Photo Credit : AI

ಪೂನಿಸೋಲ್ ನ ಸಾವಿರಾರು ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಳ್ಳಲು ಹೆಣಗಾಡಿದರು. ಇದರ ಬಳಿಕ ಅನ್ನಪೂರ್ಣ ಯೋಜನೆಗಾಗಿ ತಾವು ಸಲ್ಲಿಸಿದ ಪುನರಾವರ್ತಿತ ಅರ್ಜಿಗಳಿಗೆ ಅಧಿಕಾರಿಗಳಿಂದ ನಿರ್ಲಕ್ಷ್ಯವಷ್ಟೇ ಸಿಕ್ಕಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಇದೇ ರೀತಿಯ ಹೋರಾಟವು ಆದಿವಾಸಿ ಮಹಿಳೆಯರ ನಡುವೆಯೂ ನಡೆಯುತ್ತಿದ್ದು, ಈ ಬಗ್ಗೆ ಧ್ವನಿ ಎತ್ತಲು ಪ್ರಯತ್ನಿಸಿದಾಗ ಕೆಲವರು ಬೆದರಿಕೆಯನ್ನು ಎದುರಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಒಂಡಾ ಬ್ಲಾಕ್ ವ್ಯಾಪ್ತಿಗೆ ಬರುವ ಪೂನಿಸೋಲ್ ಗ್ರಾಮದ ಸುಮಾರು 8,000 ಅಧಿಕೃತ ಮತದಾರರು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಅನಿಶ್ಚಿತತೆಯನ್ನು ಎದುರಿಸಬೇಕಾಯಿತು. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಇವರನ್ನು ‘ತಾರ್ಕಿಕ ವ್ಯತ್ಯಾಸ’ (logical discrepancy) ವಿಭಾಗದ ಅಡಿಯಲ್ಲಿ ಗುರುತಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ವರದಿಯಾಗಿದೆ.

ಈ ನೋಟಿಸ್ ಸ್ಥಳೀಯರನ್ನು ತೀವ್ರ ಗೊಂದಲಕ್ಕೀಡು ಮಾಡಿತು. ತಾವು ಬದುಕಿರುವ ನಾಗರಿಕರು ಎಂಬುದನ್ನು ಸ್ವತಃ ಅವರೇ ಸಾಬೀತುಪಡಿಸುವಂತೆ ಕೇಳಿಕೊಳ್ಳಲಾಗುತ್ತಿತ್ತು.

ಕೆಲವು ನಿವಾಸಿಗಳು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಿದ್ದರೂ, ತಮ್ಮ ಅಹವಾಲುಗಳಿಗೆ ಹೆಚ್ಚಿನ ಗಮನ ಸಿಗಲಿಲ್ಲ ಎಂದು ಆರೋಪಿಸಿದರು. ವ್ಯತ್ಯಾಸಗಳಿವೆ ಎಂಬ ನೆಪದಲ್ಲಿ ನೋಟಿಸ್ ಪಡೆದ ಪೂನಿಸೋಲ್ ನ ಅರ್ಹ ಮತದಾರರೊಂದಿಗೆ ಮಾತನಾಡಿ, ‘ದಿ ವೈರ್’ ಮಾರ್ಚ್ 17ರಂದು ವರದಿಯೊಂದನ್ನು ಪ್ರಕಟಿಸಿತ್ತು.

ವರದಿ ಪ್ರಕಟವಾದ ಬಳಿಕ, ಗ್ರಾಮಸ್ಥರು ವರದಿಯ ಪ್ರತಿಗಳನ್ನು ಒಂಡಾ ಬ್ಲಾಕ್ ಕಚೇರಿಗೆ ಕೊಂಡೊಯ್ದು ತಮ್ಮ ದಾಖಲೆಗಳು ಮತ್ತು ಸೂಕ್ತ ಮಾಹಿತಿಯನ್ನು ಸಲ್ಲಿಸಿದರು. ಬಳಿಕ ಸರ್ಕಾರಿ ಅಧಿಕಾರಿಗಳು ಪೂನಿಸೋಲ್ ಗ್ರಾಮಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಿದರು. ಇದರಿಂದ ನಿವಾಸಿಗಳಿಗೆ ಮತ ಚಲಾಯಿಸಲು ಸಾಧ್ಯವಾಯಿತು. ಮತದಾನದ ದಿನದಂದು ಅನೇಕರು ಸುದೀರ್ಘ ಸಾಲಿನಲ್ಲಿ ನಿಂತಿದ್ದು, ತಮ್ಮ ಸಂಕಟವನ್ನು ‘ದಿ ವೈರ್’ ವರದಿ ಮಾಡದಿದ್ದರೆ ತಮಗೆ ಮತ ಚಲಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ರಾಜ್ಯದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಗ್ರಾಮಗಳಲ್ಲಿ ಒಂದಾದ ಪೂನಿಸೋಲ್ ನ ಮಹಿಳೆಯರು ಈಗ ಮತ್ತೊಂದು ಹಿನ್ನಡೆಯನ್ನು ಎದುರಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಈ ಬಾರಿ, ರಾಜ್ಯ ಸರ್ಕಾರದ ಮಹಿಳಾ ಸಮಾಜ ಕಲ್ಯಾಣ ಯೋಜನೆಯಾದ ‘ಅನ್ನಪೂರ್ಣ ಯೋಜನೆ’ಯ ಸೌಲಭ್ಯಗಳಿಂದ ತಮ್ಮನ್ನು ವಂಚಿತರನ್ನಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

►‘ನಾವು ಪದೇ ಪದೇ ಅರ್ಜಿ ಸಲ್ಲಿಸಿದೆವು, ಆದರೆ ಹಣ ಬರಲೇ ಇಲ್ಲ’

ಪೂನಿಸೋಲ್ ಗ್ರಾಮದಲ್ಲಿ 20 ಬಡಾವಣೆಗಳಿದ್ದು, ಅಲ್ಲಿ 25ರಿಂದ 60 ವರ್ಷ ವಯಸ್ಸಿನ ಸುಮಾರು 9,000 ಮಹಿಳೆಯರು ವಾಸಿಸುತ್ತಿದ್ದಾರೆ. ಗ್ರಾಮದ ಆರೋಗ್ಯ ಕಾರ್ಯಕರ್ತ ಗೋಲಂ ಖಾಜಾ ನೀಡಿದ ಮಾಹಿತಿಯಂತೆ, ಸುಮಾರು 8,000 ಮಹಿಳೆಯರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅನ್ನಪೂರ್ಣ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ 500 ಮಂದಿಗೆ ಮಾತ್ರ ಆರ್ಥಿಕ ನೆರವು ಸಿಕ್ಕಿರಬಹುದು.

ಮಹಿಳೆಯರು ತಮಗೆ ಹಣ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗಳೊಂದಿಗೆ ಆಗಾಗ್ಗೆ ತಮ್ಮ ಬಳಿಗೆ ಬರುತ್ತಾರೆ ಎಂದು ಆಶಾ ಕಾರ್ಯಕರ್ತೆ ಜಸಿಮಾ ಖಾತೂನ್ ತಿಳಿಸಿದ್ದಾರೆ. ‘ನಾವು ಈ ಮಹಿಳೆಯರ ಆರೋಗ್ಯ ಮತ್ತು ಇತರ ವಿಷಯಗಳ ಬಗ್ಗೆ ವಿಚಾರಿಸಲು ಪ್ರತಿದಿನ ಭೇಟಿ ನೀಡುತ್ತೇವೆ. ಅನೇಕರು ಅನ್ನಪೂರ್ಣ ಯೋಜನೆಯ ಹಣ ಯಾವಾಗ ಬರುತ್ತದೆ ಎಂದು ನಮ್ಮನ್ನು ಕೇಳುತ್ತಾರೆ. ಅವರಿಗೆ ನೀಡಲು ನಮ್ಮ ಬಳಿ ಯಾವುದೇ ಉತ್ತರಗಳಿಲ್ಲ’ ಎಂದು ಅವರು ಹೇಳಿದರು.

ಶನಿವಾರ (ಅಕ್ಟೋಬರ್ 10), ‘ದಿ ವೈರ್’ ನಿಯೋಗ ಪೂನಿಸೋಲ್‌ ಗೆ ಮರಳಿ ಹಲವು ಬಡಾವಣೆಗಳ ಮಹಿಳೆಯರೊಂದಿಗೆ ಮಾತನಾಡಿದೆ. ತಾವು ಪೂನಿಸೋಲ್ ಪಂಚಾಯತ್ ಮತ್ತು ಒಂಡಾ ಬ್ಲಾಕ್ ಕಚೇರಿಗೆ ಪದೇ ಪದೇ ಅಲೆದಾಡಿದರೂ ಯಾವುದೇ ತೃಪ್ತಿಕರ ಉತ್ತರ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಕೆಲವು ಅಧಿಕಾರಿಗಳು ತಮ್ಮನ್ನು ನಿರ್ಲಕ್ಷಿಸಿ ಕಳುಹಿಸಿದ್ದಾರೆ ಎಂದೂ ಕೆಲವರು ಆರೋಪಿಸಿದ್ದಾರೆ.

‘ಸರ್ಕಾರ ಕೇಳಿದಾಗ ನಾವು ಫಾರ್ಮ್ ಸಲ್ಲಿಸಿದ್ದೆವು. ನಂತರ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಯಿತು. ಅದನ್ನೂ ನಾವು ಮಾಡಿದೆವು. ಹೀಗಿದ್ದರೂ, ನಮಗೆ ಒಂದೇ ಒಂದು ಕಂತಿನ ಹಣವೂ ಬಂದಿಲ್ಲ’ ಎಂದು ಈ ಗ್ರಾಮದ ಹಂಸದಾಬಾದ್ ಬಡಾವಣೆಯ ಗೃಹಿಣಿಯರಾದ ರೋಷ್ನಾ ಬೀಬಿ ಮಂಡಲ್, ಜರೀನಾ ಬೀಬಿ ಮಲ್ಲಿಕ್, ಸೊಲೇಮಾ ಖಾತೂನ್ ಮತ್ತು ಲತೀಫುನ್ ಬೀಬಿ ತಿಳಿಸಿದ್ದಾರೆ.

ತಮ್ಮ ಅರ್ಜಿಗಳನ್ನು ಏಕೆ ಪರಿಶೀಲಿಸಿಲ್ಲ ಎಂದು ಕೇಳಲು ಬ್ಲಾಕ್ ಕಚೇರಿಗೆ ಭೇಟಿ ನೀಡಿದ್ದರೂ, ತಮ್ಮ ಅಹವಾಲುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ದೂರಿದ್ದಾರೆ.

ಪದೇ ಪದೇ ಕಚೇರಿಗೆ ಭೇಟಿ ನೀಡಿದಾಗ, ಮೊದಲು ಹಿಂದೂ ಅರ್ಜಿದಾರರಿಗೆ ಹಣ ಸಿಗಲಿದೆ, ಆ ಬಳಿಕ ಮುಸ್ಲಿಂ ಅರ್ಜಿದಾರರಿಗೆ ಸಿಗಲಿದೆ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ‘ಇದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?’ ಎಂದು ಫಾತಿಮಾ ಬೀಬಿ ಖಾನ್ ಮತ್ತು ಅಖೆರುನ್ ಖಾತೂನ್ ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸರ್ಕಾರದ ಹಿಂದಿನ ‘ಲಕ್ಷ್ಮೀ ಭಂಡಾರ್’ ಯೋಜನೆಯಡಿ ತಮಗೆ ಮೊದಲು 1,500 ರೂಪಾಯಿ ಸಿಗುತ್ತಿತ್ತು ಎಂದು ಆ ಪ್ರದೇಶದ ಮಹಿಳೆಯರು ಹೇಳುತ್ತಾರೆ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು 3,000 ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದ್ದರೂ, ಆ ಪಾವತಿಗಳು ಏಕೆ ನಿಂತಿವೆ ಎಂದು ಅವರು ತಿಳಿಯಲು ಬಯಸಿದ್ದಾರೆ. ‘ನಮ್ಮ ಅರ್ಜಿಯಲ್ಲಿ ಏನಾದರೂ ತೊಂದರೆ ಇದೆಯೇ? ನಮಗೆ ಯಾರೂ ಏನೂ ಹೇಳಿಲ್ಲ. ನಾವು ಮುಸ್ಲಿಮರು ಎಂಬ ಕಾರಣಕ್ಕೇ ನಮಗೆ ಹಣ ಸಿಗುತ್ತಿಲ್ಲವೇ?’ ಎಂದು ಅವರು ಕೇಳಿದ್ದಾರೆ.

‘ಸರ್ಕಾರವನ್ನು ಆಯ್ಕೆ ಮಾಡಲು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಮತ ಹಾಕಿದ್ದಾರೆ. ಇಲ್ಲಿ ನಮ್ಮನ್ನು ಏಕೆ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ? ಹಿಂದೆಂದೂ ಹೀಗಾಗಿರಲಿಲ್ಲ’ ಎಂದು ಅಖೆರುನ್ ಖಾತೂನ್ ಹೇಳಿದರು.

ಸ್ಪಷ್ಟನೆಗಾಗಿ ಪದೇ ಪದೇ ವಿನಂತಿಸಿದರೂ, ಹಸ್ನಾಬಾದ್ನಲ್ಲಿ ಒಬ್ಬಳೇ ಒಬ್ಬ ಮಹಿಳೆಗೆ ಅನ್ನಪೂರ್ಣ ಯೋಜನೆಯ ಹಣ ಬಂದಿಲ್ಲ ಎಂದು ಜರೀನಾ ಬೀಬಿ ತಿಳಿಸಿದರು. ‘ಅವರು ಕಾಗದಪತ್ರಗಳನ್ನು ಸಂಗ್ರಹಿಸುತ್ತಲೇ ಇರುತ್ತಾರೆ ಮತ್ತು ಪರಿಶೀಲನೆ ಅಗತ್ಯವಿದೆ ಎಂದು ಹೇಳುತ್ತಾರೆ. ಆದರೆ, ವಾಸ್ತವವಾಗಿ ಏನೂ ಆಗುವುದಿಲ್ಲ’ ಎಂದು ಅವರು ಹೇಳಿದರು. ಮತ್ತೆ ಅವಮಾನಕ್ಕೊಳಗಾಗುವ ಭೀತಿಯಿಂದಾಗಿ ಈಗ ಕೆಲ ಮಹಿಳೆಯರು ಬ್ಲಾಕ್ ಕಚೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

‘ನಾವು ಈಗ ಬ್ಲಾಕ್ ಕಚೇರಿಗೆ ಹೋಗಲು ಹೆದರುತ್ತಿದ್ದೇವೆ. ಅವರು ಮತ್ತೆ ನಮ್ಮನ್ನು ಅವಮಾನಿಸಿದರೆ ಏನು ಮಾಡುವುದು?’ ಎಂದು ಗೃಹಿಣಿಯರಾದ ಜ್ಯೋತ್ಸ್ನಾ ಖಾತೂನ್ ಮತ್ತು ಹಬೀಬಾ ಬೀಬಿ ಮಂಡಲ್ ಅಳಲು ತೋಡಿಕೊಂಡಿದ್ದಾರೆ.

‘ಚುನಾವಣೆಯ ಸಮಯದಲ್ಲಿ ನಮ್ಮ ಹೆಸರುಗಳು ಅಳಿಸಿಹೋಗುವ ಅಪಾಯವಿತ್ತು. ಆಗಲೂ ನಮಗೆ ಕಿರುಕುಳ ನೀಡಲಾಗಿತ್ತು. ನಾವು ಬ್ಲಾಕ್ ಕಚೇರಿಗೆ ಹೋಗಿ ‘ದಿ ವೈರ್’ ವರದಿಯನ್ನು ತೋರಿಸಿದಾಗ, ಕೊನೆಗೆ ನಮಗೆ ಮತ ಚಲಾಯಿಸಲು ಅವಕಾಶ ಸಿಕ್ಕಿತು ಮತ್ತು ಕಿರುಕುಳ ನಿಂತಿತು. ಈಗ ನಾವು ಯಾರನ್ನು ಸಂಪರ್ಕಿಸಬೇಕು?’ ಎಂದು ಫಿರೋಜಾ ಖಾತೂನ್ ಮತ್ತು ಇತರ ಮಹಿಳೆಯರು ಪ್ರಶ್ನಿಸಿದ್ದಾರೆ.

►‘ಈ ಹಣ ನಮ್ಮ ಮನೆಗಳಿಗೆ ಬಹಳ ಮುಖ್ಯವಾಗಿತ್ತು’

ಈ ಅನೇಕ ಕುಟುಂಬಗಳಿಗೆ ಭರವಸೆ ನೀಡಿರುವ ಆ ಸಹಾಯಧನವು ಸಣ್ಣ ಮೊತ್ತವೇನಲ್ಲ. ದೈನಂದಿನ ಕೌಟುಂಬಿಕ ವೆಚ್ಚಗಳನ್ನು ಭರಿಸಲು ಈ ಹಣವು ತಮಗೆ ಸಹಾಯ ಮಾಡಿದೆ ಎಂದು ಮಹಿಳೆಯರು ಹೇಳುತ್ತಾರೆ.

‘ನಮ್ಮ ಮನೆಯ ಪುರುಷರು ಪ್ರತಿದಿನ ಬೆಳಿಗ್ಗೆ ಸೈಕಲ್ ಗಳಲ್ಲಿ ಬಂಕುರಾ, ತಾಲ್ಡಂಗ್ರಾ, ಒಂಡಾ ಮತ್ತು ಇತರ ಪ್ರದೇಶಗಳಿಗೆ ಹೋಗುತ್ತಾರೆ. ಅವರು ಮನೆಗಳಿಂದ ಹಳೆಯ ಚೀಲಗಳು, ಪುಸ್ತಕಗಳು, ದಿನಪತ್ರಿಕೆಗಳು, ಕಬ್ಬಿಣ ಮತ್ತು ಹಳೆಯ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಸಣ್ಣ ಲಾಭಕ್ಕೆ ಮಾರಾಟ ಮಾಡುತ್ತಾರೆ. ಲಕ್ಷ್ಮೀ ಭಂಡಾರ್ ಯೋಜನೆಯಡಿ ನಮಗೆ ಸಿಗುತ್ತಿದ್ದ ಹಣವು ನಮ್ಮ ಸಂಸಾರ ನಡೆಸಲು ಉಪಯುಕ್ತವಾಗಿತ್ತು. ಈಗ ಆ ಪಾವತಿಯನ್ನು ನಿಲ್ಲಿಸಲಾಗಿದೆ’ ಎಂದು ಲತೀಫುನ್ ಬೀಬಿ ಮಂಡಲ್ ಹೇಳಿದರು.

ಜ್ಯೋತ್ಸ್ನಾ ಬೇಗಮ್ ಮತ್ತು ಹಬೀಬಾ ಬೀಬಿ ಮಂಡಲ್ ಕೂಡ ಅವರ ಮಾತನ್ನು ಅನುಮೋದಿಸಿದರು. ತಾವು ಒಂಡಾ ಬ್ಲಾಕ್ ಕಚೇರಿಗೆ ಮರಳಿ ಹೋಗುವುದಾಗಿ ಮತ್ತು ಅಗತ್ಯವಿದ್ದರೆ ಧರಣಿ ಸತ್ಯಾಗ್ರಹ ನಡೆಸಲು ಸಿದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.

ತಾವು ಎಲ್ಲಾ ಅರ್ಜಿ ಅವಶ್ಯಕತೆಗಳನ್ನು ಪೂರೈಸಿದ್ದೇವೆ ಮತ್ತು ವಿಳಂಬಕ್ಕೆ ಸ್ಪಷ್ಟವಾದ ಕಾರಣ ನೀಡಬೇಕು ಎಂದು ಮಹಿಳೆಯರು ಪಟ್ಟುಹಿಡಿದಿದ್ದಾರೆ.

►ತಾಂತ್ರಿಕ ಸಮಸ್ಯೆಗಳಿವೆ ಎಂದ ಬಿಜೆಪಿ ಶಾಸಕ

ಅನ್ನಪೂರ್ಣ ಯೋಜನೆಯ ಪ್ರಯೋಜನಗಳನ್ನು ಅನೇಕ ಮಹಿಳೆಯರು ಏಕೆ ಪಡೆದಿಲ್ಲ ಎಂದು ಕೇಳಿದಾಗ, ಒಂಡಾದ ಬಿಜೆಪಿ ಶಾಸಕ ಅಮರ್ನಾಥ್ ಶಾಖಾ ಅವರು ‘ದಿ ವೈರ್’ಗೆ ಪ್ರತಿಕ್ರಿಯಿಸುತ್ತಾ, ಕೆಲವು ಅರ್ಜಿದಾರರಿಗೆ ಎರಡು ಅಥವಾ ಮೂರು ಬ್ಯಾಂಕ್ ಖಾತೆಗಳಿರುವುದರಿಂದ ಅಥವಾ ಅವರ ಆಧಾರ್ ಕಾರ್ಡ್ಗಳು ಸಂಬಂಧಿತ ಖಾತೆಗಳಿಗೆ ಜೋಡಣೆಯಾಗದೇ ಇರುವುದರಿಂದ ಹಣ ಸಿಕ್ಕಿರಲಿಕ್ಕಿಲ್ಲ ಎಂದು ಹೇಳಿದರು.

ಆದರೆ, ಮಹಿಳೆಯರು ಈ ಸಮರ್ಥನೆಯನ್ನು ತಿರಸ್ಕರಿಸಿದ್ದಾರೆ.

ಹಸ್ನಾಬಾದ್ ನಿವಾಸಿಗಳಾದ ನಸುದಾ ಬೀಬಿ ಖಾನ್ ಮತ್ತು ಜರೀನಾ ಬೀಬಿ ಮಲ್ಲಿಕ್, ‘ನಮ್ಮ ಆಧಾರ್ ಕಾರ್ಡ್ಗಳನ್ನು ನಮ್ಮ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲು ನಾವು ರಾತ್ರಿ ಪೂರ್ತಿ ಎಚ್ಚರಿದ್ದು ಬಂಕುರಾ ಮುಖ್ಯ ಅಂಚೆ ಕಚೇರಿಗೆ ಹೋಗಿದ್ದೆವು. ನಮ್ಮಲ್ಲಿ ಯಾರಿಗಾದರೂ ಎರಡು ಅಥವಾ ಮೂರು ಖಾತೆಗಳಿವೆಯೇ?’ ಎಂದು ಪ್ರಶ್ನಿಸಿದ್ದಾರೆ.

ಸೂಚಿಸಿದ ವಿಧಾನಗಳನ್ನು ಅನುಸರಿಸಿದ್ದೇವೆ ಎಂದು ಹೇಳುವ ಅರ್ಜಿದಾರರು ಇನ್ನೂ ಸಹಾಯಕ್ಕಾಗಿ ಏಕೆ ಕಾಯುತ್ತಿದ್ದಾರೆ ಮತ್ತು ವಿಳಂಬಕ್ಕೆ ಸ್ಪಷ್ಟ ಕಾರಣಗಳನ್ನು ಏಕೆ ನೀಡುತ್ತಿಲ್ಲ ಎಂಬ ದೊಡ್ಡ ಪ್ರಶ್ನೆಯನ್ನು ಅವರ ಆಕ್ರೋಶವು ಪ್ರತಿಬಿಂಬಿಸುತ್ತದೆ.

►ಅನ್ನಪೂರ್ಣ ಪ್ರತಿಭಟನೆಗಳ ಕುರಿತು ಆದಿವಾಸಿ ಮಹಿಳೆಯರಿಂದ ಬೆದರಿಕೆ ಆರೋಪ

ಈ ದೂರುಗಳು ಪೂನಿಸೋಲ್ ನ ಮುಸ್ಲಿಂ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಬಂಗಾಳದ ಜಂಗಲ್ ಮಹಲ್ ನ ಬಂಕುರಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡದ (ST) ಸಮುದಾಯಗಳಿಗೆ ಸೇರಿದ ಮಹಿಳೆಯರು ಕೂಡ ತಮಗೆ ಅನ್ನಪೂರ್ಣ ಯೋಜನೆಯ ಸೌಲಭ್ಯಗಳು ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ.

ಬಂಕುರಾವು ಪಶ್ಚಿಮ ಬಂಗಾಳದ ಜಂಗಲ್ ಮಹಲ್ ಪ್ರದೇಶದ ಭಾಗವಾಗಿದ್ದು, ಇಲ್ಲಿ ಗಣನೀಯ ಪ್ರಮಾಣದ ಆದಿವಾಸಿ ಜನಸಂಖ್ಯೆಯಿದೆ. ರಾಣಿಬಂಧ್, ರಾವೊಟೊರಾ ಮತ್ತು ಬಾರಿಕುಲ್ ಪ್ರದೇಶಗಳಲ್ಲಿ ಸಂತಾಲ್, ಶಬರ್, ಮಹಾಲಿ, ಭೂಮಿಜ್, ಮುಂಡಾ ಮತ್ತು ಕೋರಾ ಸಮುದಾಯಗಳು ಸೇರಿದಂತೆ ಆದಿವಾಸಿಗಳು ಅರ್ಧಕ್ಕೂ ಹೆಚ್ಚು ಜನಸಂಖ್ಯೆಯಲ್ಲಿದ್ದಾರೆ.

ಪಂಚಾಯತ್ ಮತ್ತು ಬ್ಲಾಕ್ ಕಚೇರಿಗಳಿಗೆ ಪದೇ ಪದೇ ಮನವಿ ಮಾಡಿದರೂ ತಮ್ಮ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಈ ಸಮುದಾಯಗಳ ಮಹಿಳೆಯರು ಹೇಳುತ್ತಾರೆ.

ರಾಜಕಟಾ ಪ್ರದೇಶದ ಬಿರೋತಿ ಗ್ರಾಮದ ಸರಸ್ವತಿ ಸರ್ದಾರ್ ಮತ್ತು ಭಾನುಮತಿ ಸರ್ದಾರ್ ಹಾಗೂ ರಾವೊಟೊರಾದ ಜಿಲಿಮಿಲಿಯ ನಮಿತಾ ಟುಡು ಮತ್ತು ಕಲ್ಪನಾ ಸೊರೆನ್, ‘ನಾವು ಅನ್ನಪೂರ್ಣ ಹಣದ ಬಗ್ಗೆ ಪಂಚಾಯತ್ ಮತ್ತು ಬ್ಲಾಕ್ ಕಚೇರಿಗೆ ಪದೇ ಪದೇ ಹೋಗಿದ್ದೇವೆ, ಆದರೆ ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ. ನಾವು ಈಗ ಪಂಚಾಯತ್ ಕಚೇರಿಗಳ ಮುಂದೆ ಧರಣಿ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಅಕ್ಟೋಬರ್ 7ರಂದು ರಾಜಕಟಾ ಪ್ರದೇಶದಲ್ಲಿ ಮನವಿ ಸಲ್ಲಿಸಲು ಮಹಿಳೆಯರು ನಿರ್ಧರಿಸಿದಾಗ ಬಿಜೆಪಿ ಕಾರ್ಯಕರ್ತರು ತಮಗೆ ಬೆದರಿಕೆ ಹಾಕಿದ್ದರು ಎಂದು ಭಾನುಮತಿ ಸರ್ದಾರ್ ಆರೋಪಿಸಿದ್ದಾರೆ.

‘ನೀವು ಅನ್ನಪೂರ್ಣ ಯೋಜನೆಯ ವಿಷಯವನ್ನು ಪ್ರಸ್ತಾಪಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ನಮಗೆ ಎಚ್ಚರಿಕೆ ನೀಡಿದ್ದರು. ಆದರೆ, ನಾವು ಅವರ ಬೆದರಿಕೆಗಳಿಗೆ ತಲೆಬಾಗಲಿಲ್ಲ. ಯಾರಾದರೂ ದಾಳಿ ಮಾಡಿದರೆ ಪ್ರತಿರೋಧಿಸಲು ಸಿದ್ಧರಾಗಿ ನಾವು ಮನವಿ ಸಲ್ಲಿಸಲು ಹೋದೆವು’ ಎಂದು ಅವರು ‘ದಿ ವೈರ್’ಗೆ ತಿಳಿಸಿದರು. ಅಂತಿಮವಾಗಿ ಮಹಿಳೆಯರು ತಮ್ಮ ಮನವಿಯನ್ನು ಸಲ್ಲಿಸಿದರು.

ಬಂಗಾಳದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಹಿಳೆಯರು ಇನ್ನೂ ಪರಿಶೀಲನೆಯ ಹಂತದಲ್ಲಿದ್ದಾರೆ.

ಅನ್ನಪೂರ್ಣ ಯೋಜನೆಗಾಗಿ ಮೂವತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರ ಅರ್ಜಿಗಳು ‘ಪ್ರಕ್ರಿಯೆಯಲ್ಲಿವೆ’ ಎಂದು ಪಟ್ಟಿಮಾಡಲ್ಪಟ್ಟಿದ್ದು, ಇನ್ನೂ ಪರಿಶೀಲನೆಯಲ್ಲಿವೆ ಎಂದು ವರದಿಯಾಗಿದೆ.

ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ವರದಿಗಾರರಿಗೆ ತಿಳಿಸಿದ ಪ್ರಕಾರ, ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸುಮಾರು 1.90 ಕೋಟಿ ಅರ್ಜಿಗಳು ಬಂದಿವೆ. ಇವುಗಳಲ್ಲಿ 1.56 ಕೋಟಿ ಮಹಿಳೆಯರಿಗೆ ಭರವಸೆ ನೀಡಲಾದ 3,000 ರೂಪಾಯಿ ಆರ್ಥಿಕ ನೆರವನ್ನು ನೀಡಲಾಗಿದೆ.

ಅನ್ನಪೂರ್ಣ ಯೋಜನೆಯ ಅರ್ಜಿ ಸಲ್ಲಿಕೆ ಪೋರ್ಟಲ್ ಅನ್ನು ಈಗಾಗಲೇ ಮುಚ್ಚಲಾಗಿದೆ. ಇದರಿಂದಾಗಿ ಮಹಿಳೆಯರಿಗೆ ಹೊಸ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಅವಕಾಶವಿಲ್ಲದಂತಾಗಿದೆ.

ಅಕ್ಟೋಬರ್ 2ರಿಂದ 4ರವರೆಗೆ ನಡೆದ ಇತ್ತೀಚಿನ ‘ಸೇವಾ ಸೇತು ಅಭಿಯಾನ’ ಶಿಬಿರಗಳಲ್ಲಿ ಆರಂಭದಲ್ಲಿ ಅನ್ನಪೂರ್ಣ ಯೋಜನೆಯನ್ನು ಸೇರಿಸಿರಲಿಲ್ಲ. ಆದರೆ, ಹಣ ಸಿಗದ ಮಹಿಳೆಯರ ಆಕ್ರೋಶವು ರಾಜ್ಯಾದ್ಯಂತದ ಶಿಬಿರಗಳಲ್ಲಿ ಹೊರಬಂತು. ಇದರ ಬಳಿಕ, ಈ ಯೋಜನೆಗೆ ಸಂಬಂಧಿಸಿದ ದೂರುಗಳನ್ನು ಶಿಬಿರಗಳಲ್ಲಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಯಿತು.

ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತ್ತು ಸರ್ಕಾರದ ಸೂಚನೆಗಳನ್ನು ಪಾಲಿಸಿದರೂ ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳು ಪರಿಶೀಲನಾ ಹಂತದಲ್ಲೇ ಏಕೆ ಉಳಿದಿವೆ ಎಂದು ಮಹಿಳೆಯರು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ.

►ಬಿಜೆಪಿ ಶಾಸಕರಿಂದ ನೇರವಾಗಿ ಭೇಟಿಯಾಗುವಂತೆ ಮನವಿ

ಪ್ರತಿಭಟನೆಗಳು ಹೆಚ್ಚಾಗುತ್ತಿರುವಂತೆ, ಆಡಳಿತಾರೂಢ ಬಿಜೆಪಿಯು ರಾಜಕೀಯವಾಗಿ ಅತೃಪ್ತಿಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಹಲವು ಕಡೆಗಳಲ್ಲಿ, ಅರ್ಜಿಗಳು ಪ್ರಕ್ರಿಯೆಯಲ್ಲಿರುವ ಮಹಿಳೆಯರು ತಮ್ಮನ್ನು ನೇರವಾಗಿ ಬಂದು ಭೇಟಿಯಾಗುವಂತೆ ಬಿಜೆಪಿ ಶಾಸಕರು ಕೋರಿದ್ದಾರೆ. ಆದರೆ, ಅಂತಹ ಭೇಟಿಗಳು ಕೂಡ ವಿವಾದಕ್ಕೆ ಕಾರಣವಾಗಿವೆ. ಬಂಕುರಾ ನಗರದ ಕೇತರ್ದಂಗಾ ಪ್ರದೇಶದ ಮುಸ್ಲಿಂ ಮಹಿಳೆಯರು, ತಾವು ಭೇಟಿಯಾದಾಗ ಬಂಕುರಾ ಶಾಸಕ ನಿಲಾದ್ರಿ ಶೇಖರ್ ದಾನಾ ಅವರಿಂದ ಅವಮಾನಕ್ಕೊಳಗಾಗಿದ್ದೇವೆ ಎಂದು ಇತ್ತೀಚೆಗೆ ಆರೋಪಿಸಿದ್ದಾರೆ. ಈ ಸಂವಾದದ ವೇಳೆ ಧರ್ಮದ ವಿಷಯವನ್ನು ಪ್ರಸ್ತಾಪಿಸಲಾಯಿತು ಎಂದೂ ಅವರು ದೂರಿದ್ದಾರೆ.

ಅನ್ನಪೂರ್ಣ ಸಹಾಯಕ್ಕೆ ಯಾರು ಅರ್ಹರು ಎಂಬುದನ್ನು ಸ್ಪಷ್ಟಪಡಿಸುವ ಆರಂಭಿಕ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿತ್ತು ಎಂದು ಹಿರಿಯ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ನಂತರದ ಅನಧಿಕೃತ ಮತ್ತು ಮೌಖಿಕ ಸೂಚನೆಗಳು ಪ್ರಕ್ರಿಯೆಯನ್ನು ಇನ್ನಷ್ಟು ಜಟಿಲಗೊಳಿಸಿವೆ ಎಂದು ವರದಿಯಾಗಿದೆ.

ಮಾಸಿಕ ಆದಾಯ 10,000 ರೂಪಾಯಿಗಿಂತ ಹೆಚ್ಚಿರುವ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ ಎಂಬುದು ಅಂತಹ ಒಂದು ಸೂಚನೆಯಾಗಿದೆ ಎಂದು ಅಧಿಕಾರಿ ತಿಳಿಸಿದರು. ಈ ರೀತಿಯ ಬದಲಾಗುತ್ತಿರುವ ಅಥವಾ ಲಿಖಿತವಲ್ಲದ ಸೂಚನೆಗಳು ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರಿಗಳಿಗೆ ತೊಂದರೆಯನ್ನುಂಟುಮಾಡಿವೆ. ಸಿಬ್ಬಂದಿ ಪರಿಶೀಲನೆ ಪೂರ್ಣಗೊಳಿಸಿದರೂ, ಕೆಲವು ಅರ್ಜಿಗಳು ಇನ್ನೂ ಪ್ರಕ್ರಿಯೆಯ ಹಂತದಲ್ಲೇ ಉಳಿದುಕೊಂಡಿವೆ.

ಮುಖ್ಯಮಂತ್ರಿ ಸುಭೇಂದು ಅಧಿಕಾರಿ ಅವರು ಕರೆದಿದ್ದ ಆಡಳಿತಾತ್ಮಕ ಸಭೆಗಳಲ್ಲಿ ಅನ್ನಪೂರ್ಣ ಯೋಜನೆಯು ಪದೇ ಪದೇ ಕಳವಳದ ವಿಷಯವಾಗಿದೆ. ಸಾರ್ವಜನಿಕ ಸಭೆಗಳಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದರೂ, ಅದು ಇನ್ನೂ ಬಗೆಹರಿದಿಲ್ಲ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor