ಸಾಂದರ್ಭಿಕ ಚಿತ್ರ (AI Imagined) 

ವಿವಿಧ ರೀತಿಯ ನೀರಿನ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಮತ್ತು ದೈನಂದಿನ ಬಳಕೆಗೆ ಯಾವುದು ಉತ್ತಮ ಎಂಬುದನ್ನು ಅರಿಯಲು ಬೆಂಗಳೂರಿನ SDMIAH ನ ಪಂಚಕರ್ಮದ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ಡಾ ಪ್ರತಿಭಾ ಜಿ ಭಟ್ ಅವರು ‘ವಾರ್ತಾಭಾರತಿ’ ಜೊತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚುತ್ತಿರುವ ಆರೋಗ್ಯದ ಬಗ್ಗೆ ಕಾಳಜಿಯಿಂದಾಗಿ ಅನೇಕರು ಸಾಮಾನ್ಯ ಕುಡಿಯುವ ನೀರಿಗಿಂತ ಬಾಟಲಿಯಲ್ಲಿ ದೊರೆಯುವ ಮಿನರಲ್ ವಾಟರ್ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ಎಂದು ಭಾವಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಷ್ಟೇ ಅಲ್ಲದೆ ಮನೆಗಳಲ್ಲೂ ಬಾಟಲಿ ನೀರಿನ ಬಳಕೆ ಹೆಚ್ಚುತ್ತಿದೆ. ಪ್ಯಾಕ್ ಮಾಡಿದ ಕುಡಿಯುವ ನೀರಿನ ವಿರುದ್ಧ ಇತ್ತೀಚೆಗೆ FSSAI ಕೈಗೊಂಡ ಕ್ರಮವು ಹಲವು ವರ್ಷಗಳಿಂದ ಮಿನರಲ್ ವಾಟರ್ ನಂಬಿ ಬಳಸುತ್ತಿದ್ದ ಜನರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಈ ಕ್ರಮದ ಹಿಂದಿನ ರಾಜಕೀಯದ ಬಗ್ಗೆ ಪ್ರಶ್ನೆಗಳಾಗುತ್ತಿದ್ದರೂ ಒಟ್ಟಿನಲ್ಲಿ ಮಿನರಲ್ ವಾಟರ್ ಯಾವುದೇ ಆದರೂ ನಂಬಿ ಕುಡಿಯುತ್ತಿದ್ದ ಜನರಿಗೆ ಆತಂಕವಾಗಿದೆ. ಹಾಗಿದ್ದರೆ ವಿವಿಧ ರೀತಿಯ ನೀರಿನ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಮತ್ತು ದೈನಂದಿನ ಬಳಕೆಗೆ ಯಾವುದು ಉತ್ತಮ ಎಂಬುದನ್ನು ಅರಿಯಲು ಬೆಂಗಳೂರಿನ SDMIAH ನ ಪಂಚಕರ್ಮದ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ಡಾ ಪ್ರತಿಭಾ ಜಿ ಭಟ್ ಅವರು ‘ವಾರ್ತಾಭಾರತಿ’ ಜೊತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಹಕರು ನೀರನ್ನು ಆಯ್ಕೆ ಮಾಡುವಾಗ ಏನನ್ನು ಗಮನಿಸಬೇಕಾಗುತ್ತದೆ?

ಕುಡಿಯುವ ನೀರಿನ ಮೂಲ ಮತ್ತು ಅದರ ಗುಣಮಟ್ಟವನ್ನು ಪರಿಶೀಲಿಸಬೇಕು. ಬಾಟಲಿ ನೀರನ್ನು ಖರೀದಿಸುವಾಗ FSSAI ಪರವಾನಗಿ ವಿವರಗಳು, ಉತ್ಪಾದನಾ ದಿನಾಂಕ, ಬಳಕೆಯ ಅವಧಿ ಮತ್ತು ಪ್ಯಾಕೇಜಿಂಗ್‌ನ ಸಮಗ್ರತೆಯನ್ನು ಗಮನಿಸಬೇಕು. ಬಾಟಲಿಯ ಸೀಲ್ ಹಾಳಾಗಿರಬಾರದು. ಬಾಟಲಿ ನೀರನ್ನು ನೇರ ಸೂರ್ಯನ ಬೆಳಕು ಮತ್ತು ಅತಿಯಾದ ಉಷ್ಣತೆಯಿಂದ ದೂರವಿಡಬೇಕು. ಮನೆಯ RO ಅಥವಾ ಇತರ ಶುದ್ಧೀಕರಣ ಸಾಧನಗಳ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಬಳಸಬೇಕು. ನೀರಿನ ಸುರಕ್ಷತೆಗಾಗಿ TDS (Total Dissolved Solids) ಪ್ರಮಾಣವೊಂದನ್ನೇ ಆಧರಿಸಿದರೆ ಸಾಕಾಗುವುದಿಲ್ಲ. ಅದರೊಂದಿಗೆ ಸೂಕ್ಷ್ಮಜೀವಿಗಳು ಮತ್ತು ಹಾನಿಕಾರಕ ರಾಸಾಯನಿಕಗಳ ಪರೀಕ್ಷೆಯೂ ಅಗತ್ಯ.

ಮಿನರಲ್ ವಾಟರ್ ಮತ್ತು ಸಾಮಾನ್ಯ ಕುಡಿಯುವ ನೀರಿನ ಮೂಲ ಮತ್ತು ಸಂಯೋಜನೆ ಏನು?

ಪ್ರಕೃತಿಗತವಾಗಿ ಮಳೆ, ನದಿ, ಕೆರೆ, ಬಾವಿ ಮತ್ತು ಅಂತರ್ಜಲದಂತಹ ಮೂಲಗಳಿಂದ ನೀರು ದೊರೆಯುತ್ತದೆ. ವಿವಿಧ ಸಾಮಾನ್ಯ ಕುಡಿಯುವ ನೀರನ್ನು ಈ ಮೂಲಗಳಿಂದ ಪಡೆದು ಶುದ್ಧೀಕರಿಸಿ, ಕುದಿಸಿ, ಕ್ಲೋರಿನೀಕರಿಸಿ ಅಥವಾ RO (Reverse Osmosis) ಮುಂತಾದ ಪ್ರಕ್ರಿಯೆಗಳನ್ನು ಬಳಸಿ ಕುಡಿಯಲು ಸುರಕ್ಷಿತವಾಗಿಸಲಾಗುತ್ತದೆ. ನೈಸರ್ಗಿಕ ಖನಿಜಯುಕ್ತ ನೀರು (Natural Mineral Water) ಸಾಮಾನ್ಯವಾಗಿ ಭೂಮಿಯ ಒಳಭಾಗದಲ್ಲಿರುವ ನೈಸರ್ಗಿಕ ಜಲಮೂಲಗಳಿಂದ ದೊರೆಯುತ್ತದೆ. ನೀರು ಭೂಮಿಯ ವಿವಿಧ ಪದರಗಳ ಮೂಲಕ ಹರಿಯುವಾಗ ಕ್ಯಾಲ್ಸಿಯಂ, ಮೆಗ್ನೀಸಿಯಂ, ಸೋಡಿಯಂ, ಪೊಟ್ಯಾಸಿಯಂ ಮತ್ತು ಬೈಕಾರ್ಬೊನೇಟ್ ಮುಂತಾದ ಖನಿಜಾಂಶಗಳನ್ನು ಪಡೆದುಕೊಳ್ಳುತ್ತದೆ.

ಇದರಲ್ಲಿ ತಿಳಿಯಬೇಕಾದ ಪ್ರಮುಖ ವ್ಯತ್ಯಾಸವೆಂದರೆ, ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಬಾಟಲಿ ನೀರು ನೈಸರ್ಗಿಕ ಮಿನರಲ್ ವಾಟರ್ ಆಗಿರುವುದಿಲ್ಲ. ನೀರನ್ನು ವಿವಿಧ ಮೂಲಗಳಿಂದ ಪಡೆದು ಶುದ್ಧೀಕರಿಸಿ, ಅಗತ್ಯವಿದ್ದಲ್ಲಿ ಖನಿಜಾಂಶಗಳನ್ನು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು Packaged Drinking Water ಎಂದು ಕರೆಯಲಾಗುತ್ತದೆ.

ಭಾರತೀಯ ಮಾನದಂಡಗಳ ಪ್ರಕಾರ, ನೈಸರ್ಗಿಕ ಖನಿಜಯುಕ್ತ ನೀರು (IS 13428) ಮತ್ತು ಪ್ಯಾಕೇಜ್ಡ್ ಕುಡಿಯುವ ನೀರು (IS 14543) ವಿಭಿನ್ನ ವರ್ಗಗಳಾಗಿವೆ.

ಬಾಟಲಿ ನೀರು ನಳ್ಳಿಯ ನೀರಿಗಿಂತ ಸುರಕ್ಷಿತವೆ?

ಇಲ್ಲ. ಬಾಟಲಿಯಲ್ಲಿ ದೊರೆಯುತ್ತದೆ ಎಂದ ಮಾತ್ರಕ್ಕೆ ನೀರು ಸಂಪೂರ್ಣ ಸುರಕ್ಷಿತ ಎಂದು ಪರಿಗಣಿಸಲಾಗುವುದಿಲ್ಲ. ನೀರಿನ ಸುರಕ್ಷತೆಯು ಅದರ ಮೂಲ, ಶುದ್ಧೀಕರಿಸಿದ ವಿಧಾನ, ಸಂಗ್ರಹಣಾ ‌ವಿಧಾನ, ಪ್ಯಾಕೇಜಿಂಗ್ ಮತ್ತು ವಿತರಣೆಯಲ್ಲಿನ ನೈರ್ಮಲ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಸರಿಯಾದ ರೀತಿಯಲ್ಲಿ ಶುದ್ಧೀಕರಿಸಿ, ನಿಯಮಿತವಾಗಿ ಪರೀಕ್ಷಿಸಲಾದ ಕುಡಿಯುವ ನೀರು ಆರೋಗ್ಯಕ್ಕೆ ಸುರಕ್ಷಿತವಾಗಿರಬಹುದು. ಅದೇ ರೀತಿ, ಗುಣಮಟ್ಟದ ನಿಯಮಗಳನ್ನು ಪಾಲಿಸಿ ತಯಾರಿಸಿದ ಬಾಟಲಿ ನೀರೂ ಸುರಕ್ಷಿತವಾಗಿರುತ್ತದೆ.

ಆದರೆ ಶುದ್ಧೀಕರಣ ವ್ಯವಸ್ಥೆಯ ನಿರ್ವಹಣೆಯ ಕೊರತೆ, ಹಳೆಯ ಪೈಪ್‌ಲೈನ್‌ಗಳು, ಕಲುಷಿತ ಜಲಮೂಲಗಳು ಮತ್ತು ಅಸಮರ್ಪಕ ಸಂಗ್ರಹಣೆಯಿಂದ ನಳ್ಳಿ ನೀರು ಕಲುಷಿತವಾಗುವ ಸಾಧ್ಯತೆಯಿದೆ. ಬಾಟಲಿ ನೀರಿನಲ್ಲಿಯೂ ಉತ್ಪಾದನೆ, ಸಾಗಣೆ ಅಥವಾ ಸಂಗ್ರಹಣೆಯ ಸಂದರ್ಭದಲ್ಲಿ ಸೂಕ್ಷ್ಮಜೀವಿಗಳಿಂದ ಅಥವಾ ಇತರ ಮಾಲಿನ್ಯಕಾರಕಗಳಿಂದ ಕಲುಷಿತಗೊಳ್ಳುವ ಅಪಾಯವಿದೆ.

ಆದ್ದರಿಂದ ನೀರಿನ ಗುಣಮಟ್ಟ ಹಾಗೂ ಸುರಕ್ಷತಾ ಪರೀಕ್ಷೆಗಳು ಅದರ ಮೂಲಕ್ಕಿಂತ ಹೆಚ್ಚು ಮಹತ್ವದ್ದಾಗಿವೆ.

ನೀರಿನಲ್ಲಿರುವ ಖನಿಜಾಂಶಗಳ ಆರೋಗ್ಯ ಪ್ರಯೋಜನಗಳೇನು?

ನೀರಿನಲ್ಲಿರುವ ಖನಿಜಾಂಶಗಳು ದೇಹದ ವಿವಿಧ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೂಳೆಗಳ ಆರೋಗ್ಯ, ಹಲ್ಲುಗಳ ಆರೋಗ್ಯಕ್ಕೆ ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಮೆಗ್ನೀಸಿಯಂ ನರಮಂಡಲ, ಸ್ನಾಯುಗಳ ಕಾರ್ಯ ಮತ್ತು ಶಕ್ತಿಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ದ್ರವ ಸಮತೋಲನ ಮತ್ತು ನರಗಳ ಸಂದೇಶ ರವಾನೆಯಲ್ಲಿ ಸೋಡಿಯಂ ಸಹಾಯ ಮಾಡುತ್ತದೆ. ಸ್ನಾಯುಗಳ ಚಟುವಟಿಕೆ ಮತ್ತು ಹೃದಯದ ಸಾಮಾನ್ಯ ಕಾರ್ಯನಿರ್ವಹಣೆಗೆ ಪೊಟ್ಯಾಸಿಯಂ ಅಗತ್ಯವಾಗಿದೆ. ಇದಲ್ಲದೆ, ದೇಹದ ಆಮ್ಲ-ಕ್ಷಾರ ಸಮತೋಲನವನ್ನು ಕಾಪಾಡುವಲ್ಲಿ ಬೈಕಾರ್ಬೊನೇಟ್ ಪಾತ್ರ ವಹಿಸುತ್ತದೆ. ಆದ್ದರಿಂದ ಇದು ಒಂದು ಪೂರಕ ಮೂಲವೆಂದು ಪರಿಗಣಿಸಬಹುದೇ ವಿನಃ ಸಮತೋಲಿತ ಆಹಾರಕ್ಕೆ ಇವು ಪರ್ಯಾಯವಾದವುಗಳಲ್ಲ ಎಂಬುದನ್ನು ಗಮನಿಸಬೇಕು.

ಮಕ್ಕಳು, ಕ್ರೀಡಾಪಟುಗಳು ಮತ್ತು ವಯೋವೃದ್ಧರಿಗೆ ಮಿನರಲ್ ವಾಟರ್ ಅಗತ್ಯವೆ?

ಮಕ್ಕಳ ಬೆಳವಣಿಗೆಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಗತ್ಯವಿದ್ದರೂ, ಈ ಖನಿಜಗಳನ್ನು ಸಮತೋಲಿತ ಆಹಾರದ ಮೂಲಕ ಪಡೆಯುವುದು ಮುಖ್ಯ. ಖನಿಜಯುಕ್ತ ನೀರು ಒಂದು ಪೂರಕ ಮೂಲವಾಗಬಹುದು. ಆದರೆ, ಪ್ರತ್ಯೇಕವಾಗಿ ಮಿನರಲ್ ವಾಟರ್ ನೀಡಬೇಕೆಂಬ ಅವಶ್ಯಕತೆಯಿಲ್ಲ.

ಕ್ರೀಡಾಪಟುಗಳು ಮತ್ತು ಹೆಚ್ಚು ಬೆವರುವವರು ದೇಹದಿಂದ ನೀರಿನ ಜೊತೆಗೆ ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳನ್ನು ಕಳೆದುಕೊಳ್ಳುತ್ತಿರುತ್ತಾರೆ. ಇವುಗಳಿಗೂ ಕೂಡ ಶುದ್ಧ ಕುಡಿಯುವ ನೀರು ಸಾಕಾಗುತ್ತದೆ.

ವಯೋವೃದ್ಧರಲ್ಲಿ ದೇಹದ ನೀರಿನ ಸಮತೋಲನ ಕಾಪಾಡುವುದು ಮುಖ್ಯ. ಆದ್ದರಿಂದ ಅವರಿಗೆ ಖನಿಜಯುಕ್ತ ನೀರಿಗಿಂತ ಸುರಕ್ಷಿತ ನೀರನ್ನು ಪ್ರಮಾಣಕ್ಕೆ ತಕ್ಕಂತೆ ಕೊಡುವುದು ಹೆಚ್ಚು ಮಹತ್ವದ್ದಾಗಿದೆ.

ಹೆಚ್ಚು ಖನಿಜಾಂಶವಿರುವ ನೀರಿನ ಸೇವನೆಯಿಂದ ಅಡ್ಡಪರಿಣಾಮಗಳಿವೆಯೆ?

ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳಲ್ಲಿ ಸುರಕ್ಷಿತ ಮಿತಿಯಲ್ಲಿರುವ ಖನಿಜಯುಕ್ತ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಖನಿಜಗಳ ಅಸಮತೋಲನ ಉಂಟಾಗುವ ಸಾಧ್ಯತೆ ಕಡಿಮೆ. ಆದರೆ ಎಲ್ಲಾ ಖನಿಜಾಂಶಗಳೂ ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಸೂಕ್ತವಾಗಿರುವುದಿಲ್ಲ.

ಉದಾಹರಣೆಗೆ: ಮೂತ್ರಪಿಂಡದ ಕಾಯಿಲೆ ಇರುವವರು ಹಾಗೂ ಮೂತ್ರಪಿಂಡಗಳ ಕಾರ್ಯಕ್ಷಮತೆ ಕಡಿಮೆಯಾದವರಲ್ಲಿ ಪೊಟ್ಯಾಸಿಯಂ, ಸೋಡಿಯಂ ಮತ್ತು ಇತರ ಖನಿಜಾಂಶಗಳ ನಿಯಂತ್ರಣ ಕಷ್ಟವಾಗಬಹುದು. ಆದ್ದರಿಂದ ಅಂತಹವರಲ್ಲಿ ಖನಿಜಾಂಶಗಳ ಪ್ರಮಾಣವನ್ನು ಗಮನಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.