ಸಿಯಾ-ಕೇತನ್ ಪ್ರಕರಣ: ಸುಳ್ಳು ಪತ್ತೆ ಪರೀಕ್ಷೆಗೆ ನ್ಯಾಯಾಲಯದ ಒಪ್ಪಿಗೆ ಕೋರಿದ ಪೊಲೀಸ್; ಈ ‘ಲೈ-ಡಿಟೆಕ್ಟರ್’ ಪರೀಕ್ಷೆಗಳು ಹೇಗೆ ಕೆಲಸ ಮಾಡುತ್ತವೆ ?
ಕೇತನ್ ಅಗರ್ವಾಲ್ , ಸಿಯಾ ಗೋಯಲ್ | Photo Credit : PTI
ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅವರ ಭಾವೀ ವಧು ಸಿಯಾ ಗೋಯಲ್ ಗೆ ಪಾಲಿಗ್ರಾಫ್ ಪರೀಕ್ಷೆ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ಅನುಮತಿ ನೀಡುವಂತೆ ಪುಣೆ ಪೊಲೀಸರು ಈ ವಾರ ನ್ಯಾಯಾಲಯವನ್ನು ಕೋರಿದ್ದಾರೆ. ಇದರೊಂದಿಗೆ, ಈ ಪ್ರಕರಣದ ಮತ್ತೊಬ್ಬ ಸಹ-ಆರೋಪಿ ಚೇತನ್ ಚೌಧರಿಗೂ ಸಹ ಈ ಪರೀಕ್ಷೆಯನ್ನು ನಡೆಸಲು ಪೊಲೀಸರು ಅನುಮತಿ ಕೇಳಿದ್ದಾರೆ.
ಸುಳ್ಳನ್ನು ಪತ್ತೆಹಚ್ಚುವಲ್ಲಿ ಪಾಲಿಗ್ರಾಫ್ ಪರೀಕ್ಷೆಯು ಒಂದು ನಂಬಲರ್ಹ ಸಾಧನವಲ್ಲ ಎಂದೇ ವೈಜ್ಞಾನಿಕ ವಲಯವು ಹೆಚ್ಚಾಗಿ ಪರಿಗಣಿಸುತ್ತದೆ. ಹೀಗಾಗಿಯೇ, ಅಮೆರಿಕದ ಅನೇಕ ರಾಜ್ಯಗಳಲ್ಲಿ ಕಾನೂನು ಪ್ರಕ್ರಿಯೆಗಳ ವೇಳೆ ಇದರ ಬಳಕೆಯನ್ನು ಬಹಳ ಹಿಂದಿನಿಂದಲೂ ನಿರ್ಬಂಧಿಸಲಾಗಿದೆ. ಭಾರತದಲ್ಲಿ, ಇಂತಹ ಪರೀಕ್ಷೆಯನ್ನು ಯಾರಿಗೆ ಮಾಡಬೇಕಾಗಿದೆಯೋ ಆ ವ್ಯಕ್ತಿಯ ಸ್ಪಷ್ಟ ಒಪ್ಪಿಗೆಯಿದ್ದರೆ ಮಾತ್ರ ನಡೆಸಲು ಸಾಧ್ಯವಿದೆ. ಅಷ್ಟೇ ಅಲ್ಲದೆ, ಆರೋಪಿಯು ಈ ಪರೀಕ್ಷೆಗೆ ಒಳಪಡಲು ನಿರಾಕರಿಸಿದರೆ, ಅದನ್ನು ಅವರ ವಿರುದ್ಧದ ಪ್ರತಿಕೂಲ ಸಾಕ್ಷ್ಯ ಅಥವಾ ಅಪರಾಧದ ಸೂಚನೆ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಪಾಲಿಗ್ರಾಫ್ ಮತ್ತು ನಾರ್ಕೋಅನಾಲಿಸಿಸ್ ಪರೀಕ್ಷೆ
ಒಬ್ಬ ವ್ಯಕ್ತಿ ಸುಳ್ಳು ಹೇಳುವಾಗ ಆತನ ದೇಹದಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳು, ಆತ ನಿಜ ಹೇಳುವಾಗ ಇರುವುದಕ್ಕಿಂತ ಭಿನ್ನವಾಗಿರುತ್ತವೆ ಎಂಬ ತತ್ವದ ಆಧಾರದ ಮೇಲೆ ಪಾಲಿಗ್ರಾಫ್ ಪರೀಕ್ಷೆ ಕೆಲಸ ಮಾಡುತ್ತದೆ. ಈ ಪರೀಕ್ಷೆಯ ವೇಳೆ ವ್ಯಕ್ತಿಯ ದೇಹಕ್ಕೆ ಕಾರ್ಡಿಯೋ-ಕಫ್ (ರಕ್ತದೊತ್ತಡ ಅಳೆಯುವ ಪಟ್ಟಿ) ಅಥವಾ ಅತ್ಯಂತ ಸೂಕ್ಷ್ಮವಾದ ಎಲೆಕ್ಟ್ರೋಡ್‌ಗಳನ್ನು ಅಳವಡಿಸಲಾಗುತ್ತದೆ. ನಂತರ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾ, ಅವರ ರಕ್ತದೊತ್ತಡ, ನಾಡಿಮಿಡಿತ, ಉಸಿರಾಟದ ವೇಗ, ಬೆವರಿನ ಗ್ರಂಥಿಗಳ ಚಟುವಟಿಕೆ ಮತ್ತು ರಕ್ತ ಪರಿಚಲನೆಯಲ್ಲಿ ಆಗುವ ಬದಲಾವಣೆಗಳನ್ನು ಅಳೆಯಲಾಗುತ್ತದೆ. ಕೊನೆಗೆ, ಪ್ರತಿ ಪ್ರತಿಕ್ರಿಯೆಗೂ ಒಂದು ನಿರ್ದಿಷ್ಟ ಸಂಖ್ಯೆಯ ಮೌಲ್ಯವನ್ನು ನೀಡಿ, ಆ ವ್ಯಕ್ತಿ ನಿಜ ಹೇಳುತ್ತಿದ್ದಾನೋ, ಸುಳ್ಳು ಹೇಳುತ್ತಿದ್ದಾನೋ ಅಥವಾ ಗೊಂದಲದಲ್ಲಿದ್ದಾನೋ ಎಂಬುದನ್ನು ನಿರ್ಧರಿಸಲಾಗುತ್ತದೆ.
ಇಂತಹ ಪರೀಕ್ಷೆಯನ್ನು ಮೊದಲ ಬಾರಿಗೆ 19ನೇ ಶತಮಾನದಲ್ಲಿ ಇಟಲಿಯ ಅಪರಾಧಶಾಸ್ತ್ರಜ್ಞ ಚೇಸರೆ ಲೊಂಬ್ರೊಸೊ ಮಾಡಿದ್ದರು ಎನ್ನಲಾಗುತ್ತದೆ. ಅವರು ವಿಚಾರಣೆ ವೇಳೆ ಅಪರಾಧದ ಶಂಕಿತರ ರಕ್ತದೊತ್ತಡದಲ್ಲಿ ಆಗುವ ಬದಲಾವಣೆಗಳನ್ನು ಅಳೆಯಲು ಯಂತ್ರವೊಂದನ್ನು ಬಳಸಿದ್ದರು. ಆ ನಂತರ, 1914ರಲ್ಲಿ ಅಮೆರಿಕದ ಮನಶ್ಶಾಸ್ತ್ರಜ್ಞ ವಿಲಿಯಂ ಮಾರ್ಸ್ಟನ್ ಮತ್ತು 1921ರಲ್ಲಿ ಕ್ಯಾಲಿಫೋರ್ನಿಯಾದ ಪೊಲೀಸ್ ಅಧಿಕಾರಿ ಜಾನ್ ಲಾರ್ಸನ್ ಇದೇ ರೀತಿಯ ಸಾಧನಗಳನ್ನು ಸಿದ್ಧಪಡಿಸಿದರು.
ಇದಕ್ಕೆ ಭಿನ್ನವಾಗಿ, ನಾರ್ಕೋಅನಾಲಿಸಿಸ್ ಪರೀಕ್ಷೆಯಲ್ಲಿ ವ್ಯಕ್ತಿಗೆ 'ಸೋಡಿಯಂ ಪೆಂಟೊಥಾಲ್' ಎಂಬ ಔಷಧಿಯನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಇದು ವ್ಯಕ್ತಿಯನ್ನು ಒಂದು ರೀತಿಯ ಅರೆನಿದ್ರಾವಸ್ಥೆ ಅಥವಾ ಸಮ್ಮೋಹನದ ಸ್ಥಿತಿಗೆ ತಲುಪಿಸುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಯ ಕಲ್ಪನಾ ಶಕ್ತಿ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವುದರಿಂದ, ಅವರು ಕೇವಲ ನಿಜವಾದ ಮಾಹಿತಿಯನ್ನೇ ಹೊರಹಾಕುತ್ತಾರೆ ಎಂದು ನಿರೀಕ್ಷಿಸಲಾಗುತ್ತದೆ. ಈ ಸಂದರ್ಭದಲ್ಲಿ 'ಟ್ರುತ್ ಸೀರಮ್' ಎಂದು ಕರೆಯಲಾಗುವ ಈ ಔಷಧಿಯನ್ನು ಹಿಂದೆ ಶಸ್ತ್ರಚಿಕಿತ್ಸೆಗಳ ವೇಳೆ ಅರಿವಳಿಕೆಯಾಗಿ (ಅನೆಸ್ಥೆಸಿಯಾ) ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಗೂಢಚಾರಿಕೆ ಕಾರ್ಯಾಚರಣೆಗಳಿಗಾಗಿಯೂ ಇದನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ತನಿಖಾ ಸಂಸ್ಥೆಗಳು ಈ ಪರೀಕ್ಷೆಗಳನ್ನು ತನಿಖೆಗೆ ಬಳಸಿಕೊಳ್ಳಲು ಆಸಕ್ತಿ ತೋರುತ್ತಿವೆ. ಶಂಕಿತರಿಂದ ಸತ್ಯವನ್ನು ಹೊರತೆಗೆಯಲು ಬಳಸುವ ದೈಹಿಕ ಕಿರುಕುಳ ಅಥವಾ ಹಿಂಸೆಗೆ ಇವುಗಳನ್ನು ಒಂದು 'ಸೌಮ್ಯ ಪರ್ಯಾಯ' ಎಂದೂ ನೋಡಲಾಗುತ್ತಿದೆ.
ಆದರೆ, ಈ ಎರಡು ವಿಧಾನಗಳಲ್ಲಿ ಯಾವುದೂ ಶೇ.100ರಷ್ಟು ನಿಖರವಾದ ಫಲಿತಾಂಶ ನೀಡುತ್ತವೆ ಎಂದು ವೈಜ್ಞಾನಿಕ ಲೋಕದಲ್ಲಿ ಸಾಬೀತಾಗಿಲ್ಲ. ವೈದ್ಯಕೀಯ ರಂಗದಲ್ಲಿ ಇವು ಇಂದಿಗೂ ವಿವಾದಾತ್ಮಕವಾಗಿಯೇ ಉಳಿದಿವೆ.
ಅಮೆರಿಕದ ನ್ಯಾಷನಲ್ ರಿಸರ್ಚ್ ಕೌನ್ಸಿಲ್ 2003ರಲ್ಲಿ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, "ಪಾಲಿಗ್ರಾಫ್ ಪರೀಕ್ಷೆಯ ನಿಖರತೆಯು ಕೇವಲ ಒಂದು ನಾಣ್ಯವನ್ನು ಚಿಮ್ಮಿ ಹೆಡ್ಸ್ ಅಥವಾ ಟೇಲ್ಸ್ ಎಂದು ಊಹಿಸುವಷ್ಟೇ ಸಾಧಾರಣವಾಗಿದೆ" ಎಂದು ತೀರ್ಮಾನಿಸಿತ್ತು.
ತಜ್ಞರ ಪ್ರಕಾರ, ಪಾಲಿಗ್ರಾಫ್ ಪರೀಕ್ಷೆಯನ್ನು ಸುಲಭವಾಗಿ ದಾರಿ ತಪ್ಪಿಸಬಹುದು ಅಥವಾ ಯಾಮಾರಿಸಬಹುದು. ವ್ಯಕ್ತಿಗಳು ಕೆಲವು ತಂತ್ರಗಳನ್ನು ಬಳಸುವ ಮೂಲಕ ತಮ್ಮ ದೇಹದ ಜೈವಿಕ ಪ್ರತಿಕ್ರಿಯೆಗಳನ್ನು ಬದಲಾಯಿಸಬಹುದು ಮತ್ತು ಪರೀಕ್ಷೆಯಲ್ಲಿ ಸುಳ್ಳು ಹೇಳಿದರೂ ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳಬಹುದು.
ಪರೀಕ್ಷಕನ ಕೌಶಲ್ಯ, ಬಳಸುವ ಪ್ರಶ್ನೆಗಳ ಶೈಲಿ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಶಾರೀರಿಕ ಪ್ರತಿಕ್ರಿಯೆಗಳು ಈ ಪರೀಕ್ಷೆಯ ನಿಖರತೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳ ನಂಬಿಕಾರ್ಹತೆಯ ಬಗ್ಗೆ ಇರುವ ಅನುಮಾನಗಳಿಂದಾಗಿ, ಅಮೆರಿಕದ ನ್ಯಾಯಾಲಯಗಳಲ್ಲಿ ಪಾಲಿಗ್ರಾಫ್ ಪರೀಕ್ಷೆಯ ವರದಿಗಳನ್ನು ಸಾಕ್ಷ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ, ಈ ತಂತ್ರಜ್ಞಾನಕ್ಕೆ ಬಲವಾದ ವೈಜ್ಞಾನಿಕ ಆಧಾರವಿಲ್ಲ ಎಂದು ಹಲವು ವಿಜ್ಞಾನಿಗಳು ವಾದಿಸುತ್ತಾರೆ.
ಭಾರತದ ತನಿಖಾ ಸಂಸ್ಥೆಗಳು ಆರೋಪಿಗಳನ್ನು ಇಂತಹ ಪರೀಕ್ಷೆಗಳಿಗೆ ಒಳಪಡಿಸಲು ಅವಕಾಶವಿದೆಯೇ?
ಸೆಲ್ವಿ ಮತ್ತು ಇತರರು Vs ಕರ್ನಾಟಕ ಸರ್ಕಾರ (2010) ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪೀಠವು, "ಆರೋಪಿಯ ಸ್ವಯಂ ಒಪ್ಪಿಗೆಯಿಲ್ಲದೆ" ಯಾವುದೇ ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಮತ್ತು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿತ್ತು.
ಸ್ವಇಚ್ಛೆಯಿಂದ ಪರೀಕ್ಷೆಗೆ ಮುಂದೆ ಬರುವವರಿಗೆ ವಕೀಲರ ನೆರವು ಸಿಗಬೇಕು. ತನಿಖಾಧಿಕಾರಿಗಳು ಮತ್ತು ವಕೀಲರು ಆ ಪರೀಕ್ಷೆಯ ದೈಹಿಕ, ಮಾನಸಿಕ ಹಾಗೂ ಕಾನೂನಾತ್ಮಕ ಪರಿಣಾಮಗಳನ್ನು ಆರೋಪಿಗೆ ಸ್ಪಷ್ಟವಾಗಿ ವಿವರಿಸಬೇಕು ಎಂದು ನ್ಯಾಯಪೀಠ ಹೇಳಿತ್ತು. ಇದರೊಂದಿಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2000ರಲ್ಲಿ ಪ್ರಕಟಿಸಿದ್ದ 'ಆರೋಪಿಯ ಪಾಲಿಗ್ರಾಫ್ ಪರೀಕ್ಷೆ ನಡೆಸುವ ಮಾರ್ಗಸೂಚಿಗಳನ್ನು' ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿತ್ತು.
ಆರೋಪಿಯ ಒಪ್ಪಿಗೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರೇ ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇಂತಹ ಪರೀಕ್ಷೆಗಳ ವರದಿಯನ್ನು 'ಸ್ವಯಂ ಅಪರಾಧ ಒಪ್ಪಿಗೆ' ಎಂದು ಪರಿಗಣಿಸಲು ಬರುವುದಿಲ್ಲ. ಏಕೆಂದರೆ, ಔಷಧಿಯ ಪ್ರಭಾವದಲ್ಲಿರುವ ವ್ಯಕ್ತಿಗೆ ತನಗೆ ಕೇಳಲಾಗುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ವಿವೇಚನೆ ಇರುವುದಿಲ್ಲ.
ಸ್ವಇಚ್ಛೆಯಿಂದ ಒಳಪಟ್ಟ ಇಂತಹ ಪರೀಕ್ಷೆಯ ಸಹಾಯದಿಂದ ಆನಂತರ ಪತ್ತೆಯಾಗುವ ಯಾವುದೇ ಮಾಹಿತಿ ಅಥವಾ ವಸ್ತುವನ್ನು ಸಾಕ್ಷ್ಯವಾಗಿ ಅಂಗೀಕರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಉದಾಹರಣೆಗೆ, ಪರೀಕ್ಷೆಯ ಸಮಯದಲ್ಲಿ ಆರೋಪಿಯು ಕೊಲೆಗೆ ಬಳಸಿದ ಆಯುಧವಿರುವ ಸ್ಥಳವನ್ನು ಬಹಿರಂಗಪಡಿಸಿ, ಪೊಲೀಸರು ನಂತರ ಅದೇ ಸ್ಥಳದಲ್ಲಿ ಆ ಆಯುಧವನ್ನು ಪತ್ತೆಹಚ್ಚಿದರೆ, ಆರೋಪಿ ನೀಡಿದ ಆ ಹೇಳಿಕೆ ಸಾಕ್ಷ್ಯವಾಗುವುದಿಲ್ಲ; ಆದರೆ ಆ ಆಯುಧವನ್ನು ಸಾಕ್ಷ್ಯ ಎಂದು ಪರಿಗಣಿಸಲಾಗುತ್ತದೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳು, ನ್ಯಾಯಸಮ್ಮತ ವಿಚಾರಣೆಯ ಹಕ್ಕು ಮತ್ತು ಸಂವಿಧಾನದ ವಿಧಿ 20(3)ರ ಅಡಿಯಲ್ಲಿ ತನ್ನ ವಿರುದ್ಧ ತಾನೇ ಸಾಕ್ಷಿ ನುಡಿಯದಂತೆ ಇರುವ ಹಕ್ಕನ್ನು ಪರಿಗಣಿಸಿ ನ್ಯಾಯಪೀಠವು ಈ ತೀರ್ಪು ನೀಡಿದೆ.
"ಒಬ್ಬ ವ್ಯಕ್ತಿಯ ಮಾನಸಿಕ ಪ್ರಕ್ರಿಯೆಯೊಳಗೆ ಬಲವಂತವಾಗಿ ನುಗ್ಗುವುದು ಆತನ ಮಾನವ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಎಸಗುವ ಅಪಮಾನವಾಗಿದೆ. ಇದು ಅನೇಕ ಬಾರಿ ಗಂಭೀರ ಹಾಗೂ ದೀರ್ಘಕಾಲದ ಪರಿಣಾಮಗಳನ್ನು ಉಂಟುಮಾಡುತ್ತದೆ," ಎಂದು ನ್ಯಾಯಾಲಯ ಹೇಳಿದೆ. ಇಂತಹ ವೈಜ್ಞಾನಿಕ ತಂತ್ರಜ್ಞಾನಗಳ ಬಳಕೆಯಿಂದ ಪೊಲೀಸರ ‘ಥರ್ಡ್ ಡಿಗ್ರಿ’ ಕಿರುಕುಳದ ಪದ್ಧತಿಗಳು ಕಡಿಮೆಯಾಗುತ್ತವೆ ಎಂಬ ಸರ್ಕಾರದ ವಾದವನ್ನು ಗಮನಿಸಿದ ಕೋರ್ಟ್, "ಒಂದು ರೀತಿಯ ಅನುಚಿತ ನಡವಳಿಕೆಯನ್ನು ಮತ್ತೊಂದು ಅನುಚಿತ ನಡವಳಿಕೆಯಿಂದ ಬದಲಾಯಿಸಲು ಪ್ರಯತ್ನಿಸುತ್ತಿರುವುದರಿಂದ ಈ ವಾದವು ತರ್ಕಬದ್ಧವಾಗಿಲ್ಲ" ಎಂದು ಅಭಿಪ್ರಾಯಪಟ್ಟಿದೆ.
ತನಿಖಾಧಿಕಾರಿಗಳು ಸಾಕ್ಷಿಗಳನ್ನು, ಸಂತ್ರಸ್ತರನ್ನು ಅಥವಾ ಅವರ ಕುಟುಂಬದವರನ್ನು ಇಂಥ ಪರೀಕ್ಷೆಗಳಿಗೆ ಒಳಪಡಿಸಲು ಅವಕಾಶವಿದೆಯೇ?
"ಅಪರಾಧ ಪ್ರಕರಣಗಳ ತನಿಖೆಯ ಸಂದರ್ಭದಲ್ಲಾಗಲಿ ಅಥವಾ ಇನ್ಯಾವುದೇ ಸಂದರ್ಭದಲ್ಲಾಗಲಿ, ಯಾವುದೇ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಇಂತಹ ಪರೀಕ್ಷೆಗಳಿಗೆ ಒಳಪಡಿಸುವಂತಿಲ್ಲ" ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಈ ಮೂಲಕ ನ್ಯಾಯಾಲಯವು ಇದೇ ನಿಯಮವನ್ನು ಇತರರಿಗೂ ವಿಸ್ತರಿಸಿದ್ದು, ಅವರ ಒಪ್ಪಿಗೆಯಿದ್ದರೆ ಮಾತ್ರ ಪರೀಕ್ಷೆ ನಡೆಸಬಹುದು ಎಂದು ಸ್ಪಷ್ಟಪಡಿಸಿದೆ. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಇಂತಹ ಪರೀಕ್ಷೆಗಳಿಗೆ ಒಳಪಡಿಸುವುದು "ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಅನಗತ್ಯ ಹಸ್ತಕ್ಷೇಪ" ಆಗುತ್ತದೆ ಎಂದು ಕೋರ್ಟ್ ಹೇಳಿದೆ. ಆದರೆ, ಸಂಬಂಧಪಟ್ಟ ವ್ಯಕ್ತಿಗಳು ತಮ್ಮ ಒಪ್ಪಿಗೆ ನೀಡಿದರೆ, ಈ ತಂತ್ರಜ್ಞಾನಗಳನ್ನು "ಸ್ವಇಚ್ಛೆಯ ಮೇರೆಗೆ ಬಳಸಲು" ಅವಕಾಶ ನೀಡಿದೆ.
ತನ್ನ ವಿರುದ್ಧ ತಾನೇ ಸಾಕ್ಷಿ ನುಡಿಯದಂತೆ ರಕ್ಷಣೆ ನೀಡುವ ಸಂವಿಧಾನದ ವಿಧಿ 20(3)ರ ವ್ಯಾಪ್ತಿಯನ್ನು ನ್ಯಾಯಾಲಯವು ಪರಿಶೀಲಿಸಿತು. ಈ ನಿಯಮದ ಪ್ರಕಾರ, ಯಾವುದೇ ಆರೋಪಿಯು ತನ್ನ ವಿರುದ್ಧ ತಾನೇ ಸಾಕ್ಷಿಯಾಗುವಂತೆ ಒತ್ತಾಯಿಸುವಂತಿಲ್ಲ. ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ಅಧಿಕೃತವಾಗಿ 'ಆರೋಪಿ' ಎಂದು ಹೆಸರಿಸುವುದು ಅಗತ್ಯವಾಗಿದ್ದರೂ, ಸಿಆರ್‌ಪಿಸಿ ಇತರ ನಿಬಂಧನೆಗಳು ಈ ರಕ್ಷಣೆಯನ್ನು ಸಾಕ್ಷಿಗಳಿಗೂ ವಿಸ್ತರಿಸುತ್ತವೆ ಎಂದು ಕೋರ್ಟ್ ಹೇಳಿದೆ.
ಇನ್ನು ಸಂತ್ರಸ್ತರ, ಅದರಲ್ಲೂ ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ವಿಷಯಕ್ಕೆ ಬಂದರೆ, ಅಂತಹ ಪ್ರಕರಣಗಳಲ್ಲಿ ತನಿಖೆಯನ್ನು ಚುರುಕುಗೊಳಿಸುವ ಅಗತ್ಯ ಎಷ್ಟೇ ಇದ್ದರೂ, ಸಂತ್ರಸ್ತರನ್ನು ಬಲವಂತವಾಗಿ ಇಂತಹ ಪರೀಕ್ಷೆಗಳಿಗೆ ಒಳಪಡಿಸಲು ಬರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಏಕೆಂದರೆ, ಅದು ಅವರ "ಮಾನಸಿಕ ಗೌಪ್ಯತೆಯ ಮೇಲಿನ ಅನ್ಯಾಯದ ಹಸ್ತಕ್ಷೇಪ" ಆಗುತ್ತದೆ ಮತ್ತು ಇದು ಸಂತ್ರಸ್ತರಿಗೆ ಸಮಾಜದಲ್ಲಿ ಮತ್ತಷ್ಟು ಅಪಖ್ಯಾತಿ ಅಥವಾ ಮುಜುಗರವನ್ನು ಉಂಟುಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಯಾವೆಲ್ಲಾ ಅಪರಾಧ ಪ್ರಕರಣಗಳಲ್ಲಿ ಇಂತಹ ಪರೀಕ್ಷೆಗಳನ್ನು ಬಳಸಲಾಗಿದೆ?
ಹೆಚ್ಚಿನ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಆರೋಪಿಗಳು ಅಥವಾ ಶಂಕಿತರ ಮೇಲೆ ಇಂತಹ ಪರೀಕ್ಷೆಗಳನ್ನು ನಡೆಸಲು ನ್ಯಾಯಾಲಯದ ಅನುಮತಿಯನ್ನು ಕೋರುತ್ತವೆ. ಸಂತ್ರಸ್ತರು ಅಥವಾ ಸಾಕ್ಷಿಗಳ ಮೇಲೆ ಇವುಗಳನ್ನು ಬಳಸುವುದು ತೀರಾ ಅಪರೂಪ. ತನಿಖೆಗೆ ಸಹಾಯ ಪಡೆಯುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ಕೋರಲಾಗುತ್ತಿದೆ ಎಂದು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ತಿಳಿಸಬಹುದಾದರೂ, ವ್ಯಕ್ತಿಯೊಬ್ಬರು ಪರೀಕ್ಷೆಗೆ ಒಪ್ಪಿಗೆ ನೀಡುವುದು ಅಥವಾ ನಿರಾಕರಿಸುವುದು ಅವರ ಅಪರಾಧವನ್ನಾಗಲಿ ಅಥವಾ ನಿರಪರಾಧಿತ್ವವನ್ನಾಗಲಿ ಬಿಂಬಿಸುವುದಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ. ಇಂತಹ ಪರೀಕ್ಷೆಗಳನ್ನು ಬಳಸಲಾದ ಕೆಲವು ಪ್ರಮುಖ ಪ್ರಕರಣಗಳ ವಿವರ ಇಲ್ಲಿದೆ:
ಜೂನ್ ತಿಂಗಳಲ್ಲಿ, 2024ರಲ್ಲಿ ಫೇಸ್‌ಬುಕ್ ಲೈವ್ ಸೆಷನ್ ಸಂದರ್ಭದಲ್ಲಿ ನಡೆದ ಶಿವಸೇನಾ (ಯುಬಿಟಿ) ಮಾಜಿ ಬಿಎಂಸಿ ಕಾರ್ಪೊರೇಟರ್ ಅಭಿಷೇಕ್ ಘೋಷಾಲ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಬಯಸುತ್ತಿರುವುದಾಗಿ ಸಿಬಿಐ ಮುಂಬೈ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಮೂವರಲ್ಲಿ ಇಬ್ಬರು ತಮ್ಮ ಒಪ್ಪಿಗೆ ನೀಡಿದ್ದರಿಂದ ನ್ಯಾಯಾಲಯ ಪರೀಕ್ಷೆಗೆ ಹಸಿರು ನಿಶಾನೆ ತೋರಿತು, ಆದರೆ ಒಬ್ಬ ಆರೋಪಿ ಪರೀಕ್ಷೆಗೆ ಒಳಪಡಲು ನಿರಾಕರಿಸಿದನು. ಪರೀಕ್ಷೆಗೆ ಸಿದ್ಧರಿದ್ದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲಯವು ಅದರ ದೈಹಿಕ, ಮಾನಸಿಕ ಮತ್ತು ಕಾನೂನಾತ್ಮಕ ಪರಿಣಾಮಗಳನ್ನು ವಿವರಿಸಿತು ಮತ್ತು ಅವರ ಒಪ್ಪಿಗೆಯ ನಂತರ ಸಿಬಿಐಗೆ ಅನುಮತಿ ನೀಡಿತು. "ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪಾಲಿಗ್ರಾಫ್ ಪರೀಕ್ಷೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕವೇ ಈ ಪರೀಕ್ಷೆಯನ್ನು ನಡೆಸಬೇಕು" ಎಂದು ನ್ಯಾಯಾಲಯ ಹೇಳಿತ್ತು.
ಆಗಸ್ಟ್ 2024ರಲ್ಲಿ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಪ್ರಕರಣದಲ್ಲಿ ನಂತರ ಅಪರಾಧಿ ಎಂದು ಸಾಬೀತಾದ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಿದ್ದನು. ಆ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಕೂಡ ಈ ಪರೀಕ್ಷೆಗೆ ಒಳಗಾಗಿದ್ದರು.
2020ರಲ್ಲಿ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ನಾಲ್ಕು ಆರೋಪಿಗಳು ಸಿಬಿಐ ಮನವಿಯ ಮೇರೆಗೆ ಈ ಪರೀಕ್ಷೆಗಳಿಗೆ ಒಪ್ಪಿಗೆ ನೀಡಿದ್ದರು. ಅದೇ ವರ್ಷದಲ್ಲಿ, ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಡಿಕ್ಕಿ ಹೊಡೆದ ಟ್ರಕ್‌ನ ಚಾಲಕ ಮತ್ತು ಕ್ಲೀನರ್‌ಗೆ ಪರೀಕ್ಷೆ ನಡೆಸಲು ಸಿಬಿಐಗೆ ಅನುಮತಿ ನೀಡಲಾಗಿತ್ತು.
2019ರಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಯೊಬ್ಬನಿಗೆ ಪರೀಕ್ಷೆ ನಡೆಸಲು ಸಿಬಿಐ ಕೋರಿತ್ತು, ಆದರೆ ಆರೋಪಿ ಒಪ್ಪಿಗೆ ನೀಡದ ಕಾರಣ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು. ಬ್ಯಾಂಕಿನ 63 ವರ್ಷದ ನಿವೃತ್ತ ಡೆಪ್ಯುಟಿ ಮ್ಯಾನೇಜರ್, ಇದು ತನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಗಳನ್ನು ನೀಡಿ ಒಪ್ಪಿಗೆ ನಿರಾಕರಿಸಿದ್ದರು.
ಮೇ 2017ರಲ್ಲಿ, 2012ರ ತನ್ನ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಐಎನ್‌ಎಕ್ಸ್ ಮೀಡಿಯಾ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ತಾವಾಗಿಯೇ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧರಿರುವುದಾಗಿ ತಿಳಿಸಿದ್ದರು. ಆದರೆ ಆಕೆಯ ವಿರುದ್ಧ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿ ಸಿಬಿಐ ಇದನ್ನು ನಿರಾಕರಿಸಿತ್ತು.
ನೊಯಿಡಾದಲ್ಲಿ ತಮ್ಮ ಮಗಳು ಆಯುಷಿ ಮತ್ತು ಮನೆಯ ಕೆಲಸಗಾರ ಹೇಮರಾಜ್ ಅವರನ್ನು ಕೊಂದ ಆರೋಪ ಎದುರಿಸುತ್ತಿದ್ದ ಡಾ. ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರಿಗೂ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿತ್ತು. ಅವರ ಕಾಂಪೌಂಡರ್ ಕೃಷ್ಣನಿಗೆ ನಡೆಸಲಾದ ನಾರ್ಕೋಅನಾಲಿಸಿಸ್ ಪರೀಕ್ಷೆಯ ವಿಡಿಯೊ ಕೂಡ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಇಂತಹ ಸೋರಿಕೆಗಳ ವಿರುದ್ಧ ಎಚ್ಚರಿಕೆ ನೀಡಿದ್ದು, ಇದನ್ನು 'ಕಳವಳಕಾರಿ ಪದ್ಧತಿ' ಎಂದು ಕರೆದಿತ್ತು.
ಸೌಜನ್ಯ: indianexpress.com