ದಿಲ್ಲಿ ಪ್ರತಿಭಟನೆ ವೇಳೆ ವಶಕ್ಕೆ ಪಡೆಯುವಾಗ ಪೊಲೀಸರಿಂದ ಲೈಂಗಿಕ ಕಿರುಕುಳ; ಸಂತ್ರಸ್ತ ಮಹಿಳೆಯರು ಹೇಳುವುದೇನು?
ವೈಷ್ಣವಿ ರಾಥೋರ್ ಮತ್ತು ನೋಲಿನಾ ಮಿಂಜ್ – scroll. in ವರದಿ
Pc: scroll.in
ಅಕ್ಟೋಬರ್ 10ರ ಮಧ್ಯಾಹ್ನದೊಳಗೆ ಜಂತರ್ ಮಂತರ್ ನಲ್ಲಿ ಒಟ್ಟುಗೂಡಲು ಪ್ರತಿಭಟನಾಕಾರರು ನಡೆಸಿದ ಎಲ್ಲ ಪ್ರಯತ್ನಗಳನ್ನು ದಿಲ್ಲಿ ಪೊಲೀಸರ ಬಿಗಿ ಬ್ಯಾರಿಕೇಡ್ ಗಳು ಮತ್ತು ನಿರ್ಬಂಧಗಳು ವಿಫಲಗೊಳಿಸಿದ್ದವು.
ಆಗ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಯೋಜನೆಯಲ್ಲಿ ಬದಲಾವಣೆ ಮಾಡಿರುವುದಾಗಿ ಪ್ರಕಟಿಸಿದರು. ‘ಇಂದಿನಿಂದ ದಿಲ್ಲಿ ಹಾಟ್ (Dilli Haat) ನಮ್ಮ ಜಂತರ್ ಮಂತರ್!’ ಎಂಬುದಾಗಿತ್ತು ಆ ಪೋಸ್ಟ್.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದಕ್ಷಿಣ ದಿಲ್ಲಿಯ ಮುಕ್ತ ಮಾರುಕಟ್ಟೆಯತ್ತ ಮೆರವಣಿಗೆ ಹೊರಟ ನೇಹಾ ಬೋರಾ ಅವರೊಂದಿಗೆ ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರು ಕೈಜೋಡಿಸಿದರು.
ಅವರು ಫ್ಲೈಓವರ್ ತಲುಪಿದಾಗ ನೇಹಾ ಬೋರಾ ವೇಗವಾಗಿ ಓಡಲು ಶುರು ಮಾಡಿದರು.
ನೇಹಾ ಬೋರಾ ನಮಗಿಂತ ಕೇವಲ 10 ಹೆಜ್ಜೆ ಮುಂದಿದ್ದರು. ಅವರು ಬ್ಯಾರಿಕೇಡ್ ಗಳನ್ನು ದಾಟಲು ಪ್ರಯತ್ನಿಸಿದಾಗ, ಪೊಲೀಸರೊಬ್ಬರು ಅವರ ಕಡೆಗೆ ಓಡಿಬಂದು, ತಡೆಯುವ ಯತ್ನದಲ್ಲಿ ತಮ್ಮ ಕೈಗಳನ್ನು ನೇರವಾಗಿ ಅವರ ಎದೆಗೆ ಒತ್ತಿದರು.
ಈ ಘಟನೆಯು ವಿಡಿಯೊದಲ್ಲೂ ಸೆರೆಯಾಗಿದ್ದು, ನೇಹಾ ಬೋರಾ ಅದನ್ನು ಪ್ರತಿರೋಧಿಸಿ ಆ ಪೊಲೀಸ್ ಅಧಿಕಾರಿಯನ್ನು ಹಿಂದೆ ತಳ್ಳಿದರು. ‘ಸುತ್ತಮುತ್ತಲಿದ್ದ ಜನರೂ ಆತನ ಮೇಲೆ ಕಿರುಚಾಡಿದರು’ ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಮತ್ತು AISA ಸದಸ್ಯೆ ಅಂಜಲಿ ಹೇಳಿರುವುದಾಗಿ ‘ಸ್ಕ್ರಾಲ್’ (Scroll) ವರದಿ ಮಾಡಿದೆ.
ಆ ಪೊಲೀಸ್ ಅಧಿಕಾರಿ ಕೈಮುಗಿದು ಕ್ಷಮೆ ಯಾಚಿಸಿದರು. ‘ಅದು ನೇಹಾ ಬೋರಾ ಎಂದು ಆತನಿಗೆ ಅಂದೇ ಮನವರಿಕೆಯಾಗಿರಬೇಕು. ಇಲ್ಲದಿದ್ದರೆ, ಉಳಿದ ಎಲ್ಲ ಘಟನೆಗಳಲ್ಲಿ ಪೊಲೀಸರ ಮುಖದಲ್ಲಿ ಕೇವಲ ಅಹಂಕಾರ ಮತ್ತು ಬೇಜವಾಬ್ದಾರಿಯಷ್ಟೇ ಕಾಣಿಸುತ್ತದೆ’ ಎಂದು ಅಂಜಲಿ ಹೇಳಿದ್ದಾರೆ.
ಆ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿಗಳು ಇರಲಿಲ್ಲ ಎಂದು ಅಂಜಲಿ ಆರೋಪಿಸಿದ್ದಾರೆ. ವಾಸ್ತವವಾಗಿ, ಕಾನೂನಿನ ಪ್ರಕಾರ ಯಾವುದೇ ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳುವಾಗ ಪುರುಷ ಸಿಬ್ಬಂದಿ ಅವರನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. ‘ಹಾಗಿದ್ದರೂ, ಮೊದಲನೆಯದಾಗಿ ಅವರು ಮಹಿಳೆಯ ದೇಹದ ಮೇಲೆ ಕೈಹಾಕಲು ಹೇಗೆ ಸಾಧ್ಯ? ಅವರು ಆಕೆಯ ಕಡೆಗೆ ಹೇಗೆ ಓಡಿಬರಲು ಸಾಧ್ಯ?’ ಎಂದು ಅಂಜಲಿ ಪ್ರಶ್ನಿಸಿದ್ದಾರೆ.
ಮಧ್ಯ ದಿಲ್ಲಿಯಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಿಳಾ ಪ್ರತಿಭಟನಾಕಾರರನ್ನು ದಿಲ್ಲಿ ಪೊಲೀಸರು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ವಶಕ್ಕೆ ಪಡೆದ ಮಹಿಳೆಯರು ತಮ್ಮ ‘ಎದೆಗೆ ಹೊಡೆದು, ದೇಹದ ಖಾಸಗಿ ಭಾಗಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ’ ಎಂದು ಮಹಿಳಾ ಕಾನ್ಸ್ಟೆಬಲ್ಗಳ ವಿರುದ್ಧ ಆರೋಪಿಸಿದ್ದಾರೆ ಎಂದು ‘ಸ್ಕ್ರಾಲ್’ ಈ ಹಿಂದೆ ವರದಿ ಮಾಡಿತ್ತು. ಮಹಿಳಾ ಪೊಲೀಸ್ ಸಿಬ್ಬಂದಿ ಕಾಂಗ್ರೆಸ್ ಕಾರ್ಯಕರ್ತೆಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊಗಳೂ ಹೊರಬಂದಿವೆ.
ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪುರುಷ ಸಿಬ್ಬಂದಿ ತಮ್ಮ ಮೈಮೇಲೆ ಅಸಭ್ಯವಾಗಿ ಕೈಹಾಕಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಮೂವರು ವರದಿಗಾರರು ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಆದರೆ, ಆ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿದ್ದರಿಂದ, ಆ ಪತ್ರಕರ್ತರು ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ಜುಲೈ ಪ್ರತಿಭಟನೆಯ ನಂತರ, ಬೆನ್ನು ತಿರುಗಿಸಿ ಓಡುತ್ತಿದ್ದ ಯುವತಿಯೊಬ್ಬಳಿಗೆ ಪೊಲೀಸ್ ಅಧಿಕಾರಿಯೊಬ್ಬರು ‘ಲಾಠಿಯ ಮೊನಚಾದ ತುದಿಯಿಂದ ಇರಿದಿದ್ದಾರೆ’ ಎಂದು ಆರೋಪಿಸಿ ಪತ್ರಕರ್ತೆ ತನುಶ್ರೀ ಪಾಂಡೆ ದೂರು ದಾಖಲಿಸಿದ್ದರು.
ಈ ವಿಚಾರವನ್ನು ರಾಜಕೀಯ ನಾಯಕರು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ. ಅಕ್ಟೋಬರ್ 10ರಂದು ರಾಷ್ಟ್ರೀಯ ಜನತಾ ದಳದ (RJD) ಸಂಸದ ಮನೋಜ್ ಝಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ದಿಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ, ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ ಮತ್ತು ಮಹಿಳಾ ಪ್ರತಿಭಟನಾಕಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.
ವಶಕ್ಕೆ ಪಡೆಯುವಾಗ ಪುರುಷ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೈಮೇಲೆ ಅಸಭ್ಯವಾಗಿ ಕೈಹಾಕಿದ್ದಾರೆ ಎಂದು ದೂರಿರುವ ಪ್ರತಿಭಟನಾಕಾರರೊಂದಿಗೆ ‘ಸ್ಕ್ರಾಲ್’ ಮಾತನಾಡಿದೆ.
►‘ಪುರುಷ ಪೊಲೀಸ್ ಸಿಬ್ಬಂದಿ ಯಾಕಿದ್ದಾರೆ ಎಂದು ನಾನು ಜೋರಾಗಿ ಕಿರುಚಿದೆ’
ಹಿಂದಿನ ದಿನ ತಾವು ಎದುರಿಸಿದ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಅಕ್ಟೋಬರ್ 11ರಂದು ಸಂಜೆ 6.30ರ ಸುಮಾರಿಗೆ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾದ (SFI) 22 ಸದಸ್ಯರ ಗುಂಪು ಕನ್ನಾಟ್ ಪ್ಲೇಸ್ನಲ್ಲಿ ಜಮಾಯಿಸಿತ್ತು.
ಸುಮಾರು ಅರ್ಧ ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಎಲ್ಲರನ್ನೂ ಬಲವಂತವಾಗಿ ಬಸ್ ಒಳಗೆ ತಳ್ಳುವ ಮೂಲಕ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದರು.
‘ಮಹಿಳಾ ಪೊಲೀಸರು ನನ್ನನ್ನು ತಳ್ಳಿದರು, ಕೂದಲನ್ನು ಹಿಡಿದು ಎಳೆದರು. ಅವರು ನನ್ನ ಗಂಟಲನ್ನು ಹಿಡಿದುಕೊಂಡಿದ್ದರಿಂದ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಜೋರಾಗಿ ಕಿರುಚಾಡಿದೆ’ ಎಂದು ಅಲ್ಲಿ ಉಪಸ್ಥಿತರಿದ್ದ ಜೂಲಿಯಾ ‘ಸ್ಕ್ರಾಲ್’ಗೆ ತಿಳಿಸಿದರು.
ಬಸ್ಸಿನ ಬಾಗಿಲ ಬಳಿ ಪುರುಷ ಪೊಲೀಸರು ಇರುವುದನ್ನು ತಾನು ನೋಡಿದೆ. ‘ನಾನು ಬಸ್ ಒಳಗೆ ಹೋಗಲು ನಿರಾಕರಿಸಿದಾಗ, ಪುರುಷ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಎದೆಭಾಗವನ್ನು ಸ್ಪರ್ಶಿಸಿ ಬಸ್ಸಿನೊಳಗೆ ತಳ್ಳಿದರು’ ಎಂದು ಜೂಲಿಯಾ ಆರೋಪಿಸಿದರು. ‘ಅವರು ಇಲ್ಲಿಗೆ ಯಾಕೆ ಬಂದಿದ್ದಾರೆ ಎಂದು ನಾನು ಮಹಿಳಾ ಪೊಲೀಸರ ಬಳಿ ಜೋರಾಗಿ ಪ್ರಶ್ನಿಸಿದೆ. ನಾವು ಸಹಕರಿಸುತ್ತೇವೆ ಎಂದಿದ್ದೆವು. ಆದರೆ, ಮಹಿಳಾ ಪೊಲೀಸರು ನಮ್ಮ ಮಾತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು.’
‘ಇದು ನಿಜಕ್ಕೂ ಆಘಾತಕಾರಿ. ದೈಹಿಕ ಹಲ್ಲೆ ನಡೆಸುವುದು ಬೇರೆ, ಆದರೆ ಲೈಂಗಿಕ ದೌರ್ಜನ್ಯ ಎಂಬುದು ಸಂಪೂರ್ಣವಾಗಿ ಭಿನ್ನ’ ಎಂದು ಜೂಲಿಯಾ ಹೇಳಿದರು.
ಅಕ್ಟೋಬರ್ 10ರ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರತಿಕ್ರಿಯೆ ಕೋರಿ ‘ಸ್ಕ್ರಾಲ್’ ದಿಲ್ಲಿ ಪೊಲೀಸರನ್ನು ಸಂಪರ್ಕಿಸಿದೆ. ವರದಿ ಪ್ರಕಟವಾಗುವವರೆಗೆ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ.
►ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರು
ಮಹಿಳೆಯರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ದಿಲ್ಲಿಯ ಬೀದಿಗಳಿಗೆ ಇಳಿದಿರುವ ಈ ಸಂದರ್ಭದಲ್ಲಿ ಈ ಆರೋಪಗಳು ಕೇಳಿಬಂದಿವೆ.
ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜುಲೈನಲ್ಲಿ ನಡೆದ ಪ್ರತಿಭಟನೆಗೆ ಹೋಲಿಸಿದರೆ, ಅಕ್ಟೋಬರ್ ನ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು ಎಂದು ಪ್ರತಿಭಟನಾಕಾರರು ಹೇಳಿದರು.
ದಿಲ್ಲಿಯ ಕಾಲ್ಕಾಜಿಯಲ್ಲಿರುವ ‘ಆಸ್ಥಾ ಕುಂಜ್’ ಪಾರ್ಕ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ ಉಂಟಾದ ಜನಜಾಗೃತಿ ಮತ್ತು ಸಂಘಟನೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೆಲವರು ಹೇಳುತ್ತಾರೆ.
ಈ ಅಪರಾಧದ ಹಿನ್ನೆಲೆಯಲ್ಲಿ, ದಿಲ್ಲಿ ಪೊಲೀಸರು ಸೂರ್ಯಾಸ್ತದ ನಂತರ ದಿಲ್ಲಿಯ ಪಾರ್ಕ್ಗಳಿಗೆ ಪ್ರವೇಶವನ್ನು ನಿರ್ಬಂಧಿಸಿದರು. ಪಾರ್ಕ್ಗಳನ್ನು ಸುರಕ್ಷಿತವಾಗಿಸುವ ಬದಲಿಗೆ, ಇದು ಮಹಿಳೆಯರಿಗೆ ಕರ್ಫ್ಯೂ ಹೇರಿದಂತಿದೆ ಎಂಬ ಟೀಕೆಗಳು ವ್ಯಕ್ತವಾದವು.
‘ಅತ್ಯಾಚಾರ ಪ್ರಕರಣದ ನಂತರ ‘ರೀಕ್ಲೇಮ್ ದಿ ನೈಟ್’ (ರಾತ್ರಿಯನ್ನು ಮರಳಿ ಪಡೆದುಕೊಳ್ಳಿ) ಚಳವಳಿಯ ಮೂಲಕ ಒಂದು ವೇಗ ಸಿಕ್ಕಿತ್ತು’ ಎಂದು ಇಂಡಿಯನ್ ರೆವಲ್ಯೂಷನರಿ ವರ್ಕರ್ಸ್ ಪಾರ್ಟಿಯ ಸದಸ್ಯೆ ನೌರೀನ್ ಹೇಳಿದರು.
ಯಾವುದೇ ರಾಜಕೀಯ ಗುಂಪುಗಳಿಗೆ ಸೇರದ ಅನೇಕ ವಿದ್ಯಾರ್ಥಿನಿಯರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದರು. ‘ಮಹಿಳೆಯರು ರಾಜಕೀಯವಾಗಿ ಜಾಗೃತರಾಗಿದ್ದಾರೆ. ಅವರು ಕೇವಲ ತರಗತಿಗಳಿಗೆ ಸೀಮಿತವಾಗಿರದೆ, ಒಗ್ಗಟ್ಟಿನಿಂದ ಹೊರಬರಲು ಬಯಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.
ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವಿರುದ್ಧದ ಪ್ರತಿಭಟನೆಯು ಜನರನ್ನು ತಲುಪಲು ಕಾರಣ, ಈ ಪ್ರಕ್ರಿಯೆಯು ‘ಮಹಿಳೆಯರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಿದೆ. ಅದಕ್ಕಾಗಿಯೇ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ’ ಎಂದು ಅಂಜಲಿ ಹೇಳಿದ್ದಾರೆ.
13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಮಹಿಳೆಯರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಿಶ್ಲೇಷಕರು ಎತ್ತಿ ತೋರಿಸಿದ್ದಾರೆ. ಉದಾಹರಣೆಗೆ, ಜಾರ್ಖಂಡ್ನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ‘ಗುರುತಿಸಲಾಗದ’ ಎಂದು ಗುರುತಿಸಲ್ಪಟ್ಟವರನ್ನು ಸಬರ್ ಇನ್ಸ್ಟಿಟ್ಯೂಟ್ ವಿಶ್ಲೇಷಿಸಿದಾಗ, ‘ಸಂದೇಹಾಸ್ಪದ’ ಎಂದು ಗುರುತಿಸಲ್ಪಟ್ಟ ಮಹಿಳೆಯರ ಪ್ರಮಾಣವು ಶೇ 25ರಿಂದ 47.8ರಷ್ಟಿದೆ ಎಂದು ತಿಳಿದುಬಂದಿದೆ.
►‘ಪುರುಷ ಅಧಿಕಾರಿಗಳು ನಮ್ಮನ್ನು ಹಿಡಿದು ಎಳೆದಿದ್ದಾರೆ’
ದಿಲ್ಲಿ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಸಾಕಷ್ಟು ಮಹಿಳಾ ಸಿಬ್ಬಂದಿಯನ್ನು ಹೊಂದಿರಲು ಸಿದ್ಧವಾಗಿರಲಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.
ಅಕ್ಟೋಬರ್ 10ರಂದು ಅಂಜಲಿ, ಬೋರಾ ಮತ್ತು ಇತರ ಪ್ರತಿಭಟನಾಕಾರರನ್ನು ಹಲವಾರು ಬಾರಿ ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಲಾಯಿತು. ನಾಲ್ಕನೇ ಬಾರಿ ವಶಕ್ಕೆ ಪಡೆಯುವ ಮೊದಲು, ‘ಪೊಲೀಸ್ ಸಿಬ್ಬಂದಿ ಕಡಿಮೆ ಸಿದ್ಧತೆ ಹೊಂದಿದ್ದು, ಮಹಿಳಾ ಅಧಿಕಾರಿಗಳಿಲ್ಲದ ಕಾರಣ’ ತಾವು ಸ್ಥಳದಲ್ಲಿ ಸುಮಾರು 40ರಿಂದ 45 ನಿಮಿಷಗಳ ಕಾಲ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲು ಸಾಧ್ಯವಾಯಿತು ಎಂದು ಅಂಜಲಿ ಹೇಳಿದರು.
‘ನಮ್ಮ ಪುರುಷ ಸಹೋದ್ಯೋಗಿಗಳನ್ನು ರಕ್ಷಿಸಲು ನಮಗೆ ಮಾನವ ಸರಪಳಿ ರಚಿಸಲು ಸಾಧ್ಯವಾಯಿತು’ ಎಂದು ಅಂಜಲಿ ಹೇಳಿದರು. ‘ನಾವು ಹೀಗೆ ಮಾಡಲು ಸಾಧ್ಯವಾಗಿದ್ದಕ್ಕೆ ಪ್ರಮುಖ ಕಾರಣವೆಂದರೆ, ಅವರ ಬಳಿ ಸಾಕಷ್ಟು ಮಹಿಳಾ ಅಧಿಕಾರಿಗಳಿರಲಿಲ್ಲ.’
ಕೆಲವು ಸಂದರ್ಭಗಳಲ್ಲಿ ಪುರುಷ ಸಿಬ್ಬಂದಿ ಮಹಿಳಾ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹಿಂದೇಟು ಹಾಕಲಿಲ್ಲ. ಹಲವಾರು ಬಾರಿ ‘ಪುರುಷ ಅಧಿಕಾರಿಗಳು ನಮ್ಮ ಶರ್ಟ್ ಮತ್ತು ಕುರ್ತಾಗಳ ಕಾಲರ್ಗಳನ್ನು ಹಿಡಿದು ಎಳೆದಿದ್ದಾರೆ’ ಎಂದು ಅಂಜಲಿ ಹೇಳಿದ್ದಾರೆ.
ಮಹಿಳಾ ಅಧಿಕಾರಿಗಳು ಇದ್ದಾಗಲೂ ಅವರು ನಮ್ಮನ್ನು ತಳ್ಳಿದಾಗ, ನಾವು ಪುರುಷ ಸಿಬ್ಬಂದಿಯ ಮೇಲೆಯೇ ಬೀಳುವಂತಾಗುತ್ತದೆ. ಕೆಲವೊಮ್ಮೆ ಇದು ಆಕಸ್ಮಿಕವಾಗಿ ನಡೆಯುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಯಾವುದೇ ಸ್ಪರ್ಶದ ಹಿಂದಿರುವ ಉದ್ದೇಶ ಏನೆಂಬುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು ಎಂದು ನೌರೀನ್ ಹೇಳಿದರು.
►ಕಾನೂನು ಏನು ಹೇಳುತ್ತದೆ?
ಪ್ರತಿಭಟನಾಕಾರರಿಗೆ ಕಾನೂನು ನೆರವು ನೀಡುತ್ತಿರುವ ವಕೀಲರು, ಮಹಿಳೆಯರನ್ನು ವಶಕ್ಕೆ ಪಡೆಯುವಾಗ ಪೊಲೀಸರು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 43ರ ಪ್ರಕಾರ, ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯಬೇಕಾದ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ‘ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಮೊದಲು ಯಾವುದೇ ಮಹಿಳೆಯನ್ನು ಬಂಧಿಸುವಂತಿಲ್ಲ’. ಆದರೆ, ಈ ನಿಯಮವನ್ನು ಪಾಲಿಸಿಲ್ಲ ಎಂದು ವಕೀಲೆ ದಿಶಾ ವಾಡೇಕರ್ ತಿಳಿಸಿದ್ದಾರೆ. ‘ಸೂರ್ಯಾಸ್ತದ ನಂತರವೂ ಮಹಿಳೆಯರನ್ನು ವಶಕ್ಕೆ ಪಡೆದು, ಅಪರಿಚಿತ ಸ್ಥಳಗಳಿಗೆ ಕರೆದೊಯ್ಯುವುದನ್ನು ನಾನು ನೋಡಿದ್ದೇನೆ’ ಎಂದಿದ್ದಾರೆ ಅವರು.
ಸಾಮಾಜಿಕ ಜಾಲತಾಣಗಳಲ್ಲಿನ ಹಲವು ವಿಡಿಯೊಗಳೂ ಪುರುಷ ಅಧಿಕಾರಿಗಳು ಮಹಿಳಾ ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿರುವುದನ್ನು ಮತ್ತು ಸೂರ್ಯಾಸ್ತದ ನಂತರ ಅವರನ್ನು ವಶಕ್ಕೆ ಪಡೆಯುತ್ತಿರುವುದನ್ನು ದೃಢಪಡಿಸಿವೆ.
ಅಕ್ಟೋಬರ್ 11ರಂದು ರಾತ್ರಿ 7 ಗಂಟೆಯ ಸುಮಾರಿಗೆ ಪೊಲೀಸರು ತಮ್ಮನ್ನು ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದರು. ಆಗಲೇ ಸೂರ್ಯಾಸ್ತವಾಗಿದೆ ಎಂದು ತಾವು ಗಮನಕ್ಕೆ ತಂದರೂ, ‘ಅವರು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ’ ಎಂದು ಜೂಲಿಯಾ ಹೇಳಿದ್ದಾರೆ.
ಜುಲೈನಿಂದೀಚೆಗೆ ಪ್ರತಿಭಟನಾಕಾರರ ವಿರುದ್ಧ ದಿಲ್ಲಿ ಪೊಲೀಸರು ಹಲವಾರು ಎಫ್ಐಆರ್ಗಳನ್ನು ದಾಖಲಿಸಿದ್ದರೂ, ಪೊಲೀಸರ ವಿರುದ್ಧ ಯಾವುದೇ ಕೌಂಟರ್ ಎಫ್ಐಆರ್ ದಾಖಲಾಗಿರುವುದನ್ನು ತಾನು ಕೇಳಿಲ್ಲ ಎಂದು ದಿಶಾ ವಾಡೇಕರ್ ಹೇಳಿದರು. ‘ಪೊಲೀಸರು ಮಹಿಳಾ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನಾವು ವಿಡಿಯೊಗಳಲ್ಲಿ ನೋಡುತ್ತಿದ್ದೇವೆ. ಹಾಗಾದರೆ ಎಫ್ಐಆರ್ಗಳು ಎಲ್ಲಿವೆ? ಈ ಎಫ್ಐಆರ್ಗಳ ತನಿಖೆಯನ್ನು ಯಾರು ಮಾಡುತ್ತಾರೆ? ಪೊಲೀಸರು ಸರಕಾರದ ಸಿಬ್ಬಂದಿಯಾಗಿರುವುದರಿಂದ ಅವರಿಗೆ ಹೆಚ್ಚಿನ ರಕ್ಷಣೆ ಸಿಕ್ಕಿದೆ’ ಎಂದು ಅವರು ತಿಳಿಸಿದರು.
ಇದನ್ನು ಅನುಮೋದಿಸಿದ ಜೂಲಿಯಾ, ‘ನಮ್ಮ ಮೇಲೆ ದೌರ್ಜನ್ಯ ಎಸಗುವವರೇ ಪೊಲೀಸರಾಗಿದ್ದರೆ, ನಾವು ಸಹಾಯಕ್ಕಾಗಿ ಯಾರ ಬಳಿ ಹೋಗಬೇಕು?’ ಎಂದು ಪ್ರಶ್ನಿಸಿದರು.
ಪ್ರತಿಭಟನೆಗಳಲ್ಲಿ ಭಾಗವಹಿಸುವುದೇ ತಮಗೆ ಸವಾಲಿನ ಸಂಗತಿಯಾಗಿರುವಾಗ, ಮಹಿಳೆಯರು ಮತ್ತೆ ಬೀದಿಗಿಳಿಯದಂತೆ ತಡೆಯಲು ದೈಹಿಕ ಮತ್ತು ಲೈಂಗಿಕ ದೌರ್ಜನ್ಯವನ್ನು ಬಳಸಲಾಗುತ್ತಿದೆ ಎಂದು ಮಹಿಳೆಯರು ನಂಬುತ್ತಾರೆ. ‘ನಮ್ಮಲ್ಲಿ ಅನೇಕರಿಗೆ ಓದಲು ಕೂಡ ಅನುಮತಿಯಿಲ್ಲ. ಇನ್ನು ಪ್ರತಿಭಟನೆ ಮಾಡುವುದು ಸಂಪೂರ್ಣವಾಗಿ ಭಿನ್ನವಾದ ಕ್ಷೇತ್ರ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನೇಕ ಮಹಿಳಾ ಪ್ರತಿಭಟನಾಕಾರರು ಶಾಲು ಮತ್ತು ಮಾಸ್ಕ್ ಧರಿಸಿ ಬರುತ್ತಾರೆ.’
ಈ ಹಿನ್ನೆಲೆಯಲ್ಲಿ, ಪೊಲೀಸರು ನಡೆಸಿಕೊಳ್ಳುವ ರೀತಿಯು ‘ನೀವು ಮತ್ತೆ ಬರದಂತೆ ತಡೆಯುವ ಮಾನಸಿಕ ತಂತ್ರವಾಗಿದೆ’ ಎಂದು ಅಂಜಲಿ ಹೇಳಿದ್ದಾರೆ.
ಇದು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನಿರಾಕರಿಸುವ ಒಂದು ಮಾರ್ಗವೂ ಹೌದು. ‘ಅತ್ಯಾಚಾರಿಗಳಿಂದ ನಮ್ಮನ್ನು ರಕ್ಷಿಸುವಂತೆ ನಾವು ಸಂತ್ರಸ್ತೆಯರಾಗಿ ಪ್ರತಿಭಟಿಸಿದಾಗ, ಕ್ಯಾಂಪಸ್ನಲ್ಲಿ ನಾವು ಸುರಕ್ಷಿತವಾಗಿ ಮೆರವಣಿಗೆ ನಡೆಸಲು ಪೊಲೀಸರೇ ಮಾನವ ಸರಪಳಿಗಳನ್ನು ರಚಿಸುತ್ತಾರೆ. ಆದರೆ, ನಾವು ಹೆಚ್ಚಿನ ಹಕ್ಕುಗಳನ್ನು ಒತ್ತಾಯಿಸುವ ನಾಗರಿಕರಾಗಿ ಬೀದಿಗಿಳಿದಾಗ, ಅವರು (ಪೊಲೀಸರು) ನಮ್ಮನ್ನು ಥಳಿಸುತ್ತಾರೆ, ನಮ್ಮ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಾರೆ’ ಎಂದು ಅಂಜಲಿ ಹೇಳಿದರು.
ಅಕ್ಟೋಬರ್ 10ರಂದು ತಮ್ಮ ಬಸ್ನಲ್ಲಿ ವಶಕ್ಕೆ ಪಡೆದ ಮಹಿಳೆಯರಲ್ಲಿ ಒಬ್ಬರು ಸ್ಪ್ಯಾಗೆಟ್ಟಿ-ಸ್ಟ್ರ್ಯಾಪ್ ಶರ್ಟ್ ಧರಿಸಿದ್ದರು. ಆಕೆಯನ್ನು ಬಸ್ಸಿಗೆ ತಳ್ಳುವಾಗ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೆಟ್ಟದಾಗಿ ವರ್ತಿಸಿದರು. ಆಕೆಯ ಟಾಪ್ ಮೇಲಕ್ಕೆ ಸರಿದಿತ್ತು ಮತ್ತು ಬ್ರಾ ಕೂಡ ಮೇಲಕ್ಕೆ ಸರಿದಿತ್ತು. ‘ಬಟ್ಟೆಗಳನ್ನು ಹರಿಯುವ ಮೂಲಕ ಅಥವಾ ನಿಮ್ಮ ಶರ್ಟ್ ಮೇಲಕ್ಕೆತ್ತುವ ಮೂಲಕ ಅವರು ನಿಮ್ಮನ್ನು ಮುಜುಗರಕ್ಕೀಡು ಮಾಡಲು ಬಯಸುತ್ತಾರೆ. ನಿಮ್ಮ ಘನತೆಗೆ ಧಕ್ಕೆ ತರುವುದಕ್ಕಾಗಿ ಹೀಗೆ ಮಾಡುತ್ತಾರೆ’ ಎಂದು ಅಂಜಲಿ ಹೇಳಿದರು.
‘ನಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಿಸಿದರೆ ನಾವು ಮತ್ತೆ ಬರುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಆದರೆ, ನಮ್ಮ ಮೈಮೇಲೆ ಗಾಯಗಳಿದ್ದರೂ ನಾವು ಮರಳಿ ಬರುತ್ತೇವೆ ಎಂದು ನಾವು ಅವರಿಗೆ ಹೇಳುತ್ತೇವೆ’ ಎಂದು ನೌರೀನ್ ಹೇಳಿದರು.
ಸೌಜನ್ಯ: scroll.in