Photo Credit : indianexpress.com

ಹೊಸದಿಲ್ಲಿ: ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ತನ್ನ ಮಾಜಿ ಮುಖ್ಯಸ್ಥ ಸಿದ್ಧಾರ್ಥ್ ಮಿಶ್ರಾ ಅವರ ಪತ್ನಿಯ ಒಡೆತನದ ಕಂಪೆನಿಗೆ 56.8 ಕೋಟಿ ರೂ. ಮೊತ್ತದ ಟೆಂಡರ್ ನೀಡಿದೆ. ಟ್ಯಾಂಕ್ ನಾಶಕ ಕ್ಷಿಪಣಿಗಳಿಗೆ ಅಗತ್ಯವಾದ 300 ಆಪ್ಟಿಕಲ್ ಸೈಟ್‌ ಗಳನ್ನು ಪೂರೈಸಲು ಈ ಟೆಂಡರ್ ನೀಡಲಾಗಿದೆ. ಈ ಖರೀದಿಗೆ ಬೇರೆ ಕಂಪೆನಿಗಳಿಂದ ಬಿಡ್ ಆಹ್ವಾನಿಸದಿರುವುದು ಹಿತಾಸಕ್ತಿ ಸಂಘರ್ಷದ ಕುರಿತು ಪ್ರಶ್ನೆಗಳಿಗೆ ಕಾರಣವಾಗಿದೆ.

ಹೈದರಾಬಾದ್‌ನ ಬಿಡಿಎಲ್, 'ತುರ್ತು ಅಗತ್ಯ' ಇದೆ ಎಂದು ಹೇಳಿ, ಐಂದ್ರಿ ಡಿಫೆನ್ಸ್ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‌ಗೆ ಮಾತ್ರ ಟೆಂಡರ್ ನೀಡಿದೆ. ಈ ಕಂಪೆನಿಯನ್ನು ಬಿಡಿಎಲ್‌ನ ಮಾಜಿ ಮುಖ್ಯಸ್ಥ ಸಿದ್ಧಾರ್ಥ್ ಮಿಶ್ರಾ ಮತ್ತು ಅವರ ಪತ್ನಿ ಶಾಂಭವಿ ಮಿಶ್ರಾ ಅವರು 2024ರ ಮೇ ತಿಂಗಳಲ್ಲಿ ಆರಂಭಿಸಿದ್ದರು. ಈಗ ಕಂಪೆನಿಯ ಶೇ 95ರಷ್ಟು ಷೇರುಗಳು ಶಾಂಭವಿ ಮಿಶ್ರಾ ಅವರ ಹೆಸರಿನಲ್ಲಿವೆ.

ಈ ವರ್ಷದ ಮೇ ತಿಂಗಳಲ್ಲಿ ಐಂದ್ರಿ ಡಿಫೆನ್ಸ್ ಅಡ್ವೈಸರಿ ಪೂರೈಸಿದ್ದ ಐದು ಮಾದರಿ ಆಪ್ಟಿಕಲ್ ಸೈಟ್‌ಗಳ ಪರೀಕ್ಷೆ ಪೂರ್ಣಗೊಂಡಿತ್ತು. ಬಳಿಕ, ಮುಂದಿನ ಏಳು ತಿಂಗಳೊಳಗೆ 300 ಆಪ್ಟಿಕಲ್ ಸೈಟ್‌ಗಳನ್ನು ಪೂರೈಸುವಂತೆ ಬಿಡಿಎಲ್ ಕಂಪೆನಿಗೆ ಟೆಂಡರ್ ನೀಡಿತು.

ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ಪೋರ್ಟಲ್ ಪ್ರಕಾರ, ಕಂಪೆನಿ ತಾಂತ್ರಿಕ ಪರಿಶೀಲನೆಯಲ್ಲಿ ಉತ್ತೀರ್ಣವಾಗಿದೆ. 56.8 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಸಿದ್ದು, ಅದರ ಬೆಲೆಗೆ ಸಂಬಂಧಿಸಿದ ಪರಿಶೀಲನೆ ಇನ್ನೂ ನಡೆಯುತ್ತಿದೆ.

*ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಖಾಸಗಿ ಕಂಪೆನಿಗೆ ಅವಕಾಶ

ಬಿಡಿಎಲ್ 2024 ಮತ್ತು 2025ರಲ್ಲಿಯೂ ಇದೇ ರೀತಿಯ ಆಪ್ಟಿಕಲ್ ಸೈಟ್‌ಗಳನ್ನು ಖರೀದಿಸಿತ್ತು. ಆದರೆ, ಆ ಎರಡೂ ವರ್ಷಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಅಲ್ಲದೆ, ಸರಕಾರಿ ವಲಯದ ಸಂಸ್ಥೆಗಳು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿತ್ತು.

2024ರಲ್ಲಿ ಕೇಂದ್ರ ಸರಕಾರದ ಸಾರ್ವಜನಿಕ ವಲಯದ ಉದ್ಯಮಗಳಿಗೆ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿತ್ತು. 2025ರಲ್ಲಿ ಈ ಅವಕಾಶವನ್ನು ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳಿಗೆ ವಿಸ್ತರಿಸಲಾಗಿತ್ತು.

ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ಪೋರ್ಟಲ್‌ನ ದಾಖಲೆಗಳ ಪ್ರಕಾರ, ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಇಂಡಿಯಾ ಆಪ್ಟೆಲ್ ಲಿಮಿಟೆಡ್ ಎರಡೂ ವರ್ಷಗಳ ಟೆಂಡರ್‌ಗಳನ್ನು ಗೆದ್ದಿತ್ತು. ಈ ಕಂಪೆನಿಯು 'ಮಿನಿ ರತ್ನ' ಸ್ಥಾನಮಾನ ಹೊಂದಿರುವ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ.

ಆದರೆ, 2026ರಲ್ಲಿ ಬಿಡಿಎಲ್ ಟೆಂಡರ್ ನೀಡುವ ವಿಧಾನವನ್ನು ಬದಲಿಸಿದೆ. ಈ ಬಾರಿ ಸರಕಾರಿ ಸಂಸ್ಥೆಗಳಿಗೆ ಮಾತ್ರ ಅವಕಾಶ ನೀಡುವ ನಿಯಮವನ್ನು ಕೈಬಿಟ್ಟು, ಖಾಸಗಿ ಕಂಪೆನಿಯಾದ ಐಂದ್ರಿ ಡಿಫೆನ್ಸ್ ಅಡ್ವೈಸರಿಗೆ ಮಾತ್ರ ಟೆಂಡರ್ ಆಹ್ವಾನಿಸಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ರೀತಿಯ ಆಪ್ಟಿಕಲ್ ಸೈಟ್‌ಗಳ ಖರೀದಿಗೆ ಖಾಸಗಿ ಕಂಪೆನಿಯೊಂದಕ್ಕೆ ಅವಕಾಶ ನೀಡಿರುವುದು ಇದೇ ಮೊದಲು.

ತುರ್ತು ಖರೀದಿಗೆ ಕಾರಣವೇನು?

'ಏಕ ಟೆಂಡರ್' ಎಂದರೆ ಒಂದೇ ಕಂಪೆನಿಯಿಂದ ಟೆಂಡರ್ ಆಹ್ವಾನಿಸುವ ವಿಧಾನ. ಅಗತ್ಯವಿರುವ ವಸ್ತುವನ್ನು ಪೂರೈಸಲು ಒಂದೇ ಕಂಪೆನಿ ಲಭ್ಯವಿದ್ದಾಗ ಅಥವಾ ತುರ್ತಾಗಿ ಖರೀದಿ ಮಾಡಬೇಕಾದಾಗ ಈ ವಿಧಾನವನ್ನು ಬಳಸಬಹುದು.

ಬಿಡಿಎಲ್‌ನ ಟೆಂಡರ್ ಷರತ್ತುಗಳ ಪ್ರಕಾರ, ಖರೀದಿ ತುರ್ತಾಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿ ದೃಢೀಕರಿಸಬೇಕು. ಸಾಮಾನ್ಯ ಟೆಂಡರ್ ಪ್ರಕ್ರಿಯೆ ಅನುಸರಿಸದೆ ಖರೀದಿ ಮಾಡುವುದರಿಂದ ಹೆಚ್ಚುವರಿ ವೆಚ್ಚವಾದರೂ, ತುರ್ತು ಅಗತ್ಯದ ಕಾರಣ ಅದನ್ನು ಸಮರ್ಥಿಸಿಕೊಳ್ಳಬೇಕು. ಅಲ್ಲದೆ, ಖರೀದಿ ಏಕೆ ತುರ್ತಾಗಿ ಅಗತ್ಯವಾಯಿತು ಮತ್ತು ಈ ಅಗತ್ಯವನ್ನು ಮೊದಲೇ ಏಕೆ ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದನ್ನೂ ದಾಖಲೆಗಳಲ್ಲಿ ಸ್ಪಷ್ಟಪಡಿಸಬೇಕು.

ಆದರೆ, ಈ ಖರೀದಿಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಲು ಕಾರಣವೇನು ಎಂಬುದನ್ನು ಟೆಂಡರ್‌ನಲ್ಲಿ ವಿವರಿಸಲಾಗಿಲ್ಲ.

ಮಾಜಿ ಮುಖ್ಯಸ್ಥರ ಕುಟುಂಬದ ಕಂಪೆನಿ

ಸಿದ್ಧಾರ್ಥ್ ಮಿಶ್ರಾ ಅವರು ಬಿಡಿಎಲ್‌ನ ಸಿಎಂಡಿಯಾಗಿ ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ 2023ರ ಮಾರ್ಚ್‌ ನಲ್ಲಿ ನಿವೃತ್ತರಾಗಿದ್ದರು. ಕಂಪೆನಿಗಳ ದಾಖಲೆಗಳ ಪ್ರಕಾರ, ಅವರು ಪತ್ನಿಯೊಂದಿಗೆ 2024ರ ಮೇ ತಿಂಗಳಲ್ಲಿ ಐಂದ್ರಿ ಡಿಫೆನ್ಸ್ ಅಡ್ವೈಸರಿ ಸ್ಥಾಪಿಸಿದ್ದರು. ಆರಂಭದಲ್ಲಿ ಇಬ್ಬರೂ ತಲಾ ಶೇ. 50ರಷ್ಟು ಷೇರುಗಳನ್ನು ಹೊಂದಿದ್ದರು.

ಕಂಪೆನಿ ಸ್ಥಾಪನೆಯಾದಾಗಿನಿಂದ 2025ರ ಜನವರಿವರೆಗೆ ಮಿಶ್ರಾ ಅದರ ನಿರ್ದೇಶಕ ಹಾಗೂ ಷೇರುದಾರರಾಗಿದ್ದರು. ಕೋಲ್ಕತ್ತಾದ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ ತಾಂತ್ರಿಕ ಸದಸ್ಯರಾಗಿ ನೇಮಕಗೊಂಡ ಬಳಿಕ ಕಂಪೆನಿಯಿಂದ ಹೊರಬಂದರು.

ಪ್ರಸ್ತುತ ಶಾಂಭವಿ ಮಿಶ್ರಾ ಶೇ. 95ರಷ್ಟು ಷೇರುಗಳನ್ನು ಹೊಂದಿದ್ದು, ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ನಿರ್ದೇಶಕಿ ಕೌಶಿಕಿ ನಂದನ್ ವಾತ್ಸ್ಯಾಯನ ಉಳಿದ ಶೇ. 5ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೋರಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಕಳುಹಿಸಿದ ಸಂದೇಶಗಳು ಹಾಗೂ ದೂರವಾಣಿ ಕರೆಗಳಿಗೆ ಸಿದ್ಧಾರ್ಥ್ ಮಿಶ್ರಾ ಮತ್ತು ಶಾಂಭವಿ ಮಿಶ್ರಾ ಉತ್ತರಿಸಲಿಲ್ಲ. ಕಂಪೆನಿಗಳ ನೋಂದಣಾಧಿಕಾರಿಗೆ ಸಲ್ಲಿಸಿದ ದಾಖಲೆಗಳಲ್ಲಿರುವ ವಿಳಾಸಕ್ಕೆ ಕಳುಹಿಸಿದ ಇಮೇಲ್‌ ಗಳಿಗೂ ಕಂಪೆನಿ ಪ್ರತಿಕ್ರಿಯಿಸಲಿಲ್ಲ. ಬಿಡಿಎಲ್‌ ನ ಟೆಂಡರ್ ಕುರಿತು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ವಾತ್ಸ್ಯಾಯನ ತಿಳಿಸಿದ್ದಾರೆ. ಪತ್ರಿಕೆ ಕಳುಹಿಸಿದ ಪ್ರಶ್ನೆಗಳಿಗೂ ಬಿಡಿಎಲ್ ಉತ್ತರಿಸಿಲ್ಲ.

*ಕ್ಷಿಪಣಿಗಳಲ್ಲಿ ಆಪ್ಟಿಕಲ್ ಸೈಟ್‌ ಗಳ ಪಾತ್ರ

ಆಪ್ಟಿಕಲ್ ಸೈಟ್‌ ಗಳು ಟ್ಯಾಂಕ್ ನಾಶಕ ಮಾರ್ಗದರ್ಶಿ ಕ್ಷಿಪಣಿಗಳ ಗುರಿ ಪತ್ತೆ ಮತ್ತು ಗುರಿ ಸ್ವಾಧೀನ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ಗುರಿಯನ್ನು ಗುರುತಿಸಲು, ಅದರ ಚಲನವಲನವನ್ನು ಪತ್ತೆಹಚ್ಚಲು ಹಾಗೂ ಕ್ಷಿಪಣಿಯನ್ನು ಗುರಿಯತ್ತ ನಿರ್ದೇಶಿಸಲು ಇವು ನೆರವಾಗುತ್ತವೆ.

ಬಿಡಿಎಲ್‌ ನ ಉತ್ಪನ್ನಗಳ ಪೈಕಿ ರಷ್ಯಾದ ಕಂಪೆನಿಯ ಪರವಾನಗಿ ಅಡಿಯಲ್ಲಿ ತಯಾರಿಸುವ ಕೊಂಕುರ್ಸ್-ಎಂ ಕ್ಷಿಪಣಿಯೂ ಸೇರಿದೆ. 2022ರಲ್ಲಿ ಈ ಕ್ಷಿಪಣಿಗಳ ತಯಾರಿಕೆ ಮತ್ತು ಪೂರೈಕೆಗಾಗಿ ಭಾರತೀಯ ಸೇನೆಯೊಂದಿಗೆ 3,131.82 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಬಿಡಿಎಲ್ ಸಹಿ ಹಾಕಿತ್ತು.

*ಸಣ್ಣ ಉದ್ಯಮಗಳ ಖರೀದಿ ಆದ್ಯತೆಯಿಂದ ವಿನಾಯಿತಿ

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್‌ಇ) ನೀಡಲಾಗುವ ಖರೀದಿ ಆದ್ಯತೆಯ ನಿಯಮಗಳಲ್ಲಿಯೂ ಈ ಟೆಂಡರ್ ಗಮನ ಸೆಳೆಯುತ್ತದೆ. 2024 ಮತ್ತು 2025ರ ಟೆಂಡರ್‌ ಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಆದ್ಯತೆಯಿಂದ ವಿನಾಯಿತಿ ನೀಡಲಾಗಿತ್ತು. 2026ರ ಟೆಂಡರ್‌ನಲ್ಲಿಯೂ ವಿನಾಯಿತಿ ಅನ್ವಯಿಸಲಾಗಿದೆ.

ಸಾಮಾನ್ಯವಾಗಿ, ಅತ್ಯಂತ ಕಡಿಮೆ ಬೆಲೆ ಉಲ್ಲೇಖಿಸುವ ಬಿಡ್‌ ದಾರನ (ಎಲ್‌1) ಬೆಲೆಗಿಂತ ಶೇ. 15ರ ಒಳಗೆ ಬೆಲೆ ಉಲ್ಲೇಖಿಸುವ ಅರ್ಹ ಎಂಎಸ್‌ಇಗಳು ಮತ್ತು ಮೂಲ ಉಪಕರಣ ತಯಾರಕರಿಗೆ ಎಲ್‌1 ಬೆಲೆಗೆ ಹೊಂದಿಕೊಳ್ಳುವ ಅವಕಾಶ ನೀಡಬಹುದು. ಅವರು ಈ ಅವಕಾಶ ಬಳಸಿಕೊಂಡರೆ, ಒಟ್ಟು ಖರೀದಿ ಪ್ರಮಾಣದ ಶೇ. 25ರಷ್ಟು ಪಾಲನ್ನು ಪಡೆಯಬಹುದು.

*ನೌಕಾಪಡೆಯಲ್ಲಿ ಮೂರು ದಶಕಗಳ ಸೇವೆ

ಇಂಜಿನಿಯರ್ ಆಗಿರುವ ಸಿದ್ಧಾರ್ಥ್ ಮಿಶ್ರಾ ಅವರು 2016ರವರೆಗೆ ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ ನಲ್ಲಿ ಮೂರು ವರ್ಷಗಳ ಕಾಲ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಬಿಡಿಎಲ್‌ ನ ಸಿಎಂಡಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor