LPG ಸಿಲಿಂಡರ್ ಗೆ 5 ಸಾವಿರ ರೂ., ಲೀಟರ್ ಪೆಟ್ರೋಲ್ ಗೆ 250 ರೂ.; ಮಣಿಪುರದ ಕಂಗಪೋಕ್ಪಿಯಲ್ಲಿ ಅಗತ್ಯ ವಸ್ತುಗಳ ಬೆಲೆ ದಿಢೀರ್ ದುಬಾರಿಯಾಗಿದ್ದೇಕೆ?
ಯಾಕೂತ್ ಅಲಿ - thewire. in ವರದಿ
Photo Credit : PTI
ಒಂದು ಲೀಟರ್ ಪೆಟ್ರೋಲ್ ಗೆ 250 ರೂ., ಒಂದು ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಗೆ ಬರೋಬ್ಬರಿ 5,000 ರೂ., 50 ಕೆಜಿಯ ಒಂದು ಚೀಲ ಅಕ್ಕಿಗೆ ಸುಮಾರು 3,000 ರೂ.! ಇವು ಮಣಿಪುರದ ಕಂಗಪೋಕ್ಪಿ ಜಿಲ್ಲೆಯ ನಿವಾಸಿಗಳು ಸದ್ಯ ಅಗತ್ಯ ವಸ್ತುಗಳಿಗಾಗಿ ತೆರುತ್ತಿರುವ ಬೆಲೆಗಳು. ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಆರ್ಥಿಕ ದಿಗ್ಬಂಧನವು ಕುಕಿ-ಝೋ ಸಮುದಾಯದವರು ಹೆಚ್ಚಾಗಿರುವ ಈ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ "ಮುಕ್ತ ಸಂಚಾರಕ್ಕೆ" ಕೇಂದ್ರ ಸರ್ಕಾರ ಅವಕಾಶ ನೀಡಿ ಹದಿನಾರು ತಿಂಗಳು ಕಳೆದಿದ್ದರೂ, ಕಂಗಪೋಕ್ಪಿ ನಿವಾಸಿಗಳ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಕಟ್ಟುನಿಟ್ಟಿನ ಭದ್ರತೆಯ ನಡುವೆ ಜನರಿಗೆ ಓಡಾಡಲು ಅನುಮತಿ ಸಿಗುತ್ತಿದ್ದರೂ, ಆಹಾರ, ಇಂಧನ ಮತ್ತು ಅಡುಗೆ ಅನಿಲದಂತಹ ಅಗತ್ಯ ವಸ್ತುಗಳು ಮಾತ್ರ ಮುಕ್ತವಾಗಿ ಸಾಗಣೆಯಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ದಾಸ್ತಾನು ಖಾಲಿಯಾಗುತ್ತಿರುವುದರಿಂದ, ಹಸಿವು ಮುಂದಿನ ಮಾನವೀಯ ಬಿಕ್ಕಟ್ಟಾಗಿ ಬದಲಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಎರಡೂ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಕಾರಣ, ನಾಗಾ ಸಂಘಟನೆಗಳು ಜಾರಿಗೊಳಿಸಿರುವ ತಿಂಗಳ ಅವಧಿಯ ದಿಗ್ಬಂಧನದಿಂದಾಗಿ ಕುಕಿ ಸಮುದಾಯ ಹೆಚ್ಚಿರುವ ಪ್ರದೇಶಗಳಿಗೆ ಸರಕು ಸಾಗಣೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಂಗಪೋಕ್ಪಿ ಜಿಲ್ಲೆಯು ಪ್ರಮುಖವಾಗಿ ಎರಡು ಸರಬರಾಜು ಮಾರ್ಗಗಳನ್ನು ಅವಲಂಬಿಸಿದೆ. ಒಂದು ಮಾರ್ಗವು ಕಂಗ್ಲಾಟಾಂಗ್ಬಿ ಮೂಲಕ ರಾಜಧಾನಿ ಇಂಫಾಲಕ್ಕೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ಮಾರ್ಗವು ಸೇನಾಪತಿ ಜಿಲ್ಲೆಯ ಮೂಲಕ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಎರಡೂ ಮಾರ್ಗಗಳು ಬಂದ್ ಆಗಿರುವುದರಿಂದ ಜಿಲ್ಲೆಯಲ್ಲಿ ಈ ಅಭಾವ ಸೃಷ್ಟಿಯಾಗಿದೆ.
ಎರಡೂ ಕಡೆಯಿಂದಲೂ ಸರಬರಾಜು ಮಾರ್ಗಗಳು ಬಂದ್ ಆಗಿರುವುದರಿಂದ ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊತ್ತ ಲಾರಿಗಳು ಜಿಲ್ಲೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
ಅಗತ್ಯ ಸೇವೆಗಳು ಸಿಗದೆ ಕಂಗಪೋಕ್ಪಿ ಜನರ ಪರದಾಟ
ಅಂದಿನಿಂದ, ಕಂಗಪೋಕ್ಪಿಯಲ್ಲಿ ವಾಸಿಸುವ ಜನರ ಪಾಲಿಗೆ ಈ ರಾಜಕೀಯ ಸಂಘರ್ಷವು ಬದುಕಿಗಾಗಿ ದಿನನಿತ್ಯ ಹೋರಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ. ಕಂಗಪೋಕ್ಪಿ ಜಿಲ್ಲೆಯ ಸೈಕುಲ್ ಪಟ್ಟಣದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುವುದು ಬಹುತೇಕ ಅಸಾಧ್ಯವಾಗಿರುವುದರಿಂದ, ಅನೇಕ ಕುಟುಂಬಗಳು ಮತ್ತೆ ಕಟ್ಟಿಗೆ ಒಲೆಗಳ ಮೊರೆ ಹೋಗಿವೆ. ಉರುವಲು ಹುಡುಕುವುದು ಈಗ ಅವರ ದೈನಂದಿನ ಜೀವನದ ಸಂಕಷ್ಟಗಳ ಒಂದು ಭಾಗವಾಗಿಬಿಟ್ಟಿದೆ.
ಸೈಕುಲ್ ನಿವಾಸಿಗಳಿಗೆ ಮತ್ತು ಪರಿಹಾರ ಶಿಬಿರಗಳಲ್ಲಿ ಇರುವ ಜನರಿಗೆ ಸಹಾಯ ಮಾಡುವ ಸ್ಥಳೀಯ ಸ್ವಯಂಸೇವಕ ಗೌಪು ಅವರಿಗೆ ಈ ಬಿಕ್ಕಟ್ಟು ಎಂದಿಗೂ ಕೊನೆಗೊಂಡಿಲ್ಲ; ಬದಲಿಗೆ ಇತ್ತೀಚಿನ ದಿನಗಳಲ್ಲಿ ಹೊಸ ರೂಪ ಪಡೆದುಕೊಂಡಿದೆ.
"ಕೆಲವರು ಅಡುಗೆ ಮಾಡಲು ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸುತ್ತಾರೆ. ಆದರೆ ಸೈಕುಲ್ ವಿದ್ಯುತ್ ಕೇಂದ್ರವು ಆ ಹೊರೆಯನ್ನು ತಡೆಯಲು ಶಕ್ತವಾಗಿಲ್ಲ. ಇನ್ನು ಕರೆಂಟ್ ಹೋದಾಗಲೆಲ್ಲಾ ನಮಗೆ ಇಂಟರ್ನೆಟ್ ಸಂಪರ್ಕವೂ ಕಡಿತಗೊಳ್ಳುತ್ತದೆ. ಹೀಗೆ ಒಂದರ ಮೇಲೊಂದು ಸಮಸ್ಯೆಗಳು ಎದುರಾಗುತ್ತಿವೆ" ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
'the wire' ವರದಿ ಪ್ರಕಾರ, ಪದೇ ಪದೇ ಆಗುವ ವಿದ್ಯುತ್ ಕಡಿತ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕೈಗೆಟುಕದಂತಿರುವುದು ಅನೇಕ ಕುಟುಂಬಗಳು ಕಟ್ಟಿಗೆಯನ್ನು ಬಳಸುವಂತೆ ಮಾಡುತ್ತಿದೆ.
"ಕಂಗಪೋಕ್ಪಿ ಜಿಲ್ಲೆಯ ಮೇಲಿನ ಆರ್ಥಿಕ ದಿಗ್ಬಂಧನದ ಕಾರಣದಿಂದಾಗಿ ಒಂದು ಸಿಲಿಂಡರ್ ಪಡೆಯಲು 5,000 ರೂ.ನಿಂದ 6,000 ರೂ.ವರೆಗೆ ಖರ್ಚಾಗಬಹುದು" ಎನ್ನುತ್ತಾರೆ ಗೌಪು.
ಅವರ ಪ್ರಕಾರ, ಮೇ 13ರಿಂದಲೇ ಅಡುಗೆ ಅನಿಲ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
"ಮೇ 13ರಿಂದ ಸೈಕುಲ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸರಬರಾಜು ಆಗಿಲ್ಲ. ಅಗತ್ಯ ವಸ್ತುಗಳ ದಾಸ್ತಾನು ಕೂಡ ಖಾಲಿಯಾಗಿದೆ. ಗ್ಯಾಸ್ ಸಿಲಿಂಡರ್‌ಗಳಿಲ್ಲ, ಪಡಿತರ ಸರಬರಾಜೂ ಇಲ್ಲ, ಪೆಟ್ರೋಲ್ ಅಥವಾ ಡೀಸೆಲ್ ಕೂಡ ಸಿಗುತ್ತಿಲ್ಲ. ನಮ್ಮ ಮುಸ್ಲಿಂ ಮತ್ತು ನೇಪಾಳಿ ಸ್ನೇಹಿತರ ಸಹಾಯದಿಂದ ನಾವು ಕೆಲವು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ, ಆದರೆ ಅವುಗಳ ಬೆಲೆ ಅತಿ ಹೆಚ್ಚಾಗಿದೆ. ಉದಾಹರಣೆಗೆ, ಪೆಟ್ರೋಲ್‌ಗೆ ಲೀಟರ್‌ಗೆ 250 ರೂ., ಗ್ಯಾಸ್ ಸಿಲಿಂಡರ್‌ಗೆ 5,000 ರೂ. ಮತ್ತು 50 ಕೆಜಿ ಅಕ್ಕಿ ಚೀಲಕ್ಕೆ 3,000 ರೂ. ಆಗಿದೆ."
ಈ ಬಿಕ್ಕಟ್ಟು ಇಡೀ ಕಂಗಪೋಕ್ಪಿ ಜಿಲ್ಲೆಯಾದ್ಯಂತ ಹರಡಿದ್ದು, ಎಲ್ಲಾ ವರ್ಗದ ಜನರ ಮೇಲೂ ಪ್ರಭಾವ ಬೀರಿದೆ. ಕಂಗಪೋಕ್ಪಿ ನಗರ ಪ್ರದೇಶದಲ್ಲಿ ಡಿಪಾರ್ಟ್‌ಮೆಂಟಲ್ ಸ್ಟೋರ್ ನಡೆಸುತ್ತಿರುವ ಮಣಿಪುರೇತರ ವ್ಯಕ್ತಿ ರಾಹುಲ್ (ಹೆಸರು ಬದಲಾಯಿಸಲಾಗಿದೆ), ಮೇ 2023ರಲ್ಲಿ ಮೈಟಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ತಾವು ಇಂತಹ ಪರಿಸ್ಥಿತಿಯನ್ನು ಎಂದೂ ನೋಡಿರಲಿಲ್ಲ ಎನ್ನುತ್ತಾರೆ.
"ಹಿಂಸಾಚಾರವು 2023ರಿಂದಲೂ ನಡೆಯುತ್ತಿದೆ. ಆದರೆ ಆಹಾರದ ಸರಬರಾಜು ಹೀಗೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದನ್ನು ನಾನು ಇದುವರೆಗೆ ನೋಡಿರಲಿಲ್ಲ. ಸರ್ಕಾರ ಏನು ಮಾಡುತ್ತಿದೆ?" ಎಂದು ಅವರು ಪ್ರಶ್ನಿಸುತ್ತಾರೆ.
ಸೀಮಿತ ಸಂಚಾರ, ಸಾಲು ಸಾಲು 'ಚೆಕ್‌ಪೋಸ್ಟ್‌ಗಳು'
ತಾವು ಬಫರ್ ಝೋನ್ (ಸಂಘರ್ಷ ಪೀಡಿತ ಪ್ರದೇಶಗಳ ನಡುವಿನ ಗಡಿ) ದಾಟಲು ಸಾಧ್ಯವಿದ್ದರೂ, ಆ ಸ್ವಾತಂತ್ರ್ಯಕ್ಕೆ ಭಾರೀ ಮಿತಿಗಳಿವೆ ಎನ್ನುತ್ತಾರೆ ರಾಹುಲ್.
"ನಾನು ಇಂಫಾಲಕ್ಕೆ ಅಥವಾ ರಾಜ್ಯದ ಬೇರೆ ಯಾವುದೇ ಭಾಗಕ್ಕೆ ಹೋಗಿ ನನ್ನ ಕುಟುಂಬಕ್ಕೆ ಬೇಕಾದ ಆಹಾರವನ್ನು ಖರೀದಿಸಬಹುದು. ಆದರೆ ತಿಂಗಳಿಗೆ ಒಮ್ಮೆ ಮಾತ್ರ ಆಹಾರದೊಂದಿಗೆ ಬಫರ್ ಝೋನ್ ದಾಟಲು ನನಗೆ ಅನುಮತಿ ಇದೆ. ನಾನು ಎರಡನೇ ಬಾರಿ ಹೋದರೆ, ಬಫರ್ ಝೋನ್‌ನಲ್ಲಿರುವ ನಾಗಾ ಸಮುದಾಯದವರು ನನ್ನನ್ನು ಪ್ರಶ್ನಿಸುವುದು ಮಾತ್ರವಲ್ಲದೆ, ನನ್ನ ಬಳಿ ಇರುವ ಎಲ್ಲಾ ಆಹಾರ ಸಾಮಗ್ರಿಗಳನ್ನು ತಾವೇ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ, ಅಲ್ಲಿ ಒದೆ ಬೀಳಬಹುದು ಎಂಬ ಭಯವೂ ನನಗಿದೆ."
ಮಾರ್ಚ್ 2025ರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಾದ್ಯಂತ "ಮುಕ್ತ ಸಂಚಾರ" ಪುನರಾರಂಭಿಸುವುದಾಗಿ ಘೋಷಿಸಿದ್ದರು. ಇದು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಡಿಯಲ್ಲಿ ಇರಬೇಕಾಗಿದ್ದರೂ, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಇದೊಂದು ಹೆಜ್ಜೆ ಎಂದು ಅವರು ಬಣ್ಣಿಸಿದ್ದರು. ಆದರೆ ಕಂಗಪೋಕ್ಪಿ ನಿವಾಸಿಗಳ ಪ್ರಕಾರ, ಮುಕ್ತ ಸಂಚಾರದ ಈ ಘೋಷಣೆಯಿಂದ ಅಗತ್ಯ ವಸ್ತುಗಳ ಮುಕ್ತ ಸಾಗಣೆಗೆ ಯಾವುದೇ ಅನುಕೂಲವಾಗಿಲ್ಲ.
"ನಾನು ಇಬ್ಬರು ಉದ್ಯೋಗಿಗಳಿಗೆ ಸಂಬಳ ನೀಡಬೇಕು, ಕುಟುಂಬ ಮತ್ತು ಸಹೋದರಿಯರನ್ನು ನೋಡಿಕೊಳ್ಳಬೇಕು. ಸದ್ಯದ ಮಟ್ಟಿಗೆ ಹೇಗೋ ನಿಭಾಯಿಸುತ್ತಿದ್ದೇನೆ. ಆದರೆ ಇದು ಇನ್ನೆಷ್ಟು ದಿನ ಮುಂದುವರಿಯಲು ಸಾಧ್ಯ?" ಎಂದು ರಾಹುಲ್ ಪ್ರಶ್ನಿಸುತ್ತಾರೆ.
ರಾಹುಲ್ ಅವರಂತೆ ಕಂಗಪೋಕ್ಪಿಯಲ್ಲಿ ಕೆಫೆ ನಡೆಸುತ್ತಿರುವ ಸುಮಿ (ಹೆಸರು ಬದಲಾಯಿಸಲಾಗಿದೆ) ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅವರು ತಮ್ಮ ವ್ಯಾಪಾರವನ್ನು ಮುಚ್ಚಬೇಕಾಗಿ ಬಂದಿದೆ.
"ಪರಿಸ್ಥಿತಿ ಹೇಗಿದೆ ಎಂದರೆ: ನಮ್ಮ ಬಳಿ ಚಿಕನ್ ಇದೆ, ಆದರೆ ಚಿಕನ್ ಫ್ರೈಡ್ ರೈಸ್ ಮಾಡಲು ಅಕ್ಕಿ ಇಲ್ಲ. ನಾವು ಗ್ರಾಹಕರಿಗೆ ಅರ್ಧಂಬರ್ಧ ಬೆಂದ ಆಹಾರವನ್ನು ಬಡಿಸಲು ಸಾಧ್ಯವಿಲ್ಲವಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಎಲ್ಲವೂ ಇಷ್ಟು ದುಬಾರಿಯಾಗುತ್ತಿರುವುದೇಕೆ?
ಒಂದು ಎಲ್‌ಪಿಜಿ ಸಿಲಿಂಡರ್‌ಗೆ 5,000 ರೂ.ನಿಂದ 6,000 ರೂ. ಮತ್ತು ಪೆಟ್ರೋಲ್ ಲೀಟರ್‌ಗೆ ಸುಮಾರು 250 ರೂ.ಗೆ ಮಾರಾಟವಾಗುತ್ತಿರುವುದರ ಹಿಂದಿನ ಕಾರಣವನ್ನು ತಿಳಿಯಲು 'the wire' ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿತು.
ಮಣಿಪುರದ ಗುಡ್ಡಗಾಡು ಮತ್ತು ಕಣಿವೆ ಪ್ರದೇಶಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ಸಮುದಾಯಗಳ ಜನರಿಗೆ ಮಾತ್ರ ಮುಕ್ತವಾಗಿ ಸಂಚರಿಸಲು ಅವಕಾಶವಿರುವುದೇ ಇದಕ್ಕೆ ಕಾರಣ ಎಂದು ಅನೇಕರು ತಿಳಿಸಿದ್ದಾರೆ. ಇವರಲ್ಲಿ ಮೈಟಿ ಪಂಗಲ್ (ಮುಸ್ಲಿಂ), ನೇಪಾಳಿ ಮತ್ತು ಉತ್ತರ ಭಾರತದಿಂದ ಬಂದು ಅಲ್ಲಿ ನೆಲೆಸಿರುವ ಕೆಲವು ಮಣಿಪುರೇತರ ನಿವಾಸಿಗಳು ಸೇರಿದ್ದಾರೆ.
ಈ ಕೆಲವೇ ಸಮುದಾಯಗಳ ಜನರು ಈಗ ಅನಿವಾರ್ಯವಾಗಿ ಮಧ್ಯವರ್ತಿಗಳಾಗಿದ್ದಾರೆ. ಇವರು ಇಂಫಾಲದಿಂದ ಸರಕುಗಳನ್ನು ಖರೀದಿಸಿ, ಜನಾಂಗೀಯ ಸಂಘರ್ಷದ ನಂತರ ಸೃಷ್ಟಿಯಾಗಿರುವ ಅಥವಾ ಮತ್ತಷ್ಟು ಕಟ್ಟುನಿಟ್ಟಾಗಿರುವ ಚೆಕ್‌ಪೋಸ್ಟ್‌ಗಳು ಹಾಗೂ ದಿಗ್ಬಂಧನಗಳ ಮೂಲಕ ಸಾಗಿಸುತ್ತಾರೆ. ಕಂಗಪೋಕ್ಪಿ ತಲುಪುವ ಮೊದಲು ದಾರಿಯುದ್ದಕ್ಕೂ ಹಲವು ಕಡೆಗಳಲ್ಲಿ ಇವರು 'ಅನಧಿಕೃತ ಶುಲ್ಕಗಳನ್ನು' ಪಾವತಿಸಬೇಕಾಗುತ್ತದೆ. ಸಾಗಣೆಯ ಪ್ರತಿ ಹಂತದಲ್ಲೂ ಮತ್ತು ಪ್ರತಿ 'ಚೆಕ್‌ಪೋಸ್ಟ್'ನಲ್ಲೂ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಅಂತಿಮವಾಗಿ ಗುಡ್ಡಗಾಡು ಜಿಲ್ಲೆಯ ಗ್ರಾಹಕರು ಈ ದುಬಾರಿ ಬೆಲೆಯನ್ನು ತೆರಬೇಕಾಗುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಅನೇಕ ಕುಟುಂಬಗಳಿಗೆ ಅವು ಕೈಗೆಟುಕದಂತಾಗಿವೆ. ದಿನನಿತ್ಯದ ಗೃಹೋಪಯೋಗಿ ವಸ್ತುಗಳ ಖರೀದಿ ಈಗ ಐಷಾರಾಮಿಯಾಗಿ ಪರಿಣಮಿಸಿದೆ. ಆಹಾರ ಮತ್ತು ಇಂಧನ ಖರೀದಿಸಲು ತಮಗಿರುವ ಉಳಿತಾಯದ ಹಣವೆಲ್ಲಾ ಖಾಲಿಯಾಗುತ್ತಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆ ಶೀಘ್ರದಲ್ಲೇ ಪುನರಾರಂಭವಾಗದಿದ್ದರೆ ಇಡೀ ಉಳಿತಾಯವೇ ಖಾಲಿಯಾಗಬಹುದು ಎಂಬ ಆತಂಕ ಇತರರಲ್ಲಿದೆ.
ದಿಗ್ಬಂಧನ ಯಾವಾಗ ಕೊನೆಗೊಳ್ಳುತ್ತದೆ?
ಮೇ 17ರಂದು ಅಂತರ್-ಜಿಲ್ಲಾ ಆರ್ಥಿಕ ದಿಗ್ಬಂಧನವನ್ನು ಘೋಷಿಸಿದ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ), ಇದು ಹೀಗೆಯೇ ಮುಂದುವರಿಯುತ್ತದೆ ಎಂದು ಹೇಳಿದೆ.
'the wire' ಜೊತೆ ಮಾತನಾಡಿದ ಕೌನ್ಸಿಲ್‌ನ ನಾಯಕರೊಬ್ಬರು, ಕುಕಿ ಸಂಘಟನೆಗಳಿಂದ ಅಪಹರಣಕ್ಕೊಳಗಾಗಿ ಆನಂತರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಆರೋಪಿಸಲಾದ ಆರು ನಾಗಾ ನಾಗರಿಕರ ಮೃತದೇಹಗಳು ಸಿಕ್ಕಿವೆ ಎಂಬ ಕಾರಣಕ್ಕೆ ದಿಗ್ಬಂಧನವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಮೃತರ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ಈ ಆರ್ಥಿಕ ದಿಗ್ಬಂಧನ ಮುಂದುವರಿಯುತ್ತದೆ" ಎಂದು ಆ ನಾಯಕ ತಿಳಿಸಿದ್ದಾರೆ.
ಆಹಾರ, ಇಂಧನ ಮತ್ತು ಔಷಧಗಳ ತೀವ್ರ ಕೊರತೆಯಿಂದ ತತ್ತರಿಸುತ್ತಿರುವ ಕಂಗಪೋಕ್ಪಿ ನಿವಾಸಿಗಳ ಮೇಲಾಗುತ್ತಿರುವ ಮಾನವೀಯ ಪರಿಣಾಮಗಳ ಬಗ್ಗೆ ಕೇಳಿದಾಗ, ಕೌನ್ಸಿಲ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
"ಇಲ್ಲಿ ಕೇವಲ ಕುಕಿ ಸಮುದಾಯದವರು ಮಾತ್ರ ಕಷ್ಟಪಡುತ್ತಿಲ್ಲ. ಅಲ್ಲಿ ವಾಸಿಸುವ ಇತರ ಅನೇಕ ಸಮುದಾಯಗಳ ಜನರೂ ತೊಂದರೆ ಅನುಭವಿಸುತ್ತಿದ್ದಾರೆ" ಎಂದು ವಾದಿಸಿದ ಆ ನಾಯಕ, ಈ ದಿಗ್ಬಂಧನವು ಕುಕಿ ಜನಸಂಖ್ಯೆಯನ್ನು ಮೀರಿದ ಇತರ ಸಮುದಾಯಗಳ ಮೇಲೂ ಪ್ರಭಾವ ಬೀರಿದೆ ಎಂದಿದ್ದಾರೆ.
ಮತ್ತೊಂದೆಡೆ, ಆರು ನಾಗಾ ನಾಗರಿಕರ ಕೊಲೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಬಿಜೆಪಿಯ ಹಿರಿಯ ಮೂಲಗಳು 'the wire'ಗೆ ತಿಳಿಸಿವೆ. ಮೂಲಗಳ ಪ್ರಕಾರ, ತಾತ್ಕಾಲಿಕ ಕದನ ವಿರಾಮ ಒಪ್ಪಂದದಡಿ ಕಾರ್ಯನಿರ್ವಹಿಸುತ್ತಿರುವ ಕುಕಿ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಒಪ್ಪಂದದ ಪ್ರಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಯೋಜಿತ ಶಾಂತಿ ಸಂಧಾನದ ಭಾಗವಾಗಿ ಸಶಸ್ತ್ರ ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕಿರುತ್ತದೆ.
ಯಾವುದೇ ಮಾತುಕತೆಗಳು ಯಶಸ್ವಿಯಾಗದ ಮತ್ತು ದಿಗ್ಬಂಧನ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ, ಕಂಗಪೋಕ್ಪಿ ನಿವಾಸಿಗಳು ಈ ಜನಾಂಗೀಯ ಸಂಘರ್ಷ ಮತ್ತು ರಾಜಕೀಯ ಬಿಕ್ಕಟ್ಟಿಗೆ ಭಾರೀ ಬೆಲೆ ತೆರುತ್ತಿದ್ದಾರೆ.
ಸೌಜನ್ಯ: thewire.in