ಗಾಂಧಿಯಿಂದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ವರೆಗೆ: ಭಾರತದಲ್ಲಿ ಉಪವಾಸ ಸತ್ಯಾಗ್ರಹಗಳ ಯಶಸ್ಸಿನ ಕುರಿತು ಇತಿಹಾಸ ಏನು ಹೇಳುತ್ತದೆ?

ಅಪರ್ಣಾ ಕಪಾಡಿಯಾ - scroll. in ವರದಿ

Update: 2026-07-24 22:10 IST

Photo Credit : scroll.in

ದಿಲ್ಲಿಯಲ್ಲಿ ಮೂರು ವಾರಗಳಿಗೂ ಹೆಚ್ಚು ಕಾಲ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಗುರುವಾರ ರಾತ್ರಿ ಅಂತ್ಯಗೊಳಿಸಿದರು. ಲಡಾಖ್‌ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಹಿಮಾಲಯ ಪ್ರದೇಶದ ಸೂಕ್ಷ್ಮ ಪರಿಸರದತ್ತ ಗಮನ ಸೆಳೆಯಬೇಕು ಎಂದು ಅವರು ಈ ಮುಂಚೆಯೂ ಹಲವು ಶಾಂತಿಯುತ ಪ್ರತಿಭಟನೆ ಮತ್ತು ಉಪವಾಸಗಳನ್ನು ನಡೆಸಿದ್ದರು.

ಆದರೆ, ಈ ಬಾರಿಯ ಹೋರಾಟದ ವಿಚಾರವೇ ಬೇರೆಯಾಗಿತ್ತು.

ಮೇ ತಿಂಗಳಲ್ಲಿ, ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇದರಿಂದಾಗಿ ಜೂನ್ನಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಬೇಕಾಯಿತು. ಇದು ದೇಶದ ಇತ್ತೀಚಿನ ಅತಿ ದೊಡ್ಡ ಪರೀಕ್ಷಾ ಅಕ್ರಮಗಳಲ್ಲಿ ಒಂದಾಗಿದೆ.

ಈ ಘಟನೆ ಖಂಡಿಸಿ, ರಚನೆಯಾದ ಕೆಲವೇ ವಾರಗಳಲ್ಲಿ ದೇಶಾದ್ಯಂತ ಸದ್ದು ಮಾಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಯುವ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಅಕ್ರಮದ ಹೊಣೆ ಹೊರಬೇಕು ಹಾಗೂ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು ಎಂದು ಅವರು ಆಗ್ರಹಿಸಿದ್ದರು. ಅವರ ಬೆಂಬಲಕ್ಕೆ ನಿಂತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಸತ್ಯಾಗ್ರಹ ಅಥವಾ ಉಪವಾಸ ಪ್ರತಿಭಟನೆ ಎನ್ನುವುದು ಭಾರತದಲ್ಲೇ ಹುಟ್ಟಿದ್ದಲ್ಲವಾದರೂ, ದೇಶ ಅದನ್ನು ತನ್ನದೇ ಆದ ವಿಶೇಷ ರೀತಿಯಲ್ಲಿ ಅಳವಡಿಸಿಕೊಂಡಿದೆ. ಭಾರತದ ಪ್ರಮುಖ ಉಪವಾಸ ಸತ್ಯಾಗ್ರಹಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ದೇಶದ ಇತಿಹಾಸವನ್ನು ಹೊಸದಾಗಿ ಬರೆಯಬಹುದು. ಏಕೆಂದರೆ, ಇವು ಕೇವಲ ಸಾಮಾನ್ಯ ಪ್ರತಿಭಟನೆಗಳಾಗಿರದೆ, ಭಾರತೀಯ ಆಡಳಿತ ವ್ಯವಸ್ಥೆ ಮತ್ತು ಜನರ ನಡುವಿನ ಪ್ರಮುಖ ಸಂಘರ್ಷಗಳಾಗಿದ್ದವು.

ಇಂತಹ ಪ್ರಮುಖ ಉಪವಾಸ ಸತ್ಯಾಗ್ರಹಗಳ ಪಟ್ಟಿ ಸಾಕಷ್ಟು ದೀರ್ಘವಾಗಿದೆ. 1960ರ ದಶಕದಲ್ಲಿ ಅಖಂಡ ಪಂಜಾಬ್ನಿಂದ ಪಂಜಾಬಿ ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ರೂಪುಗೊಳ್ಳಲು ಸಂತ ಫತೇಹ್ ಸಿಂಗ್ ನಡೆಸಿದ ಉಪವಾಸ ಸತ್ಯಾಗ್ರಹಗಳು ಕಾರಣವಾದವು. 1970ರ ಚಿಪ್ಕೋ ಚಳವಳಿಯಿಂದ ಹಿಡಿದು 1990ರ ದಶಕದಲ್ಲಿ ತೆಹ್ರಿ ಆಣೆಕಟ್ಟು ವಿರುದ್ಧ ಸುಂದರ್‌ ಲಾಲ್ ಬಹುಗುಣ ಅವರು ನಡೆಸಿದ 45 ಮತ್ತು 74 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹಗಳು, ನರ್ಮದಾ ಆಣೆಕಟ್ಟುಗಳ ವಿರುದ್ಧ ಮೇಧಾ ಪಾಟ್ಕರ್ ನಡೆಸಿದ ಹೋರಾಟಗಳು ಪ್ರಮುಖವಾದವು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (AFSPA) ವಿರುದ್ಧ ಇರೋಮ್ ಶರ್ಮಿಳಾ ನಡೆಸಿದ 16 ವರ್ಷಗಳ ಬಲವಂತದ ಆಹಾರ ಸೇವನೆಯ ಉಪವಾಸ, 2011ರಲ್ಲಿ ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹ ಹಾಗೂ 2018ರಲ್ಲಿ ಗಂಗಾ ನದಿಯ ಉಳಿವಿಗಾಗಿ ಜಿ.ಡಿ. ಅಗರ್ವಾಲ್ ನಡೆಸಿದ 111 ದಿನಗಳ ಉಪವಾಸ ಸತ್ಯಾಗ್ರಹಗಳು ಈ ಸಾಲಿನಲ್ಲಿ ನಿಲ್ಲುತ್ತವೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧೀವಾದಿ ಪೊಟ್ಟಿ ಶ್ರೀರಾಮುಲು ನಡೆಸಿದ ಹೋರಾಟಕ್ಕಿಂತ ಹೆಚ್ಚಿನ ಪರಿಣಾಮ ಬೀರಿದ ಪ್ರಸಂಗ ಮತ್ತೊಂದಿಲ್ಲ. 1952ರಲ್ಲಿ ಅಂದಿನ ಮದ್ರಾಸ್ ರಾಜ್ಯದಲ್ಲಿದ್ದ ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ಆಂಧ್ರ ರಾಜ್ಯಕ್ಕೆ ಆಗ್ರಹಿಸಿ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಉಪವಾಸದ 58ನೇ ದಿನದಂದು ಅವರು ಮೃತರಾದರು. ಅವರ ನಿಧನವು ಭಾರತದ ಭೂಪಟವನ್ನು ಭಾಷಾವಾರು ಆಧಾರದ ಮೇಲೆ ಮರುರಚಿಸುವಂತೆ ಮಾಡಿತು.

ಈ ದೀರ್ಘ ಇತಿಹಾಸದ ಹೊರತಾಗಿಯೂ, ಪ್ರಸ್ತುತ ಸಾಗುತ್ತಿರುವ ಸತ್ಯಾಗ್ರಹಗಳು 'ಉಪವಾಸ ಸತ್ಯಾಗ್ರಹ ಎಂಬುದು ಇಂದಿನ ಕಾಲಕ್ಕೆ ಅಪ್ರಸ್ತುತ' ಎಂಬ ಚರ್ಚೆಯನ್ನು ಹುಟ್ಟುಹಾಕಿವೆ. ಆಧುನಿಕ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಉತ್ತಮ ಮಾರ್ಗಗಳಿಲ್ಲವೇ ಎಂದು ಸಂಶಯವಾದಿಗಳು ಪ್ರಶ್ನಿಸುತ್ತಿದ್ದಾರೆ. ಜನರ ಮರೆವು ಮತ್ತು ನಿರಾಸಕ್ತಿ ಎಲ್ಲೆಡೆ ಇಲ್ಲದಿದ್ದರೂ, ಉಪವಾಸ ಸತ್ಯಾಗ್ರಹಗಳ ಇತಿಹಾಸ, ತರ್ಕ ಹಾಗೂ ಜನಪ್ರಿಯತೆಯನ್ನು ಮರುಪರಿಶೀಲಿಸುವಷ್ಟು ವ್ಯಾಪಕವಾಗಿದೆ.

ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧ ಉಪವಾಸ ಸತ್ಯಾಗ್ರಹಿ ಎಂದರೆ ಮೋಹನ್‌ ದಾಸ್ ಕರಮ್‌ ಚಂದ್ ಗಾಂಧಿ (1869-1948). ಇಂದಿಗೂ ಗಾಂಧೀಜಿಯವರೇ ಈ ಹೋರಾಟದ ಮಾದರಿಯ ಸಂಕೇತ. ಪ್ರಸ್ತುತ ಪ್ರತಿಭಟನೆಯ ಆರಂಭದಲ್ಲೇ ಬೆಂಬಲಿಗರು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು "ಆಧುನಿಕ ಗಾಂಧಿ" ಎಂದು ಕರೆದಿದ್ದರು. ಸರಕಾರದ ಪ್ರತಿನಿಧಿಗಳು ಈ ಹೋಲಿಕೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ಹಸಿವು ಎಂಬುದು ನೈತಿಕ ಒತ್ತಡ ಹೇರುವ ಅಸ್ತ್ರವಾಗಬಹುದು ಎಂಬ ಗಾಂಧೀಜಿಯವರ ನಂಬಿಕೆ ಕಾಲಾನಂತರದಲ್ಲಿ ಬೆಳೆಯಿತು. ಇದು ಅವರ ವೈಯಕ್ತಿಕ ನಂಬಿಕೆ ಮತ್ತು ಆಹಾರ ಪದ್ಧತಿಯ ಆಲೋಚನೆಗಳೊಂದಿಗೆ ಬೆಸೆದುಕೊಂಡಿತ್ತು. ಇದು ಭಾರತದಲ್ಲಿ ಅಲ್ಲ, ಬದಲಿಗೆ 1893ರಿಂದ 1914ರವರೆಗೆ ಎರಡು ದಶಕಗಳ ಕಾಲ ಅವರು ನೆಲೆಸಿದ್ದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಯಿತು. ಅಲ್ಲಿಂದ ಗಾಂಧೀಜಿಯವರ ಉಪವಾಸ ಸತ್ಯಾಗ್ರಹಗಳು ಒಂದಕ್ಕೊಂದು ಹೆಣೆದುಕೊಂಡ ವಿವಿಧ ಹಂತಗಳಲ್ಲಿ ಬೆಳೆದವು. ಮೊದಲು ದೇಹದ ಮೇಲಿನ ನಿಯಂತ್ರಣವಾಗಿ, ನಂತರ ಸ್ವಂತ ಕುಟುಂಬದ ಒಳಗಿನ ತಿದ್ದುವ ಅಸ್ತ್ರವಾಗಿ, ಆಮೇಲೆ ರಾಜಕೀಯದಲ್ಲಿ ಮತ್ತು ಕೊನೆಗೆ ಭಾರತದಲ್ಲಿ ರಾಷ್ಟ್ರೀಯ ಹೋರಾಟದ ರೂಪವಾಗಿ ಹೊರಹೊಮ್ಮಿದವು.

ಭಾರತದಲ್ಲಿ ಈ ಹೋರಾಟದ ಮಾದರಿಯ ಮೊದಲ ಸಾರ್ವಜನಿಕ ಪ್ರಯೋಗ ನಡೆದದ್ದು 1918ರಲ್ಲಿ. ಆಗ ಅವರ ಗುರಿ ಬ್ರಿಟಿಷ್ ಸರಕಾರವಾಗಿರಲಿಲ್ಲ, ಬದಲಿಗೆ ಒಬ್ಬ ಸ್ನೇಹಿತನಾಗಿದ್ದರು. ಹೆಚ್ಚಿನ ವೇತನಕ್ಕೆ ಆಗ್ರಹಿಸಿ ಅಹಮದಾಬಾದ್ನ ಸುಮಾರು 10,000 ಗಿರಣಿ ಕಾರ್ಮಿಕರು ನಡೆಸುತ್ತಿದ್ದ ಹೋರಾಟದ ಬೆಂಬಲಕ್ಕೆ ಗಾಂಧೀಜಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಆ ಗಿರಣಿಗಳ ಮಾಲೀಕರ ನೇತೃತ್ವ ವಹಿಸಿದ್ದವರು ಗಾಂಧೀಜಿಯವರ ಆರ್ಥಿಕ ಬೆಂಬಲಿಗ ಹಾಗೂ ಗುಜರಾತಿಯಾಗಿದ್ದ ಉದ್ಯಮಿ ಅಂಬಾಲಾಲ್ ಸಾರಾಭಾಯ್.

25 ದಿನಗಳ ಕಾಲ ನಡೆದ ಕಾರ್ಮಿಕರ ಮುಷ್ಕರ ಮತ್ತು ಗಾಂಧೀಜಿಯವರ ಉಪವಾಸ ಸತ್ಯಾಗ್ರಹವು ಒಂದು ಒಪ್ಪಂದದೊಂದಿಗೆ ಮುಕ್ತಾಯವಾಯಿತು. ಗಿರಣಿ ಮಾಲೀಕರು ನೀಡಲು ಮುಂದಾಗಿದ್ದ ಶೇ. 20ರಷ್ಟು ವೇತನ ಏರಿಕೆಯ ಬದಲಿಗೆ ಕಾರ್ಮಿಕರು ಶೇ. 50ರಷ್ಟು ಏರಿಕೆಗೆ ಆಗ್ರಹಿಸಿದ್ದರು. ಗಾಂಧೀಜಿ ಅವರನ್ನು ಶೇ. 35ರಷ್ಟು ಏರಿಕೆಗೆ ಒಪ್ಪಿಕೊಳ್ಳುವಂತೆ ತಿಳಿಸಿದರು.

ಅದಾದ ಒಂದು ವರ್ಷದ ನಂತರ, ಅಂದರೆ 1919ರಲ್ಲಿ ಗಾಂಧೀಜಿಯವರ ಪ್ರಮುಖ ರಾಷ್ಟ್ರೀಯ ಉಪವಾಸ ಸತ್ಯಾಗ್ರಹ ನಡೆಯಿತು. ಇದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವರು ಕರೆ ನೀಡಿದ ಮೊದಲ ಪ್ರಮುಖ ದೇಶವ್ಯಾಪಿ ಮುಷ್ಕರದ ಆರಂಭವಾಗಿತ್ತು. ಮೊದಲ ಮಹಾಯುದ್ಧ ಮುಗಿದ ಕೆಲವು ತಿಂಗಳುಗಳ ನಂತರ, ಅಂದರೆ 1919ರ ಮಾರ್ಚ್ ನಲ್ಲಿ ಜಾರಿಗೆ ತರಲಾದ 'ರೌಲಟ್ ಕಾಯ್ದೆ' ಈ ಹೋರಾಟಕ್ಕೆ ಪ್ರಚೋದನೆ ನೀಡಿತ್ತು.

ರೌಲಟ್ ಕಾಯ್ದೆಯು ಯಾವುದೇ ವಿಚಾರಣೆ ಇಲ್ಲದೆ ಜನರನ್ನು ಬಂಧಿಸಲು ಮತ್ತು ಜ್ಯೂರಿ ಇಲ್ಲದೆ ದೇಶದ್ರೋಹದ ಪ್ರಕರಣಗಳ ವಿಚಾರಣೆ ನಡೆಸಲು ಸರಕಾರಕ್ಕೆ ಅಧಿಕಾರ ನೀಡಿತು. ಜೊತೆಗೆ, ಆಗಲೇ ಸೀಮಿತವಾಗಿದ್ದ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿತು. ಬ್ರಿಟನ್ನ ಯುದ್ಧದ ಪ್ರಯತ್ನಗಳಿಗೆ ಬೆಂಬಲ ನೀಡಿದ್ದ ಗಾಂಧೀಜಿ ಸೇರಿದಂತೆ ಭಾರತೀಯರಿಗೆ, ನಾಗರಿಕ ಸ್ವಾತಂತ್ರ್ಯದ ಮೇಲಿನ ಈ ನಿರ್ಬಂಧಗಳು ದೊಡ್ಡ ನಂಬಿಕೆದ್ರೋಹವಾಗಿ ಕಂಡವು.

ಗಾಂಧೀಜಿಯವರು 1919ರ ಎಪ್ರಿಲ್ 6ರಂದು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ 'ಹರತಾಳ' ಹಾಗೂ ಪ್ರಾರ್ಥನೆ ಮತ್ತು ಉಪವಾಸದ ದಿನ ಎಂದು ಘೋಷಿಸಿದರು. ಇದಕ್ಕೆ ದೊರೆತ ಅಭೂತಪೂರ್ವ ಬೆಂಬಲದಿಂದಾಗಿ ದೇಶಾದ್ಯಂತ ಲಕ್ಷಾಂತರ ಜನರು ಸಾರ್ವಜನಿಕ ಸ್ಥಳಗಳಲ್ಲಿ ಒಗ್ಗೂಡಿದರು.

ನಾಯಕರ ಭಾಷಣಗಳಿಗಿಂತ ಹೆಚ್ಚಾಗಿ ಸಾಂಕೇತಿಕ ಚಟುವಟಿಕೆಗಳ ಮೂಲಕ ಇಡೀ ದಿನವನ್ನು ರೂಪಿಸಿದ್ದು ಈ ಹೋರಾಟದ ವಿಶೇಷವಾಗಿತ್ತು. ದೇಶವ್ಯಾಪಿ 24 ಗಂಟೆಗಳ ಉಪವಾಸ, ಅಂಗಡಿ-ಮುಂಗಟ್ಟುಗಳ ಬಂದ್, ಶೋಕದ ಸಂಕೇತಗಳು (ಬಾಂಬೆಯಲ್ಲಿ ಕಪ್ಪು ಬಾವುಟ, ಅಲಹಾಬಾದ್ನಲ್ಲಿ ಕಪ್ಪು ಪಟ್ಟಿ) ಹಾಗೂ ಎಲ್ಲೆಡೆ ಸರ್ವಧರ್ಮ ಸಭೆಗಳು ನಡೆದವು. ಸಾಂಕೇತಿಕತೆ ಮತ್ತು ಸಾರ್ವಜನಿಕರನ್ನು ಒಂದೆಡೆ ಸೇರಿಸಿದ ಈ ಶೈಲಿಯೇ ಮುಂದಿನ ಗಾಂಧೀವಾದಿ ಪ್ರತಿಭಟನೆಗಳಿಗೆ ಮಾದರಿಯಾಯಿತು.

ಗಾಂಧೀಜಿಯವರ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆಗಳನ್ನು ಹಿಂತಿರುಗಿ ನೋಡಿದರೆ, ಇಂದು ಕಾಣಲು ಸಿಗದೇ ಇರುವ ಒಂದು ಶಿಸ್ತು ಅಲ್ಲಿ ಎದ್ದು ಕಾಣುತ್ತದೆ. ಅವುಗಳಿಗೆ ಅತ್ಯಂತ ನಿಖರವಾದ ಯೋಜನೆ ಮತ್ತು ಸಂಘಟನೆ ಅಗತ್ಯವಾಗಿತ್ತು. ಅವರು ಆರಂಭಿಸಿದ ಪ್ರತಿ ಉಪವಾಸ ಮತ್ತು ಚಳವಳಿಯೂ ನಿರ್ದಿಷ್ಟ ಬೇಡಿಕೆಗಳನ್ನು ಹೊಂದಿತ್ತು. ವ್ಯವಸ್ಥಿತವಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಣೆ ಮಾಡಲಾಗುತ್ತಿತ್ತು ಹಾಗೂ ಭಾಗವಹಿಸುವಿಕೆಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗುತ್ತಿತ್ತು. ಬ್ರಿಟಿಷ್ ವೈಸರಾಯ್ ಗೆ ಗಾಂಧೀಜಿ ನೇರವಾಗಿ ಪತ್ರ ಬರೆಯುವ ಮೂಲಕ ಅಧಿಕಾರಸ್ಥರಿಗೆ ಮೊದಲೇ ಮಾಹಿತಿ ನೀಡುತ್ತಿದ್ದರು. ಮಾಧ್ಯಮಗಳಿಗೂ ವಿವರಗಳನ್ನು ತಲುಪಿಸಲಾಗುತ್ತಿತ್ತು.

ಅಹಿಂಸೆ ಎಂಬುದು ಪ್ರತಿಯೊಂದು ಹೋರಾಟಕ್ಕೂ ಅತ್ಯಗತ್ಯ ಷರತ್ತಾಗಿತ್ತು. ದೇಶದಾದ್ಯಂತ ಜನಸಾಮಾನ್ಯರನ್ನು ಒಳಗೊಂಡ ಅವರ ಮೊದಲ ಪ್ರಮುಖ ಪ್ರತಿಭಟನೆಯಾದ ರೌಲಟ್ ಸತ್ಯಾಗ್ರಹದಲ್ಲೂ ಈ ಅಂಶಗಳಿದ್ದವು. ಎಪ್ರಿಲ್ 6ರಂದು ಪ್ರಮುಖ ಪ್ರತಿಭಟನೆ ನಿಗದಿಯಾಗಿದ್ದರೂ, ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಗಾಂಧೀಜಿಯವರು ಫೆಬ್ರವರಿಯಲ್ಲೇ ದೇಶಾದ್ಯಂತ ಪ್ರವಾಸ ಮಾಡಿದ್ದರು.

ಶ್ರೀಮಂತ ಬೆಂಬಲಿಗರಿಂದ ಹಣಕಾಸಿನ ನೆರವು ಸಿಕ್ಕಿತ್ತು. ಉಪವಾಸವನ್ನು "ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ"ದ ಕಾರ್ಯವೆಂದು ವ್ಯಾಖ್ಯಾನಿಸಿ, ಸತ್ಯಾಗ್ರಹದ ದಿನವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ಕರಪತ್ರಗಳ ಮೂಲಕ ಜನರಿಗೆ ನಿಖರ ಸೂಚನೆ ನೀಡಲಾಗಿತ್ತು. ಇಡೀ ದೇಶ ಸಿದ್ಧತೆ ನಡೆಸಲು ಕಾಲಾವಕಾಶ ನೀಡುವ ಸಲುವಾಗಿ ಮಾರ್ಚ್ 28ರಂದೇ, ಅಂದರೆ ಒಂದು ವಾರ ಮುಂಚಿತವಾಗಿಯೇ ಸತ್ಯಾಗ್ರಹದ ದಿನಾಂಕವನ್ನು ಘೋಷಿಸಲಾಗಿತ್ತು.

ಗಾಂಧೀಜಿಯವರ ಎಲ್ಲಾ ಉಪವಾಸಗಳೂ ಬ್ರಿಟಿಷ್ ಆಡಳಿತದ ವಿರುದ್ಧವೇ ಆಗಿರಲಿಲ್ಲ. ಅಹಮದಾಬಾದ್ ಗಿರಣಿ ಕಾರ್ಮಿಕರ ಬೆಂಬಲದಂತೆ, ಹೆಚ್ಚಿನ ಉಪವಾಸಗಳು ದೇಶದ ಒಳಗಿನ ಸಮಾಜವನ್ನು ಉದ್ದೇಶಿಸಿದ್ದಾಗಿದ್ದವು. ಗಾಂಧೀಜಿಯವರು ಹೆಚ್ಚಾಗಿ ಉಪವಾಸ ಕೂತಿದ್ದು ಹಿಂದೂ-ಮುಸ್ಲಿಂ ಐಕ್ಯತೆಗಾಗಿ. ಇವು ಅವರ ಸುದೀರ್ಘ ಉಪವಾಸಗಳಲ್ಲಿ ಸೇರಿದ್ದು, ಬ್ರಿಟಿಷ್ ಆಡಳಿತಕ್ಕಿಂತ ಹೆಚ್ಚಾಗಿ ಭಾರತದ ಜನರನ್ನು ಜಾಗೃತಗೊಳಿಸುವ ಉದ್ದೇಶ ಹೊಂದಿದ್ದವು.

1924ರಲ್ಲಿ ವಾಯುವ್ಯ ಗಡಿ ಪ್ರಾಂತ್ಯದ ಕೊಹಾಟ್ ನಲ್ಲಿ ಕೋಮು ಗಲಭೆ ನಡೆದಾಗ, ಅದನ್ನು ಖಂಡಿಸಿ ದೆಹಲಿಯಲ್ಲಿ ಗಾಂಧೀಜಿ 21 ದಿನಗಳ ಕಾಲ ಉಪವಾಸ ಮಾಡಿದರು. ಅವರ ಜೀವನದ ಕೊನೆಯ ದಿನಗಳಲ್ಲಿ ದೇಶ ವಿಭಜನೆಯ ಹಿಂಸಾಚಾರದ ವಿರುದ್ಧವೂ ಉಪವಾಸ ಸತ್ಯಾಗ್ರಹಗಳು ನಡೆದವು. 1947ರ ಸೆಪ್ಟೆಂಬರ್ನಲ್ಲಿ ಕಲ್ಕತ್ತಾದಲ್ಲಿ ಅವರು ಕೈಗೊಂಡ ಉಪವಾಸದಿಂದ ಕೆಲವು ದಿನಗಳಲ್ಲೇ ಹಿಂಸಾಚಾರ ನಿಂತಿತು. 1948ರ ಜನವರಿಯಲ್ಲಿ, ತಮ್ಮ ಹತ್ಯೆಗೆ ಕೆಲವು ವಾರಗಳ ಮೊದಲು ದೆಹಲಿಯಲ್ಲಿ ಉಪವಾಸ ಕೈಗೊಂಡರು. ಪ್ರತಿ ಬಾರಿಯೂ ಶಾಂತಿ ಮರುಸ್ಥಾಪನೆಯಾಯಿತು. ಆದರೆ, ಆ ವೇಳೆಗೆ ಸೃಷ್ಟಿಯಾಗಿದ್ದ ಮತೀಯ ಕಂದಕ ಗಾಂಧೀಜಿಯವರ ಉಪವಾಸಕ್ಕೂ ನಿಲುಕದಷ್ಟು ಆಳವಾಗಿ ಬೆಳೆದಿತ್ತು.

ಪ್ರಸ್ತುತ ಸಂದರ್ಭದಲ್ಲಿ ಗಾಂಧೀಜಿಯವರ ಉಪವಾಸ ಸತ್ಯಾಗ್ರಹಗಳ ಬಗ್ಗೆ ಯೋಚಿಸಲು ಇದು ಪ್ರಮುಖ ಕಾರಣವಾಗಿದೆ. ಗಾಂಧೀಜಿಯವರು ಇಟ್ಟುಕೊಂಡಿದ್ದ ನಿರ್ದಿಷ್ಟ ಗುರಿಗಳ ಆಧಾರದ ಮೇಲೆ ಅಳೆದರೆ, ಅವು ಸಂಪೂರ್ಣವಾಗಿ ಯಶಸ್ವಿಯಾಗಿದ್ದು ತೀರ ವಿರಳ. ಅಹಮದಾಬಾದ್ ಉಪವಾಸವು ಕಾರ್ಮಿಕರ ವೇತನದ ವಿಚಾರದಲ್ಲಿ ಸಂಧಾನದೊಂದಿಗೆ ಮುಕ್ತಾಯವಾಯಿತು. ಸ್ವಾತಂತ್ರ್ಯ ಸಂಗ್ರಾಮದ ಚಾರಿತ್ರಿಕ ಘಟನೆಯಾದ 1930ರ ಉಪ್ಪಿನ ಸತ್ಯಾಗ್ರಹವೂ ಸಹ ಉಪ್ಪಿನ ಮೇಲಿನ ತೆರಿಗೆಯನ್ನು ರದ್ದುಗೊಳಿಸಲು ಸಾಧ್ಯವಾಗಲಿಲ್ಲ. ಹಾಗಾದರೆ, ಈಗಿನ ಸತ್ಯಾಗ್ರಹಗಳ ಬಗ್ಗೆ ಅನುಮಾನ ಪಡುವವರು ಹೇಳುತ್ತಿರುವುದು ನಿಜವೆಂದು ಈ ಇತಿಹಾಸವೇ ನಿರೂಪಿಸುತ್ತಿದೆಯೇ?

ಇದಕ್ಕೆ ಉತ್ತರ 'ಇಲ್ಲ' ಎಂಬುದು ಸ್ಪಷ್ಟ. ಉಪವಾಸ ಸತ್ಯಾಗ್ರಹಗಳನ್ನು ಅವುಗಳ ಫಲಿತಾಂಶಗಳ ಆಧಾರದ ಮೇಲೆ ಅಳೆಯುವುದಕ್ಕಿಂತ, ಅವು ನಡೆದ ಸಂದರ್ಭ ಮತ್ತು ಸನ್ನಿವೇಶಗಳನ್ನು ಆಧರಿಸಿ ನೋಡುವುದು ಮುಖ್ಯ. ಸುಮಾರು 1916ರಿಂದ ಆರಂಭಿಸಿ ಕೇವಲ ಎರಡೇ ದಶಕಗಳಲ್ಲಿ, ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷ್ ಆಡಳಿತಕ್ಕೆ ಪ್ರಮುಖ ಎದುರಾಳಿಯಾಗಿ ಬೆಳೆದುನಿಂತಿತು. ಅವರು ಲಕ್ಷಾಂತರ ಸದಸ್ಯರನ್ನು ಹೊಂದಿದ ಪಕ್ಷವನ್ನು ಸಂಘಟಿಸಿದರು. ಅತ್ಯಂತ ಸಮರ್ಥ ನಾಯಕರನ್ನೊಳಗೊಂಡ ಬಹುಮುಖಿ ಪಡೆಯನ್ನು ತಮ್ಮೊಂದಿಗೆ ಬೆಳೆಸಿದರು. ಬ್ರಿಟಿಷರ ಕಾಲದ ಸಣ್ಣ ಮತ್ತು ದೊಡ್ಡ ಚುನಾವಣೆಗಳಲ್ಲಿ ಇತರೆ ಸ್ಪರ್ಧಿಗಳನ್ನು ಸೋಲಿಸಿದರು. ಅಂತಿಮವಾಗಿ ಬ್ರಿಟಿಷರು ನಿರ್ಗಮಿಸಿದಾಗ ಅಧಿಕಾರ ಹಸ್ತಾಂತರ ಪಡೆಯುವ ಅರ್ಹತೆಯನ್ನು ಕಾಂಗ್ರೆಸ್ಗೆ ತಂದುಕೊಟ್ಟರು.

ಈ ಸಾಧನೆಯ ನೈಜ ಸತ್ಯಗಳನ್ನು ಒಪ್ಪಿಕೊಳ್ಳಲು ಯಾರೂ ಗಾಂಧೀವಾದಿಯೇ ಆಗಬೇಕಿಲ್ಲ.

ಗಾಂಧೀಜಿಯವರು ಹೋರಾಟಗಳನ್ನು ಸಂಘಟಿಸುತ್ತಾ ಸಂಘಟನೆಯ ಕೇಂದ್ರ ಬಿಂದುವಾದರು. ಈ ಚಳವಳಿಯ ಕೇಂದ್ರಭಾಗದಲ್ಲಿ ಸಾರ್ವಜನಿಕ ಪ್ರತಿಭಟನೆಗಳನ್ನು ಹೇಗೆ ಮುನ್ನಡೆಸಬೇಕು ಎಂಬ ಸ್ಪಷ್ಟ ದೂರದೃಷ್ಟಿಯಿತ್ತು. ಈ ಹೋರಾಟದಲ್ಲಿ ಗಾಂಧೀಜಿಯವರ ಉಪವಾಸ ಸತ್ಯಾಗ್ರಹಗಳ ಯಶಸ್ಸನ್ನು ಬ್ರಿಟಿಷರ ಮನಸ್ಸು ಬದಲಾಯಿಸುವಲ್ಲಿ ಅಳೆಯಲಾಗುವುದಿಲ್ಲ. ಏಕೆಂದರೆ ಅವು ಬ್ರಿಟಿಷರ ಮನಸ್ಸನ್ನು ಬದಲಾಯಿಸಿದ್ದು ತೀರ ವಿರಳ. ಬದಲಿಗೆ, ಈ ಉಪವಾಸಗಳು ಪ್ರಮುಖ ವಿಷಯಗಳನ್ನು ಹಾಗೂ ಆ ವಿಚಾರಗಳಲ್ಲಿ ಗಾಂಧೀಜಿ ಮತ್ತು ಕಾಂಗ್ರೆಸ್ನ ನಿಲುವನ್ನು ಭಾರತೀಯ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದವು.

ಹಾಗಿದ್ದರೆ ಉಪವಾಸ ಸತ್ಯಾಗ್ರಹಗಳಲ್ಲಿ ಬಲವಂತ ಅಥವಾ ಒತ್ತಡ ಹೇರುವ ತಂತ್ರವಿದೆಯೇ? ಎಲ್ಲಾ ದಾರಿಗಳು ಮುಚ್ಚಿದಾಗ, ಶಕ್ತಿಹೀನರು ಶಕ್ತಿಶಾಲಿಗಳ ವಿರುದ್ಧ 'ಸುಪ್ತವಾಗಿರುವ ಅವರ ಅಂತಃಸಾಕ್ಷಿಯನ್ನು' ಬಡಿದೆಬ್ಬಿಸಲು ಬಳಸುವ ಅಂತಿಮ ಅಸ್ತ್ರ ಉಪವಾಸ ಎಂಬುದು ಗಾಂಧೀವಾದಿಗಳ ವಾದ. ಆದರೆ, ಎಲ್ಲಾ ಉಪವಾಸಗಳೂ ಈ ಪ್ರಮಾಣದ ಪರೀಕ್ಷೆಯಲ್ಲಿ ಅಥವಾ ಇತಿಹಾಸದ ತೀರ್ಪಿನಲ್ಲಿ ಸರಿ ಎನಿಸಿಕೊಳ್ಳುವುದಿಲ್ಲ. ಸ್ವತಃ ಗಾಂಧೀಜಿಯವರ ಎಲ್ಲಾ ಉಪವಾಸಗಳೂ ಇದಕ್ಕೆ ಹೊರತಾಗಿರಲಿಲ್ಲ.

ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್ ಡೊನಾಲ್ಡ್ ಅವರು ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಘೋಷಿಸಿದಾಗ, ಅದನ್ನು ವಿರೋಧಿಸಿ ಗಾಂಧೀಜಿಯವರು 1932ರಲ್ಲಿ ಯರವಾಡ ಜೈಲಿನಲ್ಲಿ ಉಪವಾಸ ಕೂತರು. ದಲಿತ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಇದನ್ನು 'ಒತ್ತಡ ಹೇರುವ ತಂತ್ರ' ಎಂದೇ ಕಂಡರು. ಈ ಉಪವಾಸ ಬ್ರಿಟಿಷರ ವಿರುದ್ಧವಾಗಿರದೆ ತಮ್ಮ ವಿರುದ್ಧವಾಗಿದೆ ಮತ್ತು ಗಾಂಧೀಜಿ ಮೃತರಾದರೆ ದೇಶಾದ್ಯಂತ ದಲಿತರು ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು.

ಅಂಬೇಡ್ಕರ್ ಅವರಿಗೆ ಮಾತುಕತೆ ನಡೆಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಇದರ ಫಲಿತಾಂಶವಾಗಿ ಕಾಯ್ದಿರಿಸಿದ ಸ್ಥಾನಗಳೊಂದಿಗೆ ಜಂಟಿ ಮತಕ್ಷೇತ್ರದ ಒಪ್ಪಂದವಾಯಿತು. ಆ ಒಪ್ಪಂದದ ಇತಿಹಾಸ ಜಟಿಲವಾದದ್ದು. ಗಾಂಧೀಜಿಯವರ ಹಿಂದೆ ನಿಂತಿದ್ದ ಬಲಿಷ್ಠ ಕಾಂಗ್ರೆಸ್ ಗೆ ಹೋಲಿಸಿದರೆ, ತೀರಾ ಕಡಿಮೆ ಶಕ್ತಿಯಿದ್ದ ಸಮುದಾಯದ ಮೇಲೆ ಈ ಉಪವಾಸವು ಒತ್ತಡ ಹೇರಿತು ಎಂಬ ಟೀಕೆ ಇಂದಿಗೂ ಉಳಿದಿದೆ.

ಉಪವಾಸ ಸತ್ಯಾಗ್ರಹಗಳು ಮನವೊಲಿಸುವಷ್ಟೇ ಒತ್ತಡವನ್ನೂ ಹೇರಬಲ್ಲವು. ಆದರೆ, ಭಾರತದ ಸಾರ್ವಜನಿಕ ರಂಗದಲ್ಲಿ ಉಪವಾಸಗಳು ಅತ್ಯಗತ್ಯವಾದ ಕಾರ್ಯವೊಂದನ್ನು ಸಾಧಿಸಿವೆ ಎಂಬುದನ್ನು ಇತಿಹಾಸ ತೋರಿಸುತ್ತದೆ. ಅದು ಸರಕಾರ ಅಥವಾ ಸಾರ್ವಜನಿಕರಲ್ಲಿ ಆವರಿಸಿದ್ದ ನಿರಾಸಕ್ತಿಯ ವಿರುದ್ಧ ಜಾಗೃತಿ ಮೂಡಿಸಿದ್ದು. ಈ ಹೋರಾಟದ ಮಾದರಿಯು ನೇರ ಗುರಿಯಾಗಿರುವ ಅಧಿಕಾರಸ್ಥರನ್ನಷ್ಟೇ ಅಲ್ಲದೆ, ಪ್ರೇಕ್ಷಕರನ್ನು (ಕುಟುಂಬ, ನೆರೆಹೊರೆ, ದೇಶ) ತಲುಪುವ ಮೂಲಕ ಕೆಲಸ ಮಾಡುತ್ತದೆ.

ವಾಂಗ್ಚುಕ್ ಅವರ ಉಪವಾಸದ ಕುರಿತು ವ್ಯಕ್ತವಾಗುತ್ತಿರುವ ಅನುಮಾನಗಳು ತಪ್ಪಾಗುವುದು ಇಲ್ಲೇ. ಗಾಂಧೀಜಿಯವರ ಪ್ರತಿಭಟನೆಗಳ ಪ್ರಮುಖ ವಿಷಯವೆಂದರೆ, ಅಧಿಕಾರದಲ್ಲಿದ್ದವರು ಅವರಿಗೆ ಶರಣಾಗಲಿಲ್ಲ ಎಂಬುದಲ್ಲ, ಬದಲಿಗೆ ಜನರು ಹೋರಾಟಕ್ಕಿಳಿದರು ಎಂಬುದು.

ಅವರ ಅನೇಕ ಉಪವಾಸ ಸತ್ಯಾಗ್ರಹಗಳು ಹೇಳಿಕೊಂಡ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿಲ್ಲ. ಅವರ ಪ್ರಮುಖ ಚಳವಳಿಗಳಾದ ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಗಳೂ ಸಹ ಕೋರಿದ್ದನ್ನು ಬ್ರಿಟಿಷರಿಂದ ತಕ್ಷಣವೇ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಶಾಂತಿಯುತವಾಗಿ ಮಂಡಿಸಲಾದ ನ್ಯಾಯಯುತ ಬೇಡಿಕೆಗಳನ್ನು ಬ್ರಿಟಿಷ್ ಆಡಳಿತವು ಪದೇ ಪದೇ ತಿರಸ್ಕರಿಸಿದ್ದು, ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದ ಅಸ್ತಿತ್ವಕ್ಕೆ ಧಕ್ಕೆ ತಂದಿತು.

ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ, ದೆಹಲಿಯ ಪ್ರತಿಭಟನಾ ಸ್ಥಳದಲ್ಲಿ ಸಾವಿರಾರು ಬೆಂಬಲಿಗರು ಜಮಾಯಿಸಿದರು. ದೇಶದ ವಿವಿಧ ನಗರಗಳಲ್ಲೂ ಜನರು ಒಗ್ಗೂಡಿದರು. ಆನ್ಲೈನ್ ಮೂಲಕ ಹಾಗೂ ವಿದೇಶಗಳಿಂದಲೂ ತಮ್ಮ ಬೆಂಬಲವನ್ನು ದಾಖಲಿಸಿದರು.

ಅಂದರೆ, ಉಪವಾಸ ಸತ್ಯಾಗ್ರಹ ಎಂಬುದು ಹಳೆಯದಾದ ಅಥವಾ ಅಪ್ರಸ್ತುತವಾದ ಮಾದರಿಯಲ್ಲ. ಇದನ್ನು ಬಳಸಿಕೊಂಡು ಸ್ಪಂದಿಸದ ಸರಕಾರವನ್ನು ಅಲುಗಾಡಿಸಲು ಸಾಧ್ಯವೇ? ಗಾಂಧೀಜಿಯವರ ಹೋರಾಟಗಳು ತೋರಿಸಿಕೊಡುವಂತೆ, ಇದು ತಪ್ಪಾದ ಪ್ರಶ್ನೆ. ದಮನಕ್ಕೊಳಗಾದ ನ್ಯಾಯಯುತ ವಿಚಾರದ ಬಗ್ಗೆ ಸಾರ್ವಜನಿಕರು ಇಂದಿಗೂ ಕಾಳಜಿ ವಹಿಸುತ್ತಾರೆಯೇ ಎಂಬುದೇ ನಿಜವಾದ ಪರೀಕ್ಷೆ. ಈ ಅಳತೆಗೋಲಿನಲ್ಲಿ ನೋಡುವುದಾದರೆ, ಜಂತರ್ ಮಂತರ್ನಲ್ಲಿ ಸಾವಿರಾರು ಜನರು ಜಮಾಯಿಸಿ ಧ್ವನಿಗೂಡಿಸಿರುವುದು ಈ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿದೆ ಎಂಬುದನ್ನೇ ತೋರಿಸುತ್ತದೆ.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News