ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆರವಾಗಿದ್ದು ಹೇಗೆ?
► ಸುಶಿಮ್ ಮುಕುಲ್ - indiatoday. in ವರದಿ ► "ಭಯವಿಲ್ಲದ ಯುವಕರೇ ಬನ್ನಿ... ನಮ್ಮ ಹೈದರ್ ಅಲಿ ನೌಕೆಯನ್ನು ಏರಿ!"
Photo Credit : indiatoday.in
ಈ ಸಾಲುಗಳು ಮೊಳಗಿದ್ದು ಭಾರತದ ಮೈಸೂರಿನ ಬೀದಿಗಳಲ್ಲಲ್ಲ, ಬದಲಿಗೆ ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಫಿಲಡೆಲ್ಫಿಯಾದಲ್ಲಿ. ಹೈದರ್ ಅಲಿ ಹೆಸರಿನ ಯುದ್ಧನೌಕೆಯ ಕುರಿತಾದ ಗೀತೆಗಳು ಅಲ್ಲಿ ಜಯಘೋಷ ಮೊಳಗಿಸುತ್ತಿದ್ದವು; ಸಾರ್ವಜನಿಕ ಸಮಾರಂಭಗಳಲ್ಲಿ ಅವರನ್ನು ಕೊಂಡಾಡಲಾಗುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಅನೇಕ ಅಮೆರಿಕನ್ನರಿಗೆ ಮೈಸೂರಿನ ಈ ದೊರೆ ಪ್ರತಿರೋಧದ ಸಂಕೇತವಾಗಿದ್ದರು. ಅಷ್ಟೇ ಅಲ್ಲದೆ, ಮೈಸೂರಿನ ಅರಸ ಹೈದರ್ ಅಲಿ ಹೆಸರನ್ನು ಅಲ್ಲಿನ ಒಂದು ಯುದ್ಧನೌಕೆಗೂ ಇಡಲಾಗಿತ್ತು.
ಇತ್ತ ಉತ್ತರ ಅಮೆರಿಕದಲ್ಲಿ ಜಾರ್ಜ್ ವಾಷಿಂಗ್ಟನ್ ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡುತ್ತಿದ್ದರೆ, ಅತ್ತ ಅದೇ ಸಾಮ್ರಾಜ್ಯಶಾಹಿ ಶಕ್ತಿಯ ಮತ್ತೊಂದು ಮುಂಭಾಗದಲ್ಲಿ ಹೈದರ್ ಅಲಿ ಮತ್ತು ನಂತರ ಅವರ ಪುತ್ರ ಟಿಪ್ಪು ಸುಲ್ತಾನ್ ಯುದ್ಧ ನಿರತರಾಗಿದ್ದರು. ಅಮೆರಿಕದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದ ದಕ್ಷಿಣ ಭಾರತವದು. ವಾಷಿಂಗ್ಟನ್ ಮತ್ತು ಮೈಸೂರಿನ ದೊರೆಗಳ ನಡುವೆ ಯಾವುದೇ ಪತ್ರವ್ಯವಹಾರ ನಡೆದಿರಲಿಲ್ಲ; ಅಥವಾ ಮೈಸೂರು ರಾಜ್ಯವು ಅಮೆರಿಕಕ್ಕೆ ಸೈನ್ಯವನ್ನೂ ಕಳುಹಿಸಿರಲಿಲ್ಲ. ಆದರೆ, ಬ್ರಿಟನ್ ನ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆ ಮತ್ತು 1756-1763ರ ಏಳು ವರ್ಷಗಳ ಯುದ್ಧದ ಸೋಲಿನ ನಂತರ ಬ್ರಿಟನ್ ಅನ್ನು ಮಣಿಸಲು ಫ್ರಾನ್ಸ್ ನಡೆಸಿದ ಪ್ರಯತ್ನಗಳಿಂದಾಗಿ, ಈ ಎರಡೂ ಯುದ್ಧಭೂಮಿಗಳು ಒಂದಕ್ಕೊಂದು ಹೆಣೆದುಕೊಂಡವು.
ಇತಿಹಾಸಕಾರರ ಪ್ರಕಾರ, ಅಮೆರಿಕನ್ ಕ್ರಾಂತಿ ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾದ ಕಥೆಯಾಗಿರಲಿಲ್ಲ. ಅದು ಕೆರಿಬಿಯನ್ ಮತ್ತು ಯುರೋಪ್ ನಿಂದ ಹಿಡಿದು ಭಾರತೀಯ ಉಪಖಂಡದವರೆಗೂ ವ್ಯಾಪಿಸಿತ್ತು. ಬೋಸ್ಟನ್ ಟೀ ಪಾರ್ಟಿಗೆ ಕಾರಣವಾಗಿದ್ದ ಬ್ರಿಟನ್‌ನ ಅದೇ ಈಸ್ಟ್ ಇಂಡಿಯಾ ಕಂಪನಿಯು, ಅದೇ ಸಮಯದಲ್ಲಿ ಮೈಸೂರಿನ ವಿರುದ್ಧ ಭಾರೀ ವೆಚ್ಚದ ಯುದ್ಧದಲ್ಲಿ ಸಿಲುಕಿತ್ತು. ಫ್ರೆಂಚ್ ನೌಕಾಪಡೆ ಮತ್ತು ಹಣಕಾಸಿನ ನೆರವು ವಾಷಿಂಗ್ಟನ್‌ನ ಕ್ರಾಂತಿಕಾರಿಗಳಿಗೆ (ಅಥವಾ ಬಂಡುಕೋರರಿಗೆ) ಮತ್ತು ಹೈದರ್ ಅಲಿಯ ಸೈನ್ಯಕ್ಕೂ ಬೆಂಬಲವಾಗಿ ನಿಂತಿತು. ಇದು ಬ್ರಿಟನ್ ಏಕಕಾಲದಲ್ಲಿ ಹಲವು ರಂಗಗಳಲ್ಲಿ ಹೋರಾಡುವಂತೆ ಮಾಡಿತು.
ಅಮೆರಿಕವು ತನ್ನ ಸ್ವಾತಂತ್ರ್ಯ ಘೋಷಣೆಯ (1776) 250ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಹದಿನೆಂಟನೇ ಶತಮಾನದ ಉತ್ತರಾರ್ಧದ ಬಹುಮಟ್ಟಿಗೆ ಮರೆತುಹೋಗಿರುವ ಈ ಅಧ್ಯಾಯವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು ಒಂದು ಉತ್ತಮ ಅವಕಾಶ ಒದಗಿಬಂದಿದೆ. ಸ್ವಾತಂತ್ರ್ಯ ಘೋಷಣೆ 1776ರಲ್ಲಿ ಹೊರಬಿದ್ದರೂ, ಅಮೆರಿಕದ ಕ್ರಾಂತಿಕಾರಿ ಯುದ್ಧವು (ಬ್ರಿಟನ್ ಮತ್ತು ಅದರ 13 ಉತ್ತರ ಅಮೆರಿಕಾದ ವಸಾಹತುಗಳ ನಡುವೆ) 1775ರಲ್ಲೇ ಆರಂಭವಾಗಿತ್ತು. ಬ್ರಿಟನ್‌ಗೆ ನಿರ್ಣಾಯಕ ಸೋಲಾಗಿದ್ದು 1781ರಲ್ಲಿ, ಮತ್ತು ಅಮೆರಿಕದ ಸ್ವಾತಂತ್ರ್ಯಕ್ಕೆ ಅಧಿಕೃತ ಮನ್ನಣೆ ಸಿಕ್ಕಿದ್ದು 1783ರ ಪ್ಯಾರಿಸ್ ಒಪ್ಪಂದದ ಮೂಲಕ. ಆ ದಿನಗಳಲ್ಲಿ ಮೈಸೂರಿನ ದೊರೆಗಳಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ಸಹಚರರೆಂದು ಇಡೀ ಅಮೆರಿಕದಾದ್ಯಂತ ಗೌರವಿಸಲಾಗುತ್ತಿತ್ತು.
ಈ ಅಭಿಮಾನದ ಅರ್ಥ, ಮೈಸೂರು ಅಮೆರಿಕಕ್ಕೆ ಸ್ವಾತಂತ್ರ್ಯವನ್ನು "ಗೆದ್ದುಕೊಟ್ಟಿತು" ಎಂದಲ್ಲ. ಅಮೆರಿಕದ ಕ್ರಾಂತಿಕಾರಿ ಯುದ್ಧವು ತನ್ನ ನಿರ್ಣಾಯಕ ಹಂತವನ್ನು ತಲುಪುತ್ತಿದ್ದ ಅದೇ ಸಮಯದಲ್ಲಿ, ಎರಡನೇ ಆಂಗ್ಲೋ-ಮೈಸೂರು ಯುದ್ಧವು (1780-1784) ಬ್ರಿಟನ್ ವಿರುದ್ಧ ಮತ್ತೊಂದು ಪ್ರಮುಖ ರಣರಂಗವನ್ನು ಸೃಷ್ಟಿಸಿತು. ಆದರೆ, ಏಕಕಾಲದಲ್ಲಿ ನಡೆದ ಈ ಯುದ್ಧಗಳು ಬ್ರಿಟನ್ ಹಲವು ರಂಗಗಳಲ್ಲಿ ಹೋರಾಡುವಂತೆ ಒತ್ತಡ ಹೇರಿದವು. ಈ ಒತ್ತಡಗಳೇ ಅಂತಿಮವಾಗಿ ಅಮೆರಿಕನ್ ಕ್ರಾಂತಿಯ ಫಲಿತಾಂಶವನ್ನು ರೂಪಿಸಲು ಕಾರಣವಾದವು ಎಂಬುದನ್ನು ಇತಿಹಾಸಕಾರರು ಒಪ್ಪುತ್ತಾರೆ.
ಮೈಸೂರು ಬ್ರಿಟನ್‌ನ ಅತಿ ದೊಡ್ಡ ಸಮಸ್ಯೆಯಾಯಿತೇ?
1770ರ ದಶಕದ ಉತ್ತರಾರ್ಧದ ವೇಳೆಗೆ, ಬ್ರಿಟಿಷ್ ಸಾಮ್ರಾಜ್ಯವು ಪ್ಲಾಸಿ ಮತ್ತು ಬಕ್ಸರ್ ಕದನಗಳ ನಂತರ ಭಾರತೀಯ ಉಪಖಂಡದಲ್ಲಿ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಲು ಮತ್ತು ಈ ವಲಯದಲ್ಲಿದ್ದ ಇತರ ಯುರೋಪಿಯನ್ ಶಕ್ತಿಗಳನ್ನು ಎದುರಿಸಲು ಪ್ರಾರಂಭಿಸಿತ್ತು. ಇದೇ ವೇಳೆ, ಬ್ರಿಟನ್ ಉತ್ತರ ಅಮೆರಿಕದಲ್ಲಿ ತನ್ನದೇ ಆದ ಕೆಲವು ಬಂಡಾಯ ವಸಾಹತುಗಳ ವಿರುದ್ಧವೂ ಹೋರಾಡುತ್ತಿತ್ತು. ಮತ್ತೊಂದೆಡೆ, ಫ್ರಾನ್ಸ್ 1778ರಲ್ಲಿ ಬ್ರಿಟನ್ ವಿರುದ್ಧ ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರವೇಶಿಸಿತು. ಇದು ಈ ಸಂಘರ್ಷವನ್ನು ಜಾಗತಿಕ ಯುದ್ಧವಾಗಿ ಪರಿವರ್ತಿಸಿತು. ಈ ಯುದ್ಧ ಮತ್ತು ಹಗೆತನವು ಯುರೋಪ್, ಕೆರಿಬಿಯನ್, ಆಫ್ರಿಕಾ ಮತ್ತು ಏಷ್ಯಾ ಖಂಡಗಳಿಗೂ ಹರಡಿತು. ಭಾರತದಲ್ಲಿ ಇದರ ಕೇಂದ್ರಬಿಂದುವಾಗಿದ್ದು ಮೈಸೂರು.
'ಮ್ಯೂಸಿಯಂ ಆಫ್ ದಿ ಅಮೆರಿಕನ್ ರೆವಲ್ಯೂಷನ್' ಸಂಸ್ಥೆಯ "ರೆವಲ್ಯೂಷನ್ ಅರೌಂಡ್ ದಿ ವರ್ಲ್ಡ್" ಸರಣಿಯ ಪ್ರಕಾರ, ಫ್ರಾನ್ಸ್ ಅಮೆರಿಕದ ವಸಾಹತುಗಳೊಂದಿಗೆ ಕೈಜೋಡಿಸಿದ ನಂತರ, ಬ್ರಿಟನ್ 1779ರಲ್ಲಿ ಫ್ರೆಂಚ್ ನಿಯಂತ್ರಣದಲ್ಲಿದ್ದ ಮಾಹೆ ಬಂದರನ್ನು ವಶಪಡಿಸಿಕೊಂಡಿತು. ಫ್ರಾನ್ಸ್ ನಿಂದ ಮಿಲಿಟರಿ ಸಾಮಗ್ರಿಗಳನ್ನು ಪಡೆಯಲು ಮಾಹೆ ಬಂದರು ಹೈದರ್ ಅಲಿ ಅವರಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಬ್ರಿಟಿಷರ ಈ ದಾಳಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು (1780-1784) ಘೋಷಿಸಲು ಹೈದರ್ ಅಲಿ ಅವರಿಗೆ ಪ್ರೇರಣೆ ನೀಡಿತು.
ಬ್ರಿಟನ್ ಅನ್ನು ಸಾಧ್ಯವಿರುವ ಕಡೆಗಳಲ್ಲೆಲ್ಲಾ ದುರ್ಬಲಗೊಳಿಸಲು ಹಾತೊರೆಯುತ್ತಿದ್ದ ಫ್ರೆಂಚ್ ಸರ್ಕಾರ, ಮೈಸೂರನ್ನು ಬೆಂಬಲಿಸಲು ಅಡ್ಮಿರಲ್ ಪಿಯರೆ ಆಂಡ್ರೆ ಡಿ ಸುಫ್ರೆನ್ ಅವರನ್ನು ಕಳುಹಿಸಿಕೊಟ್ಟಿತು. ಇದರೊಂದಿಗೆ ಬ್ರಿಟನ್ ದಿಢೀರನೆ ಉತ್ತರ ಅಮೆರಿಕ ಸೇರಿದಂತೆ ವಿವಿಧ ಖಂಡಗಳಲ್ಲಿ ಹರಡಿದ್ದ ತನ್ನ ಇಡೀ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಬೇಕಾದ ಕಠಿಣ ಪರಿಸ್ಥಿತಿಗೆ ಸಿಲುಕಿತು.
ಚಿಕಾಗೋ ಮೂಲದ ಇತಿಹಾಸಕಾರ ಬ್ಲೇಕ್ ಸ್ಮಿತ್, 2016ರಲ್ಲಿ ಆಸ್ಟ್ರೇಲಿಯಾದ ಸುದ್ದಿ ಮಾಧ್ಯಮ 'ಇಯಾನ್' (Aeon) ನಲ್ಲಿ ಬರೆದ ಲೇಖನವೊಂದರಲ್ಲಿ, ಜಾರ್ಜ್ ವಾಷಿಂಗ್ಟನ್ ಮತ್ತು ಹೈದರ್ ಅಲಿ "ಒಬ್ಬನೇ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡಿದರು ಮತ್ತು ಒಬ್ಬನೇ ಸಾಮಾನ್ಯ ಮಿತ್ರನನ್ನು ಹೊಂದಿದ್ದರು" ಎಂದು ಉಲ್ಲೇಖಿಸಿದ್ದಾರೆ. ಏಳು ವರ್ಷಗಳ ಯುದ್ಧದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಫ್ರಾನ್ಸ್ ಉದ್ದೇಶಪೂರ್ವಕವಾಗಿಯೇ "ಬ್ರಿಟನ್ ವಿರುದ್ಧ ವಸಾಹತುಗಳ ಬಂಡಾಯವನ್ನು ಪ್ರಚೋದಿಸುವ" ವಿಶಾಲ ಕಾರ್ಯತಂತ್ರದ ಭಾಗವಾಗಿ ಅಮೆರಿಕದ ಬಂಡುಕೋರರನ್ನು ಮತ್ತು ಮೈಸೂರನ್ನು ಬೆಂಬಲಿಸಿತ್ತು.
ಸಾವಿರಾರು ಮೈಲಿಗಳ ದೂರದಲ್ಲಿದ್ದುಕೊಂಡೇ ಜಂಟಿಯಾಗಿ ಬ್ರಿಟಿಷ್ ಶತ್ರುವನ್ನು ಎದುರಿಸಿದ ಮೈಸೂರು ಮತ್ತು ಅಮೆರಿಕನ್ನರು
ಜಾರ್ಜ್ ವಾಷಿಂಗ್ಟನ್ ಮತ್ತು ಮೈಸೂರಿನ ಹೈದರ್ ಅಲಿ ನಡುವೆ ಯಾವುದೇ ನೇರ ಮಿಲಿಟರಿ ಮೈತ್ರಿ ಇರಲಿಲ್ಲವಾದರೂ, ಇಬ್ಬರ ಹಿತಾಸಕ್ತಿಗಳು ಒಂದೇ ಆಗಿದ್ದವು.
ಜಾರ್ಜ್ ವಾಷಿಂಗ್ಟನ್ ಅವರು ವ್ಯಾಲಿ ಫೋರ್ಜ್‌ನಲ್ಲಿ ತೀವ್ರ ಸಂಘರ್ಷ ನಡೆಸಿ, ಅಂತಿಮವಾಗಿ ಯಾರ್ಕ್‌ಟೌನ್‌ನಲ್ಲಿ ಜಯಭೇರಿ ಬಾರಿಸುವ ಮುನ್ನವೇ ಅತ್ತ ಹೈದರ್ ಅಲಿ ದಕ್ಷಿಣ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾವಾದಕ್ಕೆ ಸರಣಿ ಸವಾಲುಗಳನ್ನು ಒಡ್ಡುತ್ತಿದ್ದರು. ಅವರ ಅತ್ಯಂತ ದೊಡ್ಡ ವಿಜಯಗಳಲ್ಲಿ ಒಂದಾದ 1780ರ ಪೊಲ್ಲಿಲೂರ್ ಕದನವು (ಪ್ರಸ್ತುತ ತಮಿಳುನಾಡಿನ ಕಾಂಚೀಪುರಂ ಬಳಿ ಇದೆ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಅವರು ನೀಡಿದ ಅತ್ಯಂತ ಹೀನಾಯ ಸೋಲಾಗಿತ್ತು. ಈ ಕದನವು ಎರಡನೇ ಆಂಗ್ಲೋ-ಮೈಸೂರು ಯುದ್ಧದ ಭಾಗವಾಗಿತ್ತು.
ಇದರಿಂದಾಗಿ ಬ್ರಿಟಿಷರು ದಿಢೀರನೆ ತಮ್ಮ ಸೈನಿಕರು, ಯುದ್ಧನೌಕೆಗಳು, ಹಣ ಮತ್ತು ರಾಜಕೀಯ ಗಮನವನ್ನು ಅಮೆರಿಕ ಹಾಗೂ ಭಾರತದ ನಡುವೆ ಹಂಚಬೇಕಾದ ಅನಿವಾರ್ಯತೆಗೆ ಸಿಲುಕಿದರು.
ಅಮೆರಿಕದ ವಿದ್ವಾಂಸ ರಿಚರ್ಡ್ ಸಾಂಬಶಿವಮ್ ಅವರು 2016ರ 'ಜರ್ನಲ್ ಆಫ್ ದಿ ಅಮೆರಿಕನ್ ರೆವಲ್ಯೂಷನ್' (JAR) ಪತ್ರಿಕೆಯ ಲೇಖನವೊಂದರಲ್ಲಿ ಮಹತ್ವದ ವಿಷಯವೊಂದನ್ನು ಉಲ್ಲೇಖಿಸಿದ್ದಾರೆ. ಅಮೆರಿಕದಲ್ಲಿ ಬ್ರಿಟಿಷ್ ಸೇನಾ ಕಮಾಂಡರ್ ಕಾರ್ನ್‌ವಾಲಿಸ್ ಯಾರ್ಕ್‌ಟೌನ್‌ನಲ್ಲಿ ಶರಣಾಗಿದ್ದನ್ನು ಮತ್ತು ಭಾರತದಲ್ಲಿ ಹೈದರ್ ಅಲಿ ಸಾಧಿಸಿದ ವಿಜಯಗಳನ್ನು ನ್ಯೂಜೆರ್ಸಿಯ ಟ್ರೆಂಟನ್‌ನಲ್ಲಿ ಒಟ್ಟಿಗೆ ಸಂಭ್ರಮಿಸಲಾಗಿತ್ತು. ಯಾರ್ಕ್‌ಟೌನ್ ವಿಜಯದ ಕೆಲವೇ ದಿನಗಳ ನಂತರ, ಅಂದರೆ 1781ರ ಅಕ್ಟೋಬರ್ 28ರಂದು ಅಲ್ಲಿನ ಸಾರ್ವಜನಿಕರು 13 ಸಾಂಪ್ರದಾಯಿಕ ವಿಜಯಘೋಷಗಳನ್ನು ಮೊಳಗಿಸಿದರು. ಅದರಲ್ಲಿ 11ನೇ ಘೋಷಣೆಯು, "ಪೂರ್ವ ಭಾರತದಲ್ಲಿ ಬ್ರಿಟನ್‌ನ ಸೊಕ್ಕನ್ನು ಅಡಗಿಸಲು ಮತ್ತು ಅದರ ಶಕ್ತಿಯನ್ನು ಕುಂದಿಸಲು... ದೈವೇಚ್ಛೆಯಿಂದ ಉದಯಿಸಿದ... ಮಹಾನ್ ಮತ್ತು ವೀರ ಹೈದರ್ ಅಲಿ" ಅವರಿಗೆ ಗೌರವ ಸಲ್ಲಿಸಿತ್ತು.
ಕ್ರಾಂತಿಕಾರಿ ಅಮೆರಿಕನ್ನರಿಗೆ ಹೈದರ್ ಅಲಿ ಕೊಂಡಾಡಲೇಬೇಕಾದ ಭಾರತದ ದೊರೆಯಾಗಿ ಕಾಣಿಸಿದ್ದರು. ಏಕೆಂದರೆ, ಅವರು ಬ್ರಿಟನ್ ಪಾಲಿಗೆ ಮತ್ತೊಂದು ದಿಕ್ಕಿನ ಪ್ರಬಲ ಶತ್ರುವಾಗಿದ್ದರು.
ಹೈದರ್ ಅಲಿ ಹೆಸರಿನ ಅಮೆರಿಕದ ಯುದ್ಧನೌಕೆ
ಅಮೆರಿಕನ್ನರು ಹೈದರ್ ಅಲಿ ಅವರ ಹೋರಾಟವನ್ನು ಎಷ್ಟು ಗೌರವಿಸುತ್ತಿದ್ದರು ಎಂಬುದಕ್ಕೆ, ಅವರದ್ದೇ ಹೆಸರಿನಲ್ಲಿ ಅಮೆರಿಕದ ಕರಾವಳಿಯಲ್ಲಿ ಗಸ್ತು ತಿರುಗುತ್ತಿದ್ದ ಯುದ್ಧನೌಕೆಯೇ ಅತ್ಯಂತ ಸ್ಪಷ್ಟ ಉದಾಹರಣೆ. 1781ರಲ್ಲಿ, ಪೆನ್ಸಿಲ್ವೇನಿಯಾ ಸರ್ಕಾರವು ಹೈದರ್ ಅಲಿಯ ಹೆಸರನ್ನು ಇಂಗ್ಲಿಷೀಕರಿಸಿ 'ಹೈದರ್-ಅಲಿ' (Hyder Ally) ಎಂದು ಹೆಸರಿಡಲಾಗಿದ್ದ ಯುದ್ಧನೌಕೆಯೊಂದನ್ನು ನಿಯೋಜಿಸಿತು.
ಅಮೆರಿಕದ ಇತಿಹಾಸಕಾರ ಬ್ಲೇಕ್ ಸ್ಮಿತ್ ಅವರ ಪ್ರಕಾರ, ಈ ನೌಕೆಯು "ಅಮೆರಿಕದ ಗಣ್ಯರು ಮೈಸೂರಿನ ಹೋರಾಟದ ಪರವಾಗಿ ಹೊಂದಿದ್ದ ಒಡನಾಟ ಮತ್ತು ಸಹಾನುಭೂತಿಯನ್ನು" ಪ್ರತಿಬಿಂಬಿಸುತ್ತದೆ. ಅಮೆರಿಕದ ಕವಿ ಫಿಲಿಪ್ ಫ್ರೆನ್ಯೂ ಇದನ್ನು ತಮ್ಮ ಕವಿತೆಯ ಸಾಲುಗಳಲ್ಲಿ ಹೀಗೆ ಕೊಂಡಾಡಿದ್ದಾರೆ:
"ಪೂರ್ವದ ಒಬ್ಬ ದೊರೆಯ ಹೆಸರನ್ನು ಈ ನೌಕೆ ಹೊತ್ತಿದೆ, ಸ್ವಾತಂತ್ರ್ಯದ ಪವಿತ್ರ ಜ್ವಾಲೆಯಿಂದ ಪ್ರೇರಿತನಾದ ಆ ದೊರೆ, ಅತಿಕ್ರಮಣಕೋರ ಬ್ರಿಟಿಷರ ಸೊಕ್ಕನ್ನು ಅಡಗಿಸಿದ್ದಾನೆ.."
ಬಹಳ ಮುಖ್ಯವಾಗಿ, ನಂತರದ ವರ್ಷದಲ್ಲಿ ಇದೇ 'ಹೈದರ್-ಅಲಿ' ನೌಕೆಯು ಬ್ರಿಟನ್‌ನ ಬೃಹತ್ ಯುದ್ಧನೌಕೆ 'ಜನರಲ್ ಮಾಂಕ್' ಅನ್ನು ಸೋಲಿಸಿತು. ಇದು ಅಮೆರಿಕದ ಅಂದಿನ ನೌಕಾಪಡೆಯ ಅತ್ಯಂತ ಸ್ಮರಣೀಯ ವಿಜಯಗಳಲ್ಲಿ ಒಂದಾಗಿ ದಾಖಲಾಯಿತು.
ಅಮೆರಿಕದ ವಿದ್ವಾಂಸ ಸಾಂಬಶಿವಮ್ ಅವರ ಪ್ರಕಾರ, ಈ ಜಯವು ಇಡೀ ಫಿಲಡೆಲ್ಫಿಯಾದಲ್ಲಿ ಭಾರೀ ಸಂಭ್ರಮಾಚರಣೆಗೆ ಕಾರಣವಾಯಿತು. 'ಹೈದರ್-ಅಲಿ' ನೌಕೆ ಮತ್ತು ಅದರ 23 ವರ್ಷದ ಯುವ ಕಮಾಂಡರ್ ಕೊಮೊಡೋರ್ ಜೋಶುವಾ ಬಾರ್ನಿಯನ್ನು ಹೊಗಳುವ ಗೀತೆಗಳು ಎಲ್ಲೆಡೆ ಮೊಳಗಿದವು. ನಂತರದ ದಿನಗಳಲ್ಲಿ ಪೆನ್ಸಿಲ್ವೇನಿಯಾ ಸರ್ಕಾರವು ಬಾರ್ನಿಗೆ ಚಿನ್ನದ ಹಿಡಿಕೆಯುಳ್ಳ ಗೌರವ ಖಡ್ಗವನ್ನು ಉಡುಗೊರೆಯಾಗಿ ನೀಡಿತು. ಈ ಖಡ್ಗದ ಮೇಲೆ 'ಹೈದರ್-ಅಲಿ' ನೌಕೆ ಮತ್ತು ವಶಪಡಿಸಿಕೊಳ್ಳಲಾದ ಬ್ರಿಟಿಷ್ ನೌಕೆಯ ಚಿತ್ರಗಳನ್ನು ಕೆತ್ತಲಾಗಿತ್ತು.
ಬ್ರಿಟನ್‌ಗೆ ಅಮೆರಿಕದ ಮೇಲಷ್ಟೇ ಗಮನಹರಿಸಲು ಏಕೆ ಸಾಧ್ಯವಾಗಲಿಲ್ಲ?
ವಿಶ್ವದಾದ್ಯಂತ ಹರಡಿದ್ದ ಇತರ ಸಾಮ್ರಾಜ್ಯಶಾಹಿ ಸಂಘರ್ಷಗಳನ್ನು ಗಮನಿಸದೆ, ಅಮೆರಿಕದಲ್ಲಿ ಬ್ರಿಟನ್ ಎದುರಿಸಿದ ಹಿನ್ನಡೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಇತಿಹಾಸಕಾರರ ವಾದವಾಗಿದೆ.
'ಮ್ಯೂಸಿಯಂ ಆಫ್ ದಿ ಅಮೆರಿಕನ್ ರೆವಲ್ಯೂಷನ್' ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ, ಭಾರತದಲ್ಲಿ ನಡೆದ ಯುದ್ಧವು ಯುರೋಪಿನ ಹಗೆತನಗಳು ಹೇಗೆ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿದವು ಎಂಬುದಕ್ಕೆ ಸಾಕ್ಷಿಯಾಗಿದೆ. ಅಟ್ಲಾಂಟಿಕ್ ಸಾಗರದಾಚೆಗೂ ವಿಸ್ತರಿಸಿದ್ದ ಈ ಸಂಘರ್ಷಗಳಲ್ಲಿ ಭಾರತದ ಪ್ರಾದೇಶಿಕ ಶಕ್ತಿಗಳೂ ತೊಡಗಿಸಿಕೊಳ್ಳುವಂತಾಯಿತು.
2021ರ ವಿಶ್ಲೇಷಣೆಯೊಂದರಲ್ಲಿ ಕರ್ನಾಟಕ ಮೂಲದ ಸಂಶೋಧಕ ಅಮೀನ್ ಅಹಮದ್ ಅವರು, ಮೈಸೂರಿನ ವಿರುದ್ಧದ ಕಠಿಣ ಹೋರಾಟವು ಬ್ರಿಟನ್ ತನ್ನ ಆದ್ಯತೆಗಳನ್ನು ಮರುಪರಿಶೀಲಿಸುವಂತೆ ಮಾಡಿತು ಎಂದು ವಾದಿಸಿದ್ದಾರೆ. ಬ್ರಿಟನ್ ನ ರಾಯಲ್ ನೌಕಾಪಡೆಯ ಸುಮಾರು ಐದನೇ ಒಂದು ಭಾಗದಷ್ಟು ಪ್ರಮುಖ ಯುದ್ಧನೌಕೆಗಳು ಭಾರತದಲ್ಲೇ ನಿಯೋಜನೆಗೊಂಡಿದ್ದವು. ಅಲ್ಲಿ ಫ್ರೆಂಚ್ ಅಡ್ಮಿರಲ್ ಸುಫ್ರೆನ್ ಅವರ ನೌಕಾಪಡೆಯು ಬ್ರಿಟಿಷ್ ಪ್ರಾಬಲ್ಯಕ್ಕೆ ತೀವ್ರ ಸವಾಲೊಡ್ಡಿತ್ತು. ಇದು ಉತ್ತರ ಅಮೆರಿಕ ಸೇರಿದಂತೆ ಇತರೆಡೆಗಳಲ್ಲಿ ತನ್ನ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಬ್ರಿಟನ್‌ನ ಸಾಮರ್ಥ್ಯವನ್ನು ಕುಂದಿಸಿತು.
ಇಲ್ಲಿ ಮೈಸೂರು ಒಂದೇ ಅಮೆರಿಕದ ಸ್ವಾತಂತ್ರ್ಯವನ್ನು ನಿರ್ಧರಿಸಿತು ಎಂಬುದು ವಾದವಲ್ಲ. ಆದರೆ, ಅದು ಬ್ರಿಟಿಷ್ ಸಾಮ್ರಾಜ್ಯದ ಯುದ್ಧದ ಪ್ರಯತ್ನಗಳನ್ನು ಹೈರಾಣಾಗಿಸಿತು ಹಾಗೂ ಅದನ್ನು ಭಾರೀ ವೆಚ್ಚದಾಯಕ ಮತ್ತು ಗೊಂದಲಮಯವಾಗಿಸಿತು.
ಬೋಸ್ಟನ್ ಮತ್ತು ಬಂಗಾಳವನ್ನು ಬೆಸೆದ ಈಸ್ಟ್ ಇಂಡಿಯಾ ಕಂಪೆನಿ
ಅಮೆರಿಕದ ಸ್ವಾತಂತ್ರ್ಯ ಮತ್ತು ಭಾರತದ ನಡುವಿನ ಈ ನಂಟು ಅಮೆರಿಕದಲ್ಲಿ ಯುದ್ಧದ ಮೊದಲ ಗುಂಡು ಹಾರುವುದಕ್ಕೂ ಮುನ್ನವೇ ಆರಂಭವಾಗಿತ್ತು.
ಡಿಸೆಂಬರ್ 1773ರ ಪ್ರಸಿದ್ಧ 'ಬೋಸ್ಟನ್ ಟೀ ಪಾರ್ಟಿ' ಘಟನೆಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಮಾರಾಟ ಮಾಡುತ್ತಿದ್ದ ಚಹಾದ ಸುತ್ತಲೇ ನಡೆದಿತ್ತು. ಇದೇ ಕಂಪನಿಯು ಭಾರತದಲ್ಲೂ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗೆ ಕಾರಣವಾಗಿತ್ತು.
2023ರ 'ದಿ ಬೋಸ್ಟನ್ ಗ್ಲೋಬ್' ಪತ್ರಿಕೆಯಲ್ಲಿ ಬರೆದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತಿಹಾಸಕಾರ್ತಿ ಸಾರಾ ಪಿಯರ್ಸಾಲ್, ಅಮೆರಿಕನ್ ಕ್ರಾಂತಿಯ ಕಥೆಯು "ಇತರ ಸ್ಥಳಗಳ ಜೊತೆಗೆ ಬಂಗಾಳದಲ್ಲೂ ತನ್ನ ಬೇರುಗಳನ್ನು ಹೊಂದಿತ್ತು" ಎಂದು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ದಬ್ಬಾಳಿಕೆಯ ವರದಿಗಳನ್ನು ಕೇಳಿದ್ದ ಅಮೆರಿಕದ ಅನೇಕ ವಸಾಹತುಗಾರರು, ಆ ಕಂಪನಿಯನ್ನು ಸಾಮ್ರಾಜ್ಯಶಾಹಿ ಅತಿಯುದ್ಧದ ಮತ್ತು ಶೋಷಣೆಯ ಸಂಕೇತವಾಗಿ ನೋಡುತ್ತಿದ್ದರು ಎಂದು ಅವರು ಬರೆದಿದ್ದಾರೆ.
"ಅಮೆರಿಕದ ಕ್ರಾಂತಿಯು ನಮ್ಮ ಗಡಿಗಳನ್ನು ಮೀರಿದ ಜನರನ್ನು ಹತ್ತು ಹಲವು ರೀತಿಯಲ್ಲಿ ಒಳಗೊಂಡಿತ್ತು. ಅದು ಆರಂಭದಿಂದಲೇ ಅಂತರರಾಷ್ಟ್ರೀಯ ಸ್ವರೂಪದ್ದಾಗಿತ್ತು" ಎಂದು ಪಿಯರ್ಸಾಲ್ ಅಭಿಪ್ರಾಯಪಟ್ಟಿದ್ದಾರೆ.
ಹೈದರ್ ಅಲಿ ನಂತರ ಅಮೆರಿಕನ್ನರ ಗಮನ ಸೆಳೆದ ಟಿಪ್ಪು ಸುಲ್ತಾನ್
ಅಮೆರಿಕದ ಸ್ವಾತಂತ್ರ್ಯಕ್ಕೆ ಅಧಿಕೃತ ಮನ್ನಣೆ ನೀಡಿದ ಪ್ಯಾರಿಸ್ ಒಪ್ಪಂದಕ್ಕೆ ಕೇವಲ ಒಂದು ವರ್ಷ ಮುಂಚಿತವಾಗಿ, ಅಂದರೆ 1782ರಲ್ಲಿ ಹೈದರ್ ಅಲಿ ನಿಧನರಾದರು. ಅವರ ಪುತ್ರ ಟಿಪ್ಪು ಸುಲ್ತಾನ್ ಮೈಸೂರಿನ ಸಿಂಹಾಸನದ ಜೊತೆಗೆ ಈ ಯುದ್ಧವನ್ನೂ ಉತ್ತರಾಧಿಕಾರವಾಗಿ ಪಡೆದರು. ಮೈಸೂರಿನ ಮೇಲಿದ್ದ ಅಮೆರಿಕನ್ನರ ಆಕರ್ಷಣೆ ಹೈದರ್ ಅಲಿ ಅವರ ನಿಧನದೊಂದಿಗೆ ಕೊನೆಗೊಳ್ಳಲಿಲ್ಲ.
ಚಿಕಾಗೋ ಮೂಲದ ಇತಿಹಾಸಕಾರ ಬ್ಲೇಕ್ ಸ್ಮಿತ್ ಅವರ ಪ್ರಕಾರ, ಹೊಸದಾಗಿ ರೂಪುಗೊಂಡಿದ್ದ ಅಮೆರಿಕದಾದ್ಯಂತ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಬ್ರಿಟಿಷರ ವಿರುದ್ಧ ಟಿಪ್ಪು ನಡೆಸುತ್ತಿದ್ದ ಹೋರಾಟದ ವರದಿಗಳನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದವು. ಶಾಲಾ ಪಠ್ಯಪುಸ್ತಕಗಳಲ್ಲೂ ಮೈಸೂರಿನ ಕುರಿತಾದ ಅಧ್ಯಾಯಗಳನ್ನು ಸೇರಿಸಲಾಗಿತ್ತು. ರೇಸ್ ಕುದುರೆಗಳಿಗೆ ಹೈದರ್ ಅಲಿಯ ಹೆಸರನ್ನು ಇಡಲಾಗುತ್ತಿತ್ತು. ಅಂದಿನ ನ್ಯಾಯಾಲಯದ ದಾಖಲೆಗಳಲ್ಲೂ "ಹೈದರ್ ಅಲಿ" ಹೆಸರಿನ ಕುದುರೆಗಳ ಉಲ್ಲೇಖವಿದ್ದು, ಮೈಸೂರಿನ ದೊರೆಗಳ ಹೆಸರುಗಳು ಅಂದಿನ ಅಮೆರಿಕದ ಉನ್ನತ ಸಮಾಜದಲ್ಲಿ ಎಷ್ಟು ಪರಿಚಿತವಾಗಿದ್ದವು ಎಂಬುದನ್ನು ಇದು ತೋರಿಸುತ್ತದೆ.
1799ರಲ್ಲಿ ಶ್ರೀರಂಗಪಟ್ಟಣದ ರಕ್ಷಣಾ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ವೀರಮರಣ ಹೊಂದಿದಾಗ, ಕೆಲವು ಅಮೆರಿಕನ್ನರು ಅವರ ಸಾವಿಗೆ ಕಣ್ಣೀರು ಹಾಕಿದ್ದರು.
ಬ್ಯಾಪ್ಟಿಸ್ಟ್ ಧರ್ಮಗುರು ಜಾನ್ ರಸೆಲ್ ಅವರು 1800ರ ಜುಲೈ 4ರಂದು (ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ) ನೀಡಿದ ಪ್ರವಚನವೊಂದನ್ನು ಇತಿಹಾಸಕಾರ ಸ್ಮಿತ್ ಉಲ್ಲೇಖಿಸಿದ್ದಾರೆ. ರಸೆಲ್ ಅವರು ಟಿಪ್ಪು ಸುಲ್ತಾನರನ್ನು ಬಣ್ಣಿಸುತ್ತಾ, "ತಮ್ಮ ಅಧಿಕಾರವನ್ನು ಅದಕ್ಕೆ ತಕ್ಕುದಾದ ವೀರಾವೇಶದಿಂದಲೇ ರಕ್ಷಿಸಿಕೊಂಡ ದೊರೆ ಅವರು. ಅವರ ಸಾವು ಒಬ್ಬ ರಾಜನಿಗೆ ತಕ್ಕ ಹಾಗೆಯೇ ಇತ್ತು" ಎಂದು ಕೊಂಡಾಡಿದ್ದರು.
ಆದರೆ, ಈ ಗೌರವ ಮತ್ತು ಅಭಿಮಾನ ಹೆಚ್ಚು ಕಾಲ ಉಳಿಯಲಿಲ್ಲ. ಬದಲಾದ ಜಾಗತಿಕ ರಾಜಕೀಯ ಮತ್ತು ರಾಜತಾಂತ್ರಿಕ ಹಿತಾಸಕ್ತಿಗಳಿಗೆ ಇದು ಬಲಿಯಾಯಿತು. ಸ್ವಾತಂತ್ರ್ಯದ ನಂತರ, ಅಮೆರಿಕದ ವ್ಯಾಪಾರಿಗಳು ಭಾರತದ ಮಾರುಕಟ್ಟೆಗಳನ್ನು ಪ್ರವೇಶಿಸಲು ಬಯಸಿದರು. ಆದರೆ, ಆ ಮಾರುಕಟ್ಟೆಗಳು ತಾವು ಮತ್ತು ಮೈಸೂರು ಜಂಟಿಯಾಗಿ ಎದುರಿಸಿದ್ದ ಅದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ನಿಯಂತ್ರಣದಲ್ಲಿದ್ದವು. ವಾಷಿಂಗ್ಟನ್ ಆಡಳಿತವು ಸಾಮ್ರಾಜ್ಯಶಾಹಿ ಬ್ರಿಟನ್ ವಿರುದ್ಧ ಹೋರಾಡುತ್ತಿದ್ದ ಸ್ವತಂತ್ರ ಭಾರತೀಯ ಸಂಸ್ಥಾನಗಳೊಂದಿಗೆ ಸಂಬಂಧವನ್ನು ಬೆಳೆಸುವ ಬದಲು, ಕಂಪೆನಿಯ ನಿಯಂತ್ರಣದಲ್ಲಿದ್ದ ಪ್ರದೇಶಗಳಲ್ಲೇ ತನ್ನ ರಾಯಭಾರ ಕಚೇರಿಗಳನ್ನು ತೆರೆಯಿತು. ಅತ್ತ ಅಮೆರಿಕವು ತನ್ನದೇ ಆದ ಗಣರಾಜ್ಯವನ್ನು ವಿಸ್ತರಿಸಿಕೊಳ್ಳುವತ್ತ ಗಮನ ಹರಿಸಿತು.
ಬ್ಲೇಕ್ ಸ್ಮಿತ್ ಬರೆಯುವಂತೆ, ಕೇವಲ ಒಂದೇ ಪೀಳಿಗೆಯಲ್ಲಿ ಅಮೆರಿಕನ್ನರು ಭಾರತೀಯ ಉಪಖಂಡದೊಂದಿಗೆ ಹೊಂದಿದ್ದ ಆ ಒಗ್ಗಟ್ಟಿನ ಭಾವನೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟರು. ಇದರ ಬೆನ್ನಲ್ಲೇ ಮೈಸೂರು ಮತ್ತು ಅದರ ದೊರೆಗಳ ಹೆಸರುಗಳು ಅಮೆರಿಕನ್ ಕ್ರಾಂತಿಯ ಇತಿಹಾಸದ ಪುಟಗಳಿಂದ ಕ್ರಮೇಣ ಮರೆಯಾದವು.
ಒಟ್ಟಿನಲ್ಲಿ, ವಾಷಿಂಗ್ಟನ್ ಒಬ್ಬರೇ ಈ ಯುದ್ಧವನ್ನು ಗೆಲ್ಲಲಿಲ್ಲ. ಹಾಗೆಯೇ ಹೈದರ್ ಅಲಿ ಅಥವಾ ಟಿಪ್ಪು ಸುಲ್ತಾನ್ ಅಮೆರಿಕದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ಆದರೆ, ಅವರು ಬ್ರಿಟನ್ ಅನ್ನು ಎಂತಹ ಜಾಗತಿಕ ಯುದ್ಧಕ್ಕೆ ತಳ್ಳಿದರೆಂದರೆ, ಅದರ ಫಲಿತಾಂಶವೇ ಇಂದು ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕದ ಭವಿಷ್ಯದ ಹಾದಿಯನ್ನು ರೂಪಿಸಿತು.
ಸೌಜನ್ಯ: indiatoday.in