ಅನ್ನವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡುವುದು ಸುರಕ್ಷಿತವೆ?
ಸಾಂದರ್ಭಿಕ ಚಿತ್ರ | Photo Credit : magnific
ಅನ್ನವನ್ನು ಒಂದಕ್ಕಿಂತ ಹೆಚ್ಚು ಬಾರಿ ಮತ್ತೆ ಬಿಸಿ ಮಾಡುವುದು ಸುರಕ್ಷಿತವೆ? ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಅಪಾಯ, ಉಳಿದ ಅನ್ನವನ್ನು ಹೇಗೆ ಸಂಗ್ರಹಿಸಬೇಕು ಮತ್ತು ಅದನ್ನು ಮತ್ತೆ ಬಿಸಿ ಮಾಡಲು ಅತ್ಯಂತ ಸುರಕ್ಷಿತ ವಿಧಾನ ಯಾವುದು ಎಂಬುದರ ಕುರಿತು ಆಹಾರ ತಜ್ಞರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಳಿದ ಅನ್ನದಿಂದ ಹೊಸ ಖಾದ್ಯ ಮಾಡುವುದು ಅಥವಾ ಮತ್ತೆ ಅದನ್ನು ಬಿಸಿ ಮಾಡಿ ತಿನ್ನುವುದು ಸಾಮಾನ್ಯ. ಆದರೆ ಹೀಗೆ ಮಾಡುವುದು ಸರಿಯೆ? ಊಟದ ನಡುವಿನ ಅವಧಿಯಲ್ಲಿ ಅನ್ನವನ್ನು ಹೇಗೆ ತಂಪಾಗಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂಬುದನ್ನು ಪರಿಗಣಿಸುವುದು ಕೂಡ ಅಷ್ಟೇ ಮುಖ್ಯ.
ಕೋಲ್ಕತ್ತಾದ ಮುಕುಂದಪುರದ ನಾರಾಯಣ ಆರ್ಎನ್ ಟ್ಯಾಗೋರ್ ಆಸ್ಪತ್ರೆಯ ಆಹಾರ ತಜ್ಞೆ ದೀಪಾ ಮಿಶ್ರಾ ಪ್ರಕಾರ, ಅನ್ನವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡುವುದನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ವಿಶೇಷವಾಗಿ ಊಟದ ನಡುವಿನ ಅವಧಿಯಲ್ಲಿ ಅದನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದರೆ ಬಿಸಿ ಮಾಡಿ ಸೇವಿಸಬಾರದು. “ಅನ್ನ ಬಿಸಿ ಮಾಡುವುದು ಮೂಲಭೂತವಾಗಿ ಅಪಾಯಕಾರಿಯಲ್ಲ. ಆದರೆ ಸರಿಯಾಗಿ ಸಂಗ್ರಹಿಸದೆ ಇಡುವುದು ಮತ್ತು ಪದೇಪದೆ ಕೋಣೆಯ ಉಷ್ಣಾಂಶಕ್ಕೆ ಒಡ್ಡಿಕೊಳ್ಳುವುದರಿಂದ ಆಹಾರ ವಿಷವಾಗುವ ಅಪಾಯ ಹೆಚ್ಚಾಗಬಹುದು” ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಪ್ರಮುಖ ಕಾಳಜಿಗಳಲ್ಲಿ ಒಂದೆಂದರೆ ‘ಬ್ಯಾಸಿಲಸ್ ಸೆರಿಯಸ್’ ಎಂಬ ಬ್ಯಾಕ್ಟೀರಿಯಾ. ಇದು ಸಾಮಾನ್ಯವಾಗಿ ಹಸಿ ಅಕ್ಕಿಯಲ್ಲಿ ಇರುತ್ತದೆ. “ಇದು ಹೀಟ್ ರೆಸಿಸ್ಟಂಟ್ ಸ್ಪೋರ್ಗಳನ್ನು (ಶಾಖ-ನಿರೋಧಕ ಬೀಜಕ) ಉತ್ಪಾದಿಸಬಲ್ಲದು. ಇವು ಅಡುಗೆಯ ನಂತರವೂ ಉಳಿದುಕೊಳ್ಳಬಹುದು. ಬೇಯಿಸಿದ ಅನ್ನವನ್ನು 4°C ಮತ್ತು 60°C ನಡುವಿನ ‘ಅಪಾಯಕಾರಿ ತಾಪಮಾನದ ವಲಯ’ದಲ್ಲಿ ದೀರ್ಘಕಾಲದವರೆಗೆ ಇಟ್ಟಾಗ, ಈ ಬೀಜಕಗಳು ವೃದ್ಧಿಯಾಗಿ ವಿಷಕಾರಿ ಅಂಶಗಳನ್ನು ಉತ್ಪಾದಿಸಬಹುದು. ಅವು ಹೀಟ್ ಸ್ಟೇಬಲ್ (ಶಾಖ ಸ್ಥಿರ) ಆಗಿರುವ ಕಾರಣ ಅನ್ನವನ್ನು ಬಿಸಿ ಮಾಡಿದರೂ ನಾಶವಾಗದೆ ಇರಬಹುದು. ಹೀಗಾಗಿ ಸರಿಯಾಗಿ ಸಂಗ್ರಹಿಸದ ಅನ್ನವನ್ನು ಬಿಸಿ ಮಾಡಿದ ಮಾತ್ರಕ್ಕೆ ತಿನ್ನಲು ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ” ಎನ್ನುತ್ತಾರೆ ತಜ್ಞರು.
ಪದೇಪದೆ ಬಿಸಿ ಮಾಡುವುದರಿಂದ ಅನ್ನದ ಗುಣಮಟ್ಟ ಮತ್ತು ವಿನ್ಯಾಸದ ಮೇಲೂ ಪರಿಣಾಮವಾಗಬಹುದು ಮತ್ತು ತೇವಾಂಶ ಕಡಿಮೆಯಾಗಬಹುದು. ಅಂದರೆ, ಪಿಷ್ಟದ ರಚನೆ ಬದಲಿಸಿ, ಅನ್ನವನ್ನು ಒಣಗಿದಂತೆ, ಜಿಗುಟಾದಂತೆ, ಗಟ್ಟಿಯಾದಂತೆ ಅಥವಾ ಅಗಿಯಲು ಕಷ್ಟವಾಗುವಂತೆ ಮಾಡಬಹುದು.
ಅಷ್ಟಲ್ಲದೆ, “ಪದೇಪದೆ ಬಿಸಿ ಮಾಡುವುದರಿಂದ ಪೋಷಕಾಂಶಗಳ ನಷ್ಟವೂ ಉಂಟಾಗಬಹುದು. ಮುಖ್ಯವಾಗಿ, ಅನ್ನವನ್ನು ಸಮವಾಗಿ ಬಿಸಿ ಮಾಡದಿದ್ದರೆ ಕೆಲವು ಭಾಗಗಳು ಬ್ಯಾಕ್ಟೀರಿಯಾ ಬೆಳವಣಿಗೆಗೆ ಅನುಕೂಲಕರವಾದ ತಾಪಮಾನದಲ್ಲಿಯೇ ಉಳಿದುಕೊಳ್ಳಬಹುದು. ಇದರಿಂದ ಅದು ಹಾಳಾಗುವ ಅಪಾಯ ಹೆಚ್ಚಾಗುತ್ತದೆ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
►ಹಾಗಿದ್ದರೆ ಉತ್ತಮ ವಿಧಾನ ಯಾವುದು?
ತಿನ್ನಲು ಉದ್ದೇಶಿಸಿರುವ ಭಾಗವನ್ನು ಮಾತ್ರ ಹೊರತೆಗೆದು, ಉಳಿದ ಅನ್ನವನ್ನು ರೆಫ್ರಿಜರೇಟರ್ನಲ್ಲೇ ಇಡುವುದು ಉತ್ತಮ ವಿಧಾನವಾಗಿದೆ. “ಬೇಯಿಸಿದ ಅನ್ನವನ್ನು ದೀರ್ಘಕಾಲ ಕೋಣೆಯ ಉಷ್ಣಾಂಶದಲ್ಲಿ ಬಿಡುವ ಬದಲು ತಕ್ಷಣವೇ ತಂಪಾಗಿಸಿ ರೆಫ್ರಿಜರೇಟರ್ ನಲ್ಲಿ ಇಡಬೇಕು. ಅದನ್ನು ಮತ್ತೆ ತಿನ್ನಬೇಕಾದಾಗ, ಅಗತ್ಯವಿರುವಷ್ಟು ಭಾಗವನ್ನು ಮಾತ್ರ ಚೆನ್ನಾಗಿ ಬಿಸಿ ಮಾಡಿ ಮತ್ತು ಒಂದೇ ಬ್ಯಾಚ್ ನ ಅನ್ನವನ್ನು ಪದೇಪದೆ ಬಿಸಿ ಮಾಡುವುದನ್ನು ತಪ್ಪಿಸಿ” ಎಂದು ಅವರು ಸಲಹೆ ನೀಡಿದ್ದಾರೆ.