Photo Credit : thehindu

ಹೈದರಾಬಾದ್ ನಲ್ಲಿ ವಶಪಡಿಸಿಕೊಂಡ ಸೌಂದರ್ಯವರ್ಧಕಗಳನ್ನು ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯಿಂದ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸೌಂದರ್ಯವರ್ಧಕಗಳನ್ನು ಭಾರತ ನಿಷೇಧಿಸಿದ ವರ್ಷದ ನಂತರವೂ ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯ ವಿಶಾಲವಾದ ಪೂರೈಕೆ ಸರಪಳಿ ಜಾಲದ ಮೂಲಕ ಹೈದರಾಬಾದ್‌ ಗೆ ತಲುಪುತ್ತಿವೆ. ಚರ್ಮವನ್ನು ಬಿಳುಪುಗೊಳಿಸುವ ಕೆಲವು ಉತ್ಪನ್ನಗಳ ಬಗ್ಗೆ ಪ್ರತ್ಯೇಕ ಸಾರ್ವಜನಿಕ ಆರೋಗ್ಯ ಕಾಳಜಿಯ ಮಧ್ಯೆ ಈ ಬೆಳವಣಿಗೆ ಬಂದಿದೆ.

ಪರೀಕ್ಷೆಗಳಲ್ಲಿ ಹೆಚ್ಚಿನ ಮಟ್ಟದ ಭಾರ ಲೋಹಗಳು ಕಂಡುಬಂದ ನಂತರ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಪಾಕಿಸ್ತಾನ ನಿರ್ಮಿತ ಎರಡು ಕ್ರೀಮ್ ಗಳ ವಿರುದ್ಧ ಗ್ರಾಹಕರಿಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 8ರ CDSCO ಎಚ್ಚರಿಕೆಯಲ್ಲಿ ಹೆಸರಿಸಲಾದ ‘ಗೋರಿ ಬ್ಯೂಟಿ ಕ್ರೀಮ್’ ಮತ್ತು ‘ಚಾಂದನಿ ವೈಟನಿಂಗ್ ಕ್ರೀಮ್’ ಎರಡೂ ಈ ವಾರ ಹೈದರಾಬಾದ್ ನ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಕಂಡುಬಂದ ಉತ್ಪನ್ನಗಳಲ್ಲಿ ಸೇರಿವೆ.

ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯ ಪ್ರಕಾರ, ಹೈದರಾಬಾದ್ ನಲ್ಲಿ ವಶಪಡಿಸಿಕೊಂಡ ಸೌಂದರ್ಯವರ್ಧಕಗಳನ್ನು ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯಿಂದ ತರಲಾಗುತ್ತಿದೆ. ತನಿಖಾಧಿಕಾರಿಗಳು ಈಗ ಉತ್ಪನ್ನಗಳು ಭಾರತಕ್ಕೆ ಹೇಗೆ ಪ್ರವೇಶಿಸಿದವು ಮತ್ತು ಅವುಗಳ ಆಮದಿನ ಮೇಲಿನ ನಿರ್ಬಂಧಗಳ ಹೊರತಾಗಿಯೂ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗೆ ಹೇಗೆ ತಲುಪಿದವು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

2025ರಿಂದ ಪಾಕಿಸ್ತಾನದಲ್ಲಿ ತಯಾರಾಗುವ ಅಥವಾ ರಫ್ತು ಮಾಡುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ಭಾರತ ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯನ್ನು ಉಲ್ಲೇಖಿಸಿ ವಿದೇಶಿ ವ್ಯಾಪಾರ ನಿರ್ದೇಶನಾಲಯವು ಅಧಿಸೂಚನೆಯ ಮೂಲಕ ನಿರ್ಬಂಧವನ್ನು ವಿಧಿಸಿತು. ನಿಷೇಧವು ಪರೋಕ್ಷವಾಗಿ ಭಾರತಕ್ಕೆ ಪ್ರವೇಶಿಸುವ ಸರಕುಗಳಿಗೂ ವಿಸ್ತರಿಸುತ್ತದೆ. ಅಂದರೆ, ಪಾಕಿಸ್ತಾನದ ಮೂಲದ ಉತ್ಪನ್ನಗಳನ್ನು ಮತ್ತೊಂದು ದೇಶದ ಮೂಲಕ ಸಾಗಿಸುವುದರಿಂದ ಅವುಗಳ ಆಮದನ್ನು ಅನುಮತಿಸಲಾಗುವುದಿಲ್ಲ.

ಭಾರತಕ್ಕೆ ಆಮದು ಮಾಡಿಕೊಳ್ಳುವ ಸೌಂದರ್ಯವರ್ಧಕಗಳನ್ನು ಹೆಚ್ಚುವರಿಯಾಗಿ ಕಾಸ್ಮೆಟಿಕ್ಸ್ ನಿಯಮಗಳು, 2020ರಿಂದ ನಿಯಂತ್ರಿಸಲಾಗುತ್ತದೆ. ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೊದಲು ಕೇಂದ್ರ ಪರವಾನಗಿ ಪ್ರಾಧಿಕಾರದಲ್ಲಿ ನೋಂದಾಯಿಸಬೇಕು ಮತ್ತು ನಿಗದಿತ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಇದೀಗ, ಹೈದರಾಬಾದ್ ನಲ್ಲಿ ವಶಪಡಿಸಿಕೊಳ್ಳುವ ಮೊದಲೇ CDSCO ಪರಿಶೀಲನೆ ತೀವ್ರಗೊಳಿಸಿತ್ತು. ಜುಲೈನಲ್ಲಿ ಮಾನ್ಯವಾದ ಆಮದು ನೋಂದಣಿ ಪ್ರಮಾಣಪತ್ರಗಳಿಲ್ಲದೆ ದೇಶೀಯ ಮಾರುಕಟ್ಟೆಗಳಲ್ಲಿ ಆಮದು ಮಾಡಿಕೊಂಡ ಸೌಂದರ್ಯವರ್ಧಕಗಳನ್ನು ಮಾರಿದ ನಿದರ್ಶನಗಳ ನಂತರ ಕಣ್ಗಾವಲು ಹೆಚ್ಚಿಸಿತ್ತು. ತನ್ನ ವಲಯ ಕಚೇರಿ, ರಾಜ್ಯ ಪರವಾನಗಿ ಅಧಿಕಾರಿಗಳು ಮತ್ತು ಬಂದರುಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಸೆಪ್ಟೆಂಬರ್ 8ರಂದು ಆರೋಗ್ಯ ನಿಯಂತ್ರಕವು ಇದನ್ನು ಅನುಸರಿಸಿ ಹೆಚ್ಚು ಸ್ಪಷ್ಟವಾದ ಎಚ್ಚರಿಕೆ ನೀಡಿತ್ತು. ಗೋರಿ ಬ್ಯೂಟಿ ಕ್ರೀಮ್ ಮತ್ತು ಚಾಂದನಿ ವೈಟನಿಂಗ್ ಕ್ರೀಮ್ ಗಳನ್ನು ಪರೀಕ್ಷಿಸಿದ ನಂತರ, ಆಮದು ಮಾಡಿಕೊಳ್ಳಲು ಎರಡಕ್ಕೂ ನೋಂದಣಿ ಪ್ರಮಾಣಪತ್ರ ನೀಡಲಾಗಿಲ್ಲ ಮತ್ತು ಉತ್ಪನ್ನಗಳಲ್ಲಿ ನಿರ್ದಿಷ್ಟ ಮಿತಿಗಳನ್ನು ಮೀರಿದ ಭಾರ ಲೋಹಗಳಿವೆ ಎಂದು ತಿಳಿಸಿತ್ತು. ಇದು ವಿಷಕಾರಿ ಪರಿಣಾಮಗಳು ಸೇರಿದಂತೆ ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು ಎಂದು ಹೇಳಿದೆ. ಗ್ರಾಹಕರಿಗೂ ಅವುಗಳನ್ನು ಖರೀದಿಸಬಾರದು ಮತ್ತು ಬಳಸಬಾರದು ಎಂದು ಸೂಚಿಸಲಾಗಿದೆ.

ಮತ್ತೊಂದು ತನಿಖೆಯ ಪ್ರಕಾರ, ಯುನೈಟೆಡ್ ಕಿಂಗ್ಡಂನಿಂದ ಬಂದ ಮುಲಾಮನ್ನು ಸೌಂದರ್ಯವರ್ಧಕ ಉತ್ಪನ್ನಗಳೊಂದಿಗೆ ಬೆರೆಸಲಾಗುತ್ತಿದೆ ಮತ್ತು ಚರ್ಮಕ್ಕೆ ಗೌರವರ್ಣ ತರುವ ಉದ್ದೇಶಕ್ಕಾಗಿ ಮಾರಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಉತ್ಪನ್ನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿವರಗಳಿಗಾಗಿ ಕಾಯಲಾಗುತ್ತಿದೆ. ಅಧಿಕಾರಿಗಳು ಸಂಭಾವ್ಯ ಕ್ಯಾನ್ಸರ್ಜನಕ ವಸ್ತುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ತನಿಖೆಯಲ್ಲಿ ಪೊಲೀಸರು ಮತ್ತು CDSCO ಜತೆಗೂಡಿ ಹಬೀಬ್ ನಗರ ಮತ್ತು ನಂಪಲ್ಲಿಯ ಬ್ಯೂಟಿ ಲೇಡೀಸ್ ಎಂಪೋರಿಯಂ, ಬ್ಯೂಟಿ ಕ್ವೀನ್ ಶಾಪ್ ಮತ್ತು ಎಸ್ಜೆ ಮೆಡಿಕಲ್ ಶಾಪ್ಗಳ ಮೇಲೆ ನಡೆಸಿದ ದಾಳಿಯ ನಂತರ ವಿವರ ದೊರೆತಿದೆ. ಈ ಪ್ರದೇಶಗಳಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಸ್ತಾನಿನಲ್ಲಿ ಪಾಕಿಸ್ತಾನದಲ್ಲಿ ತಯಾರಾದ ಚರ್ಮದ ಬಣ್ಣ ತಿಳಿಯಾಗಿಸುವ ಕ್ರೀಮ್ಗಳು, ಸಾಬೂನುಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳು ಸೇರಿದ್ದವು. ಇವುಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ಐವರನ್ನು ಗುರುತಿಸಲಾಗಿದೆ.

ಮುಂಬೈನಲ್ಲಿಯೇ ಜುಲೈ ತಿಂಗಳಲ್ಲಿ ನಡೆದ ದಾಳಿಯೊಂದರಲ್ಲಿ ಸುಮಾರು 12 ಲಕ್ಷ ರೂ. ಮೌಲ್ಯದ ಪಾಕಿಸ್ತಾನಿ ನಿರ್ಮಿತ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕ್ರಾಫರ್ಡ್ ಮಾರುಕಟ್ಟೆಯ ನಂಟಿನ ವಿಷಯವೂ ಬೆಳಕಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor