Photo: PTI

ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯ ಪ್ರಕಾರ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸಲಾಗುವುದು. ಇದರಿಂದ ಲೋಕಸಭೆಯ ಒಟ್ಟು ಸದಸ್ಯ ಬಲ 850ಕ್ಕೆ ಏರುವ ಸಾಧ್ಯತೆಯಿದೆ. ಆದರೆ, 2051ರವರೆಗೆ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ.

ಮುಂದಿನ ವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಸೋಮವಾರದಿಂದ (ನವೆಂಬರ್ 30) ನಾಲ್ಕು ದಿನಗಳ ಕಾಲ ಲೋಕಸಭೆ ಕಲಾಪ ನಡೆಯಲಿದ್ದು, ಡಿಸೆಂಬರ್ 2ರಂದು ರಾಜ್ಯಸಭೆ ಅಧಿವೇಶನ ಆರಂಭವಾಗಲಿದೆ.

ಎಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತಾದರೂ, ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿತ್ತು. ಆ ಮಸೂದೆಯಲ್ಲಿ ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಬಗ್ಗೆ ಸ್ಪಷ್ಟ ಉಲ್ಲೇಖವಿರಲಿಲ್ಲ. 2029ರ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಸರ್ಕಾರ ಈಗ ಹೊಸದಾಗಿ ಪ್ರಯತ್ನ ಆರಂಭಿಸಿದ್ದು, ಸಚಿವ ಸಂಪುಟದ ಒಪ್ಪಿಗೆ ಇದಕ್ಕೆ ಮೊದಲ ಹೆಜ್ಜೆಯಾಗಿದೆ.

ಕ್ಷೇತ್ರ ಪುನರ್‌ವಿಂಗಡಣೆಗೆ ಸಂವಿಧಾನದ ಆಧಾರವೇನು?

ಜನಸಂಖ್ಯೆಗೆ ಅನುಗುಣವಾಗಿ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವುದು ಮತ್ತು ರಾಜ್ಯಗಳ ನಡುವೆ ಸಂಸದೀಯ ಸ್ಥಾನಗಳನ್ನು ಮರುಹಂಚಿಕೆ ಮಾಡುವುದೇ ಕ್ಷೇತ್ರ ಪುನರ್ವಿಂಗಡಣೆ.

ಸಂವಿಧಾನದ 81ನೇ ವಿಧಿಯು 'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ಎಂಬ ತತ್ವವನ್ನು ಪ್ರತಿಪಾದಿಸುತ್ತದೆ.

ಸಂವಿಧಾನದ 81(2)(ಎ) ವಿಧಿಯ ಪ್ರಕಾರ: "ಲೋಕಸಭೆಯಲ್ಲಿ ಪ್ರತಿ ರಾಜ್ಯಕ್ಕೂ ಸ್ಥಾನಗಳನ್ನು ಹಂಚಿಕೆ ಮಾಡುವಾಗ, ಆ ಸ್ಥಾನಗಳ ಸಂಖ್ಯೆ ಮತ್ತು ರಾಜ್ಯದ ಜನಸಂಖ್ಯೆಯ ನಡುವಿನ ಅನುಪಾತವು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ರಾಜ್ಯಗಳಿಗೂ ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು."

60 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತೀರಾ ಸಣ್ಣ ರಾಜ್ಯಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಕಡಿಮೆ ಜನಸಂಖ್ಯೆ ಇದ್ದರೂ ಲೋಕಸಭೆಯಲ್ಲಿ ಅವುಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿ ಎಂಬುದು ಇದರ ಉದ್ದೇಶ.

1970ರ ದಶಕದಲ್ಲಿ ರಾಜ್ಯಗಳ ನಡುವಿನ ಕ್ಷೇತ್ರ ಪುನರ್ವಿಂಗಡಣೆ ಏಕೆ ಸ್ಥಗಿತಗೊಂಡಿತು?

1970ರ ದಶಕದಲ್ಲಿ ದೇಶದಲ್ಲಿ ಕುಟುಂಬ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಜನಸಂಖ್ಯೆಯನ್ನು ಮೊದಲು ನಿಯಂತ್ರಣಕ್ಕೆ ತಂದ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಬಾರದು ಎಂಬುದು ಸ್ಥಾನ ಹಂಚಿಕೆಯನ್ನು ಸ್ಥಗಿತಗೊಳಿಸುವ ಮುಖ್ಯ ಉದ್ದೇಶವಾಗಿತ್ತು.

2001ರಲ್ಲಿಯೂ ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸಲು ಇದೇ ತರ್ಕವನ್ನು ಬಳಸಲಾಯಿತು. 'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ಎಂಬ ತತ್ವದ ಪ್ರಕಾರ, ಪ್ರತಿ ಜನಗಣತಿಯ ನಂತರ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ ಹೆಚ್ಚು ಜನಸಂಖ್ಯೆ ಬೆಳವಣಿಗೆ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ.

ಹೀಗಾಗಿ, 1976ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಸೂತ್ರವನ್ನು ಬದಲಾಯಿಸದೆ 25 ವರ್ಷಗಳ ಕಾಲ ರಾಜ್ಯಗಳ ನಡುವಿನ ಕ್ಷೇತ್ರ ಪುನರ್ವಿಂಗಡಣೆಯನ್ನು ತಡೆಹಿಡಿಯಲಾಯಿತು. 2001ರಲ್ಲಿ ಇದನ್ನು ಮತ್ತೆ 25 ವರ್ಷಗಳ ಕಾಲ ವಿಸ್ತರಿಸಲಾಯಿತು.

2001ರಲ್ಲಿ ಸಂವಿಧಾನದ 81(3)ನೇ ವಿಧಿಗೆ ಒಂದು ಷರತ್ತನ್ನು (ನಿಯಮವನ್ನು) ಸೇರಿಸುವ ಮೂಲಕ ಕೊನೆಯ ಬಾರಿಗೆ ಕ್ಷೇತ್ರ ಪುನರ್ವಿಂಗಡಣೆಗೆ ತಡೆ ನೀಡಲಾಯಿತು. ಆ ಷರತ್ತು ಹೀಗಿದೆ: "2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳು ಪ್ರಕಟವಾಗುವವರೆಗೆ, ಈ ವಿಧಿಯಲ್ಲಿ ಉಲ್ಲೇಖಿಸಲಾದ 'ಹಿಂದಿನ ಜನಗಣತಿ' ಎಂಬುದನ್ನು — (i) (2)ನೇ ಖಂಡದ (ಎ) ಉಪ-ಖಂಡ ಮತ್ತು ಅದರ ಷರತ್ತಿನ ಉದ್ದೇಶಕ್ಕಾಗಿ 1971ರ ಜನಗಣತಿ ಎಂದು ಪರಿಗಣಿಸಬೇಕು ಮತ್ತು (ii) (2)ನೇ ಖಂಡದ (ಬಿ) ಉಪ-ಖಂಡದ ಉದ್ದೇಶಕ್ಕಾಗಿ 2001ರ ಜನಗಣತಿ ಎಂದು ಅರ್ಥೈಸಿಕೊಳ್ಳಬೇಕು."

ಇಲ್ಲಿ 'ಉಪ-ಖಂಡ (ಬಿ)' ಎಂದರೆ, ಜನಸಂಖ್ಯೆಯ ಆಧಾರದ ಮೇಲೆ ಆಯಾ ರಾಜ್ಯಗಳ ಒಳಗಡೆಯೇ ಕ್ಷೇತ್ರಗಳನ್ನು ಹಂಚಿಕೆ ಮಾಡುವುದಾಗಿದೆ. ಈ ಪ್ರಕ್ರಿಯೆ ಕೊನೆಯದಾಗಿ 2001ರ ಜನಗಣತಿಯ ಆಧಾರದ ಮೇಲೆ ನಡೆದಿತ್ತು.

ಪ್ರಸ್ತುತ ನಡೆಯುತ್ತಿರುವ ಜನಗಣತಿಯ ಅಂಕಿಅಂಶಗಳು ಬಿಡುಗಡೆಯಾದ ತಕ್ಷಣ ಕ್ಷೇತ್ರ ಪುನರ್ವಿಂಗಡಣೆಯ ಮೇಲಿನ ಈ ತಡೆ ತನ್ನಿಂದ ತಾನೇ ಕೊನೆಗೊಳ್ಳಲಿದೆ.

ಪ್ರಸ್ತುತ ಜನಗಣತಿಯ ದತ್ತಾಂಶವನ್ನು ಬಳಸಿದರೆ ಲೋಕಸಭೆಯಲ್ಲಿ ತಮ್ಮ ಪಾಲಿನ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ದಕ್ಷಿಣದ ರಾಜ್ಯಗಳ ಆತಂಕ. ಏಕೆಂದರೆ, ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ದಶಕದ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿದೆ.

ಇತಿಹಾಸಕಾರ ರವಿ ಕೆ. ಮಿಶ್ರಾ ಅವರ 2025ರ ಪುಸ್ತಕ 'ಡೆಮೊಗ್ರಫಿ, ರೆಪ್ರೆಸೆಂಟೇಶನ್, ಡಿಲಿಮಿಟೇಶನ್: ದಿ ನಾರ್ತ್-ಸೌತ್ ಡಿವೈಡ್ ಇನ್ ಇಂಡಿಯಾ' ಬೇರೆಯದೇ ವಾದವನ್ನು ಮುಂದಿಡುತ್ತದೆ. ಉತ್ತರದ ರಾಜ್ಯಗಳಿಗಿಂತ ಮೊದಲೇ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯಾ ಬದಲಾವಣೆ ಆರಂಭವಾಯಿತು ಎಂದು ಈ ಪುಸ್ತಕ ಹೇಳುತ್ತದೆ. 1881ರ ನಂತರ ಹಲವು ದಶಕಗಳ ಕಾಲ ದಕ್ಷಿಣದ ರಾಜ್ಯಗಳ ಜನಸಂಖ್ಯೆ ಉತ್ತರಕ್ಕಿಂತ ವೇಗವಾಗಿ ಬೆಳೆದು ನಂತರ ಸ್ಥಿರವಾಯಿತು. ಆದರೆ ಉತ್ತರದ ರಾಜ್ಯಗಳ ಜನಸಂಖ್ಯೆ 1960ರ ದಶಕದ ಆಸುಪಾಸಿನಲ್ಲಿ ವೇಗ ಪಡೆದುಕೊಂಡು ನಂತರ ತೀವ್ರವಾಗಿ ಹೆಚ್ಚಾಯಿತು. ಉತ್ತರ ಪ್ರದೇಶ ಮತ್ತು ಬಿಹಾರದ ಒಟ್ಟು ಫಲವಂತಿಕೆ ದರ (TFR) ಈಗ ಇಳಿಕೆಯಾಗುತ್ತಿದ್ದರೂ, ಜನಸಂಖ್ಯೆ ಸ್ಥಿರವಾಗಿರಲು ಬೇಕಾದ 2.1ರ ಮಟ್ಟಕ್ಕಿಂತ ಇನ್ನೂ ಹೆಚ್ಚಾಗಿದೆ.

ಈ ರೀತಿಯ ಜನಸಂಖ್ಯಾ ಬದಲಾವಣೆಗೆ ಕಾರಣವೂ ಇದೆ: ಆರೋಗ್ಯ ಸೇವೆ ಮತ್ತು ಪೌಷ್ಟಿಕಾಂಶ ಸುಧಾರಿಸಿದಾಗ ಮೊದಲು ಮರಣ ಪ್ರಮಾಣ ಕಡಿಮೆಯಾಗಿ ಜನಸಂಖ್ಯೆ ಹೆಚ್ಚಾಗುತ್ತದೆ. ಕೆಲವು ದಶಕಗಳ ನಂತರ ಸಂತಾನೋತ್ಪತ್ತಿ ಅಭ್ಯಾಸಗಳಲ್ಲಿ ಬದಲಾವಣೆಯಾಗಿ ಜನಸಂಖ್ಯೆ ಸ್ಥಿರಗೊಳ್ಳುತ್ತದೆ.

ಮಹಿಳಾ ಮೀಸಲಾತಿಗೆ ಕ್ಷೇತ್ರ ಪುನರ್ವಿಂಗಡಣೆ ಹೇಗೆ ತಳುಕು ಹಾಕಿಕೊಂಡಿತು?

ಎಲ್ಲಾ ಪ್ರಮುಖ ವಿರೋಧ ಪಕ್ಷಗಳ ಬೆಂಬಲದೊಂದಿಗೆ 2023ರ ಸೆಪ್ಟೆಂಬರ್ 21ರಂದು ಸಂಸತ್ತು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಲೋಕಸಭೆಯಲ್ಲಿ ಎಐಎಂಐಎಂ ಪಕ್ಷದ ಇಬ್ಬರು ಸಂಸದರು ಮಾತ್ರ ಇದರ ವಿರುದ್ಧ ಮತ ಚಲಾಯಿಸಿದರೆ, ರಾಜ್ಯಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಯಿತು.

ಈ ಸಂವಿಧಾನ ತಿದ್ದುಪಡಿಯು ಮಹಿಳಾ ಮೀಸಲಾತಿ ಜಾರಿಯನ್ನು ಮುಂದಿನ ಜನಗಣತಿಗೆ ಜೋಡಿಸಿದೆ. ಪ್ರಸ್ತುತ ನಡೆಯುತ್ತಿರುವ ಈ ಜನಗಣತಿಯ ಅಂಕಿಅಂಶಗಳು ಹೊರಬಂದ ನಂತರ ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದ್ದು, ಆ ಬಳಿಕವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಅದರಲ್ಲಿ ಹೇಳಲಾಗಿದೆ.

2029ರ ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಜನಗಣತಿ ಮತ್ತು ಆ ನಂತರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆಯ ವೇಳೆ ಲೋಕಸಭೆಗೆ ತಿಳಿಸಿದ್ದರು.

ಹಾಗಾದರೆ ಸರ್ಕಾರ ಮತ್ತೆ ತಿದ್ದುಪಡಿ ತರಲು ಏಕೆ ಪ್ರಯತ್ನಿಸಿತು?

2029ರ ವೇಳೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2026ರ ಎಪ್ರಿಲ್‌ನಲ್ಲಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮೂರು ಮಸೂದೆಗಳನ್ನು ಮಂಡಿಸಿತು:

1.ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯನ್ನು ತ್ವರಿತಗೊಳಿಸಲು, 2023ರ 'ನಾರಿ ಶಕ್ತಿ ವಂದನ್ ಅಧಿನಿಯಮ'ಕ್ಕೆ ತಿದ್ದುಪಡಿ ತರುವ ಸಂವಿಧಾನದ (131ನೇ ತಿದ್ದುಪಡಿ) ಮಸೂದೆ

2.ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸಲು 'ಕ್ಷೇತ್ರ ಪುನರ್ವಿಂಗಡಣಾ ಆಯೋಗ'ವನ್ನು ರಚಿಸುವ ಮಸೂದೆ

3.ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೂ ಮಹಿಳಾ ಮೀಸಲಾತಿಯನ್ನು ವಿಸ್ತರಿಸುವ ಮಸೂದೆ.

2023ರ 'ನಾರಿ ಶಕ್ತಿ ವಂದನ್ ಅಧಿನಿಯಮ'ದ ಪ್ರಕಾರ, ಕಾಯ್ದೆ ಜಾರಿಯಾದ ನಂತರ ನಡೆಯುವ ಮೊದಲ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದ ಬಳಿಕವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿತ್ತು. ಇದರಿಂದ ಜನಗಣತಿ ಅಂಕಿಅಂಶಗಳು ಪ್ರಕಟವಾಗಲು ಸಮಯ ಹಿಡಿದು ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಲೋಕಸಭೆಯಲ್ಲಿ ರಾಜ್ಯಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ 35 ಮೀರಬಾರದು ಎಂಬ ನಿಯಮ ರೂಪಿಸಲು ಸಂವಿಧಾನದ 81ನೇ ವಿಧಿಗೆ ತಿದ್ದುಪಡಿ ತರಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.

ಅಂದರೆ, ಈಗಾಗಲೇ ಅಂಕಿಅಂಶಗಳು ಪ್ರಕಟವಾಗಿರುವ ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸಿ, ಮಹಿಳಾ ಮೀಸಲಾತಿ ಜಾರಿಗೆ ತರುವುದು ಈ ಮಸೂದೆಯ ಉದ್ದೇಶವಾಗಿತ್ತು. ಅಂದರೆ ಇಲ್ಲಿ 2011ರ ಜನಗಣತಿಯನ್ನು ಪರಿಗಣಿಸಬೇಕಾಗುತ್ತದೆ.

2011ರ ವೇಳೆಗೆ ಕೆಲವು ರಾಜ್ಯಗಳ ಜನಸಂಖ್ಯೆಯು ಇತರ ರಾಜ್ಯಗಳಿಗಿಂತ ಸಾಕಷ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರ ಮೌಖಿಕವಾಗಿ ಹೇಳುತ್ತಿರುವಂತೆ ಎಲ್ಲಾ ರಾಜ್ಯಗಳಲ್ಲೂ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದು ಸಂವಿಧಾನದ 82(2)(ಎ) ವಿಧಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬುದು ಅರ್ಥಮಾಡಿಕೊಳ್ಳುವುದು ಕಷ್ಟ.

ಪ್ರತಿ ಜನಗಣತಿಯ ನಂತರವೂ ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಅಗತ್ಯವನ್ನು ರದ್ದುಗೊಳಿಸಲು ಸಂವಿಧಾನದ 82ನೇ ವಿಧಿಗೂ ತಿದ್ದುಪಡಿ ತರಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.

ಲೋಕಸಭೆಯಲ್ಲಿ ಹಾಜರಿದ್ದ ಮತ್ತು ಮತ ಚಲಾಯಿಸಿದ ಸದಸ್ಯರ ಪೈಕಿ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾದ ಕಾರಣ ಈ ಮಸೂದೆ ಅಂಗೀಕಾರವಾಗಿಲ್ಲ..

ವಿರೋಧ ಪಕ್ಷಗಳು ಇದರ ವಿರುದ್ಧ ನಿಲುವು ತಳೆದಿದ್ದು ಏಕೆ?

ಈ ಮಸೂದೆಗಳು ಗೊಂದಲ ಮತ್ತು ವಿರೋಧಾಭಾಸಗಳಿಂದ ಕೂಡಿವೆ ಎಂದು ವಿರೋಧ ಪಕ್ಷಗಳು ಹೇಳಿದವು. ಸರ್ಕಾರ ಮೌಖಿಕವಾಗಿ ಹೇಳುತ್ತಿರುವಂತೆ, ಎಲ್ಲಾ ರಾಜ್ಯಗಳಿಗೆ ಹಂಚಿಕೆಯಾಗುವ ಸ್ಥಾನಗಳ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಬಗ್ಗೆ ಮಸೂದೆಯಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಅವು ಹೇಳಿದ್ದವು.

ಇದರಿಂದಾಗಿ, ಕುಟುಂಬ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸದ ರಾಜ್ಯಗಳಿಗೆ ಹೆಚ್ಚಿನ ಪಾಲಿನ ಸ್ಥಾನಗಳನ್ನು ನೀಡುವ ಮೂಲಕ 'ಬಹುಮಾನ' ನೀಡಿದಂತಾಗುತ್ತದೆ ಎಂದು ವಿಪಕ್ಷಗಳು ವಾದಿಸಿದವು.

ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಆಲೋಚನೆಯನ್ನೂ ಕೆಲವು ವಿರೋಧ ಪಕ್ಷಗಳು ವಿರೋಧಿಸಿದವು. ಇದರಿಂದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದ ರಾಜ್ಯಗಳು ಮತ್ತು ನಿಯಂತ್ರಿಸದ ರಾಜ್ಯಗಳ ನಡುವಿನ ಸ್ಥಾನಗಳ ಅಂತರವು ಒಟ್ಟು ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವು ಹೇಳಿದವು. ತಾವು ಒತ್ತಾಯಿಸಿದರೂ ಸರ್ಕಾರ ಸರ್ವಪಕ್ಷ ಸಭೆ ಕರೆಯಲಿಲ್ಲ ಎಂದೂ ವಿಪಕ್ಷಗಳು ಆರೋಪಿಸಿದವು.

ಲೋಕಸಭೆಯ ಚರ್ಚೆಯ ವೇಳೆ, ಪ್ರತಿ ರಾಜ್ಯಕ್ಕೂ ಎಷ್ಟು ಸ್ಥಾನಗಳು ಹಂಚಿಕೆಯಾಗಲಿವೆ ಎಂಬ ನಿಖರ ವಿವರವನ್ನು ಒಂದು ಗಂಟೆಯೊಳಗೆ ಲಿಖಿತ ರೂಪದಲ್ಲಿ ನೀಡುವುದಾಗಿ ಗೃಹ ಸಚಿವ ಶಾ ಭರವಸೆ ನೀಡಿದರು. ಆದರೂ ವಿರೋಧ ಪಕ್ಷಗಳು ಮಸೂದೆಗಳಿಗೆ ತಮ್ಮ ವಿರೋಧವನ್ನು ಮುಂದುವರಿಸಿದವು.

ಈಗ ಏನು ಬದಲಾಗಿದೆ?

ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಮತ್ತು ರಾಜ್ಯಗಳಿಗೆ ಸ್ಥಾನ ಹಂಚಿಕೆ ಮಾಡುವ ಈಗಿನ ಅನುಪಾತವನ್ನು 2051ರವರೆಗೆ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.

ಲೋಕಸಭೆಯಲ್ಲಿ ತಮಿಳುನಾಡಿಗೆ ಈಗಿರುವ ಸುಮಾರು ಶೇ. 7.2ರಷ್ಟು ಸ್ಥಾನಗಳ ಪಾಲನ್ನು ಖಚಿತಪಡಿಸಿದರೆ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲು ಸಿದ್ಧ ಎಂದು ಡಿಎಂಕೆ ಪಕ್ಷ ಸೂಚನೆ ನೀಡಿದೆ. ಇದು ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಸಿಗಲಿದೆ ಎಂಬ ಸರ್ಕಾರದ ವಿಶ್ವಾಸಕ್ಕೆ ಕಾರಣವಾಗಿದೆ. ಆಡಳಿತಾರೂಢ ಮೈತ್ರಿಕೂಟವು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಬಣದ ಬೆಂಬಲವನ್ನೂ ನಿರೀಕ್ಷಿಸುತ್ತಿದೆ.

ಮೂರು ಸ್ಥಾನಗಳು ಖಾಲಿ ಇರುವ 540 ಸದಸ್ಯ ಬಲದ ಲೋಕಸಭೆಯಲ್ಲಿ ಡಿಎಂಕೆ 22 ಹಾಗೂ ಎನ್‌ಸಿಪಿ (ಎಸ್‌ಪಿ) 8 ಸಂಸದರನ್ನು ಹೊಂದಿವೆ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕನಿಷ್ಠ 360 ಸಂಸದರ ಬೆಂಬಲ ಬೇಕಾಗುತ್ತದೆ.

ಇನ್ನು 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ 142 ಸಂಸದರನ್ನು ಹೊಂದಿದೆ. ಇಲ್ಲಿ ಸಂವಿಧಾನ ತಿದ್ದುಪಡಿಗೆ 161 ಸದಸ್ಯರ ಬೆಂಬಲ ಅಗತ್ಯವಿದ್ದು, ಆಡಳಿತಾರೂಢ ಮೈತ್ರಿಕೂಟಕ್ಕೆ ಇನ್ನೂ 19 ಸದಸ್ಯರ ಬೆಂಬಲ ಬೇಕಿದೆ.

ರಾಜ್ಯಸಭೆಯಲ್ಲಿ ಡಿಎಂಕೆಗೆ 8 ಮತ್ತು ಎನ್‌ಸಿಪಿ (ಎಸ್‌ಪಿ)ಗೆ ಒಬ್ಬರು ಸಂಸದರಿದ್ದಾರೆ. ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎನ್‌ಡಿಎಯೇತರ ಪಕ್ಷಗಳ ಸುಮಾರು 100 ಸದಸ್ಯರಿದ್ದು, ಮೇಲ್ಮನೆಯಲ್ಲೂ ಅಗತ್ಯ ಬೆಂಬಲ ಸಿಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಶನಿವಾರ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಪರಿಷ್ಕೃತ ಪ್ರಸ್ತಾವನೆಯು ತಮಿಳುನಾಡಿಗೆ ಸಿಕ್ಕ 'ದೊಡ್ಡ ಜಯ' ಎಂದು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ

ಈ ಹಿಂದಿನ ಮಸೂದೆಯನ್ನು ಡಿಎಂಕೆ ವಿರೋಧಿಸಿತ್ತು. ಈಗಿನ ಪರಿಷ್ಕೃತ ಪ್ರಸ್ತಾವನೆಯಲ್ಲಿ 2024ರ ತಮಿಳುನಾಡು ವಿಧಾನಸಭಾ ನಿರ್ಣಯದಲ್ಲಿ ತಾವು ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಸೇರಿಸಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಮುಖ್ಯವಾಗಿ, ಇತ್ತೀಚಿನ ಜನಸಂಖ್ಯಾ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸುವುದನ್ನು ಇದು ತಡೆಯುತ್ತದೆ. ಇತ್ತೀಚಿನ ಜನಸಂಖ್ಯೆಯನ್ನು ಪರಿಗಣಿಸಿದ್ದರೆ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಲಾಭವಾಗುತ್ತಿತ್ತು. ಅದರ ಬದಲು 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.

ಈ ಪರಿಷ್ಕೃತ ಸೂತ್ರದಿಂದಾಗಿ ಸಂಸತ್ತಿನಲ್ಲಿ ತಮಿಳುನಾಡಿನ ಈಗಿನ ಪ್ರಾತಿನಿಧ್ಯದ ಪ್ರಮಾಣಕ್ಕೆ ಯಾವುದೇ ಧಕ್ಕೆಯಾಗದೆ ರಾಜ್ಯದ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಮುಂದಿನ 25 ವರ್ಷಗಳ ಕಾಲ ರಾಜ್ಯದ ರಾಜಕೀಯ ಹಿತಾಸಕ್ತಿ ರಕ್ಷಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸಭೆಯ ನಿರ್ಣಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಡಿಎಂಕೆ, "ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಡಿಎಂಕೆ ಸಂಸದೀಯ ಸದಸ್ಯರ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ: ನಾವು ತಮಿಳುನಾಡಿನ ಪ್ರಾತಿನಿಧ್ಯವನ್ನು ರಕ್ಷಿಸುತ್ತೇವೆ! ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯುತ್ತೇವೆ!" ಎಂದು ಬರೆದುಕೊಂಡಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಮೂಲಕ ಕ್ಷೇತ್ರ ಪುನರ್ವಿಂಗಡಣೆ ನಡೆಸಿ, ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹೊಸದಾಗಿ ಪ್ರಯತ್ನ ಆರಂಭಿಸಿದ ಬೆನ್ನಲ್ಲೇ ಡಿಎಂಕೆ ಈ ಬೆಂಬಲ ನೀಡಿದೆ.

ಇದರಲ್ಲಿರುವ ಸಾಂವಿಧಾನಿಕ ತೊಡಕುಗಳೇನು?

'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ಎಂಬ ತತ್ವದ ಆಧಾರದ ಮೇಲೆ ರಾಜ್ಯಗಳ ನಡುವೆ ಸ್ಥಾನಗಳನ್ನು ಹಂಚಿಕೆ ಮಾಡಲು ಸಂವಿಧಾನದ 81(2)(ಎ) ವಿಧಿಯಲ್ಲಿ ಒಂದು ಸೂತ್ರವನ್ನು ನೀಡಲಾಗಿದೆ. ಇದಕ್ಕಾಗಿ ಪ್ರತಿ ಜನಗಣತಿಯ ನಂತರ ಕ್ಷೇತ್ರ ಪುನರ್ವಿಂಗಡಣೆ ನಡೆಸುವುದು ಸಂವಿಧಾನದ ಪ್ರಕಾರ ಕಡ್ಡಾಯವಾಗಿದೆ. ಇದನ್ನೇ ಸಂವಿಧಾನ ತಿದ್ದುಪಡಿಗಳ ಮೂಲಕ 50 ವರ್ಷಗಳ ಕಾಲ ತಡೆಹಿಡಿಯಲಾಗಿತ್ತು ಎಂದು ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.

"ಆದರೆ ಆ ಸೂತ್ರ ಇನ್ನೂ ಸಂವಿಧಾನದಲ್ಲಿದೆ. ದಕ್ಷಿಣದ ರಾಜ್ಯಗಳ ಆತಂಕಗಳನ್ನು ಪರಿಗಣಿಸುವ ಹೊಸ ಸೂತ್ರವನ್ನು ರೂಪಿಸಲು ಆ ವಿಧಿಗೇ ತಿದ್ದುಪಡಿ ತರದ ಹೊರತು, ಕ್ಷೇತ್ರ ಪುನರ್ವಿಂಗಡಣಾ ಆಯೋಗವು ಸಂವಿಧಾನದಲ್ಲಿರುವ ಈಗಿನ ಸೂತ್ರವನ್ನೇ ಪಾಲಿಸಬೇಕಾಗುತ್ತದೆ. ಭವಿಷ್ಯದ ಕ್ಷೇತ್ರ ಪುನರ್ವಿಂಗಡಣಾ ಆಯೋಗವು ಹೊಸ ಸೂತ್ರವನ್ನು ಅನುಸರಿಸಬೇಕಾದರೆ, ಸರ್ವಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ 81ನೇ ವಿಧಿಗೆ ತಿದ್ದುಪಡಿ ತರಬೇಕಾಗುತ್ತದೆ" ಎಂದು ಆಚಾರ್ಯ ಹೇಳಿದ್ದಾರೆ. "ಸಂವಿಧಾನದಲ್ಲಿ 'ಒಂದು ಮತ, ಒಂದು ಮೌಲ್ಯ' ಸೂತ್ರ ಹಾಗೆಯೇ ಇರುವಾಗ, ಎಲ್ಲಾ ರಾಜ್ಯಗಳಲ್ಲೂ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವಂತೆ ಸರ್ಕಾರವು ಕ್ಷೇತ್ರ ಪುನರ್ವಿಂಗಡಣಾ ಆಯೋಗಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲ" ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಂದರೆ, ಎಪ್ರಿಲ್‌ನಲ್ಲಿ ಅಂಗೀಕಾರವಾಗದ ಮಸೂದೆಯು ಕೇವಲ ಲಭ್ಯವಿರುವ ಕೊನೆಯ ಜನಗಣತಿ (ಅಂದರೆ 2011) ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದೆ ಎಂದಷ್ಟೇ ಹೇಳಿತ್ತು. ಪ್ರತಿ ರಾಜ್ಯಕ್ಕೂ ಶೇ. 50ರಷ್ಟು ಸ್ಥಾನಗಳು ಹೆಚ್ಚಾಗಲಿವೆ ಎಂಬ ಬಗ್ಗೆ ಮೌಖಿಕ ಭರವಸೆಯನ್ನು ಬಿಟ್ಟರೆ ಮಸೂದೆಯಲ್ಲಿ ಯಾವುದೇ ಸ್ಪಷ್ಟ ಉಲ್ಲೇಖವಿರಲಿಲ್ಲ. ಈಗಿನ ಸೂತ್ರವನ್ನೇ ಬದಲಾಯಿಸದ ಹೊರತು, ಶೇ. 50ರಷ್ಟು ಸ್ಥಾನ ಹೆಚ್ಚಳವನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಸೇರಿಸಿದರೂ ಅದು ಸಂವಿಧಾನದ 81ನೇ ವಿಧಿಗೆ ಹೊಂದಿಕೆಯಾಗದಿರಬಹುದು.

ಮಹಿಳಾ ಮೀಸಲಾತಿಯ ಈಗಿನ ಸ್ಥಿತಿ ಏನು?

ಸದ್ಯಕ್ಕೆ 2023ರ 'ನಾರಿ ಶಕ್ತಿ ವಂದನ್ ಅಧಿನಿಯಮ' ಕಾಯ್ದೆಯೇ ಜಾರಿಯಲ್ಲಿದೆ. ಈ ಕಾಯ್ದೆಯ ಪ್ರಕಾರ, ಜನಗಣತಿ ಮುಗಿದ ನಂತರ ಅದರ ಇತ್ತೀಚಿನ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದೆ. ಆ ಬಳಿಕ, ಮುಂದಿನ ಲೋಕಸಭಾ ಚುನಾವಣೆಯ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ.

2023ರ ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಶುಕ್ರವಾರ ಹೀಗೆ ಪ್ರತಿಕ್ರಿಯಿಸಿದ್ದಾರೆ: "ಸಂವಿಧಾನದ (106ನೇ) ತಿದ್ದುಪಡಿ ಕಾಯ್ದೆಯ ಮೂಲಕ 334ಎ ವಿಧಿಯನ್ನು ಸೇರಿಸಲಾಯಿತು. ಇದು ಮುಂದಿನ ಜನಗಣತಿಯ ನಂತರ ನಡೆಯುವ ಕ್ಷೇತ್ರ ಪುನರ್ವಿಂಗಡಣೆಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕಿತು. ಜನಗಣತಿ ಮತ್ತು ಆ ನಂತರ ಕ್ಷೇತ್ರ ಪುನರ್ವಿಂಗಡಣೆ ಎಂಬ ಎರಡು ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುವ 334ಎ ವಿಧಿಯನ್ನು ಸೇರಿಸುವುದಕ್ಕೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಬಿಜೆಪಿ ದುರುದ್ದೇಶದಿಂದ 334ಎ ವಿಧಿಯನ್ನು ಸೇರಿಸಲೇಬೇಕು ಎಂದು ಪಟ್ಟುಹಿಡಿಯಿತು. 334ಎ ವಿಧಿಯ ಸಮೇತ ಮಸೂದೆ ಅಂಗೀಕಾರವಾಗಿ ಕಾಯ್ದೆಯಾಯಿತು. ಈಗ ಬಿಜೆಪಿ ಮಾಡಬೇಕಿರುವುದು ಇಷ್ಟೇ: 334ಎ ವಿಧಿಯನ್ನು ರದ್ದುಗೊಳಿಸಲು ಪ್ರಸ್ತಾಪಿಸಬೇಕು. ಒಮ್ಮೆ 334ಎ ವಿಧಿಯನ್ನು ತೆಗೆದುಹಾಕಿದರೆ, ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬಹುದು."

ಮಹಿಳಾ ಮೀಸಲಾತಿ ಜಾರಿಯ ಸೋಗಿನಲ್ಲಿ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ತನಗೆ ಅನುಕೂಲವಾಗುವಂತೆ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸಲು ಹೊರಟಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಆರೋಪಿಸಿದ್ದಾರೆ. "ಈ ವಿಶೇಷ ಅಧಿವೇಶನ ಕರೆದಿರುವುದೇ ಕ್ಷೇತ್ರ ಪುನರ್ವಿಂಗಡಣೆಗಾಗಿ. ಚುನಾವಣಾ ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹೊಣೆ ಯಾರ ಮೇಲಿರುತ್ತದೆ? ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಪಹಾಸ್ಯಕ್ಕೀಡುಮಾಡಿ, ಚುನಾವಣಾ ಪ್ರಕ್ರಿಯೆಯ ವಿಶ್ವಾಸರ್ಹತೆಯನ್ನು ನಾಶಪಡಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕೈಯಲ್ಲಿರುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ 'ಮತ ಕಳ್ಳತನ' ಮಾಡಿದವರಿಗೇ ಈಗ ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಮತ್ತು ಕ್ಷೇತ್ರಗಳ ಸ್ವರೂಪವನ್ನು ತಮಗೆ ಬೇಕಾದಂತೆ ಬದಲಾಯಿಸುವ ಅಧಿಕಾರ ನೀಡಲಾಗುತ್ತಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿಕಾಸ್ ಪಾಠಕ್ - indianexpress.com

contributor