ಟ್ರಂಪ್ ಅಳಿಯ, ಮಾಜಿ ಸಲಹೆಗಾರ ಕುಶ್ನರ್ ಗೆ ಸಂಬಂಧಿಸಿದ ಖಾತೆಗಳಲ್ಲಿ 2 ಬಿಲಿಯನ್ ಡಾಲರ್ ರಹಸ್ಯ ನಿಧಿ?
ಐಫೋನ್ ಹ್ಯಾಕ್ ನಿಂದ ಹಣಕಾಸು ವ್ಯವಹಾರಗಳ ಮಾಹಿತಿ ಸೋರಿಕೆ; ಮಧ್ಯಪ್ರಾಚ್ಯದ ನಾಯಕರ ಜತೆ ರಹಸ್ಯ ಒಪ್ಪಂದದ ಆರೋಪ
Photo Credit : vanityfair.com
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಶ್ವೇತಭವನದ ಮಾಜಿ ಹಿರಿಯ ಸಲಹೆಗಾರ, ಉದ್ಯಮಿ ಜೆರೆಡ್ ಕುಶ್ನರ್ ಅವರು ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಮಧ್ಯಪ್ರಾಚ್ಯದ ನಾಯಕರೊಂದಿಗೆ ರಹಸ್ಯ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕುಶ್ನರ್ ಅವರ ವೈಯಕ್ತಿಕ ಐಫೋನ್ ಹ್ಯಾಕ್ ಆಗಿದ್ದರಿಂದ ಈ ಹಣಕಾಸು ಜಾಲದ ಕುರಿತು ಮಾಹಿತಿ ಸೋರಿಕೆಯಾಗಿದೆ ಎಂದು ತನಿಖಾ ಪತ್ರಕರ್ತ ಮ್ಯಾಥ್ಯೂ ಕೋಲ್ ಅವರ ಹೊಸ ಕೃತಿ ಹಾಗೂ ವ್ಯಾನಿಟಿ ಫೇರ್ ಪತ್ರಿಕೆಯ ವರದಿಯಲ್ಲಿ ವಿವರಿಸಲಾಗಿದೆ. ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ಹಿಂದಿ ವರದಿ ಮಾಡಿದೆ.
ರಷ್ಯಾ, ನೆದರ್ಲ್ಯಾಂಡ್ಸ್, ಸೌದಿ ಅರೇಬಿಯ, ಯುಎಇ ಮತ್ತು ಇಸ್ರೇಲ್ ದೇಶಗಳ ಪಾತ್ರ ಈ ಪ್ರಕರಣದಲ್ಲಿದೆ ಎಂಬುದು ವರದಿಯಲ್ಲಿನ ಪ್ರಮುಖ ಆರೋಪ. ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ನೂರಾರು ಕೋಟಿ ಡಾಲರ್ ಹಣ ವರ್ಗಾವಣೆಯಾಗಿದೆ ಎಂದು ವರದಿ ಹೇಳಿದೆ.
ರಷ್ಯಾದ ಸರ್ವರ್ ನಿಂದ ಮಾಹಿತಿ ಸೋರಿಕೆ
ಬ್ರಿಟನ್ ನಲ್ಲಿ ಸೆರೆಸಿಕ್ಕ ರಷ್ಯಾದ ಸೇನಾ ಗುಪ್ತಚರ ಸಂಸ್ಥೆಯ ಗೂಢಚಾರನ ಮೂಲಕ ಈ ಪ್ರಕರಣದ ಸುಳಿವು ಸಿಕ್ಕಿತು ಎನ್ನಲಾಗಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆತ ಡಚ್ ಬೇಹುಗಾರಿಕಾ ಸಂಸ್ಥೆಯ ಪರವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದ. ಬಳಿಕ ರಷ್ಯಾದ ರೋಸ್ಟೋವ್ ನಗರದಲ್ಲಿದ್ದ ರಹಸ್ಯ ಸರ್ವರ್ ನ ಸಂಪರ್ಕ ಕೊಂಡಿಯನ್ನು ಡಚ್ ಏಜೆಂಟರಿಗೆ ಒದಗಿಸಿದ್ದ.
ಸರ್ವರ್ ಪರಿಶೀಲಿಸಿದಾಗ ಕುಶ್ನರ್ ಅವರ ಐಫೋನ್ ಎಕ್ಸ್ ನ ಸ್ಕ್ರೀನ್ಶಾಟ್ಗಳು ಪತ್ತೆಯಾಗಿದ್ದವು. ರಷ್ಯಾದ ಸೈಬರ್ ಘಟಕಗಳು ಫೋನ್ ಗೆ ಪ್ರವೇಶ ಪಡೆದಿದ್ದವು ಎನ್ನಲಾಗಿದೆ. ಅದೇ ಮಾರ್ಗವನ್ನು ಬಳಸಿಕೊಂಡ ಡಚ್ ಏಜೆಂಟರು ಕುಶ್ನರ್ ಅವರ ಫೋನ್ ನ ಸ್ಕ್ರೀನ್ ನ ಲೈವ್ ವೀಕ್ಷಣೆ ಪಡೆಯುತ್ತಿದ್ದರು. ಅವರು ಫೋನ್ ಬಳಸುವಾಗ ಅದರಲ್ಲಿನ ಮಾಹಿತಿಯನ್ನು ವೀಕ್ಷಿಸಲು ಸಾಧ್ಯವಾಗಿತ್ತು ಎಂದು ವರದಿ ತಿಳಿಸಿದೆ.
ದುಬೈನ ರಹಸ್ಯ ಬ್ಯಾಂಕ್ ಖಾತೆ
ಕಣ್ಗಾವಲು ನಡೆಸುತ್ತಿದ್ದಾಗ ಡಚ್ ಏಜೆಂಟರಿಗೆ ದುಬೈನ ರಹಸ್ಯ ಬ್ಯಾಂಕ್ ಖಾತೆಯ ಮಾಹಿತಿ ಸಿಕ್ಕಿತು. ಕುಶ್ನರ್ ಈ ಖಾತೆಗೆ ಲಾಗಿನ್ ಆಗುತ್ತಿದ್ದರು. ಅಲ್ಲಿ ಕೋಟ್ಯಂತರ ಡಾಲರ್ ಹಣ ಸಂಗ್ರಹವಾಗಿತ್ತು. ಅಜರ್ಬೈಜಾನ್ ನ ಬ್ಯಾಂಕ್ ಗಳ ಮೂಲಕ ಹಣ ವರ್ಗಾವಣೆಯಾಗಿತ್ತು ಎಂದು ವರದಿ ಹೇಳಿದೆ.
ಈ ಹಣವನ್ನು ಬಾಡಿಗೆ ಸೈನಿಕರ ಪಡೆಗಳಿಗೆ ಹಾಗೂ ಶಸ್ತ್ರಾಸ್ತ್ರ ವ್ಯಾಪಾರಿಗಳಿಗೆ ರವಾನಿಸಲಾಗುತ್ತಿತ್ತು. ಸೌದಿ ಅರೇಬಿಯದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಮೊಹಮ್ಮದ್ ಬಿನ್ ಝಾಯೆದ್ ಹಾಗೂ ಕುಶ್ನರ್ ನಡುವೆ ರಹಸ್ಯ ರಾಜತಾಂತ್ರಿಕ ಒಪ್ಪಂದವಿತ್ತು ಎಂದು ವರದಿ ಆರೋಪಿಸಿದೆ.
ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಅಧಿಕಾರ ಗಟ್ಟಿಗೊಳಿಸಲು ಶ್ವೇತಭವನದ ಬೆಂಬಲ ಅಗತ್ಯವಾಗಿತ್ತು. ಮೊಹಮ್ಮದ್ ಬಿನ್ ಝಾಯೆದ್ ಅವರಿಗೆ ಇರಾನ್ ಪರಮಾಣು ಒಪ್ಪಂದವನ್ನು ರದ್ದುಪಡಿಸಲು ಅಮೆರಿಕದ ನೆರವು ಬೇಕಿತ್ತು. ಇತ್ತ ಕುಶ್ನರ್ ಅವರಿಗೆ ಇಸ್ರೇಲ್ ಪರವಾಗಿ ಮಧ್ಯಪ್ರಾಚ್ಯದ ನೀತಿಯನ್ನು ರೂಪಿಸಲು ಹಣಕಾಸಿನ ನೆರವು ಅಗತ್ಯವಾಗಿತ್ತು ಎನ್ನಲಾಗಿದೆ. ಇದೇ ಅವಧಿಯಲ್ಲಿ ಅವರ ಕುಟುಂಬದ ರಿಯಲ್ ಎಸ್ಟೇಟ್ ಸಂಸ್ಥೆ ತೀವ್ರ ಸಾಲದ ಹೊರೆಯಲ್ಲಿತ್ತು.
ಈ ಉದ್ದೇಶಗಳಿಗಾಗಿ ಸುಮಾರು 2 ಬಿಲಿಯನ್ ಡಾಲರ್ ಮೊತ್ತದ ರಹಸ್ಯ ಹಣಕಾಸು ಜಾಲ ರೂಪಿಸಲಾಗಿತ್ತು ಎನ್ನಲಾಗಿದೆ.
ಈ ಹಣಕಾಸು ಜಾಲದಲ್ಲಿ ಮೂರು ಪ್ರಮುಖ ಖಾತೆಗಳಿದ್ದವು ಎಂದು ವರದಿ ವಿವರಿಸಿದೆ.
ಯುಎಇಯ ಫಸ್ಟ್ ಅಬುಧಾಬಿ ಬ್ಯಾಂಕ್ನಲ್ಲಿದ್ದ ‘ಆಲ್ಫಾ ಖಾತೆಗೆ’ ಸುಮಾರು 750 ಮಿಲಿಯನ್ ಡಾಲರ್ ಹಣ ಜಮೆಯಾಗಿತ್ತು ಎನ್ನಲಾಗಿದೆ. ಅಜರ್ಬೈಜಾನ್ ನ ಕರೆನ್ಸಿ ಪರಿವರ್ತನೆ ಮಾರ್ಗ ಹಾಗೂ ವತಾನಿ ಅಲ್ ಇಮಾರಾತ್ ಎಂಬ ಚಾರಿಟಿ ಸಂಸ್ಥೆಯ ಹೆಸರಿನಲ್ಲಿ ಹಣವನ್ನು ಮರೆಮಾಚಲಾಗಿತ್ತು ಎಂಬ ಆರೋಪವಿದೆ. ಕುಶ್ನರ್ ಈ ಖಾತೆಯ ಅಧಿಕೃತ ಸಹಿದಾರರಾಗಿದ್ದರು ಎಂದು ವರದಿ ಹೇಳಿದೆ.
ಇಸ್ರೇಲ್ ನಲ್ಲಿದ್ದ ‘ಬೀಟಾ ಖಾತೆಗೆ’ ಸುಮಾರು ಒಂದು ಬಿಲಿಯನ್ ಡಾಲರ್ ಹಣ ವರ್ಗಾಯಿಸಲಾಗಿತ್ತು ಎನ್ನಲಾಗಿದೆ. ಇದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಂಪರ್ಕವಿತ್ತು ಎಂದು ಮ್ಯಾಥ್ಯೂ ಕೋಲ್ ದಾಖಲಿಸಿದ್ದಾರೆ. ಹಣವನ್ನು ನೇರವಾಗಿ ಹಿಂಪಡೆಯಲು ಕಷ್ಟವಾಗಿದ್ದರಿಂದ ಸೈಪ್ರಸ್ ಮೂಲಕ ವರ್ಗಾಯಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.
ಮೂರನೆಯ ಖಾತೆಯು ಇರಾನ್ನಿಂದ ಸಂಭವಿಸಬಹುದಾದ ಅಪಾಯದ ವಿರುದ್ಧ ಯುಎಇಯ ತುರ್ತು ರಕ್ಷಣೆಗೆ ಸಂಬಂಧಿಸಿದ ಹಣಕಾಸು ವ್ಯವಸ್ಥೆಯಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಎಲ್ಲ ವಹಿವಾಟುಗಳು ಅಮೆರಿಕದ ಅಧಿಕೃತ ದಾಖಲೆಗಳಿಂದ ಹೊರಗಿದ್ದವು ಎಂಬ ಆರೋಪವೂ ಇದೆ.
ಕುಶ್ನರ್ ಶ್ವೇತಭವನದಲ್ಲಿ ವೇತನವಿಲ್ಲದೆ ಕೆಲಸ ಮಾಡುತ್ತಿದ್ದರೂ ಸರ್ಕಾರಿ ಅಧಿಕಾರಿಯಾಗಿದ್ದರು. ಅಮೆರಿಕದ ತೆರಿಗೆ ಮತ್ತು ನೈತಿಕ ಕಾನೂನುಗಳ ಪ್ರಕಾರ ವಿದೇಶಿ ಬ್ಯಾಂಕ್ ಖಾತೆಗಳನ್ನು ಅವರು ಬಹಿರಂಗಪಡಿಸಬೇಕಿತ್ತೇ ಎಂಬ ಪ್ರಶ್ನೆ ಈ ಪ್ರಕರಣದಲ್ಲಿ ಉದ್ಭವಿಸಿದೆ.
ವಿದೇಶಿ ಸರಕಾರಗಳಿಂದ ಹಣ ಸ್ವೀಕರಿಸಿರುವುದು ಅಥವಾ ಅವುಗಳ ಪರವಾಗಿ ರಾಜಕೀಯ ಚಟುವಟಿಕೆ ನಡೆಸಿರುವುದರಿಂದ Foreign Agents Registration Act (FARA) ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದಾಗಿ, ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ಹಣ ಪಡೆದಿದ್ದರೆ ಲಂಚದ ಆರೋಪವೂ ಎದುರಾಗಬಹುದು.
ಕುಶ್ನರ್ ಈ ಎಲ್ಲ ಆರೋಪಗಳನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಯಾವುದೇ ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಹಣ ವರ್ಗಾವಣೆಯ ದಾಖಲೆಗಳಿಲ್ಲದ ಕಾಲ್ಪನಿಕ ಕಥೆ ಇದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ.