ಲಡಾಖ್ ಗೆ ವಿಶೇಷ ಅಧಿಕಾರದ ಬೇಡಿಕೆ: ನಾಯಕರ ನಡುವಿನ ಭಿನ್ನಾಭಿಪ್ರಾಯ ತಂದಿಟ್ಟ ಹೊಸ ತಿರುವು
ಬಶಾರತ್ ಮಸೂದ್ - indianexpress. com ವರದಿ
Photo Credit : PTI
ಲಡಾಖ್ ಗೆ ವಿಶೇಷ ರಕ್ಷಣೆ ಒದಗಿಸಲು ಸಂವಿಧಾನಕ್ಕೆ ನೂತನ ವಿಧಿ 371(K) ಸೇರ್ಪಡೆಗೊಳಿಸಲು ಕೇಂದ್ರ ಸರಕಾರ ಪ್ರಸ್ತಾಪಿಸಿದ ಬೆನ್ನಲ್ಲೇ, ಲಡಾಖ್ ನ ಪ್ರಮುಖ ಸಂಘಟನೆಗಳಾದ 'ಅಪೆಕ್ಸ್ ಬಾಡಿ ಲೇಹ್' (ABL) ಮತ್ತು 'ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್' (KDA) ಕೇಂದ್ರ ಗೃಹ ಸಚಿವಾಲಯದೊಂದಿಗೆ ನಡೆಸಿದ ಸಭೆಯ ನಡಾವಳಿಗಳು ಹಾಗೂ ದಾಖಲೆಗಳನ್ನು ಶುಕ್ರವಾರ (ಅಕ್ಟೋಬರ್ 23) ಸಾರ್ವಜನಿಕವಾಗಿ ಬಿಡುಗಡೆ ಮಾಡಿವೆ.
ಈ ಎರಡೂ ಸಂಘಟನೆಗಳು ಈ ವರ್ಷದ ಮೇ 22ರಿಂದ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಂಡ ಐದು ಪ್ರಮುಖ ದಾಖಲೆಗಳನ್ನು ಹೊರತಂದಿವೆ. ಮೇ 22ರಂದು ನಡೆದ ಮಹತ್ವದ ಸಭೆಯ ವಿವರಗಳನ್ನೂ ಹಂಚಿಕೊಂಡಿದ್ದು, ಅಂದಿನ ಚರ್ಚೆಯಲ್ಲಿ ಸಂವಿಧಾನದ 371(K) ವಿಧಿಯಡಿ ವಿಶೇಷ ರಕ್ಷಣೆ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ (UT) ಪ್ರತ್ಯೇಕ ಶಾಸನಸಭೆ ನೀಡುವ ಬೇಡಿಕೆಗೆ ಎರಡೂ ಕಡೆಯವರು ಸಮ್ಮತಿಸಿದ್ದರು.
ಈ ಸಂಘಟನೆಗಳು ಗೃಹ ಸಚಿವಾಲಯದ ದಾಖಲೆಗಳನ್ನು ಏಕಾಏಕಿ ಬಹಿರಂಗಪಡಿಸಲು ಕಾರಣವೇನು? ಆ ಮಹತ್ವದ ಮೇ 22ರ ಸಭೆಯಲ್ಲಿ ಆಗಿದ್ದೇನು? ಲಡಾಖ್ನ ನಾಯಕರ ನಡುವಿನ ಭಿನ್ನಾಭಿಪ್ರಾಯಗಳೇನು ಎಂಬುದರ ವಿವರ ಇಲ್ಲಿದೆ.
*ಲಡಾಖ್ ಸಂಘಟನೆಗಳು ಕೇಂದ್ರ ಗೃಹ ಸಚಿವಾಲಯದ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇಕೆ?
ABLನ ನಿಕಟಪೂರ್ವ ಸಹ-ಅಧ್ಯಕ್ಷ ಥುಪ್ಸ್ಟಾನ್ ಛೇವಾಂಗ್ ಅವರು ಹೊಸ ಗುಂಪೊಂದನ್ನು ರಚಿಸಿ, ಪ್ರಸ್ತುತ ಸಂಘಟನೆಗಳು ಕೇಂದ್ರ ಸರಕಾರದೊಂದಿಗಿನ ಮಾತುಕತೆಯನ್ನು ಹಾಳುಮಾಡುತ್ತಿವೆ ಎಂದು ಆರೋಪಿಸಿದ್ದರು. ಈ ಬೆಳವಣಿಗೆಯ ನಂತರ ದಾಖಲೆಗಳನ್ನು ಬಹಿರಂಗಪಡಿಸಲು ಎರಡೂ ಸಂಘಟನೆಗಳು ತೀರ್ಮಾನಿಸಿದವು.
ABL ಮತ್ತು KDA ನಾಯಕರ ಪ್ರಕಾರ, ಲಡಾಖ್ನ ಜನರಿಗೆ ನೈಜ ಚಿತ್ರಣವನ್ನು ತಲುಪಿಸಲು ಹಾಗೂ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ 'ಜನರನ್ನು ವಿಭಜಿಸುವ ಪ್ರಯತ್ನಗಳನ್ನು ಸೋಲಿಸಲು' ಈ ನಿರ್ಧಾರ ಕೈಗೊಳ್ಳಲಾಗಿದೆ.
"ನಾವು ವಿಷಯಗಳನ್ನು ಮುಚ್ಚಿಡುತ್ತಿದ್ದೇವೆ ಎಂದು ಕೆಲವರು ಆರೋಪಿಸಿದ್ದರಿಂದ ಈ ದಾಖಲೆಗಳನ್ನು ಬಹಿರಂಗಪಡಿಸಿದ್ದೇವೆ. ನಮಗೆ ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ" ಎಂದು ABL ಅಧ್ಯಕ್ಷ ದೊರ್ಜೆ ಚೆರಿಂಗ್ ಲಾಕ್ರೂಕ್ ಅವರು ತಮ್ಮ ಮಾಜಿ ಸಹೋದ್ಯೋಗಿ ಛೇವಾಂಗ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವು ಸೃಷ್ಟಿಸಲು ಯತ್ನಿಸುತ್ತಿರುವ "ಯಾವುದೇ ಗೊಂದಲಗಳನ್ನು ನಿವಾರಿಸಲು ಮತ್ತು ಜನರಿಗೆ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ನೀಡಲು ಈ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ" ಎಂದು KDA ಸಹ-ಅಧ್ಯಕ್ಷ ಸಜ್ಜಾದ್ ಹುಸೇನ್ ಕಾರ್ಗಿಲಿ ತಿಳಿಸಿದ್ದಾರೆ.
*ಕೇಂದ್ರ ಸರಕಾರಕ್ಕೆ ತಿರುಗೇಟು
ಮೇ 22ರ ಸಭೆಯಲ್ಲಿ ನೀಡಿದ್ದ ಭರವಸೆಗಳಿಂದ ಹಿಂದೆ ಸರಿಯುತ್ತಿರುವ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಾಗೂ ಸ್ಥಳೀಯ ನಾಯಕತ್ವವೇ ಪಟ್ಟು ಹಿಡಿದು ಕುಳಿತಿದೆ ಎಂದು ಆರೋಪಿಸುತ್ತಿದ್ದ ವಿಮರ್ಶಕರಿಗೆ ಉತ್ತರಿಸಲು ABL ಮತ್ತು KDA ಈ ದಾಖಲೆಗಳನ್ನು ಬಹಿರಂಗಪಡಿಸಿವೆ. ಮೇ 22ರ ಸಭೆಯಲ್ಲಿ ಈ ಎರಡೂ ಸಂಘಟನೆಗಳು ತಮ್ಮ ಆರಂಭಿಕ ಬೇಡಿಕೆಗಳನ್ನು ಬಿಟ್ಟು ಸ್ವಲ್ಪ ಸಡಿಲಿಕೆಗೆ ಒಪ್ಪಿಕೊಂಡಿದ್ದವು. ಅಂದರೆ, ಆರನೇ ಅನುಸೂಚಿಯ ಬದಲು ಲಡಾಖಿಗರ ಸಂಸ್ಕೃತಿ, ಭೂಮಿ ಮತ್ತು ಉದ್ಯೋಗಗಳಿಗೆ ರಕ್ಷಣೆ ನೀಡುವ ಲಡಾಖ್ ಗೆ ಪ್ರತ್ಯೇಕವಾದ 'ಸಂವಿಧಾನದ 371(K) ವಿಧಿ' ಜಾರಿಗೆ ಸಮ್ಮತಿಸಿದ್ದವು. ಜೊತೆಗೆ, ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನದ ಬದಲು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ಶಾಸನಸಭೆ ನೀಡಿದರೆ ಸಾಕು ಎಂದೂ ಒಪ್ಪಿಕೊಂಡಿದ್ದವು.
ದಾಖಲೆ ಬಿಡುಗಡೆ ಮಾಡಲು ಮತ್ತೊಂದು ಮುಖ್ಯ ಕಾರಣವೆಂದರೆ, ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವು ಜನರನ್ನು ವಿಭಜಿಸಲು ಹಾಗೂ ಸ್ಥಳೀಯ ನಾಯಕರ ಪ್ರಭಾವ ಕುಗ್ಗಿಸಲು ನಡೆಸುತ್ತಿರುವ ಯತ್ನಗಳನ್ನು ಎದುರಿಸುವುದು. ಇತ್ತೀಚೆಗೆ ಆರು ಹೊಸ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಗಳನ್ನು (LAHDC) ಸ್ಥಾಪಿಸುವುದಾಗಿ ಪ್ರಕಟಿಸಿದ್ದು ಕೂಡ ಇದೇ ತಂತ್ರದ ಭಾಗ ಎಂದು ಈ ಸಂಘಟನೆಗಳು ಭಾವಿಸಿವೆ.
ABL ಮತ್ತು KDA ಪ್ರಕಾರ, ಲಡಾಖ್ನ ದೂರದ ಪ್ರದೇಶಗಳಲ್ಲಿ ಹೊಸ ಬೆಟ್ಟ ಮಂಡಳಿಗಳನ್ನು ರಚಿಸುವ ಮೂಲಕ ಕೇಂದ್ರ ಸರಕಾರವು ತನ್ನದೇ ಆದ ಬೆಂಬಲಿಗರ ಪಡೆಯನ್ನು ಸೃಷ್ಟಿಸಿಕೊಳ್ಳಲು ಮತ್ತು ಸ್ಥಳೀಯ ಜನರನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದೆ.
"ಕೇಂದ್ರಾಡಳಿತ ಪ್ರದೇಶದ ಆಡಳಿತವು ABL ಮತ್ತು KDA ಸಂಘಟನೆಗಳನ್ನು ಒಡೆಯಲು ಯತ್ನಿಸುತ್ತಿದೆ. ಆದರೆ ಜನರಿಗೆ ಸತ್ಯ ಏನೆಂಬುದು ಸ್ಪಷ್ಟವಾಗಿ ತಿಳಿದಿದೆ. ಲಡಾಖ್ನಲ್ಲಿ ಪ್ರಜಾಪ್ರಭುತ್ವದ ಹತ್ಯೆ ಮಾಡಲಾಗುತ್ತಿರುವುದನ್ನು ಅವರು ಗಮನಿಸುತ್ತಿದ್ದಾರೆ" ಎಂದು ಕಾರ್ಗಿಲಿ ಹೇಳಿದ್ದಾರೆ. ಅಲ್ಲದೆ, ಹೊಸ ಬೆಟ್ಟ ಮಂಡಳಿಗಳ ಸ್ಥಾಪನೆಯು "ಗಮನ ಬೇರೆಡೆಗೆ ಸೆಳೆಯುವ ತಂತ್ರ" ಎಂದಿರುವ ಅವರು, "ಇದು ಸಫಲವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ರೂಕ್ ಮಾತನಾಡಿ, "ಹೊಸ ಬೆಟ್ಟ ಅಭಿವೃದ್ಧಿ ಮಂಡಳಿಗಳ ಅಧಿಕಾರವನ್ನು ಮತ್ತಷ್ಟು ಕಸಿಯಲಾಗಿದೆ. LAHDC ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಇನ್ನಷ್ಟು ದುರ್ಬಲಗೊಳಿಸಲಾಗಿದೆ" ಎಂದು ಆರೋಪಿಸಿದ್ದಾರೆ.
*ಹೊರಬಂದ ಬಂಡಾಯದ ಬಿಸಿ
ಛೇವಾಂಗ್ ನೇತೃತ್ವದ ಹೊಸ ಗುಂಪನ್ನು ಲಡಾಖ್ ಜನರ ಹೋರಾಟದ ತೀವ್ರತೆಯನ್ನು ತಗ್ಗಿಸಲು ಮತ್ತು ಅವರಲ್ಲಿ ಒಡಕು ಮೂಡಿಸಲು ಕೇಂದ್ರ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತವೇ ಸೃಷ್ಟಿಸಿದೆ ಎಂದು ABL ಮತ್ತು KDA ನಾಯಕರು ಪ್ರತಿಪಾದಿಸಿದ್ದಾರೆ. ಅಲ್ಲದೆ, ಛೇವಾಂಗ್ ಅವರು ಬಿಜೆಪಿಯ ಪರವಾಗಿ ಮಾತನಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಮಾಜಿ ಬಿಜೆಪಿ ಸಂಸದರಾಗಿದ್ದ ಛೇವಾಂಗ್ (2014–18ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು), ಲಡಾಖ್ನಲ್ಲಿ ವಿದ್ಯುತ್ ಖಾಸಗೀಕರಣವನ್ನು ABL ವಿರೋಧಿಸಿದ್ದಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು. ಇದರಿಂದಾಗಿ ಸಹ-ಅಧ್ಯಕ್ಷ ಲಾಕ್ರೂಕ್ ಅವರೊಂದಿಗೆ ಹಲವು ತಿಂಗಳುಗಳಿಂದ ಭಿನ್ನಾಭಿಪ್ರಾಯ ಮೂಡಿತ್ತು. ಈ ವರ್ಷದ ಮೇ ತಿಂಗಳಲ್ಲಿ ಅವರನ್ನು ABLನಿಂದ ತೆಗೆದುಹಾಕಲಾಗಿತ್ತು. ಕೇಂದ್ರ ಸರಕಾರದೊಂದಿಗಿನ ಮಾತುಕತೆಯ ವೇಳೆ ABL ಕಠಿಣ ನಿಲುವು ತಳೆಯುತ್ತಿದೆ ಎಂದು ಛೇವಾಂಗ್ ಆರೋಪಿಸಿದ್ದರು. ಇದರ ಜೊತೆಗೆ, KDA ಸಂಘಟನೆಯ ಹೆಚ್ಚುತ್ತಿರುವ ಪ್ರಭಾವ ಮತ್ತು ABLನಲ್ಲಿ ಮುಸ್ಲಿಮರಿಗೆ ನೀಡಲಾದ ಪ್ರಾತಿನಿಧ್ಯದ ಬಗ್ಗೆಯೂ ಅವರು ಅಸಮಾಧಾನ ಹೊಂದಿದ್ದರು.
ಸೌಜನ್ಯ: indianexpress.com