ಹಿಮೇಶ್ ರೇಶಮ್ಮಿಯಾ | Photo Credit : PTI 

ಚಿತ್ರದ ನಿರ್ಮಾಪಕರು ಸಂಗೀತದ ಹಕ್ಕುಗಳನ್ನು ತಮಗೆ ನೀಡಲು ಒಪ್ಪಿಕೊಂಡರೆ ಮಾತ್ರ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವುದಾಗಿ ಹಿಮೇಶ್ ರೇಶಮ್ಮಿಯಾ ಬಹಿರಂಗಪಡಿಸಿದ್ದಾರೆ.

ನವೆಂಬರ್‌ ನಲ್ಲಿ ಗಾಯಕ ಹಿಮೇಶ್ ರೇಶಮ್ಮಿಯಾ ಅವರು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿರುವ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸೂರಜ್ ಬರ್ಜಾತ್ಯ ಅವರ ಪ್ರಣಯ ಕಥಾನಕ ಹೊಂದಿರುವ ‘ಯೇ ಪ್ರೇಮ್ ಮೋಲ್ ಲಿಯಾ’ ಮತ್ತು ಆದಿತ್ಯ ದತ್ ಅವರ ಆ್ಯಕ್ಷನ್ ರೊಮ್ಯಾನ್ಸ್ ಸಿನಿಮಾ ‘ಗನ್ ಮಾಸ್ಟರ್ ಜಿ9’ ಈ ತಿಂಗಳು ಬಿಡುಗಡೆಯಾಗಲಿವೆ. ಆದರೆ, ಯಾವುದೇ ಸಿನಿಮಾಗೆ ಸಂಗೀತ ಸಂಯೋಜಿಸುವ ಮೊದಲು ಕೆಲವು ಕಠಿಣ ಷರತ್ತುಗಳನ್ನು ವಿಧಿಸುವುದಾಗಿ ಹಿಮೇಶ್ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೊದಲನೆಯದಾಗಿ, ಸಿನಿಮಾದ ಸಂಗೀತ ಸಂಯೋಜಕರಾಗಿರುವ ಕಾರಣ ಸಂಗೀತದ ಹಕ್ಕುಗಳು ತಮ್ಮ ಬಳಿಯೇ ಇರಬೇಕು ಎನ್ನುವುದು ಗಾಯಕ ಮತ್ತು ಸಂಗೀತ ಸಂಯೋಜಕರಾಗಿರುವ ಅವರ ಖಚಿತ ಅಭಿಪ್ರಾಯ. ಹೀಗಾಗಿ, ಸಂಗೀತ ಸಂಯೋಜಕರಾಗಿ ತಮ್ಮ ಸಂಭಾವನೆಯ ಹೊರತಾಗಿ ಸಂಗೀತದ ಹಕ್ಕುಗಳಿಗಾಗಿ ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ಬೆಲೆಯನ್ನು ಪಾವತಿಸುತ್ತಾರೆ! 2021ರಲ್ಲಿ ಸ್ಥಾಪನೆಯಾದ ‘ಹಿಮೇಶ್ ರೇಶಮ್ಮಿಯಾ ಮೆಲಡೀಸ್’ ಎಂಬ ಮ್ಯೂಸಿಕ್ ಲೇಬಲ್‌ನ ಒಡೆತನವನ್ನು ಹಿಮೇಶ್ ಮತ್ತು ಅವರ ಪತ್ನಿ ಸೋನಿಯಾ ಕಪೂರ್ ಜಂಟಿಯಾಗಿ ಹೊಂದಿದ್ದಾರೆ.

‘ಯೇ ಪ್ರೇಮ್ ಮೋಲ್ ಲಿಯಾ’ ಸಿನಿಮಾವನ್ನು ನಿರ್ಮಿಸಿರುವ ರಾಜಶ್ರೀ ಫಿಲ್ಮ್ಸ್ ಸಂಸ್ಥೆಯು ಸಂಗೀತದ ಹಕ್ಕುಗಳನ್ನು ಖರೀದಿಸುವ ಬದಲು ಕೇವಲ ಸಂಗೀತ ಸಂಯೋಜನೆಯನ್ನು ಮಾಡಿಕೊಡಬಹುದೇ ಎಂದು ಹಿಮೇಶ್ ಅವರನ್ನು ಕೇಳಿತ್ತು. ಈ ಬಗ್ಗೆ ಗೇಮ್ ಚೇಂಜರ್ಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಹಿಮೇಶ್, “ನಾನು ಅವರಿಗೆ ಅತ್ಯುತ್ತಮ ಕೆಲಸ ನೀಡುತ್ತೇನೆ. ಆದರೆ, ನನ್ನ ಶೈಲಿಯೇ ಇದು. ನಾನು ಹಾಕಿರುವ ಚೌಕಟ್ಟಿನ ಪ್ರಕಾರ, ಸಂಗೀತದ ಹಕ್ಕುಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆಯೋ ಅಷ್ಟು ಬೆಲೆಯನ್ನು ಪಾವತಿಸುತ್ತೇನೆ ಎಂದು ಭರವಸೆ ನೀಡಿದೆ” ಎಂದು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಮತ್ತು ಸೋನಂ ಕಪೂರ್ ನಟಿಸಿದ 2015ರ ಹಿಟ್ ಆ್ಯಕ್ಷನ್ ರೊಮ್ಯಾನ್ಸ್ ಸಿನಿಮಾ ‘ಪ್ರೇಮ್ ರತನ್ ಧನ್ ಪಾಯೋ’ಗಾಗಿ ಹಿಮೇಶ್ ಅವರು ರಾಜಶ್ರೀ ಫಿಲ್ಮ್ಸ್ ಜೊತೆಗೆ ಕೆಲಸ ಮಾಡಿದ್ದರೂ, ಈ ವಿಚಾರದಲ್ಲಿ ವಿನಾಯಿತಿ ನೀಡಿರಲಿಲ್ಲ. “ಯಾರಿಗೇ ಆದರೂ ನಿಯಮ ಬದಲಿಸುವುದಿಲ್ಲ. ಯಾವುದೇ ಕೆಲಸಕ್ಕಾಗಿ ಹತಾಶೆ ಅಥವಾ ಆತುರವಿಲ್ಲ. ಎಲ್ಲರನ್ನೂ ಒಪ್ಪಿಸುವುದು ಬಹಳ ಕಷ್ಟವಾಗಿತ್ತು. ಆದರೆ, ಅವರು ತುಂಬಾ ಒಳ್ಳೆಯ ಜನರು. ಹೀಗಾಗಿ, ಒಪ್ಪಿಕೊಂಡರು” ಎಂದೂ ಅವರು ಹೇಳಿದ್ದಾರೆ.

ತಮ್ಮ ಕಠಿಣ ಷರತ್ತಿನ ಕಾರಣದಿಂದಾಗಿ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಕೈತಪ್ಪಿದೆ ಎಂಬುದನ್ನು ಹಿಮೇಶ್ ಒಪ್ಪಿಕೊಂಡಿದ್ದಾರೆ. “ಹೆಚ್ಚು ಸಂಭಾವನೆ ಸಿಗಬಹುದು ಅಥವಾ ಇನ್ನೊಬ್ಬರಿಂದ ಉತ್ತಮ ಮೊತ್ತದ ನಿರೀಕ್ಷೆ ಇಡಬಹುದು. ಆದರೆ, ನನ್ನ ಬಳಿ ಇರುವುದರಲ್ಲಿ ನಾನು ತುಂಬಾ ಸಂತೋಷವಾಗಿರುವುದರಿಂದ ಅನಿಶ್ಚಿತತೆ ಅಥವಾ ಆತಂಕ ಎದುರಿಸಿಲ್ಲ” ಎನ್ನುತ್ತಾರೆ.

ಹಿಮೇಶ್ ಅವರ ಸಿನಿಮಾ ಸಹಯೋಗದ ಶೈಲಿಯೂ ವಿಭಿನ್ನವಾಗಿರುತ್ತದೆ. “ಮೊದಲನೆಯದಾಗಿ ನನ್ನ ಸಂಗೀತ ಆಲಿಸಿ. ಒಂದು ವೇಳೆ ಅವು ಬ್ಲಾಕ್‌ಬಸ್ಟರ್ ಹಾಡುಗಳಲ್ಲ ಎಂದು ಅನಿಸಿದರೆ, ಅವು ನನ್ನ ಬಳಿಯೇ ಉಳಿಯುತ್ತವೆ. ಆದರೆ, ಜೊತೆಗೂಡಿ ಉತ್ತಮ ಕೆಲಸ ಮಾಡೋಣ. ನಂತರ ಸಂಭಾವನೆ ಬಗ್ಗೆ ಮಾತನಾಡಬಹುದು. ಸೃಜನಶೀಲ ವಿಷಯಗಳಲ್ಲಿ ಮೊದಲು ಸ್ಪಷ್ಟತೆ ಬೇಕು. ನಂತರ ವ್ಯಾವಹಾರಿಕ ನಿಯಮಗಳು ಸ್ಪಷ್ಟವಾಗಬೇಕು. ಉದ್ದೇಶ ಸ್ಪಷ್ಟವಾಗಿರಬೇಕು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು” ಎನ್ನುವುದು ಹಿಮೇಶ್ ರೇಶಮ್ಮಿಯಾ ಅವರ ಅಭಿಪ್ರಾಯವಾಗಿದೆ.

ಆಯುಷ್ಮಾನ್ ಖುರಾನ ಮತ್ತು ಶರ್ವರಿ ನಟಿಸಿರುವ ‘ಯೇ ಪ್ರೇಮ್ ಮೋಲ್ ಲಿಯಾ’ ಸಿನಿಮಾದ ಆಲ್ಬಂನಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಶೀರ್ಷಿಕೆ ಗೀತೆ ‘ಜೈ ಅಂಬೇ ಬೋಲ್’ ಮತ್ತು ‘ಝುಮ್ಕಾ ಪಟೋಲ’ ಸೇರಿದಂತೆ ಮೂರು ಹಾಡುಗಳು ಮಾತ್ರ ಈವರೆಗೆ ಬಿಡುಗಡೆಯಾಗಿವೆ.

‘ಗನ್ ಮಾಸ್ಟರ್ ಜಿ9’ ಆಲ್ಬಂನ ಎರಡು ಹಾಡುಗಳಾದ ‘ಅಫ್ಸಾನಾ ಬನಾಯಾ ಆಪ್ನೆ’ ಮತ್ತು ‘ದೋ ದಿನ್ ಕಿ ಜಿಂದಗಿ’ ಬಿಡುಗಡೆಯಾಗಿವೆ. ತಮ್ಮ ಹಿಟ್ ಪ್ರಣಯ ಸಿನಿಮಾ ‘ಆಶಿಕ್ ಬನಾಯಾ ಆಪ್ನೇ’ ಬಿಡುಗಡೆಯಾದ 21 ವರ್ಷಗಳ ಬಳಿಕ ನಿರ್ದೇಶಕ ಆದಿತ್ಯ ದತ್ ಮತ್ತು ನಟ ಇಮ್ರಾನ್ ಹಶ್ಮಿ ಅವರು ಈ ಚಿತ್ರದ ಮೂಲಕ ಹಿಮೇಶ್ ರೇಶಮ್ಮಿಯಾ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ. ಸಿನಿಮಾದಲ್ಲಿ ಜೆನಿಲಿಯಾ ಡಿಸೋಜ ಮತ್ತು ಅಪರಶಕ್ತಿ ಖುರಾನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor