ಅಗ್ಗದ ಕ್ಯಾನ್ಸರ್ ಔಷಧಿಗಾಗಿ ಕೇರಳಂನ ಮಹಿಳೆಯ ಕಾನೂನು ಹೋರಾಟ: ನಿಧನದ ನಂತರವೂ ಮುಂದುವರಿದ ಸಮರ
ಹರಿತಾ ಮಾನವ್ - thenewsminute. com ವರದಿ
ಸರೋಜಂ ರಾಧಾಕೃಷ್ಣನ್
ಸರೋಜಂ ರಾಧಾಕೃಷ್ಣನ್ ಅವರಿಗೆ 2021ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಅವರಿಗೆ 68 ವರ್ಷ ವಯಸ್ಸಾಗಿತ್ತು. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಸರೋಜಂ ಅವರ ಕ್ಯಾನ್ಸರ್ (ಲ್ಯುಮಿನಲ್ ಎ ಸಬ್‌ಟೈಪ್ - HR+/HER2-) ಮುಂದುವರಿದ ಹಂತದಲ್ಲಿತ್ತು. ಆದರೆ, ನಿಜವಾದ ಸಂಕಷ್ಟ ಎದುರಾಗಿದ್ದು ಆ ನಂತರವೇ. ಚಿಕಿತ್ಸೆ ಪ್ರಾರಂಭಿಸಿದಾಗ, ತಮಗೆ ನೀಡಲಾದ ಔಷಧಿಗಳ ಬೆಲೆ ಎಷ್ಟು ದುಬಾರಿಯಾಗಿದೆ ಎಂದರೆ ಅದನ್ನು ಭರಿಸಲು ಸಾಧ್ಯವೇ ಇಲ್ಲ ಎಂಬ ವಿಷಯ ಅವರಿಗೆ ಅರಿವಾಯಿತು.
ಅವರಿಗೆ ರೈಬೋಸಿಸಿಕ್ಲಿಬ್, ಲೆಟ್ರೋಜೋಲ್ ಮತ್ತು ಝೋಲೆಡ್ರಾನಿಕ್ ಆಸಿಡ್ ಎಂಬ ಮೂರು ಔಷಧಿಗಳನ್ನು ಸೂಚಿಸಲಾಗಿತ್ತು. ಇವುಗಳ ತಿಂಗಳ ವೆಚ್ಚವೇ ಬರೊಬ್ಬರಿ 63,480 ರೂಪಾಯಿಗಳಾಗಿತ್ತು. ಸರೋಜಂ ಮತ್ತು ಅವರ ಪತಿ ಬ್ಯಾಂಕ್ ಉದ್ಯೋಗಿಗಳಾಗಿ ನಿವೃತ್ತರಾಗಿದ್ದು, ಹಣಕಾಸಿನ ತೀವ್ರ ಅಭಾವವಿಲ್ಲದಿದ್ದರೂ, ಈ ಭಾರೀ ಮೊತ್ತದ ವೈದ್ಯಕೀಯ ಬಿಲ್‌ಗಳು ಅವರ ಮೇಲೆ ಹೊರೆಯಾಗತೊಡಗಿದವು.
2022ರ ಫೆಬ್ರವರಿಯಲ್ಲಿ ಸರೋಜಂ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದರು. ಈ ಔಷಧಿಗಳನ್ನು ಜನರಿಗೆ ಕೈಗೆಟುಕುವಂತೆ ಮಾಡಲು 'ಕಡ್ಡಾಯ ಪರವಾನಗಿ' ಅಥವಾ 'ಸರಕಾರದ ಬಳಕೆ ಪರವಾನಗಿ' ನೀಡುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಅವರು ಕೋರಿದರು. ಕಡ್ಡಾಯ ಪರವಾನಗಿ ಎಂದರೆ, ಪೇಟೆಂಟ್ ಹೊಂದಿರುವವರ ಒಪ್ಪಿಗೆಯಿಲ್ಲದೆ, ಅವರಿಗೆ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ, ಮೂರನೇ ವ್ಯಕ್ತಿಗೆ ಆ ಉತ್ಪನ್ನವನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸರಕಾರ ನೀಡುವ ಅನುಮತಿಯಾಗಿದೆ.
ದುರಂತವೆಂದರೆ, 2022ರ ಸೆಪ್ಟೆಂಬರ್‌ನಲ್ಲಿ ಸರೋಜಂ ಅವರು ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ನಂತರ, ಕೇರಳ ಹೈಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ವಿಚಾರಣೆಯನ್ನು ಮುಂದುವರಿಸಿತು.
ಕಳೆದ ನಾಲ್ಕು ವರ್ಷಗಳಲ್ಲಿ, ಈ ಪ್ರಕರಣವನ್ನು ಎಂಟು ವಿಭಿನ್ನ ನ್ಯಾಯಾಧೀಶರು 58 ಕಲಾಪಗಳಲ್ಲಿ ವಿಚಾರಣೆ ನಡೆಸಿದ್ದು, 40 ಬಾರಿ ಮುಂದೂಡಲಾಗಿದೆ.
ಈ ವರ್ಷದ ಜುಲೈ ಎರಡನೇ ವಾರದಲ್ಲಿ, ರೋಗಿಗಳ ಹಕ್ಕುಗಳ ಪರ ಹೋರಾಟಗಾರರು, ನಾಗರಿಕ ಸಮಾಜ ಸಂಸ್ಥೆಗಳು, ಕಾನೂನು ತಜ್ಞರು ಮತ್ತು ವೈದ್ಯಕೀಯ ರಂಗದ ಪ್ರಮುಖರನ್ನು ಒಳಗೊಂಡ 'ವರ್ಕಿಂಗ್ ಗ್ರೂಪ್ ಆನ್ ಆಕ್ಸೆಸ್ ಟು ಮೆಡಿಸಿನ್ಸ್ ಆಂಡ್ ಟ್ರೀಟ್‌ಮೆಂಟ್ಸ್' ಸಂಘಟನೆಯು ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು, ಭಾರತದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಭಾರತದ ರಾಷ್ಟ್ರಪತಿಯವರಿಗೆ ಪತ್ರ ಬರೆದು ಅಂತಿಮ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿತು.
ಜುಲೈ 15ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಹರಿಶಂಕರ್ ವಿ. ಮೆನನ್ ಅವರು, ಕೋಲ್ಕತ್ತಾದ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಮತ್ತು ತಿರುವನಂತಪುರದ ರೀಜನಲ್ ಕ್ಯಾನ್ಸರ್ ಸೆಂಟರ್ (RCC) ಸಂಸ್ಥೆಗಳಿಗೆ ಈ ಬಗ್ಗೆ ಪರಿಶೀಲಿಸಿ ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು. ರೈಬೋಸಿಸಿಕ್ಲಿಬ್ ಔಷಧಿಯ ಬದಲಿಗೆ ಫೈಜರ್ ಕಂಪೆನಿಯ 'ಪಾಲ್ಬೋಸಿಸಿಕ್ಲಿಬ್' ಔಷಧಿಯನ್ನು ಬಳಸಬಹುದೇ ಎಂಬುದನ್ನು ತಿಳಿಯಲು ಕೋರ್ಟ್ ಬಯಸಿತ್ತು. ಪಾಲ್ಬೋಸಿಸಿಕ್ಲಿಬ್ ನ ಪೇಟೆಂಟ್ ಅವಧಿ ಮುಗಿದಿರುವುದರಿಂದ ಅದರ ಬೆಲೆ ಅಗ್ಗವಾಗಿದೆ.
ಈ ಪ್ರಶ್ನೆಗೆ ಪ್ರಮುಖ ಕಾರಣವಿತ್ತು. ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಅವರು 2023ರ ಡಿಸೆಂಬರ್ 18ರಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯ ಪ್ರಕಾರ, ಪಾಲ್ಬೋಸಿಸಿಕ್ಲಿಬ್ ಔಷಧಿಯ ತಿಂಗಳ ವೆಚ್ಚ 2,000 ರಿಂದ 4,000 ರೂಪಾಯಿಗಳಾಗಿತ್ತು. ಆದರೆ, ರೈಬೋಸಿಸಿಕ್ಲಿಬ್ ಔಷಧಿಯ ಬೆಲೆ 2021ರಲ್ಲಿ ತಿಂಗಳಿಗೆ 58,140 ರೂಪಾಯಿಗಳಷ್ಟಿತ್ತು.
ಜುಲೈ 17ರಂದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತು. ಸಾರ್ವಜನಿಕ ಹಿತಾಸಕ್ತಿಯ ಈ ಪ್ರಮುಖ ವಿಷಯದ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು. ನ್ಯಾಯಾಲಯಕ್ಕೆ ನೆರವಾಗಲು ಮಧ್ಯಂತರ ಅರ್ಜಿದಾರರಿಗೆ ಅವಕಾಶ ನೀಡಿತು ಹಾಗೂ ಬಾಕಿ ಇರುವ ರಿಟ್ ಅರ್ಜಿಯನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಕೇರಳ ಹೈಕೋರ್ಟ್‌ಗೆ ನಿರ್ದೇಶನ ನೀಡಿತು.
ಈ ಕುರಿತು ಹೇಳಿಕೆ ನೀಡಿರುವ 'ವರ್ಕಿಂಗ್ ಗ್ರೂಪ್ ಆನ್ ಆಕ್ಸೆಸ್ ಟು ಮೆಡಿಸಿನ್ಸ್ ಆಂಡ್ ಟ್ರೀಟ್‌ಮೆಂಟ್ಸ್' ಸಂಘಟನೆಯು, "ಪೇಟೆಂಟ್ ಏಕಸ್ವಾಮ್ಯದಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ಅಕಾಲಿಕ ಮರಣಕ್ಕೆ ಈಡಾಗುತ್ತಿರುವ ಲಕ್ಷಾಂತರ ಜನರಿಗೆ ಸುಪ್ರೀಂ ಕೋರ್ಟ್‌ನ ಈ ಸಮಯೋಚಿತ ನಡೆ ನ್ಯಾಯ ದೊರಕಿಸಿಕೊಡಲಿದೆ ಎಂಬ ಭರವಸೆ ನಮಗಿದೆ. ಪೇಟೆಂಟ್ ಹಕ್ಕು ಹೊಂದಿರುವ ಕಂಪೆನಿಗೆ ಏಕಸ್ವಾಮ್ಯ ದೊರೆಯುತ್ತದೆ ಮತ್ತು ಇತರರು ಅಗ್ಗದ ಜೆನೆರಿಕ್ ಔಷಧಿಗಳನ್ನು ತಯಾರಿಸುವುದನ್ನು ಅದು ತಡೆಯುತ್ತದೆ. ಆದರೆ, ಅದೇ ಸಮಯದಲ್ಲಿ ಆ ಔಷಧಿಯನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವ ಯಾವುದೇ ಕಡ್ಡಾಯ ಜವಾಬ್ದಾರಿ ಪೇಟೆಂಟ್ ಹೊಂದಿದವರ ಮೇಲಿರುವುದಿಲ್ಲ" ಎಂದು ತಿಳಿಸಿದೆ.
►ಕೈಗೆಟುಕದ ಅಗತ್ಯ ಔಷಧಿಗಳು
ಸರೋಜಂ ಮತ್ತು ಅವರ ಪತಿ ರಾಧಾಕೃಷ್ಣನ್ 1988ರಿಂದ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದರು. ಸರೋಜಂ ಅವರಿಗೆ ಕ್ಯಾನ್ಸರ್ ಮುಂದುವರಿದ ಹಂತದಲ್ಲಿದೆ ಎಂದು ಪತ್ತೆಯಾದಾಗ, ಅವರ ಸ್ಥಿತಿಯನ್ನು ನಿಯಂತ್ರಣದಲ್ಲಿಡಲಷ್ಟೇ ಸಾಧ್ಯವಿತ್ತು ಹೊರತು ಗುಣಪಡಿಸಲು ಸಾಧ್ಯವಿರಲಿಲ್ಲ. ಪರಿಣಾಮವಾಗಿ, ಅವರು ತಮ್ಮ ಜೀವನವಿಡೀ ಕ್ಯಾನ್ಸರ್ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು.
ದಂಪತಿಯ ಬಳಿ ಉತ್ತಮ ಉಳಿತಾಯವಿತ್ತು ಮತ್ತು ಪಿಂಚಣಿ ಕೂಡ ಬರುತ್ತಿದ್ದರಿಂದ, ವೆಚ್ಚವನ್ನು ನಿಭಾಯಿಸಬಹುದು ಎಂದು ರಾಧಾಕೃಷ್ಣನ್ ಅವರು ಭಾವಿಸಿದ್ದರು. ಆದರೆ ಪ್ರತಿ ತಿಂಗಳು ಇಷ್ಟೊಂದು ಹಣ ಖರ್ಚು ಮಾಡಬೇಕೆಂಬುದು ತಿಳಿಯುತ್ತಿದ್ದಂತೆ ಅವರಿಗೆ ಆಘಾತವಾಯಿತು.
ಅವರು ಬಳಸುತ್ತಿದ್ದ ಮೂರು ಔಷಧಿಗಳೆಂದರೆ ರೈಬೋಸಿಸಿಕ್ಲಿಬ್, ಲೆಟ್ರೋಜೋಲ್ ಮತ್ತು ಝೋಲೆಡ್ರಾನಿಕ್ ಆಸಿಡ್. 2021ರಲ್ಲಿ ಇವುಗಳ ಒಂದು ತಿಂಗಳ ವೆಚ್ಚ ತೆರಿಗೆ ಸೇರಿ ಅನುಕ್ರಮವಾಗಿ 58,140 ರೂ., 1,027.75 ರೂ. ಮತ್ತು 4,313 ರೂ. ಆಗಿತ್ತು. ಚಿಕಿತ್ಸೆಗಾಗಿ ಅವರು ತಿಂಗಳಿಗೆ ಒಟ್ಟು 63,480 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಈ ಪರಿಸ್ಥಿತಿಯು ದೇಶದ ಬಹುತೇಕ ಜನರಿಗೆ ಈ ಔಷಧಿಗಳನ್ನು ಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿತು ಮತ್ತು ಕೋರ್ಟ್ ಗೆ ಅರ್ಜಿ ಸಲ್ಲಿಸಲು ಪ್ರೇರೇಪಿಸಿತು. ಅವರು ಮುಖ್ಯವಾಗಿ ರೈಬೋಸಿಸಿಕ್ಲಿಬ್ ಔಷಧಿಯನ್ನು ಉಲ್ಲೇಖಿಸಿದ್ದರು. ಇದರ ಪೇಟೆಂಟ್ ಹಕ್ಕನ್ನು ಸ್ವಿಟ್ಜರ್‌ಲ್ಯಾಂಡ್ ಮೂಲದ ಫಾರ್ಮಾಸ್ಯುಟಿಕಲ್ ಕಂಪೆನಿ 'ನವಾರ್ಟಿಸ್' ಹೊಂದಿದ್ದು, ಭಾರತದಲ್ಲಿ 'ನಾಟ್ಕೋ ಫಾರ್ಮಾ ಲಿಮಿಟೆಡ್' ಮತ್ತು 'ಎಮ್‌ಎಸ್‌ಎನ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' ಕಂಪೆನಿಗಳು ಇದನ್ನು ಉತ್ಪಾದಿಸುತ್ತವೆ.
The news minute ಜತೆ ಮಾತನಾಡಿದ ರಾಧಾಕೃಷ್ಣನ್, "ನಾವು ನಮ್ಮನ್ನು ಮಧ್ಯಮ ವರ್ಗ ಅಥವಾ ಮೇಲ್ಮಧ್ಯಮ ವರ್ಗದವರೆಂದು ಭಾವಿಸಿದ್ದೆವು. ಆದರೂ ಈ ಮಾತ್ರೆಗಳನ್ನು ಕೊಳ್ಳಲು ಕಷ್ಟಪಟ್ಟೆವು. ಹೀಗಿರುವಾಗ ದೇಶದ ಸಾಮಾನ್ಯ ಜನರ ಪರಿಸ್ಥಿತಿಯನ್ನು ಒಮ್ಮೆ ಊಹಿಸಿ ನೋಡಿ" ಎಂದರು. ಅರ್ಜಿ ಸಲ್ಲಿಸಿದ ಏಳು ತಿಂಗಳ ನಂತರ ಸರೋಜಂ ನಿಧನರಾದರು. "ಆರಂಭದಲ್ಲಿ ಅವರಿಗೆ ಭರವಸೆಯಿತ್ತು, ಆದರೆ ಅರ್ಜಿ ವಿಚಾರಣೆಗೆ ಬಾರದಿದ್ದಾಗ ಅವರು ಆ ಭರವಸೆಯನ್ನು ಕಳೆದುಕೊಂಡರು" ಎಂದು ಹೇಳಿದ್ದಾರೆ.
ಸರೋಜಂ ಅವರ ಮರಣದ ನಂತರ ಅರ್ಜಿದಾರರಾಗಿ ಮುಂದುವರಿದ ರಾಧಾಕೃಷ್ಣನ್, ಔಷಧಿಯನ್ನು ಖರೀದಿಸಲು ತಮ್ಮ ಪಿಂಚಣಿ ಮತ್ತು ಸಂಪೂರ್ಣ ಉಳಿತಾಯವನ್ನು ಬಳಸಬೇಕಾಯಿತು ಎಂದು ಹೇಳಿದರು. "ನನಗೆ ಇಂದಿಗೂ ಸದಾ ವಿಷಾದ ಮತ್ತು ಬೇಸರ ಕಾಡುತ್ತದೆ. ಏಕೆಂದರೆ ಔಷಧಿಯು ಅತ್ಯಂತ ದುಬಾರಿಯಾಗಿದ್ದರಿಂದ, ಕೆಲವೊಮ್ಮೆ ಅವರು ನಮಗೆ ತಿಳಿಯದಂತೆ ಮಾತ್ರೆ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಡುತ್ತಿದ್ದರು. ದುರದೃಷ್ಟವಶಾತ್, ಈ ರಿಟ್ ಅರ್ಜಿಯ ಪ್ರಯೋಜನ ಅವರಿಗೆ ಸಿಗಲಿಲ್ಲ. ನಮಗೆ ಅನುಕೂಲಕರ ತೀರ್ಪು ಸಿಕ್ಕರೆ ಇನ್ನುಳಿದ ಅನೇಕರಿಗೆ ಸಹಾಯವಾಗುತ್ತದೆ ಎಂಬ ಭರವಸೆ ನನಗಿದೆ" ಎಂದರು.
►ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೈಬೋಸಿಸಿಕ್ಲಿಬ್ ಏಕೆ ಮುಖ್ಯ?
ಸ್ತನ ಕ್ಯಾನ್ಸರ್ ಚಿಕಿತ್ಸೆಯು ಅದರ ಉಪತಳಿ ಹಾಗೂ ಅದು ಸ್ತನದಿಂದ ಲಿಂಫ್ ನೋಡ್‌ಗಳಿಗೆ ಅಥವಾ ದೇಹದ ಇತರ ಭಾಗಗಳಿಗೆ ಎಷ್ಟು ಹರಡಿದೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಕ್ಯಾನ್ಸರ್ ಮತ್ತೆ ಮರುಕಳಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ವಿವಿಧ ಚಿಕಿತ್ಸೆಗಳನ್ನು ಸಂಯೋಜಿಸಿ ನೀಡಲಾಗುತ್ತದೆ. ಸ್ತನದಲ್ಲಿರುವ ಟ್ಯೂಮರ್ ತೆಗೆದುಹಾಕಲು ಶಸ್ತ್ರಚಿಕಿತ್ಸೆ, ಸುತ್ತಮುತ್ತಲಿನ ಅಂಗಾಂಶಗಳಲ್ಲಿ ಕ್ಯಾನ್ಸರ್ ಮರುಕಳಿಸದಂತೆ ತಡೆಯಲು ವಿಕಿರಣ ಚಿಕಿತ್ಸೆ ಹಾಗೂ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಮತ್ತು ಅವು ಹರಡುವುದನ್ನು ತಡೆಯಲು ಹಾರ್ಮೋನ್ ಥೆರಪಿ, ಕೆಮೊಥೆರಪಿ ಅಥವಾ ಟಾರ್ಗೆಟೆಡ್ ಬಯಾಲಜಿಕಲ್ ಥೆರಪಿ ಸೇರಿದಂತೆ ವಿವಿಧ ಔಷಧೀಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
'ವರ್ಕಿಂಗ್ ಗ್ರೂಪ್ ಆನ್ ಆಕ್ಸೆಸ್ ಟು ಮೆಡಿಸಿನ್ಸ್ ಆಂಡ್ ಟ್ರೀಟ್‌ಮೆಂಟ್ಸ್' ನೀಡಿದ ಮಾಹಿತಿಯಂತೆ, ದೇಹದ ಇತರ ಭಾಗಗಳಿಗೆ ಹರಡಬಲ್ಲ 'ಲ್ಯುಮಿನಲ್ ಎ (HR+/HER2-)' ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳ ಜೀವ ಉಳಿಸಲು ರೈಬೋಸಿಸಿಕ್ಲಿಬ್ ಮತ್ತು ಅಬೆಮ್ಯಾಸಿಸಿಕ್ಲಿಬ್‌ನಂತಹ ಟಾರ್ಗೆಟೆಡ್ ಔಷಧಿಗಳ ಅಗತ್ಯವಿರುತ್ತದೆ. "HR+/HER2- ರೋಗಿಗಳಿಗೆ ಈ ಔಷಧಿಗಳು ಅತ್ಯಂತ ಪ್ರಮುಖವಾಗಿವೆ, ಏಕೆಂದರೆ ಇವುಗಳನ್ನು ಆರಂಭಿಕ ಹಂತದ ಚಿಕಿತ್ಸೆಯಲ್ಲಿ ಬಳಸಬಹುದು. ಈ ಔಷಧಿಗಳು ಪೇಟೆಂಟ್ ರಕ್ಷಣೆ ಹೊಂದಿರುವುದರಿಂದ ಇವುಗಳ ಬೆಲೆ ಅತ್ಯಂತ ದುಬಾರಿಯಾಗಿದೆ. ರೈಬೋಸಿಸಿಕ್ಲಿಬ್ ತಿಂಗಳಿಗೆ 78,469 ರೂಪಾಯಿ ವೆಚ್ಚವಾದರೆ, ಅಬೆಮ್ಯಾಸಿಸಿಕ್ಲಿಬ್ (ಎಲಿ ಲಿಲ್ಲಿ ಕಂಪೆನಿಯದ್ದು) ತಿಂಗಳಿಗೆ 47,752 ರಿಂದ 95,504 ರೂಪಾಯಿಯಷ್ಟು ವೆಚ್ಚವಾಗುತ್ತದೆ" ಎಂದು ಸಂಘಟನೆ ತಿಳಿಸಿದೆ.
ರೈಬೋಸಿಸಿಕ್ಲಿಬ್ ನಿರ್ದಿಷ್ಟ ಮಾದರಿಯ ಸ್ತನ ಕ್ಯಾನ್ಸರ್ ಗಳಿಗೆ ನೀಡಲಾಗುವ ಪ್ರಮುಖ ಹಾಗೂ ವ್ಯಾಪಕವಾಗಿ ಬಳಸಲಾಗುವ ಔಷಧಿಯಾಗಿದೆ. 'ಕ್ಯಾನ್ಸರ್ ರಿಸರ್ಚ್ ಯುಕೆ' ಪ್ರಕಾರ, ರೈಬೋಸಿಸಿಕ್ಲಿಬ್ ಸ್ತನ ಕ್ಯಾನ್ಸರ್ ಕೋಶಗಳಲ್ಲಿರುವ ನಿರ್ದಿಷ್ಟ ಪ್ರೋಟೀನ್‌ಗಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತದೆ. ಈ ಪ್ರೋಟೀನ್ ಗಳ ಕಾರ್ಯವನ್ನು ತಡೆಯುವ ಮೂಲಕ ಕ್ಯಾನ್ಸರ್ ಬೆಳೆಯುವುದನ್ನು ನಿಧಾನಗೊಳಿಸುತ್ತದೆ ಅಥವಾ ಸಂಪೂರ್ಣವಾಗಿ ತಡೆಯುತ್ತದೆ. ಇದನ್ನು ಕಟ್ಟುನಿಟ್ಟಾದ ನಿಯಮಿತ ಚಕ್ರದಂತೆ ಪ್ರತಿದಿನ ಒಮ್ಮೆ ಮಾತ್ರೆ ರೂಪದಲ್ಲಿ ಸೇವಿಸಬೇಕಾಗುತ್ತದೆ. ಸಾಮಾನ್ಯವಾಗಿ 21 ದಿನಗಳ ಕಾಲ ಸತತವಾಗಿ ಮಾತ್ರೆ ತೆಗೆದುಕೊಂಡು, ನಂತರ 7 ದಿನಗಳ ವಿರಾಮ ನೀಡಿ, ಒಟ್ಟು 28 ದಿನಗಳ ಒಂದು ಚಕ್ರವನ್ನು ಪೂರ್ಣಗೊಳಿಸಲಾಗುತ್ತದೆ. ಅಂದರೆ ರೋಗಿಯು ಪ್ರತಿ ತಿಂಗಳು 21 ಮಾತ್ರೆಗಳನ್ನು ಖರೀದಿಸಬೇಕಾಗುತ್ತದೆ.
ಅರ್ಜಿಯ ಪ್ರಕಾರ, ರೈಬೋಸಿಸಿಕ್ಲಿಬ್ ಮೇಲಿನ ಪೇಟೆಂಟ್ ಏಕಸ್ವಾಮ್ಯವು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಇಲ್ಲದಂತೆ ಮಾಡಿದೆ ಮತ್ತು ಬೆಲೆಗಳನ್ನು ಭರಿಸಲಾಗದಷ್ಟು ದುಬಾರಿಗೊಳಿಸಿದೆ. ಈ ಹೆಚ್ಚಿನ ವೆಚ್ಚವು ಸಂವಿಧಾನದ ವಿಧಿ 21ರ ಅಡಿಯಲ್ಲಿ ಸಿಗುವ ಮೂಲಭೂತ ಹಕ್ಕಾದ 'ಆರೋಗ್ಯದ ಹಕ್ಕಿನ' ಮೇಲೆ ನೇರ ಪರಿಣಾಮ ಬೀರಿದೆ.
"ಜೀವ ರಕ್ಷಕ ಔಷಧಿಯಾದ ರೈಬೋಸಿಸಿಕ್ಲಿಬ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ಪ್ರತಿಯೊಬ್ಬರಿಗೂ ಆರೋಗ್ಯದ ಹಕ್ಕು ಸಿಗುವಂತೆ ಮಾಡಲು ಸೂಕ್ತ ನಿರ್ದೇಶನ ಹಾಗೂ ಮಧ್ಯಪ್ರವೇಶವನ್ನು ಕೋರಿ ಈ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸರೋಜಂ ಅವರ ಚಿಕಿತ್ಸೆಯಲ್ಲಿ ಅಬೆಮ್ಯಾಸಿಸಿಕ್ಲಿಬ್ ಮತ್ತು ಪಾಲ್ಬೋಸಿಸಿಕ್ಲಿಬ್ ಔಷಧಿಗಳೂ ಸೇರಿದ್ದವು. ಅಬೆಮ್ಯಾಸಿಸಿಕ್ಲಿಬ್ ಎಂಬುದು ಬಾಯಿಯ ಮೂಲಕ ಸೇವಿಸುವ 'ಕೈನೇಸ್ ಇನ್ಹಿಬಿಟರ್' ಔಷಧಿಯಾಗಿದ್ದು, ಮುಂದುವರಿದ ಹಂತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ. ಇದನ್ನು ಆರಂಭಿಕ ಎಂಡೋಕ್ರೈನ್ ಚಿಕಿತ್ಸೆಯಾಗಿ ಅಥವಾ ಹಿಂದಿನ ಚಿಕಿತ್ಸೆಯ ನಂತರ ಬಳಸಲಾಗುತ್ತದೆ. ರೈಬೋಸಿಸಿಕ್ಲಿಬ್‌ನಂತೆಯೇ ಇರುವ 'CDK4/6 ಇನ್ಹಿಬಿಟರ್' ಪಾಲ್ಬೋಸಿಸಿಕ್ಲಿಬ್, 'HR-ಪಾಸಿಟಿವ್', 'HER2-ನೆಗಟಿವ್' ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ನಿಯಂತ್ರಣದಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ.
►ಕೋರ್ಟ್ ನಲ್ಲಿ ನಾಲ್ಕು ವರ್ಷಗಳ ಸುದೀರ್ಘ ಹೋರಾಟ
ಈ ಪ್ರಕರಣದಲ್ಲಿ ಎದುರಾದ ಅತ್ಯಂತ ದೊಡ್ಡ ಸವಾಲು ಎಂದರೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಉಂಟಾದ ವಿಪರೀತ ವಿಳಂಬ. ಈ ಅರ್ಜಿ ಇತ್ಯರ್ಥವಾಗದೆ ಬಾಕಿ ಇದ್ದ ಅವಧಿಯಲ್ಲಿ, ಇದನ್ನು 58 ಬಾರಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು, 40 ಬಾರಿ ಮುಂದೂಡಲಾಗಿತ್ತು ಮತ್ತು ಎಂಟು ವಿಭಿನ್ನ ನ್ಯಾಯಾಧೀಶರು ಇದರ ವಿಚಾರಣೆ ನಡೆಸಿದ್ದರು. ಅಧಿಕಾರ ವ್ಯಾಪ್ತಿಯ ಬದಲಾವಣೆಯಿಂದಾಗಿ ರದ್ದಾದ ಕಲಾಪಗಳು, ವಕೀಲರಿಂದ ಸೂಕ್ತ ಸೂಚನೆಗಳು ಸಿಗದಿರುವುದು ಮತ್ತು ಕೆಲವು ದಿನಾಂಕಗಳಂದು ನ್ಯಾಯಾಲಯ ಕಾರ್ಯನಿರ್ವಹಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ವಿಳಂಬ ಸಂಭವಿಸಿತ್ತು.
ಔಷಧಿಯ ವೆಚ್ಚವನ್ನು ಕಡಿಮೆ ಮಾಡಲು 'ಕಡ್ಡಾಯ ಪರವಾನಗಿ' ನೀಡಬೇಕು ಅಥವಾ ಪೇಟೆಂಟ್ ಬಳಸಲು ಅನುಮತಿ ನೀಡಬೇಕು ಎಂಬ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರಕಾರವು ಪ್ರಮಾಣಪತ್ರ ಸಲ್ಲಿಸಿತ್ತು. ಇಂತಹ ಮಧ್ಯಪ್ರವೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ತುರ್ತುಸ್ಥಿತಿ ಅಥವಾ ತೀವ್ರ ತುರ್ತು ಪರಿಸ್ಥಿತಿ ಎದುರಾಗಿಲ್ಲ ಎಂದು ಕೇಂದ್ರ ಸರಕಾರ ವಾದಿಸಿತ್ತು.
ಈ ಔಷಧಿಯು ದುಬಾರಿಯಾಗಿದ್ದರೂ, ಖಾಸಗಿ ರೋಗಿ ನೆರವು ಕಾರ್ಯಕ್ರಮದಡಿ ಆರಂಭಿಕ ಒಂಬತ್ತು ತಿಂಗಳ ನಂತರ ಉಚಿತವಾಗಿ ನೀಡಲಾಗುತ್ತದೆ ಎಂದು ಸರ್ಕಾರಿ ಸಂಸ್ಥೆಗಳು ಗಮನಕ್ಕೆ ತಂದವು. ಅಂತಿಮವಾಗಿ, ಪ್ರಸ್ತುತ ಸನ್ನಿವೇಶಗಳು ಚಾಲ್ತಿಯಲ್ಲಿರುವ ಪೇಟೆಂಟ್ ರಕ್ಷಣೆಗಳನ್ನು ಬದಿಗೊತ್ತುವಷ್ಟು ಗಂಭೀರವಾಗಿಲ್ಲ ಎಂದು ಹೇಳಿ, 'ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ' (DPIIT) ಕಡ್ಡಾಯ ಪರವಾನಗಿಯ ಮನವಿಯನ್ನು ತಿರಸ್ಕರಿಸಿತು.
ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಸಲ್ಲಿಸಿದ ಹೇಳಿಕೆಯ ಪ್ರಕಾರ, ಝಜ್ಜರ್ ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ (AIIMS) ಮತ್ತು ಕೋಲ್ಕತ್ತಾದ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಸಂಸ್ಥೆಗಳು ಹಾರ್ಮೋನ್-ಪಾಸಿಟಿವ್ ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ನಿರ್ವಹಣೆಗೆ ರೈಬೋಸಿಸಿಕ್ಲಿಬ್‌ಗೆ ಅತ್ಯುತ್ತಮ ಪರ್ಯಾಯವಾಗಿ 'ಪಾಲ್ಬೋಸಿಸಿಕ್ಲಿಬ್' ಔಷಧಿಯನ್ನು ಶಿಫಾರಸು ಮಾಡಿವೆ.
"ಸನ್ ಫಾರ್ಮಾ, ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಮತ್ತು ಝೈಡಸ್‌ನಂತಹ ಸ್ಥಳೀಯ ತಯಾರಕರ ಮೂಲಕ ಈ ಔಷಧಿಯ ಅಗ್ಗದ ರೂಪಾಂತರ ಲಭ್ಯವಿದೆ. ರೋಗಿಗೆ ಪಾಲ್ಬೋಸಿಸಿಕ್ಲಿಬ್‌ನ ಜೆನೆರಿಕ್ ಆವೃತ್ತಿಯ ಚಿಕಿತ್ಸೆ ನೀಡಿದರೆ, ತಿಂಗಳಿಗೆ ಸುಮಾರು 2,000 ರಿಂದ 4,000 ರೂಪಾಯಿ ವೆಚ್ಚವಾಗುತ್ತದೆ" ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ಅವರ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿತ್ತು.
ಆದರೆ, 2024ರ ಜನವರಿ 3ರಂದು ಅಮಿಕಸ್ ಕ್ಯೂರಿ ಮೈತ್ರೇಯಿ ಹೆಗ್ಡೆ ಅವರು ಕೇರಳ ಹೈಕೋರ್ಟ್‌ಗೆ ವರದಿ ಸಲ್ಲಿಸಿ, ಕೆಲವು ಔಷಧಿಗಳ ಅಗ್ಗದ ಜೆನೆರಿಕ್ ರೂಪಾಂತರಗಳು ಎಲ್ಲಾ ರೋಗಿಗಳಿಗೂ ಸೂಕ್ತ ಪರ್ಯಾಯವಾಗಬೇಕಿಲ್ಲ ಎಂದು ತಿಳಿಸಿದರು. ಹಲವು ಚಿಕಿತ್ಸೆಗಳು ಲಭ್ಯವಿದ್ದರೂ, ಅವು ತಮ್ಮದೇ ಆದ ವಿಶಿಷ್ಟ ರಾಸಾಯನಿಕ ರಚನೆ ಮತ್ತು ಟಾಕ್ಸಿಸಿಟಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಒಂದರ ಬದಲಿಗೆ ಇನ್ನೊಂದನ್ನು ಬಳಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
"ಪ್ರತಿಯೊಬ್ಬ ರೋಗಿಯ ಸ್ಥಿತಿಯೂ ಭಿನ್ನವಾಗಿರುತ್ತದೆ ಮತ್ತು ಈ ಮೂರೂ ಔಷಧಿಗಳು ರೋಗಿಗಳಲ್ಲಿ ವಿಭಿನ್ನವಾಗಿ ಸ್ಪಂದಿಸುತ್ತವೆ. ಹೀಗಾಗಿ ರೈಬೋಸಿಸಿಕ್ಲಿಬ್ ಮತ್ತು ಅಬೆಮ್ಯಾಸಿಸಿಕ್ಲಿಬ್ ಸೂಚಿಸಲಾದ 'HR+/HER2-' ಸ್ತನ ಕ್ಯಾನ್ಸರ್ ರೋಗಿಗಳ ಆರೋಗ್ಯದ ಮೇಲೆ ಪಾಲ್ಬೋಸಿಸಿಕ್ಲಿಬ್‌ನ ಜೆನೆರಿಕ್ ಆವೃತ್ತಿಗಳು ಪರಿಣಾಮಕಾರಿಯಾಗಲಾರವು" ಎಂದು ಅಮಿಕಸ್ ಕ್ಯೂರಿ ವರದಿ ಹೇಳಿದೆ.
ವೈದ್ಯಕೀಯ ಆಯ್ಕೆಗಳು ರೋಗಿಯ ಹೃದಯದ ಆರೋಗ್ಯ ಅಥವಾ ಕ್ಯಾನ್ಸರ್‌ನ ಹಂತದಂತಹ ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತವೆ. ಕೇವಲ ವೆಚ್ಚದ ಆಧಾರದ ಮೇಲೆ ಔಷಧಿಯನ್ನು ಬದಲಾಯಿಸುವುದು ಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವರದಿ ಎತ್ತಿ ತೋರಿಸಿದೆ. ದುಬಾರಿ ಬೆಲೆಯ ಪೇಟೆಂಟ್ ಹೊಂದಿರುವ ಔಷಧಿಗಳನ್ನು ಕ್ಷೇಮಾಭಿವೃದ್ಧಿ ಯೋಜನೆಗಳಲ್ಲಿ ಸೇರಿಸಲು ಸರಕಾರದ ನಿರಾಕರಣೆಯು ಮೂಲಭೂತ ಆರೋಗ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದರು.
►ಸ್ತನ ಕ್ಯಾನ್ಸರ್ ಮತ್ತು ಹೆಚ್ಚುತ್ತಿರುವ ಆತಂಕಗಳು
'ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್' ಪ್ರಕಾರ, ಮಹಿಳೆಯರಲ್ಲಿ ಅತ್ಯಂತ ಹೆಚ್ಚಾಗಿ ಪತ್ತೆಯಾಗುವ ಕ್ಯಾನ್ಸರ್ ಎಂದರೆ ಸ್ತನ ಕ್ಯಾನ್ಸರ್. ಇದು ಜಗತ್ತಿನ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯಂತೆ, 2020ರಲ್ಲಿ ವಿಶ್ವದಾದ್ಯಂತ 23 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದವು ಮತ್ತು 6.85 ಲಕ್ಷ ಜನರು ಈ ರೋಗದಿಂದ ಮೃತಪಟ್ಟಿದ್ದರು. ಇದಲ್ಲದೆ, 2020ರ ಅಂತ್ಯದ ವೇಳೆಗೆ, ಕಳೆದ ಐದು ವರ್ಷಗಳಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾದ 78 ಲಕ್ಷ ಮಹಿಳೆಯರಿದ್ದರು. ಇದು ಜಾಗತಿಕವಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 158 ದೇಶಗಳ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. 2024ರಲ್ಲಿ ಈ ರೋಗದಿಂದಾಗಿ ಜಗತ್ತಿನಾದ್ಯಂತ ಸುಮಾರು 6.94 ಲಕ್ಷ ಜನರು ಸಾವಿಗೀಡಾಗಿದ್ದಾರೆ.
'ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ ಪ್ರೋಗ್ರಾಂ' (NCRP) ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಸುಮಾರು 2.13 ಲಕ್ಷದಿಂದ 2.4 ಲಕ್ಷಕ್ಕೆ ಏರಿಕೆಯಾಗಿವೆ. ಅಲ್ಲದೆ, ಸ್ತನ ಕ್ಯಾನ್ಸರ್ ನಿಂದ ಸಂಭವಿಸುವ ಸಾವುಗಳ ಸಂಖ್ಯೆ 2021ರಲ್ಲಿ ಸುಮಾರು 91,700 ರಷ್ಟಿದ್ದು, 2025ರ ವೇಳೆಗೆ 1.03 ಲಕ್ಷಕ್ಕಿಂತಲೂ ಹೆಚ್ಚಾಗಿದೆ ಎಂದು ಎನ್‌ಸಿಆರ್‌ಪಿ ತಿಳಿಸಿದೆ.
2026ರ ಫೆಬ್ರವರಿ ಆರಂಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿದ ಅಧಿಕೃತ ದತ್ತಾಂಶದ ಪ್ರಕಾರ, ದೇಶದಲ್ಲಿ ಪ್ರತಿವರ್ಷ ಹೊಸದಾಗಿ ಸುಮಾರು 2.4 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಸೌಜನ್ಯ: thenewsminute.com