ಭಾರತದ ಅಧಿಕೃತ ಶಾಲಾ ಅಂಕಿ-ಅಂಶಗಳು ನಂಬಲರ್ಹವಲ್ಲ ಎಂಬುದನ್ನು Gen Alpha ಪ್ರತಿಭಟನೆಗಳು ಎತ್ತಿಹಿಡಿಯುತ್ತಿವೆಯೇ?

ಜೋಹಾನ್ನಾ ದೀಕ್ಷಾ – scroll. in ವರದಿ

Update: 2026-08-20 21:40 IST

Photo Credit : Abhijit Dipke, @abhijeet_dipke/X

ಇತ್ತೀಚಿನ ವಾರಗಳಲ್ಲಿ ದೇಶದಾದ್ಯಂತ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆಗಳ ದುಸ್ಥಿತಿಯನ್ನು ಖಂಡಿಸಿ ಸರಣಿ ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ. ದಿಲ್ಲಿಯಲ್ಲಿ ಆರಂಭವಾಗಿ ದೇಶಾದ್ಯಂತ ಹರಡಿದ್ದ Gen Z ಪ್ರತಿಭಟನೆಗಳ ಮಾದರಿಯಲ್ಲೇ ಇವು ನಡೆಯುತ್ತಿರುವುದರಿಂದ, ಇವುಗಳನ್ನು Gen Alpha ಪ್ರತಿಭಟನೆಗಳು ಎಂದು ಕರೆಯಲಾಗುತ್ತಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಶಾಲೆಯ ಮುಖ್ಯ ದ್ವಾರಗಳು ಹಾಗೂ ರಸ್ತೆಗಳಲ್ಲಿ ಕುಳಿತು ಧರಣಿ ನಡೆಸಿದ್ದಾರೆ, ಸಿಬ್ಬಂದಿಯನ್ನು ಕೊಠಡಿಗಳಲ್ಲಿ ಹಾಕಿ ಬೀಗ ಜಡಿದಿದ್ದಾರೆ ಮತ್ತು ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಸ್ಥಳೀಯ ಅಧಿಕಾರಿಗಳ ಕಚೇರಿಗಳಿಗೆ ಮೆರವಣಿಗೆ ನಡೆಸಿದ್ದಾರೆ. ಈ ಪ್ರತಿಭಟನೆಗಳ ಬೆನ್ನಲ್ಲೇ 'ಕಾಕ್ರೋಚ್ ಜನತಾ ಪಾರ್ಟಿ'ಯು "ಸ್ಕೂಲ್ ಠೀಕ್ ಕರೋ" (ಶಾಲೆಗಳನ್ನು ಸರಿಪಡಿಸಿ) ಆಂದೋಲನವನ್ನು ಆರಂಭಿಸಿದೆ.

ವಿದ್ಯಾರ್ಥಿಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಶಿಥಿಲಗೊಂಡ ತರಗತಿಗಳು, ಛಾವಣಿಯಿಂದ ಉದುರುತ್ತಿರುವ ಸಿಮೆಂಟ್ ಪ್ಲ್ಯಾಸ್ಟರ್, ಡೆಸ್ಕ್ ಮತ್ತು ಬೆಂಚ್ ಗಳ ಅಭಾವ, ಕಸದಿಂದ ತುಂಬಿದ ಶೌಚಾಲಯಗಳು ಹಾಗೂ ಕಲುಷಿತ ಕುಡಿಯುವ ನೀರಿನ ದೃಶ್ಯಗಳು ಕಂಡುಬಂದಿವೆ.

ಪ್ರತಿಭಟನೆಗಳಿಂದ ಹೊರಹೊಮ್ಮುತ್ತಿರುವ ಚಿತ್ರಣವು ಭಾರತದ ಅಧಿಕೃತ ಅಂಕಿ-ಅಂಶಗಳಿಗೆ ತೀರಾ ವಿರುದ್ಧವಾಗಿದೆ. ದೇಶದ ಶೇಕಡಾ 99ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವಿದೆ ಮತ್ತು ಶೇಕಡಾ 99.6ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ ಎಂದು ಸರ್ಕಾರದ ಡೇಟಾ ಹೇಳುತ್ತದೆ.

ಈ ಅಂಕಿ-ಅಂಶಗಳನ್ನು UDISE ಪ್ಲಸ್ (UDISE Plus) ಎಂದೇ ಕರೆಯಲ್ಪಡುವ 'ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್' ವೇದಿಕೆಯಲ್ಲಿ ಪ್ರಕಟಿಸಲಾಗಿದೆ.

ಇದು ಪ್ರತಿ ಶಾಲೆಯ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ, ತರಗತಿ ಕೊಠಡಿಗಳ ಸಂಖ್ಯೆ ಮತ್ತು ಅವುಗಳ ಸ್ಥಿತಿ, ಶೌಚಾಲಯಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು ಹಾಗೂ ಕುಡಿಯುವ ನೀರಿನ ಸೌಲಭ್ಯಗಳ ಕುರಿತ ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ.

UDISE ಡೇಟಾವು ನೆಲದ ವಾಸ್ತವಕ್ಕೆ ಯಾವಾಗಲೂ ಏಕೆ ಹೊಂದುವುದಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣವಿದೆ ಎನ್ನುತ್ತಾರೆ ಕಾರ್ಯಕರ್ತರು ಮತ್ತು ತಜ್ಞರು. ಈ ವೇದಿಕೆಯು ಶಾಲಾ ಪ್ರಾಂಶುಪಾಲರಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ. "ಶಾಲೆಯ ವೈಫಲ್ಯಗಳನ್ನು ಒಪ್ಪಿಕೊಂಡರೆ ತಮ್ಮ ಕೆಲಸಕ್ಕೆ ಅಪಾಯ ಬರಬಹುದು ಎಂಬ ಭೀತಿಯಿಂದ ಸಿಬ್ಬಂದಿ ಶಾಲೆಯ ಸ್ಥಿತಿಯ ಬಗ್ಗೆ ಎಲ್ಲವೂ ಉತ್ತಮವಾಗಿದೆ ಎಂಬಂತೆ ಬಿಂಬಿಸುವ ಅಗತ್ಯವನ್ನು ಕಂಡುಕೊಳ್ಳುತ್ತಾರೆ" ಎಂದು ರಾಜಸ್ಥಾನದ ಕಾರ್ಯಕರ್ತೆ ಏಕತಾ ಚಂದಾ ಹೇಳಿರುವುದಾಗಿ scroll.in ವರದಿ ಉಲ್ಲೇಖಿಸಿದೆ.

ಪ್ರತ್ಯೇಕ ಶಾಲೆಗಳ ಮಟ್ಟದಲ್ಲಿ ನೋಡಿದಾಗ UDISE ಡೇಟಾ ಮತ್ತು ನೆಲದ ವಾಸ್ತವದ ನಡುವಿನ ವ್ಯತ್ಯಾಸವು ಮತ್ತಷ್ಟು ಸ್ಪಷ್ಟವಾಗುತ್ತದೆ.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರ ಪ್ರದೇಶದ ಐದು ಶಾಲೆಗಳಿಗೆ ಸಂಬಂಧಿಸಿದ ಈ ವೇದಿಕೆಯ ದತ್ತಾಂಶವನ್ನು 'scroll.in' ಪರಿಶೀಲಿಸಿದೆ. UDISE ಡೇಟಾ ಈ ಶಾಲೆಗಳ ಸಕ್ಷಮ ಚಿತ್ರಣವನ್ನು ಪ್ರಸ್ತುತಪಡಿಸಿದರೆ, ಪ್ರತಿಭಟನೆಗಳ ವೀಡಿಯೊ ಆಧಾರಗಳು ಮತ್ತು ಸಾಕ್ಷ್ಯಗಳು ನೆಲದ ಮೇಲಿನ ಪರಿಸ್ಥಿತಿ ತೃಪ್ತಿಕರವಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ.

ಈ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಸೂಕ್ತ ಸ್ಪಷ್ಟನೆ ಕೋರಿ 'scroll.in’ ಸಂಬಂಧಪಟ್ಟ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಕಳುಹಿಸಿದೆ. ಈ ವರದಿ ಪ್ರಕಟವಾಗುವವರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ.

►ಅಲವರ್, ರಾಜಸ್ಥಾನ

ರಾಜಸ್ಥಾನದ ಅಲವರ್ನಲ್ಲಿರುವ ಸರ್ಕಾರಿ UPS ಜೋಧಾವಾಸ್ ಶಾಲೆ 2025-26ರಲ್ಲಿ ಅಧಿಕೃತ ಪೋರ್ಟಲ್ ಗೆ ಸಲ್ಲಿಸಿದ ಡೇಟಾ ಪ್ರಕಾರ, ಶಾಲೆಯಲ್ಲಿ ಆರು ತರಗತಿ ಕೊಠಡಿಗಳಿದ್ದು, ಅದರಲ್ಲಿ ಒಂದಕ್ಕೆ ಮಾತ್ರ ಸಣ್ಣಪುಟ್ಟ ದುರಸ್ತಿಯ ಅಗತ್ಯವಿತ್ತು.

ಶಾಲೆಯಲ್ಲಿ ಎರಡು ಶೌಚಾಲಯಗಳಿದ್ದು, ಎರಡೂ ಸುಸ್ಥಿತಿಯಲ್ಲಿವೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿತ್ತು. ಜತೆಗೆ, ಶಾಲೆಯಲ್ಲಿ ಕಾರ್ಯನಿರ್ವಹಿಸುವ ಕುಡಿಯುವ ನೀರಿನ ವ್ಯವಸ್ಥೆಯಿದೆ ಎಂದೂ ಡೇಟಾದಲ್ಲಿ ನಮೂದಿಸಲಾಗಿತ್ತು.

ಆದರೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಆರೋಪವೇ ಬೇರೆಯಾಗಿತ್ತು.

ಆಗಸ್ಟ್ ಆರಂಭದಲ್ಲಿ ಶಾಲೆಯ ಬಳಕೆಯಾಗದ ತರಗತಿಯೊಂದರ ಛಾವಣಿಯ ಸಿಮೆಂಟ್ ಹಾಸು ಕುಸಿದುಬಿದ್ದ ನಂತರ ವಿದ್ಯಾರ್ಥಿಗಳು ಧರಣಿ ಆರಂಭಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಶಾಲಾ ಕಟ್ಟಡದ ಉಳಿದ ಭಾಗ ಶಿಥಿಲಗೊಂಡಿದ್ದರಿಂದ 174 ವಿದ್ಯಾರ್ಥಿಗಳು ಕೇವಲ ಮೂರು ತರಗತಿ ಕೊಠಡಿಗಳನ್ನು ಹಂಚಿಕೊಳ್ಳಬೇಕಾಯಿತು. ತರಗತಿಗಳು ಮತ್ತು ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು, ವಾಟರ್ ಫಿಲ್ಟರ್ ಅಳವಡಿಸಬೇಕು ಹಾಗೂ ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ನೇಮಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರ ಆಶುತೋಷ್ ರಾಂಕಾ ಅವರು ವಿದ್ಯಾರ್ಥಿಗಳನ್ನು ಬೆಂಬಲಿಸಿ ಶಾಲೆಗೆ ಭೇಟಿ ನೀಡಿದ ನಂತರ ಪ್ರತಿಭಟನೆಗೆ ಮತ್ತಷ್ಟು ಬಲ ಬಂದಿತು. ಅವರ ಪ್ರವೇಶವನ್ನು ತಡೆಯಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರೊಂದಿಗೆ ರಾಂಕಾ ತೀವ್ರ ವಾಕ್ಸಮರ ನಡೆಸಿದ ನಂತರ ಈ ಭೇಟಿ ವ್ಯಾಪಕ ಗಮನ ಸೆಳೆಯಿತು. ಪ್ರತಿಭಟನೆ ಹಾಗೂ ರಾಂಕಾ ಅವರ ಭೇಟಿಯ ನಂತರ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕಳಪೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ ಎಂದು ಇದೇ ಶಾಲೆಯ ಹೆಸರು ಹೇಳಲು ಬಯಸದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರು 'scroll.in'ಗೆ ತಿಳಿಸಿದ್ದಾರೆ. "ಮಳೆ ಬಂದಾಗಲೆಲ್ಲಾ ತರಗತಿಯ ಛಾವಣಿ ಸೋರುತ್ತಿತ್ತು. ಕೇವಲ ಮೂರು ಕೊಠಡಿಗಳು ಮಾತ್ರ ಬಳಕೆಗೆ ಯೋಗ್ಯವಾಗಿದ್ದವು. ಹೀಗಾಗಿ ನಾವೆಲ್ಲರೂ ಅಲ್ಲೇ ಮುದುಡಿಕೊಂಡು ಕುಳಿತುಕೊಳ್ಳಬೇಕಾಯಿತು. ಶಾಲೆಗೆ ದಿನಕ್ಕೆ ಎರಡು ಗಂಟೆ ಮಾತ್ರ ವಿದ್ಯುತ್ ಸಿಗುತ್ತಿದ್ದು, ಹೆಚ್ಚಿನ ಸಮಯ ಫ್ಯಾನ್ ಗಳು ನಿರುಪಯುಕ್ತವಾಗಿರುತ್ತವೆ. ಜತೆಗೆ, ಶಾಲೆಯ ಶೌಚಾಲಯಗಳು ನೈರ್ಮಲ್ಯರಹಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ಅವುಗಳನ್ನು ಸ್ವಚ್ಛಗೊಳಿಸಬೇಕಾಗಿತ್ತು” ಎಂದು ಹೇಳಿದ್ದಾರೆ.

ಈಗ ದುರಸ್ತಿ ಕಾರ್ಯಗಳು ಆರಂಭವಾಗಿವೆ, ಆದರೆ ಸದ್ಯಕ್ಕೆ ಅದೇ ತರಗತಿ ಕೊಠಡಿಗಳನ್ನು ಬಳಸಬೇಕಾಗಿದೆ ಎಂದು ಆ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾರೆ. “ಅವರು ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೆ ನಾವು ಮತ್ತೆ ಪ್ರತಿಭಟನೆ ನಡೆಸುತ್ತೇವೆ. ನಾವು ಸರಿಯಾದ ಕಾರಣಕ್ಕಾಗಿಯೇ ಹೋರಾಡಿದ್ದೇವೆ, ಹೀಗಾಗಿ ನಮಗೆ ಯಾವುದೇ ಭಯವಿಲ್ಲ. ಅಗತ್ಯ ಬಿದ್ದರೆ ಮತ್ತೆ ಹೋರಾಡುತ್ತೇವೆ” ಎಂದಿದ್ದಾರೆ.

►ಜೈಪುರ, ರಾಜಸ್ಥಾನ

ಮಾತು ಮತ್ತು ಶ್ರವಣದೋಷವುಳ್ಳ ಮಕ್ಕಳಿಗಾಗಿ ಇರುವ ಸರ್ಕಾರಿ ಸೇಠ್ ಆನಂದಿಲಾಲ್ ಪೋದಾರ್ ಬಾಧೀರ್ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸಲ್ಲಿಸಿದ ಡೇಟಾ ಪ್ರಕಾರ, 599 ವಿದ್ಯಾರ್ಥಿಗಳಿಗೆ 28 ತರಗತಿ ಕೊಠಡಿಗಳಿದ್ದು, ಯಾವುದೇ ಕೊಠಡಿಗೆ ಸಣ್ಣ ಅಥವಾ ದೊಡ್ಡ ಮಟ್ಟದ ದುರಸ್ತಿಯ ಅಗತ್ಯವಿರಲಿಲ್ಲ. ಶಾಲೆಯಲ್ಲಿರುವ ಎಂಟೂ ಶೌಚಾಲಯಗಳು ಸುಸ್ಥಿತಿಯಲ್ಲಿದ್ದು, ಕುಡಿಯುವ ನೀರಿನ ವ್ಯವಸ್ಥೆಯೂ ಚಾಲನೆಯಲ್ಲಿದೆ ಎಂದು ಡೇಟಾದಲ್ಲಿ ತೋರಿಸಲಾಗಿತ್ತು. ಶಾಲೆಯಲ್ಲಿ 50 ಶಿಕ್ಷಕರಿದ್ದಾರೆ ಎಂದೂ ಈ ಡೇಟಾ ಉಲ್ಲೇಖಿಸಿತ್ತು.

ಆದರೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಛಾವಣಿಯ ಸಿಮೆಂಟ್ ಪ್ಲ್ಯಾಸ್ಟರ್ ಬಿದ್ದು ವಿದ್ಯಾರ್ಥಿಯೊಬ್ಬರು ಗಾಯಗೊಂಡಿದ್ದರು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವೀಡಿಯೊಗಳಲ್ಲಿ ಕಸದಿಂದ ತುಂಬಿದ, ಬಳಕೆಗೆ ಬಾರದ ಶೌಚಾಲಯಗಳು ಹಾಗೂ ಶಿಥಿಲಗೊಂಡ ಕಟ್ಟಡಗಳ ಚಿತ್ರಣ ಕಂಡುಬಂದಿದೆ. ಕುಡಿಯುವ ನೀರಿನ ಅಭಾವ ಹಾಗೂ ಶಿಕ್ಷಕರ ಕೊರತೆಯ ಬಗ್ಗೆಯೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

►ಕಿಶನ್ಪುರ, ಉತ್ತರ ಪ್ರದೇಶ

ಸರ್ಕಾರಿ ಪೋರ್ಟಲ್‌ ಗೆ ಸಲ್ಲಿಸಿದ ಡೇಟಾದಲ್ಲಿ, ಕಿಶನ್ಪುರದ ಸರ್ವೋದಯ ಇಂಟರ್ ಶಾಲೆಯ ಆಡಳಿತ ಮಂಡಳಿಯು 1,883 ವಿದ್ಯಾರ್ಥಿಗಳಿಗೆ 19 ತರಗತಿ ಕೊಠಡಿಗಳಿವೆ ಮತ್ತು ಅವುಗಳಲ್ಲಿ ಆರು ಕೊಠಡಿಗಳಿಗೆ ಮಾತ್ರ ಸಣ್ಣಪುಟ್ಟ ದುರಸ್ತಿಯ ಅಗತ್ಯವಿದೆ ಎಂದು ಘೋಷಿಸಿತ್ತು. ಶಾಲೆಯಲ್ಲಿರುವ ಐದೂ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಆವರಣದಲ್ಲಿ ವಿದ್ಯುತ್ ಮತ್ತು ಗ್ರಂಥಾಲಯ ಸೌಲಭ್ಯವಿದೆ ಎಂದೂ ಡೇಟಾ ತೋರಿಸಿತ್ತು.

ಆದರೆ ಶಾಲೆಯ ಅಸ್ತಿತ್ವದಲ್ಲಿದ್ದ ಶೋಚನೀಯ ಮೂಲಸೌಕರ್ಯವನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರು. ಶಾಲೆಯಲ್ಲಿ ಮುರಿದ ಬೆಂಚ್ ಗಳು ಮತ್ತು ಕುರ್ಚಿಗಳು, ಸೋರುವ ಛಾವಣಿ, ಕುಡಿಯುವ ನೀರಿನ ಅಭಾವ, ಕಳಪೆ ನೈರ್ಮಲ್ಯ, ಫ್ಯಾನ್ ಗಳ ಅಭಾವ ಮತ್ತು ಅಸ್ತವ್ಯಸ್ತವಾಗಿರುವ ವಿದ್ಯುತ್ ಪೂರೈಕೆಯ ಬಗ್ಗೆ ವಿದ್ಯಾರ್ಥಿಗಳು ದೂರಿದ್ದಾರೆ ಎಂದು ಜಿಲ್ಲಾ ಶಾಲಾ ನಿರೀಕ್ಷಕರು ವರದಿಯೊಂದರಲ್ಲಿ ಪಟ್ಟಿ ಮಾಡಿದ್ದಾರೆ. ಶಾಲೆಯಲ್ಲಿ ಗ್ರಂಥಾಲಯವೇ ಇಲ್ಲ ಎಂದೂ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಎತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಿರೀಕ್ಷಕರು ತಿಳಿಸಿದ್ದಾರೆ.

ರಾಜ್ಯದ ಮತ್ತೊಂದು ಶಾಲೆಯಾದ ಗಂಗ್ವಾ ಕಾ ಡೇರಾ ಪ್ರಾಥಮಿಕ ಶಾಲೆಯು, ಶಾಲೆಗೆ ಸಂಪರ್ಕ ಕಲ್ಪಿಸುವ ಸಾರ್ವಕಾಲಿಕ ಸುಸಜ್ಜಿತ ರಸ್ತೆಯಿದೆ ಎಂದು ಪ್ರತಿಪಾದಿಸಿತ್ತು. ಆದರೆ ಅದೇ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಗೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಐದು ಕಿಲೋಮೀಟರ್ ದೂರ ನಡೆದು ಬಂದು ಪ್ರತಿಭಟಿಸಿದ್ದರು.

►ಗಯಾ, ಬಿಹಾರ

ಗಯಾದ ಸಿಮುವಾರ ಮಿಡಲ್ ಶಾಲೆ ಸಲ್ಲಿಸಿದ ಡೇಟಾ ಪ್ರಕಾರ, ಶಾಲೆಯಲ್ಲಿ 11 ತರಗತಿ ಕೊಠಡಿಗಳಿದ್ದು, ಅವುಗಳಲ್ಲಿ ನಾಲ್ಕಕ್ಕೆ ದೊಡ್ಡ ಮಟ್ಟದ ದುರಸ್ತಿಯ ಅಗತ್ಯವಿತ್ತು. ಶಾಲೆಯಲ್ಲಿರುವ ಎರಡೂ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು ಸುಸ್ಥಿತಿಯಲ್ಲಿದ್ದವು ಎಂದು ಆಡಳಿತ ಮಂಡಳಿ ಪ್ರತಿಪಾದಿಸಿತ್ತು.

ಆದರೆ ಶಾಲೆಯ ವಿದ್ಯಾರ್ಥಿಗಳು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಉಪವಿಭಾಗೀಯ ಕಚೇರಿಯವರೆಗೆ ಮೆರವಣಿಗೆ ನಡೆಸಿ ಶಾಲೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಬಳಕೆಗೆ ಬಾರದ ಶೌಚಾಲಯಗಳು, ಅಸ್ತವ್ಯಸ್ತವಾಗಿರುವ ವಿದ್ಯುತ್ ಪೂರೈಕೆ, ಫ್ಯಾನ್ಗಳ ಅಭಾವ, ಕಲುಷಿತ ನೀರು ಮತ್ತು ಕಳಪೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟವೇ ಮೊದಲಾದ ಸಮಸ್ಯೆಗಳನ್ನು ಅವರು ಪಟ್ಟಿ ಮಾಡಿದ್ದರು.

ಕಿಶನ್ಪುರ ಸೇರಿದಂತೆ ಇತರ ಶಾಲೆಗಳ ವಿದ್ಯಾರ್ಥಿಗಳೂ ಫ್ಯಾನ್ಗಳ ಕೊರತೆ ಸಮಸ್ಯೆಯನ್ನು ಪ್ರಸ್ತಾಪಿಸಿದ್ದು, ತೀವ್ರ ಬಿಸಿಲಿನ ಬೇಸಿಗೆಯ ತಿಂಗಳುಗಳಲ್ಲಿ ಇದು ಕಷ್ಟಕರ ವಾತಾವರಣ ಸೃಷ್ಟಿಸುತ್ತದೆ ಎಂದಿದ್ದರು. ಸರ್ಕಾರಿ ಪೋರ್ಟಲ್ ನಲ್ಲಿ ಶಾಲೆಗಳಲ್ಲಿ ಫ್ಯಾನ್ ಗಳ ಲಭ್ಯತೆಯ ಕುರಿತು ಯಾವುದೇ ಮಾಹಿತಿಯಿಲ್ಲ.

►ಛತರ್ಪುರ, ಮಧ್ಯಪ್ರದೇಶ

ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಹೆಚ್ಎಸ್ಎಸ್ ತಾತಮ್ ಶಾಲೆಯ ಆಡಳಿತ ಮಂಡಳಿಯು ಪೋರ್ಟಲ್ ಗೆ ಸಲ್ಲಿಸಿದ ಡೇಟಾದಲ್ಲಿ, ಶಾಲೆಗೆ ಸಂಪರ್ಕ ಕಲ್ಪಿಸುವ ಸಾರ್ವಕಾಲಿಕ ಸುಸಜ್ಜಿತ ರಸ್ತೆಯಿದೆ ಎಂದು ನಮೂದಿಸಿತ್ತು.

ಆದರೆ, ಶಾಲೆಗೆ ಸೂಕ್ತ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು 18 ಗಂಟೆಗಳ ಕಾಲ ಸುದೀರ್ಘ ಪ್ರತಿಭಟನೆ ನಡೆಸಿದ್ದಲ್ಲದೆ, ಜಿಲ್ಲಾ ಕೇಂದ್ರದ ಕಡೆಗೆ 40 ಕಿಲೋಮೀಟರ್ ಮೆರವಣಿಗೆ ನಡೆಸಿದರು. ರಸ್ತೆಯನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದ್ದು, ಮಳೆಗಾಲದಲ್ಲಂತೂ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

►ನಂಬಲರ್ಹವಲ್ಲದ ಡೇಟಾ

ತಮ್ಮ ಅನುಕೂಲಕ್ಕೆ ತಕ್ಕಂತೆ ಡೇಟಾವನ್ನು ಸಲ್ಲಿಸುವಂತೆ ಶಾಲೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಹಿಂದೆ ಬಂದಿದ್ದವು. ಉದಾಹರಣೆಗೆ, 2023ರಲ್ಲಿ, ಮಹಾರಾಷ್ಟ್ರದ ಶಿಕ್ಷಣಾಧಿಕಾರಿಗಳು ಪೋರ್ಟಲ್ನಲ್ಲಿ ಸುಳ್ಳು ಡೇಟಾ ಸಲ್ಲಿಸುವಂತೆ ಶಾಲೆಗಳಿಗೆ ಸೂಚನೆ ನೀಡುತ್ತಿದ್ದಾರೆ ಎಂದು ವರದಿಯಾಗಿತ್ತು.

ಜಾರ್ಖಂಡ್ನ ಶಾಲೆಗಳನ್ನು ಸಮೀಕ್ಷೆ ಮಾಡಿರುವ ಅರ್ಥಶಾಸ್ತ್ರಜ್ಞ ಜಾನ್ ಡ್ರೇಜ್, ಶಾಲೆಗಳ ಕುರಿತು ಡೇಟಾ ಸಂಗ್ರಹಿಸುವುದು ಅಗತ್ಯ, ಆದರೆ 2025-26ರಲ್ಲಿ ಶೇಕಡಾ 99ರಷ್ಟು ಸರ್ಕಾರಿ ಶಾಲೆಗಳು ಶೌಚಾಲಯ ಸೌಲಭ್ಯ ಹೊಂದಿವೆ ಎಂಬ ಪೋರ್ಟಲ್ನ ಕೆಲವು ಅಂಕಿ-ಅಂಶಗಳನ್ನು ನಂಬುವುದು ಕಷ್ಟ ಎನ್ನುತ್ತಾರೆ. ಜಾರ್ಖಂಡ್ನಲ್ಲೂ ಶೇಕಡಾ 99ರಷ್ಟು ಶಾಲೆಗಳಲ್ಲಿ ಶೌಚಾಲಯಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇದು ಸುಳ್ಳು. ಶಾಲೆಗಳಿಗೆ ಭೇಟಿ ನೀಡಿದಾಗ ಅದು ನಿಜವಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದಿದ್ದಾರೆ.

ಬಿಹಾರದ ಶಿಕ್ಷಣ ಕಾರ್ಯಕರ್ತ ಅನಿಲ್ ರಾಯ್ ಕೂಡ ಇದೇ ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ನೀವು ಶಾಲೆಗಳಿಗೆ ಹೋಗಿ ಪರಿಶೀಲಿಸಿದರೆ, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಯಾರೂ ಇಲ್ಲದ ಕಾರಣ ಅವು ಬಳಕೆಯಾಗದೆ ಬಿದ್ದಿರುತ್ತವೆ" ಎಂದು ಅವರು ತಿಳಿಸಿದ್ದಾರೆ.

►ರಾಜಸ್ಥಾನದಲ್ಲಿ ಕುಸಿಯುತ್ತಿರುವ ಶಾಲಾ ಮೂಲಸೌಕರ್ಯ

ತೀವ್ರ ಸ್ವರೂಪದ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ರಾಜಸ್ಥಾನದಲ್ಲಿ, ಶಾಲಾ ಮೂಲಸೌಕರ್ಯಗಳ ಕೆಟ್ಟ ಸ್ಥಿತಿಯೇ ಪ್ರಮುಖ ಕಳವಳಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಜುಲೈನಲ್ಲಿ, ಝಾಲಾವಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ತರಗತಿಯ ಛಾವಣಿಯ ಒಂದು ಭಾಗ ಕುಸಿದು ಬಿದ್ದು ಏಳು ವಿದ್ಯಾರ್ಥಿಗಳು ಮೃತಪಟ್ಟಿದ್ದು, 27 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ತರಗತಿಯ ಮೇಲ್ಛಾವಣಿಯಿಂದ ಸಿಮೆಂಟ್ ಚೂರುಗಳು ಉದುರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಈ ಬಗ್ಗೆ ಶಿಕ್ಷಕರಿಗೆ ಎಚ್ಚರಿಸಿದ್ದರು. ಆದರೆ ಸುಮ್ಮನೆ ಕುಳಿತುಕೊಳ್ಳುವಂತೆ ಅವರಿಗೆ ಸೂಚಿಸಲಾಗಿತ್ತು. ಬೆಳಿಗ್ಗೆ ಸುಮಾರು 8 ಗಂಟೆಗೆ ಛಾವಣಿ ಕುಸಿದು ಬಿದ್ದು, 35 ವಿದ್ಯಾರ್ಥಿಗಳು ಅಡಿಯಲ್ಲಿ ಸಿಲುಕಿಕೊಂಡರು.

ಶಾಲೆಗಳೇ ಸ್ವತಃ ಡೇಟಾ ಸಲ್ಲಿಸುವ ವ್ಯವಸ್ಥೆಯಲ್ಲಿರುವ ಲೋಪ ಈ ಶಾಲೆಯ ಉದಾಹರಣೆಯಲ್ಲೇ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

2024-25 ಮತ್ತು 2023-24ರ ಡೇಟಾದಲ್ಲಿ, ಈ ಶಾಲೆಯು ನಾಲ್ಕು ತರಗತಿ ಕೊಠಡಿಗಳನ್ನು ಹೊಂದಿದ್ದು, ಅವುಗಳಲ್ಲಿ ಎರಡಕ್ಕೆ ಮಾತ್ರ ಸಣ್ಣಪುಟ್ಟ ದುರಸ್ತಿ ಅಗತ್ಯವಿದೆ ಎಂದು ನಮೂದಿಸಿತ್ತು. ಸರ್ಕಾರಿ ಪೋರ್ಟಲ್ ನಲ್ಲಿರುವ ಶಾಲೆಯ ಪ್ರಸ್ತುತ ಡೇಟಾ ಪ್ರಕಾರ, ನಾಲ್ಕೂ ತರಗತಿ ಕೊಠಡಿಗಳು ಸುಸ್ಥಿತಿಯಲ್ಲಿವೆ.

2025ರ ಜುಲೈನಲ್ಲಿ ನಡೆದ ಘಟನೆಯ ನಂತರ, ರಾಜಸ್ಥಾನ ಸರ್ಕಾರವು ಸುರಕ್ಷಿತವಲ್ಲದ ಕಟ್ಟಡಗಳನ್ನು ಹೊಂದಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ, 2,699 ಶಾಲೆಗಳನ್ನು ಕೆಡವಲು ಮತ್ತು ಸುಮಾರು 2,000 ಶಾಲೆಗಳನ್ನು ದುರಸ್ತಿ ಮಾಡಲು ನಿರ್ಧರಿಸಿತ್ತು ಎಂದು ಏಕತಾ ಚಂದಾ ತಿಳಿಸಿದ್ದಾರೆ. "ಘಟನೆಯ ನಂತರ ಸರ್ಕಾರ ಅನೇಕ ಶಾಲೆಗಳನ್ನು ಕೆಡವಿತಾದರೂ, ಎಲ್ಲಾ ಶಾಲೆಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿಲ್ಲ" ಎಂದು ಚಂದಾ ಹೇಳಿದ್ದಾರೆ. "ಕೆಲವು ಶಾಲೆಗಳನ್ನು ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು, ಆದರೆ ಅದನ್ನು ಹೊರತುಪಡಿಸಿ ಹೆಚ್ಚಿನ ಕೆಲಸಗಳೇನೂ ನಡೆಯಲಿಲ್ಲ."

ಸರ್ಕಾರ ಗುರುತಿಸಿರುವ "ಮಾದರಿ ಶಾಲೆಗಳಲ್ಲಿ" ಉತ್ತಮ ಮೂಲಸೌಕರ್ಯಗಳಿರುವುದನ್ನು ತಾವು ಗಮನಿಸಿರುವುದಾಗಿ ಚಂದಾ ಹೇಳಿದ್ದಾರೆ. "ಆದರೆ ಅಲ್ಲಿಂದ ಒಂದು ಕಿಲೋಮೀಟರ್ ದೂರ ಹೋದರೆ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿರುವ ಶಾಲೆಯನ್ನು ನೀವು ಕಾಣಬಹುದು" ಎಂದು ಅವರು ತಿಳಿಸಿದ್ದಾರೆ.

ತಮ್ಮ ಶಾಲಾ ಸಮೀಕ್ಷೆಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಅಭಾವವೇ ಪ್ರಮುಖ ಸಮಸ್ಯೆಯಾಗಿ ಕಂಡುಬಂದಿದ್ದು, ಮುಖ್ಯವಾಗಿ ವಿದ್ಯಾರ್ಥಿನಿಯರ ಮೇಲೆ ಇದು ತೀವ್ರ ಪರಿಣಾಮ ಬೀರಿದೆ. ಹಲವು ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುತ್ತಾರಾದರೂ ಶೌಚಾಲಯಗಳ ಕೊರತೆಯೇ ಅವರಿಗೆ ದೊಡ್ಡ ಅಡೆತಡೆಯಾಗಿದೆ ಎಂದು ಅವರು ವಿವರಿಸಿದ್ದಾರೆ. "ಶಾಲೆಯ ಸ್ಥಿತಿ ಸರಿಯಿಲ್ಲ ಎಂದು ಅವರು ನನ್ನ ಬಳಿ ಹೇಳಿಕೊಳ್ಳುತ್ತಾರೆ. ಶೌಚಾಲಯ ಬಳಕೆಗೆ ಅಥವಾ ನೀರು ಕುಡಿಯಲು ವಿದ್ಯಾರ್ಥಿಗಳು ಮನೆಗೆ ಹೋಗಬೇಕಾದ ಪರಿಸ್ಥಿತಿಯಿದೆ" ಎಂದು ಅವರು ಹೇಳಿದ್ದಾರೆ.

ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಾರ್ಯಕರ್ತರು ಭರವಸೆ ಹೊಂದಿದ್ದಾರೆ. "ಶಾಲೆಗಳ ಸುಧಾರಣೆ ಎಂಬುದು ಜನರ ಚಳವಳಿಯಾದಾಗ ಮಾತ್ರ ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ಆ ಸಮಯ ಕೊನೆಗೂ ಬಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು ಚಂದಾ ಹೇಳಿದ್ದಾರೆ.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News