್ಗೆ ಮೊದಲ ಬಾರಿಗೆ ಪ್ರತಿಭಟನಾಕಾರರಿಂದಲೇ ಬಂತು ಎಂದು ನಡ್ಡಾ ಹೇಳಿದ್ದರು.

"ಇಂದು ಬೆಳಿಗ್ಗೆ, ಸರಕಾರದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾಪ ಮೊದಲ ಬಾರಿಗೆ ಪ್ರತಿಭಟನಾಕಾರರಿಂದ ಬಂತು. ಬೆಳಿಗ್ಗೆ 11:50ರಿಂದ ನಮ್ಮ ಚರ್ಚೆಗಳು ನಡೆಯುತ್ತಿವೆ. ಸೌಹಾರ್ದಯುತ ವಾತಾವರಣದಲ್ಲಿ ಸಭೆ ನಡೆದಿದ್ದು, ಅವರ ನಿಯೋಗದೊಂದಿಗೆ ವಿವರವಾದ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ. ಸಂಜೆ 4 ಗಂಟೆಯ ಸುಮಾರಿಗೆ ಅವರು ನನಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಕೊನೆಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಆಡಳಿತಕ್ಕೆ ಸಹಕರಿಸಬೇಕು ಎಂದು ನಾನು ವಿನಂತಿಸಿದ್ದೇನೆ" ಎಂದು ನಡ್ಡಾ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಭೆಯ ಸಮಯದಲ್ಲಿ, ಅವರ ಬೇಡಿಕೆಗಳ ಕುರಿತು ಆಂತರಿಕ ಚರ್ಚೆ ನಡೆಸುವುದಾಗಿ ಸರಕಾರದ ನಾಯಕತ್ವ ಭರವಸೆ ನೀಡಿದೆ.

►ವಿಪಕ್ಷಗಳು ಹೇಳುವುದೇನು?

ಮಾತುಕತೆಯ ಪ್ರಸ್ತಾಪವು ಪ್ರತಿಭಟನಾಕಾರರಿಂದಲೇ ಬಂದಿದೆ ಎಂಬ ನಡ್ಡಾ ಅವರ ಹೇಳಿಕೆಯನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಟೀಕಿಸಿದ್ದಾರೆ. "ಉಪವಾಸ ಕುಳಿತಿರುವ ನಮ್ಮ ಮಕ್ಕಳ ಬೇಡಿಕೆಗಳು" ಎಲ್ಲರಿಗೂ ತಿಳಿದಿರುವಾಗ, ಅವರ ಮೇಲೆ ಅಶ್ರುವಾಯು ಸಿಂಪಡಿಸಲು ಮತ್ತು ಲಾಠಿಚಾರ್ಜ್ ಮಾಡಲು ಸರಕಾರ ಕಾಯುತ್ತಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸೋಮವಾರ CJP ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಈ ಕೃತ್ಯವನ್ನು "ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು" ಎಂದು ಬಣ್ಣಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ, ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇಲ್ಲಿ ನಡೆಯುತ್ತಿರುವುದು, ಅಂದರೆ ಜನರ ಮೇಲೆ ಹಲ್ಲೆ ಮಾಡುತ್ತಿರುವುದು ಸಂಪೂರ್ಣವಾಗಿ ಭಾರತೀಯ ಪದ್ಧತಿಗೆ ವಿರುದ್ಧವಾದದ್ದು. ನಿನ್ನೆ ನಡೆದ ಘಟನೆಗೆ ಮೋದಿ ಕ್ಷಮೆಯನ್ನೂ ಕೇಳಿಲ್ಲ" ಎಂದಿದ್ದಾರೆ.

ಲಾಠಿಚಾರ್ಜ್ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಇತರ ವಿಪಕ್ಷ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಆದರೆ, ಚರ್ಚೆಗೆ ತಕ್ಷಣವೇ ಒಪ್ಪದ ಸ್ಪೀಕರ್, ತಾವು ಮೊದಲು ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ಹೇಳಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

"ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರಕಾರದ ಅನುಮತಿ ಪಡೆಯಬೇಕು ಎಂದು ಸ್ಪೀಕರ್ ನಮಗೆ ಹೇಳುತ್ತಿರುವುದನ್ನು ಒಮ್ಮೆ ಆಲೋಚಿಸಿ. ಅವರು ಬಹಿರಂಗವಾಗಿಯೇ ಈ ಮಾತನ್ನು ಹೇಳುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಭಾರತದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಎತ್ತುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಈ ಕಳವಳಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗಿಲ್ಲ, ಅದಕ್ಕಿಂತ ದೊಡ್ಡದಾಗಿವೆ. ದೇಶದ ಪರೀಕ್ಷಾ ವ್ಯವಸ್ಥೆಯು "ಅಸ್ತಿತ್ವವನ್ನೇ ಕಳೆದುಕೊಂಡಿದೆ" ಮತ್ತು "ಗೆದ್ದಲು ಹಿಡಿದು ಟೊಳ್ಳಾಗಿದೆ" ಎಂದು ಹೇಳಿದ ಅವರು, ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ ಎಂದಿದ್ದಾರೆ. "ಇದರಲ್ಲಿ ಯಾವುದೇ ತಪ್ಪಿಲ್ಲ... ಪ್ರಧಾನಿಯವರು ಯಾಕೆ ಮೌನವಾಗಿದ್ದಾರೆ? ಕಾರಣವೇನು? ಅವರು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು ಮತ್ತು ಈ ಅನಾಹುತವನ್ನು (ಲಾಠಿಚಾರ್ಜ್) ತಕ್ಷಣವೇ ನಿಲ್ಲಿಸಬೇಕು" ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷರು, ವಿದ್ಯಾರ್ಥಿಗಳ ಕಳವಳಗಳನ್ನು ಆಲಿಸಿ ಶಿಕ್ಷಣ ವ್ಯವಸ್ಥೆ ಹಾಗೂ ಪರೀಕ್ಷಾ ಚೌಕಟ್ಟನ್ನು ಸರಿಪಡಿಸುವ ಬದಲು, ಪೊಲೀಸರ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದ ರಾಹುಲ್, "ಗೃಹ ಸಚಿವರು ಪ್ರಧಾನಿಗೆ ವರದಿ ಮಾಡುವುದರಿಂದ ಪ್ರಧಾನಿಯವರೂ ಸಹ ಹುದ್ದೆಯಿಂದ ಕೆಳಗಿಳಿಯಬೇಕು. ಧರ್ಮೇಂದ್ರ ಪ್ರಧಾನ್ ಕೇವಲ ಮಧ್ಯವರ್ತಿ, ಅವರು ಖಂಡಿತವಾಗಿಯೂ ರಾಜೀನಾಮೆ ನೀಡಬೇಕು. ಆದರೆ ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಲ್ಲ, ಗೃಹ ಸಚಿವರು ಮಾಡಿದ್ದಾರೆ. ಹೀಗಾಗಿ ಗೃಹ ಸಚಿವರು ರಾಜೀನಾಮೆ ನೀಡಬೇಕು. ಗೃಹ ಸಚಿವರು ಪ್ರಧಾನಿಗೆ ವರದಿ ಮಾಡುವುದರಿಂದ ಪ್ರಧಾನಿಯವರೂ ರಾಜೀನಾಮೆ ನೀಡಬೇಕು. ದೇಶದಲ್ಲಿ ಏನು ನಡೆಯುತ್ತಿದೆ?" ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರ ಮಾತನ್ನೇ ಪುನರುಚ್ಚರಿಸಿದ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಸರಕಾರ ತನ್ನ "ಖಾಸಗಿ ಸೈನ್ಯ"ವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದು, ಮೋದಿ ನೇತೃತ್ವದ NDA ಸರಕಾರವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದರು. "ಸರಕಾರ ನಿನ್ನೆ ವಿದ್ಯಾರ್ಥಿಗಳ ವಿರುದ್ಧ ಖಾಸಗಿ ಸೈನ್ಯವನ್ನು ಬಳಸಿದೆ. ಹಿಟ್ಲರ್ ತನ್ನ ಸ್ವಂತ ಜನರ ವಿರುದ್ಧ ಖಾಸಗಿ ಸೈನ್ಯವನ್ನು ಬಳಸುತ್ತಿದ್ದ. ಅದೇ ರೀತಿ ಈ ಸರಕಾರವೂ ವಿದ್ಯಾರ್ಥಿಗಳನ್ನು ಹತೋಟಿಯಲ್ಲಿಡಲು ಖಾಸಗಿ ಸೈನ್ಯವನ್ನು ಬಳಸಿದೆ" ಎಂದು ಅವರು ಆರೋಪಿಸಿದರು.

ತಮ್ಮ ಸಚಿವರು "ತಮ್ಮ ರಹಸ್ಯಗಳನ್ನು ಹೊರಹಾಕುತ್ತಾರೆ" ಎಂಬ ಭಯದಿಂದ ಕೇಂದ್ರ ಸರಕಾರಕ್ಕೆ ಅವರನ್ನು ವಜಾಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಯಾದವ್ ಹೇಳಿದರು.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಾಮಾನ್ಯ ಸಂಗತಿಯಾಗಿದೆ. ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದರು.

"ನಾನು ಉತ್ತರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆಯುತ್ತಿದ್ದವು. ಒಬ್ಬಿಬ್ಬರು ಕೆಳಹಂತದ ಅಧಿಕಾರಿಗಳನ್ನು ಬಂಧಿಸಿ, ಎರಡು ದಿನ ಪೊಲೀಸ್ ಠಾಣೆಯಲ್ಲಿಟ್ಟು ನಂತರ ವಿಷಯವನ್ನು ಅಲ್ಲಿಗೇ ಮುಗಿಸಲಾಗುತ್ತಿತ್ತು. ಯಾರ ವಿರುದ್ಧವೂ ಸೂಕ್ತ ಕ್ರಮ ಜರುಗುತ್ತಿರಲಿಲ್ಲ.

ಈ ವಿಚಾರವು ದೇಶದ ಯುವಕರ ಭವಿಷ್ಯಕ್ಕೆ ಸಂಬಂಧಿಸಿದ್ದರಿಂದ ಅತ್ಯಂತ ಗಂಭೀರವಾಗಿದೆ. ತಮ್ಮ ಭವಿಷ್ಯ ಏನಾಗುವುದೋ ಎಂದು ಯುವಕರು ಆತಂಕದಲ್ಲಿದ್ದಾರೆ. ಹೆತ್ತವರು ಸಾಲ ಮಾಡಿ, ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ತಾವೆಷ್ಟು ಕಷ್ಟಪಡುತ್ತಿದ್ದೇವೆ ಮತ್ತು ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂದು ವಿದ್ಯಾರ್ಥಿಗಳೇ ಹೇಳುತ್ತಿದ್ದಾರೆ. ಕೋಚಿಂಗ್ ಸೆಂಟರ್ಗಳನ್ನು ನೋಡಿ, ನಾನು ಹಲವು ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳು ವ್ಯಾಸಂಗ ಮಾಡುವಾಗ ಅನುಭವಿಸುವ ಒತ್ತಡ ಮತ್ತು ಪರೀಕ್ಷೆಯ ಸಮಯದಲ್ಲಿ ಎದುರಿಸುವ ಆತಂಕ ಹಾಗೂ ಮಾನಸಿಕ ಕಿರುಕುಳ ಪ್ರತಿಯೊಬ್ಬ ಪೋಷಕರಿಗೂ ತಿಳಿದಿದೆ. ಇದು ನಿಜಕ್ಕೂ ಸವಾಲಿನ ಪರಿಸ್ಥಿತಿ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಎಷ್ಟು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ?

ಬೆಳಿಗ್ಗೆ ಆರಂಭವಾದ ಮೆರವಣಿಗೆಗೆ ಹಲವು ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು. ದಿನವಿಡೀ ಪ್ರತಿಭಟನಾಕಾರರ ಸಂಖ್ಯೆ 12,000ರಿಂದ 50,000ಕ್ಕೆ ಏರಿಕೆಯಾಗುತ್ತಿದ್ದಂತೆ, ವಾಯುವ್ಯದ ಕನ್ನಾಟ್ ಪ್ಲೇಸ್ ಬಳಿಯ ಗೋಲ್ ಡಾಕ್ ಖಾನಾದಿಂದ ಜಂತರ್ ಮಂತರ್ ಮೂಲಕ ಆಗ್ನೇಯದ ಇಂಡಿಯಾ ಗೇಟ್ ವರೆಗೆ ಹರಡಿದ್ದ ಪ್ರತಿಭಟನಾ ಸ್ಥಳಗಳಲ್ಲಿ ಅಶ್ರುವಾಯು ಮತ್ತು ಲಾಠಿಚಾರ್ಜ್ ಬಳಸಲಾಯಿತು. ಸೋಮವಾರ ಸಂಜೆ 5.30ರ ವೇಳೆಗೆ, 90 ಪ್ರತಿಭಟನಾಕಾರರು ಹಾಗೂ 10 ಪೊಲೀಸರು ಸೇರಿದಂತೆ 100ಕ್ಕೂ ಹೆಚ್ಚು ಜನರಿಗೆ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. RML ಆಸ್ಪತ್ರೆಯ ತುರ್ತು ವಿಭಾಗವು ರೋಗಿಗಳಿಂದ ಭರ್ತಿಯಾದ ನಂತರ, ಇನ್ನೂ ಹಲವರನ್ನು ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

►ಪೊಲೀಸರ ಆರೋಪವೇನು?

ಸೋಮವಾರ ಪ್ರತಿಭಟನಾಕಾರರು "ಕಲ್ಲುಗಳು ಮತ್ತು ಇತರ ವಸ್ತುಗಳಿಂದ" ದಾಳಿ ನಡೆಸಿ "ಬೃಹತ್ ಮಟ್ಟದ ಹಿಂಸಾಚಾರ" ನಡೆಸಿದ್ದರಿಂದ, ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ "118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ" ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. "ಈ ಘರ್ಷಣೆಯ ಸಮಯದಲ್ಲಿ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ" ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಪ್ರತಿಭಟನಾಕಾರರು ಉಗ್ರ ಮತ್ತು ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸಿದರು. ಪೊಲೀಸರು ನೀಡಿದ ಪದೇಪದೇ ಎಚ್ಚರಿಕೆಗಳು ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಲೆಕ್ಕಿಸದೆ, ಅವರು ಚದುರಿಹೋಗಲು ನಿರಾಕರಿಸಿದರು ಹಾಗೂ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದರು. ಪ್ರತಿಭಟನಾಕಾರರು ಕಲ್ಲುಗಳು ಮತ್ತು ಇತರ ವಸ್ತುಗಳಿಂದ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದರು, ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದರು, ಪೊಲೀಸ್ ಮತ್ತು ಇತರ ಸರಕಾರಿ ವಾಹನಗಳನ್ನು ಧ್ವಂಸಗೊಳಿಸಿದರು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರು. ಬೃಹತ್ ಮಟ್ಟದ ಹಿಂಸಾಚಾರಕ್ಕೆ ಇಳಿಯುವ ಮೂಲಕ ಸಾರ್ವಜನಿಕ ಶಾಂತಿ, ಭದ್ರತಾ ವ್ಯವಸ್ಥೆ ಮತ್ತು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಸುರಕ್ಷತೆಗೆ ಗಂಭೀರ ಬೆದರಿಕೆ ಒಡ್ಡಿದರು" ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News