ಒಂದು ವಿದ್ಯಾರ್ಥಿ ಪ್ರತಿಭಟನೆ ವೈರಲ್ ಬೆನ್ನಲ್ಲೇ ಮತ್ತೊಂದು: ಉತ್ತರ ಪ್ರದೇಶದ ಶಾಲೆಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನಕ್ಕೆ ಕಾರಣವೇನು?

►ಮನೀಶ್ ಸಾಹು, ಮೌಲ್ಶ್ರೀ ಸೇಠ್ - Indianexpress. com ವರದಿ

Update: 2026-08-20 21:30 IST

Photo Credit : ANI 

ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶದಾದ್ಯಂತ ವಿದ್ಯಾರ್ಥಿಗಳು ತಮ್ಮ ಶಾಲೆಯ ಕುಂದುಕೊರತೆಗಳನ್ನು ಸರಿಪಡಿಸಬೇಕೆಂದು ಘೋಷಣೆ ಕೂಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಲಕ್ನೋ ಮತ್ತು ಉನ್ನಾವೋಗಳಲ್ಲಿ ರಸ್ತೆ ತಡೆ ನಡೆಸಿದ್ದರೆ, ಹಮೀರ್ ಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ್ದಾರೆ. ಇತ್ತ ಕನ್ನೌಜ್ ನಲ್ಲಿ ಅಧಿಕಾರಿಗಳು ಬಂದು ತಮ್ಮ ಮಾತು ಆಲಿಸುವವರೆಗೆ ವಿದ್ಯಾರ್ಥಿಗಳು ಹಾಸ್ಟೆಲ್ ಒಳಗಡೆಯೇ ಬೀಗ ಹಾಕಿಕೊಂಡು ಧರಣಿ ಕುಳಿತಿದ್ದರು.

ಹೆಚ್ಚಿನ ಶಿಕ್ಷಕರ ನೇಮಕ, ಉತ್ತಮ ಆಹಾರ, ಕುಡಿಯುವ ನೀರು, ಸರಿಯಾಗಿರುವ ಫ್ಯಾನ್ ಗಳು, ಸ್ವಚ್ಛ ಆವರಣ ಮತ್ತು ಉತ್ತಮ ಮೂಲಸೌಕರ್ಯ ಕಲ್ಪಿಸಬೇಕು ಎಂಬುದೇ ಅವರ ಮೂಲಭೂತ ಬೇಡಿಕೆಗಳಾಗಿದ್ದವು.

ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಸರ್ವೋದಯ ವಸತಿ ಶಾಲೆಗಳಲ್ಲಿ, ಅದೂ ಲಕ್ನೋ ಮತ್ತು ಉನ್ನಾವೋ ಭಾಗದಲ್ಲಿ ಮೂರು ಪ್ರತಿಭಟನೆಗಳು ಒಂದರ ಹಿಂದೆ ಮತ್ತೊಂದರಂತೆ ನಡೆದವು. ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಇರುವ ಎಲ್ಲಾ 103 ಸರ್ವೋದಯ ಶಾಲೆಗಳ ಪರಿಶೀಲನೆಗೆ ಉತ್ತರ ಪ್ರದೇಶ ಸರಕಾರ ಆದೇಶಿಸಿದೆ.

►ಒಂದರ ಹಿಂದೆ ಒಂದು ಧರಣಿ

ಬುಧವಾರ ಬೆಳಿಗ್ಗೆ 6.30ರ ಸುಮಾರಿಗೆ ಉನ್ನಾವೋದ ಜಯಪ್ರಕಾಶ್ ನಾರಾಯಣ್ ಸರ್ವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಬಿತ್ತಿಪತ್ರಗಳನ್ನು ಹಿಡಿದು ಮೋಹನ್ ಚೌಕಿಗೆ ಆಗಮಿಸಿ, ರಸ್ತೆ ತಡೆ ನಡೆಸಿ ಸಂಚಾರಕ್ಕೆ ಅಡಚಣೆ ಉಂಟುಮಾಡಿದರು.

ಶಿಕ್ಷಕರ ಕೊರತೆ, ಕಳಪೆ ಆಹಾರ, ಕುಡಿಯುವ ನೀರಿನ ಸಮಸ್ಯೆ, ಶಿಕ್ಷಕರ ಸೂಕ್ತವಲ್ಲದ ನಡವಳಿಕೆ ಮತ್ತು ನೈರ್ಮಲ್ಯದ ಕೊರತೆಯನ್ನು ಖಂಡಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಸುಮಾರು ಅರ್ಧ ಗಂಟೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ಗೌರ್ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ, ಲಕ್ನೋದ ಜಯಪ್ರಕಾಶ್ ನಾರಾಯಣ್ ಸರ್ವೋದಯ ವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರ ಅಭಾವ, ಕಳಪೆ ಆಹಾರ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಪ್ರತಿಭಟಿಸಿ ಮೋಹನ್ ರಸ್ತೆಯನ್ನು ತಡೆದಿದ್ದರು. ಮೂರು ದಿನಗಳ ನಂತರ, ಮತ್ತೊಂದು ಸರ್ವೋದಯ ವಿದ್ಯಾಲಯದ ಸುಮಾರು 200 ವಿದ್ಯಾರ್ಥಿನಿಯರು ಸುರಿಯುವ ಮಳೆಯಲ್ಲೇ ಲಕ್ನೋ-ದುಬ್ಬಗ ಬೈಪಾಸ್ ತಡೆದು ಇದೇ ರೀತಿಯ ದೂರುಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಅಸೀಮ್ ಅರುಣ್ ಅವರ ವಾಹನ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಾಗ, ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸುವುದಾಗಿ ಭರವಸೆ ನೀಡಿದ ನಂತರ ಮೊದಲ ಪ್ರತಿಭಟನೆ ಕೊನೆಗೊಂಡಿತು. ಎರಡನೇ ಪ್ರತಿಭಟನೆಯ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಆಗಮಿಸಿದರು.

ಅತಿಥಿ ಶಿಕ್ಷಕರ ಮುಂದುವರಿಕೆಗೆ ಸಂಬಂಧಿಸಿದಂತೆ ಕಾನೂನು ವಿವಾದವಿರುವುದೇ ಶಿಕ್ಷಕರ ಕೊರತೆಗೆ ಭಾಗಶಃ ಕಾರಣ ಎಂದು ಅರುಣ್ ನಂತರ ಸ್ಪಷ್ಟಪಡಿಸಿದರು. ಕಳೆದ ವರ್ಷ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತಾದರೂ, ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಲ್ಲಿದ್ದ ಪ್ರಕರಣದಿಂದಾಗಿ ಸುಮಾರು ಒಂದು ವರ್ಷ ಅವರಿಗೆ ಸೇವೆಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಲಕ್ನೋದ ಈ ಶಾಲೆಗಳು ಪಾರಾ ಪ್ರದೇಶದಲ್ಲಿವೆ.

►ಫತೇಪುರದಲ್ಲಿ ಉತ್ತಮ ತರಗತಿಗಳಿಗೆ ಆಗ್ರಹ

ಜುಲೈ 28ರಂದು ಫತೇಪುರದ ಕಿಶನ್ಪುರ ಪಟ್ಟಣದ ಸರ್ವೋದಯ ಇಂಟರ್ ಕಾಲೇಜಿನ 6ರಿಂದ 12ನೇ ತರಗತಿಯ ಸುಮಾರು 1,000 ವಿದ್ಯಾರ್ಥಿಗಳು ಬಿತ್ತಿಪತ್ರಗಳು, ಬ್ಯಾನರ್ ಗಳು ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಶಾಲೆಯ ಹೊರಗಡೆ ಜಮಾಯಿಸಿದ್ದರು. ಕುಡಿಯಲು ಸುರಕ್ಷಿತ ನೀರು, ತರಗತಿಗಳು ಹಾಗೂ ಸೋರುವ ಛಾವಣಿಗಳ ದುರಸ್ತಿ, ಫ್ಯಾನ್ಗಳನ್ನು ಸರಿ ಮಾಡಬೇಕು ಮತ್ತು ಮೂಲಭೂತ ಪೀಠೋಪಕರಣಗಳನ್ನು ಒದಗಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು.

ಫತೇಪುರ ಜಿಲ್ಲಾ ಶಾಲಾ ನಿರೀಕ್ಷಕ ರಾಕೇಶ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಭೇಟಿಯಾಗಿ ಕುಂದುಕೊರತೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ನಾಲ್ಕು ಗಂಟೆಗಳ ಧರಣಿ ಕೊನೆಗೊಂಡಿತು.

ಈ ಭರವಸೆಯ ಬೆನ್ನಲ್ಲೇ ಕ್ರಮ ಕೈಗೊಳ್ಳಲಾಯಿತು. ತರಗತಿ ಕೊಠಡಿಗಳಿಗೆ ಫ್ಯಾನ್ ಗಳನ್ನು ಅಳವಡಿಸಲಾಯಿತು, ಆರ್ಒ ಫಿಲ್ಟರ್ ಮಾಡಿದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದ ಇತರ ಸೌಲಭ್ಯಗಳನ್ನು ಒದಗಿಸಲಾಯಿತು.

ವಿದ್ಯಾರ್ಥಿಗಳೇ ಸ್ವತಃ ಈ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ಪ್ರಾಂಶುಪಾಲ ಲಾಲ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. “ಸೂಕ್ತ ಮೇಜು, ಕುರ್ಚಿಗಳು ಮತ್ತು ಫ್ಯಾನ್ಗಳು ಸೇರಿದಂತೆ ಅವರ ಎಲ್ಲಾ ಬೇಡಿಕೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಸಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ.

►ಉತ್ತಮ ರಸ್ತೆಗಾಗಿ ಹಮೀರ್ ಪುರದಲ್ಲಿ ಮೆರವಣಿಗೆ

ಈ ಪ್ರತಿಭಟನೆಗಳು ಕೇವಲ ಶಾಲಾ ಆವರಣದ ಒಳಗಿನ ಸೌಲಭ್ಯಗಳ ದೂರುಗಳಿಗೆಷ್ಟೇ ಸೀಮಿತವಾಗಿರಲಿಲ್ಲ.

ಆಗಸ್ಟ್ 11ರಂದು ಹಮೀರ್ಪುರದ ಸುಮಾರು 35–40 ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಪಾಲಕರೊಂದಿಗೆ ರಾಷ್ಟ್ರಧ್ವಜ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ 5 ಕಿಲೋಮೀಟರ್ ಮೆರವಣಿಗೆ ನಡೆಸಿದರು. ತಮ್ಮ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿ ಮಾಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು.

ಸುಮಾರು 1.8 ಕಿಲೋಮೀಟರ್ ರಸ್ತೆಯ 300 ಮೀಟರ್ಗಳಷ್ಟು ಭಾಗ ಮಳೆಗಾಲದಲ್ಲಿ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿತ್ತು. ಅರಣ್ಯ ಇಲಾಖೆಯ ಮಂಜೂರಾತಿ ಸಿಗದಿರುವುದನ್ನು ಕಾರಣವಾಗಿ ನೀಡಿ, ಉಳಿದ ರಸ್ತೆ ಕಾಮಗಾರಿಯನ್ನೂ ಬಾಕಿ ಉಳಿಸಿಕೊಳ್ಳಲಾಗಿತ್ತು.

ಈ ಪ್ರತಿಭಟನೆಯು ಜಿಲ್ಲೆಯ ಗಡಿಯನ್ನು ದಾಟಿ ವ್ಯಾಪಕ ಗಮನ ಸೆಳೆಯಿತು.

ಈ ಘಟನೆಯ ಕುರಿತ ಪತ್ರಿಕಾ ವರದಿಯನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್, ಈ ವಿಷಯವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ದಾಖಲಿಸಿಕೊಳ್ಳಲು ನಿರ್ದೇಶಿಸಿತು. ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ಕ್ಷಿತಿಜ್ ಶೈಲೇಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಮತ್ತು ಪರಿಸರ, ಅರಣ್ಯ ಹಾಗೂ ವಾಯುಗುಣ ವೈಪರೀತ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ಆಗಸ್ಟ್ 24ಕ್ಕೆ ನಿಗದಿಯಾಗಿದೆ.

ಈ ಮಧ್ಯೆ, ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.

"ಸ್ಥಳೀಯರು ಜುಲೈನಲ್ಲಿ ಮನವಿ ಸಲ್ಲಿಸಿದ್ದರು ಮತ್ತು ರಸ್ತೆ ದುರಸ್ತಿಯ ಪ್ರಗತಿಯ ಬಗ್ಗೆ ಅವರಿಗೆ ವಿವರಿಸಲಾಗಿತ್ತು. ಆದರೆ, ಆಗಸ್ಟ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಿರ್ದಿಷ್ಟ ಭಾಗದ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಈ ಸಮಸ್ಯೆಯನ್ನು ತೋರಿಸಲು ಸ್ಥಳೀಯರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈಗ ಇಡೀ ರಸ್ತೆಯನ್ನು ದುರಸ್ತಿ ಮಾಡಲಾಗಿದೆ" ಎಂದು ಹಮೀರ್ಪುರ ಜಿಲ್ಲಾಧಿಕಾರಿ ಅಭಿಷೇಕ್ ಗೋಯಲ್ ಹೇಳಿರುವುದಾಗಿ The Indian Express’ ವರದಿ ಉಲ್ಲೇಖಿಸಿದೆ.

►ಕನ್ನೌಜ್ ನಲ್ಲಿ ಹಾಸ್ಟೆಲ್ ಬಂದ್

ಆಗಸ್ಟ್ 14ರಂದು ಕನ್ನೌಜ್ ನ ಜವಾಹರ್ ನವೋದಯ ವಿದ್ಯಾಲಯದ ಸುಮಾರು 100 ವಿದ್ಯಾರ್ಥಿಗಳು ಮತ್ತೊಂದು ರೀತಿಯ ಪ್ರತಿಭಟನೆಯ ಹಾದಿ ಹಿಡಿದರು. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ವಸತಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳ ಒಳಗಡೆಯೇ ಬೀಗ ಹಾಕಿಕೊಂಡು ಹಲವು ಗಂಟೆಗಳ ಕಾಲ ಹೊರಬರಲು ನಿರಾಕರಿಸಿದರು.

ಮೆಸ್ನಲ್ಲಿ ನೀಡಲಾಗುವ ಕಳಪೆ ಆಹಾರ, ನೈರ್ಮಲ್ಯದ ಕೊರತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಶಾಲಾ ಸಿಬ್ಬಂದಿಯ ದುರ್ನಡತೆಯ ಆರೋಪಗಳು ಅವರ ದೂರುಗಳಲ್ಲಿದ್ದವು.

ಜಿಲ್ಲಾಧಿಕಾರಿಗಳು ಸ್ವತಃ ಆಗಮಿಸಿ ತಮ್ಮ ಕುಂದುಕೊರತೆಗಳನ್ನು ಈಡೇರಿಸುವ ಭರವಸೆ ನೀಡಿದರೆ ಮಾತ್ರ ಬಾಗಿಲು ತೆರೆಯುವುದಾಗಿ ಹೇಳಿ ವಿದ್ಯಾರ್ಥಿಗಳು ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ನಿರಾಕರಿಸಿದರು.

ಅಂತಿಮವಾಗಿ, ಕನ್ನೌಜ್ ಜಿಲ್ಲಾಧಿಕಾರಿ ಅಶುತೋಷ್ ಮೋಹನ್ ಅಗ್ನಿಹೋತ್ರಿ ಶಾಲೆಗೆ ಧಾವಿಸಿದರು.

"ಅಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲಿಲ್ಲ. ನೈರ್ಮಲ್ಯ, ಆಹಾರ, ಫಾಗಿಂಗ್ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳಿದ್ದವು. ಇವುಗಳನ್ನು ಬಗೆಹರಿಸಲಾಗಿದ್ದು, ಸೂಕ್ತ ತಪಾಸಣೆಯೊಂದಿಗೆ ಸೌಲಭ್ಯಗಳನ್ನು ಮರುಸ್ಥಾಪಿಸಲಾಗಿದೆ" ಎಂದು ಅವರು 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ.

►ಪ್ರತಿಭಟನೆಗಳು ತೀವ್ರಗೊಳ್ಳಲು ಕಾರಣವೇನು?

ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ ಅಧಿಕಾರಿಗಳು ಇದನ್ನು ದೊಡ್ಡ ಮಟ್ಟದ ಟ್ರೆಂಡ್ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು.

ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಗಳ ಕಳವಳಗಳು ನಿಜವಾಗಿದ್ದರೂ, "ಸಾಮಾಜಿಕ ಜಾಲತಾಣಗಳಲ್ಲಿ ಒಂದು ಘಟನೆ ವೈರಲ್ ಆಗುತ್ತಿದ್ದಂತೆ ಮತ್ತು ಅದಕ್ಕೆ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಿರುವುದು ವರದಿಯಾಗುತ್ತಿದ್ದಂತೆ, ಅದು ಮತ್ತೊಂದು ಪ್ರತಿಭಟನೆಗೆ ಪ್ರೇರಣೆಯಾಗುತ್ತಿದೆ." ಇದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇತರರೂ ಇದೇ ಮಾರ್ಗವನ್ನು ಅನುಸರಿಸುವಂತೆ ಮಾಡುತ್ತಿದೆ ಎಂದು ಅವರು ಹೇಳಿದರು.

ಈ ಪ್ರತಿಭಟನೆಗಳ ನಡುವೆ, ಶಿಕ್ಷಣ ಇಲಾಖೆಯು ತನ್ನ ಸಾಮಾಜಿಕ ಜಾಲತಾಣಗಳ ಉಪಸ್ಥಿತಿಯನ್ನು ಬಲಪಡಿಸಲು ಚಿಂತನೆ ನಡೆಸಿದೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ದೂರುಗಳನ್ನು ಸಲ್ಲಿಸಲು ವೇದಿಕೆ ಕಲ್ಪಿಸುವುದು ಮಾತ್ರವಲ್ಲದೆ, ನಕಲಿ ಪೋಸ್ಟ್ಗಳು ಮತ್ತು ತಪ್ಪು ಮಾಹಿತಿಗಳನ್ನು ಎತ್ತಿ ತೋರಿಸಲು ಶಿಕ್ಷಣ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೆಚ್ಚು ಸಂವಾದಾತ್ಮಕವಾಗಿ ರೂಪಿಸಲು ಇತ್ತೀಚೆಗೆ ರಾಜ್ಯ ಕೇಂದ್ರ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

"ಇದಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ. ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ನಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಲಪಡಿಸಲು ನಾವು ಯೋಜಿಸುತ್ತಿದ್ದು, ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಅತ್ತ, ಸರ್ವೋದಯ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಯು ರಾಜ್ಯಾದ್ಯಂತ ಪರಿಶೀಲನೆಗೆ ಆದೇಶಿಸುವಂತೆ ಸರಕಾರವನ್ನು ಒತ್ತಾಯಿಸಿದೆ.

"ನಾವು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಈ ವಸತಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲು ಸೂಚಿಸಿದ್ದೇವೆ. ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಮತ್ತು ರಾಜ್ಯಮಟ್ಟದ ಮಧ್ಯಸ್ಥಿಕೆ ಅಗತ್ಯವಿರುವ ವಿಷಯಗಳ ಕುರಿತು ನಮಗೆ ವರದಿ ಸಲ್ಲಿಸಲು ತಿಳಿಸಿದ್ದೇವೆ" ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಜೀವ್ ಸಿಂಗ್ 'The Indian Express'ಗೆ ತಿಳಿಸಿದ್ದಾರೆ.

ಶಿಕ್ಷಕರ ಕೊರತೆಯ ದೂರಿನ ಬಗ್ಗೆ ಮಾತನಾಡಿದ ಅವರು, ಅಲಹಾಬಾದ್ ಹೈಕೋರ್ಟ್ ನಲ್ಲಿರುವ ಪ್ರಕರಣವನ್ನು ಉಲ್ಲೇಖಿಸಿದರು. ಕೋರ್ಟ್ ನಿರ್ದೇಶನಗಳ ನಂತರ, ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಈ ಕೊರತೆಯನ್ನು ನೀಗಿಸಲು ಪಟ್ಟಿಯಲ್ಲಿರುವ ಗುತ್ತಿಗೆ ಶಿಕ್ಷಕರ ಸೇವೆಯನ್ನು ಮುಂದುವರಿಸಲು ಆದೇಶಿಸಲಾಗಿದೆ ಎಂದು ಸಿಂಗ್ ಹೇಳಿದರು.

ಸೌಜನ್ಯ: Indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News