ಅಂಕಿತಾ ಭಂಡಾರಿ ಕೊಲೆ ಪ್ರಕರಣ: ದುಶ್ಯಂತ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ಅಂಕಿತಾ ಪೋಷಕರು ವಿರೋಧಿಸುತ್ತಿರುವುದೇಕೆ?
Photo Credit : PTI
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದಿಲ್ಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ, ಈ ದಂಪತಿ ಇಂಡಿಯಾ ಗೇಟ್ ಬಳಿ ಧರಣಿ ನಡೆಸಿ, ತಮ್ಮ ಮೃತ ಮಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಈ ದಂಪತಿ ಬೇರೆ ಯಾರೂ ಅಲ್ಲ, 2022ರಲ್ಲಿ ಉತ್ತರಾಖಂಡದಲ್ಲಿ ಹತ್ಯೆಗೀಡಾದ 19 ವರ್ಷದ ಅಂಕಿತಾ ಭಂಡಾರಿ ಅವರ ಪೋಷಕರು. ಬಿಜೆಪಿಯ ಹಿರಿಯ ನಾಯಕ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಅಂಕಿತಾ ಅವರ ಪೋಷಕರು ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಅಂಕಿತಾ ಅವರ ತಂದೆ ವೀರೇಂದ್ರ ಭಂಡಾರಿ ಅವರು, ಈ ನೇಮಕದ ಕುರಿತು ತನಿಖೆ ನಡೆಸುವವರೆಗೆ ಗೌತಮ್ ಅವರ ನೇಮಕಾತಿಯನ್ನು ತಡೆಹಿಡಿಯುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ಮುಂಜಾನೆ, ಅಂಕಿತಾ ಅವರ ಪೋಷಕರೊಂದಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾದರು. ಬಳಿಕ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ದಿಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಂಕಿತಾ ಅವರ ಪೋಷಕರು ಹಾಗೂ ಹಲವಾರು ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆದರು. ಸುಮಾರು ಒಂದು ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
ಅಂಕಿತಾ ಭಂಡಾರಿ ಹತ್ಯೆ ಪ್ರಕರಣ
ಅಂಕಿತಾ ಭಂಡಾರಿ ಅವರ ಪೋಷಕರ ಪ್ರತಿಭಟನೆ 2022ರಲ್ಲಿ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದೆ.
19 ವರ್ಷದ ಅಂಕಿತಾ ಭಂಡಾರಿ ಅವರು ರಿಷಿಕೇಶ ಬಳಿಯ ವನಾಂತರ ರೆಸಾರ್ಟ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 18ರಂದು ಅವರನ್ನು ಹತ್ಯೆ ಮಾಡಲಾಗಿದ್ದು, ಆರು ದಿನಗಳ ಬಳಿಕ ಕಾಲುವೆಯೊಂದರಿಂದ ಅವರ ಶವವನ್ನು ಹೊರತೆಗೆಯಲಾಯಿತು.
ತನಿಖೆಯ ಸಂದರ್ಭದಲ್ಲಿ, ಅತಿಥಿಗಳೊಂದಿಗೆ ಲೈಂಗಿಕ ಸೇವೆ ಒದಗಿಸುವಂತೆ ಅಂಕಿತಾ ಅವರಿಗೆ ಒತ್ತಡ ಹೇರಲಾಗುತ್ತಿತ್ತು ಮತ್ತು ಅವರು ಅದನ್ನು ವಿರೋಧಿಸಿದ್ದರು ಎಂಬುದು ಬಹಿರಂಗವಾಯಿತು. 10,000 ರೂಪಾಯಿಗಳ ಬದಲಿಗೆ 'ವಿಐಪಿ (VIP) ವ್ಯಕ್ತಿಗೆ ವಿಶೇಷ ಸೇವೆ ಒದಗಿಸುವಂತೆ' ರೆಸಾರ್ಟ್ ಮಾಲೀಕರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಮ್ಮ ಸ್ನೇಹಿತ ಪುಷ್ಪ್ ಗೆ ತಿಳಿಸಿದ್ದರು.
ಸೆಪ್ಟೆಂಬರ್ 18ರಂದು (ಅವರು ಮೃತಪಟ್ಟ ರಾತ್ರಿ) ಅಂಕಿತಾ ಹಾಗೂ ಹಿರಿಯ ಬಿಜೆಪಿ ನಾಯಕರೊಬ್ಬರ ಮಗ ಮತ್ತು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ಆತನ ಇಬ್ಬರು ಸಿಬ್ಬಂದಿಯಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ವಾಗ್ವಾದದ ಬಳಿಕ ಅಂಕಿತಾ ಅವರನ್ನು ಬಲವಂತವಾಗಿ ವಾಹನಕ್ಕೆ ಹತ್ತಿಸಿ, ನಂತರ ಅಪಾಯಕಾರಿ ಪ್ರವಾಹಕ್ಕೆ ಹೆಸರಾದ ಚೀಲಾ ಕಾಲುವೆಗೆ ತಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
2025ರ ಮೇ ತಿಂಗಳಲ್ಲಿ ಪೌರಿ ಗಢವಾಲ್ ನ್ಯಾಯಾಲಯವು ಪುಲ್ಕಿತ್ ಆರ್ಯ ಹಾಗೂ ಆತನ ಇಬ್ಬರು ಸಹಚರರಾದ ಅಂಕಿತ್ ಗುಪ್ತಾ ಮತ್ತು ಸೌರಭ್ ಭಾಸ್ಕರ್ ಅವರನ್ನು ದೋಷಿಗಳೆಂದು ತೀರ್ಪು ನೀಡಿ, ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿತು.
ಪುಲ್ಕಿತ್ ಬಂಧನದ ಬಳಿಕ ಉತ್ತರಾಖಂಡ ಬಿಜೆಪಿ ಆತನ ತಂದೆ ವಿನೋದ್ ಮತ್ತು ಹಿರಿಯ ಸಹೋದರನನ್ನು ಪಕ್ಷದಿಂದ ಉಚ್ಚಾಟಿಸಿತು. ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಿನೋದ್ ಆರ್ಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅಂಕಿತಾ ಪೋಷಕರ ಬೇಡಿಕೆ ಏನು?
ಈ ಪ್ರಕರಣದಲ್ಲಿ ಒಂದು ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ತನಿಖೆಯ ಸಂದರ್ಭದಲ್ಲಿ ಈ ಪ್ರಕರಣದಲ್ಲಿ 'ವಿಐಪಿ'ಯೊಬ್ಬರ ಕೈವಾಡವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ 'ವಿಐಪಿ' ಯಾರೆಂಬುದನ್ನು ಬಹಿರಂಗಪಡಿಸಬೇಕೆಂದು ಅಂಕಿತಾ ಅವರ ಪೋಷಕರು ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ಅಂಕಿತಾ ಅವರ ಪೋಷಕರ ಪ್ರಕಾರ, ಆ ವಿಐಪಿ ಬೇರೆ ಯಾರೂ ಅಲ್ಲ, ಅಕ್ಟೋಬರ್ 12ರಂದು ಸಿಕ್ಕಿಂ ರಾಜ್ಯಪಾಲರಾಗಿ ನೇಮಕಗೊಂಡಿರುವ ಬಿಜೆಪಿಯ ದುಶ್ಯಂತ್ ಕುಮಾರ್ ಗೌತಮ್. ಈ ನೇಮಕವನ್ನು ಅಂಕಿತಾ ಅವರ ಪೋಷಕರು ವಿರೋಧಿಸುತ್ತಿದ್ದು, ಅದಕ್ಕಾಗಿಯೇ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
'ನಮ್ಮ ಮಗಳ ಹತ್ಯೆಯಲ್ಲಿ ಆ ವಿಐಪಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಈಗ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳು ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಿವೆ' ಎಂದು ಅಂಕಿತಾ ಅವರ ತಂದೆ ಹೇಳಿದರು. 'ಈ ಪ್ರಕರಣದ ಸಿಬಿಐ ತನಿಖೆ ಮುಗಿಯುವವರೆಗೆ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಬಾರದೆಂದು ನಾವು ಸರ್ಕಾರ ಮತ್ತು ಭಾರತದ ರಾಷ್ಟ್ರಪತಿಗಳನ್ನು ವಿನಂತಿಸುತ್ತೇವೆ' ಎಂದರು.
ಭಾವುಕರಾಗಿ ಮಾತನಾಡಿದ ಅಂಕಿತಾ ಅವರ ತಾಯಿ ಸೋನಿ ದೇವಿ, ತನಿಖೆ ಪೂರ್ಣಗೊಳ್ಳುವ ಮುನ್ನ ಈ ನೇಮಕವನ್ನು ಮುಂದುವರಿಸಬಾರದು ಎಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದರು.
'(ಬಿಜೆಪಿ ನಾಯಕ ದುಶ್ಯಂತ್ ಕುಮಾರ್ ಗೌತಮ್) ಈಗ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ಎಂಬ ಸುದ್ದಿ ಅಕ್ಟೋಬರ್ 12ರಂದು ನಮಗೆ ತಿಳಿದಾಗ ನೋವಾಯಿತು. ಸ್ವತಃ ಮಹಿಳೆಯಾಗಿರುವ ಮತ್ತು ನನ್ನ ಭಾವನೆಗಳನ್ನು ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬಲ್ಲ ಗೌರವಾನ್ವಿತ ರಾಷ್ಟ್ರಪತಿಯವರಲ್ಲಿ ನಾನು ಮನವಿ ಮಾಡುತ್ತೇನೆ. ಈ ವ್ಯಕ್ತಿಯ ವಿರುದ್ಧದ ಸಿಬಿಐ ತನಿಖೆ ಮುಗಿಯುವವರೆಗೆ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ನಿರ್ಧಾರವನ್ನು ತಡೆಹಿಡಿಯಬೇಕು' ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಇಂಡಿಯಾ ಗೇಟ್ ನಲ್ಲಿ ಅಂಕಿತಾ ಅವರ ಪೋಷಕರೊಂದಿಗೆ ಸೇರಿಕೊಂಡ ಕೆಲವೇ ಕ್ಷಣಗಳಲ್ಲಿ ದಿಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲರನ್ನೂ ವಶಕ್ಕೆ ಪಡೆದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಂಕಿತಾ ಭಂಡಾರಿ ಅವರ ಪೋಷಕರು ಕಳೆದ ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದರೂ, ಅಧಿಕಾರಿಗಳು ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಈ ಬಂಧನವನ್ನು ಖಂಡಿಸಿದರು.
ವಶಕ್ಕೆ ಪಡೆದ ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಅಂಕಿತಾ ಅವರ ಪೋಷಕರು ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಬಿಡುಗಡೆ ಮಾಡಿದರು.
ಸೌಜನ್ಯ: firstpost.com